Gold: ಚಿನ್ನದ ದರ ಏರಿಳಿತದ ನಡುವೆ ಸಂಕಷ್ಟಕ್ಕೆ ಸಿಲುಕಿದ ಸ್ಥಳೀಯ ಆಭರಣ ವ್ಯಾಪಾರಿಗಳು

By Manohara M

ಚಿನ್ನದ ದರದಲ್ಲಿ ನಿರಂತರ ಏರಿಳಿತ ಮತ್ತು ದಾಖಲೆ ಮಟ್ಟದ ಬೆಲೆ ಏರಿಕೆಯಿಂದಾಗಿ ದೇಶದಾದ್ಯಂತ ಸಣ್ಣ ಹಾಗೂ ಕುಟುಂಬ ಆಧಾರಿತ ಸ್ಥಳೀಯ ಆಭರಣ ವ್ಯಾಪಾರಿಗಳು ತೀವ್ರ ನಗದು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವರದಿಯಾಗಿದೆ. ದೊಡ್ಡ ಬ್ರಾಂಡೆಡ್‌ ಚೈನ್‌ ಜ್ಯುವೆಲ್ಲರಿ ಕಂಪನಿಗಳು ಈ ಪರಿಸ್ಥಿತಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿರುವ ಬೆಳವಣಿಗೆ ಕಂಡುಬಂದಿದೆ.

ಭಾರತದ ಚಿನ್ನ ಮತ್ತು ಆಭರಣ ಉದ್ಯಮದ ಅತ್ಯಂತ ಹಳೆಯ ಮತ್ತು ಪ್ರಮುಖ ಸಂಸ್ಥೆಯಾದ ಇಂಡಿಯನ್ ಬುಲಿಯನ್ ಅಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ ಅಂದಾಜಿನ ಪ್ರಕಾರ, ದೇಶದ ಸ್ಥಳೀಯ ಜ್ಯುವೆಲ್ಲರ್‌ಗಳು ಮತ್ತು ಚಿನ್ನದ ಕರಕುಶಲಕಾರರು ಸುಮಾರು ಶೇ 45ರಷ್ಟು ಪ್ರಮಾಣದ ವ್ಯವಹಾರ ಕುಸಿತ ಎದುರಿಸುತ್ತಿದ್ದಾರೆ. ಚಿನ್ನದ ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಗ್ರಾಹಕರು ಖರೀದಿಯಿಂದ ಹಿಂದೆ ಸರಿಯುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಮನಿ ಕಂಟ್ರೋಲ್‌ ವರದಿ ಮಾಡಿದೆ.


Gold

ಮಧ್ಯಮ ವರ್ಗದ ಜನರಿಗೆ ಈಗ ಚಿನ್ನ ಖರೀದಿಸುವುದು ಸಾಧ್ಯವಾಗುತ್ತಿಲ್ಲ. ಮನೆ ಖರ್ಚುಗಳೇ ದೊಡ್ಡ ಸವಾಲಾಗಿವೆ. ದೀಪಾವಳಿ ಬಳಿಕ ಪರಿಸ್ಥಿತಿ ಇನ್ನಷ್ಟು ಕೆಟ್ಟಿದೆ. ಅಂಗಡಿಗೆ ಇತ್ತೀಚಿನ ದಿನಗಳಲ್ಲಿ ಗ್ರಾಹಕರೇ ಬರುತ್ತಿಲ್ಲ ಎನ್ನುವುದು ಕಳವಳಕಾರಿ ಸಂಗತಿ ಎನ್ನುತ್ತಿದ್ದಾರೆ ಖಾಸಗಿ ಜ್ಯುವೆಲ್ಲರ್‌ಗಳು.

ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಿದರೂ, ನಿರಂತರ ದರ ಅಸ್ಥಿರತೆಯಿಂದ ಗ್ರಾಹಕರು ಖರೀದಿಗೆ ಮುಂದಾಗುತ್ತಿಲ್ಲ. ಬೆಲೆ ಏರಿ ನಂತರ ಸ್ಥಿರವಾದರೆ ಜನ ಖರೀದಿಗೆ ಮನಸ್ಸು ಮಾಡುತ್ತಾರೆ. ಆದರೆ ದಿನದಿಂದ ದಿನಕ್ಕೆ ಬೆಲೆ ಏರುಪೇರು ಕಂಡರೆ, ಮದುವೆ ಅಥವಾ ತುರ್ತು ಸಂದರ್ಭ ಹೊರತುಪಡಿಸಿ ಯಾರೂ ಚಿನ್ನ ಖರೀದಿಸುವುದಿಲ್ಲ. ಇದರಿಂದಾಗಿ ಹಲವರು ಹೊಸ ಡಿಸೈನ್‌ಗಳ ಆಭರಣ ಸಂಗ್ರಹವನ್ನು ಸಹ ಮುಂದೂಡಿದ್ದಾರೆ.

3.5 ಲಕ್ಷ ಸಣ್ಣ ಆಭರಣ ಅಂಗಡಿ

ಭಾರತದಲ್ಲಿ ಸುಮಾರು 3 ಲಕ್ಷದಿಂದ 3.5 ಲಕ್ಷದವರೆಗೆ ಸಣ್ಣ ಮತ್ತು ಮಧ್ಯಮ ಮಟ್ಟದ ಸ್ವತಂತ್ರ ಆಭರಣ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ವ್ಯಾಪಾರದಲ್ಲಿ ಮದುವೆ ಆಭರಣಗಳು ಸುಮಾರು ಶೇ 60-65ರಷ್ಟು ಪಾಲು ಹೊಂದಿವೆ. ಗ್ರಾಹಕರೊಂದಿಗೆ ನಿರಂತರ ಸಂಪರ್ಕ, ಕಸ್ಟಮೈಸ್‌ ವಿನ್ಯಾಸಗಳೇ ಇವುಗಳ ಬಲವಾಗಿದ್ದರೂ, ಇತ್ತೀಚಿನ ಪರಿಸ್ಥಿತಿಗಳು ಈ ಆಧಾರವನ್ನೇ ತಲೆಕೆಳಗಾಗಿಸಿವೆ.

ಈ ವರ್ಷದ ಆರಂಭದಿಂದಲೇ ಸ್ಥಳೀಯ ಜ್ಯುವೆಲ್ಲರ್‌ಗಳು ನಗದು ಸಂಕಷ್ಟ ಎದುರಿಸುತ್ತಿದ್ದಾರೆ. ಭಾರತ ಚಿನ್ನ ಆಮದು ಮೇಲೆ ಅವಲಂಬಿತವಾಗಿರುವುದರಿಂದ ದರಗಳ ಮೇಲೆ ನಿಯಂತ್ರಣ ಇಲ್ಲ. ಅನೌಪಚಾರಿಕ ವಲಯದ ವ್ಯಾಪಾರಿಗಳಿಗೆ ಹೊಸ ಸಂಗ್ರಹಕ್ಕೆ ಬೇಕಾದ ಬಂಡವಾಳವೇ ಇಲ್ಲ. ಹಬ್ಬದ ಕಾಲ ಸ್ವಲ್ಪ ಮಟ್ಟಿಗೆ ವ್ಯಾಪಾರಕ್ಕೆ ಉತ್ಸಾಹ ತಂದರೂ ಸಮಾಧಾನಕರವಾಗಿಲ್ಲ. ಹಗುರ ತೂಕದ ಆಭರಣಗಳು, ಬೇಗ ಮಾರಾಟವಾಗುವ ವಿನ್ಯಾಸಗಳು ಮತ್ತು ಆರ್ಡರ್‌ ಮೇಡ್‌ ಆಭರಣಗಳತ್ತ ಗಮನ ಹರಿಸುತ್ತಿದ್ದು, ಇದರಿಂದ ಸಂಗ್ರಹ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಮಾರುಕಟ್ಟೆಯ ಸುಮಾರು ಶೇ 53ರಷ್ಟು ಪಾಲು ಹೊಂದಿರುವ ಅಸಂಘಟಿತ ವಲಯದ ಜ್ಯುವೆಲ್ಲರ್‌ಗಳು ನೇರವಾಗಿ ಸಂಗ್ರಹ ಖರೀದಿ, ಹೆಡ್ಜಿಂಗ್‌ ವ್ಯವಸ್ಥೆಯ ಕೊರತೆ ಮತ್ತು ಸೀಮಿತ ನಗದು ಸಂಪನ್ಮೂಲಗಳ ಕಾರಣದಿಂದಾಗಿ ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ. ಇದರಿಂದ ಅಂಗಡಿ ವಿಸ್ತರಣೆ ಮತ್ತು ಹೊಸ ವಿನ್ಯಾಸಗಳ ಬಿಡುಗಡೆಗೂ ತಡೆ ಉಂಟಾಗಿದೆ. ವ್ಯಾಪಾರಕ್ಕೆ ಅತ್ಯಂತ ಹಾನಿಕಾರಕವಾದುದು ಬೆಲೆ ಅಸ್ಥಿರತೆ. ಬೆಲೆ ಹೆಚ್ಚು ಇದ್ದರೂ ಪರವಾಗಿಲ್ಲ, ಆದರೆ ಅದು ಸ್ಥಿರವಾಗಬೇಕು. ಹಳೆಯ ಆಭರಣ ಕರಗಿಸಿ ಹೊಸದು ಮಾಡಿಸಿದರೆ ತೂಕ ಮತ್ತು ಮೇಕಿಂಗ್‌ ಚಾರ್ಜ್‌ಗಳಲ್ಲಿ ನಷ್ಟವಾಗುತ್ತದೆ. ಆ ನಷ್ಟವನ್ನೆಲ್ಲ ನಾವೇ ಭರಿಸಬೇಕು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಬ್ರಾಂಡೆಡ್‌ ಮಳಿಗೆಗಳಿಗೆ ಲಾಭ

ಆದರೆ ದೊಡ್ಡ ಬ್ರಾಂಡೆಡ್‌ ಚೈನ್‌ಗಳು ಈ ಪರಿಸ್ಥಿತಿಯಿಂದ ಲಾಭ ಪಡೆಯುತ್ತಿವೆ. ಕಡಿಮೆ ತೂಕದ ಆಭರಣಗಳು, 18 ಕ್ಯಾರಟ್‌ ಮತ್ತು ಸ್ಟಡ್ಡೆಡ್‌ ಜ್ಯುವೆಲ್ಲರಿಗಳತ್ತ ಗ್ರಾಹಕರ ಒಲವು ಹೆಚ್ಚಾಗುತ್ತಿದೆ. ಟೈಟನ್‌ ಕಂಪನಿಯ ತನಿಷ್ಕ್‌, ಕಲ್ಯಾಣ್‌ ಜ್ಯುವೆಲ್ಲರ್ಸ್‌, ಸೆಂಕೊ ಗೋಲ್ಡ್‌ ಅಂಡ್‌ ಡೈಮಂಡ್ಸ್‌ ಮುಂತಾದ ಕಂಪನಿಗಳು ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿವೆ ಎನ್ನಲಾಗಿದೆ.

ಇನ್ನು ತನಿಷ್ಕ್‌ ಮೊದಲ ಬಾರಿಗೆ 9 ಕ್ಯಾರಟ್‌ ಚಿನ್ನದ ಆಭರಣಗಳನ್ನು ಪರಿಚಯಿಸಿದ್ದು, 22 ಕ್ಯಾರಟ್‌ ಚಿನ್ನದ ಪರಂಪರೆಯಲ್ಲೇ ದೊಡ್ಡ ಬದಲಾವಣೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇದರ ಫಲವಾಗಿ ಈ ಪ್ರಮುಖ ಬ್ರಾಂಡೆಡ್‌ ಕಂಪನಿಗಳು ಮೂರನೇ ತ್ರೈಮಾಸಿಕದಲ್ಲಿ ಶೇ 40ರಿಂದ 50 ಶೇಕಡಾ ಮಾರಾಟ ವೃದ್ಧಿ ದಾಖಲಿಸಿರುವುದು ವರದಿಯಾಗಿದೆ. ಚಿನ್ನದ ದರದ ಅಸ್ಥಿರತೆ ಸಣ್ಣ ಜ್ಯುವೆಲ್ಲರ್‌ಗಳಿಗೆ ಸಂಕಷ್ಟ ತಂದಿದ್ದರೆ, ಸಂಘಟಿತ ಮತ್ತು ಬ್ರಾಂಡೆಡ್‌ ವಲಯಕ್ಕೆ ಹೊಸ ಅವಕಾಶಗಳನ್ನು ತೆರೆದಿದೆ. ಮುಂದಿನ ದಿನಗಳಲ್ಲಿ ಈ ಅಂತರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುವುದು ತಜ್ಞರ ಅಭಿಪ್ರಾಯ.

Credit: Oneindia

Story first published: Saturday, January 24, 2026, 8:03 [IST]
X
Desktop Bottom Promotion