Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಉತ್ತರ ಕನ್ನಡದಲ್ಲಿ ಹೋಳಿ ಸಮಯದಲ್ಲಿ ಕಣ್ಮನ ಸೆಳೆಯುವ ಸುಗ್ಗಿ ಕುಣಿತ: ಸುಗ್ಗಿ ವೇಷ ಹಾಕಿದವರು 7 ದಿನ ಪಾಲಿಸಲೇಬೇಕು ಈ ಕಠಿಣ ನಿಯಮ
ಇನ್ನೇನು ಹೋಳಿ ಹಬ್ಬಕ್ಕೆ ಎರಡೇ ದಿನ ಬಾಕಿ. ಆದರೆ ಉತ್ತರ ಕನ್ನಡದ ಕರಾವಳಿಯ ಜನರಿಗೆ ಈ ಹಬ್ಬದ ಸಂಭ್ರಮ ಆರಂಭವಾಗಿ ಆಗಲೇ ನಾಲ್ಕೈದು ದಿನ ಕಳೆದಿವೆ. ಯಾಕೆ ಅಂತೀರಾ?
ಉತ್ತರ ಕನ್ನಡದಲ್ಲಿ ಹೋಳಿಗೂ ಮೊದಲು ಅಂದರೆ ಏಳು ದಿನದ ಮೊದಲು ಹೋಳಿಯ ಹಬ್ಬದ ಪ್ರಯುಕ್ತವಾಗಿ ಸುಗ್ಗಿ ಕುಣಿತ ಎನ್ನುವ ಸಾಂಪ್ರದಾಯಿಕ ಜಾನಪದ ನೃತ್ಯ ಆರಂಭವಾಗುತ್ತದೆ. ಸುಗ್ಗಿ ವೇಷದಾರಿಗಳ ದಂಡೆ ಮನೆ ಮನೆಗೆ ಬಂದು ತಮ್ಮದೇ ಆದ ಜಾನಪದ ಹಾಡಿಗೆ ಹೆಜ್ಜೆ ಹಾಕಿ ಮನೆಯವರನ್ನ ರಂಜಿಸುತ್ತಾರೆ ಆ ಅದ್ಭುತ ದೃಶ್ಯವನ್ನು ನೋಡುವುದೇ ಚಂದ.

ಹೋಳಿ ಹುಣ್ಣಿಮೆಯನ್ನು ರಾಜ್ಯದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಉತ್ತರ ಕನ್ನಡದ ಕೆಲವು ಸಮುದಾಯಗಳು ಸುಗ್ಗಿ ಕುಣಿತ ನಡೆಸುತ್ತವೆ. ಉತ್ತರ ಕನ್ನಡದಲ್ಲಿ ಹೋಳಿಯ ಸಂದರ್ಭದಲ್ಲಿ ಬೇರೆ ಬೇರೆ ಸಮುದಾಯದವರು ಬೇರೆ ಬೇರೆ ರೀತಿಯಾದಂತಹ ಉಡುಗೆ ತೊಟ್ಟು ತಮ್ಮದೇ ಆದ ರೀತಿಯಲ್ಲಿ ಹೆಜ್ಜೆ ಹಾಕುತ್ತ ಸುಗ್ಗಿ ಕುಣಿತ ಮಾಡುತ್ತಾರೆ. ಈ ಸುಗ್ಗಿ ಕುಣಿತ ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ. ಸುಗ್ಗಿ ವೇಷ ಧರಿಸಿದವರು ಬಣ್ಣ ಬಣ್ಣದ ಗರಿಗಳ ತುರಾಯಿಯನ್ನು ತಲೆಗೆ ಕಟ್ಟಿಕೊಂಡು, ಕಾಲಿಗೆ ಗೆಜ್ಜೆ ಹಾಕಿಕೊಂಡು ಕೈಯಲ್ಲಿ ಕೋಲನ್ನು ಹಿಡಿದು ಕೋಲಾಟ ಮಾಡುತ್ತಾ ಮನೆ ಮುಂದೆ ಬಂದು ಜಾನಪದ ಹಾಡಿಗೆ ಸಾಂಪ್ರದಾಯಿಕ ಬದ್ಧವಾಗಿ ಕುಣಿಯುತ್ತಾರೆ. ಊರ ದೇವರ ಮುಂದೆ ಶುರುವಾದ ಈ ಕುಣಿತ ಸತತ ಏಳು ದಿನಗಳ ಕಾಲ ಆ ಊರಿನಲ್ಲಿ, ಆ ಊರಿಂದಚೆಗೆ ಪ್ರತಿಯೊಬ್ಬರ ಮನೆ ಮನೆಗೆ ಹೋಗಿ ಸುಗ್ಗಿಯ ಸೊಗಗನ್ನು ನೀಡಿ ಮತ್ತೆ ತಾವು ಎಲ್ಲಿ ಸುಗ್ಗಿ ವೇಷ ಕಟ್ಟಿದ್ದವೋ ಅಲ್ಲಿಯೇ ಬಂದು ಕುಣಿತವನ್ನು ಮುಕ್ತಾಯಗೊಳಿಸುತ್ತಾರೆ.
ಸುಗ್ಗಿ ಕುಣಿತ ಆಡುವವರು ಯಾರು
ಉತ್ತರ ಕನ್ನಡ ಭಾಗದಲ್ಲಿ ಹಾಲಕ್ಕಿ ಗೌಡರು, ಪಡ್ತಿ, ಮುಕ್ರಿ ಸಮುದಾಯದವರು, ಗುನಗಾ, ಕೊಮಾರಪಂತ, ಗೌಡ, ಹಳ್ಳೆರ, ಮೊದಲಾದ ಸಮುದಾಯಗಳು ಸುಖಿ ಕುಣಿತವನ್ನು ಆಡುವ ರೂಢಿಯನ್ನು ಇವತ್ತಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈ ಹಾಡಿಗೆ ಸುಮಾರು 60ಕ್ಕೂ ಹೆಚ್ಚು ಪಾಡ್ಡನಗಳು ರೂಢಿಯಲ್ಲಿವೆ. ಕೈಯಲ್ಲಿ ಕೋಲು ಹಿಡಿದು, ತಲೆಮೇಲೆ ಅಷ್ಟು ದೊಡ್ಡ ತುರಾಯಿ ಇದ್ದರೂ ಸ್ವಲ್ಪ ಆಯಾಸವಾಗದಂತೆ ಮನೆಯ ಮುಂದೆ ಈ ತಂಡ ಕುಣಿಯುತ್ತದೆ. ಜೊತೆಗೆ ಜಾಗಟೆ, ಪಾಂಡಿ, ಕಂಸಾಳೆ, ತಾಳ ಮೊದಲಾದ ಸದ್ದುಗಳು ಕುಣಿತದ ಶಕ್ತಿಯನ್ನು ಹೆಚ್ಚಿಸುತ್ತವೆ.
ಇನ್ನು ಉತ್ತರ ಕನ್ನಡ ಭಾಗದಲ್ಲಿ ಈ ಒಂದು ಕುಣಿತಕ್ಕೆ ವಿಶೇಷ ಗೌರವ ಇದೆ. ಯಾರ ಮನೆಗೆ ಈ ಕುಣಿತ ಹೋಗುತ್ತದೆಯೋ ಅವರ ಮನೆಯಲ್ಲಿ ಕುಣಿತದ ತಂಡದ ಮುಖ್ಯಸ್ಥನ ಕೈಯಲ್ಲಿ ಅಕ್ಕಿ, ತೆಂಗಿನಕಾಯಿ ಹಣ. ವೀಳ್ಯದೆಲೆ, ಅಡಿಕೆ ಮೊದಲಾದವುಗಳನ್ನು ನೀಡಿ ಗೌರವಿಸಲಾಗುತ್ತದೆ. ಇನ್ನು ಕುಣಿತಕ್ಕೆ ಬಂದವರು ಆ ಮನೆಯಲ್ಲಿ ವರ್ಷ ಪೂರ್ತಿ ಸುಗ್ಗಿ ಹಿಗ್ಗು ತುಂಬಿರಲಿ ಎಂದು ಪ್ರಾರ್ಥಿಸುತ್ತಾರೆ.
ಸುಗ್ಗಿಯ ನಿಯಮಾವಳಿಗಳು:
ಸುಗ್ಗಿ ಕುಣಿಯುವವರು ವೇಷತೊಟ್ಟ ನಂತರ ಹಿಂದಿರುಗಿ ಏಳು ದಿನಗಳ ಕಾಲ ಮನೆಗೆ ಹೋಗುವಂತಿಲ್ಲ ಅವರಿಗೆ ಮೀಸಲಾದ ಸ್ಥಳದಲ್ಲಿಯೇ ಉಳಿದುಕೊಳ್ಳುತ್ತಾರೆ. ಬಿಸಿಲಿರಲಿ, ಎಷ್ಟೇ ದೂರ ನಡೆದು ಹೋಗುವ ಪರಿಸ್ಥಿತಿ ಇರಲಿ ಕಾಲಿಗೆ ಚಪ್ಪಲಿಯನ್ನು ಮಾತ್ರ ಧರಿಸುವುದಿಲ್ಲ. ಇನ್ನು ಸುಗ್ಗಿ ಕುಣಿತ ಮಾಡುವಾಗ ಯಾವುದೇ ಮನೆಯಲ್ಲಿ ಊಟ, ತಿಂಡಿ, ನೀರು ಇವುಗಳನ್ನ ಸೇವಿಸಿ ತಮ್ಮ ಕುಣಿತವನ್ನು ಮುಂದುವರಿಸುತ್ತಾರೆ. ಸುಗ್ಗಿ ಕುಣಿತವನ್ನು ಮಾಡುವವರು ಮಧ್ಯಪಾನ ಸೇವನೆ, ಮಾಂಸಾಹಾರ ಸೇವನೆಯನ್ನು ಆ ಏಳು ದಿನಗಳ ಕಾಲ ಮಾಡುವುದಿಲ್ಲ ದೇವರ ಹೆಸರಿನಲ್ಲಿ ಮಾಡುವುದರಿಂದ ದೇವರಿಗೆ ಅದನ್ನು ಅರ್ಪಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಬದ್ಧವಾಗಿ ಹಾಗೂ ತಮ್ಮದೇ ಅದ ರೀತಿಯಲ್ಲಿ ಶಿಷ್ಟಾಚಾರಗಳನ್ನು ಕೂಡ ಅಳವಡಿಸಿಕೊಂಡಿರುತ್ತಾರೆ.
ಸುಗ್ಗಿಯ ಏಳು ದಿನಗಳು ಮುಗಿದ ನಂತರ ಹೋಳಿ ಹುಣ್ಣಿಮೆಯ ದಿನ ತಾವು ಎಲ್ಲಿ ಸುಗ್ಗಿ ವೇಷವನ್ನು ಕಟ್ಟಿ ನೃತ್ಯ ಆರಂಭಿಸಿದ್ದರೋ ಅದೇ ಸ್ಥಳಕ್ಕೆ ತೆರಳಿ ತಾವು ನಂಬಿರುವ ಕರಿ ದೇವರಿಗೆ ಪೂಜೆ ಸಲ್ಲಿಸಿ ತುರಾಯಿಯನ್ನು ದೇವರ ಪಾದಾರವಿಂದಕ್ಕೆ ಅರ್ಪಿಸುತ್ತಾರೆ. ಅಲ್ಲಿಗೆ ಆ ವರ್ಷದ ಸುಗ್ಗಿ ಕುಣಿತ ಕೊನೆಗೊಳ್ಳುತ್ತದೆ.
ನಶಿಸುತ್ತಿರುವ ಸಂಪ್ರದಾಯ:
ಕರಾವಳಿ ಭಾಗದಲ್ಲಿ ಬಳಕೆಯಲ್ಲಿ ಇರುವ ಈ ಸುಗ್ಗಿ ಕುಣಿತ ತಲೆತಲಾಂತರಗಳಿಂದ ನಡೆದುಕೊಂಡು ಬಂದ ಒಂದು ಜಾನಪದ ಕಲೆ. ಆದರೆ ಇತ್ತೀಚಿಗೆ ಸುಗ್ಗಿ ಕುಣಿತ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಇಷ್ಟು ವರ್ಷ ಸುಗ್ಗಿ ಕುಣಿದುಕೊಂಡು ಬರುತ್ತಿದ್ದವರಿಗೆ ವಯಸ್ಸಾಗಿದೆ. ಇನ್ನು ಅವರ ಮಕ್ಕಳು ಸುಗ್ಗಿ ಕುಣಿತ ಮುಂದುವರಿಸಲು ಇಷ್ಟಪಡುತ್ತಿಲ್ಲ ಅಥವಾ ಬೇರೆ ಊರಿಗೆ ಕೆಲಸಕ್ಕಾಗಿಯೂ ಹೋಗಿರುತ್ತಾರೆ. ಹಾಗಾಗಿ ಸುಗ್ಗಿ ಕುಣಿತ ಮಾಡಲು ತಂಡ ರಚಿಸಿಕೊಳ್ಳಲು ಬೇಕಾದಷ್ಟು ಜನರೇ ಈಗ ಸಿಗುತ್ತಿಲ್ಲ ಎನ್ನುವುದು ಆಯಾ ಸಮುದಾಯಗಳ ಅಳಲು. ಅದು ಅಲ್ಲದೆ ಸುಗ್ಗಿ ಕುಣಿತಕ್ಕೆ ಬಳಸಲಾಗುವ ತುರಾಯಿ, ಬಟ್ಟೆ, ಗೆಜ್ಜೆ ಮೊದಲಾದವುಗಳ ಬೆಲೆಯು ಹೆಚ್ಚಾಗಿದೆ. ಅದನ್ನು ಕೊಂಡುಕೊಳ್ಳುವ ಶಕ್ತಿ ಕೆಲವು ಸಮುದಾಯದವರಲ್ಲಿ ಇರುವುದಿಲ್ಲ. ಕೆಲವು ಕಡೆ ಸುಗ್ಗಿ ಕುಣಿತದ ಸಂದರ್ಭದಲ್ಲಿ ಕೊಡುವ ದೇಣಿಗೆ ಕೂಡ ಬಹಳ ಕಡಿಮೆ. ಹೀಗಾಗಿ ಅವರ ನಿತ್ಯದ ಖರ್ಚನ್ನು ಪೂರೈಸಲಾಗದ ಪರಿಸ್ಥಿತಿ ಇದೆ. ಈ ಎಲ್ಲಾ ಕಾರಣಗಳಿಂದಾಗಿ ಸುಗ್ಗಿ ಕುಣಿತ ಎನ್ನುವ ಅತ್ಯದ್ಭುತ ಜಾನಪದ ಕಲೆ ಹಾಗೂ ಸಂಪ್ರದಾಯ ಅಳಿವಿನ ಅಂಚಿನಲ್ಲಿದೆ.



Click it and Unblock the Notifications

