Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಿಂಡಿ ಎಂಬ ಪದ ತಂದ ಪೇಚಾಟ

ನನ್ನ ಸೋದರ ಮಾವನ ಮಗನಿಗೆ ಆಗತಾನೆ ಮದುವೆಯಾಗಿತ್ತು. ಇವನು ಹುಟ್ಟಿ ಬೆಳಿದಿದ್ದು ಹುಬ್ಬಳ್ಳಿಯಲ್ಲಾದರೂ ಕೆಲಸ ಅರಸಿ ಬಂದು ಬೀಡುಬಿಟ್ಟಿದ್ದು ಬೆಂಗಳೂರಿನಲ್ಲಿ. ಹುಡುಗಿಯೂ ಬೆಳಗಾವಿ ಜಿಲ್ಲೆಯವಳು. ಬೆಳಗಾವಿಯಲ್ಲಿ ಲಗ್ನಶಾಸ್ತ್ರ ಮುಗಿಸಿ ಬೆಂಗಳೂರಿನ ಬಿಡಾರ ಸೇರಿಕೊಂಡಿದ್ದರು. ಹುಡುಗನ ನೆಂಟರು, ಹುಡುಗಿಯರ ಬಂಧುಗಳಿಂದ ಮನೆ ಗಿಜಿಗುಡುತ್ತಿತ್ತು.
ಇದ್ದದ್ದು ಬಾಡಿಗೆ ಮನೆಯಲ್ಲಿ. ಕೆಳಗಡೆ ಓನರು, ಮೇಲ್ಗಡೆ ಟೆನಂಟು. ಮದುವೆಗಂತೂ ಬರಲಾಗಲಿಲ್ಲ ಇಲ್ಲಾದ್ರೂ ಬಂದು ವಿಷ್ ಮಾಡೋಣ ಅಂತ ಓನರ್ತಿ ಏಕಾಂಗಿಯಾಗಿ ಹಾಜರಾದಳು. ಮನೆತುಂಬೆಲ್ಲ ಧಾರವಾಡದ ಕಡೆಗಿನ ಮಾತಿನದ್ದೇ ಕಾರುಬಾರು. ಓನರ್ತಿ ಬಂದಿದ್ದಾಳೆಂದು ಉಪಚರಿಸಿ, ಉಡುಗೊರೆ ಇಸ್ಕೊಂಡು ಏನೋ ಮಾಡಿದ್ದನ್ನು ಆಕೆಗೂ ತಂದುಕೊಟ್ಟರು. ಮಧ್ಯದಲ್ಲಿ ಓನರ್ತಿ ಸುತ್ತಲೆಲ್ಲ ನವದಂಪತಿಗಳ ಬಂಧುಗಳ ಭದ್ರಕೋಟೆ.
ಏನಾದ್ರೂ ಮಾತಾಡಲೇಬೇಕಲ್ಲ, "ಬೆಳಿಗ್ಗೆ ಏನು ತಿಂಡಿ?" ಅಂದಳು ಓನರ್ತಿ.
ಭರ್ತಿಯಾದ ಆಣೆಕಟ್ಟೆಯಿಂದ ರಭಸದಿಂದ ನುಗ್ಗಿದ ಬುಗ್ಗೆಯಂತೆ ಸುತ್ತಲೂ ಕುಳಿತಿದ್ದ ನಾಲ್ಕಾರು ಗಂಟಲುಗಳಿಂದ ನಗೆಯ ಬುಗ್ಗೆ. ನಗೆಯಂದ್ರೆ ಬರೀ ನಗೆಯಲ್ಲ, ಕೆಲವರು ಕಿಸಕ್ ಅಂತ ನಕ್ಕರೆ, ಕೆಲವರು ಬಾಯಿಯನ್ನು ಗಟ್ಟಿಯಾಗಿ ಹಿಡಿದು ಕಟ್ಟೆಯೊಡೆಯದಂತೆ ಶತಪ್ರಯತ್ನ ಮಾಡುತ್ತಿದ್ದರು. ಉಳಿದವರ ಮೊಗದಲ್ಲಿ ಮುಗುಳ್ನಗೆ. ಓನರು ಮಾತ್ರ ಕಕ್ಕಾಬಿಕ್ಕಿ. ಮುಖ ಅವಮಾನದಿಂದ ಕುದಿಯುತ್ತಿತ್ತು. ಆದರೂ ಎದ್ದು ಹೋಗುವಂತಿಲ್ಲ, ತನಗಾದ ಅವಮಾನ ತೋರಿಸಿಕೊಳ್ಳುವಂತಿಲ್ಲ.
ಇದಕ್ಕೆಲ್ಲ ಕಾರಣ 'ತಿಂಡಿ' ಎಂಬ ಸಾಮಾನ್ಯಪದ! ಇದರಲ್ಲಿ ನಗುವಂಥದ್ದೇನಿದೆ? ಬೆಳಿಗ್ಗೆ ಮನೇಲಿ ಇಲ್ಲದಿದ್ದರೆ ಹೊಟೇಲಲ್ಲಿ ತಿಂಡಿ ತಿಂದೇ ತಿಂತೀವಿ. ತಿಂಡಿ ಇಲ್ಲದಿದ್ದರೆ ಬೆಳಿಗ್ಗೆ ಬದುಕಿನ ಬಂಡಿ ಸಾಗುವುದೇ ಇಲ್ಲ ಅಂತನ್ನಬಹುದು. ವಿಷಯ ಏನಪ್ಪಾ ಅಂದ್ರೆ ಉತ್ತರ ಕರ್ನಾಟಕದಲ್ಲಿ ತಿಂಡಿಗೆ ತಿಂಡಿ ಅನ್ನುವುದೇ ಇಲ್ಲ. ಅಲ್ಲೇನಿದ್ದರೂ ಟಿಫನ್ನು, ನಾಷ್ಟಾ ಅಥವಾ ಯಾವ ತಿನಿಸು ಮಾಡಿರುತ್ತಾರೋ ಅದರದೇ ಹೆಸರು. ಅಲ್ಲಿ ತಿಂಡಿ ಅಂದ್ರೆ, ಮೈಕೈ ಕೆರೆದಂತಾಗುವುದು. 'ತಿಂಡಿ ಬಿಟ್ಟದ' ಅಂದ್ರೆ ಮೈಕೈ ಕೆರೆಯುತ್ತಿದೆ ಅಂತ ಅರ್ಥ. ಆದ್ರೆ ಅದು ಇಲ್ಲಿ ಅಪಾರ್ಥವಾಗಿತ್ತು. ಹೆಚ್ಚಿನವರೆಲ್ಲ ಮೊದಬಾರಿಗೆ ಬೆಂಗಳೂರಿಗೆ ಬಂದಿದ್ದರಿಂದ ಸಹಜವಾಗಿ ಹೊಟ್ಟೆ ಹಿಡಿದುಕೊಳ್ಳುವ ಹಾಗೆ ನಕ್ಕಿದ್ದರು.
ಭಾಷೆ ಬಳಕೆಯಲ್ಲಿನ ವೈವಿಧ್ಯಕ್ಕೆ ಇದೊಂದು ಉದಾಹರಣೆಯಷ್ಟೆ. ಕೆಲವೊಂದು ಕಥೆಗಳಲ್ಲಿ ಉಳುಕ್ಯಾನ ಟೊಳಕ್ಯಾರ, ಗದಾನಗುದಗಿ ಅಂತ ಕೆಲ ತಿಂಡಿಗಳನ್ನು ಕರೆಯಲಾಗಿದೆ. ಉಳುಕ್ಯಾನ ಟೊಳಕ್ಯಾರ ಅಂದ್ರೆ ದೋಸೆ ಅಂತ ಅರ್ಥ. ಗದಾನಗುದಗಿ ಅಂದ್ರೆ ಹೂರಣದ ಕಡುಬು. ಇದೇ ರೀತಿ ದಕ್ಷಿಣ ಕರ್ನಾಟಕದಲ್ಲಿ ಗೊತ್ತಿರದ ಉತ್ತರ ಕರ್ನಾಟಕದಲ್ಲಿ ಮಾತ್ರ ಬಳಕೆಯಲ್ಲಿರುವ ಅನೇಕ ಪದಪುಂಜಗಳು ಚಾಲ್ತಿಯಲ್ಲಿವೆ.
ಖನಾಸು, ಕತ್ತರಿಸು, ಏರಿಸು ಅಂದ್ರೆ ಏನೇನೋ ಅರ್ಥ ಬರುವ ಸಾಧ್ಯತೆಗಳಿವೆ. ಆದರೆ ಉತ್ತರ ಕರ್ನಾಟಕದಲ್ಲಿ ಅವುಗಳಿಗೆಲ್ಲ ಒಂದೇ ಅರ್ಥ ಅಂದ್ರೆ ನಿಮಗೆ ಆಶ್ಚರ್ಯವಾಗಬಹುದು. ತಿನ್ನು ಅಂತ. ನಮ್ಮ ನಿಮ್ಮೆಲ್ಲರ ರಾಜಕುಮಾರು 'ಜಮಾಯಿಸು' ಅನ್ನುವುದಿಲ್ಲವೆ ಹಾಗೆ. ಬಲವಂತವಾಗಿ ತಿನ್ನು ಅನ್ನಲು ಈಮೇಲಿನ ಪದಗಳನ್ನು ಬಹಳವಾಗಿ ಬಳಸುತ್ತಾರೆ ಜನ. ಇಂಥವೇ ಪದಗಳನ್ನು ದಕ್ಷಿಣದಲ್ಲಿ ತಮಾಷೆಗೆ, ಅಪಹಾಸ್ಯಕ್ಕೆ ಬಳಕೆಯಾಗುವುದು ವಿಪರ್ಯಾಸ.
ಹಾಗೆಯೇ, ದೋಸೆಗೆ ದ್ವಾಶಿ, ತೊವ್ವೆಗೆ ತವಿ, ರೊಟ್ಟಿಗೆ ಭಕ್ಕರಿ, ಪಲ್ಯಕ್ಕೆ ಭಾಜಿ, ಉಪ್ಪಿಟ್ಟಿಗೆ ಖೀಸು, ಬಜ್ಜಿಗೆ ಪಚಡಿ, ಚಟ್ನಿಪುಡಿಗೆ ಹಿಂಡಿ, ಲೋಟಕ್ಕೆ ವಾಟಗಾ, ಗಡ್ಡು, ಗಿಂಡಿ ಮೊದಲಾದ ಪದಗಳ ಬಳಕೆ ಚಾಲ್ತಿಯಲ್ಲಿದೆ ಉತ್ತರ ಕರ್ನಾಟಕದಲ್ಲಿ. ಇದಕ್ಕೆ ಮರಾಠಿ ಮತ್ತು ಉರ್ದು ಪದಗಳ ಪ್ರಭಾವವೂ ಕಾರಣ. ಬೆಳಗಾವಿ ಜಿಲ್ಲೆಯಲ್ಲಿ ಕೈಚೀಲಕ್ಕೆ ಪಿಶಿವಿ ಅನ್ನುತ್ತಾರೆ. ಬೆಳಗಾವಿ, ಧಾರವಾಡ, ಬಿಜಾಪುರ, ರಾಯಚೂರು... ಒಂದೊಂದು ಕಡೆಯೂ ಒಂದೊಂದು ರೀತಿ ಭಾಷೆಯ ಸೊಗಡು ಹಬ್ಬಿಕೊಂಡಿದೆ. ಬೆಂಗಳೂರಿನಲ್ಲಿ ಕನ್ನಡಕ್ಕಿಂತ ಆಂಗ್ಲ ಪದಗಳೇ ಹೆಚ್ಚಾಗಿ ಬಳಕೆಯಾಗುವುದಿಲ್ಲವೆ ಹಾಗೆ.
(ಧನ್ಯವಾದಗಳು : 'ನಗೆಹಬ್ಬ'ಕ್ಕೆ ನಾವು ನೀಡಿದ್ದ ಆಹ್ವಾನಕ್ಕೆ ಪ್ರತಿಯಾಗಿ ಲೇಖನ, ಕವನ, ಚುಟುಕ, ನಗೆಹನಿಗಳ ಮಹಾಪೂರವೇ ಹರಿದುಬಂದಿದೆ. ಓದುಗರ ಪ್ರತಿಕ್ರಿಯೆ ನಿರೀಕ್ಷೆಗೂ ಮೀರಿದ್ದಾಗಿತ್ತು. ಕೆಲ ಲೇಖನಗಳನ್ನು ಪ್ರಕಟಿಸಿದ್ದೇವೆ, ಕೆಲವನ್ನು ಅನಿವಾರ್ಯವಾಗಿ ತಿರಸ್ಕರಿಸಲೇಬೇಕಾಯಿತು. ಉಳಿದವನ್ನು, ಸಮಯಾಭಾವದಿಂದಾಗಿ ಪ್ರಕಟಿಸಲಾಗಲಿಲ್ಲ, ಕಾಲಕ್ರಮೇಣ ಪ್ರಕಟಿಸಲಾಗುವುದು. ನಮಗೆ ಬರೆದ ಎಲ್ಲರಿಗೂ ಅನಂತಾನಂತ ಧನ್ಯವಾದಗಳು.)



Click it and Unblock the Notifications











