For Quick Alerts
ALLOW NOTIFICATIONS  
For Daily Alerts

ಗಂಟಲಿನಲ್ಲಿ ಕಿಚ್ ಕಿಚ್: ಶುಂಠಿ ಇದೆಯಲ್ಲ!

By * ಮನಸ್ವಿನಿ, ನಾರಾವಿ
|
Health Benefits of Ginger
ನೆಗಡಿಯಾದರೆ ಸಾಕು ಶುಂಠಿ ಕಷಾಯ ಮಾಡಿ ಕುಡಿ ಸಾಕು ಎನ್ನುವುದು ನಮ್ಮ ಕಡೆ ರೂಢಿ. ಗಂಟಲಿನ ಕಿಚ್ ಕಿಚ್ ದೂರಾಗಿಸಲು ವಿಕ್ಸ್ ನ ಗೋಲಿಗಳನ್ನು ತೆಗೆದುಕೊಳ್ಳುವ ಮೊದಲೆ ಹಸಿ ಶುಂಠಿ ಸಕ್ಕರೆ ನಮ್ಮ ಬಾಯಿ ಸೇರಿರುತ್ತದೆ.

ತುಳಸಿ, ಶುಂಠಿ, ಕೊತ್ತಂಬರಿ ಬೀಜ ಇವು ಕಷಾಯಕ್ಕೆ ಖಾಯಂ ಪದಾರ್ಥಗಳು. ಅಡುಗೆಗೆ ಬಳಕೆಯಾಗುವುದಕ್ಕಿಂತ ಆರೋಗ್ಯ ವರ್ಧನೆಗೂ ಶುಂಠಿ ಹೆಚ್ಚು ಸಹಕಾರಿ ಎನ್ನಲಡ್ಡಿಯಿಲ್ಲ. ಶಾಲೆಯಲ್ಲಿ ಮಾತ್ರ ಮೇಷ್ಟ್ರು ಒಣ ಶುಂಠಿ ಕೊಡ್ಲಾ ಎಂದರೆ ನಡುಕ ಹುಟ್ಟಿಬಿಡುತ್ತಿತ್ತು.

ಪ್ರಪಂಚದೆಲ್ಲೆಡೆ ಸಿಗುವ ಅತ್ಯುತ್ತಮ ಔಷಧಿ ಎಂಬ ಕಾರಣಕ್ಕೆ ಇದನ್ನು 'ಮಹೌಷಧಿ', 'ವಿಷ್ವಬೇಷಜ' ಎಂದು ಕರೆಯುತ್ತಾರೆ. ಜಠರದ ತೊಂದರೆ ನಿವಾರಣೆಗೆ, ಅಜೀರ್ಣ, ವಾಯು, ವಾಕರಿಕೆ, ಮಲಬದ್ಧತೆ, ಹೊಟ್ಟೆಯ ಸೋಂಕು ನಿವಾರಣೆಗೆ ಸಹಕಾರಿ. ಕೊಲೆಸ್ಟ್ರಾಲ್ ಕಮ್ಮಿ ಮಾಡುವುದರಿಂದ ಹೃದಯ ಸಂಬಂಧಿ ರೋಗದಿಂದ ಬಳಲುವವರಿಗೆ ಸಹಕಾರಿ.

ಶುಂಠಿಯ ಸಾಮಾನ್ಯ ಉಪಯೋಗಗಳು:

* ಅರ್ಧ ಟೀ ಚಮಚ ಶುಂಠಿ ರಸ, 1 ಟೀ ಚಮಚ ನಿಂಬೆರಸ, ಅಷ್ಟೇ ಪುದೀನ ಎಲೆಯ ರಸ, 1 ಟೀ ಚಮಚ ಜೇನುತುಪ್ಪ ಸೇರಿಸಿ 3 ಭಾಗ ಮಾಡಿ ದಿನಕ್ಕೆ 3 ಬಾರಿ ಸೇವಿಸಲು ಶ್ವಾಸರೋಗ, ಸ್ವರ ಭೇದ, ಅಜೀರ್ಣ, ಕೆಮ್ಮು ರೋಗಗಳನ್ನು ನಿವಾರಿಸಬಹುದು.

* 1 ಸಣ್ಣ ತುಂಡು ಹಸಿ ಶುಂಠಿಯನ್ನು 1 ಬಟ್ಟಲು ನೀರಿನಲ್ಲಿ 15 ನಿಮಿಷ ಕುದಿಸಿ, ಸ್ವಲ್ಪ ಸಕ್ಕರೆ ಹಾಕಿ ದಿನಕ್ಕೆ 3 ಬಾರಿ ಆಹಾರ ಸೇವನೆ ಮಾಡಿದರೆ ಋತುಸ್ರಾವದ ತೊಂದರೆಗಳು ನಿವಾರಣೆಯಾಗುತ್ತದೆ.

*1 ತುಂಡು ಶುಂಠಿ, 1 ಲವಂಗ, 1 ಹರಳು ಉಪ್ಪು ಇವುಗಳನ್ನು ಬಾಯಿಯಲ್ಲಿಟ್ಟು ಚಪ್ಪರಿಸುವುದರಿಂದ ಕೆಮ್ಮು, ಗಂಟಲು ಕೆರೆತಗಳನ್ನು ಹೋಗಲಾಡಿಸಬಹುದು.

* ಶುಂಠಿಯನ್ನು ನೀರಿನಲ್ಲಿ ಅರೆದು ಬರುವ ಗಂಧವನ್ನು ಹಣೆಗೆ ಲೇಪ ಮಾಡಿ ಹಚ್ಚುವುದರಿಂದ ತಲೆನೋವು ನಿವಾರಣೆಯಾಗುತ್ತದೆ.

* ಒಣ ಶುಂಠಿ ಚೂರ್ಣವನ್ನು ಬೆಲ್ಲದೊಂದಿಗೆ ನೀಡುವುದರಿಂದ ಅಜೀರ್ಣದಿಂದ ಉಂಟಾದ ಭೇದಿ ಹತೋಟಿಗೆ ಬರುತ್ತದೆ.

* ಒಣ ಶುಂಠಿ, ಮೆಣಸು ಮತ್ತು ಹಿಪ್ಪಲಿಗಳನ್ನು ಸಮನಾಗಿ ತೆಗೆದುಕೊಂಡು, ಹುರಿದು , ಪುಡಿ ಮಾಡಿಕೊಂಡು ತೆಳು ಬಟ್ಟೆಯಲ್ಲಿ ಸೋಸಿ, ಬೆಣ್ಣೆಯೊಡನೆ ಸೇವಿಸಿದರೆ ಹೊಟ್ಟೆ ನೋವು ನಿವಾರಣೆಯಾಗುತ್ತದೆ.

ಓದುಗರಲ್ಲಿ ಒಂದು ಅರಿಕೆ: ಔಷಧೀಯ ಸಸ್ಯಗಳ ಬಗ್ಗೆ ಇಲ್ಲಿ ನೀಡಿರುವ ಉಪಯೋಗಗಳು ಮುನ್ನೋಟದಂತೆ ಭಾವಿಸಬಹುದು. ನಿಮಗೆ ಹೆಚ್ಚಿನ ಉಪಯುಕ್ತ ಮಾಹಿತಿ ಲಭ್ಯವಾದರೆ ದಯವಿಟ್ಟು ನಮಗೂ ಕಳಿಸಿಕೊಡಿ. ಅದನ್ನು ಇನ್ನಷ್ಟು ಜನರಿಗೆ ತಲುಪಿಸೋಣ.

X
Desktop Bottom Promotion