Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಕೊಡಗಿನಲ್ಲಿ ಬಿದಿರು ಕಣಿಲೆ ಬೇಟೆ: ಈಗ ನೆನಪು ಮಾತ್ರ...

ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ದೊಡ್ಡವರೆನ್ನದೆ ಬಿಡುವು ಸಿಕ್ಕಾಗ ಕಣಿಲೆ ಹುಡುಕುತ್ತಾ ಬಿದಿರು ಮೆಳೆಗಳ ಬಳಿ ಸುಳಿಯುವುದು ರೂಢಿಯಾಗಿತ್ತು. ಅದರಲ್ಲಿಯೂ ಶಾಲೆಗೆ ರಜೆ ಸಿಕ್ಕಿತೆಂದರೆ ಮಕ್ಕಳು ಕಣಿಲೆ ಬೇಟೆಯಲ್ಲಿ ನಿರತರಾಗಿ ಬಿಡುತ್ತಿದ್ದರು.
ಅಕ್ಕಿ ರೊಟ್ಟಿ ಕಣಿಲೆ ಪಲ್ಯ: ಆಗಿನ ಕಾಲದಲ್ಲಿ ಎಲ್ಲೆಡೆ ಯಥೇಚ್ಛವಾಗಿ ಬಿದಿರು ಮೆಳೆಗಳಿದ್ದವು. ಹಾಗಾಗಿ ಬಿದಿರುಗಳು ಮನೆಗೆ ಕಚ್ಚಾವಸ್ತುವಾಗಿಯೂ, ದನಗಳಿಗೆ ಮೇವಾಗಿಯೂ ಮಳೆಗಾಲದಲ್ಲಿ ರುಚಿಕರ ತರಕಾರಿಯಾಗಿಯೂ ಬಳಕೆಯಾಗುತ್ತಿತ್ತು. ಮಳೆ ಬೀಳುತ್ತಿದ್ದಂತೆಯೇ ಬಿದಿರು ಮೆಳೆಗಳಿಂದ ಹೊರ ಬರುತ್ತಿದ್ದ ಕಣಿಲೆಯನ್ನು ಕತ್ತರಿಸಿ ಮನೆಗೆ ತಂದು ಅದರ ಎಳೆಯ ಭಾಗವನ್ನು ಚಿಕ್ಕದಾಗಿ ಕತ್ತರಿಸಿ ಬಳಿಕ ಅದನ್ನು ನೀರಿನಲ್ಲಿ ನೆನೆಯಲು ಹಾಕಲಾಗುತ್ತಿತ್ತು ಮೂರು ದಿನಗಳು ಕಳೆದ ಬಳಿಕ ತೆಗೆದು ಶುದ್ಧ ನೀರಿನಿಂದ ತೊಳೆದು ಬಳಿಕ ಸಾರು, ಪಲ್ಯಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಬೆಳಗ್ಗಿನ ಉಪಹಾರಕ್ಕೆ ಅಕ್ಕಿ ರೊಟ್ಟಿಯೊಂದಿಗೆ ಕಣಿಲೆ ಪಲ್ಯವನ್ನು ಸೇವಿಸಿದರೆ ಅದರ ಮಜಾವೇ ಬೇರೆಯಾಗಿರುತ್ತಿತ್ತು. ಇನ್ನು ಕಣಿಲೆಯಿಂದ ಉಪ್ಪಿನಕಾಯಿ, ಪತ್ರೋಡೆ. ಉಂಡೆಕಾಳು ಸೇರಿದಂತೆ ಹಲವಾರು ಖಾದ್ಯವನ್ನು ತಯಾರಿಸಲಾಗುತ್ತಿತ್ತು.
ಕೊಡಗಿನಲ್ಲಿ ಮಳೆಗಾಲದಲ್ಲಿ ಕಣಿಲೆ ಪ್ರಮುಖ ತರಕಾರಿಯಾಗಿ ಬಳಕೆಯಾಗಲು ಕಾರಣವೂ ಇತ್ತು. ಮಳೆ ಪ್ರಾರಂಭವಾಗಿ ಇಡೀ ವಾತಾವರಣವೇ ಶೀತಮಯವಾಗಿರುತ್ತಿದ್ದುದರಿಂದ ದೇಹವನ್ನು ಬಿಸಿಯಾಗಿಡಲು ಉಷ್ಣವಾಗಿರುವಂತಹ ಆಹಾರವೇ ಬೇಕಾಗುತ್ತಿತ್ತು. ಹಾಗಾಗಿ ಕಣಿಲೆ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದರಿಂದ ಅದರಲ್ಲಿ ಉಷ್ಣದ ಗುಣಾಂಶ ಹೆಚ್ಚಾಗಿರುತ್ತಿದ್ದರಿಂದ ಜನಪ್ರಿಯವಾಗಿತ್ತು.
ಅರಣ್ಯ ಉತ್ಪನ್ನ ಬಳಕೆ: ಆಗಿನ ಕಾಲದಲ್ಲಿ ಭತ್ತದ ಕೃಷಿಯೇ ಪ್ರಧಾನವಾಗಿದ್ದುದರಿಂದ ಎಲ್ಲರೂ ಭತ್ತದ ಕೃಷಿಯನ್ನೇ ಅವಲಂಭಿಸಿದ್ದರು. ಹಾಗಾಗಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಅಂದರೆ ಜೂನ್ ತಿಂಗಳಿನಿಂದ ಕೆಲಸಗಳು ಆರಂಭವಾದರೆ ಮುಗಿಯುತ್ತಿದ್ದದ್ದು ಸೆಪ್ಟಂಬರ್ ವೇಳೆಗೆ. ಈ ಸಂದರ್ಭ ಮನೆಯಿಂದ ಹೊರಹೋಗಿ ಪೇಟೆಯಿಂದ ತರಕಾರಿಗಳನ್ನು ತರುವುದು ಸುಲಭದ ಕೆಲಸವಾಗಿರಲಿಲ್ಲ. ಪಟ್ಟಣಕ್ಕೆ ಹೋಗಲು ವಾಹನದ ಸೌಕರ್ಯವೂ ಇರುತ್ತಿರಲಿಲ್ಲ. ಇದ್ದರೂ ಮಳೆಯಿಂದಾಗಿ ಸಂಪರ್ಕವೇ ಕಡಿದು ಹೋಗುತ್ತಿತ್ತು. ಅಷ್ಟೇ ಅಲ್ಲ ಮನೆಯ ಸುತ್ತಲೂ ತರಕಾರಿ ಬೆಳೆಯೋಣವೆಂದರೆ ಮಳೆ ಬಂದು ಕೊಳೆತು ಹೋಗುತ್ತಿತ್ತು. ಈ ಸಂದರ್ಭ ಮನೆಯ ಸುತ್ತ, ಕಾಡಿನಲ್ಲಿ ಸಿಗುವ ವಸ್ತುಗಳನ್ನೇ ಆಹಾರ ಪದಾರ್ಥಗಳಾಗಿ ಬಳಸಲಾಗುತ್ತಿತ್ತು. ಕಾಡಿನಲ್ಲಿ ಸಿಗುವ ಹಲವಾರು ಗಿಡಮೂಲಿಕೆಗಳಲ್ಲಿ ಔಷಧೀಯ ಗುಣಗಳಿರುವುದರಿಂದ ಇವತ್ತಿಗೂ ಅದನ್ನು ವರ್ಷಕ್ಕೊಮ್ಮೆಯಾದರೂ ಬಳಸುವುದು ರೂಢಿಯಾಗಿದೆ.
ಬಿದಿರು ನಾಶ: ಕಳೆದ ಎರಡು ದಶಕಗಳಲ್ಲಿ ಕೊಡಗು ಸಂಪೂರ್ಣ ಬದಲಾಗಿದೆ. ಕೇರಳದಿಂದ ಶುಂಠಿ ಕೃಷಿ ಮಾಡಲು ಬಂದವರು ಕೊಡಗಿನಲ್ಲಿದ್ದ ಕಾಡುಗಳನ್ನು ಎಕರೆಗಿಷ್ಟು ಎಂಬಂತೆ ಹಣ ನೀಡಿ ಪಡೆದು ಅಲ್ಲಿದ್ದ ಬಿದಿರು ಕಾಡುಗಳನ್ನು ಕಡಿದು ಕೃಷಿ ಮಾಡಿದರು. ಹೀಗಾಗಿ ದನ ಮೇಯುತ್ತಾ, ಬಿದಿರು ಮೆಳೆಗಳಿಂದ ಕೂಡಿದ ಕಾಡು ನಾಶವಾಗಿ ಬಳಿಕ ಅಲ್ಲಿ ಕಾಫಿ ತೋಟಗಳು ತಲೆ ಎತ್ತಿದವು. ಇದರಿಂದ ಶೇಕಡ ಐವತ್ತರಷ್ಟು ಬಿದಿರು ಮೆಳೆಗಳು ನಾಶವಾದವು ಹೀಗಾಗಿ ಪಟ್ಟಣಗಳಲ್ಲಿ ಕಣಿಲೆ ಖರೀದಿಸಿ ಮನೆಗೆ ಕೊಂಡೊಯ್ಯುವಂತಾಯಿತು.
ಇನ್ನು ಕಣಿಲೆ ಕಷ್ಟ ಸಾಧ್ಯ: ಇದೆಲ್ಲದರ ನಡುವೆ ಈ ವರ್ಷ ಬಿದಿರು ಹೂಬಿಟ್ಟು ಮೆಳೆಗಳು ಸಾಯುತ್ತಿರುವುದರಿಂದ ಇನ್ನು ಕಣಿಲೆ ಇಲ್ಲಿನವರಿಗೆ ಸಿಗಬೇಕಾದರೆ ಐದಾರು ವರ್ಷಗಳೇ ಬೇಕಾಗುತ್ತದೆ. ಅಲ್ಲಿ ತನಕ ಕಾಯುವುದು ಅನಿವಾರ್ಯವಾಗಿದೆ. ಬಿದಿರು ಹೂ ಬಿಟ್ಟಿರುವುದರಿಂದ ಕಣಿಲೆ ಮಾತ್ರವಲ್ಲದೆ, ಆನೆಗಳಿಗೂ ಆಹಾರದ ಕೊರತೆ ಕಾಣಿಸಿಕೊಳ್ಳಲಿದ್ದು, ಅವು ಕಾಡಿನಿಂದ ನೇರವಾಗಿ ಕೃಷಿ ಭೂಮಿಗೆ ಬರುವ ಸಾಧ್ಯತೆಯೂ ಇಲ್ಲದಿಲ್ಲ.



Click it and Unblock the Notifications