Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಾವು ಸೇವಿಸುವ ಆಹಾರ ವಿಹಾರ

ಮನುಷ್ಯನ ಗುಣಗಳು ಸತ್ವ, ರಜ, ತಮೋ ಎಂಬ ಮೂರು ಗುಣಗಳಿಂದ ರೂಪುಗೊಂಡಿವೆ. ಈ ಮೂರು ಗುಣಗಳು ಕೂಡ ಅವರವರು ಸೇವಿಸುವ ಆಹಾರಕ್ಕನುಗುಣವಾಗಿ ವೃದ್ಧಿಯಾಗುತ್ತವೆ. ರಸಯುಕ್ತ, ಸ್ನಿಗ್ದ, ಸ್ಥಿರವಾದ ಹಾಗೂ ಮನಸ್ಸಿಗೆ ಪ್ರಿಯವಾದ ಆಹಾರಗಳು ಸತ್ವಗುಣಗಳನ್ನು, ಅತ್ಯಂತ ಕಹಿ, ಹುಳಿ, ಉಪ್ಪು, ಉಷ್ಣ, ತೀಕ್ಷ್ಣವೂ, ಒಣಕಲು ಆಹಾರವು ರಜೋಗುಣವನ್ನು ಮತ್ತು ಆರಿದ, ರಸಹೀನ, ದುರ್ಗಂಧಮಯ, ತಂಗಳು, ಕೊಳಕಾದ ಆಹಾರವು ತಮೋ ಗುಣವನ್ನುಂಟುಮಾಡುತ್ತದೆ. ಈ ಮೂರು ಗುಣಗಳು ಕೂಡ ಮನುಷ್ಯನ ಆಲೋಚನೆ, ಕ್ರಿಯೆ ಮತ್ತು ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ.
ಉಪನಿಷತ್ತುಗಳಲ್ಲಿ ವಿವರಿಸಿರುವ ಪ್ರಕಾರ ನಾವು ತಿನ್ನುವ ಆಹಾರ ಅರ್ಥಾತ್ ಅನ್ನವು ಮೂರು ವಿಧವಾಗಿ ಪರಿವರ್ತಿತವಾಗುತ್ತದೆ. ಅನ್ನದಲ್ಲಿ ಯಾವುದು ಸ್ಥೂಲತಮವಾದದ್ದೋ ಅದು ಮಲವಾಗುತ್ತದೆ. ಯಾವುದು ಮಧ್ಯಮ ಧಾತುವೋ ಅದು ಮಾಂಸವಾಗುತ್ತದೆ. ಯಾವುದು ಸೂಕ್ಷ್ಮತಮ ಧಾತುವೋ ಅದು ಮನಸ್ಸಾಗುತ್ತದೆ. ಇದು ಹೇಗೆಂದರೆ ಮೊಸರನ್ನು ಕಡೆದಾಗ ಅದರ ಸೂಕ್ಷ್ಮವಾದ ಭಾಗವು ಮೇಲೆ ತೇಲಿ ಬಂದು ಬೆಣ್ಣೆಯಾಗುತ್ತದೆ. ಹಾಗೆಯೇ ನಾವು ಅನ್ನವನ್ನು ತಿಂದಾಗ ಅದರ ಸೂಕ್ಷ್ಮತಮ ಧಾತುವು ಮೇಲೆದ್ದು ಮನಸ್ಸಾಗುತ್ತದಂತೆ. ಹೀಗಾಗಿಯೇ ನಾವು ಸೇವಿಸುವ ಆಹಾರವು ಶುದ್ಧವಾಗಿರಬೇಕು. ಆಹಾರ ಶುದ್ಧವಾಗಿದ್ದರೆ ಮನಸ್ಸು ಶುದ್ಧವಾಗಿರುತ್ತದೆ. ಶುದ್ಧ ಮನಸ್ಸು ಜಿಗುಪ್ಸೆ, ಭಯ, ಭ್ರಮೆಯನ್ನು ದೂರ ಮಾಡುತ್ತದೆ. ಇದರಿಂದ ಮನಸ್ಸಿನ ಮಾಲಿನ್ಯಗಳು ದೂರವಾಗಿ ನಮ್ಮಲ್ಲಿ ಸದ್ಗುಣಗಳು ಬೆಳೆಯಲು ಸಹಕಾರಿಯಾಗುತ್ತವೆ.
ಮಾಂಸಾಹಾರ ಸೇವಿಸಿದಾಗ ಹಾಗೂ ಮೊಸರನ್ನ ಸೇವಿಸಿದಾಗ ನಮ್ಮ ಮೇಲೆ ಬೀರುವ ಪ್ರತ್ಯೇಕ ಪರಿಣಾಮಗಳನ್ನು ಗಮನಿಸಿದರೆ ಇದರ ಅರಿವಾಗುತ್ತದೆ. ಒಂದು ಲೋಟ ಕಬ್ಬಿನ ಹಾಲು ಸೇವಿಸಿದ ವ್ಯಕ್ತಿಯ ವರ್ತನೆಗೂ, ಒಂದು ಲೋಟ ಮದ್ಯ ಸೇವಿಸಿದ ವ್ಯಕ್ತಿಯ ವರ್ತನೆಗೂ ಅಜಗಜಾಂತರ ವ್ಯತ್ಯಾಸವಿದೆ. ಕಬ್ಬಿನ ಹಾಲು ಸೇವಿಸಿದ ವ್ಯಕ್ತಿ ದೇಹದ ಜಡತ್ವ ಕಳೆದುಕೊಂಡು ಉಲ್ಲಸಿತನಾದರೆ, ಮದ್ಯ ಸೇವಿಸಿದ ವ್ಯಕ್ತಿ ದೇಹದ ಹಾಗೂ ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಾನೆ. ಅಷ್ಟೇ ಅಲ್ಲ ಮನಸ್ಸು ಮಲಿನಗೊಂಡು ದುಷ್ಪ್ರವೃತ್ತಿಗಳು ಆವರಿಸಿಕೊಳ್ಳುತ್ತವೆ. ಈ ಸಂದರ್ಭ ಆ ವ್ಯಕ್ತಿ ಮನಸ್ಸಿನ ಹಿಡಿತ ಕಳೆದುಕೊಂಡು ತಾನೇನು ಮಾಡುತ್ತಿದ್ದೇನೆ ಎಂಬುವುದನ್ನೇ ಮರೆತು ಹಲವು ಆಚಾತುರ್ಯಗಳನ್ನು ಎಸಗುವುದಕ್ಕೂ ಮುಂದಾಗಬಹುದು.
ಮನಸ್ಸಿನ ಮೇಲೆ ಪರಿಣಾಮ ಉಂಟು ಮಾಡುವ ರಜೋ ಹಾಗೂ ತಮೋ ಗುಣಗಳನ್ನು ಹೊಂದಿರುವ ಆಹಾರವನ್ನು ಆದಷ್ಟು ಮಟ್ಟಿಗೆ ಕಡಿಮೆ ಮಾಡಿ ಸತ್ವ ಗುಣಗಳುಳ್ಳ ಆಹಾರವನ್ನು ಸೇವಿಸಬೇಕು. ಏಕೆಂದರೆ ಸತ್ವ ಗುಣವು ನೀರಿನ ಹಾಗೆ ನಿರ್ಮಲವಾದುದರಿಂದ ಅದನ್ನು ನಾವು ಸುಲಭವಾಗಿ ನಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಸಾಧ್ಯವಿದೆ. ರಜೋ ಹಾಗೂ ತಮೋ ಗುಣಗಳನ್ನು ಹೊಂದಿರುವ ಆಹಾರ ಸೇವಿಸುವುದರಿಂದ ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲಾಗದೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಒಂದೆಡೆ ರಾಮಕೃಷ್ಣ ಪರಮಹಂಸರು ಹೇಳುತ್ತಾರೆ. ಈ ಪ್ರಪಂಚ ಎನ್ನುವುದು ಒಂದು ದೊಡ್ಡ ಅರಣ್ಯ. ಇದರಲ್ಲಿ ಸತ್ವ, ರಜಸ್ಸು, ತಮಸ್ಸು ಈ ಮೂರು ಜನ ದರೋಡೆಕೋರರು. ಸತ್ಯ ಜ್ಞಾನವನ್ನು ಅರಸಿಕೊಂಡು ನಡೆಯುವ ಮನುಷ್ಯನನ್ನು ದರೋಡೆ ಮಾಡುವವರು ಇವರು. ತಮಸ್ಸು ಈ ಮನುಷ್ಯನನ್ನು ಕೊಲ್ಲೋಣ ಎನ್ನುತ್ತದೆ. ರಜಸ್ಸು ಆತನನ್ನು ಜಗತ್ತಿಗೆ ಕಟ್ಟಿ ಹಾಕುತ್ತದೆ. ಆದರೆ ಸತ್ವ ಆತನನ್ನು ಬಿಡುಗಡೆ ಮಾಡುತ್ತದೆ. ಸತ್ವದ ರಕ್ಷಣೆಯಿಂದಾಗಿ ಮನುಷ್ಯ ಅಪಾಯದಿಂದ ಅಂದರೆ ಕ್ರೋಧ, ಮೋಹ ಇತ್ಯಾದಿ ತಮೋ ಗುಣ ಪ್ರಧಾನವಾದ ಕೇಡುಗಳಿಂದ ಪಾರಾಗುತ್ತಾನೆ.
ತಮಸ್ಸು ಮತ್ತು ರಜಸ್ಸು ಗುಣಗಳುಳ್ಳ ಆಹಾರವನ್ನು ಆದಷ್ಟು ಮಟ್ಟಿಗೆ ತ್ಯಜಿಸುತ್ತಾ ಸತ್ವಗುಣ ವೃದ್ದಿ ಮಾಡುವಂತಹ ಆಹಾರವನ್ನು ಸೇವಿಸಬೇಕು. ಏಕೆಂದರೆ ತಮೋ ಗುಣವು ಸತ್ವರಜಸ್ಸುಗಳಿಂದಲೂ, ರಜೋಗುಣವು ಸತ್ವಗುಣದಿಂದಲೂ ನಾಶಹೊಂದುತ್ತದೆ. ಆದ್ದರಿಂದ ಶುದ್ಧ ಸತ್ವಗುಣವನ್ನು ವೃದ್ಧಿಸಿಕೊಂಡು ಮುನ್ನಡೆಯಬೇಕು. ಆಗ ಒಂದು ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.



Click it and Unblock the Notifications