Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೆಲ್ಲಿಗೂ ನಮಗೂ ಒಗರುಸಿಹಿ ಸಂಬಂಧ!
ಮೊನ್ನೆ ಅಕ್ಕನಿಗೆ ಫೋನಾಯಿಸಿದಾಗ "ಮಾರ್ಕೆಟ್ ತುಂಬಾ ದಪ್ಪದಪ್ಪ ಬೆಟ್ಟದ ನೆಲ್ಲಿಕಾಯಿ ಬಂದಿದೆ ಕಣೇ. ಅವನು ರಾಶಿ ಹಾಕಿಕೊಂಡಿದ್ದ ಕಿರುನೆಲ್ಲಿ ಗೊಂಚಲು ನೋಡಿ ನಿನ್ನೇ ಜ್ಞಾಪಿಸಿಕೊಂಡೆ. ಥೂ, ಬಜಾರಿ ನಂದೆಲ್ಲಾ ಕಿತ್ತು ತಿನ್ನೋವ್ಳು ನೀನು ಅಂತ" ಅಂದ್ಲು. ಕದ್ದು, ಕಲ್‍ಹೊಡೆದು, ಉದುರಿಸಿಯೋ, ಬಿದ್ದದ್ದು ಆರಿಸಿಯೋ ಅಥವಾ ಅಜ್ಜಿ ಮಾರುವ ಬುಟ್ಟಿಯಿಂದ ಕೊಂಡ ಕಿರುನೆಲ್ಲಿ, ಎಲ್‍ಚೀ, ಬೋರೆ, ಹುಣಿಸೇಕಾಯಿಗಳ ಉಪ್ಪಿನೊಡನೆ ನೆಕ್ಕಿ, ನೆಕ್ಕಿ ಸವಿಯದವರುಂಟೇ ?
- ವಾಣಿ ರಾಮದಾಸ್, ಸಿಂಗಪುರ.
ನಾನು 1ರಿಂದ 5ರವರೆಗೆ ಓದಿದ್ದು ಅಪ್ಪಟ ಕನ್ನಡ ಮೀಡಿಯಮ್ ಶಾಲೆ. ಅವನು ಬಸವ, ಇವಳು ಕಮಲ ಪುಸ್ತಕದ ಜೊತೆಗೊಂದು ಸ್ಲೇಟು, ಬಳಪ. ಈಗಿನಂತೆ ಪುಸ್ತಕ ಬೆನ್ನ ಹೊರೆ ಇರಲಿಲ್ಲ. ಪುಸ್ತಕದ ಹೊರೆ ಹೊರದಿದ್ದರೂ ತೊಳೆದ ಉಪ್ಪಿನಕಾಯಿ ಹೋಳುಗಳು, ಕದ್ದ ಹುಣಿಸೆ-ಬೆಲ್ಲ, ಚಿಂದಿ ಪೇಪರಿನಲ್ಲಿ ಸುತ್ತಿದ ಉಪ್ಪು-ಖಾರ, ಅದನು ಚುಚ್ಚಿ ತಿನ್ನಲು ಪೊರಕೆ ಕಡ್ಡಿ, ಕಲ್ಲು ಹೊಡೆದು ಕದ್ದ ಮಾವು, ಆಡಿಸಿ ಬೀಳಿಸಿದ ಕಿರುನೆಲ್ಲಿ, ಪೀಚುಸೀಬೆಗಳು ನನ್ನ ಶಾಲೆಯ ಬ್ಯಾಗನ್ನು ಮಣಭಾರ ಆಗಿಸುತ್ತಿತ್ತು. ಆ ಮಣವನ್ನು ಹೊರ್ತಾ ಇದ್ರು ನನ್ನ ಬಾಯ್‍ಪ್ರೆಂಡ್ಸ್ ಗೋಪಿ, ಚೇಚು, ವರದ, ಶೀನಿಯರು.
ಅದೇ ಬ್ಯಾಗ್ ಎಂದಾದರೊಮ್ಮೆ ಹುಂಡಿಯಿಂದ ಕದ್ದ ಮೂರು/ಐದು ಪೈಸೆಗಳ ಕಳ್ಳ ನಿಧಿ ಇಡಲು, ದುಡ್ಡು ಕೊಡುವರೆಂದೇ ಹಬ್ಬ-ಹರಿದಿನಗಳಲಿ ಹಿರಿಯರ ಕಾಲಿಗೆ ದೊಪ್ಪನೆ ಬಿದ್ದು ಪಡೆದ ಹತ್ತು/ಇಪ್ಪತ್ತೈದು ಪೈಸೆಗೆ ಹಾಗೂ "ತಗೋ ಪುಟ್ಟಾ" ಎಂದು ಅಣ್ಣ(ಅಪ್ಪ) ಕೊಡುತ್ತಿದ್ದ ತುಂಡು ಕಾಸಿಗೆ ಸೇಫ್ ಲಾಕರ್ ಆಗುತ್ತಿತ್ತು. ಆ ನಿಧಿಗಳು ತಳ್ಳು ಗಾಡಿಯ ಕೇಸರೀ-ಕೆಂಪಿನ ಐಸ್‍ಕ್ಯಾಂಡಿಗೆ, ಧೂಳ್-ಧೂಳ್ ಮಾವು, ಸೌತೆ, ಪೈನಾಪಲ್ ಹೋಳಿಗೆ, ಬುಟ್ಟಿಯಲಿ ಅಜ್ಜಿ ಮಾರುತ್ತಿದ್ದ ಎಲ್‍ಚೀ ಹಣ್ಣು, ಕಿರು ಮತ್ತು ಬೆಟ್ಟದ ನೆಲ್ಲಿಕಾಯಿಗಳಿಗೆ ಸಮರ್ಪಕವಾಗಿ ಸದ್ವಿನಿಯೋಗ ಆಗುತ್ತಿತ್ತು. "ನಿಂಗ್ ಮಾತ್ರ ಜಾಸ್ತೀ, ಕೊಡೇ ಇಲ್ಲಿ, ಇಲ್ಲ ಹೊಡೆದ್ಲು ಅಂತ ಅಮ್ಮಂಗೆ ಹೇಳ್ತೀನಿ" ಎಂಬ ನನ್ನ ಸು.ಪು.ಕು(ಸುಳ್ಳುಪುರುಕು) ಮಂತ್ರಗಳು, ಅಣ್ಣ, ಅಕ್ಕನ ಸರಕಿನ ಲೂಟಿಗೆ ಸದಾ ಸಿದ್ದವಿರುತ್ತಿತ್ತು.
ಮೇಷ್ಟ್ರ ಕೋಲಿನ ಏಟು ಬಿದ್ದಾಗ, ಉಪ್ಪು-ಖಾರ ಹಚ್ಚಿದ ನೆಲ್ಲಿ, ಮಾವು, ಸೌತೆ ನೆಕ್ಕಿದಾಗ, ಸ್ಲೇಟಿನಲಿ ಬರೆದದ್ದು ಅಳಿಸಲು ಅಂಗೈ+ಬಾಯೆಂಜಲು, ಕೈ ಉಜ್ಜಲು, ಮೂಗು ಒರೆಸಲು ವಾಷ್ ಸೆನ್ಸ್ ಇಲ್ಲದ, ಕರ್‍ಚೀಪ್, ನ್ಯಾಪ್‍ಕಿನ್ ಗೊತ್ತಿರದ ಕಾಲದಲಿ ನನ್ನ ಶಾಲೆಯ ಹಸಿರು ಸ್ಕರ್ಟ್ "ಯೂಸ್ ಮಿ, ಯೂಸ್ ಮಿ" ಎನ್ನುತ್ತಿತ್ತು.
ಅಂದು ತಿಂದ ಸರಕು ಅಂದೇ ಖಾಲಿಯಾದರೂ ಆ ಬಾಲ್ಯದ ನೆನಪಿನ ನಿಧಿಯ ಸರಕು ಬಾಳ ಪಯಣದ ನೆನಪಿನ ಭಂಡಾರದಲಿ ನಿರಂತರವಾಗಿ ತುಂಬಿ ತುಳುಕುತ್ತಾ "ಅಂತರಂಗದಾ ಮೃದಂಗ" ತಟ್ಟಿದಾಕ್ಷಣ ಮಂದಹಾಸ ಬೀರಿ, ಮೃದು ಮಧುರವಾಗಿ "ತಂ ತನನ ತಾನ" ಎಂದು ನುಡಿಯುವ ಜೀವ ನಾಡಿಯಾಗಿದೆ. ನೆಲ್ಲಿ ತಿಂದು ನೀರು ಕುಡಿದಾಗ ನಾಲಿಗೆಯಲಿ ರುಚಿಸುವ ಸಿಹಿಯಂತೆ ನೆಲ್ಲಿ-ಉಪ್ಪಿನ ಆ ನೆನಪು ಇಂದು ಎತ್ತಣಿಂದೆತ್ತ ಸಂಬಂಧವಯ್ಯಾ!
ದೇವಗೂ-ನೆಲ್ಲಿಗೂ ಎತ್ತಣಿದೆಂತ್ತ ಸಂಬಂಧವಯ್ಯಾ?
ಅಲ್ಲಮ ಪ್ರಭುಗಳ ವಚನದಲಿ ಬೆಟ್ಟದ ನೆಲ್ಲಿಯ ಕಾಯಿ, ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯಾ! ಎಂತಾದರೆ ಆದಿ ಶಂಕರರಿಗೆ ಕನಕಧಾರ ಸ್ತೋತ್ರ ರಚಿಸಲು ಕಾರಣೀಭೂತ ಈ ನೆಲ್ಲೀಕಾಯಿ.ಪುರಾಣದ ಒಂದು ಕಥೆಯಂತೆ ಲಕ್ಷ್ಮಿ, ಪಾರ್ವತಿಯರು ಯಾವುದೋ ಒಂದು ಸಂದರ್ಭದಲ್ಲಿ ತಮ್ಮ ತಮ್ಮ ಪತಿದೇವರುಗಳಿಗೆ ಅಮೂಲ್ಯ ಕಾಣಿಕೆಯನು ಇತ್ತರಂತೆ. ಅದನು ಕಂಡು ಅತೀ ಸಂತೋಷಗೊಂಡ ಪತಿದೇವರುಗಳ ಕಣ್ಣಲ್ಲಿ ಪ್ರೀತಿಯ ಕಂಬನಿಯ ಮುತ್ತುಗಳು ಉರುಳಿ ಭೂಮಿಯಲಿದ್ದ ನೆಲ್ಲಿಯ ಗಿಡದ ಮೇಲೆ ಬಿದ್ದು ಆ ಕಂಬನಿ ಮರದ ಹಣ್ಣಾಗಿ ಮಾರ್ಪಾಟಾಯಿತಂತೆ. ಅದಕ್ಕೆ ನೆಲ್ಲಿಕಾಯಿ ತಿಂದಾಗ ಒಗರು, ಉಪ್ಪುಪ್ಪು ನಂತರ ಸಿಹಿ ಎನಿಸುವುದಂತೆ. ಶಿವ-ವಿಷ್ಣು ಕಂಬನಿ ಸ್ವರೂಪಿ ನೆಲ್ಲಿಕಾಯಿಗೆ ಧಾತ್ರಿ ಎಂದು ಹೆಸರಾಯಿತಂತೆ.
ಉತ್ಥಾನ ದ್ವಾದಶೀಯಂದು ತುಳಸಿಗಿಡದೊಡನೆ ಒಂದೆರಡು ಕಾಯಿ ಇರುವ ನೆಲ್ಲಿಕಾಯಿ ರೆಂಬೆ ನೆಟ್ಟು ತುಳಸಿ-ಕೃಷ್ಣ ಎಂದು ಪೂಜೆ, ಐದು ನೆಲ್ಲಿಕಾಯಿ ತೂತು ಮಾಡಿ ಅದರಲಿ ದೀಪ ಬೆಳಗುವ ವಾಡಿಕೆ. ಲಕ್ಷ್ಮೀ, ಪಾರ್ವತಿಯರು ಮಾಡಿದ ಸೇವೆ, ನೀಡಿದ ಕಾಣಿಕೆ, ಶಿವ-ವಿಷ್ಣುವಿನ ಕಣ್ಣಲಿ ಆನಂದಭಾಷ್ಪ..ಯಾಕಪ್ಪಾ ಗೊತ್ತಿಲ್ಲ? ಆದ್ರೆ ತುಳಸಿ ಜೊತೆ-ನೆಲ್ಲಿಗಿಡ ಏಕೆ? ನೆಲ್ಲಿ ವಿಷ್ಣು ಸ್ವರೂಪಿ ಹೇಗೆ? ಎಂಬ ಪ್ರಶ್ನೆಗೆ ಉತ್ತರ ಈ ಕಥೆಯಿಂದ ಸಿಕ್ಕಿದ್ದಂತೂ ನಿಜ.
ಇನ್ನೊಂದು ಕಥೆ ... ಒಮ್ಮೆ ಭಿಕ್ಷಕ್ಕೆ ಹೊರಟ ಆದಿ ಶಂಕರರು "ಭವತಿ ಭಿಕ್ಷಾಂದೇಹಿ" ಎನ್ನುತ್ತಾ ಸಾಧ್ವಿಯೊಬ್ಬಳ ಮನೆಯ ಮುಂದೆ ಅರುಹಿದರಂತೆ. ಆ ಮನೆಯ ಸಾಧ್ವಿ, ಅರೆ ಬಾಗಿಲು ತೆರೆದು ಆರ್ದತೆಯಿಂದ "ನಾ ಹೊರೆಗೆ ಬರುವ ಸ್ಥಿತಿಯಲಿಲ್ಲ, ಭಿಕ್ಷಕ್ಕೆ ಕೊಡಲು ನನ್ನ ಬಳಿ ಇರುವುದು ಈ ನೆಲ್ಲಿಕಾಯಿಯೊಂದೇ, ಸ್ವಾಮಿ, ಸ್ವೀಕರಿಸಿ" ಎಂದು ಕೈ ಚಾಚಿ ಶಂಕರರ ಭಿಕ್ಷೆಯಲಿ ದಪ್ಪನೆಯ ನೆಲ್ಲಿಕಾಯಿ ನೀಡಿದಳಂತೆ. ಮೈ ಮುಚ್ಚಲೂ ಬಟ್ಟೆ ಇಲ್ಲದೆ, ಉದರಕೆ ಹಿಟ್ಟಿಲ್ಲದ ಆಕೆಯ ಪರಿಸ್ಥಿತಿಗೆ ಮರುಗಿದ ಶಂಕರರು ಲಕ್ಷ್ಮಿಯ ನೆನೆದು ರಚಿಸಿದರು "ಕನಕಧಾರೆ" ಯ ಸ್ತೋತ್ರ. ಶಂಕರರ ಸ್ತುತಿಗೆ ಮೆಚ್ಚಿದ ಲಕುಮಿ ಆ ಮನೆಯಂಗಳದಿ ಸುರಿದಳು ಕನಕ-ನೆಲ್ಲಿಕಾಯಿಯ ಧಾರೆಯನು. ಶಿವ, ವಿಷ್ಣು, ಲಕ್ಷ್ಮೀ ಕಟಾಕ್ಷವಾದ ಮೇಲೆ ನೆಲ್ಲಿಕಾಯಿ ಪೂಜಾರ್ಹವೇ ತಾನೆ?
ನಾಲಿಗೆಗೆ ರುಚಿಕರ, ಆರೋಗ್ಯಕ್ಕೂ ಹಿತಕರ ನೆಲ್ಲಿ. ಬೇಯಿಸಿದ ನೆಲ್ಲಿ, ಹುಣಿಸೆರಸದಲಿ ಕೊಳೆಹಾಕಿದ ಉಪ್ಪಿನಕಾಯಿ, ನೆಲ್ಲಿ ತೊಕ್ಕು, ಮುರಬ್ಬ, ಚಟ್ನಿ, ಗೊಜ್ಜು, ಕಡಿ, ನೆಲ್ಲಿ ಮಜ್ಜಿಗೆ, ನೆಲ್ಲಿ-ಸಾಂಬಾರು, ನೆಲ್ಲಿ-ಚಿತ್ರಾನ್ನ ಮಾಡಿ ನಾಲಿಗೆಯಲಿ ನೀರೂರಿಸುವ ಒಗರ-ಸಿಹಿ ನೆಲ್ಲಿ ವಾವ್ !
ವಿಟಮಿನ್ ಸಿ ಹೇರಳವಾಗಿರುವ ನೆಲ್ಲಿಕಾಯಿಯಲ್ಲಿ ಪ್ರೋಟೀನು, ನಾರು, ಲವಣದ ಅಂಶವೂ ಇದೆ. ರಕ್ತದಲಿ ಕೊಬ್ಬು ಹೆಚ್ಚಾಗಿದ್ದಲ್ಲಿ ನೆಲ್ಲಿಕಾಯಿ ಒಣಗಿಸಿ ಪುಡಿ ಮಾಡಿ, ಸ್ವಲ್ಪ ಸಕ್ಕರೆ ಪಾಕದೊಂದಿಗೆ ಬೆರೆಸಿ ದಿನಾ ಒಂದು ಚಮಚದಷ್ಟು ಬರೀ ಹೊಟ್ಟೆಯಲಿ ತೆಗೆದುಕೊಂಡರೆ ಕೊಬ್ಬು ಸ್ಥಿಮಿತದಲಿ ಇರುವುದಂತೆ.
ಅಸಿಡಿಟಿ ತೊಂದರೆ ಇದ್ದರೆ ಆಮ್ಲ ರಸ ಒಳ್ಳೆಯದು. ಅಜೀರ್ಣತೆಗೆ ಒಂದು ಚಮಚ ಜೇನುತುಪ್ಪ ಹಾಗೂ ಕೆಲವು ನೆಲ್ಲಿ ಎಲೆಯೊಡನೆ ಬಾಯಲಿಟ್ಟು ಜಗಿಯಿರಿ.
ಆಯುರ್ವೇದದ ಚ್ಯವನಪ್ರಾಶದಲಿ ನೆಲ್ಲಿ ಉಪಯುಕ್ತ. ಆಯುರ್ವೇದದ ಪ್ರಕಾರ ಮೂಲವ್ಯಾದಿ, ತಲೆನೋವು, ಅನೀಮಿಯಾ, ಮಲಬದ್ಧತೆ ಇದ್ದವರು ದಿನಕ್ಕೆ ನಾಲ್ಕು ಚಮಚ ನೆಲ್ಲಿ ರಸ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದಂತೆ. ನೆಲ್ಲಿಕಾಯಿ ಗಿಡದ ಎಲೆ, ಬೇರು, ಕಾಯಿ, ತೊಗಟೆ, ಹೂವು ಎಲ್ಲವೂ ಉಪಯುಕ್ತ. ಆರೋಗ್ಯಕ್ಕೆ, ಆಯಸ್ಸಿಗೆ, ಹೃದಯ ಸಂಬಂಧಿ ಖಾಯಿಲೆಗಳಿಗೆ, ಮಧುಮೇಹಿಗಳಿಗೆ ನೆಲ್ಲಿಕಾಯಿ ರಸ ಜೀವಾಮೃತ.
ನೆಲ್ಲಿಕಾಯಿ ಹೋಳು ಮಾಡಿ ಉಪ್ಪು ನೀರಲ್ಲಿ ನೆನೆಸಿ ಬಿಸಿಲಲಿ ಒಣಗಿಸಿ ಇಟ್ಟುಕೊಂಡು ಬೇಕೆನಿಸಿದಾಗ, ಬಾಯಾರಿದಾಗ ಬಾಯಿಗೆ ಹಾಕಿಕೊಳ್ಳಿ. 5-6 ಚಮಚ ನೆಲ್ಲಿಯ ರಸ, 1/4 ಕಪ್ ಮಜ್ಜಿಗೆಯೊಡನೆ ಬೆರೆಸಿ ತಲೆಗೆ ಹಚ್ಚಿ ಸ್ನಾನ ಮಾಡಿದಲ್ಲಿ ಕೂದಲು ಹೊಳೆಯುತ್ತದೆ ಮತ್ತು ಕೂದಲು ಉದುರುವುದಿಲ್ಲ. ಇಂಕ್, ಡೈ ಹಾಗೂ ಶಾಂಪೂಗಳಲ್ಲಿ ಇದರ ಉಪಯೋಗ ಹೆಚ್ಚು.
ಹಿರಿಯರು ಹೇಳುವ ಉಪದೇಶ ಮೊದಲು ಅಹಿತವಾದರು, ಸ್ವ-ಅನುಭವ ಆದಮೇಲೆ ಹಿತ ಎನಿಸುವಂತೆ -ನೆಲ್ಲಿಕಾಯಿ ತಿಂದಾಕ್ಷಣ ಒಗರೆನಿಸಿದರೂ ನಂತರದ ನಾಲಿಗೆಯ ಸಿಹಿ ಮುದ ನೀಡುತ್ತದೆ.ನೆಗೆದ್ ಬಿದ್ ನೆಲ್ಲಿಕಾಯಿ ಆದಹಾಗೆ, They invited me to join them but I didn't want to play gooseberry ಎಂದು ಗಾದೆ ಮಾತಿನಲೂ ಅನ್ವಯಿಪ ನೆಲ್ಲಿಗೂ-ನಮಗೂ ಒಗರು-ಸಿಹಿಯ ಸಂಬಂಧ!



Click it and Unblock the Notifications