Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೀಟಗಳ ಕಡಿತದ ಉರಿಯ ಶಮನಕ್ಕೆ ಪರ್ಫೆಕ್ಟ್ ಮನೆಮದ್ದು
ಬೇಸಿಗೆಯ ಇನ್ನೊಂದು ಅರ್ಥ ಸೆಖೆ. ಆದರೆ ಕೇವಲ ಸೆಖೆ ಎಂದರೆ ಸಾಕಾಗುವುದಿಲ್ಲ, ಜೊತೆಗೇ ಸೊಳ್ಳೆಕಾಟ, ವಿದ್ಯುತ್ ಇಲ್ಲದ ಕಾರಣ ತಿರುಗದ ಫ್ಯಾನ್, ಬೆವರು ಸಾಲೆ ಇತ್ಯಾದಿಗಳು ಜೀವನವನ್ನು ದುರ್ಭರವಾಗಿಸುತ್ತವೆ. ಬಿಸಿಲ ಬೇಗೆ ತಾಳಲಾರದೇ ತಣ್ಣನೆಯ ತಾಣವನ್ನು ಅರಸಿಕೊಳ್ಳುತ್ತಾ ಬರುವ ಕೀಟಗಳಿಗೂ ನಮ್ಮ ಮನೆಯೇ ಪ್ರಶಸ್ತವಾಗಿ ಕಂಡುಬರುವ ಕಾರಣ ಎಲ್ಲೆಲ್ಲಿಂದಲೋ ಇವು ಮನೆ, ಆಫೀಸ್, ಸಾರ್ವಜನಿಕ ಸ್ಥಳಗಳಲ್ಲಿ ಬಂದು ಸೇರಿಕೊಳ್ಳುತ್ತವೆ. ಅತಿಥಿಗಳಾಗಿ ಬಂದರೂ ಕೆಲವು ಸಂದರ್ಭದಲ್ಲಿ ಅತಿಥೇಯರಿಗೇ ಕಡಿದು ಕೃತಘ್ನತೆಯನ್ನು ತೋರ್ಪಡಿಸುತ್ತವೆ.
ಕೇವಲ ಇರುವೆ ನುಸಿಗಳಾದರೆ ಪರವಾಗಿಲ್ಲ, ಆದರೆ ಕಣಜ, ಸೊಳ್ಳೆ, ಚಿಗಟ, ಜೇನು, ದುಂಬಿ ಮೊದಲಾದ ಕೀಟಗಳ ಕಡಿತ ಅಪಾರ ಉರಿಯ ಜೊತೆಗೇ ಚರ್ಮಕ್ಕೆ ಅಲರ್ಜಿಯುಂಟು ಮಾಡಿ ದೊಡ್ಡ ದೊಡ್ಡ ದದ್ದುಗಳಾಗುವಂತೆ ಮಾಡುತ್ತವೆ. ಕೆಲವರಿಗೆ ಈ ಅಲರ್ಜಿ ವಿಪರೀತವಾದ ಪರಿಣಾಮವನ್ನೂ ಬೀರಬಹುದು. ತುರಿಕೆ, ಚರ್ಮ ಕೆಂಪಗಾಗುವುದು, ವಾಂತಿ, ವಾಕರಿಕೆ, ಸುಸ್ತು, ತಲೆತಿರುಗುವುದು ಮೊದಲಾದ ತೊಂದರೆಗಳೂ ಎದುರಾಗಬಹುದು.
ಕೀಟಗಳ ಕಡಿತದಲ್ಲಿ ಅತಿ ಸಾಮಾನ್ಯವಾದುದೆಂದರೆ ಸೊಳ್ಳೆಗಳ ಕಡಿತ. ಏಕೆಂದರೆ ಈ ಸೊಳ್ಳೆಗಳ ಆಹಾರವೇ ನಮ್ಮ ರಕ್ತ (ಹೆಣ್ಣು ಸೊಳ್ಳೆಗಳು), ರಕ್ತವೇ ಆಹಾರವಾಗಿರುವ ತಿಗಣೆ, ಚಿಗಟ, ಹೇನು ಮೊದಲಾದವು ಸಹಾ ಅವಕಾಶ ಪಡೆದಾಗಲೆಲ್ಲಾ ಕಚ್ಚಿ ರಕ್ತ ಹೀರುತ್ತವೆ. ಇನ್ನುಳಿದಂತೆ ಜೇಡ, ಕಣಜ, ದುಂಬಿ ಮೊದಲಾದವು ತಮಗೆ ಅಪಾಯ ಎದುರಾಗುವ ಸಂದರ್ಭದಲ್ಲಿ ಕಚ್ಚಿ ವಿಷವುಣಿಸಿ ಪರಾರಿಯಾಗುವ ಆತ್ಮರಕ್ಷಣಾ ವಿಧಾನವನ್ನು ಅನುಸರಿಸುತ್ತವೆ.
ಒಂದು ವೇಳೆ ಯಾವುದೇ ಕೀಟ ಕಡಿದು ವಿಪರೀತ ಉರಿ ಮತ್ತು ದದ್ದು ಎದ್ದರೆ ತಕ್ಷಣ ವೈದ್ಯರನ್ನು ಕಾಣುವುದು ಅನಿವಾರ್ಯ. ತಮ್ಮನ್ನು ಕಡಿದ ಕೀಟ ಯಾವುದು ಎಂದು ತಿಳಿದಿದ್ದರೆ ವೈದ್ಯರಿಗೆ ಚಿಕಿತ್ಸೆ ನೀಡಲು ಸುಲಭವಾಗುತ್ತದೆ. ಆದರೆ ಕೀಟದಿಂದ ಕಡಿಸಲ್ಪಟ್ಟ ಯಾರೇ ಆದರೂ ಉರಿಯನ್ನು ಸಹಿಸಲಾರದೇ ಈ ಕೀಟಗಳಿಗೆ ಹಿಡಿಶಾಪ ಹಾಕುತ್ತಾರೆ.
ಆದರೆ ಶಾಪ ಹಾಕುವುದರಿಂದ ಉರಿ ಕಡಿಮೆಯಾಗುವುದಿಲ್ಲವಲ್ಲ? ಅದರಲ್ಲೂ ತುರಿಕೆ ಇದ್ದರೆ ಪ್ರತಿ ಬಾರಿ ತುರಿಸಿದಾಗಲೂ ಚರ್ಮ ಕೆಂಪಗಾಗಿ ಹೊರಚರ್ಮ ಪದರದಂತೆ ಎದ್ದು ಒಳಚರ್ಮ ಹಿಸಿದಂತೆ ಕಾಣಲು ತೊಡಗಿದರೂ ತುರಿಕೆ ಮಾತ್ರ ಕಡಿಮೆಯಾಗುವುದಿಲ್ಲ. ನಮ್ಮಲ್ಲಿ ಹೆಚ್ಚಿನವರು ತಕ್ಷಣ ಹತ್ತಿರದ ಮೆಡಿಕಲ್ ಅಂಗಡಿಗೆ ಹೋಗಿ ಯಾವುದಾದರೂ ಕ್ರೀಂ ಕೊಡಿ ಎಂದು ಸಾಮಾನ್ಯವಾಗಿ ಕೀಟಕಡಿತಕ್ಕೆ ಬಳಸಬಹುದಾದ ಕ್ರೀಂ ಕೊಂಡು ಹಚ್ಚಿಕೊಳ್ಳುತ್ತಾರೆ. ಆದರೆ ಕೀಟ ಕಡಿತದ ಹೊತ್ತಿನಲ್ಲಿ ಹತ್ತಿರದಲ್ಲಿ ಮೆಡಿಕಲ್ ಅಂಗಡಿ ಇರದೇ ಇದ್ದರೆ? ಇದ್ದರೂ ಮುಚ್ಚಿದ್ದರೆ? ಊರಿನಿಂದ ದೂರದಲ್ಲಿದ್ದರೆ? ಹಚ್ಚಿಕೊಂಡ ಕ್ರೀಂ ಅಲರ್ಜಿಕಾರಕವಾಗಿದ್ದು ಇದರ ಪರಿಣಾಮದಿಂದ ತೊಂದರೆ ಇನ್ನಷ್ಟು ಉಲ್ಬಣಿಸಿದರೆ? ಈ ಸಂದರ್ಭ ಬಂದರೆ ಸಮರ್ಥವಾಗಿ ಎದುರಿಸಲು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಒಂಭತ್ತು ವಿಧಾನಗಳು ನಿಮ್ಮ ನೆರವಿಗೆ ಬರಲಿವೆ.

ಅಡುಗೆ ಸೋಡಾದ ಲೇಪನ
ಅಡುಗೆ ಸೋಡಾದಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣವಿದ್ದು ಸಾಮಾನ್ಯ ಕೀಟಗಳ ಕಡಿತಕ್ಕೆ ಉತ್ತಮ ಪರಿಹಾರ ನೀಡುತ್ತದೆ. ಸಾಮಾನ್ಯ ಕೀಟಗಳಾದ ಸೊಳ್ಳೆ, ಇರುವೆ, ಚಿಗಟ, ತಿಗಣೆ ಮೊದಲಾದವುಗಳು ಕಡಿದರೆ ಕೊಂಚ ಅಡುಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ಲೇಪನ ತಯಾರಿಸಿ ಸ್ವಚ್ಛ ಬಟ್ಟೆಯನ್ನು ಬಳಸಿ ಕಡಿದ ಭಾಗಕ್ಕೆ ತೆಳುವಾಗಿ ಹಚ್ಚಿಕೊಳ್ಳಬೇಕು.

ಮಂಜುಗಡ್ಡೆ ಬಳಸಿ
ಕೀಟ ಕಡಿದ ತಕ್ಷಣ ಊದಿಕೊಂಡರೆ ತಕ್ಷಣ ಐಸ್ ತುಂಡೊಂದನ್ನು ಊದಿದ ಭಾಗದ ಮೇಲೆ ಇರಿಸಿ ಉಜ್ಜಿಕೊಳ್ಳುವ ಮೂಲಕ ತುರಿಕೆ ಮತ್ತು ಉರಿ ಕಡಿಮೆಯಾಗುತ್ತದೆ. ತಾತ್ಕಾಲಿಕವಾಗಿ ಕಡಿತದ ಭಾಗವನ್ನು ನಿಶ್ಟೇಷ್ಟಿತಗೊಳಿಸುವ ಮೂಲಕ ನೋವು ಅಥವಾ ಉರಿಯ ಅನುಭವವಾಗದಂತೆ ನೋಡಿಕೊಳ್ಳಬಹುದು.

ತುಳಸಿ ಎಲೆಗಳ ಲೇಪ ಹಚ್ಚಿ
ತುಳಸಿಯ ಎಲೆಗಳಲ್ಲಿ ಹಲವು ನೈಸರ್ಗಿಕ ರಾಸಾಯನಿಕಗಳಿದ್ದು ಇವುಗಳು ಕೀಟಗಳ ಕಡಿತಕ್ಕೂ ಉತ್ತಮವಾಗಿದೆ. ಮನೆಯಲ್ಲಿ ತುಳಸಿ ಗಿಡವಿದ್ದರೆ ಕೀಟ ಕಡಿತದ ಔಷಧಿಗಾಗಿ ಓಡುವ ಅಗತ್ಯವಿಲ್ಲ. ಬದಲಿಗೆ ಕೆಲವು ತುಳಸಿ ಎಲೆಗಳನ್ನು ಕೈಗಳಲ್ಲಿಯೇ ಹಿಸುಕಿ ತಕ್ಷಣ ಕೀಟ ಕಡಿತದ ಭಾಗಕ್ಕೆ ಒತ್ತಿಕೊಳ್ಳಿ. ಕೆಲವೇ ನಿಮಿಷಗಳಲ್ಲಿ ಉರಿ ಕಡಿಮೆಯಾಗುತ್ತದೆ.

ಆಲ್ಕೋಹಾಲ್ ಹಚ್ಚಿಕೊಳ್ಳಿ
ಆಲ್ಕೋಹಾಲ್ ನಲ್ಲಿಯೂ ನಂಜುನಿರೋಧಕ ಗುಣವಿದ್ದು ಕೀಟಗಳ ಕಡಿತದ ಉರಿ ಕಡಿಮೆಗೊಳಿಸುವ ಮತ್ತು ಸೋಂಕಿನಿಂದ ರಕ್ಷಿಸುವ ಸಾಮರ್ಥ್ಯವಿದೆ. ಒಂದು ಹತ್ತಿಯುಂಡೆಯನ್ನು ಆಲ್ಕೋಹಾಲ್ ನಲ್ಲಿ ಮುಳುಗಿಸಿ ಕೀಟ ಕಡಿತದ ಭಾಗಕ್ಕೆ ಹಚ್ಚಿಕೊಳ್ಳಿ. ಗಾಯಗಳಿಗೆ ಹಚ್ಚುವ ಆಲ್ಕೋಹಾಲ್ ಸ್ವಾಬ್ ಎಂಬ ಪಟ್ಟಿ ಇದ್ದರೆ ಅತ್ಯುತ್ತಮವಾದ ಪರಿಹಾರ ಒದಗಿಸುತ್ತದೆ.

ಜೇನು ಬಳಸಿ
ಕೀಟಗಳ ಕಡಿತಕ್ಕೆ ಮನೆಯಲ್ಲಿ ಸರ್ವೇ ಸಾಮಾನ್ಯವಾಗಿರುವ ಜೇನು ಸಹಾ ಉತ್ತಮ ಪರಿಹಾರ ನೀಡುತ್ತದೆ. ಇದರ ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾನಿವಾರಕ ಗುಣಗಳು ಕೀಟಗಳ ಕಡಿತದ ಉರಿಯನ್ನು ಶಮನಗೊಳಿಸುವ ಜೊತೆಗೇ ಸೋಂಕು ಉಂಟಾಗದಂತೆ ನೋಡಿಕೊಳ್ಳುತ್ತದೆ. ಕೀಟದ ಉರಿ ತೀಕ್ಷ್ಣವಾಗಿದ್ದರೆ ಜೇನನ್ನು ಹಚ್ಚಿದ ತಕ್ಷಣ ಉರಿ ಕಡಿಮೆಯಾಗುತ್ತದೆ. ಜೇನನ್ನು ನೇರವಾಗಿ ಅಥವಾ ಹತ್ತಿ ಅಥವಾ ಬಟ್ಟೆಯಲ್ಲಿ ಅದ್ದಿ ಹಚ್ಚಬಹುದು.

ಹಲ್ಲುಜ್ಜುವ ಪೇಸ್ಟ್ ಹಚ್ಚಿ
ಮೆಂಥಾಲ್ ಇರುವ ವಸ್ತುಗಳು ಕೀಟಗಳ ಕಡಿತದ ಉರಿಯನ್ನು ತಕ್ಷಣ ಕಡಿಮೆಗೊಳಿಸುತ್ತವೆ. ಸಾಮಾನ್ಯವಾಗಿ ಹಲ್ಲುಜ್ಜುವ ಪೇಸ್ಟುಗಳಲ್ಲಿ ಕೊಂಚ ಮೆಂಥಾಲ್ ಸೇರಿಸಿರುತ್ತಾರೆ. ಇದು ಕೀಟಗಳ ಕಡಿತವನ್ನು ಶಮನಗೊಳಿಸಲು ಸಾಕು. ಕೀಟ ಕಡಿತದ ಭಾಗದಲ್ಲಿ ತೆಳುವಾಗಿ ಹಲ್ಲುಜ್ಜುವ ಪೇಸ್ಟ್ ಹಚ್ಚಿ ಉರಿಯನ್ನು ಕಡಿಮೆ ಮಾಡಿಕೊಳ್ಳಬಹುದು.

ಬಳಸಿದ ಟೀ ಬ್ಯಾಗ್ ಗಳು
ಕೀಟಗಳ ಕಡಿದ ಬಳಿಕ ಎದುರಾಗುವ ಉರಿಯನ್ನು ಬಳಸಿದ ಟೀ ಬ್ಯಾಗ್ ಗಳು ಕಡಿಮೆಗೊಳಿಸಲು ಸಮರ್ಥವಾಗಿವೆ. ಟೀ ಬ್ಯಾಗ್ ಹೀರಿಕೊಂಡಿದ್ದ ನೀರನ್ನು ಹಿಂಡಿ ಈ ಚೀಲವನ್ನು ಕೀಟ ಕಡಿದ ಭಾಗಕ್ಕೆ ಕೊಂಚ ಒತ್ತಡದಲ್ಲಿ ಒತ್ತಿ. ಇದು ಕೀಟಕಡಿದ ಭಾಗದಿಂದ ಕೀಟದ ವಿಷವನ್ನು ಹೀರಿಕೊಂಡು ಉರಿಯನ್ನು ಕಡಿಮೆ ಮಾಡುತ್ತದೆ ಹಾಗೂ ಈಗಾಗಲೇ ಊದಿಕೊಂಡಿದ್ದ ಭಾಗದ ಊತವನ್ನು ಕಡಿಮೆಗೊಳಿಸುತ್ತದೆ. ಒಂದು ವೇಳೆ ಬಳಸಿದ ಟೀ ಬ್ಯಾಗ್ ಇಲ್ಲದಿದ್ದರೆ ಹೊಸ ಬ್ಯಾಗ್ ಒಂದನ್ನು ತಣ್ಣೀರಿನಲ್ಲಿ ಅದ್ದಿ ಹಿಂಡಿ ಬಳಸಬಹುದು.

ಲೋಳೆಸರ ಹಚ್ಚಿ
ಹಲವು ತೊಂದರೆಗಳಿಗೆ ರಾಮಬಾಣವಾಗಿರುವ ಲೋಳೆಸರ ಕೀಟಕಡಿತಕ್ಕೂ ಉತ್ತಮ ಶಮನ ನೀಡುತ್ತದೆ. ಕೀಟ ಕಡಿತಕ್ಕೆ ತಕ್ಷಣವೇ ಲೋಳೆಸರದ ಕೋಡೊಂದನ್ನು ಮುರಿದು ಇದರಿಂದ ಒಸರುವ ದ್ರವವನ್ನು ನೇರವಾಗಿ ಕೀಟ ಕಡಿತದ ಭಾಗದಲ್ಲಿ ಹಚ್ಚಿಕೊಂಡರೆ ಉರಿ ಕಡಿಮೆಯಾಗುತ್ತದೆ ಮತ್ತು ಬಾವು ಉಂಟಾಗದಂತೆ ನೋಡಿಕೊಳ್ಳುತ್ತದೆ. ಕೀಟಕಡಿದು ಬಾವು ಉಂಟಾಗಿದ್ದರೂ ಲೋಳೆಸರದರ ರಸವನ್ನು ದಪ್ಪನಾಗಿ ಹಚ್ಚಿ ಒಣಗಲು ಬಿಟ್ಟರೆ ಕೆಲವು ಘಂಟೆಗಳಲ್ಲಿ ಬಾವು ಇಳಿಯುತ್ತದೆ.

ಅವಶ್ಯಕ ತೈಲ ಹಚ್ಚಿ
ಕೀಟಕಡಿತದ ಉರಿಶಮನಕ್ಕೆ ಅವಶ್ಯಕ ತೈಲಗಳೂ ಉತ್ತಮ ಪರಿಹಾರ ನೀಡುತ್ತವೆ. ವಿಶೇಷವಾಗಿ ಕಡಿದ ಭಾಗದಲ್ಲಿ ತುರಿಕೆ ಇದ್ದರೆ ಇವು ಹೆಚ್ಚು ಸಮರ್ಪಕವಾಗಿವೆ. ಅತ್ಯಂತ ಸಮರ್ಪಕ ಆಯ್ಕೆ ಎಂದರೆ ಕೊಬ್ಬರಿ ಎಣ್ಣೆ. ಇದರ ಬದಲಾಗಿ ಟೀ ಟ್ರೀ ಆಯಿಲ್ ಅಥವಾ ಇನ್ನಾವುದಾದರೂ ಅವಶ್ಯಕ ತೈಲವನ್ನು ಹಚ್ಚಿಕೊಳ್ಳಬಹುದು.

ಮುನ್ನೆಚ್ಚರಿಕಾ ಕ್ರಮಗಳು
ಜೇನು, ಕಣಜ ಮೊದಲಾದವು ಕಚ್ಚುವುದಿಲ್ಲ, ಬದಲಿಗೆ ಇವುಗಳ ಹಿಂಭಾಗದಲ್ಲಿರುವ ಮುಳ್ಳಿನಂತಹ ಆಯುಧವನ್ನು ಬಲವಾಗಿ ಚುಚ್ಚಿ ಮುರಿದುಕೊಳ್ಳುವಂತೆ ಮಾಡುತ್ತವೆ. ಈ ಮುಳ್ಳಿನ ತುದಿಯಲ್ಲಿ ಅತ್ಯಂತ ಸಾಂದ್ರೀಕೃತ ವಿಷದ್ರವವಿರುತ್ತದೆ. ಇದು ಚರ್ಮದ ಮೂಲಕ ರಕ್ತಕ್ಕೆ ಸೇರಿದೊಡನೇ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಆದ್ದರಿಂದ ಜೇನು ಕಡಿದ ತಕ್ಷಣ ಅಪಾರವಾರ ಉರಿ ಪ್ರಾರಂಭವಾದರೂ ಮುಳ್ಳನ್ನು ಸಾಧ್ಯವಾದಷ್ಟು ತಕ್ಷಣ ಕಿತ್ತೆಸೆಯಬೇಕು. ಮುಳ್ಳನ್ನು ಕೀಳಲು ತಡಮಾಡಿದಷ್ಟೂ ಉರಿ ಮತ್ತು ಬಾವು ಹೆಚ್ಚುತ್ತಾ ಹೋಗುತ್ತದೆ. ಜೇನು ಕಡಿತಕ್ಕೆ ಜೇನೇ ಉತ್ತಮ ಮದ್ದೂ ಆಗಿದೆ.

ಮುನ್ನೆಚ್ಚರಿಕಾ ಕ್ರಮಗಳು
* ಕೀಟ ಕಡಿತದಿಂದ ತುರಿಕೆ ಪ್ರಾರಂಭವಾಗಿದ್ದರೆ ಉಗುರನ್ನು ಬಳಸಿದಷ್ಟೂ ನಮಗೇ ಹಾನಿ. ಬದಲಿಗೆ ಮೃದುವಾದ ಹತ್ತಿ ಅಥವಾ ತಕ್ಷಣಕ್ಕೆ ಏನೂ ಸಿಗದಿದ್ದರೆ ತೊಟ್ಟ ಬಟ್ಟೆಯಿಂದ ನಯವಾಗಿ ಉಜ್ಜಿಕೊಂಡು ತುರಿಕೆಯನ್ನು ತಹಬಂದಿಗೆ ತರಬಹುದು. ಆದರೆ ಇದು ಸೂಕ್ತವಾದ ಔಷದಿ ಸಿಗುವವರೆಗೆ ಮಾತ್ರ ತಾತ್ಕಾಲಿಕವಾಗಿರಬೇಕೇ ವಿನಃ ಮುಂದುವರೆಸಲೇಬಾರದು.
* ನಿಮ್ಮನ್ನು ಕಡಿದ ಕೀಟ ಯಾವುದು ಎಂದು ಗೊತ್ತಿಲ್ಲದಿದ್ದರೂ ಇದರ ಲಕ್ಷಣಗಳನ್ನು ಕೊಂಚ ಸ್ಥೂಲವಾಗಿ ಗಮನಿಸುವುದು ಉತ್ತಮ. ಏಕೆಂದರೆ ಇದರ ಲಕ್ಷಣಗಳನ್ನು ವೈದ್ಯರಿಗೆ ತಿಳಿಸಿದರೆ ಕೀಟ ಯಾವುದೆಂದು ಗುರುತಿಸಲು ಮತ್ತು ಇದಕ್ಕೆ ಸೂಕ್ತವಾದ ಮದ್ದು ನೀಡಲು ಅವರಿಗೆ ಸಾಧ್ಯವಾಗುತ್ತದೆ.

ಮುನ್ನೆಚ್ಚರಿಕಾ ಕ್ರಮಗಳು
* ದುಂಬಿ, ಕಣಜ ಮೊದಲಾದವು ಮನೆಯೊಳಗೆ ಹಾರಾಡುತ್ತಿದ್ದರೆ ಕೈಯಿಂದ ಹೊಡೆಯಲು ಸರ್ವಥಾ ಹೋಗಬೇಡಿ. ಸಾಧ್ಯವಾದಷ್ಟು ನಿಶ್ಚಲವಾಗಿದ್ದರೆ ಅವೇ ತಾವಾಗಿ ಹೊರಹೋಗುತ್ತವೆ.
*ಕೆಲವೊಮ್ಮೆ ಮನೆಯೊಳಗಣ ಯಾವುದೋ ಆಕರ್ಷಣೆಯಿಂದ ಮನೆಯೊಳಗೇ ತಿರುಗಾಡುತ್ತಿದ್ದರೆ ಮಾತ್ರ ಆಪಾಯ ಎದುರಾಗಬಹುದು. ಈ ಸಂದರ್ಭದಲ್ಲಿ ದೊಡ್ಡ ಬೆಡ್ ಶೀಟ್ ಅಥವಾ ಟವೆಲ್ ಎಸೆದು ಕೀಟವನ್ನು ಹಿಡಿದು ಮನೆಯಿಂದ ಕೊಂಚ ಹೊರಗೆ ಬಿಡಿ. ಕೊಲ್ಲಬೇಡಿ, ನೆನಪಿಡಿ, ಈ ಕೀಟಗಳು ನಮ್ಮ ನಿಸರ್ಗಕ್ಕೆ ಅತ್ಯಗತ್ಯವಾಗಿವೆ.

ಮುನ್ನೆಚ್ಚರಿಕಾ ಕ್ರಮಗಳು
* ನಿಮ್ಮ ಮನೆಯಲ್ಲಿ ತಿಗಣೆ ಕಾಟ ವಿಪರೀತವಾಗಿದ್ದರೆ ಮೊದಲು ಕೋಣೆಯನ್ನು ಸ್ವಚ್ಛಗೊಳಿಸುವತ್ತ ಗಮನ ನೀಡಿ. ಮಂಚ ಮತ್ತು ಪೀಠೋಪಕರಣಗಳು ಮರದ್ದಾಗಿದ್ದರೆ ಒಳಭಾಗವನ್ನು ಗಮನಿಸಿ.
*ಒಳಭಾಗದಲ್ಲಿ ತೂತು ಅಥವಾ ಮೊಳೆ ಹೊಡೆದು ನಿವಾರಿಸಿದ ಚಿಕ್ಕ ಕುಳಿ ಮೊದಲಾದವುಗಳಲ್ಲಿ ತಿಗಣೆ ಮೊಟ್ಟೆಯಿಡುತ್ತದೆ. ಈ ಸ್ಥಳಗಳನ್ನೆಲ್ಲಾ ಗುರುತಿಸಿ ಮೇಣದ ಬತ್ತಿಯಿಂದ ಹನಿಗಳನ್ನು ಉದುರಿಸಿ ಈ ಕುಳಿ, ತೂತುಗಳನ್ನೆಲ್ಲಾ ಮುಚ್ಚಿ. ಹಾಸಿಗೆಯನ್ನು ಬಿಸಿಲಿಗೆ ಒಡ್ಡಿ, ಹೊದಿಕೆಗಳನ್ನೆಲ್ಲಾ ಬಿಸಿನೀರಿನಲ್ಲಿ ಒಗೆದು ಒಣಗಿಸಿ.



Click it and Unblock the Notifications









