ಹಬ್ಬದ ಸಂಭ್ರಮಕ್ಕಾಗಿ ರಂಗೋಲಿ ಅತಿ ವಿಶೇಷ ಹೇಗೆ?

ನೀವು ದಕ್ಷಿಣ ಭಾರತದವರಾಗಿದ್ದಲ್ಲಿ, ನೀವು ಮನೆಯ ಮುಂದೆ, ಬೆಳ್ಳಂ ಬೆಳಗ್ಗೆ ರಂಗು ರಂಗಿನ ರಂಗೋಲಿಗಳನ್ನು ನೋಡಿರುತ್ತೀರಿ. ಇದರ ಜೊತೆಗೆ ಪ್ರತಿಯೊಂದು ಹಿಂದೂ ಹಬ್ಬಗಳ ಸಂದರ್ಭದಲ್ಲಿ, ಮನೆಯ ಮುಂದೆ, ಗೇಟಿನ ಮುಂಭಾಗದಲ್ಲಿ ನೀವು ತರಹೇವಾರಿ ಬಣ್ಣಗಳಿಂದ ಮತ್ತು ಹೂವುಗಳಿಂದ ಅಲಂಕರಿಸಲಾದ ರಂಗೋಲಿಗಳನ್ನು ನೋಡಿರುತ್ತೀರಿ. ಈ ರಂಗೋಲಿಯ ವಿನ್ಯಾಸಗಳಿಗೆ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ವಿವಿಧ ಹೆಸರುಗಳು ಚಾಲ್ತಿಯಲ್ಲಿವೆ.

ರಂಗೋಲಿ, ಮುಗ್ಗು, ಪೂಕಳಂ ಮತ್ತು ಅಲ್ಪನ ಎಂಬ ಹೆಸರುಗಳಿಂದ ಇವುಗಳನ್ನು ವಿವಿಧೆಡೆ ಕರೆಯುತ್ತಾರೆ. ಪ್ರತಿ ಪ್ರಾಂತ್ಯದಲ್ಲಿ ತಮ್ಮದೇ ಆದ ವಿಶೇಷವಾದ ರಂಗೋಲಿ ವಿನ್ಯಾಸಗಳು ಕಂಡು ಬರುತ್ತವೆ. ಕೇರಳದಲ್ಲಿರುವವರು ಹೂವು ಮತ್ತು ಎಲೆಗಳಿಂದ ಪೂಕಳಂ ಎಂಬ ರಂಗೋಲಿ ವಿನ್ಯಾಸವನ್ನು ರಚಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಅಲ್ಪನ ಎಂಬ ಅಕ್ಕಿ ಪೇಸ್ಟ್‌ನಿಂದ ರಚಿಸುವ ರಂಗೋಲಿಯಿದೆ. ಇದೇ ಪ್ರಕಾರವಾಗಿ ದಕ್ಷಿಣ ಭಾರತದಲ್ಲಿ ಅಕ್ಕಿ ಪುಡಿಯಿಂದ ರಂಗೋಲಿಗಳನ್ನು ಹಾಕುತ್ತಾರೆ. ಆದರೆ ರಂಗೋಲಿಯನ್ನು ಬಿಡುವ ಸಂಸ್ಕೃತಿಯು ದೇಶದಾದ್ಯಂತ ಒಂದೇ ಪ್ರಕಾರವಾಗಿ ಉಳಿದುಕೊಂಡಿದೆ. ಈ ದೀಪಾವಳಿಗೆ 8 ಸೂಪರ್ ರಂಗೋಲಿ ಐಡಿಯಾ

Why Hindus Make Rangoli During Festivals?

ನಂಬಿಕೆಗಳ ಪ್ರಕಾರ ರಂಗೋಲಿಯು ಅದೃಷ್ಟವನ್ನು ತರುತ್ತದೆಯಂತೆ. ಇದು ದೇವರುಗಳನ್ನು ಮನೆಯೊಳಕ್ಕೆ ಸ್ವಾಗತಿಸುತ್ತದೆಯಂತೆ. ರಂಗೋಲಿ ಪುಡಿ ಸಾಮಾನ್ಯವಾಗಿ ಸುಣ್ಣದ ಬಿಳಿ ಪುಡಿ ಅಥವಾ ಅಕ್ಕಿ ಪುಡಿ ಮತ್ತು ಅರಿಶಿಣ ಅಥವಾ ಕುಂಕುಮಗಳಿಂದ ಕೂಡಿರುತ್ತದೆ. "ರಂಗೋಲಿ" ಎಂಬುದು ಸಂಸ್ಕೃತ ಪದವಾಗಿದ್ದು, ಇದು ಬಣ್ಣಗಳಿಂದ ಕೂಡಿದ ಕಲೆಯ ಅಭಿವ್ಯಕ್ತಿ ಎಂಬ ಅರ್ಥವನ್ನು ಸೂಚಿಸುತ್ತದೆ. ರಂಗೋಲಿಯ ವಿನ್ಯಾಸವು ನೆಲದ ಮೇಲೆ ಬಣ್ಣಗಳನ್ನು ಮತ್ತು ಗೆರೆಗಳನ್ನು ಸರಿಯಾದ ವಿನ್ಯಾಸದಲ್ಲಿ ಮೂಡಿಸುವ ಕಲೆಯನ್ನು ಬಯಸುತ್ತದೆ.

ಸಾಂಪ್ರದಾಯಿಕವಾಗಿ ರಂಗೋಲಿಯನ್ನು ಉತ್ತರ ಭಾರತದಲ್ಲಿ ಚೌಕಾಕರದಲ್ಲಿ ರಚಿಸಿದರೆ, ದಕ್ಷಿಣ ಭಾರತದಲ್ಲಿ ಷಡ್ಭುಜಾಕಾರದಲ್ಲಿ ರಚಿಸಲಾಗುತ್ತದೆ. ಆದರೆ ಓಣಂ ರಂಗೋಲಿ ಮಾತ್ರ ವೃತ್ತಾಕಾರವಾಗಿ ರಚಿಸಲಾಗುತ್ತದೆ. ಇವುಗಳ ಆಕಾರದಂತೆಯೇ, ಅವುಗಳಿಗೆ ಬಳಸುವ ಸಾಮಗ್ರಿಯು ಸಹ ವಿಭಿನ್ನತೆಯಿಂದ ಕೂಡಿರುತ್ತದೆ. ಉತ್ತರ ಭಾರತದಲ್ಲಿ ಜಿಪ್ಸಂ ಪುಡಿಯ ಬಣ್ಣದಿಂದ ರಂಗೋಲಿ ರಚಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಅಕ್ಕಿ ಪುಡಿಯಿಂದ ಮತ್ತು ಓಣಂ ರಂಗೋಲಿಯನ್ನು ಹೂವುಗಳಿಂದ ರಚಿಸಲಾಗುತ್ತದೆ.

ದಂತ ಕಥೆಗಳ ಪ್ರಕಾರ ಒಮ್ಮೆ ಒಬ್ಬ ರಾಜನು ತನ್ನ ಮಗನನ್ನು ಕಳೆದುಕೊಂಡನಂತೆ. ಆಗ ಆ ರಾಜನು ತನ್ನ ಮಗನನ್ನು ಮರಳಿ ನೀಡುವಂತೆ ಬ್ರಹ್ಮನನ್ನು ಪ್ರಾರ್ಥಿಸಿದನಂತೆ. ದೀರ್ಘಕಾಲದ ತಪಸ್ಸಿನ ನಂತರ ಬ್ರಹ್ಮ ದೇವನು ಆತನ ಮಗನಿಗೆ ಮರು ಜನ್ಮ ನೀಡಲು ಒಪ್ಪಿದನಂತೆ. ಇದಕ್ಕೆ ಪ್ರತಿಯಾಗಿ ಬ್ರಹ್ಮ ದೇವನು ಆ ರಾಜನಿಗೆ ಆತನ ಮಗನ ಚಿತ್ರವನ್ನು ನೆಲದ ಮೇಲೆ ಅಕ್ಕಿಯ ನಾದಿದ ಹಿಟ್ಟಿನಿಂದ ರಚಿಸುವಂತೆ ಹೇಳಿದನು. ಹೀಗೆ ಮಾಡಿದರೆ ಆ ಹುಡುಗನಿಗೆ ಮತ್ತೆ ಮರು ಜನ್ಮ ನೀಡುತ್ತೇನೆ ಎಂದು ಬ್ರಹ್ಮ ದೇವನು ಹೇಳಿದನು. ಹೀಗೆ ರಂಗೋಲಿಯು ಜೀವನ, ಅದೃಷ್ಟ ಮತ್ತು ಸಂಪತ್ತಿನ ಸಂಕೇತವಾಗಿ ಜನ್ಮ ತಳೆಯಿತು. ಆ ಕಾಲದಿಂದ ಇಲ್ಲಿನವರೆಗು ನಾವು ಈ ಸಂಪ್ರದಾಯವನ್ನು ಪಾಲಿಸುತ್ತಲೇ ಬರುತ್ತಿದ್ದೇವೆ.

ಇನ್ನು ದಕ್ಷಿಣ ಭಾರತದಲ್ಲಿ ರಂಗೋಲಿಗಳ ಬೆಳವಣಿಗೆಯು ಚೋಳ ರಾಜರ ಕಾಲದಿಂದ ಉಗಮವಾಯಿತು. ಈ ರಂಗೋಲಿಗಳಿಗೆ ಅಕ್ಕಿ ಪುಡಿಯನ್ನು ಅಂದರೆ ಹಿಟ್ಟನ್ನು ಬಳಸುವ ಪರಿಕಲ್ಪನೆಯ ಹಿಂದೆ ಒಂದು ವಿಚಾರ ಅಡಗಿದೆ. ಅದೇನೆಂದರೆ ಅಕ್ಕಿ ಪುಡಿಯನ್ನು ರಂಗೋಲಿಗೆ ಬಳಸುವುದರಿಂದ ಇರುವೆಗಳಿಗೆ ಆಹಾರ ಸಿಗುತ್ತದೆಯೆಂಬ ಔದಾರ್ಯ ಇದರಲ್ಲಿ ಅಡಗಿದೆ. ರಂಗೋಲಿಯನ್ನು ಪವಿತ್ರವೆಂದು ಪರಿಗಣಿಸಿರುವುದರಿಂದ ಗುಡಿಸುವ ಮೂಲಕ ಅಳಿಸಲು ಹೋಗುವುದಿಲ್ಲ. ಬದಲಿಗೆ ಅದರ ಮೇಲೆ ನೀರನ್ನು ಹಾಕಿ ಒರೆಸಲಾಗುತ್ತದೆ.

ರಂಗೋಲಿಯು ಪ್ರಾಚೀನ ಕಾಲದಲ್ಲಿ ಒಂದು ಪ್ರಮುಖವಾದ ಅಲಂಕಾರಿಕ ವಿನ್ಯಾಸವಾಗಿತ್ತು. ಇಂದಿಗು ಸಹ ಇದು ತನ್ನ ವರ್ಚಸ್ಸನ್ನು ಹಾಗೆಯೇ ಕಾಪಾಡಿಕೊಂಡು ಬಂದಿದೆ. ಈ ಸಾಂಪ್ರದಾಯಿಕ ಅಲಂಕಾರಿಕ ವಿನ್ಯಾಸಗಳನ್ನು ಭಾರತದಲ್ಲಿ ಇಂದಿಗು ಹಬ್ಬ-ಹರಿದಿನಗಳ ಸಂದರ್ಭದಲ್ಲಿ, ಮದುವೆ, ನಾಮಕರಣ ಮುಂತಾದ ಶುಭ ಸಮಾರಂಭಗಳಲ್ಲಿ ಬಿಡಿಸಲಾಗುತ್ತವೆ. ರಾಸಾಯನಿಕ ಬಣ್ಣಗಳ ಬದಲಿಗೆ ಸ್ವಾಭಾವಿಕವಾದ ಬಣ್ಣಗಳನ್ನು ಬಳಸಿ ಅವುಗಳಿಗೆ ಬೇಕಾದ ವಿನ್ಯಾಸಗಳನ್ನು ನೀಡಲಾಗುತ್ತದೆ. ಆದಾಗಿಯೂ ರಂಗೋಲಿಯ ವಿನ್ಯಾಸಗಳು ತಮ್ಮ ಮೂಲ ಸ್ವರೂಪದಲ್ಲಿಯೇ ದೇಶದಾದ್ಯಂತ ಉಳಿದುಕೊಂಡು ಬಂದಿವೆ.

X
Desktop Bottom Promotion