Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಶ್ರೀ ಕ್ಷೇತ್ರ ಬಾಲಸುಬ್ರಹ್ಮಣ್ಯ ಮುಗ್ವಾ: ಇಲ್ಲಿಗೆ ಬಂದವರ ಇಷ್ಟಾರ್ಥಗಳು ನೆರವೇರದೆ ಇರಲ್ಲ
ಭಕ್ತರ ಇಷ್ಟಾರ್ಥಗಳನ್ನು ಈಡೆರಿಸುವುದಕ್ಕಾಗಿಯೇ ಬಂದು ನೆಲೆಸಿದ ಬಾಲಸುಬ್ರಹ್ಮಣ್ಯ
"ಉತ್ತರ ಕನ್ನಡದ ಮುಗ್ವಾದಲ್ಲಿರುವ ಬಾಲಸುಬ್ರಹ್ಮಣ್ಯ ಈಡೇರಿಸದ ಇಷ್ಟಾರ್ಥಗಳೇ ಇಲ್ಲ"
ನಮ್ಮ ರಾಜ್ಯದಲ್ಲಿ ಪ್ರಸಿದ್ಧಿಯನ್ನು ಪಡೆದಿರುವಂತಹ ಅದೆಷ್ಟೋ ದೇವಾಲಯಗಳಿವೆ.

ಒಂದೊಂದು ದೇವಾಲಯಗಳ ಬಗ್ಗೆ, ಅದರ ಇತಿಹಾಸದ ಬಗ್ಗೆ ಕೆದಕುತ್ತ ಹೋದರೆ ಸಾಕಷ್ಟು ವಿಷಯಗಳು ತಿಳಿದು ಬರುತ್ತದೆ. ಸಾಮಾನ್ಯವಾಗಿ ಸರ್ಪದೋಷ ಅಥವಾ ನಾಗದೋಷ ಪರಿಹಾರಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಹೋಗುವುದು ವಾಡಿಕೆ. ಆದರೆ ಇದಕ್ಕಿಂತ ಪುರಾತನವಾದ ಹಾಗೆ ಈ ದೇವಾಲಯದಷ್ಟೇ ಪ್ರಭಾವಶಾಲಿಯಾಗಿರುವ ಇನ್ನೊಂದು ದೇವಾಲಯವಿದೆ. ಅದು ಎಲ್ಲಿದೆ ಗೊತ್ತಾ?
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದಲ್ಲಿ ಬಾಲ ಸುಬ್ರಮಣ್ಯ ದೇವಾಲಯವನ್ನು ಕಾಣಬಹುದು. ಈ ದೇವಾಲಯದ ಬಗ್ಗೆ ಪುರಾಣಗಳಲ್ಲಿಯೂ ಕೂಡ ಹೇಳಲಾಗಿದೆ ಅಷ್ಟು ಪುರಾತನವಾದ ದೇವಾಲಯ ಇದು.
ಬಾಲಸುಬ್ರಮಣ್ಯ ದೇವಾಲಯದ ಹಿನ್ನೆಲೆ;
ಉತ್ತರ ಕನ್ನಡದಲ್ಲಿ ಇರುವ ಈ ದೇವಾಲಯ ಸ್ವತಃ ನಾರದ ಮುನಿಗಳಿಂದ ನಿರ್ಮಾಣವಾದ ದೇವಾಲಯ. ಅಂದರೆ ಇಲ್ಲಿ ಬಾಲಸುಬ್ರಹ್ಮಣ್ಯನನ್ನ ಪ್ರತಿಷ್ಠಾಪನೆ ಮಾಡಿಸಿದ್ದೆ ನಾರದ ಮುನಿಗಳು ಎಂದು ಹೇಳಲಾಗುತ್ತದೆ. ಇದರ ಹಿನ್ನೆಲೆಯನ್ನು ನೋಡುವುದಾದರೆ, ಸ್ಕಂದ ಪುರಾಣದ ಸಹ್ಯಾಖಂಡದಲ್ಲಿ ಈ ದೇವಾಲಯದ ಬಗ್ಗೆ ಉಲ್ಲೇಖವಿದೆ. ಪ್ರಾಚೀನ ಕಾಲದಲ್ಲಿ ಋಷಿಮುನಿಗಳ ಧ್ಯಾನ ತಪಸ್ಸು ಮಾಡುವ ಕೇಂದ್ರವಾಗಿತ್ತಂತೆ ಈ ಸ್ಥಳ. ಈ ಕ್ಷೇತ್ರದಲ್ಲಿ ಬಾಲಸುಬ್ರಹ್ಮಣ್ಯನ ಜೊತೆಗೆ, ಗೋಪಾಲಕೃಷ್ಣ, ಶ್ವೇತಾಂಬಿಕಾ ದೇವತೆಗಳು ಕೂಡ ನೆಲೆಸಿದ್ದಾರೆ. ಲೋಕ ಸಂಚಾರಿಯಾದದಂತಹ ನಾರದಮುನಿಗಳು ಗೋಕರ್ಣಕ್ಕೆ ಆಗಮಿಸುತ್ತಾರೆ. ಅಲ್ಲಿ ನೆಲೆಸಿರುವ ಮಹಾಬಲೇಶ್ವರನ ದರ್ಶನ ಪಡೆಯುತ್ತಾರೆ. ಬಳಿಕ ವಿಶೇಷ ಶಕ್ತಿಯ ಪ್ರಾಪ್ತಿಗಾಗಿ ದಕ್ಷಿಣಾಭಿಮುಖವಾಗಿ ಸಂಚರಿಸುತ್ತಾರೆ. ಈ ಸಮಯದಲ್ಲಿ ಶರಾವತಿ ನದಿಯ ಉಪನದಿ ಪಂಚಮುಖಿಯ ದಂಡಿಯಲ್ಲಿ ಶ್ರೀ ಗೋಪಾಲಕೃಷ್ಣ ಸನ್ನಿಧಾನದಲ್ಲಿ ದರ್ಶನ ಪಡೆದು ಧನ್ಯರಾಗುತ್ತಾರೆ. ಅಲ್ಲಿಂದ ನಾರದಮುನಿಗಳು ಮುಂದೆ ಸಾಗುವಾಗ ಗೋಪಾಲಕೃಷ್ಣನ ಪ್ರತಿಷ್ಠಾಪನೆ ಮಾಡಬೇಕೆಂದು ಅಶರೀರವಾಣಿ ಕೇಳಿಸುತ್ತದೆ. ಅನತಿ ದೂರದಲ್ಲಿ ಏಕಮುಖ ಹಾಗೂ ದ್ವಿಬಾಹು ಇರುವ ಸುಬ್ರಹ್ಮಣ್ಯ ದೇವರ ದರ್ಶನವಾಗುತ್ತದೆ ನಂತರ ಸ್ಥಳೀಯ ಪುರೋಹಿತರ ಸಹಾಯ ಪಡೆದು ನಾರದ ಮನೆಗಳು ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡುತ್ತಾರೆ. 9 ದಿನಗಳ ಪಂಚರಾತ್ರ ವಿಧಿ ವಿಧಾನದ ಮೂಲಕ ಸುಬ್ರಹ್ಮಣ್ಯ ಸ್ವಾಮಿಯನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅಲ್ಲಿಂದ ಬಾಲಸುಬ್ರಹ್ಮಣ್ಯ ಸ್ವಾಮಿ ಎಂದು ಹೆಸರಾಗಿರುವ ಈ ಸ್ಥಳ ಲಕ್ಷಾಂತರ ಭಕ್ತಾದಿಗಳ ಇಷ್ಟಾರ್ಥಗಳನ್ನು ಪೂರೈಸುವ ಸ್ಥಳ ಎನಿಸಿಕೊಳ್ಳುತ್ತದೆ.
ಸುಬ್ರಹ್ಮಣ್ಯ ಮುಗ್ವಾ ದೇವಸ್ಥಾನದ ಮಹತ್ವ:
ದಕ್ಷಿಣ ಕನ್ನಡದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ನಾಗರ ದೋಷ ಪರಿಹಾರಕ್ಕೆ ಎಷ್ಟು ಪ್ರಸಿದ್ಧವೋ ಉತ್ತರ ಕನ್ನಡದ ಸುಬ್ರಮಣ್ಯ ದೇವಸ್ಥಾನವು ಕೂಡ ಇದೇ ವಿಷಯಕ್ಕೆ ಹೆಚ್ಚು ಪ್ರಸಿದ್ಧವಾಗಿದೆ. ಚರ್ಮರೋಗ, ನಾಗದೋಷ, ಸರ್ಪದೋಷ, ಮಕ್ಕಳಾಗದೆ ಇರುವುದು, ವಿದ್ಯಾಭ್ಯಾಸ, ಉದ್ಯೋಗ, ಮೊದಲಾದ ವಿಷಯಗಳಿಗೆ ಪರಿಹಾರವನ್ನು ಬೇಡಿಕೊಂಡು ಭಕ್ತಾದಿಗಳು ಈ ಸ್ಥಳಕ್ಕೆ ಬರುತ್ತಾರೆ. ಈ ಸ್ಥಳದಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಿ ಧನ್ಯರಾಗುತ್ತಾರೆ. ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದಿರುವ ಎಲ್ಲಾ ಭಕ್ತಾದಿಗಳ ಇಷ್ಟಾರ್ಥಗಳನ್ನು ಇಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ದೇವರು ಈಡೇರಿಸುತ್ತಾನೆ.
ಹರಕೆ ಪೂಜೆ:
ಸುಬ್ರಹ್ಮಣ್ಯ ಸ್ವಾಮಿಗೆ ಚಿನ್ನ, ಬೆಳ್ಳಿ ತಾಮ್ರದ ತೊಟ್ಟಿಲು, ಬಾಳೆಗೊನೆ, ನಾಗರಕಲ್ಲು ಮೊದಲಾದವುಗಳನ್ನು ಹರಕೆಯ ರೂಪದಲ್ಲಿ ಸಲ್ಲಿಸಲಾಗುತ್ತದೆ. ಯಾವುದೇ ವ್ಯಕ್ತಿ ತನಗೆ ಸಮಸ್ಯೆ ಉಂಟಾದಾಗ ತಾನು ಇರುವ ಸ್ಥಳದಿಂದಲೇ ಈ ಸುಬ್ರಹ್ಮಣ್ಯ ಸ್ವಾಮಿಗೆ ಹರಕೆ ಕಟ್ಟಿ, ಆ ಕೆಲಸ ಈಡೇರಿದ ನಂತರ ಇಲ್ಲಿಗೆ ಬಂದು ಹರಕೆ ತೀರಿಸಬಹುದು.
ನಾಗಬನ;
ಈ ಕ್ಷೇತ್ರದ ಮತ್ತೊಂದು ಆಕರ್ಷಣೆ ಅಂದರೆ ನಾಗಬನ. ನಾಗದೋಷ ಇರುವವರು ಇಲ್ಲಿ ನಾಗರ ಕಲ್ಲನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಸುಬ್ರಹ್ಮಣ್ಯ ದೇವಾಲಯದಲ್ಲಿ ಸುಮಾರು 4000ಕ್ಕೂ ಹೆಚ್ಚು ನಾಗರಕಲ್ಲುಗಳನ್ನು ನಾಗಬನದಲ್ಲಿ ನೋಡಬಹುದು. ನಾಗದೋಷಕ್ಕೆ ಸಂಬಂಧಪಟ್ಟ ಎಲ್ಲಾ ಪೂಜಾ ಕ್ರಮಗಳನ್ನು ಇಲ್ಲಿ ನೆರವೇರಿಸಲಾಗುತ್ತದೆ.
ಚಂಪಾಷಷ್ಠಿ:ಇನ್ನು ಮುಗ್ವಾ ಸುಬ್ರಹ್ಮಣ್ಯ ದೇವಾಲಯದಲ್ಲಿ ಪ್ರತಿವರ್ಷ ಚಂಪಾಷಷ್ಠಿ ದಿನ ದೊಡ್ಡ ಜಾತ್ರೆಯೇ ನಡೆಯುತ್ತದೆ ಲಕ್ಷಾಂತರ ಜನ ಭಕ್ತಾದಿಗಳು ಈ ಸಮಯದಲ್ಲಿ ದೇವಸ್ಥಾನಕ್ಕೆ ಆಗಮಿಸುತ್ತಾರೆ. ದೇವರ ಪಲ್ಲಕ್ಕಿ ಉತ್ಸವ, ಬೆಳಗ್ಗೆ ಸಂಜೆ ಹಾಗೂ ರಾತ್ರಿ ಅದ್ದೂರಿಯಾಗಿ ನಡೆಯುವ ಪ್ರಾಕಾರ ಬಲಿ ಇವೆಲ್ಲವನ್ನು ನೋಡಲು ಜನಸಾಗರವೇ ಸೇರುತ್ತದೆ. ಈ ದಿನ ಸುಬ್ರಮಣ್ಯ ದೇವಾಲಯದಲ್ಲಿ ನಡೆಯುವ ವಿಶೇಷ ಅನ್ನಸಂತರ್ಪಣೆ ಸಂದರ್ಭದಲ್ಲಿ ಲಕ್ಷಾಂತರ ಭಕ್ತಾದಿಗಳು ಪ್ರಸಾದವನ್ನು ಸ್ವೀಕರಿಸಿ ಧನ್ಯರಾಗುತ್ತಾರೆ.
ನಾಗರ ಪಂಚಮಿ:
ಈ ದೇವಾಲಯದಲ್ಲಿ ನಾಗರ ಪಂಚಮಿ ಹಬ್ಬವನ್ನು ಬಹಳ ಭಕ್ತಿ ಭಾವದಿಂದ ಆಚರಿಸಲಾಗುತ್ತದೆ. ಮೂರು ಹೊತ್ತು ಸುಬ್ರಹ್ಮಣ್ಯ ದೇವರಿಗೆ ಪೂಜೆಯನ್ನು ಸಲ್ಲಿಸಿ ನಾಗಬನದಲ್ಲಿ ಇರುವ ನಾಗರಕಲ್ಲಿಗೆ ಹಾಲೆರೆಯುವುದರ ಮೂಲಕ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳ ಸಿದ್ದಿಗಾಗಿ ಪ್ರಾರ್ಥಿಸುತ್ತಾರೆ. ತೆಂಗಿನಕಾಯಿ, ಹೂವು, ವೀಳ್ಯದೆಲೆ, ಅಡಿಕೆ- ಸಿಂಗಾರ, ಬಾಳೆಗೊನೆ ಮೊದಲಾದವುಗಳನ್ನು ಈ ಸಂದರ್ಭದಲ್ಲಿ ಹರಕೆಯಾಗಿ ದೇವರಿಗೆ ಸಲ್ಲಿಸಲಾಗುತ್ತದೆ. ಇನ್ನು ನಾಗಬನದಲ್ಲಿ ಯಾರು ನಾಗರಕಲ್ಲನ್ನು ಪ್ರತಿಷ್ಠಾಪನೆ ಮಾಡಿರುತ್ತಾರೋ ಅವರು ನಾಗರ ಪಂಚಮಿಯ ದಿನ ಈ ಸ್ಥಳಕ್ಕೆ ಬಂದು ವಿಶೇಷವಾದ ಪೂಜೆ ಸಲ್ಲಿಸುತ್ತಾರೆ.
ಪುಷ್ಕರಣಿ:
ಮೊದಲು ಪುಷ್ಕರಣಿಯಲ್ಲಿ ಸ್ನಾನ ಮಾಡಿ ನಂತರ ಸುಬ್ರಹ್ಮಣ್ಯ ದೇವರಿಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ಈ ಪುಷ್ಕರಣೆಯಲ್ಲಿ ಸ್ನಾನ ಮಾಡಿದರೆ ಇರುವ ಎಲ್ಲಾ ಚರ್ಮದ ವ್ಯಾಧಿಯು ಕೂಡ ನಿವಾರಣೆಯಾಗುತ್ತದೆ ಎನ್ನುವ ಪ್ರತಿತಿ ಇದೆ.
ಉತ್ತರ ಕನ್ನಡದಲ್ಲಿರುವ ಮುಗ್ವಾ ಸುಬ್ರಮಣ್ಯ ದೇವಾಲಯ ಸಾಕಷ್ಟು ಪ್ರಖ್ಯಾತಿಯನ್ನು ಗಳಿಸಿದೆ. ಇಲ್ಲಿಗೆ ಹರಕೆ ಕಟ್ಟಿಕೊಂಡರೆ ಜೀವನದಲ್ಲಿ ಇರುವ ಯಾವುದೇ ಸಮಸ್ಯೆಯನ್ನು ಕೂಡ ಆ ಸುಬ್ರಮಣ್ಯ ದೇವರು ನಿವಾರಿಸುತ್ತಾನೆ ಎನ್ನುವ ನಂಬಿಕೆ ಇದೆ. ವರ್ಷದಿಂದ ವರ್ಷಕ್ಕೆ ಇಲ್ಲಿ ಬರುವ ಭಕ್ತಾದಿಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಇನ್ನು ಈ ದೇವಾಲಯಕ್ಕೆ ಪ್ರಚಾರ ಸಿಕ್ಕಿದ್ದು ಯಾವುದೇ ಜಾಹೀರಾತುವಿನಿಂದ ಅಲ್ಲ. ಭಕ್ತರು ಬಾಯಿಂದ ಬಾಯಿಗೆ ಈ ದೇವಸ್ಥಾನದ ಪ್ರತಿಷ್ಠೆಯನ್ನು ಪ್ರಸಿದ್ಧಿಗೊಳಿಸಿದ್ದಾರೆ. ಹಾಗಾಗಿ ಇಲ್ಲಿ ಹರಕೆ ಕಟ್ಟಿ, ತಮ್ಮ ಇಷ್ಟಾರ್ಥಗಳು ಈಡೇರಿದ ನಂತರ ತಪ್ಪದೇ ಭಕ್ತಾದಿಗಳು ಈ ಸ್ಥಳಕ್ಕೆ ಆಗಮಿಸಿ ಬಾಲಸುಬ್ರಹ್ಮಣ್ಯನ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ನಿಮ್ಮ ಜೀವನದಲ್ಲಿಯೂ ಯಾವುದಾದರೂ ಸಮಸ್ಯೆ ಇದ್ದರೆ ಖಂಡಿತವಾಗಿಯೂ ಬಾಲಸುಬ್ರಹ್ಮಣ್ಯನ ಮೊರೆ ಹೋಗಿ. ಈತ ಈಡೇರಿಸದೆ ಇರುವ ಇಷ್ಟಾರ್ಥಗಳೇ ಇಲ್ಲ.



Click it and Unblock the Notifications


