ಕೇವಲ ಒಂದೇ ವರ್ಷಕ್ಕೆ ಮುರಿದು ಬಿತ್ತು ಮೂರನೇ ಮದುವೆ, ತನಗಿಂತ ಆರು ವರ್ಷ ಚಿಕ್ಕವನ ಜೊತೆ ಮದ್ವೆಯಾಗಿದ್ದ 42 ವರ್ಷದ ನಟಿ

By Sarvesh Mithare

ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಬದುಕಿನ ಮಹತ್ವದ ಹಂತ. ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪ್ರೀತಿ ಎಂಬ ಎರಡಕ್ಷರಕ್ಕೂ ಬೆಲೆ ಇಲ್ಲ. ಮದುವೆ ಎಂಬ ಮೂರಕ್ಷರಕ್ಕೂ ಕಿಮ್ಮತ್ತು ಇಲ್ಲ.

ಅದರಲ್ಲಿಯೂ ಕಳೆದ ಎರಡು ಮೂರು ವರ್ಷಗಳಲ್ಲಿ ಚಿತ್ರರಂಗದಲ್ಲಿ ಮದುವೆ ಮತ್ತು ಪ್ರೀತಿಗೆ ಅರ್ಥವೇ ಇಲ್ಲದಂತಾಗಿದೆ. ಅನ್ಯೋನ್ಯತೆಯ ಕೊರತೆಯಿಂದ .. ಚಿಕ್ಕ ಚಿಕ್ಕ ಕಾರಣಗಳಿಂದ ಹಲವರು ಸಂಬಂಧ ಮುರಿದುಕೊಂಡು ಎದ್ದು ಬಂದಿದ್ದಾರೆ.


Love s Meaning Lost Meera Vasudevan s Third Divorce Ends 1-Year Marriage Declares Peace

ಚಿತ್ರರಂಗದವರ ಈ ಧೋರಣೆಯಿಂದ ಸಾರ್ವತ್ರಿಕ ವಲಯದಲ್ಲಿ ಅಸಮಾಧಾನ ಇದೆ. ಮದುವೆ ಎಂದರೆ ಇವರಿಗೆಲ್ಲಾ ಮಕ್ಕಳಾಟ ಎಂಬ ಆಕ್ರೋಶ ಕೂಡ ಆಗಾಗ ವ್ಯಕ್ತವಾಗುತ್ತೆ. ಅವಿವಾಹಿತರಾಗಿ ಉಳಿಯುವುದು ತಪ್ಪಲ್ಲ. ಆದರೆ ವಿವಾಹವ್ಯವಸ್ಥೆಯನ್ನೇ ಅವಹೇಳನ ಮಾಡುವುದು ತಪ್ಪು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತೆ. ಇದೆಲ್ಲದಕ್ಕೆ ಪೂರಕವಾಗಿ ಮೀರಾ ವಾಸುದೇವನ್ ತಮ್ಮ ಮೂರನೇ ಗಂಡನಿಗೆ ಗುಡ್ ಬೈ ಹೇಳಿ ಸಂಬಂಧದಿಂದ ಹೊರ ಬಂದಿದ್ದಾರೆ. ಈ ಮೂಲಕ ಚರ್ಚೆಗೆ ನಾಂದಿ ಹಾಡಿದ್ದಾರೆ.

ಹೌದು, ಮೀರಾ ವಾಸುದೇವನ್... ಮಲಯಾಳಂ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡ ಮುಂಬೈ ಮೂಲದ ತಮಿಳು ಚೆಲುವೆ. ಹೆಚ್ಚು ಕಡಿಮೆ ಮೂರು ದಶಕಗಳಿಂದ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಮೀರಾ ಕೇವಲ ಮಲಯಾಳಂನಲ್ಲಿ ಅಷ್ಟೇ ಅಲ್ಲ, ಹಿಂದಿ.. ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ.

''ಅಂಜಲಿ ಐ ಲವ್ ಯೂ''.. ''ತನ್ಮಾತ್ರ'' .. ''ಜೆರ್ರಿ'' .. ''ಗುಲ್ಮೋಹರ್''.. ''13 ಬಿ'' .. ''ರೂಲ್ಸ್- ಪ್ಯಾರ್ ಕಾ ಸೂಪರ್ ಹಿಟ್ ಫಾರ್ಮುಲಾ''.. ಹೀಗೆ ಇಲ್ಲಿಯವರೆಗೆ ಹತ್ತಾರು ಚಿತ್ರ.. ಹಲವಾರು ಪಾತ್ರ.. ಮಾಡಿರುವ ಮೀರಾ ವಾಸುದೇವನ್ ಕಳೆದ ವರ್ಷ ಮೇನಲ್ಲಿ ತಮ್ಮ 42ರ ಹರೆಯದಲ್ಲಿ ಮಲಯಾಳಂ ಚಿತ್ರರಂಗದಲ್ಲಿಯೇ ಸಿನಿಮ್ಯಾಟೋಗ್ರಾಫರ್ ಆಗಿ ಗುರುತಿಸಿಕೊಂಡಿರುವ ವಿಪಿನ್ ಜೊತೆ ಸಪ್ತಪದಿ ತುಳಿದಿದ್ದರು.

ವಿಶೇಷ ಅಂದರೆ ಮೀರಾ ವಾಸುದೇವನ್‌ ಅವರಿಗಿಂತ ವಿಪಿನ್ ನಯಂಗಮ್ ಆರು ವರ್ಷ ಚಿಕ್ಕವರು. ಆದರೂ ಕೂಡ ನಮ್ಮದು ಜನುಮ ಜನುಮದ ಅನುಬಂಧ ಎಂದು ಹೇಳುತ್ತಲೇ ಮೀರಾ ಮದುವೆಯ ಬಂಧನಕ್ಕೊಳಗಾಗಿದ್ದರು.ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ಮದುವೆಯಾಗಿದ್ದರು.


ಆದರೆ ಈಗ ಈ ಜನುಮ ಜನುಮದ ಅನುಬಂಧ ಕೇವಲ ಒಂದು ವರ್ಷಕ್ಕೆ ಕಳಚಿ ಬಿದ್ದಿದೆ. ಮೀರಾ ವಾಸುದೇವನ್ ಅವರ ಮೂರನೇ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಮೀರಾ ನಾನು, ನಟಿ ಮೀರಾ ವಾಸುದೇವನ್, ಅಧಿಕೃತವಾಗಿ ಆಗಸ್ಟ್ 2025 ರಿಂದ ಸಿಂಗಲ್ ಆಗಿದ್ದೇನೆ ಎಂದು ಘೋಷಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ನಾನು ಈಗ ನನ್ನ ಜೀವನದ ಅತ್ಯಂತ ಅದ್ಭುತ ಮತ್ತು ಶಾಂತವಾದ ಹಂತದಲ್ಲಿದ್ದೇನೆ ಎಂದು ಹೇಳಿದ್ದಾರೆ.

ಅಂದ್ಜಾಗೇ ವಿಪಿನ್ ಜೊತೆ ಕಳೆದ ವರ್ಷ ಮದುವೆಯಾಗುವ ಮೊದಲು ಮೀರಾ ವಾಸುದೇವನ್‌ ಅದಾಗಲೇ ಎರಡು ಮದುವೆಯಾಗಿದ್ದರು. ಈ ಹಿಂದೆ ಸರಿ ಸುಮಾರು 19 ವರ್ಷದ ಹಿಂದೆ ಅಂದರೆ 2005ರ ಆಸು ಪಾಸು ವಿಶಾಲ್ ಅಗರ್‌ ವಾಲ್ ಅವರನ್ನ ಮೀರಾ ಮದುವೆಯಾಗಿದ್ದರು. ಆದರೆ ಈ ಸಂಬಂಧ ಐದೇ ವರ್ಷಕ್ಕೆ ಉಸಿರು ಚೆಲ್ಲಿತ್ತು.

ವಿಶಾಲ್ ಅಗರ್‌ ವಾಲ್ ಅವರಿಂದ 2010ರಲ್ಲಿ ದೂರವಾದ ನಂತರ ಮೀರಾ ಮಲಯಾಳಂನ ಜನಪ್ರಿಯ ನಟ ಜಾನ್ ಕೊಕ್ಕೆನ್ ಜೊತೆ ಕಾಣಿಸಿಕೊಂಡರು. ಆ ನಂತರ 2012ರಲ್ಲಿ ಜಾನ್ ಜೊತೆ ಮದುವೆಯಾಗಿ ಒಂದು ಮಗುವಿಗೆ ತಾಯಿಯೂ ಆದರು. ಆದರೂ ಅದ್ಯಾಕೋ ಈ ಸಂಬಂಧ ಕೂಡ ಹೆಚ್ಚು ದಿನ ಉಳಿಯಲಿಲ್ಲ. 2016ರಲ್ಲಿ ಮೀರಾ ವಾಸುದೇವನ್, ಜಾನ್ ಕೊಕ್ಕೆನ್ ಅವರಿಂದ ವಿಚ್ಛೇದನ ಪಡೆದು ದೂರವಾದರು.

ಹೀಗೆ ತಮ್ಮ ಇಬ್ಬರು ಪತಿಯಿಂದ ದೂರವಾದ ಮೀರಾ ಆಗಲೇ ಹೇಳಿದಂತೆ ಕಳೆದ ವರ್ಷ ವಿಪಿನ್ ಜೊತೆ ಮದುವೆಯಾಗಿದ್ದರು. ಮೂರನೇ ಬಾರಿ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದರು. ಆದರೆ ಈ ಮದುವೆ ಕೂಡ ಕೇವಲ ಒಂದೇ ವರ್ಷಕ್ಕೆ ಮುರಿದು ಬಿದ್ದಿದೆ.

ಸದ್ಯ ಮೀರಾ ವಾಸುದೇವನ್ ಐ ಆಮ್ ಸಿಂಗಲ್ ಎಂದು ಹೇಳಿದ್ದಾರೆ. ಹೀಗಾಗಿ ಶೀಘ್ರದಲ್ಲಿಯೇ ಮತ್ತೆ ಮೀರಾ ಮಿಂಗಲ್ ಆದರೂ ಆಗಬಹುದು, ನಾಲ್ಕನೇ ಮದುವೆ ಸುದ್ದಿ ಕೊಡಬಹುದು ಎಂದು ಮಲಯಾಳಂ ಚಿತ್ರರಂಗದವರು ಮೀರಾ ಅವರ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.

Credit: Filmibeat

Story first published: Monday, November 17, 2025, 13:17 [IST]
X
Desktop Bottom Promotion