Latest Updates
-
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ!
ಮೊಸರೆಂಬ ಅಮೃತದಲ್ಲಿದೆ ಆರೋಗ್ಯಕಾರಿ 11 ಅಂಶಗಳು
ಮೊಸರು ಆರೋಗ್ಯಕ್ಕೆ ಅತ್ಯುತ್ತಮ ಎಂಬ ವಿಷಯದಲ್ಲಿ ಎರಡು ಮಾತಿಲ್ಲ. ಬಡ ಬಲ್ಲಿದರಿಂದ ಹಿಡಿದು ರಾಜ ಮಹಾರಾಜರು ಉಣ್ಣುವ ಊಟದ ಒಂದು ಭಾಗ. ಭಾರತದಲ್ಲಂತೂ ಮೊಸರು ಮಜ್ಜಿಗೆ ಇಲ್ಲದ ಊಟ ಇಲ್ಲವೇ ಇಲ್ಲವೆನ್ನುವಷ್ಟು ವಿರಳ. ಇದಕ್ಕೆ ಪ್ರಮುಖ ಕಾರಣವೆಂದರೆ ನಮ್ಮ ಹೊಟ್ಟೆ ಮಾಡಬೇಕಾದ ಜೀರ್ಣಕ್ರಿಯೆಯಲ್ಲಿ ಬಹಳಷ್ಟನ್ನು ಮೊಸರಿನಲ್ಲಿರುವ lactobacillus ಎಂಬ ಬ್ಯಾಕ್ಟೀರಿಯಾ ಈಗಾಗಲೇ ಮಾಡಿಬಿಟ್ಟಿರುವುದರಿಂದ ಅತ್ಯಂತ ಸುಲಭವಾಗಿ ಜೀರ್ಣವಾಗುತ್ತದೆ.
ಯಾವುದೇ ಆಹಾರವಾದರೂ ಕೆಲವರಿಗೆ ಅಲರ್ಜಿ ತರಿಸುವಂತೆ ಮೊಸರು ಕೂಡಾ ಕೆಲವರಿಗೆ ಅಲರ್ಜಿ ತರಿಸುತ್ತದೆ. ಆದರೆ ಈ ಪ್ರಮಾಣ ಅತ್ಯಂತ ಕಡಿಮೆ ಇರುವುದರಿಂದ ವಿಶ್ವದ ಬಹುತೇಕ ಜನರು ಸೇವಿಸಬಹುದಾದ ಅದ್ಭುತ ಆಹಾರಗಳಲ್ಲಿ ಮೊಸರು ಮೇಲಿನ ಸ್ಥಾನದಲ್ಲಿ ನಿಲ್ಲುತ್ತದೆ. ಮೊಸರನ್ನು ಕೇವಲ ಆಹಾರವಾಗಿ ಅಲ್ಲದೇ ಔಷಧಿ ಮತ್ತು ಸೌಂದರ್ಯವರ್ಧಕವಾಗಿಯೂ ಉಪಯೋಗಿಸಲಾಗುತ್ತದೆ.
ಹಸುವಿನ ಮತ್ತು ಎಮ್ಮೆಯ ಹಾಲಿನ ಮೊಸರು ಲಭ್ಯವಿದ್ದರೂ ಗುಣದಲ್ಲಿ ಕೊಂಚಮಾತ್ರ ವ್ಯತ್ಯಾಸವಿದೆ. ಎಮ್ಮೆಹಾಲಿನ ಮೊಸರು ಹೆಚ್ಚು ಗಾಢವಾಗಿದ್ದು ಪೌಷ್ಟಿಕಾಂಶಗಳ ಪ್ರಮಾಣವೂ ಹೆಚ್ಚಿರುತ್ತದೆ. ಇದು ತೂಕ ಹೆಚ್ಚಿಸಲು ಪೂರಕವಾದುದರಿಂದ ಸ್ಥೂಲಕಾಯದವರಿಗೆ ಮತ್ತು ತೂಕ ಇಳಿಸುವವರಿಗೆ ಸಲ್ಲದು. ಹಸುವಿನ ಹಾಲಿನ ಮೊಸರು ಕೊಂಚ ಸೌಮ್ಯವಾಗಿದ್ದು ಸಮಪ್ರಮಾಣದ ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ. ಇದೇ ಕಾರಣದಿಂದ ಬಹುತೇಕ ಎಲ್ಲಾ ಅಗತ್ಯಗಳಿಗೆ ಹಸುವಿನ ಹಾಲು ಅಮೃತಸಮಾನವಾಗಿದೆ. ವೈದ್ಯ ಲೋಕವನ್ನು ಅಚ್ಚರಿಗೊಳಿಸುವ ಹಳ್ಳಿ ಮದ್ದಿನ ಕಮಾಲು
ಇನ್ನೊಂದು ಉತ್ತಮ ಅಂಶವೆಂದರೆ ಕುದಿಸಿದರೂ ಅಥವಾ ವಿವಿಧ ಖಾದ್ಯಗಳಲ್ಲಿ ಉಪಯೋಗಿಸುವಾಗ ಬಿಸಿಯಾದರೂ ಇದರ ಗುಣಗಳು ಕಡಿಮೆಯಾಗುವುದಿಲ್ಲ, ರುಚಿಯೂ ಕೆಡುವುದಿಲ್ಲ. ಇದೇ ಕಾರಣದಿಂದಾಗಿ ಮೊಸರು ಗೃಹಿಣಿಯರ ಅಚ್ಚುಮೆಚ್ಚಿನ ಆಹಾರವಾಗಿದೆ. ಇದರ ಅತ್ಯುತ್ತಮ ಗುಣಗಳಲ್ಲಿ ಪ್ರಮುಖವಾದ ಹನ್ನೊಂದು ಗುಣಗಳನ್ನು ಅವಲೋಕಿಸೋಣ:

ಜೀರ್ಣಕ್ರಿಯೆಗೆ ಸಹಕರಿಸುತ್ತದೆ
ಮೊಸರು ಈ ಮೊದಲೇ ಅರ್ಧಕ್ಕಿಂತ ಹೆಚ್ಚು ಜೀರ್ಣವಾಗಿರುವುದರಿಂದ ಜಠರದಲ್ಲಿಯೇ ಸಂಪೂರ್ಣವಾಗಿ ಜೀರ್ಣಗೊಳ್ಳುತ್ತದೆ. ಇದರಿಂದ ಜಠರರಸ ಮತ್ತು ಕರುಳಿನ ರಸಗಳು ಇತರ ಆಹಾರಗಳನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮರ್ಥವಾಗುತ್ತವೆ. ಇದರಿಂದಾಗಿ ಒಟ್ಟಾರೆ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ. ಭಾರತೀಯ ಅಡುಗೆಗಳಲ್ಲಿ ಸಾಂಬಾರ ಪದಾರ್ಥಗಳ ಉಪಯೋಗ ಹೆಚ್ಚಿರುವುದರಿಂದ ಹಾಗೂ ಈ ಸಾಂಬಾರ ಪದಾರ್ಥಗಳು ಸುಲಭವಾಗಿ ಜೀರ್ಣವಾಗದುದರಿಂದ ಜೊತೆಯಲ್ಲಿ ಮೊಸರು ಸೇವಿಸುವುದು ಅವಶ್ಯವಾಗಿದೆ. ಒಣಮೆಣಸು ಹಾಕಿ ಮಾಡಿದ ಸಾರು, ಮೀನು ಸಾರು, ಕರಿದ ಮೀನು ಮೊದಲಾದವುಗಳನ್ನು ಸೇವಿಸಿದ ಬಳಿಕ ಮೊಸರು ಸೇವಿಸದೇ ಇದ್ದರೆ ಮರುದಿನ ಮಲವಿಸರ್ಜನೆಯ ಸಮಯದಲ್ಲಿ ಉರಿಯುಂಟಾಗುವುದು ಇದೇ ಕಾರಣದಿಂದ. ಬದಲಿಗೆ ಊಟದ ಬಳಿಕ ಮೊಸರನ್ನು ಸೇವಿಸಿದರೆ ಉರಿ ಉಂಟಾಗುವುದಿಲ್ಲ.

ಹೃದಯಕ್ಕೂ ಮೊಸರು ಒಳ್ಳೆಯದು
ಎತ್ತಣ ಮಾಮರ ಎತ್ತಣ ಕೋಗಿಲೆ? ಹೊಟ್ಟೆಗೂ ಹೃದಯಕ್ಕೂ ಏನು ಸಂಬಂಧ? ಇದೆ, ನೇರವಾದ ಸಂಬಂಧ ಇದೆ. ಏಕೆಂದರೆ ಮೊಸರಿನ ನಿಯಮಿತ ಸೇವನೆಯಿಂದ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಉತ್ತಮ ಕೊಲೆಸ್ಟರಾಲ್ ಹೆಚ್ಚಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ಹೃದಯ ಕಡಿಮೆ ಒತ್ತಡದಲ್ಲಿ ರಕ್ತವನ್ನು ದೂಡಿಕೊಟ್ಟರೆ ಸಾಕಾಗುತ್ತದೆ. ಇದರಿಂದ ಹೃದಯದ ಕ್ಷಮತೆ ಹೆಚ್ಚುತ್ತದೆ ಹಾಗೂ ಆಘಾತದ ಅಪಾಯಗಳಿಂದ ಪಾರಾಗುತ್ತದೆ.

ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸುತ್ತದೆ
ಮೊಸರಿನಲ್ಲಿರುವ ಪೋಷಕಾಂಶಗಳು ನಮ್ಮ ದೇಹವನ್ನು ಹೇಗೋ ಸೇರಿಕೊಂಡ ಅತ್ಯಂತ ಸೂಕ್ಷ್ಮ ಕ್ರಿಮಿಗಳನ್ನು ಬಗ್ಗುಬಡಿಯಲು ಸಮರ್ಥವಾಗಿವೆ. ತನ್ಮೂಲಕ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ಹುದುಗು (yeast) ಕ್ರಿಮಿಗಳ ಕಾರಣದಿಂದ ಉಂಟಾಗುವ ಸೋಂಕನ್ನು ಮೊಸರಿನ ನಿಯಮಿತ ಸೇವನೆಯಿಂದ ನಿವಾರಿಸಬಹುದು.

ಉತ್ತಮ ಕ್ಯಾಲ್ಸಿಯಂ ಇರುವ ಕಾರಣ ಮೂಳೆಗಳು ಸದೃಢಗೊಳ್ಳುತ್ತವೆ
ನಮ್ಮ ಮೂಳೆಗಳು ಮತ್ತು ಹಲ್ಲುಗಳಿಗೆ ಕ್ಯಾಲ್ಸಿಯಂ ಮತ್ತು ರಂಜಕ (Phosphorous) ಗಳ ಅಗತ್ಯವಿದೆ. ಮೊಸರಿನಲ್ಲಿ ಈ ಎರಡೂ ಧಾತುಗಳು ಸಿದ್ಧರೂಪದಲ್ಲಿ ಲಭ್ಯವಿರುವುದರಿಂದ ರಕ್ತದ ಮೂಲಕ ಮೂಳೆ ಮತ್ತು ಹಲ್ಲುಗಳು ಸದೃಢವಾಗಲು ಸಹಕರಿಸುತ್ತವೆ. ಒಂದು ವೇಳೆ ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳು ಟೊಳ್ಳಾಗುವ ಮತ್ತು ಗಾಳಿಗುಳ್ಳೆಗಳಿಂದ ತುಂಬಿರುವ (osteoporosis) ತೊಂದರೆ ಎದುರಿಸುತ್ತಿದ್ದರೆ ನಿಯಮಿತವಾಗ ಮೊಸರಿನ ಸೇವನೆಯಿಂದ ಈ ತೊಂದರೆ ನಿವಾರಣೆಯಾಗುತ್ತದೆ.

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ
ಮೊಸರು ಆಹಾರವಾಗಿ ಮಾತ್ರವಲ್ಲದೇ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಮೊಸರಿನೊಂದಿಗೆ ಲಿಂಬೆಹಣ್ಣಿನ ರಸವನ್ನು ಸಮಪ್ರಮಾಣದಲ್ಲಿ ಸೇರಿಸಿ ತೆಳುವಾಗಿ ಚರ್ಮದ ಮೆಲೆ ಹೆಚ್ಚಿ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳುವುದರಿಂದ (ಸೋಪು ಉಪಯೋಗಿಸಬಾರದು) ಚರ್ಮ ಕಾಂತಿಯನ್ನು ಪಡೆಯುತ್ತದೆ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೆರಡು ಬಾರಿಯಂತೆ ಒಂದು ತಿಂಗಳು ನಿರ್ವಹಿಸುವುದರಿಂದ ಗಮನಾರ್ಹ ಬದಲಾವಣೆಯನ್ನು ಪಡೆಯಬಹುದು.

ತಲೆಹೊಟ್ಟು ನಿವಾರಿಸಲು ಸಾಧ್ಯವಾಗುತ್ತದೆ
ಮೊಸರನ್ನು ಬೆರಳ ತುದಿಗಳಲ್ಲಿ ಅದ್ದಿ ತಲೆಹೊಟ್ಟಿರುವ ಕಡೆ ನಯವಾಗಿ ಮಸಾಜ್ ಮಾಡುವುದರಿಂದ ಕ್ರಮೇಣವಾಗಿ ತಲೆಹೊಟ್ಟು ನಿವಾರಣೆಯಾಗುತ್ತದೆ. ವಾಸ್ತವಾಗಿ ತಲೆಹೊಟ್ಟು ಎಂದರೆ ಪಕಳೆ ಎದ್ದಿರುವ ನಮ್ಮ ತಲೆಯ ಚರ್ಮದ ಒಣಭಾಗ. ಇದಕ್ಕೆ ಕೆಲವು ಬೂಸು ಬರಿಸುವ ಕ್ರಿಮಿಗಳು ಕಾರಣ. (fungul infection). ಮೊಸರಿನಲ್ಲಿ ಈ ಕ್ರಿಮಿಗಳನ್ನು ನಿವಾರಿಸಲು ತಕ್ಕನಾದ ಧಾತುಗಳಿರುವುದರಿಂದ ಕ್ರಿಮಿಗಳು ನಾಶವಾಗಿ ಚರ್ಮ ಪಕಳೆಯೇಳುವುದರಿಂದ ಮುಕ್ತಿ ಪಡೆಯುತ್ತದೆ. ಪರಿಣಾಮವಾಗಿ ತಲೆಹೊಟ್ಟು ಮಾಯವಾಗುತ್ತದೆ.

ತೂಕ ಇಳಿಸಲೂ ಸಹಾಯ ಮಾಡುತ್ತದೆ
ಒಂದು ವೇಳೆ ಹಾರ್ಮೋನುಗಳ ವ್ಯತ್ಯಯದಿಂದಾಗಿ ತೂಕ ಒಂದು ವೇಳೆ ಏರಿದ್ದರೆ ಅಂತಹವರಿಗೆ ಮೊಸರು ವರದಾನವಾಗಿದೆ. ಏಕೆಂದರೆ ಇದರಲ್ಲಿರುವ ಪೋಷಕಾಂಶಗಳು ಈ ವ್ಯಾಧಿಗೆ ಕಾರಣವಾದ ಸ್ಟೆರಾಯ್ಡ್ ಆದ ಕಾರ್ಟಿಸೋಲ್‌ನ ಸ್ರವಿಕೆಯನ್ನು ಕಡಿಮೆಗೊಳಿಸುತ್ತದೆ. ಹಾಗಾಗಿ ಈ ತೊಂದರೆಯುಳ್ಳವರು ವೈದ್ಯರ ಸಲಹೆ ಮೇರೆಗೆ ಸೂಕ್ತ ಪ್ರಮಾಣದಲ್ಲಿ ಮೊಸರನ್ನು ಸೇವಿಸುವುದು ವಿಹಿತವಾಗಿದೆ. ಸಾಮಾನ್ಯ ಆರೋಗ್ಯವಂತರಿಗೆ ಮೊಸಲು ತೂಕ ಇಳಿಸಲು ಸಹಕಾರಿಯಾಗಲಾರದು. ಆದರೆ ಇತರ ಆಹಾರಗಳಲ್ಲಿರುವ ಕ್ಯಾಲೋರಿಗಳನ್ನು ತ್ಯಜಿಸುವ ಮೂಲಕ ಮೊಸರನ್ನು ಸೇವಿಸಬಹುದು. ಆದರೆ ಬೆಣ್ಣೆಯನ್ನು ತೆಗೆದ ಬಳಿಕ ಉಳಿಯುವ ಮಜ್ಜಿಗೆ ತೂಕ ಇಳಿಸುವವರಿಗೆ ಹೆಚ್ಚು ಸೂಕ್ತವಾಗಿದೆ.

ಮನದ ದುಗುಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ
ಮನದ ಬೇಗುದಿ, ದುಗುಡ, ಒತ್ತಡಗಳನ್ನು ಕಡಿಮೆಗೊಳಿಸಲು ಮೊಸರು ಅತ್ಯುತ್ತಮವಾಗಿದೆ. ಈ ಬಗ್ಗೆ ಸಂಶೋಧನೆ ನಡೆದ ಬಳಿಕ ಮೊಸರಿನಲ್ಲಿರುವ probiotic bacteria ಎಂಬ ಬ್ಯಾಕ್ಟೀರಿಯಾಗಳು ನಮ್ಮ ನರಮಂಡಲವನ್ನು ಚುರುಕುಗೊಳಿಸಿ ತಲ್ಲಣಗೊಂಡ ಮನವನ್ನು ಶಾಂತಗೊಳಿಸುತ್ತದೆ (anxious state of mind). ಇದೇ ಕಾರಣದಿಂದ ಮೊಸರು ಮತ್ತು ಮಜ್ಜಿಗೆ ಸೇರಿಸಿದ ನೀರು ಕುಡಿದ ಬಳಿಕ ಹೊಟ್ಟೆ ತಂಪಾಗುವ ಮೂಲಕ ಮನ ಉಲ್ಲಸಿತವಾಗುವ ಭಾವನೆ ಉಂಟಾಗುತ್ತದೆ.

ಮೂಲವ್ಯಾಧಿಯಿಂದ ಬಳಲುವವರಿಗೆ ಉತ್ತಮವಾದ ಆಹಾರವಾಗಿದೆ
ಆಹಾರದಲ್ಲಿ ನಾರಿನ ಅಂಶ ಕಡಿಮೆಯಿದ್ದಾಗ ಮಲವಿಸರ್ಜನೆ ಕಷ್ಟಕರವಾಗಿ ಕರುಳು ದೂಡುವ ಒತ್ತಡಕ್ಕೆ ಮಣಿದು ಮಲದ್ವಾರದ ಒಳಗೋಡೆಗಳಲ್ಲಿ ಗಂಟುಗಳುಂಟಾಗುತ್ತವೆ. ಇದನ್ನೇ ಮೂಲವ್ಯಾಧಿ ಎಂದು ಕರೆಯುತ್ತೇವೆ. ಬಳಿಕ ಆಗಮನವಾದ ಯಾವುದೇ ಆಹಾರದ ತ್ಯಾಜ್ಯ ಈ ಗಂಟುಗಳ ಮೇಲೆ ಇನ್ನಷ್ಟು ಒತ್ತಡ ಹೇರುವುದರಿಂದ ಸಹಿಸಲಸಾಧ್ಯವಾದ ನೋವು, ಉರಿಯುಂಟಾಗುತ್ತದೆ. ಇದಕ್ಕೆ ಅತ್ಯಂತ ಸೌಮ್ಯವಾದ ಆಹಾರ, ಸೂಕ್ತ ಔಷಧಿ ಮತ್ತು ಕಾಲಾವಕಾಶದ ಅಗತ್ಯವಿದೆ. ಮೊಸರು ಆಹಾರಗಳಲ್ಲಿಯೇ ಅತ್ಯಂತ ಸೌಮ್ಯವಾದ ಆಹಾರವಾಗಿರುವುದರಿಂದ ಮೂಲವ್ಯಾಧಿಯಿಂದ ಬಳಲುತ್ತಿರುವವರಿಗೆ ಇದಕ್ಕಿಂತ ಒಳ್ಳೆಯ ಆಹಾರ ಇನ್ನೊಂದಿಲ್ಲ. ಮೊಸರು, ಅಕ್ಕಿಯ ಗಂಜಿ ಮತ್ತು ಸ್ವಲ್ಪ ಶುಂಠಿ ಸೇರಿಸಿದ ಊಟ ಉತ್ತಮ ಪರಿಣಾಮವನ್ನು ನೀಡುತ್ತದೆ.

ಬಾಯಿಯ ಸೋಂಕುಗಳನ್ನು ನಿವಾರಿಸುತ್ತದೆ
ಹೊರಗಿನ ವಾತಾವರಣಕ್ಕೆ ಅತಿಹೆಚ್ಚು ಪ್ರಕಟವಾಗುವ ಆರ್ದ್ರ (ಸದಾ ತೇವವಾಗಿರುವ) ಭಾಗವೆಂದರೆ ಬಾಯಿ. ಗಾಳಿಯ ಮತ್ತು ಆಹಾರ ಸೇವನೆಯ ಬಳಿಕ ಹಲ್ಲುಗಳ ಸಂಧಿಯಲ್ಲಿ ಉಳಿಯುವ ಆಹಾರದ ಮೂಲಕ ಆಗಮಿಸುವ ಹಲವು ಬ್ಯಾಕ್ಟೀರಿಯಾಗಳ ಕಾರಣದಿಂದಾಗಿ ಸೋಂಕು ಉಂಟಾಗುವ ಸಾಧ್ಯತೆಗಳಿವೆ. ಈ ಆಹಾರ ಕೊಳೆಯುವುದರಿಂದ ಬಾಯಿಯ ದುರ್ವಾಸನೆ ಉಂಟಾಗುತ್ತದೆ. ಊಟದ ಬಳಿಕ ಕಟ್ಟಕಡೆಯದಾಗಿ ಮೊಸರು (ಹಾಗೂ ಮಜ್ಜಿಗೆ) ಸೇವಿಸುವುದರಿಂದ ಈ ದುರ್ವಾಸನೆ ಬರುವುದಿಲ್ಲ. ಏಕೆಂದರೆ ಇದಕ್ಕೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ಮೊಸರು ಈಗಾಗಲೇ ಜೀರ್ಣಿಸಿಕೊಂಡುಬಿಟ್ಟಿರುತ್ತದೆ.

ಹಸಿವನ್ನು ಹೆಚ್ಚಿಸುತ್ತದೆ
ಮೊಸರಿಗೆ ಕೊಂಚ ಉಪ್ಪು ಅಥವಾ ಸಕ್ಕರೆಯನ್ನು ಮಿಶ್ರಣ ಮಾಡಿ ಸೇವಿಸುವುದರಿಂದ ಹಸಿವು ಕೊಂಚ ಹೆಚ್ಚಾಗುವುದನ್ನು ಗಮನಿಸಲಾಗಿದೆ. ಊಟದಿಂದ ವಿಮುಖರಾದವರಿಗೆ ಮೊದಲು ಮೊಸರನ್ನು ನೀಡಿ ಬಳಿಕ ಊಟಕ್ಕೆ ಕರೆಯುವುದು ಒಳ್ಳೆಯದು.



Click it and Unblock the Notifications











