ಈ ಚಿಕ್ಕ-ಚಿಕ್ಕ ತಪ್ಪುಗಳು ಹೃದಯಘಾತ ತರುವುದು

ನಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯು ನಮ್ಮ ಆರೋಗ್ಯವನ್ನು ನಿರ್ಧರಿಸುತ್ತವೆ. ಅದಕ್ಕೆ ಊಟ ಬಲ್ಲವನಿಗೆ ರೋಗವಿಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲ ಎಂದು ಹೇಳುವುದು. ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಚಾರದಲ್ಲಿ ಪ್ರತಿ ದಿನವು ಮಹತ್ವದ ದಿನವಾಗಿರುತ್ತದೆ. ಏಕೆಂದರೆ ಹೃದಯಾಘಾತದಂತಹ ದಿಢೀರ್ ಅಪಾಯಗಳು ನಮ್ಮನ್ನು ಮತ್ತೊಂದು ಅವಕಾಶ ಕೊಡದೆ ಮುಗಿಸುವ ಕಾಲ ಇದು. ಹಾಗಾಗಿ ಆರೋಗ್ಯದ ವಿಚಾರದಲ್ಲಿ ತಪ್ಪು ಮಾಡುವುದು ನಿಷಿದ್ಧ.

ಹಿಂದಿನಿಂದ ನಾವು ಮಾಡಿಕೊಂಡು ಬರುವ ಸಣ್ಣ ಸಣ್ಣ ತಪ್ಪುಗಳೆಲ್ಲವು ಒಟ್ಟಾಗಿ ನಮ್ಮ ಹೃದಯಕ್ಕೆ ಒಂದೇ ಬಾರಿಗೆ ಅಪಾಯವನ್ನು ತಂದೊಡ್ಡುತ್ತವೆ. ನಾವು ಅಂತಹ ತಪ್ಪುಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಎದೆಗಟ್ಟಿ ಮಾಡಿಕೊಂಡು ಅವುಗಳನ್ನು ಓದಿ. ಕಠಿಣ ಹೃದಯದಿಂದ ಆ ತಪ್ಪುಗಳನ್ನು ತಿದ್ದಿಕೊಳ್ಳಿ. ನಿಮ್ಮ ಪುಟ್ಟ ಹೃದಯವನ್ನು ಕಾಪಾಡಿಕೊಳ್ಳಿ.

ಆರೋಗ್ಯ ತಪಾಸಣೆಯನ್ನು ಉದಾಸೀನ ಮಾಡುವುದು

ಆರೋಗ್ಯ ತಪಾಸಣೆಯನ್ನು ಉದಾಸೀನ ಮಾಡುವುದು

ಹೃದಯಬೇನೆಯಿಂದ ನರಳುವವರು ಯಾವಾಗಲು ಕಾಯಿಲೆಯ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ. ಹಾಗಾಗಿ 20 ವರ್ಷಕ್ಕೆ ಕಾಲಿಟ್ಟ ಕೂಡಲೇ ಮೊದಲು ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ಪರೀಕ್ಷಿಸಿ. ಇದನ್ನು ಪ್ರತಿ ಐದು ವರ್ಷಕ್ಕೆ ಒಮ್ಮೆ ಮಾಡುವುದನ್ನು ಮರೆಯಬೇಡಿ. ಜೊತೆಗೆ ಪ್ರತಿ ಎರಡು ವರ್ಷಕ್ಕೆ ಸಂಪೂರ್ಣವಾಗಿ ಬಾಡಿ ಮಾಸ್ ಇಂಡೆಕ್ಸ್ ಪರೀಕ್ಷೆಯನ್ನು ಮಾಡಿಸಿ. 45 ವರ್ಷವಾದ ಮೇಲೆ ಪ್ರತಿ ಮೂರು ವರ್ಷಕ್ಕೆ ಒಮ್ಮೆ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ಪರೀಕ್ಷಿಸಿ.

ಕುಟುಂಬದ ಆರೋಗ್ಯದ ಇತಿಹಾಸವನ್ನು ಉದಾಸೀನ ಮಾಡುವುದು

ಕುಟುಂಬದ ಆರೋಗ್ಯದ ಇತಿಹಾಸವನ್ನು ಉದಾಸೀನ ಮಾಡುವುದು

ನಿಮಗೆ ಹೃದಯ ಸಂಬಂಧಿ ಕಾಯಿಲೆ ಬರುತ್ತದೆಯೋ ಅಥವಾ ಇಲ್ಲವೋ ಎಂದು ತಿಳಿಯಬೇಕಾದಲ್ಲಿ, ಮೊದಲು ನಿಮ್ಮ ಕುಟುಂಬದ ಆರೋಗ್ಯದ ಇತಿಹಾಸ ತಿಳಿದುಕೊಳ್ಳಿ. ನಿಮ್ಮ ತಂದೆ, ತಾಯಿ ಅಥವಾ ಅಜ್ಜ, ಅಜ್ಜಿಯವರಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತೋ ಅಥವಾ ಇಲ್ಲವೋ ಎಂದು ತಿಳಿದುಕೊಳ್ಳಿ. ಒಂದು ವೇಳೆ ಅವರಿಗು ಹೃದಯ ಬೇನೆ ಇಲ್ಲದಿದ್ದಲಿ, ಅವರ ಆರೋಗ್ಯ, ಹವ್ಯಾಸ, ಜೀವನ ಶೈಲಿ ಮತ್ತು ಅವರು ಯಾವ ವಯಸ್ಸಿನಲ್ಲಿ ಮರಣಿಸಿದರು ಎಂಬ ಬಗ್ಗೆ ತಿಳಿದುಕೊಳ್ಳಿ. ಇವುಗಳು ನಿಮಗೆ ನೆರವಾಗಬಹುದು. ಒಂದು ವೇಳೆ ನಿಮ್ಮ ದಾಯಾದಿಗಳಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದಲ್ಲಿ, ನಿಮ್ಮ ಯೌವನದ ದಿನಗಳಲ್ಲಿ ಆ ಅಪಾಯ ನಿಮ್ಮನ್ನು ಕಾಡಬಹುದು. ಎಚ್ಚರವಾಗಿರಿ.

ದಂತ ಸ್ವಚ್ಛತೆಗೆ ಆಧ್ಯತೆ ನೀಡದಿರುವುದು

ದಂತ ಸ್ವಚ್ಛತೆಗೆ ಆಧ್ಯತೆ ನೀಡದಿರುವುದು

ದಂತ ಮತ್ತು ಹೃದಯದ ಆರೋಗ್ಯವು ಒಂದೇ ಎಂದು ತಿಳಿದುಕೊಳ್ಳಿ. ಅನಾರೋಗ್ಯಕರ ಹಲ್ಲುಗಳು ಹೃದಯ ಸಂಬಂಧಿ ಕಾಯಿಲೆಗಳನ್ನು ಹುಟ್ಟು ಹಾಕುತ್ತವೆಯೆಂದು ತಙ್ಞರು ಸಲಹೆ ನೀಡುತ್ತಾರೆ. ದವಡೆಗಳಲ್ಲಿ ಉಂಟಾಗುವ ಅಪಾಯಕಾರಿ ಬಾವುಗಳು ಇಡೀ ದೇಹಕ್ಕೆ ಮಾರಕ. ಇವುಗಳಲ್ಲಿ ಉಂಟಾಗುವ ಬ್ಯಾಕ್ಟೀರಿಯಾಗಳು ಸ್ವಲ್ಪ ಪ್ರಮಾಣದಲ್ಲಿ ರಕ್ತದಲ್ಲಿ ಸೇರಿ ಹೋಗುತ್ತವೆ. ಹಾಗಾಗಿ ಹಲ್ಲುಗಳನ್ನು ಯಾರು ಸ್ವಚ್ಛವಾಗಿಟ್ಟು ಕೊಳ್ಳುತ್ತಾರೋ, ಅವರ ಹಲ್ಲುಗಳಷ್ಟೇ ಅಲ್ಲ ಅವರ ಹೃದಯ ಸಹ ಆರೋಗ್ಯಕರವಾಗಿರುತ್ತದೆ.

ಹೈನು ಪದಾರ್ಥಗಳನ್ನು ಕಡಿಮೆ ಸೇವಿಸುವುದು

ಹೈನು ಪದಾರ್ಥಗಳನ್ನು ಕಡಿಮೆ ಸೇವಿಸುವುದು

ಇತ್ತೀಚೆಗೆ ನಡೆದ ಒಂದು ಅದ್ಯಯನದಲ್ಲಿ ವೈಧ್ಯರು ಸುಮಾರು 82,000 ಋತುಸ್ರಾವ ನಿಂತ ಹೆಂಗಸರನ್ನು, ಸುಮಾರು ಎಂಟು ವರ್ಷ ಸತತವಾಗಿ ನಿಗಾ ಇರಿಸಿ. ಪರೀಕ್ಷಿಸಿದಾಗ ತಿಳಿದುಬಂದ ವಿಚಾರ ಹೀಗಿದೆ. ಹೈನು ಪದಾರ್ಥಗಳನ್ನು ಅತಿಯಾಗಿ ಸೇವಿಸುವ ಹೆಂಗಸರಲ್ಲಿ ಟೈಪ್ 2 ಮಧುಮೇಹ ಬರುವ ಸಾಧ್ಯತೆಯು ಶೇ.50 ರಷ್ಟು ಕಡಿಮೆಯಂತೆ. ಅದೇ ಸಮಯದಲ್ಲಿ ಹೈನು ಪದಾರ್ಥವನ್ನು ಕಡಿಮೆ ಸೇವಿಸುವವರಲ್ಲಿ ಈ ಅಪಾಯ ಹೆಚ್ಚು ಎಂದು ದೃಢಪಟ್ಟಿದೆ. ಹಾಗಾಗಿ ಸ್ಥೂಲಕಾಯಕ್ಕೆ ಹೆದರಿಯೊ, ಕ್ಯಾಲೋರಿಗಳ ಭಯದಿಂದಲೋ, ಹೈನು ಪದಾರ್ಥಗಳಿಂದ ದೂರ ಸರಿಯುವುದು ಒಳ್ಳೆಯದಲ್ಲ ಎಂದು ತಿಳಿದುಕೊಳ್ಳಿ.

ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ

ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ

ಸೂರ್ಯನ ಬಿಸಿಲಿನಲ್ಲಿ ಬೆಂದು ಸನ್ ಬರ್ನ್ ಮುಂತಾದವನ್ನು ತಂದುಕೊಳ್ಳಿ ಎಂದು ಯಾರು ನಿಮಗೆ ಹೇಳುವುದಿಲ್ಲ. ಆದರೆ ನಿಮ್ಮ ದೇಹಕ್ಕೆ ಅಗತ್ಯವಿರುವ ವಿಟಮಿನ್ ಡಿಗಾಗಿಯಾದರು ಸ್ವಲ್ಪ ಹೊತ್ತು ಸೂರ್ಯನ ಬೆಳಕಿನಲ್ಲಿ ಓಡಾಡಿ ಎಂಬುದು ನಮ್ಮ ಸಲಹೆ. ಇತ್ತೀಚೆಗೆ ನಡೆದ ಸಂಶೋಧನೆಯ ಪ್ರಕಾರ ವಿಟಮಿನ್ ಡಿ ಕಡಿಮೆಯಿರುವವರಲ್ಲಿ ರಕ್ತ ನಾಳಗಳಲ್ಲಿ ಪ್ಲಾಕ್ ಶೇಖರಣೆಗೊಳ್ಳುವ ಸಾಧ್ಯತೆ ಹೆಚ್ಚಂತೆ. ಅದೇ ಸಮಯದಲ್ಲಿ ವಿಟಮಿನ್ ಡಿ ಹೆಚ್ಚಾಗಿ ಇರುವವರಲ್ಲಿ ಈ ಅಪಾಯ ಕಂಡು ಬಂದಿಲ್ಲ. ಅದಕ್ಕೆ ವೈದ್ಯರು ಬೆಳಗ್ಗೆ 10 ರಿಂದ 3 ರವರೆಗೆ, ಐದರಿಂದ ಮೂವತ್ತು ನಿಮಿಷಗಳ ಕಾಲ ಬಿಸಿಲಿನಲ್ಲಿ ಓಡಾಡಲು ಸೂಚಿಸುತ್ತಾರೆ ( ಸನ್ ಸ್ಕ್ರೀನ್ ಲೋಷನ್ ಹಾಕದೆ). ಹೀಗೆ ಮಾಡುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿಯನ್ನು ನಿಮ್ಮ ದೇಹವೇ ಉತ್ಪಾದಿಸಿಕೊಳ್ಳುತ್ತದೆ.

ಹುರುಳಿಕಾಯಿಯನ್ನು ಅಲಕ್ಷಿಸಬೇಡಿ

ಹುರುಳಿಕಾಯಿಯನ್ನು ಅಲಕ್ಷಿಸಬೇಡಿ

ಹುರುಳಿ ಕಾಯಿ, ಹಣ್ಣು ಹುರುಳಿಕಾಯಿ ಮುಂತಾದ ಏಕದಳ ಧಾನ್ಯಗಳನ್ನು ಅಲಕ್ಷ ಮಾಡಬೇಡಿ. ಇವುಗಳು ಸ್ಯಾಚುರೇಟೆಡ್ ಫ್ಯಾಟ್ ರಹಿತ ಪ್ರೋಟಿನ್‍ಗಳ ಸಮೃದ್ಧ ಆಗರವಾಗಿರುತ್ತವೆ. ಅಲ್ಲದೆ ಇವುಗಳಲ್ಲಿ ಸುಲಭವಾಗಿ ಜೀರ್ಣವಾಗುವ ಫೈಬರ್ ಇರುತ್ತವೆ. ಈ ಫೈಬರ್ ಗಳು ಕೊಲೆಸ್ಟ್ರಾಲನ್ನು ಕಡಿಮೆಮಾಡಲು ಸಹಾಯಕವಾಗುತ್ತವೆ. ಓಟ್‍ಮೀಲ್ ಮತ್ತು ಬಾರ್ಲಿಗಳು ಸಹ ಸುಲಭವಾಗಿ ಜೀರ್ಣವಾಗುವ ಫೈಬರ್ ಗಳನ್ನು ಹೊಂದಿರುತ್ತವೆ. ಇವುಗಳು ರಕ್ತನಾಳಗಳಿಂದ ಕೊಲೆಸ್ಟ್ರಾಲನ್ನು ಹೊಡೆದೋಡಿಸುತ್ತವೆ.

ಶಕ್ತಿವರ್ಧಕ ಪಾನೀಯಗಳ ಮೇಲೆ ಅವಲಂಬಿತವಾಗಿರುವುದು

ಶಕ್ತಿವರ್ಧಕ ಪಾನೀಯಗಳ ಮೇಲೆ ಅವಲಂಬಿತವಾಗಿರುವುದು

ಶಕ್ತಿವರ್ಧಕ ( ಎನರ್ಜಿ ಡ್ರಿಂಕ್) ಪಾನೀಯಗಳು ಮತ್ತು ಲಘು ಪಾನೀಯಗಳಲ್ಲಿ ಸಕ್ಕರೆಯಂಶ ಅಧಿಕವಾಗಿರುತ್ತವೆ. ಇದು ರಕ್ತದಲ್ಲಿ ಟ್ರೈಗ್ಲಿಸರೈಡ್ ಪ್ರಮಾಣವನ್ನು ಹೆಚ್ಚಿಸುತ್ತವೆ. ಟ್ರೈಗ್ಲಿಸರೈಡ್ ರಕ್ತವನ್ನು ಗಡಸುಗೊಳಿಸುತ್ತವೆ. ಒಂದು ವೇಳೆ ನಿಮ್ಮ ಅಭಿದಮನಿಗಳಲ್ಲಿ ಈಗಾಗಲೇ ಕೊಲೆಸ್ಟ್ರಾಲ್ ಶೇಖರಣೆಗೊಂಡಿದ್ದರೆ, ಅದರಲ್ಲಿ ಈ ಗಡುಸಾದ ರಕ್ತವು ಹಾದು ಹೋದರೆ ಏನಾಗುತ್ತದೆಂದು ಊಹಿಸಿ. ಅದಕ್ಕಾಗಿಯೇ ಈ ಪಾನೀಯಗಳ ಬದಲಿಗೆ ನೀರು, ನಿಂಬೆ ರಸ ಅಥವಾ ಹಣ್ಣಿನ ರಸಗಳನ್ನು ಸೇವಿಸಿ. ಒಂದು ವೇಳೆ ನಿಮಗೆ ಶಕ್ತಿ ಬೇಕಾದರೆ ಕಬ್ಬಿನ ಹಾಲನ್ನು ಸೇವಿಸಿ. ಇದರಲ್ಲಿ ಶಕ್ತಿವರ್ಧಕ ಅಂಶಗಳು ಅಧಿಕ ಪ್ರಮಾಣದಲ್ಲಿರುತ್ತವೆ.

ಅವಶ್ಯಕತೆಗೆ ತಕ್ಕಷ್ಟು ನಿದ್ದೆ

ಅವಶ್ಯಕತೆಗೆ ತಕ್ಕಷ್ಟು ನಿದ್ದೆ

ನೀವು ಮಲಗಲು ತಡಮಾಡಿ, ಬೆಳಗ್ಗೆ ಬೇಗನೆ ಏಳುತ್ತೀರಾ. ನಿಮಗೆ ಅವಶ್ಯಕತೆಯಿದ್ದಷ್ಟು ನಿದ್ದೆ ನೀವು ಮಾಡುತ್ತಿಲ್ಲವೆ? ಎಚ್ಚರಿಕೆ ! ನೀವು ನಿಮ್ಮ ಹೃದಯವನ್ನು ಅಪಾಯಕ್ಕೆ ಈಡು ಮಾಡುತ್ತಿದ್ದೀರಿ. ಸುಖವಾದ ರಾತ್ರಿ ನಿದ್ದೆಯು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಅನಿಯಮಿತ ಹೃದಯದ ಬಡಿತವನ್ನು ಕಡಿಮೆ ಮಾಡುತ್ತದೆ. ಸುಖವಾಗಿ ನಿದ್ದೆ ಮಾಡುವವರರಲ್ಲಿ ಹೃದಯ ಸ್ತಂಭನ ಮತ್ತು ಹೃದಯಾಘಾತದ ಪ್ರಮಾಣ ಕಡಿಮೆಯಿರುತ್ತದೆ. ಒಂದು ವೇಳೆ ನಿಮಗೆ ಆರರಿಂದ ಎಂಟು ಗಂಟೆಯವರೆಗೆ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲವಾದಲ್ಲಿ, ಮೊದಲು ನಿಮ್ಮ ವೈದ್ಯರನ್ನು ಕಾಣಿ. ಆಗ ವೈದ್ಯರು ನಿಮ್ಮ ನಿದ್ರಾಹೀನತೆಗೆ ಪರಿಹಾರ ಸೂಚಿಸಬಹುದು. ಅವಿಶ್ರಾಂತ ಕಾಲುಗಳ ಸಿಂಡ್ರೊಮ್ ಅಥವಾ ಸ್ಲೀಪ್ ಅಪ್ನಿಯ ಸಮಸ್ಯೆ ನಿದ್ರಾಹೀನತೆಗೆ ಕಾರಣವಾಗಿರಬಹುದು.

ಬಣ್ಣ ಬಣ್ಣದ ಆಹಾರಗಳಿಗೆ ಮರುಳಾಗದಿರುವುದು

ಬಣ್ಣ ಬಣ್ಣದ ಆಹಾರಗಳಿಗೆ ಮರುಳಾಗದಿರುವುದು

ಫೈಬರ್, ವಿಟಮಿನ್, ಮಿನೆರಲ್‍ಗಳು ಮತ್ತು ಅಂಟಿ ಆಕ್ಸಿಡೆಂಟ್‍ಗಳ ಜೊತೆಗೆ ಹಣ್ಣು ಮತ್ತು ತರಕಾರಿಗಳಲ್ಲಿ ಸಮೃದ್ಧವಾದ ಪೊಟಾಶಿಯಂ ಇರುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುವ ವಿಚಾರಕ್ಕೆ ಬಂದರೆ ಪೊಟಾಶಿಯಂ ಅನ್ನು ಹೆಚ್ಚು ಸೇವಿಸಿದಷ್ಟು, ದೇಹದಲ್ಲಿರುವ ಸೋಡಿಯಂ ಕಡಿಮೆಯಾಗುತ್ತದೆ. ಸೋಡಿಯಂ ಕಡಿಮೆಯಾದರೆ ಅಧಿಕ ರಕ್ತದೊತ್ತಡ ಭಯ ಕಾಡುವುದಿಲ್ಲ. ಹುಳಿಯಾದ ಹಣ್ಣುಗಳಲ್ಲಿ ( ಸಿಟ್ರಸ್ ಹಣ್ಣುಗಳು), ಬಾಳೆ ಹಣ್ಣು, ಆಲೂಗಡ್ಡೆ, ಟೊಮಾಟೊ ಮತ್ತು ಬೀನ್ಸ್ ಗಳಲ್ಲಿ ಪೊಟಾಶಿಯಂನ ಪ್ರಮಾಣ ಅಧಿಕವಾಗಿರುತ್ತದೆ. ಇದರ ಜೊತೆಗೆ ಬಿಳಿಯ ಬಣ್ಣದಲ್ಲಿರುವ ಆಹಾರಗಳು ಸಹ ಪರಿಣಾಮಕಾರಿಯಾಗಿರುತ್ತವೆ. ಇತ್ತೀಚೆಗೆ ನಡೆದ ಅಧ್ಯಯನವೊಂದರ ಪ್ರಕಾರ ಸೇಬು, ಪೀಯರ್ಸ್, ಸೌತೆಕಾಯಿ ಮತ್ತು ಹೂಕೋಸುಗಳಂತಹ ಬಿಳಿಯ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವವರಲ್ಲಿ ಹೃದಯಾಘಾತದ ಪ್ರಮಾಣ ಶೇ.52ರಷ್ಟು ಕಡಿಮೆ ಎಂಬುದು ಧೃಡಪಟ್ಟಿದೆ.

ನಡೆದಾಡದೆ ಇರುವುದು

ನಡೆದಾಡದೆ ಇರುವುದು

ಅಕ್ಕ ಪಕ್ಕದಲ್ಲಿ ನಡೆಯುವ ಕೆಲಸಗಳಿಗು ಕಾರನ್ನೊ ಅಥವಾ ಬೈಕನ್ನೊ ಬಳಸುವ ಬದಲು ನಡೆದು ಹೋಗುವುದನ್ನು ರೂಢಿಸಿಕೊಂಡರೆ ನಿಮ್ಮ ಹೃದಯ ಆರೋಗ್ಯವಾಗಿರುತ್ತದೆ. ಹಾಗಾಗಿ ಮೊದಲು ನಿಮ್ಮ ಗಾಡಿಯನ್ನು ಮನೆಯಲ್ಲಿ ನಿಲ್ಲಿಸಿ. ನಿಮ್ಮ ಬ್ಯಾಂಕ್, ಲಾಂಡ್ರಿ ಅಥವಾ ಪಾರ್ಲರುಗಳಿಗೆ ಹಾಗು ಇತ್ಯಾದಿ ಹತ್ತಿರದ ಸ್ಥಳಗಳಿಗೆ ನಡೆದುಕೊಂಡು ಹೋಗಿ. ಒಂದು ವೇಳೆ ನೀವು 10.000 ಮೆಟ್ಟಿಲು ಹತ್ತುವುದು ಒಂದೇ, 45 ನಿಮಿಷ ವ್ಯಾಯಾಮ ಮಾಡುವುದು ಒಂದೇ ಎಂಬುದನ್ನು ಮರೆಯಬೇಡಿ.

X
Desktop Bottom Promotion