Latest Updates
-
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಗರ್ಭಿಣಿಯರೇ, ಪ್ರತಿದಿನ ಹತ್ತು ನಿಮಿಷದ ಧ್ಯಾನ ಅನುಸರಿಸಿ
ಗರ್ಭಿಣಿಯರಿಗೆ ಸಲಹೆ ಕೊಡುವವರೇ ಹೆಚ್ಚು. ಮೂರು ಹೆತ್ತವಳು, ಆರು ಹೆತ್ತವಳಿಗೆ ಹೇಳಿದಂತೆ ಈ ಬಗ್ಗೆ ಅನುಭವವಿಲ್ಲದವರೂ ತಾವು ಕೇಳಿದ ವಿಷಯಗಳನ್ನು ಅನ್ವಯಿಸಲು ಪ್ರಯತ್ನಿಸುತ್ತಾರೆ. ಊಟ ಹೀಗೆ ಮಾಡು, ನಿದ್ದೆ ಹೀಗೆ ಮಾಡು, ನಡೆಯಬೇಡ ಎಂಬೆಲ್ಲಾ ವಿಷಯಗಳಿಗೆ ಹಲವಾರು ಸಲಹೆಗಳು ಪುಕ್ಕಟೆಯಾಗಿ ದೊರಕುತ್ತವೆ. ಆದರೆ ಗರ್ಭಿಣೆ ಎದುರಿಸುವ ಮಾನಸಿಕ ಒತ್ತಡದ ವಿಷಯ ಬಂದಾಗ ಎಲ್ಲರ ಬತ್ತಳಿಕೆ ಖಾಲಿ. ಒಂದು ವೇಳೆ ಒತ್ತಡದಿಂದ ಸಂಪೂರ್ಣ ಬಳಲಿಕೆ ಆವರಿಸಿದ್ದರೆ ಇದು ಕೇವಲ ನಿಮಗಲ್ಲ, ಪ್ರತಿ ಗರ್ಭಿಣಿಗೂ ಆವರಿಸುವ, ಆದರೆ ಸ್ಪಷ್ಟವಾಗಿ ಹೇಳಲಾರದ ತೊಂದರೆಯಾಗಿದೆ.

ಉದ್ಯೋಗ-ಮನೆಯ ವಾತಾವರಣ, ಹೆರಿಗೆಯ ಕುರಿತು ಭಯ, ಭಾರವನ್ನು ಹೊತ್ತು ತಿರುಗುವ ಆತಂಕ, ಏನಾಗುತ್ತದೆಯೋ, ಅಮ್ಮ ಇದ್ದರೆ ಚೆನ್ನಾಗಿತ್ತು ಎನ್ನುವ ದುಗುಡಗಳೆಲ್ಲಾ ಗರ್ಭಿಣಿಗೆ ಆವರಿಸಿ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತವೆ. ಆದರೆ ಗರ್ಭಾವಸ್ಥೆಯ ಮಾನಸಿಕ ಒತ್ತಡ ತಾಯಿ ಮತ್ತು ಮಗು ಇಬ್ಬರಿಗೂ ಒಳ್ಳೆಯದಲ್ಲ. ಅತಿ ಹೆಚ್ಚಿನ ಒತ್ತಡ ಮಗುವಿನ ತೂಕದ ಮೇಲೆ ನೇರ ಪರಿಣಾಮ ಬೀರುತ್ತದೆ. ಪರಿಣಾಮವಾಗಿ ಹುಟ್ಟುವಾಗ ಮಗುವಿನ ತೂಕ ಅತಿ ಕಡಿಮೆ ಇರುತ್ತದೆ. ಅಲ್ಲದೇ ಸಮಯಕ್ಕೂ ಮುನ್ನವೇ ಹೆರಿಗೆಯಾಗಲೂ ಬಹುದು.
ಮಾನಸಿಕ ಒತ್ತಡದ ಇವು ನೇರ ಕಾರಣಗಳಾದರೆ ಪರೋಕ್ಷವಾಗಿ ಇದು ಹೆಚ್ಚು ತಿನ್ನಲು, ತನ್ನ ಬಗ್ಗೆ ಕಾಳಜಿ ವಹಿಸುವಲ್ಲಿ ಕೊರತೆಯಾಗಲು ಕಾರಣವಾಗುತ್ತದೆ. ಇದರ ಪರಿಣಾಮಗಳು ಆರೋಗ್ಯವನ್ನು ಇನ್ನೆಲ್ಲೋ ಕೊಂಡೊಯ್ಯುತ್ತವೆ. ಹಾಗಾದರೆ ಒತ್ತಡವನ್ನು ತಡೆಯುವುದು ಹೇಗೆ? ಈ ಪ್ರಶ್ನೆಗೆ ತಜ್ಞರು ಮತ್ತು ಸ್ತ್ರೀರೋಗವೈದ್ಯರು ನೀಡುವ ಉತ್ತರ: ಧ್ಯಾನ. ಇದಕ್ಕಾಗಿ ದಿನದ ಹತ್ತು ನಿಮಿಷಗಳನ್ನಾದರೂ ಒಬ್ಬಂಟಿಯಾಗಿ ಯಾವುದೇ ಅಡ್ಡಿ ಆತಂಕ ಇಲ್ಲದೇ ಕಳೆಯುವಂತಹ ಸಮಯ.
ಈ ಸಮಯದಲ್ಲಿ ನಿಮಗೆ ಸೂಕ್ತವಾದ ಭಂಗಿಯಲ್ಲಿ ಕುಳಿತು ಯಾವುದೇ ಕರೆ ಅಥವಾ ಸದ್ದನ್ನು ನಿರೀಕ್ಷಿಸದೇ ಏಕಾಗ್ರಚಿತ್ತ ಅನುಸರಿಸಬೇಕು. ಪ್ರತಿದಿನದ ಧ್ಯಾನ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ ಹಾಗೂ ಈ ಮೂಲಕ ಪ್ರಾರಂಭವಾಗಿದ್ದ ತೊಂದರೆಯನ್ನು ಮೊಳಕೆಯಲ್ಲಿಯೇ ಚಿವುಟುತ್ತದೆ. ಹಲವಾರು ಸಂಶೋಧನೆಗಳಲ್ಲಿ ಗರ್ಭಾವಸ್ಥೆಯಲ್ಲಿ ಮಹಿಳೆಯರು ಸೂಕ್ತ ಯೋಗಾಸನ ಮತ್ತು ಧ್ಯಾನವನ್ನು ಅನುಸರಿಸುವ ಮೂಲಕ ಆರೋಗ್ಯ ಉತ್ತಮಗೊಳ್ಳುವುದು, ಮಗುವಿನ ತೂಕವೂ ಸಮರ್ಪಕವಾಗಿರುವುದು ಹಾಗೂ ಹೆರಿಗೆಯೂ ಸರಾಗವಾಗಿ ಆಗುವುದು ಕಂಡುಬಂದಿದೆ. ಅಲ್ಲದೇ ಹೆರಿಗೆಯ ಬಳಿಕ ಶೀಘ್ರವಾಗಿ ಚೇತರಿಸಿಕೊಳ್ಳುವುದು, ಮೈಕಾಂತಿ ಉತ್ತಮಗೊಳ್ಳುವುದು, ಹೆರಿಗೆಯ ಕಾಲದ ತಾತ್ಕಾಲಿಕ ಸ್ಥೂಲಕಾಯ ಮಾಯವಾಗುವುದು ಕಂಡುಬಂದಿದೆ.
ಧ್ಯಾನದ ಸಮಯದಲ್ಲಿ ಈ ವಿಷಯಗಳು ಗಮನದಲ್ಲಿರಲಿ
*ನಿಮಗೆ ಆರಾಮವೆನಿಸುವ ಭಂಗಿಯಲ್ಲಿ ಚಕ್ಕಲೆಮಕ್ಕಲೆ ಕುಳಿತುಕೊಳ್ಳಿ. ಆರಾಮ ಅನ್ನಿಸದಿದ್ದರೆ ಕುರ್ಚಿಯ ಮೇಲೂ ಕುಳಿತುಕೊಳ್ಳಹುದು. ಸಾಧ್ಯವಾದಷ್ಟು ಬೆನ್ನುಮೂಳೆ ನೆಟ್ಟಗೇ ಇರಲಿ.
*ಧ್ಯಾನದ ಸಮಯದಲ್ಲಿ ಯಾವುದೇ ಸೆಳೆತ ಇರಬಾರದು. ಮೊಬೈಲ್ ನಿಶಃಬ್ದವಾಗಿಸಿ. ಟೀವಿ ರೇಡಿಯೋಗಳನ್ನೆಲ್ಲಾ ಬಂದ್ ಮಾಡಿ. ಮನಸ್ಸು ಸೆಳೆಯುವ ಯಾವುದೇ ವಸ್ತು ಎದುರಿಗಿರದಂತೆ ನೋಡಿಕೂಳ್ಳಿ.
ಕಣ್ಣುಮುಚ್ಚಿಕೊಂಡು ನಿಮ್ಮ ಗಮನವನ್ನು ಒಂದು ವಿಷಯದತ್ತ ಕೇಂದ್ರೀಕರಿಸಿ. ಈ ಸಮಯದಲ್ಲಿ ಕೇವಲ ಧನಾತ್ಮಕ ವಿಚಾರಗಳು ಆವರಿಸಲಿ. ಪ್ರಜ್ಞಾಪೂರ್ವಕವಾದ ಕಾಲ್ಪನಿಕ ವಿಷಯಗಳೂ ಆಗಬಹುದು. ಉದಾಹರಣೆಗೆ ನನಗೆ ಹುಟ್ಟಲಿರುವ ಮಗು ಉತ್ತಮ ವ್ಯಕ್ತಿಯಾಗಿದ್ದು ಸಮಾಜದಲ್ಲಿ ಮನ್ನಣೆ ಮತ್ತು ಗೌರವ ಪಡೆಯುತ್ತಾನೆ/ತ್ತಾಳೆ ಇತ್ಯಾದಿ.
*ಪ್ರಾರಂಭದಲ್ಲಿ ಧ್ಯಾನದ ಪರಿಣಾಮ ಏನೂ ಗೊತ್ತಾಗುವುದೇ ಇಲ್ಲ. ಆದರೆ ದಿನಗಳೆದಂತೆ ನಿಧಾನವಾಗಿ ಮನಸ್ಸಿನ ಮೇಲೆ ಆಗುವ ಪ್ರಭಾವವನ್ನು ಕಾಣಬಹುದು. ಗರ್ಭಾವಸ್ಥೆಯಲ್ಲಿ ಹೆರಿಗೆಯ ಮುನ್ನಾದಿನದವರೆಗೂ ಧ್ಯಾನವನ್ನು ಅನುಸರಿಸಬಹುದು. ಆದರೆ ಪ್ರತಿದಿನ ಒಂದೇ ಸಮಯವನ್ನು ಆಯ್ದುಕೊಂಡು ಆ ಪ್ರಕಾರವೇ ಅನುಸರಿಸಿ. ಇದರಿಂದ ಹೆರಿಗೆಯ ಸಮಯದಲ್ಲಿ ಮಾತ್ರವಲ್ಲ ಮುಂದಿನ ಜೀವನದಲ್ಲಿಯೂ ಒತ್ತಡವನ್ನು ಸಮರ್ಥವಾಗಿ ಎದುರಿಸಲು ಸಾಧ್ಯ.



Click it and Unblock the Notifications

