Janmashtami 2025: ಉಪವಾಸ ನಿಯಮಗಳಿವು! ಏನು ಮಾಡಬೇಕು & ಏನು ಮಾಡಬಾರದು?

ಜನ್ಮಾಷ್ಟಮಿ ಉಪವಾಸದಲ್ಲಿ ಈ ತಪ್ಪುಗಳನ್ನು ಮಾಡಬೇಡಿ! ಏನು ಮಾಡಬೇಕು, ಏನು ಮಾಡಬಾರದು ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಹೌದು, ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ (Krishna Janmashtami 2025) ಒಂದಾಗಿದೆ. ಈ ದಿನ ಭಕ್ತರು ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಲು ಉಪವಾಸ ಆಚರಿಸುತ್ತಾರೆ. ಭಕ್ತರು ಕೃಷ್ಣನ ಜನ್ಮದಿನದಂದು ಉಪವಾಸವಿದ್ದು, ಭಜನ ಮತ್ತು ಕೀರ್ತನೆಗಳೊಂದಿಗೆ ರಾತ್ರಿಯವರೆಗೂ ಜಾಗರಣೆ ಮಾಡುತ್ತಾರೆ. ಉಪವಾಸದ ಹಿಂದಿನ ಉದ್ದೇಶ ದೇಹ ಮತ್ತು ಮನಸ್ಸನ್ನು ಶುದ್ಧಗೊಳಿಸಿ, ಕೃಷ್ಣನಲ್ಲಿ ಏಕಾಗ್ರತೆ ಸಾಧಿಸುವುದು. ಆದರೆ, ಇದರಲ್ಲೂ ಕೆಲವು ಮಾಡಬೇಕಾದ ಮತ್ತು ಮಾಡಬಾರದ ನಿಯಮಗಳಿವೆ.

ಭಗವಾನ್ ವಿಷ್ಣುವಿನ ಎಂಟನೇ ಅವತಾರವಾದ ಶ್ರೀ ಕೃಷ್ಣನ ಜನ್ಮದಿನವನ್ನು ಆಚರಿಸುವ ಜನ್ಮಾಷ್ಟಮಿ, ಹಿಂದೂ ಕ್ಯಾಲೆಂಡರ್‌ನಲ್ಲಿ ಅತ್ಯಂತ ಪವಿತ್ರ ಹಬ್ಬವೆಂದು ಪರಿಗಣಿಸಲಾಗಿದೆ. ದೇಶಾದ್ಯಂತ ಆಚರಿಸಲ್ಪಡುವ ಈ ಹಬ್ಬವನ್ನು ಭಾದ್ರಪದ ಮಾಸದ ಕೃಷ್ಣ ಪಕ್ಷದ ಎಂಟನೇ ದಿನದಂದು (ಅಷ್ಟಮಿ) ಆಚರಿಸಲಾಗುತ್ತದೆ. ಈ ವರ್ಷ ಜನ್ಮಾಷ್ಟಮಿ ಆಗಸ್ಟ್ 16 (ಶನಿವಾರ) ರಂದು ಬಂದಿದೆ. ಉಪವಾಸದ ನಿಯಮಗಳು ಪ್ರಾದೇಶಿಕ ಆಚರಣೆಗಳು ಮತ್ತು ವೈಯಕ್ತಿಕ ಪದ್ಧತಿಗಳ ಆಧಾರದ ಮೇಲೆ ಬದಲಾಗುತ್ತವೆ. ಆದರೆ, ಅವೆಲ್ಲವೂ ಭಕ್ತಿ ಮತ್ತು ಶ್ರದ್ಧೆಯನ್ನು ಕೇಂದ್ರೀಕರಿಸುತ್ತವೆ. ಜನ್ಮಾಷ್ಟಮಿಯಂದು ಉಪವಾಸ ಮಾಡುವಾಗ ಪಾಲಿಸಬೇಕಾದ ಕೆಲವು ನಿಯಮಗಳು (Janmashtami Fasting Rules) ಇಲ್ಲಿವೆ.

Krishna Janmashtami Fasting

ಏನು ಮಾಡಬೇಕು, ಏನು ಮಾಡಬಾರದು?

• ಶುಚಿತ್ವ ಕಾಪಾಡಿ: ನಿಮ್ಮ ಮನಸ್ಸು ಮತ್ತು ದೇಹದ ಶುದ್ಧತೆಯನ್ನು ಕಾಪಾಡಲು ಶುಚಿತ್ವ ಬಹಳ ಮುಖ್ಯ. ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ. ಮನೆಯನ್ನು ಸ್ವಚ್ಛಗೊಳಿಸಿ ಮತ್ತು ಪೂಜಾ ಸ್ಥಳಕ್ಕೆ ವಿಶೇಷ ಗಮನ ನೀಡಿ. ಲಡ್ಡು ಗೋಪಾಲ ಮತ್ತು ಶ್ರೀ ಕೃಷ್ಣನ ವಿಗ್ರಹಕ್ಕೆ ಪವಿತ್ರ ಸ್ನಾನ ಮಾಡಿಸಬೇಕು.

• ಸಂಕಲ್ಪ ಕೈಗೊಳ್ಳಿ: ನೀವು ಉಪವಾಸ ವ್ರತ ಆಚರಿಸುವಾಗ, ಶ್ರೀಕೃಷ್ಣನ ಪೂಜೆಗೆ ನಿಮ್ಮನ್ನು ಏಕೆ ಸಮರ್ಪಿಸಿಕೊಳ್ಳುತ್ತೀರಿ ಎಂಬುದಕ್ಕೆ ದೃಢ ಸಂಕಲ್ಪ (ಪ್ರತಿಜ್ಞೆ) ಕೈಗೊಳ್ಳಿ. ದಿನವಿಡೀ ಮಂತ್ರಗಳು ಮತ್ತು ಪ್ರಾರ್ಥನೆಗಳನ್ನು ಪಠಿಸಿ.

• ಮನೆಯಲ್ಲಿ ಪ್ರಸಾದ ತಯಾರಿಸಿ: ಪ್ರಸಾದವನ್ನು (ನೈವೇದ್ಯ) ಮನೆಯಲ್ಲಿಯೇ ತಯಾರಿಸಿ. ಶ್ರೀಕೃಷ್ಣನಿಗೆ ನೈವೇದ್ಯವಾಗಿ ಭಕ್ತರು ಹೆಚ್ಚಾಗಿ ಪೇಡಾ, ಘೀಯಾ ಕಿ ಲೌಜ್, ನಾರಿಯಲ್ ಗಜಕ್, ಪಂಜಿರಿ ಮತ್ತು ಇತರ ಹಾಲು ಆಧಾರಿತ ಸಿಹಿತಿಂಡಿಗಳನ್ನು ತಯಾರಿಸುತ್ತಾರೆ.

• ದಾನ ಮಾಡಿ: ಈ ದಿನ ದಾನವನ್ನು ಭಕ್ತಿ ಮತ್ತು ಸದ್ಭಾವನೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ನೀವು ಬಡವರಿಗೆ ಆಹಾರ, ಬಟ್ಟೆ ಅಥವಾ ಹಣವನ್ನು ದಾನ ಮಾಡಿ. ಇತರರಿಗೆ ಸಹಾಯ ಮಾಡುವುದು ದೇವರ ಹತ್ತಿರವಾಗಲು ಉತ್ತಮ ಮತ್ತು ಸುಲಭ ಮಾರ್ಗವಾಗಿದೆ.

• ಮಾಂಸಾಹಾರ ತ್ಯಜಿಸಿ: ಹಬ್ಬದ ಆಚರಣೆಯ ಸಮಯದಲ್ಲಿ, ಮಾಂಸಾಹಾರವನ್ನು ತ್ಯಜಿಸಿ. ಕುಟುಂಬದ ಸದಸ್ಯರು ಉಪವಾಸ ಮಾಡದಿದ್ದರೂ, ಈ ಅವಧಿಯಲ್ಲಿ ಅವರು ಮಾಂಸಾಹಾರವನ್ನು ಸೇವಿಸುವುದರಿಂದ ದೂರವಿರಬೇಕು.

• ಮದ್ಯಪಾನದಿಂದ ದೂರವಿರಿ: ಈ ದಿನ ಉಪವಾಸ ಆಚರಿಸುವಾಗ ಮದ್ಯಪಾನ, ತಂಬಾಕು ಅಥವಾ ಯಾವುದೇ ರೀತಿಯ ಮಾದಕ ವಸ್ತುವನ್ನು ಸೇವಿಸುವುದರಿಂದ ದೂರವಿರಿ.

ಉಪವಾಸದ ವಿಧಗಳು

ಜನ್ಮಾಷ್ಟಮಿಯ ದಿನದಂದು ಭಕ್ತರು ಸಾಮಾನ್ಯವಾಗಿ ಎರಡು ಮುಖ್ಯ ರೀತಿಯ ಉಪವಾಸಗಳನ್ನು ಆಚರಿಸುತ್ತಾರೆ. ಒಂದು ನಿರ್ಜಲ (ನೀರಿಲ್ಲದೆ) ಮತ್ತು ಫಲಹಾರ (ಹಣ್ಣು ಮತ್ತು ಹಾಲು ಆಧಾರಿತ ಆಹಾರ).

• ನಿರ್ಜಲ ಉಪವಾಸ: ಇದು ಉಪವಾಸದ ಅತ್ಯಂತ ಕಠಿಣ ರೂಪವಾಗಿದೆ. ಭಕ್ತರು ದಿನವಿಡೀ ಆಹಾರ ಮತ್ತು ನೀರಿಲ್ಲದೆ ಇರುತ್ತಾರೆ. ಕೃಷ್ಣನ ಜನ್ಮದ ಸಮಯ ಎಂದು ನಂಬಿರುವ ಮಧ್ಯರಾತ್ರಿಯ ನಂತರ, ಪ್ರಾರ್ಥನೆ ಮತ್ತು ಆರತಿ ಅರ್ಪಿಸಿದ ನಂತರ ಉಪವಾಸವನ್ನು ಕೊನೆಗೊಳಿಸುತ್ತಾರೆ.

• ಫಲಹಾರ ಉಪವಾಸ: ನಿರ್ಜಲ ಉಪವಾಸ ಮಾಡಲು ಸಾಧ್ಯವಾಗದವರಿಗೆ, ಫಲಹಾರ ಉಪವಾಸವು ಹಣ್ಣುಗಳು, ಹಾಲು ಮತ್ತು ನೀರನ್ನು ಸೇವಿಸಲು ಅನುಮತಿ ಅಥವಾ ಅವಕಾಶವಿದೆ. ಭಕ್ತರು ಧಾನ್ಯಗಳು, ಬೇಳೆಕಾಳುಗಳು ಮತ್ತು ಈರುಳ್ಳಿ, ಬೆಳ್ಳುಳ್ಳಿಯಂತಹ ಕೆಲವು ತರಕಾರಿಗಳನ್ನು ಸೇವಿಸುವುದರಿಂದ ದೂರವಿರುತ್ತಾರೆ. ಬದಲಾಗಿ, ಸಾತ್ವಿಕ ಆಹಾರವನ್ನು ಅನುಸರಿಸುತ್ತಾರೆ.

ಉಪವಾಸ ಮುಕ್ತಾಯ ಹೇಗೆ?

ಜನ್ಮಾಷ್ಟಮಿಯ ದಿನದಂದು ಉಪವಾಸವು, ಸಾಮಾನ್ಯವಾಗಿ ದಿನವಿಡೀ ಪ್ರಾರ್ಥನೆಗಳು, ಭಜನೆಗಳು ಮತ್ತು ಭಗವದ್ಗೀತೆ ಅಥವಾ ಕೃಷ್ಣ ಲೀಲೆಯ ಪಠಣದೊಂದಿಗೆ ಇರುತ್ತದೆ. ಅನೇಕ ಭಕ್ತರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿ ಕೃಷ್ಣನ ಜನ್ಮವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಉಪವಾಸವನ್ನು ಸಾಂಕೇತಿಕವಾಗಿ ಶ್ರೀ ಕೃಷ್ಣನ ಜನ್ಮದ ನಂತರ ಮಧ್ಯರಾತ್ರಿ ಕೊನೆಗೊಳಿಸಲಾಗುತ್ತದೆ. ಕೃಷ್ಣನಿಗೆ ತಯಾರಿಸಿದ ಆಹಾರವನ್ನು (ನೈವೇದ್ಯ) ಅರ್ಪಿಸುವ ಮೂಲಕ ಉಪವಾಸ ಮುರಿಯುವ ಆಚರಣೆ ನಡೆಯಲಿದೆ. ನಂತರ ಆ ಪ್ರಸಾದವನ್ನು ಭಕ್ತರು ಸ್ವೀಕರಿಸುತ್ತಾರೆ.

ಜನ್ಮಾಷ್ಟಮಿ ಶುಭ ಮುಹೂರ್ತಗಳು

• ಜನ್ಮಾಷ್ಟಮಿ ರಜೆ ಶನಿವಾರ, ಆಗಸ್ಟ್ 16, 2025
• ಅಷ್ಟಮಿ ತಿಥಿ ಪ್ರಾರಂಭ ಆಗಸ್ಟ್ 15, 2025 ರಂದು ರಾತ್ರಿ 11.49 ಗಂಟೆಗೆ
• ಅಷ್ಟಮಿ ತಿಥಿ ಅಂತ್ಯ ಆಗಸ್ಟ್ 16, 2025 ರಂದು ರಾತ್ರಿ 9.34 ಗಂಟೆಗೆ
• ನಿಶಿತಾ ಪೂಜೆ (ಮಧ್ಯರಾತ್ರಿ) ಆಗಸ್ಟ್ 17 ರಂದು ಮಧ್ಯರಾತ್ರಿ 12.04 ರಿಂದ 12.47 ಗಂಟೆಯ ವರೆಗೆ
• ಶ್ರೀ ಕೃಷ್ಣನ ಜನ್ಮ ಮುಹೂರ್ತ ಆಗಸ್ಟ್ 17 ರಂದು ಮಧ್ಯರಾತ್ರಿ 12.25 ರಿಂದ 12.47 ರವರೆಗೆ
• ಉಪವಾಸ ಮುರಿಯುವ ಸಮಯ (ಪಾರಣ) ಆಗಸ್ಟ್ 16 ರಂದು ರಾತ್ರಿ 9.34 ಗಂಟೆಯ ನಂತರ

English summary

Janmashtami 2025: Here are the Fasting Rules, Dos And Don'ts in kannada

Janmashtami 2025: Here are the Fasting Rules, Dos And Don'ts in kannada
Story first published: Wednesday, August 13, 2025, 13:00 [IST]
X
Desktop Bottom Promotion