For Quick Alerts
ALLOW NOTIFICATIONS  
For Daily Alerts

ಹಕ್ಕಿಜ್ವರದಿಂದ ಬರದಂತೆ ತಡೆಗಟ್ಟಲು ಇಲ್ಲಿದೆ ಟಿಪ್ಸ್‌

|

ಇಂದು ಭಾರತಕ್ಕೆ ಎದುರಾಗಿರುವ ಸಾಂಕ್ರಾಮಿಕ ರೋಗದ ಆಕ್ರಮಣ ಇತಿಹಾಸದಲ್ಲಿಯೇ ಆಗಿರಲಿಕ್ಕಿಲ್ಲ. ಒಂದು ಕೊರೋನಾ ವೈರಸ್ ನ ಜಾಗತಿಕ ಸಾಂಕ್ರಾಮಿಕ ಹರಡುವಿಕೆ ಮತ್ತು ಇದರ ಜೊತೆಗೇ ಹಕ್ಕಿ ಜ್ವರ ಅಥವಾ H5N1 ಸೋಂಕು ಹರಡುವ ಭೀತಿ.

ಅಲ್ಲಲ್ಲಿ ಹಂದಿ ಜ್ವರದ ವೈರಸ್ ಹರಡುತ್ತಿರುವ ಸಮಾಚಾರಗಳೂ ಬರುತ್ತಿವೆಯಾದರೂ ಮೊದಲ ಎರಡರಷ್ಟು ಹೆಚ್ಚಾಗಿ ದೇಶವನ್ನು ವ್ಯಾಪಿಸಿಲ್ಲ. ಹಕ್ಕಿಜ್ವರ ಹೆಸರೇ ಸೂಚಿಸುವಂತೆ ಹಾರುವ ಹಕ್ಕಿಗಳ ಮೂಲಕ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶದಕ್ಕೆ ಹರಡುತ್ತದೆ ಹಾಗೂ ಸೋಂಕು ಪೀಡಿತ ಹಕ್ಕಿಗಳ ಜೊಲ್ಲು ಮತ್ತು ಉಚ್ಛಿಷ್ಟಗಳ ಸಂಪರ್ಕಕ್ಕೆ ಬಂದ ಮನುಷ್ಯರಿಗೂ ಎದುರಾಗುತ್ತದೆ.

Tips On How To Prevent Bird Flu In Humans

ನೀರಿನ ಹಕ್ಕಿಗಳು ಹೆಚ್ಚು ದೂರಕ್ಕೆ ಹಾರಬಲ್ಲದ್ದಾಗಿದ್ದು ಇವುಗಳಿಂದಲೇ ಸೋಂಕು ಪ್ರದೇಶದಿಂದ ಪ್ರದೇಶಕ್ಕೆ ಹರಡುತ್ತದೆ. ಈ ಹಕ್ಕಿಗಳು ಇತರ ಹಕ್ಕಿಗಳು ಇರುವ ಅಥವಾ ಕೋಳಿ ಸಾಕಣಾ ಕೇಂದ್ರಗಳ ಬಳಿ ಬಂದು ತಮ್ಮ ಜೊಲ್ಲು ಮತ್ತು ಉಚ್ಛಿಷ್ಟಗಳನ್ನು ವಿಸರ್ಜಿಸಿದಾಗ ಈ ಸೋಂಕು ಇರುವ ನೀರನ್ನು ಕುಡಿಯುವ ಹಕ್ಕಿಗಳಿಗೂ ಹರಡುತ್ತದೆ.

ಈ ಕೋಳಿಗಳನ್ನು ನೋಡಿಕೊಳ್ಳುವವರಿಗೆ ಸುಲಭವಾಗಿ ಹರಡುತ್ತದೆ ಹಾಗೂ ಈ ವ್ಯಕ್ತಿಗಳಿಂದ ಇತರರಿಗೆ ಹೀಗೆ ಹಕ್ಕಿ ಜ್ವರ ವೇಗವಾಗಿ ಹರಡುತ್ತದೆ. ಸೋಂಕುಪೀಡಿದ ಹಕ್ಕಿಗಳು ಕೆಲವೇ ದಿನಗಳಲ್ಲಿ ಸಾಯುತ್ತವೆ ಹಾಗೂ ಸತ್ತ ಬಳಿಕವೂ ಇದರ ದೇಹದಿಂದ ಒಸರುವ ದ್ರವ ಇನ್ನಷ್ಟು ಸೋಂಕು ಹರಡುವಷ್ಟು ಪ್ರಬಲವಾಗಿರುತ್ತದೆ.

ಹಾಗಾಗಿ ಸೋಂಕು ಕಂಡು ಬಂದ ತಕ್ಷಣವೇ ಈ ಪ್ರದೇಶದಲ್ಲಿರುವ ಅಷ್ಟೂ ಕೋಳಿಗಳನ್ನು ಸುಟ್ಟು ಹಾಕುವುದು ಅನಿವಾರ್ಯ! ಕೊಂಚ ಕ್ರೂರ ಎನಿಸಿದರೂ ಸರಿ, ಸೋಂಕು ಹರಡುವಿಕೆಯನ್ನು ತಡೆಯಲು ಇದನ್ನು ಮಾಡಲೇ ಬೇಕಾಗುತ್ತದೆ. ಕೋಳಿ, ಬಾತುಕೋಳಿ, ಟರ್ಕಿ ಮೊದಲಾದ ಸಾಕು ಪಕ್ಷಿಗಳಿಗೆ ಈ ಸೋಂಕು ಮಾರಕವಾಗಿದೆ.

ಹಕ್ಕಿಜ್ವರದ ಲಕ್ಷಣ

ಹಕ್ಕಿಜ್ವರದ ಲಕ್ಷಣ

ಹಕ್ಕಿಜ್ವರ ಮನುಷ್ಯರಿಗೆ ಎದುರಾದಾಗ ಕಾಣಬರುವ ಲಕ್ಷಣಗಳೆಂದರೆ ಜ್ವರ, ಸತತ ಕೆಮ್ಮು, ತಲೆನೋವು ಮತ್ತು ರೋಗ ಉಲ್ಬಣಗೊಂಡಾಗ ನ್ಯುಮೋನಿಯಾ, ಸೆಪ್ಸಿಸ್ ಮತ್ತು ಮೂಗು ಮತ್ತು ಗಂಟಲ ಭಾಗದ ಕಾಯಿಲೆಗಳು ಎದುರಾಗುತ್ತವೆ.

ಹಕ್ಕಿ ಜ್ವರದ ಸೋಂಕು ಹರಡಿದಾಕ್ಷಣ ಇದು ಕುಕ್ಕುಟ ಉದ್ಯಮಕ್ಕೆ ಭಾರೀ ದೊಡ್ಡ ನಷ್ಟ ಉಂಟು ಮಾಡುತ್ತದೆ. ಕೆಲವು ರಾಷ್ಟ್ರಗಳ ಆದಾಯವೇ ಈ ಉದ್ಯಮವನ್ನು ನೆಚ್ಚಿಕೊಂಡಿದ್ದು ಈ ನಷ್ಟ ರಾಷ್ಟ್ರೀಯ ಆದಾಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಹಕ್ಕಿ ಜ್ವರಕ್ಕೆ ಕಾರಣವಾಗುವ ಇನ್ಫ್ಲೂಯೆಂಜಾ ವೈರಸ್ ನಲ್ಲಿಯೂ ಹಲವು ವಿಧಗಳಿದ್ದು ಇವುಗಳಲ್ಲಿ ಈ ಮೂರು ಬಗೆಯ A(H5N1), A(H7N9) ಮತ್ತು A(H9N2) ವೈರಸ್ಸುಗಳು ವಿಶ್ವದಾದ್ಯಂತ ಗರಿಷ್ಟ ಸಾವುಗಳಿಗೆ ಕಾರಣವಾಗುತ್ತವೆ.

ಸಾವಿನ ಪ್ರಮಾಣವನ್ನು ಪರಿಗಣಿಸಿದರೆ ಕೊರೋನ್ನಾಕ್ಕಿಂತಲೂ ಹಕ್ಕಿ ಜ್ವರ ಹೆಚ್ಚು ಅಪಯಾಕಾರಿಯಾಗಿದೆ. ಕೊರೋನಾದಂತೆಯೇ ಇದು ವ್ಯಕ್ತಿಗಳ ನಡುವೆ ಕೆಮ್ಮು ಸೀನುವಿಕೆಯ ದ್ರವಗಳ ಸಿಡಿಯುವಿಕೆ, ಸೋಂಕು ಸ್ಪರ್ಶದ ಮೂಲಕ ಹರಡುತ್ತವೆ.

ಕೊರೋನಾ ದಿಂದ ಎರಡು ಶೇಖಡಾ ಸಾವು ಕಂಡುಬಂದಿದ್ದರೆ ಹಕ್ಕಿ ಜ್ವರ ಅರವತ್ತು ಶೇಖಡಾ ಸಾವಿಗೆ ಕಾರಣವಾಗುತ್ತದೆ ಎಂದಾಗ ಇದರ ಭೀಕರತೆ ಎಷ್ಟು ಇರಬಹುದು ಎಂಬುದನ್ನು ಗಮನಿಸಬಹುದು. ಹಾಗಾಗಿ ಸ್ವಚ್ಛತೆ, ಸೋಂಕು ಇಲ್ಲದಿರುವುದು ಹಾಗೂ ಹರಡುವಿಕೆಯನ್ನು ತಡೆಗಟ್ಟಲು ಸಹಕರಿಸುವುದು ಪ್ರತಿಯೊಬ್ಬರ ಕರ್ತ್ಯವ್ಯವಾಗಿದೆ. ಇದನ್ನು ಸಾಧ್ಯವಾಗಿಸಲು ಸಿಡಿಸಿ ವಿಭಾಗದ ತಜ್ಞರು ನೀಡಿರುವ ಹತ್ತು ಪ್ರಮುಖ ಸಲಹೆಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ:

1. ಕೋಳಿ ಫಾರಮ್ಮು ಅಥವಾ ಕೋಳಿಗಳನ್ನು ಕೂಡಿ ಹಾಕಿರುವ ಸ್ಥಳಗಳಿಗೆ ಭೇಟಿ ನೀಡದಿರಿ

1. ಕೋಳಿ ಫಾರಮ್ಮು ಅಥವಾ ಕೋಳಿಗಳನ್ನು ಕೂಡಿ ಹಾಕಿರುವ ಸ್ಥಳಗಳಿಗೆ ಭೇಟಿ ನೀಡದಿರಿ

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ವಿಭಾಗವಾದ ಸಿಡಿಸಿ (Centers for Disease Control and Prevention (CDC)) ತಜ್ಞರು ಯಾರೇ ಆದರೂ ಸರಿ, ಕೋಳಿ ಫಾರಮ್ಮು ಅಥವಾ ಕೋಳಿ ಸಾಕಣೆಯ ಅಥವಾ ಕೋಳಿಗಳನ್ನು ಸಂಗ್ರಹಿಸಿಟ್ಟಿರುವ ಯಾವುದೇ ಸ್ಥಳಕ್ಕೆ ಹೋಗಬಾರದು. ಏಕೆಂದರೆ ಈ ಸ್ಥಳಗಳಲ್ಲಿ ಕೋಳಿಗಳ ಉಚ್ಛಿಷ್ಟ ಧಾರಾಳವಾಗಿ ಇರುತ್ತವೆ.

ಕೋಳಿಯ ಉಚ್ಛಿಷ್ಟ ಒಣಗಿದ ಬಳಿಕ ಪುಡಿಯ ರೂಪದಲ್ಲಿ ಗಾಳಿಯಲ್ಲಿ ಹಾರಾಡುತ್ತಿರುತ್ತದೆ ಹಾಗೂ ನಿಧಾನವಾಗಿ ತೇಲುತ್ತಾ ಕೊಂಚ ದೂರದಲ್ಲಿ ಇಳಿಯುತ್ತದೆ. ಕೋಳಿ ಫಾರಮ್ ಮೊದಲಾದ ಸ್ಥಳಗಳ ಕೆಲವು ಕಿಲೋಮೀಟರ್ ದೂರದವರೆಗೂ ಮಣ್ಣಿನಲ್ಲಿ ಈ ಅಂಶವನ್ನು ನೋಡಬಹುದು. ಇದೇ ಕಾರಣಕ್ಕೆ ದೊಡ್ಡ ಫಾರಮ್ಮುಗಳನ್ನು ಜನವಸತಿ ಇರುವಲ್ಲಿಂದ ಎಷ್ಟೋ ದೂರ ಇರಿಸುತ್ತಾರೆ.

ಒಂದು ವೇಳೆ ಒಂದು ಕೋಳಿಗೂ ಸೋಂಕು ಎದುರಾದರೆ ಇದರ ಜೊಲ್ಲು ಉಚ್ಛಿಷ್ಟದಿಂದ ಶೀಘ್ರವೇ ಇತರ ಕೋಳಿ ಮತ್ತು ಸುತ್ತಲೂ ಇರುವ ವ್ಯಕ್ತಿಗಳಿಗೆ ಹರಡಬಹುದು. ಚರ್ಮದ ಮೂಲಕ ಈ ಸೋಂಕು ಹರಡುವುದಿಲ್ಲ. ಆದರೆ ತೇವ ಇರುವ ಭಾಗಗಳಾದ ಬಾಯಿ, ಮೂಗು, ಕಣ್ಣುಗಳ ಮೂಲಕ ಈ ವೈರಸ್ಸು ಸುಲಭವಾಗಿ ದೇಹವನ್ನು ಪ್ರವೇಶಿಸುತ್ತದೆ. ಕೋಳಿ ಸಾಕಣಾ ಕೇಂದ್ರಕ್ಕೆ ನೀವು ಭೇಟಿ ನೀಡುವಾಗ ನಿಮ್ಮ ದೇಹದಲ್ಲಿ ಇರುವ ಇತರ ಪರಾವಲಂಬಿ ಕ್ರಿಮಿಗಳನ್ನೂ ನೀವು ಆ ಸ್ಥಳಕ್ಕೆ ದಾಟಿಸುವ ಅಪಾಯವೂ ಇದೆ.

2. ಸಮತೋಲಿತ ಆಹಾರವನ್ನು ಸೇವಿಸಿ

2. ಸಮತೋಲಿತ ಆಹಾರವನ್ನು ಸೇವಿಸಿ

ನಮ್ಮ ದೆಹದ ರೋಗ ನಿರೋಧಕ ವ್ಯವಸ್ಥೆಯು ಸರಿಯಾದಗಿ ಕಾರ್ಯನಿರ್ವಹಿಸುವಲ್ಲಿ ನಮ್ಮ ಅಹಾರದ ಪೋಷಕಾಂಶಗಳು ಪ್ರಮುಖ ಪಾತ್ರವಹಿಸುತ್ತವೆ. ಅಗತ್ಯ ಪೋಷಕಾಂಶಗಳಾದ ಅಮೈನೊ ಆಮ್ಲ, ಫೋಲಿಕ್ ಆಮ್ಲ, ಬೀಟಾ ಕ್ಯಾರೋಟಿನ್, ಸೆಲೆನಿಯಮ್, ಸತು ಮತ್ತು ವಿಟಮಿನ್ ಎ, ಸಿ, ಬಿ 2 ಮತ್ತು ಬಿ 12 ರೋಗನಿರೋಧಕ ಕಾರ್ಯವನ್ನು ಮರುಸ್ಥಾಪಿಸಲು ಮತ್ತು ಸೋಂಕುಗಳಿಗೆ ಪ್ರತಿರೋಧವನ್ನು ಒದಗಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಎಲ್ಲಾ ರೋಗಗಳು ಮತ್ತು ಸೋಂಕುಗಳನ್ನು ತಡೆಗಟ್ಟಲು ಸಮತೋಲಿತ ಆಹಾರವನ್ನು ಸೇವಿಸುವುದು ಬಹಳ ಮುಖ್ಯ.

3. ಹಸಿ ಕೋಳಿ ಉತ್ಪನ್ನಗಳನ್ನು ಸೇವಿಸದಿರಿ

3. ಹಸಿ ಕೋಳಿ ಉತ್ಪನ್ನಗಳನ್ನು ಸೇವಿಸದಿರಿ

ಕೋಳಿ ಮಾಂಸದ ಕಚ್ಚಾ ಉತ್ಪನ್ನಗಳಲ್ಲಿ ಅನೇಕ ಹಾನಿಕಾರಕ ವೈರಸ್‌ಗಳು, ಬ್ಯಾಕ್ಟೀರಿಯಾಗಳು, ಪರಾವಲಂಬಿಗಳು ಮತ್ತು ಪರಕೀಯ ವಸ್ತುಗಳು ಇರುತ್ತವೆ. ನಾವು ಮಾಂಸ ಉತ್ಪನ್ನಗಳನ್ನು ಸರಿಯಾಗಿ ಬೇಯಿಸಿದಾಗ, ಅವುಗಳಲ್ಲಿನ ಬಹುತೇಕ ಎಲ್ಲಾ ಸೂಕ್ಷ್ಮಾಣುಜೀವಿಗಳು ಹೆಚ್ಚಿನ ಶಾಖದ ಪ್ರಭಾವದಿಂದ ನಾಶವಾಗುತ್ತವೆ, ಈ ಮೂಲಕ ಆಹಾರ ಸೇವನೆಗೆ ಸುರಕ್ಷಿತವಾಗಿಸಬಹುದು. ಇದು ಎಲ್ಲಾ ರೋಗಕಾರಕಗಳು ನಮ್ಮ ದೇಹಕ್ಕೆ ಪ್ರವೇಶಿಸುವುದನ್ನು ತಡೆಯುತ್ತದೆ ಮತ್ತು ನಮಗೆ ಹಾನಿ ಅಥವಾ ಕಾಯಿಲೆಗಳನ್ನು ಉಂಟುಮಾಡುವುದರಿಂದ ರಕ್ಷಣೆ ಒದಗಿಸುತ್ತದೆ.

4. ಹಸಿ ಮೊಟ್ಟೆಗಳನ್ನು ತಿನ್ನದಿರಿ

4. ಹಸಿ ಮೊಟ್ಟೆಗಳನ್ನು ತಿನ್ನದಿರಿ

ಕೋಳಿ ಮತ್ತು ಇತರ ಪಕ್ಷಿಗಳ ಮೊಟ್ಟೆಗಳ ಸೇವನೆಯ ವಿಷಯದಲ್ಲಿ ಎಚ್ಚರಿಕೆ ವಹಿಸದಿದ್ದರೆ ನಮಗೂ ಸೋಂಕು ತಗುಲಿಸಬಹುದು, ಏಕೆಂದರೆ ಕೆಲವೊಮ್ಮೆ, ಪಕ್ಷಿಗಳ ಉಚ್ಛಿಷ್ಠ ಮೊಟ್ಟೆಗಳ ಕವಚದ ಮೇಲೆ ಆವರಿಸಿರುತ್ತದೆ. ಈ ಕೋಳಿಗೆ ಸೋಂಕು ಇದ್ದರೆ ಈ ಕವಚ ಈಗ ಸೋಂಕು ಪೀಡಿತವಾಗುತ್ತದೆ. ಮೊಟ್ಟೆಗಳನ್ನು ಸಾಮಾನ್ಯವಾಗಿ ಒಡೆಯುವ ಮುನ್ನ ಯಾರೂ ತೊಳೆಯಲು ಹೋಗುವುದಿಲ್ಲ.

ಆದರೆ ಒಡೆಯುವ ಸಮಯದಲ್ಲಿ ಒಂದು ಚಿಕ್ಕ ಕಣವೂ ಮೊಟ್ಟೆಯ ಒಳಗಿನ ಭಾಗಕ್ಕೆ ಬಿದ್ದರೆ ಈ ಮೊಟ್ಟೆಯನ್ನು ಹಸಿಯಾಗಿಯೇ ಸೇವಿಸಿದಾಗ ಸೋಂಕು ಹರಡುವುದು ಖಚಿತ. ಹಾಗಾಗಿ ಹಸಿಮೊಟ್ಟೆಯನ್ನು ತಿನ್ನಲೇ ಬಾರದು. ಆಮ್ಲೆಟ್ ಅಥವಾ ಇತರ ರೂಪದಲ್ಲಿ ಮೊಟ್ಟೆಯನ್ನು ಬೇಯಿಸಿ ತಿನ್ನಬೇಕಾದರೂ ಮೊಟ್ಟೆಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ ದಪ್ಪ ಟವೆಲ್ಲಿನಿಂದ ಒರೆಸಿ ಸ್ವಚ್ಛಗೊಳಿಸಿದ ಬಳಿಕವೇ ಒಡೆದು ಬಳಸಬೇಕು ಎಂದು ತಜ್ಞರು ಎಚ್ಚರಿಸುತ್ತಾರೆ.

5. ಹಸಿ ಮಾಂಸವನ್ನು ಮುಟ್ಟಿದ ನಂತರ ಕೈ ತೊಳೆಯಿರಿ

5. ಹಸಿ ಮಾಂಸವನ್ನು ಮುಟ್ಟಿದ ನಂತರ ಕೈ ತೊಳೆಯಿರಿ

ಮೇಲೆ ತಿಳಿಸಿದಂತೆ, ಕಚ್ಚಾ ಮಾಂಸದಲ್ಲಿಯೂ ಬ್ಯಾಕ್ಟೀರಿಯಾ, ವೈರಸ್ ಮತ್ತು ರೋಗಕಾರಕಗನ್ನು ಸಮೃದ್ಧ ಪ್ರಮಾಣದಲ್ಲಿ ಹೊಂದಿರುತ್ತದೆ. ಹಸಿ ಮಾಂಸದ ಉತ್ಪನ್ನಗಳನ್ನು ಸ್ಪರ್ಶಿಸಿ ನಂತರ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಸ್ಪರ್ಶಿಸುವುದರಿಂದ ಈ ಸೂಕ್ಷ್ಮಾಣುಜೀವಿಗಳು ದೇಹಕ್ಕೆ ಪ್ರವೇಶಿಸಿ ನಮಗೆ ರೋಗಗಳನ್ನು ಉಂಟುಮಾಡಬಹುದು. ಆದ್ದರಿಂದ, ಹಸಿ ಮಾಂಸವನ್ನು ಸ್ಪರ್ಶಿಸಿದ ನಂತರ ಸ್ಯಾನಿಟೈಜರ್ ಬಳಸುವುದು ಅಥವಾ ಸೋಪುಪ್ ಮತ್ತು ನೀರಿನಿಂದ ಸ್ವಚ್ಛವಾಗಿ ಕೈ ತೊಳೆಯುವುದು ಅಗತ್ಯ ಹಾಗೂ ಇದೊಂದು ಅವಶ್ಯಕವಾದ ನೈರ್ಮಲ್ಯ ಅಭ್ಯಾಸವೂ ಆಗಿದೆ.

6. ನಿಮ್ಮ ಆರೋಗ್ಯವನ್ನು ಆಗಾಗ ಪರೀಕ್ಷಿಸುತ್ತಿರಿ

6. ನಿಮ್ಮ ಆರೋಗ್ಯವನ್ನು ಆಗಾಗ ಪರೀಕ್ಷಿಸುತ್ತಿರಿ

ಸತ್ತ ಕೋಳಿಗಳನ್ನು ನಿವಾರಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರೆ ಅಥವಾ ಹಸಿ ಕೋಳಿ ಉತ್ಪನ್ನಗಳೊಂದಿಗೆ ವ್ಯವಹರಿಸುತ್ತಿದ್ದರೆ ಈ ವ್ಯಕ್ತಿಗಳು ಕಟ್ಟುನಿಟ್ಟಾಗಿ ಕೈ ತೊಳೆದುಕೊಳ್ಳುವುದು ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸೂಚಿಸಲಾಗುತ್ತದೆ. ಆದರೂ, ಒಂದು ವೇಳೆ ನಿಮಗೆ ಕೆಮ್ಮು, ಅಧಿಕ ಜ್ವರ ಅಥವಾ ತಲೆನೋವಿನಂತಹ ಯಾವುದೇ ರೀತಿಯ ಜ್ವರ ರೋಗಲಕ್ಷಣಗಳು ಕಂಡುಬಂದರೆ, ನೀವಾಗಿ ಈ ರೋಗಲಕ್ಷಣಗನ್ನು ನಿರ್ಣಯಿಸಿ ಮದ್ದು ತೆಗೆದುಕೊಳ್ಳದೇ ವೈದ್ಯಕೀಯ ತಜ್ಞರನ್ನು ಭೇಟಿ ಮಾಡುವಂತೆ ತಜ್ಞರು ಸಲಹೆ ಮಾಡುತ್ತಾರೆ.

7. ಮದ್ಯಪಾನ ಮಾಡದಿರಿ

7. ಮದ್ಯಪಾನ ಮಾಡದಿರಿ

ನಮ್ಮ ರೋಗನಿರೋಧಕ ವ್ಯವಸ್ಥೆಯು ಕೇವಲ ನಿಮ್ಮ ಮಾತ್ರವಲ್ಲ ಒಟ್ಟಾರೆ ಸಮಾಜದ ಆರೋಗ್ಯವನ್ನು ಕಾಪಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಮದ್ಯಪಾನ ಮತ್ತು ಧೂಮಪಾನ ನಮ್ಮ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ ಮತ್ತು ಅದನ್ನು ದುರ್ಬಲಗೊಳಿಸುತ್ತದೆ. ಅವು ನಮ್ಮ ದೇಹಕ್ಕೆ ಪ್ರವೇಶಿಸುವ ರೋಗಕಾರಕಗಳ ವಿರುದ್ದ ಇರಬೇಕಾಗಿರುವ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ಇದರ ಪರಿಣಾಮವಾಗಿ ಸೋಂಕುಗಳು ಮತ್ತು ಅನೇಕ ರೋಗಗಳು ಕಂಡುಬರುತ್ತವೆ.

8. ಅನಾರೋಗ್ಯ ಇರುವ ಜನರೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಿ

8. ಅನಾರೋಗ್ಯ ಇರುವ ಜನರೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಿ

ಹಕ್ಕಿಜ್ವರ (ಬರ್ಡ್ ಫ್ಲೂ ಅಥವಾ ಏವಿಯನ್ ಇನ್ಫ್ಲುಯೆಂಜಾ)ವನ್ನು ಸಾಂಕ್ರಾಮಿಕ ಸ್ವಭಾವದ ಕಾರಣದಿಂದ 1918 ರಲ್ಲಿ ವಿಶ್ವ ಮಟ್ಟದ ಸಾಂಕ್ರಾಮಿಕ ರೋಗ ಎಂದು ಘೋಷಿಸಲಾಗಿದೆ. ಈ ಸೋಂಕಿಗೆ ಒಳಗಾದ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನುವಾಗ, ಅವರ ದೇಹದಿಂದ ಹೊರಬರುವ ಸೋಂಕು ಪೀಡಿತ ಹನಿಗಳು ಅವರೊಂದಿಗೆ ನಿಕಟ ಸಂಪರ್ಕದಲ್ಲಿರುವ ಇತರ ವ್ಯಕ್ತಿಗಳಿಗೂ ಹರಡುತ್ತವೆ. ಆದ್ದರಿಂದ, ಸೋಂಕಿನ ಅವಧಿಯಲ್ಲಿ ಅನಾರೋಗ್ಯದ ಜನರೊಂದಿಗೆ ಅಥವಾ ಯಾವುದೇ ಸಾಮಾಜಿಕ ಕೂಟಗಳೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸುವುದೇ ಈ ಸೋಂಕು ಹರಡುವಿಕೆಯನ್ನು ತಪ್ಪಿಸಲು ಇರುವ ಸೂಕ್ತ ಮಾರ್ಗವಾಗಿದೆ.್

9. ವಾರ್ಷಿಕ ಜ್ವರ ಲಸಿಕೆಗಳು

9. ವಾರ್ಷಿಕ ಜ್ವರ ಲಸಿಕೆಗಳು

ಅಧ್ಯಯನದ ಪ್ರಕಾರ, ಇನ್ಫ್ಲುಯೆಂಜಾ ಅಥವಾ ಫ್ಲೂ ವೈರಸ್ ಸೋಂಕಿಗೆ ಒಳಗಾಗುವ ಅಪಾಯವನ್ನು ತಪ್ಪಿಸಲು ಪ್ರತಿವರ್ಷ ಫ್ಲೂ ಲಸಿಕೆಗಳನ್ನು ಪಡೆದುಕೊಳ್ಳುವಂತೆ ಶಿಫಾರಸ್ಸು ಮಾಡಲಾಗುತ್ತದೆ. ಲಸಿಕೆ ಪಡೆಯುವ ಮೂಲಕ ಸೋಂಕು ಎದುರಾಗುವ ಸಾಧ್ಯತೆಯನ್ನು ಅರ್ಧಕ್ಕಿಂತಲೂ ಕಡಿಮೆ ಮಾಡುತ್ತದೆ ಮತ್ತು ದೇಹವನ್ನು ಈ ಸೋಂಕಿನ ವಿರುದ್ದ ಹೋರಾಡಲು ಸಿದ್ಧಗೊಳಿಸುತ್ತದೆ. ತಜ್ಞರು ಪ್ರತಿ ವರ್ಷವೂ ಒಂದು ಲಸಿಕೆಯನ್ನು ಪಡೆಯುವಂತೆ ಸಲಹೆ ಮಾಡುತ್ತಾರೆ. ಏಕೆಂದರೆ ಇನ್ಫ್ಲುಯೆಂಜಾ ವೈರಸ್ಸು ಕಾಲಕಾಲಕ್ಕೆ ಕೊಂಚ ಮಾರ್ಪಾಡು ಹೊಂದಿಕೊಂಡು ಹೊಸ ಜನ್ಮ ತಳೆಯುತ್ತದೆ.

(ಇದನ್ನು ಅವತಾರ ಎಂದೂ ಕರೆಯಬಹುದು) ಹಿಂದಿನ ಅವತಾರಕ್ಕೆ ಪಡೆದಿದ್ದ ಲಸಿಕೆ ಈ ಅವತಾರಕ್ಕೆ ಸಾಲುವುದಿಲ್ಲ. ಹಾಗಾಗಿ ಇದಕ್ಕೆಂದೇ ಇನ್ನೊಂದು ಪ್ರತ್ಯೇಕ ಲಸಿಕೆ ಸಿದ್ಧಪಡಿಸಬೇಕು. ಆದ್ದರಿಂದಲೇ ಯಾವಾಗ ಹೊಸ ವೈರಸ್ಸು ಕಂಡುಬಂದಿತೋ ಆದಕ್ಕೆ ಹೊಸ ಲಸಿಕೆಯನ್ನು ಕಂಡುಹಿಡಿಯುವ ಅಗತ್ಯತೆಯೂ ಎದುರಾಗುತ್ತದೆ. ಸೋಂಕು ವ್ಯಾಪಕವಾದಾಗ ಈ ಲಸಿಕೆ ಕಂಡುಹಿಡಿಯುವುದು ತಡವಾದಷ್ಟೂ ಸಾವುಗಳ ಪ್ರಮಾಣವೂ ಹೆಚ್ಚುತ್ತದೆ.

10. ನಿಯಮಿತವಾಗಿ ವಾಸಸ್ಥಳದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ

10. ನಿಯಮಿತವಾಗಿ ವಾಸಸ್ಥಳದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ

ನಿಯಮಿತ ಶುಚಿತ್ವವು ಆರೋಗ್ಯಕರ ಜೀವನದ ಒಂದು ಪ್ರಮುಖ ಭಾಗವಾಗಿರಬೇಕು ಏಕೆಂದರೆ ಅದು ಎಲ್ಲಾ ಅಲರ್ಜಿಕಾರಕ, ಕೊಳಕು, ಬ್ಯಾಕ್ಟೀರಿಯಾ, ವೈರಸ್ ಮತ್ತು ಪರಕೀಯ ವಸ್ತುಗಳನ್ನು ವಾಸಸ್ಥಳದಿಂದ ಮುಕ್ತಗೊಳಿಸುತ್ತದೆ.

ಮನೆಯನ್ನು ನಿಯಮಿತವಾಗಿ ಸ್ವಚ್ಛವಾಗಿಡುವುದು ಮತ್ತು ಕೈಗಳು ಸ್ಪರ್ಶಿಸುವ ಎಲ್ಲಾ ಮೇಲ್ಮೈಗಳು, ಪೀಠೋಪಕರಣಗಳು ಮತ್ತು ಆಟಿಕೆಗಳು ಮೊದಲಾದವುಗಳಿಗೆ ಸೋಂಕುನಿವಾರಕವನ್ನು ಸಿಂಪಡಿಸಿ ಆಗಾಗ್ಗೆ ಸ್ವಚ್ಛಗೊಳಿಸುವ ಮೂಲಕ ಇವುಗಳನ್ನು ಸ್ಪರ್ಶಿಸುವ ಯಾವುದೇ ವ್ಯಕ್ತಿಗಳು ಅನಾರೋಗ್ಯಕ್ಕೆ ತುತ್ತಾಗದಂತೆ ಕಾಪಾಡಬಹುದು . ಅಲ್ಲದೇ ಮನೆಯಲ್ಲಿ ಸೂಕ್ತ ವಾತಾನುಕೂಲ ವ್ಯವಸ್ಥೆ (ಅಂದರೆ ತಾಜಾ ಹವೆ ಒಳಬರುವ ಮತ್ತು ಕೆಟ್ಟ ಹವೆ ಹೊರಹೋಗುವ ವ್ಯವಸ್ಥೆ) ಉತ್ತಮವಾಗಿ ಇರುವಂತೆ ನೋಡಿಕೊಳ್ಳಬೇಕು.

English summary

Tips On How To Prevent Bird Flu In Humans

Here we are discussing about How To Prevent Bird Flu In Humans here are few tips. Bird flu, also termed as H5N1 or avian influenza is a type of zoonotic influenza virus that gets transmitted to humans usually through infected live or dead poultry which includes chicken, turkey or wild ducks. Read more.
Story first published: Monday, March 23, 2020, 13:35 [IST]
X
Desktop Bottom Promotion