Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬರುತ್ತಿದೆ : ಜನಾನು'ರಾಗಿ' ಮುದ್ದೆ ಮಿಶಿನ್ನು

ತಮಾಷೆಯಲ್ಲ. "ರಾಗಿ ತಂದೀರಾ ಭಿಕ್ಷಕೆ ರಾಗಿತಂದೀರಾ, ಯೋಗ್ಯ ರಾಗಿ ಭೋಗ್ಯ ರಾಗಿ" ಎಂದು ದಾಸರೇನೋ ಹಾಡಿದರು. ಆದರೆ, ಕರ್ನಾಟಕದಲ್ಲಿನ ಎಲ್ಲ ಜಿಲ್ಲೆಯ ಜನರಿಗೆ ರಾಗಿ ಮುದ್ದೆ ಸೇವಿಸುವ ಯೋಗ ಇಲ್ಲವಲ್ಲರೀ. ಏನ್ಮಾಡಾಣ. ಕರಿಬಲ ನೀಡುವ ಈ ಕರಿ ಕಾಳು ದಕ್ಷಿಣ ಕರ್ನಾಟಕದಲ್ಲಿ ಮಾತ್ರ ಮನೆಮಾತು. ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ಹೇಗೆ ಪ್ರಸಿದ್ಧವೋ, ಕರಾವಳಿಯಲ್ಲಿ ಗಂಜಿ, ಇಡ್ಲಿ, ದೋಸೆ, ತಂಬುಳಿಗಳು ಹೇಗೆ ಪ್ರಸಿದ್ಧವೋ ಹಾಗೆನೇ ರಾಗಿ ಮುದ್ದೆ ದಕ್ಷಿಣ ಒಳನಾಡಿನಲ್ಲಿ ಜನಾನುರಾಗಿ. ನಮ್ಮ ದಕ್ಷಿಣ ಕರ್ನಾಟಕದಲ್ಲಿ ರಾಗಿ ಮುದ್ದೆ ಎಂದರೆ ಮನೆಮಂದಿಗೆಲ್ಲ ಪುಳಕ. ಒಂದು ಕಾಲದಾಗ ಈ ಪ್ರಾಂತ್ಯದ ವಧುವರಾನ್ವೇಷಣೆಯ ಪ್ರಶ್ನಾವಳಿಯಲ್ಲಿ ಹುಡುಗಿಗೆ "ರಾಗಿ ಮುದ್ದೆ ಕೂಡ್ಸಕ್ಕೆ ಬರ್‌ತೇತೇನಮ್ಮಾ" ಎನ್ನುವುದು ಕೂಡ ಇತ್ತಂತೆ. (ಈಗೆಲ್ಲ ಅವೆಲ್ಲ ಇಲ್ಲರಿ) ಮುದ್ದೆ ಮಾಡಲು ಬರುವುದಿಲ್ಲ ಅಂದ್ರೆ ಹುಡುಗಿಯನ್ನು ಬಹಳ ಸ್ಟೈಲಿಶ್ ಅಂಡ್ ಮಾಡರ್ನ್ ಅಂತಲೂ ಹೆಸರಿಟ್ಟು ಗಂಡಿನಕಡೆಯವರು ತಿರಸ್ಕರಿಸುತ್ತಿದ್ದರಂತೆ.
ರಾಗಿ ಮುದ್ದೆ ಎಂದರೆ ಗಂಡುಹೈಕಳುಗಳಿಗೆ ಗುಂಡು ಹಾಕಿದಷ್ಟು ಗಮ್ಮತ್ತು. ಅದಕ್ಕಾಗಿ ನಮ್ಮ ಸಿಂಗಲ್ ಹಕ್ಕಿ (ಬ್ಯಾಚುಲರ್) ಹುಡುಗರು ರಾಗಿ ಮುದ್ದೆ ಮಾಡುವ ಮಡದಿಯನ್ನು ದಯಪಾಲಿಸು ತಂದೆ, ಶಿವನೇ ಎನ್ನುತ್ತ ಕನಸು ಮನಸಿನಲ್ಲಿ ದೇವರಿಗೆ ಉರುಳುಸೇವೆಯನ್ನು ಮಾಡುತ್ತಿರುತ್ತಾರೆ. ಅಲ್ಲದೆ ರಾಗಿ ಮುದ್ದೆಯನ್ನು ಕೇವಲ ಮಾಡಲು ಬಂದರೆ ಸಾಲದು, ಅದನ್ನು ಸರಿಯಾದ ಗುಂಡಾಕಾರದಲ್ಲಿ ಗಂಟುಗಳಿಲ್ಲದೆ, ಕಿತ್ತು ತಿನ್ನಲು ಬಹು ಸುಲಭವೆನಿಸುವಂತೆ ಮಾಡಬೇಕು. ಆದರೆ ಈಗಿನ ಯುಗದಲ್ಲಿನ ಹುಡುಗಿಯರು ರಾಗಿಯನ್ನೆ ಮರೆತಿರುವುದರಿಂದ ಮುದ್ದೆ ಕೂಡಿಸುವುದು ಇನ್ನೆಲ್ಲಿಂದ ಬಂತು?
ಇಂತಹ ಕಟು ಕಠೋರ ಸತ್ಯವನ್ನು ನುಂಗಿ, ರಾಗಿಮುದ್ದೆಯನ್ನು ನುಂಗಲು ಆಗದ್ದಕ್ಕೆ ವ್ಯಥೆ ಪಡುತ್ತಲಿರುವ ನಮ್ಮ ನಿಮ್ಮಂತಹ ಅವಿವಾಹಿತ ಹುಡುಗರನ್ನು ಶ್ರೀ ರಾಗಿ ಗುಡ್ಡ ಆಂಜನೇಯ ಸ್ವಾಮಿಯೇ ಕಾಪಾಡಬೇಕು....! ಆದರೆ ಹೆದರಬೇಡಿ ಗೆಳೆಯರೆ. ನಾನಿರುವುದೆ ನಿಮಗಾಗಿ....!! ನಾನು ಈಗತಾನೆ ನನ್ನ ಸ್ನೇಹಿತರ ಹತ್ತಿರ ಮಾತನಾಡುತಿದ್ದೆ. ಅವರು ನನಗೆ ತನ್ನ ಸಾಫ್ಟ್‌ವೇರ್ ಮಾಡ್ಯುಲ್ ಮುಗಿದಿದೆಯೇ ಎಂದು ಕೇಳಿದರು, ಅದಕ್ಕೆ ನಾನು "ಏನು ಮಾಡ್ಯುಲ್ ಮುಗಿಯೋದ? ನಿಮ್ಮ ಮಾಡ್ಯುಲ್ ಏನು ರಾಗಿ ಮುದ್ದೆ ಮಾಡಿದಷ್ಟು ಸುಲಭವೇ...!" (ಈ ಮಾಡ್ಯುಲ್ ರಾಗಿಮುದ್ದೆ ಮಾಡುವುದಕಿಂತ ಹೆಚ್ಚಿನ ಸಮಯ/ಶ್ರಮ ತೆಗೆದುಕೊಳ್ಳುತಿತ್ತು) ಎಂದೆ. ಅದಕ್ಕೆ ಅವರು "ರಾಗಿ ಮುದ್ದೆ ಮಾಡಲು ಯಂತ್ರಗಳು ಇವೆ ಆದರೆ, ದೊಡ್ಡ ದೊಡ್ಡ ಹೋಟಲ್ ನಲ್ಲಿ" ಅಂದರು...!
ಅವರ ಮಾತು ನಿಜಾನೆ. ದೊಡ್ಡ ದೊಡ್ಡ ಹೋಟಲ್‌ನಲ್ಲಿ ರಾಗಿ ಮುದ್ದೆ ಮಾಡುವ ಯಂತ್ರವಿದೆ ಆದರೆ ಅದು ಬರೆ ಅರ್ಧಂಬರ್ಧ ಕೆಲಸ ಮಾಡುತ್ತದೆ. ಅಂದರೆ ಈ ಯಂತ್ರಗಳು ಕುದಿಯುವ ನೀರಿನಲ್ಲಿ ರಾಗಿ ಹಿಟ್ಟನ್ನು ತಿರುಗಿಸುವ ಕೆಲಸವನ್ನು ಮಾಡುತ್ತದೆ. ಆದರೆ ದೊಡ್ಡ ದೊಡ್ಡ ಹೋಟಲ್‌ನಲ್ಲಿ ಇರುವ ಯಂತ್ರಕ್ಕೂ ನಮಗೂ ಏನು ಸಂಬಂಧ? ನಾವು ಪ್ರತಿ ದಿವಸ ಹೋಟಲ್ಗೆ ಹೋಗೊದಕ್ಕೆ ಆಗೊದಿಲ್ಲ ಅಲ್ವ?? ಹೋಗ್ಲಿಬಿಡಿ.
ಅದಕ್ಕೆ ನನ್ನ ತಲೆಯಲ್ಲಿ ಒಂದು ಪ್ಲ್ಯಾನ್ ಮೂಡಿದೆ. ನಾವೇ ಏಕೆ ಒಂದು ಕಂಪ್ಯಾಟಿಬಲ್ ಅಂಡ್ ಮೊಬೈಲ್ ರಾಗಿ ಮುದ್ದೆ ಯಂತ್ರವನ್ನು ಕಂಡುಹಿಡಿಯಬಾರದು ಎನ್ನುವುದೇ ಆ ಮಾಸ್ಟರ್ ಪ್ಲ್ಯಾನ್. ನೀವು ಕೇಳಬಹುದು, ರಾಗಿ ಮುದ್ದೆ ಏನು ಪ್ರಪಂಚದ (continental) ತಿನಿಸು ಅಲ್ಲವಲ್ಲ, ಅದಕ್ಕೆ ಅಷ್ಟು ಖರ್ಚು ಮಾಡಿ ರಿಸರ್ಚ್ ಮಾಡಿ ಯಂತ್ರ ಏಕೆ ಅಂತ..! ಆದರೂ ಸಹ, ಅಂಥದೊಂದು ಯಂತ್ರವಿದ್ದರೆ ಲೈಫು ಹೇಗಿರುತ್ತದೆ , ಅದರಿಂದ ನಮ್ಮ ಆಹಾರಶೈಲಿ, ದೇಹಾರೋಗ್ಯ ಹೇಗಿರುತ್ತದೆ ಅಂತ ಒಂದಪಾ ಯೋಚನೆ ಮಾಡಿ..! "ರಾಗಿ ಮುದ್ದೆ ತಿಂದವಂ,ಬೆಟ್ಟ ಗುಡ್ಡ ಕಿತ್ತಿಟ್ಟಂ".
ಯಂತ್ರದ ಆಕಾರ ಮತ್ತು ಕಾರ್ಯವೈಖರಿ ಹೀಗಿರಲಿ: (ಮೇಲಿನ ಚಿತ್ರ)
1) ರಾಗಿ ಮುದ್ದೆ ಮಾಡುವ ಯಂತ್ರವು ನಮ್ಮ ಓವನ್‌ಗಿಂತ ಸ್ವಲ್ಪವೆ ಅಗಲ ಅಳತೆಯುಳ್ಳದ್ದಾಗಿರಬೇಕು.
2) ಯಂತ್ರವು ಡಬ್ಬಾಕಾರದಲ್ಲಿ ಇರಬೇಕು.
3) ಅದರ ಮೇಲ್ಬಾಗದಲ್ಲಿ 2 ಬಾಯಿ ಇರಬೇಕು.
ಅ) ಮೊದಲನೆ ಬಾಯಿಯಲ್ಲಿ ರಾಗಿ ಹಿಟ್ಟು ಹಾಕಲು.
ಆ) ಎರಡನೆ ಬಾಯಿಯಲ್ಲಿ ಯಂತ್ರವೇ ನಿಗದಿ ಪಡಿಸಿರುವ ನಿರ್ದಿಷ್ಟ ಅಳತೆಯ ನೀರು ಸುರಿಯಲು
(ಮುದ್ದೆ ಮುದ್ದೆ ಗಂಜಿ ಗಂಜಿ ಗಂಟು ಗಂಟು ಆಗುವುದನ್ನು ತಡೆಯಲು ಇದು ಬಹಳ ಮುಖ್ಯ).
4) ಯಂತ್ರದ ಮುಂಬಾಗದಲ್ಲಿ ರಾಗಿ ಮುದ್ದೆ ತಯಾರಾಗಿ ಹೊರಬರಲು ಬಾಯಿ ಇರಬೇಕು.
5)ಈ ಯಂತ್ರವು ನಮ್ಮ ಸ್ಟಾರ್ ಬಕ್ಸ್ ಕಾಫಿ ವೆಂಡಿಂಗ್ ಯಂತ್ರದ ತರಹ ಮೇಲೆ ರಾಗಿ ಹಾಕಿ ನೀರು ಹಾಕಿದರೆ, ಸ್ವಲ್ಪ ಸಮಯದ ನಂತರ ಬಿಸಿ ಬಿಸಿ ಮುದ್ದೆಯನ್ನು ತಿರುಪತಿ ಲಾಡು ಇಟ್ಟಂತೆ ನಮ್ಮ ಕೈಗೆ ಇಡಬೇಕು.
ಇಂತಹ ಒಂದು ಯಂತ್ರವು ನಮ್ಮ ಅವಿವಾಹಿತ ಹುಡುಗರಿಗೆ ವರದಾನವಾಗುತ್ತದೆ. ಈ ಯಂತ್ರದಿಂದ ಅತಿ ಹೆಚ್ಚಿನ ರೀತಿಯಲ್ಲಿ ಹೊಟ್ಟೆಗೆ, ನಾಡಿಗೆ, ದೇಶಕ್ಕೆ ಮತ್ತು ಪ್ರಪಂಚಕ್ಕೆ ಬಹಳ ಉಪಯೋಗವಿದೆ. ಈ ಯಂತ್ರದಿಂದಾಗುವ ಹಲಕೆಲವು ಉಪಯೋಗಗಳನ್ನು ಪಟ್ಟಿ ಮಾಡುವುದೇ ಆದ ಪಕ್ಷದಲ್ಲಿ :
* "ಅಮೇರಿಕಾಕೆ ಬಂದ್ರು ಅನ್ನಕ್ಕೆ ಅತ್ರಂತೆ" ಎಂಬೋ ಇತ್ತೀಚಿನ ಗಾದೆ ಅಳಿಯುತ್ತದೆ. ಬಿಸಿಬಿಸಿ ರಾಗಿ ಮುದ್ದೆ ಸಿಗಬಹುದಿದ್ದರೆ ನಾವು ಏಕೆ ಅನ್ನಕ್ಕೆ ಮೊರೆ ಹೋಗಬೇಕು? ರಾಗಿ ಬಳಕೆಯಿಂದಾಗಿ ಅಕ್ಕಿಗೆ ಅಂಟಿರುವ ಬೆಲೆಯ ಕಳಂಕೂ ತಂತಾನೆ ತಪ್ಪುತ್ತದೆ.
* ಹೆಚ್ಚಾಗಿ ರಾಗಿ ಮುದ್ದೆಯನ್ನು ಕರ್ನಾಟಕದವರು ಮಾತ್ರವೆ ಉಪಯೋಗಿಸುವುದರಿಂದ, ನಾವು ಉಪಯೋಗಿಸದ ಅಕ್ಕಿಯನ್ನು ಆಫ್ರಿಕಾದಂತಹ ಖಂಡಗಳಲ್ಲಿ ಹಸಿವಿನಿಂದ ಪ್ರಾಣ ಬಿಡುತ್ತಿರುವವರಿಗೆ ಹಾಗೂ ಅಕ್ಕಿನೇ ಸಿಗದೆ ತಾಪತ್ರಯ ಪಡುತ್ತಿರುವ ಕಾಂಡೋಲೀನಾ ರೈಸ್‌ಗೆ ಕಳಿಸಿಕೊಡಬಹುದು. ಇದರಿಂದ ಪ್ರಪಂಚದ ಆಹಾರದ ಹಾಹಾಕಾರ ಅಷ್ಟರಮಟ್ಟಿಗೆ ತಣ್ಣಗಾಗುತ್ತದೆ.
* ನಮ್ಮ ನಾರಿ ಮಣಿಗಳು ಮುದ್ದೆ ಮಾಡಲು ಬರದುದಕ್ಕೆ ತಮ್ಮ ಪತಿಯರಿಂದ ಮುದ್ದೆಕೂಡಿಸುವ ಕೋಲಿನಿಂದ ಒದೆ ತಿನ್ನುವ ಸ್ಥಿತಿ ಕೂಡ ತಪ್ಪುತ್ತದೆ. ಯಪ್.
* ಎಲ್ಲದಕಿಂತ ಮಿಗಿಲಾಗಿ, ಗಂಡಸರು ರಾಗಿ ಮುದ್ದೆಗಾಗಿ ಹೆಂಗಸರ ಮೊರೆ ಹೋಗಬೇಕಾಗಬಹುದಾದ ನಿಸ್ಸಹಾಯಕತೆಯನ್ನು ಹೋಗಲಾಡಿಸುತ್ತದೆ. ಗಂಡಸರು ಸೆಲ್ಪ್ ಡಿಪೆಂಡೆಂಟ್ ಆಗುತ್ತಾರೆ.
* ಇಂತಹ ರಾಗಿ ಮುದ್ದೆ ಯಂತ್ರದಿಂದ ಜನಸ್ಯಂಖ್ಯೆ ಪರೋಕ್ಷವಾಗಿ ನಿಯಂತ್ರಣ ಕೂಡ ಮಾಡಬಹುದಪ್ಪ. ಅದು ಹೇಗೆ ಅಂದ್ರ? ಮದುವೆಯಾದರೆ ತಾನೆ ಜನಸಂಖ್ಯೆ ಹೆಚ್ಚುವ ಪ್ರಮೇಯ? ಇಂತಹ ಒಂದು ರಾಗಿ ಮುದ್ದೆ ಯಂತ್ರವನ್ನು ಇಟ್ಟುಕೊಂಡ ನಮ್ಮ ಹುಡುಗರು ಕಿರಿಯ ವಯಸಿನಲ್ಲೆ ಮದುವೆಗೆ ಗಂಟುಬೀಳುವುದೂ ತಪ್ಪುತ್ತದೆ.
ನೋಡಿ, ಯೋಚನೆ ಮಾಡಿ. ನಾವು ರಾಗಿ ಮುದ್ದೆ ಮೋಹಿತರನೆಲ್ಲ ಒಂದೆಡೆ ಒಟ್ಟುಗೂಡಿಸಿ ಸಂಘ ಕಟ್ಟಿ ರಾಗಿ ಮುದ್ದೆ ಡೆವಲಪ್ಮೆಂಟ್ ಟೀಮ್ ಮಾಡಿಕೊಳ್ಳೋಣ. ಕಲಿಯುಗಕ್ಕೆ ಹಿತಬಯಸುವ ಯಂತ್ರವನ್ನು ಮಾಡಲು ನಮ್ಮ ಯಡ್‌ಯೂರಪ್ಪ ಅವರಿಂದ ರಾಜ್ಯದ ಬಜೆಟ್‌ನಲ್ಲಿ ಒಂದಷ್ಟು ದುಡ್ಡು ಕೂಡ ಬಿಡುಗಡೆ ಮಾಡಲು ಮನವಿ ಮಾಡಿಕೊಳ್ಳೋಣ. ನಮ್ಮೀ ಯೋಜನೆಯನ್ನು ಓದಿ ನಾರೀಮಣಿಗಳು "ಅಬ್ಬಾ, ನಮ್ಮ ಕೈಗೆ ಬಿಡುಗಡೆ ಸಿಗ್ತು" ಅಂತ ಅಂದ್ಕೊಳಾ ಹಾಗಿಲ್ಲ. ಯಾಕಂದ್ರ, ಸಾರು, ಹುಳಿ, ಗೊಜ್ಜು, ಉಪ್ಸಾರು ಮಾಡುವ ಯಂತ್ರವನ್ನು ನಾವಿನ್ನೂ ಕಂಡುಹಿಡಿದಿಲ್ಲ.
ಇನ್ನೊಂದು ಮುಖ್ಯ ವಿಚಾರ : ಈ ಐಡಿಯಾ ಕೊಟ್ಟಿರುವ ನಮಗೆ ಯಂತ್ರ ತಯಾರಿಸುವ ಮುನ್ನ ಪೇಟೆಂಟ್ ತರಹ ಒಂದಷ್ಟು ಹಣವನ್ನು ಕೊಡಬೇಕಪ್ಪ. ಸರಿನಾ....! (ಈಗಾಗಲೆ ಈ ಉಪಾಯಕ್ಕೆ/ತಂತ್ರಜ್ಞಾನಕ್ಕೆ ಪೇಟೆಂಟ್ ಪಡೆಯಲು ಅರ್ಜಿಯನ್ನು ಹಾಕಲಾಗಿದೆ. ಆದಕಾರಣ ಈ ಐಡಿಯಾವನ್ನು ಕಾಪಿ/ಟೀ ಮಾಡುವಂತಿಲ್ಲ.)



Click it and Unblock the Notifications











