Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
ಕೀಟಗಳ ಕಡಿತದ ಉರಿ ಶಮನಕ್ಕೆ ಸೂಕ್ತ ಮನೆಮದ್ದು
ಕೀಟಗಳನ್ನು ನಾವು ಒಂದು ಉಪದ್ರವದಂತೆ ನೋಡುತ್ತೇವೆ. ಆದರೆ ನಿಸರ್ಗದ ಸಮತೋಲನಕ್ಕೆ ಕೀಟಗಳು ಅವಶ್ಯಕ! ನಾವು ತಿನ್ನುವ ಆಹಾರಕ್ಕೆ ಮುಖ್ಯವಾಗಿ ಬೇಕಾದ ಪರಾಗಸ್ಪರ್ಶವಾಗುವುದು ಕೀಟಗಳಿಂದಲೇ. ನಮಗೆ ಸಿಹಿಯಾದ ಜೇನು ನೀಡುವುದೂ ಒಂದು ಕೀಟವೇ. ಆದ್ದರಿಂದ ಕೀಟಗಳನ್ನು ಉಚ್ಛಾಟನೆ ಮಾಡುವ ಬದಲು ಇವುಗಳ ಕಡಿತದಿಂದ ತಪ್ಪಿಸಿಕೊಳ್ಳುವುದೇ ಜಾಣತನ. ಆದರೂ ಯಾವುದೋ ಮೈಮರೆತ ಘಳಿಗೆಯಲ್ಲಿ ಕೀಟಗಳು ಕಡಿಯುತ್ತವೆ. ಸಾಮಾನ್ಯವಾಗಿ ಜೇನು, ಕಣಜ ಮೊದಲಾದವು ಕಚ್ಚುವುದಿಲ್ಲ, ಬದಲಿಗೆ ತಮ್ಮ ದೇಹದ ಹಿಂಭಾಗದಲ್ಲಿರುವ ಮುಳ್ಳೊಂದನ್ನು ಬಲವಾಗಿ ಚುಚ್ಚಿ ಓಡುತ್ತವೆ.
ಈ ಮುಳ್ಳಿಲ್ಲದೇ ಜೇನು ಬದುಕಲು ಸಾಧ್ಯವಿಲ್ಲ. ಕೊಂಚ ಹೊತ್ತಿನ ಬಳಿಕ ಸಾಯುತ್ತದೆ. ತಕ್ಷಣ ಈ ಮುಳ್ಳನ್ನು ನಿವಾರಿಸಿದರೆ ಮುಳ್ಳಿನ ವಿಷ ಕಡಿಮೆಯಾಗಿ ಚರ್ಮ ಊದಿಕೊಳ್ಳುವುದು ಕಡಿಮೆಯಾಗುತ್ತದೆ. ಇಲ್ಲದಿದ್ದರೆ ಸಮಯದೊಂದಿಗೆ ಕಚ್ಚಿದಲ್ಲಿ ತುಂಬಾ ದೊಡ್ಡದಾಗಿ ಊದಿ ಅಪಾರವಾದ ಉರಿ ತರಿಸುತ್ತದೆ.
ಆದರೆ ಜೇಡ, ಇರುವೆ ಮೊದಲಾದವುಗಳ ಇಕ್ಕಳದಂತಿರುವ ಹಲ್ಲುಗಳು ಚರ್ಮವನ್ನು ಹರಿದು ವಿಷಕಾರಿ ರಾಸಾಯನಿಕಗಳನ್ನು ಸುರಿಸುತ್ತವೆ. ಇವು ಅಸಾದ್ಯ ಉರಿಯನ್ನು ಉಂಟುಮಾಡುತ್ತವೆ. ತಕ್ಷಣವೇ ಇದಕ್ಕೆ ಸೂಕ್ತ ಚಿಕಿತ್ಸೆ ಅಥವಾ ಮನೆಮದ್ದು ಪಡೆದರೆ ಉರಿ ತಗ್ಗಿಸಬಹುದು ಹಾಗೂ ಇವುಗಳ ವಿಷವೇರದಂತೆ ನೋಡಿಕೊಳ್ಳಬಹುದು. ಆದರೆ ಕೀಟ ಕಡಿತದ ತಕ್ಷಣ ಚಿಕಿತ್ಸೆಗೆ ಎಲ್ಲಿ ಓಡುವುದು? ಆಗ ನಮ್ಮ ನೆರವಿಗೆ ಬರುವುದೇ ನಮ್ಮ ಅಡುಗೆಮನೆ.
ಮೊತ್ತಮೊದಲಾಗಿ ಕೀಟ ಕಡಿತದ ಸ್ಥಳವನ್ನು ಪರಿಶೀಲಿಸಿ. ಇಲ್ಲಿ ಮುಳ್ಳು ಇದ್ದುದು ಕಂಡುಬಂದರೆ ತಕ್ಷಣ ನಿವಾರಿಸಿ. ಇದಕ್ಕೆ ಸೂಜಿ, ಮುಳ್ಳು, ಕತ್ತಿ ಏನನ್ನೂ ಉಪಯೋಗಿಸಬಹುದು. ಬಳಿಕ ಈ ಭಾಗವನ್ನು ನಂಜುನಿವಾರಕ ಸೋಪು ಅಥವಾ ದ್ರಾವಣ, ಡೆಟಾಲ್ ಯಾವುದಾದರೊಂದು ಉಪಯೋಗಿಸಿ ಸ್ವಚ್ಛಗೊಳಿಸಿ. ಬೇವಿನ, ತುಳಸಿ, ಟೀ ಟ್ರೀ ಎಣ್ಣೆ ಮೊದಲಾದವುಗಳಿರುವ ಸೋಪುಗಳ ಬಳಕೆ ಉತ್ತಮ. ಬನ್ನಿ, ಈ ಕೀಟಕಡಿತಕ್ಕೆ ತಕ್ಷಣವೇ ಸುಲಭವಾಗಿ ಮನೆಮದ್ದುಗಳನ್ನು ಪಡೆಯಬಹುದು ಎಂಬುದನ್ನು ಮುಂದ ಓದಿ...

ಬೇವು
ಬೇವು ಒಂದು ಉತ್ತಮ ಬ್ಯಾಕ್ಟೀರಿಯಾನಿವಾರಕ ಮತ್ತು ಶಿಲೀಂಧ್ರನಿವಾರಕವಾಗಿದೆ. ಕೀಟಕಡಿತಕ್ಕೆ ಬೇವಿನ ಆರೈಕೆ ಉತ್ತಮ ಪರಿಹಾರ ನೀಡುತ್ತದೆ. ಕೀಟದ ಕಡಿತದ ಬಳಿಕ ಕಾಡುವ ಉರಿ, ತುರಿಕೆ, ಊತ ಮೊದಲಾದವುಗಳನ್ನು ಕಡಿಮೆ ಮಾಡುವುದರ ಜೊತೆಗೇ ಸೋಂಕು ಹರಡುವುದರಿಂದಲೂ ತಡೆಯುತ್ತದೆ. ಇದಕ್ಕಾಗಿ ಬೇವಿನ ಎಲೆಗಳನ್ನು (ಕಹಿಬೇವು ಉತ್ತಮ, ಇಲ್ಲದಿದ್ದರೆ ಕರಿಬೇವೂ ಆಗಬಹುದು) ಕೈಯಲ್ಲಿಯೇ ಜಜ್ಜಿ ಕೀಟ ಕಡಿದಲ್ಲಿ ದಪ್ಪನಾಗಿ ಹಚ್ಚಿ ಅಲ್ಲಿಯೇ ಇರುವಂತೆ ಮಾಡಿ. ಬಟ್ಟೆಯ ಪಟ್ಟಿ ಕಟ್ಟಿದರೆ ಇನ್ನೂ ಉತ್ತಮ. ದಿನಕ್ಕೆ ಎರಡು ಬಾರಿ ಈ ವಿಧಾನ ಅನುಸರಿಸುವ ಮೂಲಕ ಕೀಟ ಕಡಿತದ ಗಾಯ ಶೀಘ್ರವಾಗಿ ಮಾಗುತ್ತದೆ. ತಕ್ಷಣಕ್ಕೆ ಬೇವಿನ ಎಲೆಗಳು ಸಿಗದೇ ಇದ್ದಲ್ಲಿ ಬೇವಿನ ಎಣ್ಣೆಯೂ ಸರಿ.

ಟೀ ಟ್ರೀ ಎಣ್ಣೆ (Tea tee oil)
ಈ ಎಣ್ಣೆಯಲ್ಲಿ ಬಾಕ್ಟೀರಿಯಾನಿವಾರಕ ಮತ್ತು ಶಿಲೀಂಧ್ರನಿವಾರಕ ಗುಣಗಳಿವೆ. ಕೀಟಗಳ ಕಡಿತದ ಬಾಧೆಯಿಂದ ಮುಕ್ತಿ ಪಡೆಯಲು ಈ ಗುಣಗಳು ಸಮರ್ಥವಾಗಿವೆ. ಕೀಟ ಕಡಿದಲ್ಲಿ ಕೊಂಚ ಎಣ್ಣೆಯನ್ನು ಸವರಿ ಒಣಗಲು ಬಿಡಿ. ಎಣ್ಣೆ ಹಚ್ಚಿದ ಬಳಿಕ ಈ ಭಾಗವನ್ನು ಮುಟ್ಟಲು ಹೋಗಬಾರದು. ಕೊಂಚ ಹೊತ್ತಿನಲ್ಲಿಯೇ ಉರಿ ಕಡಿಮೆಯಾಗುತ್ತದೆ. ದಿನಕ್ಕೆ ಎರಡು ಬಾರಿ ಹಚ್ಚುವ ಮೂಲಕ ಶೀಘ್ರವಾಗಿ ಈ ಭಾಗ ಮೊದಲಿನಂತಾಗುತ್ತದೆ ಮತ್ತು ನೋವು, ಬಾವು ಮತ್ತು ಉರಿ ಸಹಾ ಇಲ್ಲವಾಗುತ್ತದೆ.

ಲವಂಗದ ಎಣ್ಣೆ
ಹಲ್ಲುನೋವಿಗೆ ಉತ್ತಮವಾದ ಲವಂಗದ ಎಣ್ಣೆ ಕೀಟಗಳ ಬಾಧೆಗೂ ಉತ್ತಮವಾಗಿದೆ. ಇದರಲ್ಲಿಯೂ ಬ್ಯಾಕ್ಟೀರಿಯಾ ನಿವಾರಕ ಮತ್ತು ಬಾಕ್ಟೀರಿಯಾನಿವಾರಕ ಗುಣಗಳಿದ್ದು ಸೋಂಕು ಹರಡದಂತೆ ತಡೆಯುತ್ತದೆ. ಕೀಟ ಕಚ್ಚಿದಲ್ಲಿ ತೆಳ್ಳಗೆ ಲವಂಗದ ಎಣ್ಣೆಯನ್ನು ದಿನಕ್ಕೆ ಮೂರು ಬಾರಿ ಹಚ್ಚಿಕೊಳ್ಳುವ ಮೂಲಕ ಕಡಿತದ ತೊಂದರೆ ಶೀಘ್ರವಾಗಿ ಕಡಿಮೆಯಾಗುತ್ತದೆ.

ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿಯೂ ಉತ್ತಮ ಬ್ಯಾಕ್ಟೀರಿಯಾನಿವಾರಕ ಮತ್ತು ಪ್ರತಿಜೀವಕ ಗುಣಗಳಿವೆ ಹಾಗೂ ಬೆಳ್ಳುಳ್ಳಿಯ ಲೇಪನ ಕೀಟಗಳ ಕಡಿತದ ಉರಿಯಿಂದ ಶಮನ ನೀಡುತ್ತದೆ. ಇದು ಚರ್ಮಕ್ಕೆ ಸೋಂಕು ಉಂಟಾಗುವುದರಿಂದ ರಕ್ಷಣೆ ನೀಡುತ್ತದೆ ಹಾಗೂ ಗಾಯ ಶೀಘ್ರವಾಗಿ ಮಾಗಲು ನೆರವಾಗುತ್ತದೆ.

ಲೋಳೆಸರ
ಲೋಳೆಸರದಲ್ಲಿ ಗಾಯಗಳನ್ನು ಮಾಗಿಸುವ ಗುಣಗಳಿವೆ. ಈ ಗುಣ ಕೀಟಕಡಿತಕ್ಕೂ ಉತ್ತಮ ಪರಿಹಾರವಾಗಿದೆ. ವಿಶೇಷವಾಗಿ ಕೀಟಕಡಿತದಿಂದ ಉರಿ ಅತಿಹೆಚ್ಚಾಗಿದ್ದರೆ ಈ ವಿಧಾನ ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ ಲೋಳೆಸರದ ಕೋಡೊಂದನ್ನು ಮುರಿದು ಇದರ ರಸವನ್ನು ನೇರವಾಗಿ ಕೀಟ ಕಡಿದಲ್ಲಿ ಹಚ್ಚಿ ಹರಡಿ ಒಣಗಲು ಬಿಡಿ. ಇಡಿಯ ದಿನ ನೀರು ತಾಗಲು ಬಿಡಬೇಡಿ. ಪ್ರಾರಂಭದ ಎರಡು ದಿನ ಸತತವಾಗಿ ಹಚ್ಚಿ ಬಳಿಕ ವಾರಕ್ಕೆರಡು ಬಾರಿ ಹಚ್ಚಿ. ಇದರಿಂದ ಗಾಯ ಕಲೆಯಿಲ್ಲದೇ ಮಾಗುತ್ತದೆ. ಇದು ಕೋಮಲ ಮತ್ತು ಸುರಕ್ಷಿತವಾದ ವಿಧಾನವಾದ ಕಾರಣ ಮಕ್ಕಳಿಗೆ ಅತ್ಯಂತ ಸೂಕ್ತವಾಗಿದೆ.

ಮಂಜುಗಡ್ಡೆ
ತಕ್ಷಣಕ್ಕೆ ಏನೂ ಸಿಗದೇ ಇದ್ದಲ್ಲಿ ಫ್ರಿಜ್ಜಿನಿಂದ ಐಸ್ ತುಂಡೊಂದನ್ನು ನೇರವಾಗಿ ಕೀಟ ಕಡಿತದ ಭಾಗದ ಮೇಲೆ ಹಚ್ಚಿ ನಯವಾಗಿ ಸವರಿ. ದಿನಕ್ಕೆ ಎರಡರಿಂದ ಮೂರು ಬಾರಿ ಈ ವಿಧಾನ ಅನುಸರಿಸುವ ಮೂಲಕ ಉರಿ ಕಡಿಮೆಯಾಗುತ್ತದೆ. ಇದು ಕೀಟ ಕಡಿತಕ್ಕೆ ಸುಲಭ ಮತ್ತು ತಕ್ಷಣಕ್ಕೆ ಮಾಡಬಹುದಾದ ಆರೈಕೆಯಾಗಿದೆ.

ಅಡುಗೆ ಸೋಡಾ
ಅಡುಗೆ ಸೋಡಾಪುಡಿಯನ್ನು ಕೊಂಚ ನೀರಿನೊಂದಿಗೆ ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ತೆಳ್ಳಗೆ ಕೀಟ ಕಡಿದ ಭಾಗಕ್ಕೆ ಹಚ್ಚಿ ಒಣಗಲು ಬಿಡಿ. ಇದು ಉರಿ, ಕಡಿತ, ತುರಿಕೆ, ಬಾವು ಮತ್ತು ಕೆಂಪಗಾಗಿರುವ ಚರ್ಮಕ್ಕೆ ಉತ್ತಮ ಪರಿಹಾರ ನೀಡುತ್ತದೆ. ವಿಶೇಷವಾಗಿ ಇರುವೆ, ಜೇಡ ಮೊದಲಾದ ಕೀಟಗಳ ಕಡಿತಕ್ಕೆ ಇದು ಉತ್ತಮವಾಗಿದೆ.

ಟೂಥ್ ಪೇಸ್ಟ್
ಮನೆಯಲ್ಲಿ ತಕ್ಷಣಕ್ಕೆ ಏನೂ ಸಿಕ್ಕಿಲ್ಲ, ಅದರಲ್ಲೂ ಐಸ್ ತುಂಡೂ ಇಲ್ಲ ಅಥವಾ ಕೀಟ ಕಡಿದ ಸ್ಥಳ ಮನೆಯಿಂದ ದೂರವಿದ್ದು ತಕ್ಷಣಕ್ಕೆ ಏನೂ ಸಿಗುತ್ತಿಲ್ಲ ಎಂದಾದರೆ ಅತ್ಯಂತ ಹತ್ತಿರವಿರುವ ಮನೆಯಿಂದ ಅಥವಾ ಅಂಗಡಿಯಿಂದ ಟೂಥ್ ಪೇಸ್ಟ್ ಒಂದನ್ನು ಬಳಸಿ ನೇರವಾಗಿ ಕೀಟಕಡಿದ ಚರ್ಮದ ಮೇಲೆ ತೆಳುವಾಗಿ ಹಚ್ಚಿ. ಇದರಿಂದ ಉರಿ, ತುರಿಕೆ ಕಡಿಮೆಯಾಗುತ್ತದೆ ಹಾಗೂ ತಂಪಾಗಿಸುತ್ತದೆ.



Click it and Unblock the Notifications









