Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಮಧುಮೇಹ ನಿಯಂತ್ರಣಕ್ಕೆ ವಿಶಿಷ್ಟ ದಾಲ್ಚಿನ್ನಿ-ಬೆಳ್ಳುಳ್ಳಿ ಟೀ.. ಟ್ರೈ ಮಾಡಿ ನೋಡಿ..
ಮನುಷ್ಯನಿಗೆ ದೀರ್ಘಕಾಲ ಕಾಡುವ ಕಾಯಿಲೆಗಳಲ್ಲಿ ಮಧುಮೇಹ (ಡಯಾಬಿಟೀಸ್) ಕೂಡ ಒಂದು. ಇತ್ತೀಚಿನ ದಶಕಗಳಲ್ಲಿ ಮಧುಮೇಹ ಕಾಯಿಲೆಯು ಜಗತ್ತಿನಾದ್ಯಂತ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ನಮಗೆ ಈ ಕಾಯಿಲೆ ಇಲ್ಲದೇ ಇದ್ದರೂ ನಮ್ಮ ಹತ್ತಿರದ ಸಂಬಂಧಿಕರೊಬ್ಬರು ಅಥವಾ ಅತಿ ಆತ್ಮೀಯ ಪರಿಚಯದವರೊಬ್ಬರಿಗಾದರೂ ಈ ಕಾಯಿಲೆ ಇರುವುದು ಸಾಮಾನ್ಯವಾಗಿದೆ.

ರಕ್ತದಲ್ಲಿನ ಸಕ್ಕರೆ ಅಂಶದಲ್ಲಿ ಏರುಪೇರಾಗುವುದು ಈ ಕಾಯಿಲೆಯ ಪ್ರಮುಖ ಲಕ್ಷಣವಾಗಿದೆ. ಪ್ರಸ್ತುತ ಈ ಕಾಯಿಲೆಯನ್ನು ಸಂಪೂರ್ಣ ಗುಣಪಡಿಸಬಹುದಾದ ಯಾವುದೇ ಔಷಧಿ ಇಲ್ಲವೆಂಬುದು ದುರದೃಷ್ಟಕರ. ಸದ್ಯ ಲಭ್ಯವಿರುವ ಔಷಧಿಗಳಿಂದ ಈ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಅಷ್ಟೇ.

ಮಧುಮೇಹ ನಿಯಂತ್ರಣಕ್ಕೆ ಅಗತ್ಯ ಆರೋಗ್ಯಕರ ಜೀವನಶೈಲಿ
ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು, ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ಔಷಧಿ ಸೇವಿಸುವುದು ಮುಂತಾದ ಕ್ರಮಗಳಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡುವುದು ಸಾಧ್ಯ. ನಿತ್ಯದ ಆಹಾರ ಕ್ರಮವನ್ನು ಸೂಕ್ತವಾಗಿಟ್ಟುಕೊಳ್ಳುವುದೇ ಮಧುಮೇಹ ನಿಯಂತ್ರಣಕ್ಕೆ ರಾಮಬಾಣವಾಗಿದೆ. ಇನ್ನು ಮಧುಮೇಹ ನಿಯಂತ್ರಣಕ್ಕಾಗಿ ಕೆಲ ಉತ್ತಮ ಆಹಾರ ಪದಾರ್ಥಗಳು ಹಾಗೂ ಪಾನೀಯಗಳ ಸೇವನೆಯೂ ಬಹಳಷ್ಟು ಸಹಕಾರಿಯಾಗಬಲ್ಲದು. ಅದರಲ್ಲೂ ಬೆಳ್ಳುಳ್ಳಿ, ದಾಲ್ಚಿನ್ನಿ ಹಾಗೂ ನಿಂಬೆ ಈ ಪದಾರ್ಥಗಳು ಮಧುಮೇಹ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಮಧುಮೇಹ ಹಾಗೂ ಗ್ಲೈಸೆಮಿಕ್ ಇಂಡೆಕ್ಸ್ ಸ್ಕೋರ್
ಯಾವೆಲ್ಲ ಆಹಾರ ಪದಾರ್ಥಗಳು ರಕ್ತದಲ್ಲಿ ನಿಧಾನವಾಗಿ ಗ್ಲುಕೋಸ್ ಅಂಶ ಹೆಚ್ಚಿಸುತ್ತವೆಯೋ ಅವನ್ನು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಆಹಾರ ಪದಾರ್ಥಗಳು ಎಂದು ಕರೆಯಲಾಗುತ್ತದೆ. ಹಾಗೆಯೇ ರಕ್ತದಲ್ಲಿ ಬೇಗನೇ ಗ್ಲುಕೋಸ್ ಪ್ರಮಾಣ ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಹೆಚ್ಚು ಗ್ಲೈಸೆಮಿಕ್ ಇಂಡೆಕ್ಸ್ ಸ್ಕೋರ್ ಹೊಂದಿರುವ ಆಹಾರ ಪದಾರ್ಥಗಳು ಎಂದು ವಿಂಗಡಿಸಲಾಗಿದೆ.

ಮಧುಮೇಹ ನಿಯಂತ್ರಣದಲ್ಲಿ ಬೆಳ್ಳುಳ್ಳಿಯ ಪಾತ್ರ
ಬೆಳ್ಳುಳ್ಳಿಯು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಸ್ಕೋರ್ ಹೊಂದಿರುವ ಆಹಾರ ಪದಾರ್ಥವಾಗಿದೆ. ಇದರಲ್ಲಿ ವಿಟಮಿನ್ ಬಿ-6 ಅಂಶ ಹೇರಳವಾಗಿದ್ದು, ಕಾರ್ಬೊಹೈಡ್ರೇಟ್ ಜೀರ್ಣವಾಗುವ ಕ್ರಿಯೆಯಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಬೇಯಿಸಿದ ಅಥವಾ ಹಸಿ ಬೆಳ್ಳುಳ್ಳಿಯ ಸೇವನೆಯಿಂದ ಮಧುಮೇಹವನ್ನು ಕೆಲಮಟ್ಟಿಗೆ ನಿಯಂತ್ರಣದಲ್ಲಿಡಬಹುದು ಎಂಬುದು ಆಧ್ಯಯನಗಳಿಂದ ತಿಳಿದು ಬಂದಿದೆ. ಇನ್ನು ಮಧುಮೇಹಕ್ಕೆ ನಿಯಂತ್ರಣಕ್ಕೆ ಅಗತ್ಯವಾಗ ವಿಟಮಿನ್ ಸಿ ಸಹ ಬೆಳ್ಳುಳ್ಳಿಯಲ್ಲಿ ಹೆಚ್ಚಾಗಿರುತ್ತದೆ.

ಮಧುಮೇಹ ನಿಯಂತ್ರಣದಲ್ಲಿ ದಾಲ್ಚಿನ್ನಿಯ ಪಾತ್ರ
ಮಧುಮೇಹಿಗಳಿಗೆ ದಾಲ್ಚಿನ್ನಿ ಸಕ್ಕರೆಗೆ ಪರ್ಯಾಯವಾಗಿದೆ. ಇನ್ಸುಲಿನ್ ಪ್ರಮಾಣದ ನಿಯಂತ್ರಣಕ್ಕೂ ದಾಲ್ಚಿನ್ನಿ ಸಹಾಯಕವಾಗಿದೆ. ದಾಲ್ಚಿನ್ನಿಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಸಹ ವಿಪುಲವಾಗಿದ್ದು, ಮಧುಮೇಹ ನಿಯಂತ್ರಣಕ್ಕೆ ಸೂಕ್ತವಾಗಿದೆ. ಜೀವಕೋಶಗಳು ಎರ್ರಾಬಿರ್ರಿಯಾಗಿ ಸರಣಿ ಕ್ರಿಯಾತ್ಮಕತೆಯಲ್ಲಿ ತೊಡಗುವುದನ್ನು ನಿಯಂತ್ರಿಸುವಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ತಜ್ಞ ವೈದ್ಯರ ಪ್ರಕಾರ, ದಾಲ್ಚಿನ್ನಿಯು ಜೀರ್ಣಕ್ರಿಯೆ ಸುಧಾರಿಸುತ್ತದೆ ಹಾಗೂ ಆ ಮೂಲಕ ರಕ್ತದಲ್ಲಿನ ಗ್ಲುಕೋಸ್ ಮತ್ತು ಟ್ರೈಗ್ಲಿಸರೈಡ್ (ಒಂದು ರೀತಿಯ ಕೊಬ್ಬು) ಮಟ್ಟಗಳನ್ನು ಸಾಮಾನ್ಯ ಸ್ಥಿತಿಯಲ್ಲಿರುವಂತೆ ಮಾಡುತ್ತದೆ. ಇದರಿಂದ ಮಧುಮೇಹ ಹಾಗೂ ಹೃದಯ ಬೇನೆ ಎರಡನ್ನೂ ನಿಯಂತ್ರಿಸಲು ಸಾಧ್ಯವಾಗುತ್ತದೆ. ಆದರೆ ಒಂದು ದಿನಕ್ಕೆ 5 ಗ್ರಾಂ ಗಳಿಗಿಂತ ಹೆಚ್ಚು ದಾಲ್ಚಿನ್ನಿ ಸೇವಿಸಕೂಡದು ಎಂದು ತಜ್ಞರು ಎಚ್ಚರಿಕೆಯನ್ನು ಸಹ ನೀಡುತ್ತಾರೆ.

ಮಧುಮೇಹ ನಿಯಂತ್ರಣಕ್ಕೆ ಬೆಳ್ಳುಳ್ಳಿ- ದಾಲ್ಚಿನ್ನಿ ಟೀ
ಮಧುಮೇಹ ನಿಯಂತ್ರಣದಲ್ಲಿ ಬೆಳ್ಳುಳ್ಳಿ ಹಾಗೂ ದಾಲ್ಚಿನ್ನಿ ಎರಡೂ ಪ್ರಮುಖ ಪಾತ್ರ ವಹಿಸುವುದರಿಂದ ಇವೆರಡನ್ನೂ ಬಳಸಿ ಮಾಡಿದ ಟೀ ಮಧುಮೇಹಿಗಳಿಗೆ ಬಹಳೇ ಆರೋಗ್ಯಕರವಾಗಿರುತ್ತದೆ. ಬೆಳ್ಳುಳ್ಳಿ-ದಾಲ್ಚಿನ್ನಿ ಟೀ ಮಾಡುವುದು ಹೇಗೆಂದು ನೋಡೋಣ.
ಬೇಕಾಗುವ ಸಾಮಗ್ರಿಗಳು:
2 ಕಪ್ ನೀರು
1 ಇಂಚು ದಾಲ್ಚಿನ್ನಿ ತುಂಡು
2 ಎಸಳು ಜಜ್ಜಿದ ಬೆಳ್ಳುಳ್ಳಿ
1 ಟೇಬಲ್ ಸ್ಪೂನ್ ನಿಂಬೆ ರಸ
ತಯಾರಿಸುವ ವಿಧಾನ:
ಒಂದು ಪಾತ್ರೆಯಲ್ಲಿ ನೀರಿನಲ್ಲಿ ದಾಲ್ಚಿನ್ನಿ ಹಾಕಿ ಕುದಿಸಿ. ನೀರು ಕುದಿಯಲಾರಂಭಿಸಿದ ನಂತರ ಬೆಳ್ಳುಳ್ಳಿ ಸೇರಿಸಿ 4 ರಿಂದ 5 ನಿಮಿಷ ಕುದಿಸಿ. ಈಗ ಇದಕ್ಕೆ ನಿಂಬೆ ರಸ ಸೇರಿಸಿ ಸೋಸಿ. ಈಗ ನಿಮ್ಮ ಆರೋಗ್ಯಕರ ಬೆಳ್ಳುಳ್ಳಿ - ದಾಲ್ಚಿನ್ನಿ ಟೀ ತಯಾರು.



Click it and Unblock the Notifications










