Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಬಂಜೆತನಕ್ಕೆ ಕಾರಣವಾಗುವ ಕ್ಯಾನ್ಸರ್ ಚಿಕಿತ್ಸೆ; ಇದಕ್ಕೆ ಪರಿಹಾರ
ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಯ ವಿಧಾನಗಳಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿರುವ ಕಾರಣದಿಂದ ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾಗುತ್ತಿರುವ ವ್ಯಕ್ತಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ರೇಡಿಯೇಶನ್, ಖೀಮೋಥೆರಪಿ ಮತ್ತು ಶಸ್ತ್ರ ಚಿಕಿತ್ಸೆ ಮೊದಲಾದವು ಹೆಚ್ಚು ಹೆಚ್ಚಾಗಿ ಯಶಸ್ವಿಯಾಗುತ್ತಿವೆ.
ಕ್ಯಾನ್ಸರ್ ಪೀಡಿದ ಜೀವಕೋಶಗಳನ್ನು ನಿವಾರಿಸಿ ವ್ಯಕ್ತಿಯ ಆರೋಗ್ಯ ಕಾಪಾಡುವಲ್ಲಿ ಈ ಚಿಕಿತ್ಸೆಗಳು ಹೆಚ್ಚು ಫಲಕಾರಿಯಾಗಿವೆ. ಅಷ್ಟೇ ಅಲ್ಲ, ಈ ಚಿಕಿತ್ಸೆಯಿಂದ ಕ್ಯಾನ್ಸರ್ ಪೀಡಿತ ಜೀವಕೋಶಗಳು ಮತ್ತೊಮ್ಮೆ ಬೆಳೆಯದಂತೆ ಮತ್ತು ವೃದ್ದಿಗೊಳ್ಳದಂತೆಯೂ ಕಾಪಾಡಲಾಗುತ್ತದೆ.

ಆದರೆ ಈ ಚಿಕಿತ್ಸೆಗಳು ಎಷ್ಟು ಪ್ರಭಾವಶಾಲಿಯಾಗಿದ್ದರೂ ಕೆಲವು ಅಡ್ಡ ಪರಿಣಾಮಗಳಿಂದ ಹೊರತಾಗಿಲ್ಲ. ಕೆಲವು ಅಡ್ಡ ಪರಿಣಾಮಗಳು ಪ್ರಬಲವಾಗಿವೆ. ಇವುಗಳಲ್ಲಿ ಪ್ರಮುಖವಾದ ಅಡ್ಡ ಪರಿಣಾಮ ಎಂದರೆ ಇದು ಸಂತಾನೋತ್ಪತ್ತಿ ವ್ಯವಸ್ಥೆ ಮತ್ತು ಎಂಡೋಕ್ರೈನ್ ಅಥವಾ ಅಂತಃಸ್ರಾವಕ ಶಕ್ತಿಯ ಮೇಲೆ ಪ್ರಭಾವ ಬೀರುವ ಮೂಲಕ ರೋಗಿಯಲ್ಲಿ ಮುಂದಿನ ದಿನಗಳಲ್ಲಿ ಫಲವತ್ತತೆಯನ್ನು ಕುಂದಿಸಲು ಕಾರಣವಾಗಬಹುದಾಗಿದೆ.
ಒಂದು ವರದಿಯ ಪ್ರಕಾರ, 15 ರಿಂದ 39 ವರ್ಷ ವಯಸ್ಸಿನ ಸುಮಾರು 1.55 ಕೋಟಿಯಷ್ಟು ಯುವ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಮುಖರಾದ ಬಳಿಕ ಇವರಲ್ಲಿ ಹೆಚ್ಚಿನವರಿಗೆ ಫಲವತ್ತತೆಯ ಕೊರತೆ ಇರುವುದು ಕಂಡುಬಂದಿದೆ. ಈ ವ್ಯಕ್ತಿಗಳಿಗೂ ತಮ್ಮ ಸಂತಾನ ಇರಬೇಕೆಂಬ ಬಯಕೆ ಇದ್ದರೂ ಕ್ಯಾನ್ಸರ್ ಚಿಕಿತ್ಸೆಯ ಪರಿಣಾಮವಾಗಿ ಸಂತಾನೋತ್ಪತ್ತಿ ವ್ಯವಸ್ಥೆ ಬಾಧಿತವಾಗಿರುವ ಕಾರಣ ಇವರು ಈ ಬಗ್ಗೆ ಯೋಚಿಸುವಂತಾಗಿದೆ.
ಇಂದಿನ ಲೇಖನದಲ್ಲಿ ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು ಕ್ಯಾನ್ಸರ್ ಚಿಕಿತ್ಸೆಯ ಬಳಿಕ ಫಲವತ್ತತೆಯ ಮೇಲೆ ಏನು ಪರಿಣಾಮವಾಗುತ್ತದೆ ಎಂಬುದನ್ನು ಅರಿಯಬಹುದಾಗಿದೆ:

ಮಹಿಳೆಯರಲ್ಲಿ ಕ್ಯಾನ್ಸರ್ ನಿಂದ ಉಂಟಾಗಿರುವ ಫಲವತ್ತತೆಯ ಸಮಸ್ಯೆ
ಸಾಮಾನ್ಯವಾಗಿ ಮಹಿಳಾ ಕ್ಯಾನ್ಸರ್ ರೋಗಿಗಳು ಚಿಕಿತ್ಸೆಯ ಬಳಿಕ ಗುಣಮುಖರಾಗಿ ಮನೆಗೆ ಹಿಂದಿರುಗಿದರೂ ಇವರಲ್ಲಿ ಫಲವತ್ತತೆಯ ಕೊರತೆ ಪ್ರಮುಖವಾಗಿ ಕಾಣುತ್ತದೆ. ಚಿಕಿತ್ಸೆಯ ಸಮಯದಲ್ಲಿ ಅಂಡಾಶಯಗಳ ಮೇಲೆ ಎದುರಾದ ಪ್ರಭಾವದಿಂದ ಆರೋಗ್ಯಕರ ಅಂಡಾಣುಗಳ ಉತ್ಪತ್ತಿಯಾಗದೇ ಇರುವುದು ಅಥವಾ ಗರ್ಭಾಶಯ ಹಾಗೂ ಇತರ ಸಂಬಂಧಿತ ಅಂಗಗಳಿಗೆ ಯಾವುದೋ ಹಾನಿ ಎದುರಾಗಿರುವ ಸಾಧ್ಯತೆಗಳು ಇರುತ್ತವೆ. ಆದರೂ, ಮಹಿಳೆಯರಲ್ಲಿ ಫಲವತ್ತತೆಯ ಸಾಮರ್ಥ್ಯ ಉಳಿಸಿಕೊಳ್ಳಬೇಕಾದರೆ ಕೆಲವು ಸಂಗತಿಗಳನ್ನು ಪರಿಗಣಿಸಬೇಕಾಗುತ್ತದೆ. ಇವೆಂದರೆ:
- ಒಂದು ವೇಳೆ ಕ್ಯಾನ್ಸರ್ ಎದುರಾಗಿರುವ ಗರ್ಭಕೋಶಕ್ಕೆ ಸಂಬಂಧಿಸಿ ಅಂಗದ ಇನ್ನೊಂದು ಭಾಗದಲ್ಲಿಯೂ ಬೆಳೆಯಲು ಪ್ರಾರಂಭವಾಗುವ ಸಂಭವ ಇದ್ದರೆ (metastasize)
- ಒಂದು ವೇಳೆ ಕ್ಯಾನ್ಸರ್ ಬೆಳೆಯುತ್ತಿರುವ ವೇಗಕ್ಕೆ ಅನುಗುಣವಾದ ಚಿಕಿತ್ಸೆ ಲಭ್ಯವಿಲ್ಲದಿದ್ದರೆ
- ಒಂದು ವೇಳೆ ಮಹಿಳೆಯ ವಯಸ್ಸು ನಲವತ್ತಕ್ಕೂ ಮೀರಿದ್ದರೆ ಚಿಕಿತ್ಸೆಯ ಯಶಸ್ಸು ಸಿಗುವ ಸಾಧ್ಯತೆ ಕಡಿಮೆ ಇರುತ್ತದೆ
- ರೋಗ ಆವರಿಸಿರುವ ಮಹಿಳೆಗೆ ಈಗಾಗಲೇ ಮಗು ಅಥವಾ ಮಕ್ಕಳಿದ್ದು ಫಲವತ್ತತೆಯನ್ನು ಉಳಿಸಿಕೊಳ್ಳುವ ಅವಶ್ಯಕತೆ ಮುಖ್ಯವಾಗಿ ತೋರದಿದ್ದರೆ
- ಕ್ಯಾನ್ಸರ್ ಈಗ ಗುಣಮಖವಾಗಿದ್ದರೂ ಭವಿಷ್ಯದಲ್ಲಿ ಮತ್ತೊಮ್ಮೆ ಎದುರಾಗುವ ಸಾಧ್ಯತೆ ಇದೆ
- ಹುಟ್ಟಲಿರುವ ಮಗುವಿಗೂ ಕ್ಯಾನ್ಸರ್ ಎದುರಾಗುವ ಸಾಧ್ಯತೆ ಇರುತ್ತದೆ
- ಕ್ಯಾನ್ಸರ್ ಚಿಕಿತ್ಸೆ ಫಲಕಾರಿಯಾಗುತ್ತದೆಯೋ ಇಲ್ಲವೋ ಎಂಬುದು ಅನಿಶ್ಚಿತ. ಕೆಲವೊಮ್ಮೆ ಸಾವು ಸಹಾ ಎದುರಾಗಬಹುದು. ಹೀಗಾದರೆ ಈ ವ್ಯಕ್ತಿಯ ಸಂಗಾತಿ ಒಂಟಿಯಾಗಿ ತಮ್ಮ ಸಂತಾನವನ್ನು ಸಲಹುವ ಜವಾಬ್ದಾರಿಯನ್ನು ಎತ್ತಿಕೊಳ್ಳಬೇಕಾಗುತ್ತದೆ.
ಸಾಮಾನ್ಯವಾಗಿ ಅವಿವಾಹಿತ ಅಥವಾ ನವವಿವಾಹಿತ ಮಹಿಳೆಯರಿಗೆ ಕ್ಯಾನ್ಸರ್ ಎದುರಾದರೆ ತಮ್ಮ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಸೂಕ್ತ ವಿಧಾನ ಮತ್ತು ಆಯ್ಕೆಗಳ ಬಗ್ಗೆ ವೈದ್ಯರಲ್ಲಿ ಚರ್ಚಿಸುವ ಅವಕಾಶವಿದೆ ಹಾಗೂ ಚಿಕಿತ್ಸೆಗೂ ಮುನ್ನ ಯಾವ ಕ್ರಮಗಳನ್ನು ಕೈಗೊಂಡರೆ ಅತಿ ಹೆಚ್ಚು ಸೂಕ್ತ ಎಂಬುದನ್ನು ವೈದ್ಯರು ಸೂಚಿಸುತ್ತಾರೆ.

ಪುರುಷರಲ್ಲಿ ಕ್ಯಾನ್ಸರ್ ನಿಂದ ಉಂಟಾಗಿರುವ ಫಲವತ್ತತೆಯ ಸಮಸ್ಯೆ
ಕ್ಯಾನ್ಸರ್ ಎದುರಾಗಿರುವ ಪುರುಷರಲ್ಲಿ ಚಿಕಿತ್ಸೆಯ ಪ್ರಭಾವದಿಂದ ಫಲವತ್ತತೆಯ ಸಮಸ್ಯೆ ತಾತ್ಕಾಲಿಕವಾಗಿ ಎದುರಾಗಬಹುದು ಅಥವಾ ಶಾಶ್ವತವಾಗಿಯೂ ಇರಬಹುದು. ಪುರುಷರಲ್ಲಿ ಈ ತೊಂದರೆ ಎಂಡೋಕ್ರೈನ್ ಅಥವಾ ಅಂತಃಸ್ರಾವಕ ಶಕ್ತಿಯ ಅಂಗಗಳಾದ ವೃಷಣ, ಅಡ್ರಿನಲ್ ಗ್ರಂಥಿ ಮತ್ತು ಥೈರಾಯ್ಡ್ ಗ್ರಂಥಿಯ ಮೇಲೆ ಆಗಿರುವ ಪರಿಣಾಮಗಳಿಂದ ಎದುರಾಗಿರಬಹುದು. ಅಲ್ಲದೇ ಎಂಡೋಕ್ರೈನ್ ಅಂಗಗಳನ್ನು ನಿಯಂತ್ರಿಸುವ ಮೆದುಳಿನ ಕೆಲವು ಭಾಗಗಳ ಮೇಲೆ ಎದುರಾದ ಪ್ರಭಾವದಿಂದಲೂ ಫಲವತ್ತತೆ ಕುಸಿಯುವ ಸಾಧ್ಯತೆ ಇದೆ.
ಮೇಲೆ ವಿವರಿಸಿದ ಚಿಕಿತ್ಸಾ ವಿಧಾನಗಳ ಪರಿಣಾಮದಿಂದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯಲ್ಲಿಯೂ ಭಾರೀ ಇಳಿಕೆ ಕಂಡುಬರಬಹುದು. ಅಲ್ಲದೇ ಮೆದುಳಿನ ಮೇಲೆ ಈ ಚಿಕಿತ್ಸೆಗಳು ಪ್ರಭಾವ ಬೀರುವ ಕಾರಣ ವೃಷಣ ಮತ್ತು ಇತರ ಸಂತಾನೋತ್ಪತ್ತಿ ಅಂಗಗಳ ನಿರ್ವಹಣೆಗೆ ಅಗತ್ಯವಾಗಿರುವ ನ್ಯೂರಾನುಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣದಿಂದಲೂ ಫಲವತ್ತಗೆ ಬಾಧೆಗೊಳಗಾಬಹುದು.
ಫಲವತ್ತತೆಯ ಮೇಲೆ ಪ್ರಭಾವ ಬೀರುವ ಚಿಕಿತ್ಸಾ ವಿಧಾನಗಳು
ಚಿಕಿತ್ಸೆಗೂ ಮುನ್ನವೇ ಇದರ ಅಡ್ಡ ಪರಿಣಾಮಗಳನ್ನು ಅರಿತಿರುವುದು ತುಂಬಾ ಮುಖ್ಯವಾಗಿದೆ. ಇದರಿಂದ ಯಾವ ಪ್ರಕಾರದ ಚಿಕಿತ್ಸೆ ಮತ್ತು ಎಷ್ಟು ಅವಧಿಗೆ ನೀಡಲಾಗುತ್ತದೆ ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಫಲವತ್ತತೆಯ ಮೇಲೆ ನೇರವಾದ ಪರಿಣಾಮ ಬೀರುವ ಚಿಕಿತ್ಸೆಗಳೆಂದರೆ:

ಖೀಮೋಥೆರಪಿ
ಈ ಚಿಕಿತ್ಸೆಯಲ್ಲಿ ಬಳಸಲಾಗುವ ರಾಸಾಯನಿಕಗಳು ವೀರ್ಯಾಣುಗಳು ಮತ್ತು ಅಂಡಾಣುಗಳನ್ನು ಘಾಸಿಗೊಳಿಸುತ್ತವೆ ಹಾಗೂ ಜನನಾಂಗಗಳ ಮೇಲೂ ಪ್ರಭಾವ ಬೀರುತ್ತವೆ. ಆದರೆ ಮೂವತ್ತೈದು ವರ್ಷ ವಯಸ್ಸಿಗೂ ಕಿರಿಯ ಮಹಿಳೆಯರು ತಮ್ಮ ಅಂಡಾಣುಗಳನ್ನು ಚಿಕಿತ್ಸೆಗೂ ಮೊದಲು ಸುರಕ್ಷಿತವಾಗಿ ಸಂಗ್ರಹಿಸಿಟ್ಟಿದ್ದರೆ ಇವರು ಚಿಕಿತ್ಸೆಯಿಂದ ಗುಣಮುಖರಾದ ಬಳಿಕ ಇವುಗಳಿಂದ ಮತ್ತೊಮ್ಮೆ ಗರ್ಭಧರಿಸಲು ಸಾಧ್ಯವಾಗುತ್ತದೆ. ಪುರುಷರೂ ತಮ್ಮ ವೀರ್ಯಾಣುಗಳನ್ನು ಸಂಗ್ರಹಿಸಿ ಕಾಪಾಡಿಕೊಂಡಿದ್ದರೆ ಚಿಕಿತ್ಸೆಯಿಂದ ಗುಣಮುಖರಾದ ಬಳಿಕ ತಮ್ಮ ಆರೋಗ್ಯವಂತ ಸಂಗಾತಿಯ ನೆರವಿನಿಂದ ಈ ವೀರ್ಯಾಣುಗಳಿಂದ ಆರೋಗ್ಯವಂತ ಸಂತಾನವನ್ನು ಪಡೆಯಬಹುದು.

ಟಾರ್ಗೆಟೆಡ್ ಕ್ಯಾನ್ಸರ್ ಥೆರಪಿ
ಹೆಸರೇ ಸೂಚಿಸುವಂತೆ ಇದು ನಿರ್ದಿಷ್ಟ ಕ್ಯಾನ್ಸರ್ ಪೀಡಿತ ಅಂಗಕ್ಕೆ ಅನ್ವಯವಾಗುವಂತೆ ನಿರ್ದೇಶಿಸಲಾಗಿರುವ ಚಿಕಿತ್ಸೆಯಾಗಿದ್ದು ಅಧಿಕ ಶಕ್ತಿಯ ಕಿರಣಗಳಿಂದ ಕ್ಯಾನ್ಸರ್ ಪೀಡಿತ ಜೀವಕೋಶಗಳನ್ನು ಕೊಲ್ಲಲಾಗುತ್ತದೆ. ಈ ಜೀವಕೋಶಗಳ ಹುಟ್ಟುವಿಕೆ, ಬೆಳವಣಿಗೆ ಮತ್ತು ಸಮೃದ್ದಿಯಾಗುವಿಕೆಗೆ ನೆರವಾಗುವ ವಂಶತಳಿಯ ಮೇಲೆ ಈ ಕಿರಣಗಳು ಧಾಳಿ ಎಸಗುತ್ತವೆ ಹಾಗೂ ಈ ಜೀವಕೋಶಗಳು ದೇಹಯ ಯಾವುದೇ ಭಾಗಕ್ಕೆ ಆವರಿಸದಂತೆ ತಡೆಯುತ್ತವೆ.

ಶಸ್ತ್ರಕ್ರಿಯೆ
ಒಂದು ವೇಳೆ ಸಂತಾನೋತ್ಪತ್ತಿಗೆ ಸಂಬಂಧಿಸಿದ ಯಾವುದೋ ಅಂಗಕ್ಕೆ ಕ್ಯಾನ್ಸರ್ ಎದುರಾದರೆ, ಉದಾಹರಣೆಗೆ ಪ್ರಾಸ್ಟೇಟ್, ಅಂಡಾಶಯ ಅಥವಾ ವೃಷಣಗಳು, ಇದು ಎಷ್ಟು ಮಟ್ಟಿಗೆ ಆವರಿಸಿದೆ ಎಂದು ತಜ್ಞ ವೈದ್ಯರು ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕವೇ ಕ್ಯಾನ್ಸರ್ ಗೆ ಒಳಗಾದ ಭಾಗವನ್ನು ಶಸ್ತ್ರಕ್ರಿಯೆಯ ಮೂಲಕ ನಿವಾರಿಸಲು ನಿರ್ಧರಿಸುತ್ತಾರೆ. ಈ ಚಿಕಿತ್ಸೆಯಿಂದ ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಶಾಶ್ವತ ನಪುಂಸಕತ್ವ ಎದುರಾಗಬಹುದು.

ಕ್ಯಾನ್ಸರ್ ಚಿಕಿತ್ಸೆಯ ಅವಧಿಯಲ್ಲಿ ಮಹಿಳೆಯರ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು ಹೇಗೆ?
ಹೆಣ್ಣು ಮಗು ಹುಟ್ಟಿದಾಗಲೇ ಆಕೆಯ ಅಂಡಾಶಯದಲ್ಲಿ ನಿರ್ದಿಷ್ಟ ಸಂಖ್ಯೆಯ ಅಂಡಾಣುಗಳಿರುತ್ತವೆ. ಪ್ರಾಯಕ್ಕೆ ಬಂದ ಬಳಿಕ ತಿಂಗಳಿಗೊಂದರಂತೆ ಈ ಅಂಡಾಣುಗಳುಗಳು ಖಾಲಿಯಾಗುತ್ತಾ ಹೋಗುತ್ತವೆ ಹಾಗೂ ಎಲ್ಲಾ ಅಂಡಾಣುಗಳು ಖಾಲಿಯಾದ ಬಳಿಕ ರಜೋನಿವೃತ್ತಿ ಎದುರಾಗುತ್ತದೆ. ಒಂದು ವೇಳೆ ರಜೋನಿವೃತ್ತಿಗೂ ಮೊದಲೇ ಕ್ಯಾನ್ಸರ್ ಆವರಿಸಿದರೆ ಕ್ಯಾನ್ಸರ್ ಚಿಕಿತ್ಸೆಯ ಪರಿಣಾಮದಿಂದ ಅಂಡಾಣುಗಳ ಸಂಖ್ಯೆಯ ಮೇಲೆ ಪ್ರಭಾವ ಬೀರಿ ಇವುಗಳ ಸಂಖ್ಯೆ ಕಡಿಮೆಯಾಗಬಹುದು ಹಾಗೂ ಈ ಮಹಿಳೆ ಗರ್ಭ ಧರಿಸಲು ಅತಿ ಕಷ್ಟಕರವಾಗಬಹುದು. ಅಂಡಾಣುಗಳ ಸಂಖ್ಯೆ ಇಳಿಮುಖವಾದಷ್ಟೂ ರಜೋನಿವೃತ್ತಿ ಎದುರಾಗುವ ವಯಸ್ಸೂ ಬೇಗನೇ ಬರುತ್ತದೆ. ಇದೇ ಕಾರಣದಿಂದ ಕ್ಯಾನ್ಸರ್ ಎದುರಾಗಿರುವ ಮಹಿಳೆಯರು ಚಿಕಿತ್ಸೆಗೂ ಮುನ್ನವೇ ತಮ್ಮ ಆರೋಗ್ಯಕರ ಅಂಡಾಣುಗಳನ್ನು ಸೂಕ್ತ ಕ್ರಮದಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು. ಚಿಕಿತ್ಸೆಯ ಬಳಿಕ ಫಲವತ್ತತೆ ಇಲ್ಲವಾದರೆ ಈ ಅಂಡಾಣುಗಳು ಅಪಾರ ಮಹತ್ವ ಪಡೆಯುತ್ತವೆ.

ಅಂಡಾಣುಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ವಿಧಾನಗಳು ಇಂತಿವೆ
ದಾನಿಯ ಅಂಡಾಣುಗಳು: ಒಂದು ವೇಳೆ ಮಹಿಳೆ ತನ್ನ ಅಂಡಾಣುಗಳನ್ನು ಚಿಕಿತ್ಸೆಗೂ ಮುನ್ನ ಸಂಗ್ರಹಿಸಿಟ್ಟುಕೊಂಡಿರದೇ ಇದ್ದಾಗ ಮತ್ತು ಚಿಕಿತ್ಸೆಯ ಬಳಿಕ ಆಕೆಯಲ್ಲಿ ಆರೋಗ್ಯವಂತ ಅಂಡಾಣುಗಳು ಇಲ್ಲದ ಸಂದರ್ಭ ಎದುರಾಗಿದ್ದರೆ ಹಾಗೂ ಆಕೆ ತನ್ನದೇ ಅಂಡಾಣು ಇಲ್ಲದಿದ್ದರೂ ದಾನಿಯಿಂದ ಪಡೆದ ಅಂಡಾಣುವಿನ ಮೂಲಕ ಗರ್ಭ ಧರಿಸಲು ಸಮರ್ಥಳಿದ್ದರೆ ದಾನಿಯಿಂದ ಅಂಡಾಣುಗಳನ್ನು ಆಕೆ ಪಡೆಯಬಹುದು. ನಂತರ ಈ ಅಂಡಾಣುವನ್ನು ಪತಿಯ ವೀರ್ಯಾಣುಗಳೊಂದಿಗೆ ಪ್ರಯೋಗಾಲಯದಲ್ಲಿ ಮಿಲನಗೊಳಿಸಿ ಫಲಿತಗೊಂಡ ಬಳಿಕ ಈ ಫಲಿತ ಅಂಡಾಣುವನ್ನು ಮಹಿಳೆಯ ಗರ್ಭಾಶಯದಲ್ಲಿ ಕೃತಕವಾಗಿ ಸ್ಥಾಪಿಸಲಾಗುತ್ತದೆ.

ಐ ವಿ ಎಫ್ (In vitro fertilization (IVF)
ಈ ವಿಧಾನದಲ್ಲಿ ಮಹಿಳೆಯ ಗರ್ಭಾಶಯವನ್ನು ಪ್ರಚೋದಿಸುವ ಒಂದು ವಿಶಿಷ್ಟ ಔಷಧಿಯನ್ನು ಮಹಿಳೆಗೆ ನೀಡಲಾಗುತ್ತದೆ ಹಾಗೂ ಅಂಡಾಶಯದಲ್ಲಿ ಅಂಡಾಣು ಉತ್ಪತ್ತಿಯಾಗುವಂತೆ ಮಾಡಲಾಗುತ್ತದೆ. ಬಳಿಕ ಈ ಅಂಡಾಣುವನ್ನು ಪತಿಯ ವೀರ್ಯಾಣುಗಳೊಂದಿಗೆ ಪ್ರಯೋಗಾಲಯದಲ್ಲಿ ಮಿಲನಗೊಳಿಸಲಾಗುತ್ತದೆ. ಫಲಿತ ಅಂಡಾಣುವನ್ನು ಮಹಿಳೆಯ ಗರ್ಭದಲ್ಲಿ ಸ್ಥಾಪಿಸಿ ಗರ್ಭಧಾರಣೆ ಮಾಡಲಾಗುತ್ತದೆ.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪುರುಷರ ಫಲವತ್ತತೆಯನ್ನು ಉಳಿಸಿಕೊಳ್ಳುವ ಮಾರ್ಗಗಳು
ಆಸ್ಕೋ ( American Society of Clinical Oncology (ASCO) ಸಂಸ್ಥೆಯ ಪ್ರಕಾರ, ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುವ ಯಾವುದೇ ಪುರುಷರು ಚಿಕಿತ್ಸೆಗೂ ಮುನ್ನ ತಮ್ಮ ಫಲವತ್ತತೆಯ ಬಗ್ಗೆ ತಮ್ಮ ವೈದ್ಯರಲ್ಲಿ ಚರ್ಚಿಸಿ ತಮ್ಮ ವೀರ್ಯಾಣುಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ರೋಗಿಯ ವಯಸ್ಸು, ಸಂಬಂಧಗಳ ಉಳಿಯುವಿಕೆ ಹಾಗೂ ಭವಿಷ್ಯದಲ್ಲಿ ತನ್ನದೇ ಮಗುವನ್ನು ಹೊಂದುವ ಬಗ್ಗೆ ಆತನಿಗಿರುವ ಕಾಳಜಿಯನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ಪುರುಷರು ತಮ್ಮ ವೀರ್ಯಾಣುಗಳನ್ನು ಕಾಪಾಡಿಕೊಳ್ಳಲು ಲಭ್ಯವಿರುವ ವಿಧಾನಗಳೆಂದರೆ:
ವೀರ್ಯಾಣು ಬ್ಯಾಂಕ್ (sperm banking)
ಇದೊಂದು ಶೈತ್ಯಾಗಾರವಾಗಿದ್ದು ಇಲ್ಲಿ ಪುರುಷರ ವೀರ್ಯಾಣುಗಳನ್ನು ಶೀತಲೀಕರಿಸಿದ ಸ್ಥಿತಿಯಲ್ಲಿ ಸಂಗ್ರಹಿಸಿಟ್ಟು ಮುಂದೆ ಅವಶ್ಯಕತೆ ಇದ್ದಾಗ ಪಡೆದುಕೊಳ್ಳಬಹುದು ಹಾಗೂ ಐವಿಎಫ್ (in Vitro fertilization )ಹಾಗೂ ಐ ಯು ಐ (intrauterine insemination) ವಿಧಾನಗಳಿಂದ ಸಂತಾನವನ್ನು ಪಡೆಯಬಹುದು.
Testicular-tissue freezing: (ವೃಷಣಗಳ ಅಂಗಾಶಗಳ ಶೀತಲೀಕರಣ): ಒಂದು ವೇಳೆ ಕ್ಯಾನ್ಸರ್ ಚಿಕ್ಕ ಬಾಲಕರಲ್ಲಿ ಕಾಣಿಸಿಕೊಂಡಿದ್ದು ಇವರ ವೃಷಣಗಳು ಇನ್ನೂ ವೀರ್ಯಾಣುಗಳನ್ನು ಉತ್ಪತ್ತಿ ಮಾಡುವಷ್ಟು ಬೆಳೆದಿರದೇ ಇದ್ದಾಗ ಈ ವಿಧಾನವನ್ನು ಅನುಸರಿಸಲಾಗುತ್ತದೆ. ವೃಷಣದಲ್ಲಿ ವೀರ್ಯಾಣುಗಳನ್ನು ಉತ್ಪಾದಿಸುವ ಅಂಗಾಂಶದ ಕೊಂಚ ಭಾಗವನ್ನು ಬಹಳ ಎಚ್ಚರಿಕೆಯಿಂದ ಸಂಗ್ರಹಿಸಲಾಗುತ್ತದೆ ಹಾಗೂ ಶೀತಲೀಕರಿ ಸಂಗ್ರಹಿಸಿಡಲಾಗುತ್ತದೆ. ಮುಂದೆ ಬಾಲಕ ಚಿಕಿತ್ಸೆಯಿಂದ ಗುಣಮುಖನಾಗಿ ಪ್ರಾಪ್ತ ವಯಸ್ಸಿಗೆ ಬಂದಾದ ಈ ಅಂಗಾಂಶವನ್ನು ಮತ್ತೊಮ್ಮೆ ಕಸಿ ಮಾಡಲಾಗುತ್ತದೆ.
Shielding testicles (ವೃಷಣಗಳಿಗೆ ರಕ್ಷಾ ಕವಚ)
ಈ ವಿಧಾನದಲ್ಲಿ ಶಸ್ತ್ರ ಚಿಕಿತ್ಸೆಗೂ ಮುನ್ನ ಸೂಕ್ತ ರಕ್ಷಣೆ ಒದಗಿಸುವ ಕವಚಗೊಂದನ್ನು ವೃಷಣಗಳು ಆವರಿಸುವಂತೆ ತೊಡಿಸಲಾಗುತ್ತದೆ. ಅಥವಾ ಇಡಿಯ ಸೊಂಟದ ಭಾಗವಷ್ಟೂ ವಿಶೇಷವಾಗಿ ಜನನಾಂಗಗಳು ಪರಿಪೂರ್ಣವಾಗಿ ಮುಚ್ಚುವಂತೆ ಹಾಗೂ ಈ ಮೂಲಕ ಚಿಕಿತ್ಸೆಯಲ್ಲಿ ಬಳಸಲಾದ ವಿಕಿರಣಗಳು ತಗಲದಂತೆ ರಕ್ಷಿಸಲಾಗುತ್ತದೆ.
ಆದರೆ ಈ ವಿಧಾನದಲ್ಲಿಯೂ ಕೆಲವು ಅಡ್ಡ ಪರಿಣಾಮಗಳಿವೆ



Click it and Unblock the Notifications











