Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಬಾಯಲ್ಲಿ ನೀರೂರಿಸುವ ಬಿಸಿ ಬಿಸಿ ಪಲಾವ್

* ತೇಜಸ್ವಿನಿ ಹೆಗಡೆ, ಬೆಂಗಳೂರು
ಪಲಾವ್ ತಯಾರಿಕೆಯಲ್ಲಿ ಹಲವು ವಿಧಗಳಿವೆ. ಹೆಚ್ಚಿನ ವಿಧಾನದಲ್ಲಿ ನಾವು ಪಲಾವ್ ಹುಡಿಯನ್ನೋ ಇಲ್ಲಾ ಇನ್ನಾವುದೋ ಮೊದಲೇ ತಯಾರಿಸಿಟ್ಟುಕೊಂಡಿರುವ ಪಲಾವ್ ಮಸಾಲೆಯನ್ನೋ ಹಾಕಿ ತಯಾರಿಸುತ್ತೇವೆ. ಆದರೆ ಒಮ್ಮೊಮ್ಮೆ ಒಂದೇ ರೀತಿಯ ರುಚಿಯಿಂದ ಬೇಸತ್ತಿದ್ದಾಗ, ಇಲ್ಲವೇ ಮೊದಲೇ ಅಂಗಡಿಯಿಂದ ಪಲಾವ್ ತಯಾರಿಕೆಗೆ ಬೇಕಾದ ಮಾಸಾಲೆ ಹುಡಿಯನ್ನು ತಂದಿಟ್ಟು ಕೊಳ್ಳಲು ಮರೆತಾಗ, ಈ ಕೆಳಗಿನ ವಿಧಾನದಲ್ಲಿ ಪಲಾವ್ ಬೇಕಾದಾಗ ತಯಾರಿಸಬಹುದಾಗಿದೆ.
ಪಲಾವ್‌ಗೆ ಬೇಕಾದ ತರಕಾರಿಗಳನ್ನು ಹಿಂದಿನ ದಿನವೇ ಹೆಚ್ಚಿಕೊಂಡು, ಮಸಾಲೆ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳನ್ನೆಲ್ಲಾ ಒಂದೆಡೆ ಸೇರಿಸಿಟ್ಟುಕೊಂಡರೆ, ಮರುದಿನ ಪಲಾವ್ ತಯಾರಿಸಲು ಹೆಚ್ಚು ಸಮಯ ಬೇಕಾಗದು. ಕೇವಲ ಅರ್ಧಗಂಟೆಯೊಳಗೆ ಘಮ್ಮೆನ್ನುವ ಪಲಾವ್ ನಿಮ್ಮ ಮುಂದಿರುತ್ತದೆ. ಇದನ್ನು ಬೆಳಗ್ಗಿನ ತಿಂಡಿಗೋ ಊಟಕ್ಕೋ ತಯಾರಿಸಿ ತಿನ್ನಬಹುದು.
ಪಲಾವ್ ಮಸಾಲೆಗೆ ಬೇಕಾಗುವ ಸಾಮಗ್ರಿಗಳು
* ಕಾಯಿತುರಿ - ಒಂದು ಮುಷ್ಠಿ
* ಕೊತ್ತಂಬರಿ ಸೊಪ್ಪು - ಒಂದು ಹಿಡಿ
* ಶುಂಠಿ - ಹೆಬ್ಬೆರಳಿನಷ್ಟು
* ಹಸಿಮೆಣಸು - (ಖಾರಕ್ಕೆ ತಕ್ಕಂತೆ) ಸಾಮಾನ್ಯವಾಗಿ 2
* ಲವಂಗ - 4ರಿಂದ 5
* ಇಡಿ ಏಲಕ್ಕಿ - 2ರಿಂದ 3
* ಈರುಳ್ಳಿ - ದೊಡ್ಡ ಗಾತ್ರದ್ದಾದರೆ ಅರ್ಧ, ಚಿಕ್ಕದಾದರೆ ಒಂದು
* ಬೆಳ್ಳುಳ್ಳಿ - 1 ಗಡ್ಡೆ
* ಜಾಯಿಕಾಯಿ ಚೂರು - ಸ್ವಲ್ಪ, 2-3 ಎಸಳು
* ಇಂಗು - ಕಡಲೇಗಾತ್ರದಷ್ಟು
ಸಲಾಡ್ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳು
* ಮುಳ್ಳು ಸವತೆ - 1
* ಈರುಳ್ಳಿ - 1
* ಕೊತ್ತಂಬರಿ ಸೊಪ್ಪು - ಒಂದು ಹಿಡಿ
* ಟೊಮೇಟೊ - 2-3
* ಮೊಸರು - 3 ಸೌಟು. (ನಮಗೆ ಬೇಕಾದಷ್ಟು ಪ್ರಮಾಣದಲ್ಲಿ. ಇದಕ್ಕೆ ಸ್ವಲ್ಪ ನೀರನ್ನೂ ಸೇರಿಸಬಹುದು. ಒಂದೊಮ್ಮೆ ಮೊಸರು ಬೇಡವೆಂದಲ್ಲಿ ಕಾಯಿ ಬೀಸಿಯೂ ಹಾಕಬಹುದು)
* ಉಪ್ಪು - ರುಚಿಗೆ ತಕ್ಕಷ್ಟು
ಬೇಕಾಗುವ ತರಕಾರಿಗಳು ಹಾಗೂ ಇನ್ನಿತರ ಸಾಮಗ್ರಿಗಳು
* ಕ್ಯಾರೆಟ್ - 2
* ಬಟಾಟೆ - 2
* ಹೂಕೋಸು - ಅರ್ಧಭಾಗ
* ಹಸಿರು ಬಟಾಣಿ (ನೆನೆಸಿದ್ದು) - 1-2 ಮುಷ್ಠಿ
* ಬೀನ್ಸ್ - ಅರ್ಧ ಕೆ.ಜಿಯಲ್ಲಿ ಮುಕ್ಕಾಲು ಭಾಗ ಹಾಕಬೇಕು.
(ಬೀನ್ಸ್ ಎಳೆತಾಗಿದ್ದಷ್ಟು ಉತ್ತಮ. ತೀರಾ ಬೆಳೆದಿರಬಾರದು. ತರಕಾರಿಗಳ ಪ್ರಮಾಣವನ್ನು ನೀವೇ ನಿರ್ಧರಿಸಬಹುದು. ಜಾಸ್ತಿ ತರಕಾರಿ ಇಷ್ಟಪಡುವವರು ಅಕ್ಕಿ ಕಡಿಮೆ ಹಾಕಿ ತರಕಾರಿಗಳನ್ನೇ ಜಾಸ್ತಿ ಹಾಕಿ ಮಾಡಬಹುದು.)
* ಅಕ್ಕಿ - 2 ಲೋಟ
* ಅರಿಶಿನ - ಚಿಟಿಕೆಯಷ್ಟು
* ತುಪ್ಪ - ಒಂದು ಚಮಚ
* ನೀರು - 4-5 ಲೋಟ
* ಸಾಸಿವೆ - 1/2 ಚಮ್ಚ
* ಜೀರಿಗೆ - 1/2 ಚಮ್ಚ
* ಬಡೇ ಸೊಪ್ಪು(ಸೋಂಪು) - 1/2 ಚಮಚ
* ತೆಂಗಿನೆಣ್ಣೆ - 5-6 ಚಮಚ
* ಉಪ್ಪು - ರುಚಿಗೆ ತಕ್ಕಷ್ಟು
* ಪಲಾವಿನೆಲೆ (ಇದೊಂದು ಪರಿಮಳದ ಎಲೆ. ಸಾಮಾನ್ಯವಾಗಿ ಪಲಾವ್ ತಯಾರಿಕೆಯಲ್ಲಿ ಇದನ್ನು ವಿಷೇಶವಾಗಿ ಬಳಸುತ್ತಾರೆ.) - 2-3
ಪಲಾವ್ ಮಸಾಲೆಯನ್ನು ತಯಾರಿಸುವ ವಿಧಾನ
ಮೇಲೆ ಹೇಳಿದ ಪಲಾವಿಗೆ ಬೇಕಾದ ಮಸಾಲೆ ಸಾಮಗ್ರಿಗಳನ್ನೆಲ್ಲಾ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಟ್ಟುಕೊಳ್ಳಬೇಕು.
ಸಲಾಡ್ ತಯಾರಿಕೆಯ ವಿಧಾನ
ಸವತೆ ಹಾಗೂ ಟೊಮೇಟೋವನ್ನು ಸಣ್ಣದಾಗಿ ಹೆಚ್ಚಿಕೊಂಡು ಇದಕ್ಕೆ ಮೊಸರನ್ನೋ ಇಲ್ಲಾ ಕಾಯಿ ಹಾಲನ್ನೋ (ಬೇಕಿದ್ದರೆ ಎರಡನ್ನೂ) ಹಾಕಬೇಕು. ಇದಕ್ಕೆ ಸ್ವಲ್ಪ ಉಪ್ಪು, ಈರುಳ್ಳಿ ಹಾಗೂ ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪನ್ನೂ ಸೇರಿಸಿ ಕಲಕಿದರೆ ಸಾಲೆಡ್ ರೆಡಿಯಾದಂತೆ. ಇದಕ್ಕೆ ಬೇಕಿದ್ದರೆ ಸಣ್ಣ ಹಸಿಮೆಣಸನ್ನೂ ಸೇರಿಸಬಹುದು.
ಪಲಾವ್ ತಯಾರಿಸುವ ವಿಧಾನ
* ಪಲಾವ್ ಅನ್ನು ನೇರವಾಗಿ ಕುಕ್ಕರಿನಲ್ಲೇ ಮಾಡಬಹುದು. ಕುಕ್ಕರಿಗೆ ತೆಂಗಿನೆಣ್ಣೆಯನ್ನು ಹಾಕಿ, ಜೀರಿಗೆ, ಸಾಸಿವೆ ಹಾಗೂ ಸೋಂಪನ್ನು ಹಾಕಿ ಒಗ್ಗರಿಸಬೇಕು.
* ಸಾಸಿವೆ ಸಿಡಿಯಲು ಇದಕ್ಕೆ ಮೊದಲೇ ಹೆಚ್ಚಿಟ್ಟ ತರಕಾರಿಗಳನ್ನೂ ಹಾಗೂ ಬಟಾಣಿಯನ್ನೂ ಹಾಕಿ 5 ನಿಮಿಷಗಳಕಾಲ ಕಲಕಬೇಕು.
* ನಂತರ ತೊಳೆದಿಟ್ಟ ಅಕ್ಕಿಯನ್ನೂ ಅದಕ್ಕೆ ಅಕ್ಕಿ ಬೇಯಲು ಬೇಕಾದಷ್ಟು ನೀರನ್ನೂ ಸೇರಿಸಬೇಕು.
* ಇದಕ್ಕೆ ಅರಿಶಿನ, ತುಪ್ಪ, ಉಪ್ಪು, ಹಾಗೂ ಬೀಸಿಟ್ಟಿದ್ದ ಮಸಾಲೆ ಮಿಶ್ರಣವನ್ನೂ ಸೇರಿಸಿ ಚೆನ್ನಾಗಿ ಕದಡಬೇಕು.
* ನಂತರ ಪಲಾವಿನೆಲೆಗಳನ್ನು ಹಾಕಿ ಕುಕ್ಕರ್ ಮುಚ್ಚಿ ಒಂದು ವ್ಹಿಸಿಲ್ ಮಾತ್ರ ತರಿಸಬೇಕು. ಅನ್ನ ತುಂಬಾ ಮೆದುವಾಗಬಾರದು. ಹುಡಿ ಹುಡಿಯಾಗಿದ್ದಷ್ಟು ಪಲಾವ್ ರುಚಿ ಹೆಚ್ಚು.
* ಕುಕ್ಕರ್ ತೆಗೆಯಲು ಬಂದ ನಂತರ ಬಿಸಿ ಬಿಸಿ ಪಲಾವಿಗೆ ಸಾಲೆಡ್ ಹಾಕಿ ತಿನ್ನಲು ಬಲು ರುಚಿ.



Click it and Unblock the Notifications