For Quick Alerts
ALLOW NOTIFICATIONS  
For Daily Alerts

ಬದಲಾಗದ ದೇಶ; ನೋಡಿ ಸ್ವಾಮಿ ನಾವ್ ಇರೋದೇ ಹೀಗೆ!

|

ಭಾರತವು ವಿಭಿನ್ನತೆಯಲ್ಲಿ ಏಕತೆಯನ್ನು ಹೊಂದಿರುವ ಸಂಸ್ಕೃತಿಗಳ ದೇಶ. ಆದರೆ ಕೆಲವು ಸಂಗತಿಗಳು ನಮ್ಮ ದೇಶದ ಘನತೆಗೆ ಮಸಿ ಬಳಿಯುತ್ತಿವೆ. ಇನ್ನು ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅರಿವಿರದ, ಇಲ್ಲವೇ ಅರಿವಿದ್ದು ಅರಿವಿಲ್ಲದಂತೆ ನಡೆದುಕೊಳ್ಳುವ ಜನರು ನಮ್ಮ ದೇಶದ ಮಾನವನ್ನು ಇತರ ದೇಶಗಳ ಮುಂದೆ ಹರಾಜು ಹಾಕುತ್ತಿದ್ದಾರೆ.

ಇವರ ವೈಯುಕ್ತಿಕ ವಿಚಾರದ ಬಗ್ಗೆ ನಾವು ಕೇಳುವುದಿಲ್ಲ ಬಿಡಿ. ಆದರೆ ಸಾರ್ವಜನಿಕವಾಗಿಯಾದರು ಇವರು ಸರಿಯಾಗಿ ಇರುತ್ತಾರಾ? ಅದೂ ಇಲ್ಲ. ಇಂತಹ ಜನರು ಒಂದು ಕಡೆ, ಶ್ರೀಮಂತ ಸಂಸ್ಕೃತಿ, ಇತಿಹಾಸ, ಆಹಾರ, ಭೌಗೋಳಿಕ ನೆಲೆಗಳು ಮತ್ತೊಂದು ಕಡೆ. ನಮ್ಮ ದೇಶ ಹಿಂದೆ ಹೇಗಿತ್ತೋ, ಈಗಲು ಹಾಗೆಯೇ ಇದೆ ಎಂದು ಹೇಳಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಹಿಂದೆ ಇನ್ನೂ ಚೆನ್ನಾಗಿದ್ದ ಸ್ಥಿತಿ ಈಗ ಮತ್ತಷ್ಟು ಹದಗೆಟ್ಟು ಹೋಗಿದೆ. ಅಂತಹ ಸಂಗತಿಗಳಲ್ಲಿ ಕೆಲವೊಂದನ್ನು ನಾವು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಒಂದು ವೇಳೆ ಇಂತಹ ವಿಚಾರದಲ್ಲಿ ನಿಮ್ಮ ಪಾಲು ಇದ್ದರೆ ದಯವಿಟ್ಟು ಆ ಅಭ್ಯಾಸಗಳನ್ನು ಬಿಟ್ಟು, ದೇಶವನ್ನು ಅಭಿವೃದ್ಧಿ ಮಾಡಲು ಪರೋಕ್ಷವಾಗಿ ಕೈ ಜೋಡಿಸಿ.

ನಮ್ಮ ದೇಶದಲ್ಲಿ ಬದಲಾಗದೆ ಉಳಿದ ಸಂಗತಿಯಲ್ಲಿ ಜನರು ಮೊದಲು. ಭಾರತದಲ್ಲಿ ಹೇಳಿ ಕುತೂಹಲವನ್ನು ಹೊಂದಿರುವ ಜನರೇ ಹೆಚ್ಚು. ಈ ಕುತೂಹಲ ಒಳ್ಳೆಯದಕ್ಕಲ್ಲ ಇತರರು ಮಾಡುವ ಕೆಲಸದಲ್ಲಿ ಸುಮ್ಮನೆ ಮೂಗು ತುರಿಸಲು ಮಾತ್ರ ಇವರ ಕುತೂಹಲ ಕೆಲಸಕ್ಕೆ ಬರುತ್ತದೆ. ಭ್ರಷ್ಟಾಚಾರ ಆ ಕಾಲದಿಂದ ಈ ಕಾಲದವರೆಗು ವಂಶಪಾರಂಪರ್ಯವೆಂಬಂತೆ ಬೆಳೆದುಕೊಂಡು ಬರುತ್ತಿದೆ. ಬದಲಾಗುವ ಒಂದು ಸಣ್ಣ ಸುಳಿವು ಸಹ ಅಲ್ಲಿ ಕಾಣುತ್ತಿಲ್ಲ.

ಯಾರೇ ಅಧಿಕಾರಕ್ಕೆ ಬಂದರು, " ಯಾರೂ ಮಾಡದೆ ಇರೋದು ನಾನು ಮಾಡ್ತಾ ಇದ್ದೀನಾ?" ಎಂದು ದಬಾಯಿಸಿ , ಭ್ರಷ್ಟಾಚಾರ ಅಧಿಕಾರದ ಆಜನ್ಮ ಸಿದ್ಧ ಹಕ್ಕು ಎಂಬ ಅಲಿಖಿತ ನಿಯಮವನ್ನು ಮೌಖಿಕ ಮಾಡುವವರೆಗೆ ಇದು ಬೆಳೆದಿದೆ. ನಮ್ಮ ಬೋಲ್ಡ್ ಸ್ಕೈ ಇಂತಹ ಕೆಲವೊಂದು ಅವಮಾನಕಾರಿಯಾದ ಸಂಗತಿಗಳನ್ನು ನಿಮ್ಮ ಮುಂದೆ ಇಡುತ್ತಿದೆ. ಬನ್ನಿ ಸುಮ್ಮನೆ ಒಂದು ಪಕ್ಷಿನೋಟವನ್ನು ಇದರ ಮೇಲೆ ಹರಿಸಿ:

ಅಶಿಸ್ತಿನಿಂದ ಕೂಡಿದ ಟ್ರಾಫಿಕ್

ಅಶಿಸ್ತಿನಿಂದ ಕೂಡಿದ ಟ್ರಾಫಿಕ್

ಆಂಬುಲೆನ್ಸ್‌ಗಳನ್ನು ಓವರ್ ಟೇಕ್ ಮಾಡಿ ದಾರಿ ಕೊಡದ ವಾಹನಗಳು, ಫುಟ್‍ಪಾತ್ ಮೇಲೆ ವಾಹನ ಓಡಿಸುವ ಸವಾರರು, ಕೆಂಪು ದೀಪವನ್ನು ಸಹ ಹಸಿರು ದೀಪ ಎಂದು ಪರಿಗಣಿಸುವ ವರ್ಣಾಂಧತೆಯಿರುವವರು, ರಸ್ತೆಯಲ್ಲಿ ಲೇನ್ ಡಿಸಿಪ್ಲೀನ್ ಎಂಬುದು ಇದೆ ಎಂದು ತಿಳಿಯದ ಅಜ್ಞಾನಿಗಳು, ಶಾಲಾ ವಾಹನಗಳನ್ನು ಸಹ ಓವರ್ ಸ್ಪೀಡಿನಲ್ಲಿ ಚಲಾಯಿಸುವ ಚಾಲಕರು, ಶಾಪಿಂಗ್ ಮಾಡಿ ಹೊರ ಬರುವವರೆಗೆ ರಸ್ತೆಯಲ್ಲಿಯೇ ಪಾರ್ಕ್ ಮಾಡಿ ಹೋಗುವ ಕಾರ್‌ಬಾರು!!! ಮಾಡುವ ಮಾಲೀಕರು ಬದಲಾಗಿದ್ದಾರೆ ಎಂದು ನಿಮಗೆ ಅನಿಸಿದೆಯೇ? ಇದಕ್ಕೆ ವಿದೇಶಿಯರು ನಮ್ಮ ದೇಶದ ಕುರಿತಾಗಿ ದಿಗ್ಭ್ರಮೆ ವ್ಯಕ್ತಪಡಿಸುತ್ತಾರೆ.

ಲಂಗು ಲಗಾಮಿಲ್ಲದ ಗಂಡಸರು

ಲಂಗು ಲಗಾಮಿಲ್ಲದ ಗಂಡಸರು

ಈ ದೇಶದಲ್ಲಿರುವ ಕೆಲವೊಂದು ಗಂಡಸರು ನಮ್ಮ ದೇಶದ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿ ಬಿಟ್ಟಿದ್ದಾರೆ. "ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ" ಎಂದು ಹೇಳುತ್ತಿದ್ದ ದೇಶದಲ್ಲಿ ಈಗ, ಎಲ್ಲಿ ಮಹಿಳೆಯರ ಮೇಲೆ, ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ, ಯುವತಿಯರ ಮೇಲೆ ಅತ್ಯಾಚಾರಗಳು ಹಾಗು ಸಾಮೂಹಿಕ ಅತ್ಯಾಚಾರಗಳು ನಡೆಯುತ್ತದೋ ಆ ದೇಶವನ್ನು ಭಾರತ ಎಂದು ಕರೆಯಬಹುದು ಎಂಬಷ್ಟರ ಮಟ್ಟಿಗೆ ತಂದು ನಿಲ್ಲಿಸಿದ್ದಾರೆ ನಮ್ಮ ನಡುವಿನ ಕೆಲವು ಪುರುಷರು!! ಶಿಕ್ಷಣವಂತರಾದರು, ಪ್ರಾಣಿಗಳಿಗಿಂತ ಕೀಳಾಗಿ ನಡೆದುಕೊಳ್ಳುವ ಇವರ ಜನ್ಮಕ್ಕೆ ಛೀ,,, ಧಿಕ್ಕಾರವಿರಲಿ. ಇವರು ಬದಲಾಗುವುದು ಯಾವಾಗ?

ಗುಂಡಿಗಳಿರುವ ರಸ್ತೆಗಳು

ಗುಂಡಿಗಳಿರುವ ರಸ್ತೆಗಳು

ರಸ್ತೆಗಳು ಎಂದರೆ?? ಅಲ್ಲಲ್ಲಿ ಮಳೆಯಿಂದ ಕಿತ್ತು ಬಂದ ಡಾಂಬರು, ಗುಂಡಿಗಳಲ್ಲಿ ನಿಂತ ನೀರು, ಅದರಲ್ಲಿ ಸೊಳ್ಳೆಗಳು, ಹೊಸ ಕಲ್ಲುಗಳನ್ನು ಹಾಕಲು ಕಾರ್ಪೋರೇಶನ್‍ನವರು ಕಿತ್ತು ಹಾಕಿದ ಪಾದಚಾರಿ ಮಾರ್ಗ, ಅದರ ಪಕ್ಕದಲ್ಲಿಯೇ ಕೇಬಲ್ ಹಾಕಲು ದೂರವಾಣಿಯವರು ತೋಡಿದ ಕಾಲುವೆ, ಒಳ ಚರಂಡಿ ಎಂಬುದು ಒಳಗೆ ಹರಿಯುತ್ತದೆ ಎಂಬುದು ನಮಗಂತೂ ಗೊತ್ತಿಲ್ಲ, ಅದು ಯಾವಾಗಲು ರಸ್ತೆಯ ಮೇಲೆಯೇ ಹರಿಯುತ್ತದೆ. ಇನ್ನು ಕೈಗಾಡಿಗಳು, ಪೋಲಿಗಳು, ಬಿಡಾಡಿ ಧನಗಳು, ನಾಯಿಗಳು, ಭಿಕ್ಷುಕರು, ಚಪ್ಪಾಳೆ ತಟ್ಟುತ್ತ ಬರುವ ಮಂಗಳ ಮುಖಿಯರು, ಇದರ ಜೊತೆಗೆ ಟ್ರಾಫಿಕ್ ಇಂತಹ ಒಂದು ಭೌಗೋಳಿಕ ಲಕ್ಷಣ ನಿಮಗೆ ಕಂಡು ಬಂದರೆ ಅದನ್ನು ರಸ್ತೆಯೆಂದು ಕರೆಯಿರಿ.

ಮಹಿಳೆಯರಿಗೆ ಮರ್ಯಾದೆ ಕೊಡದ ಜನರು

ಮಹಿಳೆಯರಿಗೆ ಮರ್ಯಾದೆ ಕೊಡದ ಜನರು

ಇಡೀ ದೇಶದಲ್ಲಿರುವ 99% ನದಿಗಳಿಗೆ ಹೆಂಗಸರ ಹೆಸರು ನೀಡಿದ ದೇಶ ನಮ್ಮದು. ಆದರೆ ಇಲ್ಲಿ ಅವರನ್ನು ನಡೆಸಿಕೊಳ್ಳುವ ಬಗೆ ನಿಜಕ್ಕು ಹೇಯ. ಭಾರತದ ಬಹುತೇಕ ಕಡೆ ಹೆಂಗಸರನ್ನು ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಾರೆ. ಇವರನ್ನು ಮಕ್ಕಳನ್ನು ಹೆರುವ ಮತ್ತು ಅಡುಗೆ ಮಾಡಿ ಹಾಕುವ ಯಂತ್ರಗಳ ಮಾದರಿಯಲ್ಲಿ ನೋಡುವ ಗುಣ ಇನ್ನೂ ಬದಲಾಗಿಲ್ಲ.

ತೀರಾ ಕೊಳಕು ಮಾಡುವ ಪ್ರವೃತ್ತಿ

ತೀರಾ ಕೊಳಕು ಮಾಡುವ ಪ್ರವೃತ್ತಿ

ಕೊಳಕು ನೋಡಲು ಕೊಳಚೆ ಪ್ರದೇಶಕ್ಕೆ ಹೋಗಬೇಕೆಂದಿಲ್ಲ ನಾಗರೀಕತೆ ಇದೆ ಎನ್ನುವ ಬಡಾವಣೆಗೆ ಹೋದರು ಇದನ್ನು ನೋಡಬಹುದು. ಪ್ರತಿ ರಸ್ತೆಯಲ್ಲೂ ಕಸದ ರಾಶಿಗಳನ್ನು ನಾವು ನೋಡಬಹುದು. ಬಸ್ಸು, ಕಾರಿನಲ್ಲಿ ಹೋಗುವವರು ನೀರು ಕುಡಿದು, ತಿಂಡಿ ತಿಂದು ರಸ್ತೆಯ ಮೇಲೆ ಎಸೆದು ಹೋಗುತ್ತಿರುತ್ತಾರೆ. ಇನ್ನು ರೈಲುಗಳು ಕಿಟಕಿಯಲ್ಲಿ ಎಸೆಯಲು ಸಹ ಆಗದೆ ಕುಳಿತ ಜಾಗದಲ್ಲಿಯೇ ಗಬ್ಬೆಬ್ಬಿಸಿ ಹೋಗುತ್ತಾರೆ. ವಿಶೇಷ ಎಂದರೆ ಪ್ಲಾಸ್ಟಿಕ್ ನಿಷೇಧ ಇರುವ ಪ್ರದೇಶಗಳಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್ ಕಸದ ರಾಶಿ ನಮ್ಮ ದೇಶದಲ್ಲಿ ಮಾತ್ರ ಕಾಣುತ್ತದೆ. ಇದೂ ಬದಲಾಗಿಲ್ಲ ಬಿಡಿ.

ಉಗುಳೋದೆ ನಮ್ಮ ಬ್ಯುಸಿನೆಸ್!!

ಉಗುಳೋದೆ ನಮ್ಮ ಬ್ಯುಸಿನೆಸ್!!

ಬಸ್ಸು, ರೈಲು, ಸದ್ಯ ವಿಮಾನ ಬಿಟ್ಟಿದ್ದಾರೆ!, ಆಸ್ಪತ್ರೆ, ಸಿನಿಮಾ ಹಾಲ್, ಕಲ್ಯಾಣ ಮಂಟಪ, ಹೋಟೆಲ್, ಬಾರ್, ಬಸ್ ಸ್ಟ್ಯಾಂಡ್, ರಸ್ತೆ ಎಲ್ಲಾ ಕಡೆ ಉಗುಳಿನ ಸಾಕ್ಷಿ ನಮಗೆ ದೊರೆಯುತ್ತದೆ. ಬಸ್ಸು-ರೈಲು ಮತ್ತು ಕಾರಿನಲ್ಲಿ ಕಿಟಕಿ ಪಕ್ಕ ಕುಳಿತವರು ಹಿಂದೆ ಮುಂದೆ ನೋಡದೆ ಉಗಿಯುತ್ತಾರೆ. ನೀವು ನೋಡಿ ಗದರಲಿಲ್ಲ ಎಂದರೆ ಅದು ಪುನರಾವರ್ತನೆಯಾಗುವುದರಲ್ಲಿ ಸಂಶಯವಿಲ್ಲ. ಗುಟ್ಕಾಗಳನ್ನು ಸೇವಿಸಿ ಇತರರಿಗೆ ಇರಿಸು ಮುರಿಸು ಮಾಡುವಂತೆ ಉಗುಳುವ ಈ ಬುದ್ಧಿ ಅವರಿಗೆ "ಉಗುದ್ರೂ ಹೋಗಲ್ಲ ಬಿಡಿ"

ಬಸ್ಸುಗಳಲ್ಲಿ ಮೈ ಮೇಲೆ ಬೀಳುವುದು

ಬಸ್ಸುಗಳಲ್ಲಿ ಮೈ ಮೇಲೆ ಬೀಳುವುದು

ಬಸ್ಸಿನಲ್ಲಿ ಸಹ ಪ್ರಯಾಣಿಕರಿಗೆ ಇರಿಸು ಮುರಿಸು ತರುವಂತೆ ಅವರ ದೇಹದ ಮೇಲೆ ವಾಲಾಡುವುದು ನಮ್ಮ ದೇಶದಲ್ಲಿ ಇನ್ನೂ ಬದಲಾಗಿಲ್ಲ. ಮಹಿಳೆಯರು, ಮಕ್ಕಳು ಮತ್ತು ಕೆಲವೊಮ್ಮೆ ಗಂಡಸರು ಸಹ ಈ ಕಿರಿಕಿರಿಗೆ ಸಿಕ್ಕಿಕೊಳ್ಳುತ್ತಾರೆ. ಅಕ್ಕ ಪಕ್ಕದಲ್ಲಿರುವವರ ವೈಯುಕ್ತಿಕ ಮರ್ಯಾದೆಯನ್ನು ಪರಿಗಣಿಸುವ ಸೌಜನ್ಯ ನಮ್ಮವರಿಗೆ ಇನ್ನೂ ಬರಬೇಕು.

ಸಾರ್ವಜನಿಕ ಸಮಸ್ಯೆಗಳು

ಸಾರ್ವಜನಿಕ ಸಮಸ್ಯೆಗಳು

ಸಾರ್ವಜನಿಕ ಸಮಸ್ಯೆಗಳು ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿ ಬಿಟ್ಟಿವೆ. ಯಾರು ಅಧಿಕಾರಕ್ಕೆ ಬಂದರು ಇದು ಬಗೆಹರಿಯುವುದಿಲ್ಲ. ಸಾರ್ವಜನಿಕವಾಗಿ ಆಗ ಬೇಕಾದ ಕೆಲಸಗಳು ಎಲ್ಲವೂ ಆಮೆಗಿಂತ ಮಂದಗತಿಯಲ್ಲಿ ಸಾಗುತ್ತವೆ. ಒಂದು ಫ್ಲೈ ಓವರ್ ಕಟ್ಟಲು ಐದು ವರ್ಷಬೇಕು, 30 ರೂಪಾಯಿ ಎಲ್‍ಎಲ್‍ಆರ್‌ಗೆ 500 ರೂಪಾಯಿ ಪಾವತಿಸಬೇಕು, ಇತ್ಯಾದಿ ಸಮಸ್ಯೆಗಳು ನಮ್ಮನ್ನು ಹಿಂಡಿ ಹಿಪ್ಪೆ ಮಾಡುವುದು ಇನ್ನೂ ನಿಂತಿಲ್ಲ.

 ಪೋಷಕರ ಪ್ರೀತಿ!

ಪೋಷಕರ ಪ್ರೀತಿ!

ಭಾರತದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಆರೈಕೆ ಮಾಡಿ ಬೆಳೆಸುತ್ತಾರೆ. ಇದು ನಮ್ಮ ಸಾಮರ್ಥ್ಯ. ಆದರೆ ಇದೇ ನಮ್ಮ ದೌರ್ಬಲ್ಯವು ಸಹ ಹೌದು. ಮಕ್ಕಳು ಏನಾದರು ಸಾಧಿಸುತ್ತೇನೆ ಎಂದು ಮನೆಯಿಂದ ಹೊರಗೆ ಹೊರಡುವಾಗ ಅವರ ಪೋಷಕರೇ ಅವರ ಪಾಲಿಗೆ ಅಡ್ಡಗೋಡೆಯಾಗುವುದು ಸಾಮಾನ್ಯ. ಏನೇ ಇರಲಿ ಮಗ-ಮಗಳು ನಮ್ಮ ಮುಂದೆಯೇ ಇರಬೇಕು, ನಾವು ಬದುಕಿರುವವರೆಗು ಎಂಬ ಅಭಿಪ್ರಾಯ ನಿಮ್ಮನ್ನು ನಿಮ್ಮ ಮಹತ್ವಾಕಾಂಕ್ಷೆಯಿಂದ ವಿಮುಖರನ್ನಾಗಿಸುತ್ತದೆ. ಹೀಗೆ ಪೊಸೆಸಿವ್ ಆಗಿ ವರ್ತಿಸುವ ಪೋಷಕರ ಗುಣದಲ್ಲಿ ಅಂದಿನಿಂದ ಇಂದಿನವರೆಗು ಯಾವುದೇ ಬದಲಾವಣೆಗಳಾಗಿಲ್ಲ.

ಕಳ್ಳ ಭಿಕ್ಷುಕರು

ಕಳ್ಳ ಭಿಕ್ಷುಕರು

ಭಿಕ್ಷೆ ಬೇಡುವುದು ಸಹ ನಮ್ಮಲಿ ಒಂದು ದೊಡ್ಡ ದಂಧೆ. ಅದರಲ್ಲೂ ವಿದೇಶಿಯರು ಅವರ ಕಣ್ಣಿಗೆ ಬಿದ್ದರೆ ಮುಗಿಯಿತು, ಅವರಿಂದ ದೊಡ್ಡ ಮಟ್ಟದ ಹಣ ಪೀಕುವವರೆಗೆ ಇವರು ಬಿಡುವುದಿಲ್ಲ. ಹಿಂದೆ ದೈನ್ಯತೆಯಿಂದ ಭಿಕ್ಷೆ ಬೇಡುತ್ತಿದ್ದರು, ಆದರೆ ಇಂದು ಜಬರ್‌ದಸ್ತ್ ಮಾಡಿ ಭಿಕ್ಷೆ ಬೇಡುತ್ತಾರೆ. ಭಿಕ್ಷಾಟನೆ ಮಾಡುವ ಜನರು ಅದನ್ನು ಬಿಟ್ಟು ಹೊಸ ಬದುಕು ಆರಂಭಿಸಬೇಕು ಎಂದು ಕನಸು ಮನಸಿನಲ್ಲು ಬಯಸುವುದಿಲ್ಲ.

ಪಾರ್ಕಿಂಗ್ ಸಮಸ್ಯೆ

ಪಾರ್ಕಿಂಗ್ ಸಮಸ್ಯೆ

ನೀವು ಎಲ್ಲೇ ಇರಿ ನಿಮ್ಮಲ್ಲಿ ವಾಹನವಿದ್ದರೆ ಪಾರ್ಕಿಂಗ್ ಸಮಸ್ಯೆ ತಪ್ಪಿದ್ದಲ್ಲ. ಜನ ಎಲ್ಲೆಂದರಲ್ಲಿ ಕಾರುಗಳನ್ನು ನಿಲ್ಲಿಸುತ್ತಾರೆ. ಎಲ್ಲಿ ನೋ ಪಾರ್ಕಿಂಗ್ ಇರುವುದೋ, ಅಲ್ಲಿಯೂ ನಿಲ್ಲಿಸುತ್ತಾರೆ. ಅಬ್ಬಾ, ನನ್ನ ವಾಹನಕ್ಕೆ ಪಾರ್ಕಿಂಗ್ ಸಿಕ್ಕಿತಲ್ಲ ಸಾಕು ಎಂದು ಪಾರ್ಕ್ ಮಾಡಿ ಹೊರಡುತ್ತಾರೆ. ಇನ್ನೂ ಕೆಲವರು ದರ್ಶಿನಿ ಹೋಟೆಲ್‍ನಲ್ಲಿ ನಿಂತು ತಿನ್ನಲಾಗದೆ ಕಾರಿಗೆ ತರಿಸಿಕೊಂಡು ತಿನ್ನುತ್ತಾರೆ. ಅದೂ ರಸ್ತೆಯಲ್ಲಿ ಪಾರ್ಕ್ ಮಾಡಿಕೊಂಡು!!.

English summary

Things That Will Never Change In India

India is a land of many cultures and diversities. But, the things that define India belittle the country. On foreign websites, India is defined as a 'garbage over a densely populated country'. In India But things that will never change in India are what keeping this great country from being a superpower.
Story first published: Friday, August 22, 2014, 14:44 [IST]
X
Desktop Bottom Promotion