Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಮದ್ದೂರು ವಡೆಗೆ ಶತಮಾನಂಭವತಿ
ಪಿಜ್ಜಾ, ಮಂಚೂರಿಯನ್, ಪಾನಿಪೂರಿ ಹಾಗೂ ದಿನಂಪ್ರತಿ ಹೊಸರುಚಿಗಳ ಕಾಂಪಿಟೇಷನ್ ಕಾಲದಲ್ಲೂ ಹಳತೆನಿಸದೆ ಎಲ್ಲ ವಯದವರೂ ನಾಲಿಗೆ ಚಪ್ಪರಿಸುವ ವಿಶ್ವಪ್ರಸಿದ್ಧ ಮದ್ದೂರು ವಡೆಗೆ ನೂರು ವರುಷಗಳ ಇತಿಹಾಸ! ಮದ್ದೂರು ವಡೆಯ ಶತಮಾನೋತ್ಸವದ ನಿಮಿತ್ತ ವಡೆ ಮೆಲ್ಲುತ್ತ ಮದ್ದೂರಿನ ಪೌರಾಣಿಕ, ಐತಿಹಾಸಿಕ ಮಹತ್ವ ಸಾರುವ ಕಥೆಯನ್ನು ಮೆಲುಕು ಹಾಕುವಾ.
* ವಾಣಿ ರಾಮದಾಸ್, ಸಿಂಗಪುರ
ಮದ್ದೂರು ವಡೆ ಸಿಕ್ಕರೆ ತೆಗೊಂಡು ಬಾರೋ ಎಂದೆ ನನ್ನ ಅಣ್ಣನಿಗೆ. ತರ್‌ಗಿರೋದೆಲ್ಲಾ ಇಲ್ಲ...ತಿನ್ಬೇಕಾ ಮದ್ದೂರಿಗೆ ನಡಿ ಒರಿಜಿನಲ್ ಪ್ಲೇಸು, ಒರಿಜಿನಲ್ ಟೇಸ್ಟು ಎನ್ನುವುದೇ. ಹೋಗೋ ವಡೆ ತಿನ್ನೋಕ್ಕೋಸ್ಕರ ಅಲ್ಲಿಗೆ ಯಾರ್ ಹೋಗ್ತಾರೆ ಎಂದೆ. ನಮ್ಮಮ್ಮ ನಾನೂ ಬರ್ತೀನಿ ನಡಿಯೇ, ಅಲ್ಲಿ ವರದರಾಜ ಸ್ವಾಮಿ, ನರಸಿಂಹ ದೇವಸ್ಥಾನ ಚೆನ್ನಾಗಿದೆ. ಎಲ್ಲಾ ದೇವ್ರ ಮುಂದೆ ನೋಡು, ಮದ್ದೂರು ವರದನ್ನ ಹಿಂದೆ ನೋಡು ಎಂದು ಗಾದೆಯೇ ಇದೆ. ನನ್ಗೋಸ್ಕರ ದೇವ್ರು, ನೀನು ಇಷ್ಟಪಡೋ ಶಿಲ್ಪಕಲೆ ಎಂದಳು. ನಿಮ್ಮ ವಾಹನ ಸಿದ್ಧವಾಗಲಿ ಎಂದು ನನ್ನಣ್ಣನಿಗೆ ಹೇಳಿದಾಗ ಮಾತೃವಾಕ್ಯ ಪರಿಪಾಲಕಳಿವಳು.. ಸುಮ್ನೆ ವಡೆ ತಿಂದು ಮೈಸೂರಿಗೆ ಹೋಗಿ ಬರೋಣ ಅಂದ್ರೆ ಹಾಕ್ಸಿದ್ಲು ದೇವ್ರ ಬೇಡಿ ಎಂದು ಗೊಣಗಿದ. ಏನೋ ಅದು ಗೊಣಗೋದು ಎಂದ ಅಮ್ಮನ ಮಾತಿಗೆ ಬೇಡಿ ಅಲ್ಲಮ್ಮ...ಬೇಡಿಕೆ ಉತ್ತರ. ಇದು ಅಣ್ಣ-ತಂಗಿಯರ ಮನೆ-ಮನೆ ಮಾತು.
ಎಂಬತ್ತರ ಅಮ್ಮನನ್ನು ಹೊತ್ತ ನಮ್ಮ ಕಾರು ಬಿಡದಿಯಲಿ ತಟ್ಟೆ ಇಡ್ಲಿಗಾಗಿ, ರಾಮನಗರದಲ್ಲಿ ಎಳನೀರಿಗಾಗಿ ಮಂಟಪೋತ್ಸವಕ್ಕೆ ನಿಂತಿತು. ಬೆಂಗಳೂರು-ಮೈಸೂರು ಪಯಣ ...ಹಾದಿಯುದ್ದಕ್ಕೂ ಹಸಿರು, ನದಿ, ಅಣ್ಣ-ಅಕ್ಕಂದಿರೊಂದಿಗೆ ಬಾಲ್ಯದ ನೆನಪುಗಳ ಮೆಲುಕು ಸಾಗಿತ್ತು.
ಮದ್ದೂರು ಮದ್ದು ಶೇಖರಿಸುತ್ತಿದ್ದ ಊರು ...ಪಾಪ, ಗುಂಡಿಗೆ ಮದ್ದು ತುಂಬುತ್ತಿದ್ದ ಸೈನಿಕರು ಕೆಲ್ಸ ಇಲ್ಲದಿದ್ದಾಗ ವಡೆ ಮಾಡ್ತಾ ಇದ್ದಿರಬೇಕು ಅದಕ್ಕೆ ಅಷ್ಟೊಂದು ಫೇಮಸ್ ಮದ್ದೂರು ವಡೆ ಎಂದ ನನ್ನ ಮಾತಿಗೆ. ಮದ್ದೂರು ವಡೆಗಾ ನೂರು ವರ್ಷ ಆಗಿರಬಹುದು ಕಣೆ ಅಂದ್ರು. ಅಬ್ಬಬ್ಬಾ.. ಮಡಿವಂತರು ಈರುಳ್ಳಿ ಮುಟ್ಟದಿದ್ದ ಕಾಲದಲ್ಲೂ ಕದ್ದು ತಿನ್ನುತ್ತಾ ಇದ್ರು ಈ ವಡೆ. ನಮ್ಮಮ್ಮ ಮಡಿಯೋ ಮಡಿ. ಹೋಟ್ಲು ಹೆಸರೇ ಇರಲಿಲ್ಲ. ಆದ್ರು ಸ್ಟೇಷನ್‌ಗಳಲ್ಲಿ ಕಾಫಿ ಬೆಲ್ಲದ್ದು, ಬಟ್ಟೆಯಲ್ಲಿ ಡಿಕಾಕ್ಷನ್ ಹಾಕೋವ್ರು ಸಿಗ್ತಾ ಇದ್ರು. ಸಣ್ಣ ಅಂಗಡಿ ಇರ್ತಾ ಇತ್ತು. ಇಡ್ಲಿ, ಕಾಫಿ, ಮೊಸರನ್ನ ಸಿಗ್ತಾ ಇತ್ತು. ವಡೆ ಶತಾಯುಷಿ ...ಚುರುಕಾಯಿತು ನನ್ನ ಬರಿಯೋ ಬುದ್ಧಿ.
ವಡೆ ಹುಟ್ಟಿದ ಕಥೆ : ಬೆಂಗಳೂರು ಮೈಸೂರು ರೈಲು ಸಂಚಾರ ಆರಂಭಗೊಂಡು 128 (1881) ವರುಷಗಳಾಯಿತು. ಆ ಕಾಲದಲ್ಲೇ ಉಡುಪಿ-ಮಂಗಳೂರು ಕಡೆಯ ಆಚಾರರೊಬ್ಬರು ರೈಲ್ವೆ ಕ್ಯಾಂಟೀನಿನಲ್ಲಿ ಇಡ್ಲಿ, ಕಾಫಿ, ಮಂಗಳೂರು ಬೋಂಡಾ ಅಂಗಡಿ ಇಟ್ಟಿದ್ರು. ರೈಲು ನಿಲ್ಲುತ್ತಿದ್ದುದು ಐದು ನಿಮಿಷ. ಡಿಮ್ಯಾಂಡ್ ಇದ್ದದ್ದು ಬೋಂಡ ಹಾಗೂ ಬೈಟು ಬೆಲ್ಲದ ಕಾಫಿಗೆ. ಒಂದು ದಿನ ಕಡಲೆಹಿಟ್ಟು ಮುಗಿದು ಹೋಯಿತು. ಅಂದಿನ ಕಾಲದಲ್ಲಿ ರೈಲ್ವೇ ನಿಲ್ದಾಣ ಊರಿನಿಂದ ದೂರವಿತ್ತು. ರೈಲು ಬರುವ ವೇಳೆ, ಹಿಟ್ಟಿಲ್ಲ. ಜನ ಹಸಿದು ಬರುತ್ತಾರೆ. ಅದರಲ್ಲೂ ಬೋಂಡ ಕೊಡಿ ಆಚಾರ್ರೆ ಎಂದು ಓಡೋಡಿ ಬರುತ್ತಾರೆ ಏನು ಮಾಡುವುದು ಎಂದು ಯೋಚನೆಗೀಡಾದ ಆಚಾರರಿಗೆ ಹೊಳೆದದ್ದು ಹೊಸ ರೆಸಿಪಿ. ಇದ್ದ ರವೆ, ಹಿಟ್ಟು, ಈರುಳ್ಳಿ, ಮೆಣಸಿನಕಾಯಿಗಳ ಮಿಶ್ರಣ ಸೇರಿಸಿ ಕೈಯ್ಯಲ್ಲಿ ಚಪಾತಿಯಂತೆ ತಟ್ಟಿ ಎಣ್ಣೆಗೆ ಇಳಿ ಬಿಟ್ಟರು. ರೈಲು ಬಂದಾಕ್ಷಣ 'ಬೋಂಡ ಕೊಡಿ ಆಚಾರ್ರೆ' ಎಂದುಲಿದ ಪಯಣಿಗರಿಗೆ 'ಇವತ್ತು ಬೋಂಡ ಅಲ್ಲ ವಡೆ ಸ್ಪೆಷಲ್' ಎಂದರು. 'ಏನ್ ವಡೆ'ಗೆ ಬಂದ ಉತ್ತರ ಮದ್ದೂರು ವಡೆ. ಇದು 80 ವರುಷದ ನನ್ನಮ್ಮನಿಗೆ ಅವಳ ತಂದೆ ಹೇಳಿದ್ದ ಮದ್ದೂರು ವಡೆಯ ಹುಟ್ಟಿನ ಗುಟ್ಟು.
ಇಂದು ದಿನಪ್ರತಿ ಸುಮಾರು 600-800 ವಡೆಗಳು ಮಾರಾಟವಾಗುವ ಈ ಕೋತಿನಾಷ್ಟ, ಇದೀಗ ಛಂಗನೆ ಪರದೇಶಕ್ಕೂ ಹಾರಿದೆ. ಪಿಜ್ಜಾ, ಮಂಚೂರಿಯನ್, ಪಾನಿಪೂರಿ ಹಾಗೂ ದಿನಂಪ್ರತಿ ಹೊಸರುಚಿಗಳ ಕಾಂಪಿಟೇಷನ್ ಕಾಲದಲ್ಲೂ ಹಳತೆನಿಸದೆ ಎಲ್ಲ ವಯದವರೂ ನಾಲಿಗೆ ಚಪ್ಪರಿಸುವ ಮದ್ದೂರು ವಡೆಗೆ ನೂರು ವರುಷಗಳ ಇತಿಹಾಸ. ಮದ್ದೂರು ವಡೆ ಮದ್ದೂರಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಮದ್ದೂರಿನ ವಡೆಯ ಘಮಲು ಮೈಸೂರು-ಬೆಂಗಳೂರು ರೈಲಿನಲ್ಲಿ ರಾಮನಗರ ದಾಟಿದಂತೆ ಯಾರ್‍ಗೆಬೇಕು ಮದ್ದೂರ್‍ವಡೆ...ರಾಗ ಕೇಳಿ ಬರುತ್ತೆ. ದಶಕಗಳ ಹಿಂದೆ ಬರೀ ಮದ್ದೂರಿನಲ್ಲೇ ಸಿಗುತ್ತಿದ್ದ ವಡೆ ಇಂದು ಎಲ್ಲೆಡೆಗಳಲ್ಲಿ ಮಾಡಲ್ಪಡುತ್ತಿದೆ. ಆದ್ರೂ ಮದ್ದೂರಿನ ಸ್ಟೇಷನ್ ವಡೆಗೆ ಒಂದು ಗುಲಗಂಜಿ ತೂಕದ ರುಚಿ ಹೆಚ್ಚು. ನಮ್ಮಣ್ಣ ಅಂದ ಒರಿಜಿನಲ್ ಪ್ಲೇಸು, ಒರಿಜಿನಲ್ ಟೇಸ್ಟು.. ಸ್ಥಳ ಮಹಾತ್ಮೆ ನೋಡಿ.

ಮದ್ದೂರು ಇತಿಹಾಸ : ಉಗ್ರ ನರಸಿಂಹ ಹಾಗೂ ವರದರಾಜಸ್ವಾಮಿ ದೇಗುಲ ಹೊಯ್ಸಳ ಶೈಲಿಯದು. ಮದ್ದೂರಿನ ವರದರಾಜ 12 ಅಡಿ ಉದ್ದದ ಭವ್ಯ ಮೂರ್ತಿ, ಆಜಾನುಬಾಹು. ರಾಜಾ ವಿಷ್ಣುವರ್ಧನನ ತಾಯಿ ಕಂಚಿ ವರದನನ್ನು ನೋಡಬೇಕೆಂದು ಇಷ್ಟಪಟ್ಟಳಂತೆ. ಯುದ್ಧ ಭೀತಿ ಇದ್ದ ಕಾರಣ ಮದ್ದೂರಿನಲ್ಲಿ ಕಂಚಿಯ ವರದನಂತೆಯೇ ವರದರಾಜಸ್ವಾಮಿಯ ದೇಗುಲ ಕಟ್ಟಿಸಿದನಂತೆ. ಸಣ್ಣ ಗುಡ್ಡದ ಮೇಲೆ ವಿರಾಜಮಾನನಾಗಿರುವ ಮದ್ದೂರಿನ ವರದನಿಗೆ ಕಂಚಿಕಾಮವರದನೆಂದು ಹೆಸರು. ಮಂದಸ್ಮಿತ, ಅತ್ಯಂತ ಸುಂದರ ಮೂರ್ತಿ. ಮೂರ್ತಿಯ ಕೈ, ಕಾಲ್ಗಳ ಮೇಲೆ ಬಳ್ಳಿ, ಹೂಗಳ ಸುಂದರ ಕೆತ್ತನೆ. ಗಾದೆಯ ಬಗ್ಗೆ ಪ್ರಶ್ನೆ ಕೇಳಿದಾಗ ವರದರಾಜ ಮೂರ್ತಿಯ ಹಿಂದೆ ಕೂಡ ಕೆತ್ತನೆ ಬಹಳ ಸೊಗಸಾಗಿದೆ. ಗರ್ಭಗುಡಿಯ ಬಾಗಿಲಲಿ ನಿಂದು ನೋಡಿದಲ್ಲಿ ಕಾಲಿನ ಉಗುರುಗಳನ್ನೂ ಕಾಣಬಹುದು. ಈ ಕೆತ್ತನೆಗಳು ಇನ್ನೆಲ್ಲೂ ಇಲ್ಲ. ಬಹಳ ಹಿಂದೆ ಗರ್ಭಗುಡಿಗೆ ಜನರನ್ನು ಬಿಡುತ್ತಿದ್ದರು. "ಎಲ್ಲಾ ದೇವರ ಮುಂದೆ ನೋಡು, ಅಳಲನಾಥನ ಹಿಂದೆ ನೋಡು" ಎನ್ನುತ್ತಾರೆ. ಅಳಲನಾಥ ಎಲ್ಲರ ಅಳಲನ್ನು ನೀಗಿಸುವನು ಎಂದರ್ಥ ಎಂದು ಅಲ್ಲಿದ್ದ ಮರಿ ಪುರೋಹಿತರು ತಿಳಿಸಿದರು. ಆಗ ಮೂಡಿ ಬಂದ ಗಾದೆ ಅದು. ನನಗೆ ತಿಳಿದಂತೆ ಇದೀಗ 60 ವರುಷಗಳಿಂದ ಗರ್ಭಗುಡಿಯ ಒಳಗೆ ಯಾರನ್ನೂ ಬಿಡುವುದಿಲ್ಲ ಎಂದರು.
ಮದ್ದೂರಿನ ಉಗ್ರನರಸಿಂಹ ಎಂಟು ಕೈಗಳ, ಏಳು ಅಡಿ ಉದ್ದದ ಭವ್ಯ ಮೂರ್ತಿ. ಉಗ್ರನಾಗೇ ಕಾಣಿಸುವ ಆ ಮೂರುತಿಯು ಮಂಡಿಯ ಮೇಲೆ ಹಿರಣ್ಯಕಶಪುವನ್ನು ಮಲಗಿಸಿಕೊಂಡು ಎರಡು ಕೈಗಳಿಂದ ಅವನ ಹೊಟ್ಟೆಯನ್ನು ಬಗೆಯುತ್ತಿದ್ದಾನೆ, ಇನ್ನೆರಡು ಕೈಗಳು ರಕ್ಕಸನ್ನ ಕರುಳಿನ ಮಾಲೆಗಾಗಿ, ಹಿಂದಿನ ಎರಡು ಕೈಗಳಲಿ ಪಾಶ, ಅಂಕುಶ ಮತ್ತೆರಡು ಕೈಗಳಲಿ ಶಂಖ, ಚಕ್ರ. ಕಾಲ್ಗಳ ಇಕ್ಕೆಲಗಳಲ್ಲಿ ಗರುಡ, ಪ್ರಹ್ಲಾದ. ನರಸಿಂಹ ತ್ರಿನೇತ್ರಧಾರಿ? ಹಿರಣ್ಯಕಶಪು ಸಂಹಾರದ ಸಮಯದಲ್ಲಿ ನಾರಸಿಂಹ ಮುಕ್ಕಣ್ಣನೇಕಾದನೋ? ಉತ್ತರ ಸಿಗಲಿಲ್ಲ. ಈತನಿಗೆ ಸೌಮ್ಯ ನಾಯಿಕೆ, ನರಸಿಂಹನಾಯಕಿ ದ್ವಿಪತ್ನಿಯರು.
ಎರಡೂ ದೇಗುಲಗಳು ಹೊಯ್ಸಳ ಶೈಲಿಯಲ್ಲಿದೆ. ದೇವರು ಅವರವರ ಭಾವಕ್ಕೆ. ನಮ್ಮಲ್ಲಿನ ಅನೇಕ ದೇಗುಲಗಳಲ್ಲಿ ಶಿಲ್ಪಕಲೆಗಳ ಆಗರವೇ ಅಡಗಿದೆ. ಎಲ್ಲಿಯೂ ಮಾಹಿತಿಗಳಿಲ್ಲ. ಎಲ್ಲವೂ ಬಾಯಿಂದ ಬಾಯಿಗೆ ಬಂದ ಕಥೆಗಳು. ಕಟ್ಟಿಸಿದವರ ಹೆಸರಾದರೂ ಕಾಣಬಹುದು. ಕಡೆದ ಶಿಲ್ಪಿ ಅನಾಮಧೇಯ. ಒಂದು ಕಲ್ಲು ದೇವರ ಮೂರ್ತಿ ಎನಿಸಬೇಕಾದಲ್ಲಿ ಆ ಶಿಲ್ಪಿ ತನ್ನ ಕಲ್ಪನೆ, ಭಕ್ತಿ, ನಗು, ಕರುಣೆ, ಮಮತೆ, ಯೋಗ, ಉಗ್ರ ಹೀಗೆ ಭಾವನೆಗಳನ್ನು ಆ ಕಲ್ಲಿನಲ್ಲಿ ಕಡೆದ ಶಿಲ್ಪಿಗಳ ಉಲ್ಲೇಖನವಂತೂ ಇಲ್ಲವೇ ಇಲ್ಲ. ಇಂತಹ ಸುಂದರ ಶಿಲ್ಪಗಳನ್ನು ನಾವು ಅನೇಕ ದೇಗುಲಗಳಲ್ಲಿ ಕಾಣುತ್ತೇವೆ. ಆ ಶಿಲ್ಪಿಗಳಿಗೆ ನಮೋನ್ನಮಃ.
ಎಲ್ಲಾ ದೇಗುಲಗಳಲೂ ಗರ್ಭಗುಡಿ, ಪೂಜಿಪ ಮೂರ್ತಿಗಳು ಶುದ್ಧವಾಗಿವೆ ಮಾತ್ರ. ಮಿಕ್ಕೆಲ್ಲ ಶಿಲ್ಪಗಳಲಿ ಧೂಳು, ಧೂಳು. ಎಲ್ಲಿಯೂ ಮಾಹಿತಿಯ ಫಲಕಗಳಿಲ್ಲ ಎಂಬುದು ವಿಷಾದದ ಸಂಗತಿ. ನನ್ನತ್ತ ಗಮನಹರಿಸುವಿರಾ ಎಂದು ಭಾರತದ ಅನೇಕ ದೇಗುಲಗಳು, ಶಿಲ್ಪಕಲೆಗಳು ಮೊರೆ ಇಡುತ್ತಲೇ ಇವೆ. ಈ ನಿರ್ಲಕ್ಷತೆ, ಅಸಡ್ಡೆಯಿಂದ ಅನೇಕ ದೇಗುಲಗಳು ಪಾಳು ಬಿದ್ದಿವೆ. ಅಲೆಮಾರಿಗಳ, ಕಳ್ಳಕಾಕರ ಅಡಗುದಾಣ, ದುರುಪಯೋಗಕ್ಕೆ ಈಡಾಗಿವೆ. ಭಾರತ ಕಲೆಗಳ ಬೀಡು. ಕುಶಲತೆಗೆ ಬೆರೆಗಾಗಿ ಮೂಕವಾಗಿ ನಿಲ್ಲುವ ತಾಣಗಳು ಪ್ರತಿಯೊಂದು ಪ್ರಾಂತ್ಯದಲ್ಲೂ ಇದೆ. ಅಲ್ಲಿ ಅವರದ್ದೇ ಆದ ಕಲೆ, ಕುಶಲಗಾರಿಕೆ ತುಂಬಿ ತುಳುಕುತ್ತಿವೆ. ಇವುಗಳನ್ನು ನಾವು ಪ್ರೋತ್ಸಾಹಿಸಿ, ಕಾಪಾಡಬೇಕದುದು ಪ್ರತೊಯೋರ್ವ ಭಾರತೀಯನ ಕರ್ತವ್ಯ.
ಇಷ್ಟರಲಿ ಸಂಜೆಯಾಗಿತ್ತು. ಮನ ತುಂಬಿ ಬಂದಿತ್ತು. ಇದೀಗ ವಡೆ ಬಹುತೇಕೆಡೆಗಳಲ್ಲಿ ಸಿಗುತ್ತದೆ. ಮದ್ದೂರಲ್ಲಿ ತಿಂದ ಸವಿ ಮರೆಯಲಾಗದ್ದು. ಮರಳಿ ಮನೆಯತ್ತ ಪಯಣದಲಿ ಯಾರಿಗೂ ಮಾತೇ ಇಲ್ಲ...ಟಿಫಾನೀಸ್ ವಡೆ-ಮಸಾಲೆ ಉದರ ತುಂಬಿದರೆ, ಶಿಲ್ಪಕಲೆ ಕಣ್ಮನ ತುಂಬಿತ್ತು. ಆ ಮೆಲುಕು ಎಲ್ಲರನೂ ಬಿಮ್ಮನಾಗಿಸಿತ್ತು. ನೀವೂ ಒಮ್ಮೆ ನೋಡಿ ಬನ್ನಿ..... ನೂರು ವರುಷವಾಗಲಿ ಮರೆಯಲಾರೆನು ಎಂದು ಮದ್ದೂರು ವಡೆ ತಿಂದು ಬನ್ನಿ.



Click it and Unblock the Notifications