Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂಕ್ರಾಂತಿಗೆ ಎಳ್ಳುಬೆಲ್ಲದ ನಂಟು: ಈ ದಿನ ಎಳ್ಳು ಬೆಲ್ಲ ಸವಿಯುವುದರ ಹಿಂದಿದೆ ಈ ಗುಟ್ಟು!
ಉತ್ತರಾಯಣ (ಶಿಶಿರ,ವಸಂತ,ಗ್ರೀಷ್ಮ ಋತುಗಳು) ದೇವತೆಗಳ ಕಾಲ. ಈ ಸಮಯದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎನ್ನುವ ನಂಬಿಕೆಯಿದೆ. ಬದುಕಲು ಮಾತ್ರವಲ್ಲದೆ ಸಾಯಲು ಕೂಡಾ ಪ್ರಶಸ್ತವಾದ ಕಾಲವಾದ್ದರಿಂದ ಇಚ್ಛಾಮರಣಿ ಭೀಷ್ಮ ಪಿತಾಮಹ ಶರಶಯ್ಯೆಯಲಿ ವೇದನೆ ಅನುಭವಿಸುತ್ತಿದ್ದರೂ ಸತ್ತು ಸ್ವರ್ಗ ಸೇರಲು ಉತ್ತರಾಯಣಕ್ಕಾಗಿ ಕಾದ ವಿಷಯ ಎಲ್ಲರಿಗೂ ತಿಳಿದದ್ದೇ. ಉತ್ತರಾಯಣದ ಪುಣ್ಯ ಕಾಲದಂದು ನಾವು ಮಾಡಿದ ದಾನಧರ್ಮಗಳಿಂದ ಜನ್ಮ ಜನ್ಮದಲ್ಲೂ ನಮಗೆ ಒಳಿತಾಗುವಂತೆ ಸೂರ್ಯದೇವನು ಅನುಗ್ರಹಿಸುತ್ತಾನೆ.

ವರ್ಷದ ಮೊದಲನೇ ಹಬ್ಬ ಮಕರ ಸಂಕ್ರಾಂತಿ. ಸಂಕ್ರಾಂತಿ ಎಂದರೆ ಸೂರ್ಯನ ಆರಾಧನೆ. ಸೂರ್ಯ ಆತ್ಮಾ ಜಗತಹ ತಸ್ಥುಶಶ್ಚಹ ಎಂದರೆ ಸೂರ್ಯದೇವ ವಿಶ್ವದ ಆತ್ಮ, ಅವನೇ ಜಗತ್ತಿನ ಕಣ್ಣು. ಅವನ ದಿವ್ಯ ತೇಜಸ್ಸು ಸಿದ್ಧಿ, ಬುದ್ಧಿ, ಸಮೃದ್ಧಿ ನೀಡುವುದು. ಸೂರ್ಯನು ದಕ್ಷಿಣ ದಿಕ್ಕಿನಿಂದ ಉತ್ತರದ ಕಡೆಗೆ ಪ್ರಯಾಣ ಬೆಳೆಸಿ ಮಕರ ರಾಶಿಯನ್ನು ಪ್ರವೇಶಿಸಿ ತನ್ನ ಮಗನಾದ ಶನಿ ಮಹಾರಾಜನನ್ನು ಭೇಟಿಯಾಗುವ ದಿನವೇ ಮಕರ ಸಂಕ್ರಾಂತಿ. ಮಳೆ ಬೀಳಲು, ಬೆಳೆ ಬೆಳೆಯಲು,ಇಳೆ ಬೆಳಗಲು ಸೂರ್ಯನೇ ಕಾರಣ.ನಮ್ಮ ಆಹಾರ ಬೆಳೆಯುವ ಭೂಮಿಗೆ ಕ್ರತಜ್ನನಾಗಿರಬೇಕು, ಒಗ್ಗಟ್ಟಾಗಿರಬೇಕು ಹಾಗೂ ಸಂತೋಷವಾಗಿರಬೇಕು ಎನ್ನುವುದು ಈ ಹಬ್ಬದ ಉದ್ದೇಶ.
ವಾತಾವರಣದಲ್ಲಿನ ವೈರಸ್, ಬ್ಯಾಕ್ಟೀರಿಯಾ ಕ್ರಿಮಿಗಳನ್ನು ಸೂರ್ಯನ ಶಾಖದಿಂದ ನಾಶ ಪಡಿಸುವಂತೆ, ಸೂಕ್ತಾಹಾರ ಕ್ರಮದಿಂದ ದೇಹವನ್ನು ಪ್ರವೇಶಿಸುವ ಕ್ರಿಮಿಗಳನ್ನು ಬಲಹೀನ ಮಾಡಿ ದೇಹದ ವ್ಯಾಧಿಕ್ಷಮತ್ವವನ್ನು ಹೆಚ್ಚಿಸಬೇಕಾದ ಸಮಯವಿದು. ಸೂರ್ಯನಿಗೆ ಬೆಲ್ಲ ಹಾಗೂ ಶನಿಗೆ ಎಳ್ಳು ಶ್ರೇಷ್ಠ ವಾದ್ದರಿಂದ ಈ ಹಬ್ಬದಲ್ಲಿ ಬೆಲ್ಲದ ಚೂರುಗಳು,ಹುರಿದ ಎಳ್ಳು,ಕಬ್ಬಿನ ತುಂಡು, ಒಣಕೊಬ್ಬರಿ, ಹುರಿಗಡಲೆ ಹಾಗೂ ಕಡಲೇಕಾಯಿ ಬೀಜಗಳನ್ನು ಸೇರಿಸಿ ಎಳ್ಳು ಬೆಲ್ಲ ತಯಾರಿಸಿ ಹಂಚುವ ಪದ್ಧತಿ ಪ್ರಾಚೀನವಾದರೂ ಇದರ ಸೇವನೆಯಿಂದ ಶೀತಜನ್ಯವಾದ ಜಡ್ಡು,ಆಲಸ್ಯಗಳನ್ನು ದೂರವಾಗುತ್ತದೆ, ಯಾವುದೇ ವೈರಸ್, ಬ್ಯಾಕ್ಟೀರಿಯಾಗಳಿಂದ ಶರೀರಕ್ಕೆ ತೊಂದರೆಯಾಗದಂತೆ,ಪೋಷಕಾಂಶಗಳ ಜೊತೆಗೆ ವಾತ,ಪಿತ್ತ,ಕಫ ದೋಷಗಳನ್ನು ಸಮತೋಲನದಲ್ಲಿರಿಸುತ್ತದೆ. ದೇಹಕ್ಕೆ ಶಕ್ತಿ ನೀಡಿ ಆರೋಗ್ಯ ಕಾಪಾಡುವಲ್ಲಿ ಇಂದಿನ ಕಾಲಕ್ಕೂ ಪ್ರಸ್ತುತ ಹಾಗೂ ಅಗತ್ಯವಾದ ಹಬ್ಬ ಸಂಕ್ರಾಂತಿಯೆಂದರೆ ತಪ್ಪಿಲ್ಲ.
ಎಳ್ಳು-ಬೆಲ್ಲದ ಪ್ರಯೋಜನಗಳು
- ಎಳ್ಳಿನಲ್ಲಿನ ಅಗಾಧ ಕ್ಯಾಲ್ಸಿಯಂ, ಮೆಗ್ನೀಷಿಯಂ,ಫ್ಯೈಬರ್ ಅಂಶಗಳು ಮೂಳೆಗಳನ್ನು ಬಲಪಡಿಸಿ, ಶ್ವಾಸಕೋಶ ಶುದ್ಧೀಕರಿಸಿ, ರಕ್ತದೊತ್ತಡ ಕಡಿಮೆ ಮಾಡುವುದಲ್ಲದೆ ತ್ವಚೆ, ಕೂದಲು, ದಂತಪಂಕ್ತಿ ಗಟ್ಟಿಯಾಗಲು ಸಹಾಯಕಾರಿ.
- ಬೆಲ್ಲದಲ್ಲಿ ಆಂಟಿ ಆಕ್ಸಿಡೆಂಟ್ ಜೊತೆ ಕ್ಯಾಲ್ಸಿಯಂ,ಕಬ್ಬಿಣ,ಜಿಂಕ್, ಫಾಸ್ಫರಸ್, ಪೊಟ್ಯಾಷಿಯಂ, ಸೆಲೆನಿಯಮ್ ಇದ್ದು ಯಕೃತನ್ನು ಸ್ವಚ್ಛಗೊಳಿಸಿ,ರಕ್ತನಾಳ ಹಿಗ್ಗಿಸಿ,ಸಂಚಾರ ಹೆಚ್ಚಿಸುತ್ತದೆ ಜೊತೆಗೆ ಉಸಿರಾಟದ ಸಮಸ್ಯೆಗೂ ಹಿತಕಾರಿ.
- ಒಣಕೊಬ್ಬರಿಯಲ್ಲಿನ ನಾರಿನಂಶವು ಜೀರ್ಣಕ್ರಿಯೆ ಹೆಚ್ಚಿಸಿ, ಮಲಬದ್ಧತೆ ನಿವಾರಿಸುತ್ತದೆ.ಆಂಟಿಫಂಗಲ್, ಆಂಟಿವೈರಲ್ ಆಗಿರುವುದರಿಂದ ಚರ್ಮದ ಸೋಂಕನ್ನು ತಡೆಯುತ್ತದೆ. ಕಡಲೇಬೀಜದಲ್ಲಿ ಒಮೇಗಾ 6 ಫ್ಯಾಟಿಅಂಶ ಅಧಿಕ ಇದ್ದು ವಿಟಮಿನ್ 'ಬಿ' ಅಧಿಕವಾಗಿದ್ದು ತಲೆಗೂದಲು, ಬುರುಡೆಭಾಗದ ಆರೋಗ್ಯ ಕಾಪಾಡುತ್ತದೆ.
- ಕಬ್ಬಿನಲ್ಲಿನ ಎಲೆಕ್ಟ್ರೋ ಲೇಟ್ ಅಂಶ ಹೆಚ್ಚಾಗಿದ್ದು ಕ್ಯಾಲ್ಸಿಯಂ,ಕಬ್ಬಿಣ ಅಂಶ ಯಕೃತ್ತಿಗೆ ಹಿತಕಾರಿ.ಸೋಂಕು ದೂರ ಮಾಡಿ, ಶೀತ ,ಕೆಮ್ಮು,ಜ್ವರದ ಸಮಸ್ಯೆ ತಡೆಯುವುದು. ಹುರಿಗಡಲೆಯಲ್ಲಿ ಪ್ರೋಟೀನ್,ಫ್ಯಾಟಿ ಆಸಿಡ್ಸ್,ವಿಟಮಿನ್ಸ್,ಕಬ್ಬಿಣ,ನಾರಿನಂಶ, ಫಾಸ್ಫರಸ್ ,ಫೋಲೇಟ್ ಹೆಚ್ಚಿರುವುದರಿಂದ ಹೃದಯ, ಶ್ವಾಸಕೋಶ ತೊಂದರೆ ನಿವಾರಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.ಹೀಗೆ ಎಳ್ಳು ಬೆಲ್ಲವೆಲ್ಲವನ್ನು ಹಬ್ಬದ ದಿನ ಮಾತ್ರ ಬಳಸದೆ ಚಳಿಗಾಲದಲ್ಲಿ ಆಗಾಗ ತೆಗೆದುಕೊಂಡು ವಸಂತ ಋತು ಆರಂಭವಾಗುವ ತನಕ ಉಷ್ಣ, ಸ್ನಿಗ್ಧ, ಮಧುರ, ಆಮ್ಲ,ಲವಣ ರಸ ಪ್ರಧಾನ ಆಹಾರಗಳನ್ನು ಸೇವಿಸಿದರೆ ವರ್ಷಪೂರ್ತಿ ಆರೋಗ್ಯದಿಂದಿರಬಹುದು.
- ಜಾನುವಾರುಗಳ ಆರೋಗ್ಯವೂ ಮುಖ್ಯವಾದುದರಿಂದ ಚಳಿ, ಜಡತ್ವ ದೂರಮಾಡಲು ಅವುಗಳಿಗೆ ಅಲಂಕಾರ, ಪೂಜೆ ಮಾಡಿ,ದನಗಳ ಕಿಚ್ಚು ಹಾಯಿಸಿ, ಸೂರ್ಯಕಿರಣ ತ್ವಚೆ ಯ ಮೇಲೆ ಬಿದ್ದು, ವಿಟಮಿನ್ 'ಡಿ' ಹಾಗೂ ತ್ವಕ್ರೋಗಗಳು ಬರದಂತೆ ಗುಂಪಾಗಿ ಗಾಳಿಪಟ ಹಾರಿಸಿ, ಮಕ್ಕಳಿಗೆ ದ್ರಷ್ಟಿ ತಾಗದಂತೆ ಎಳ್ಳು, ಬಾರೆ,ಎಲಚಿ ಹಣ್ಣುಗಳನ್ನು ತಲೆಯ ಮೇಲೆ ಎರೆದು ಮನೆ ಮನೆಗೆ ಹೋಗಿ ಎಳ್ಳು ಬೆಲ್ಲ ಹಂಚಿ,ಬಾಗಿನ ಕೊಟ್ಟು, ತೆಗೆದುಕೊಂಡು ಸಂತೋಷದಿಂದ ಹಬ್ಬ ಆಚರಿಸಲಾಗುತ್ತದೆ.
- ಎಳ್ಳೆಣ್ಣೆ ಅಭ್ಯಂಗ, ಸೂರ್ಯ ನಮಸ್ಕಾರ, ಎಳ್ಳೆಣ್ಣೆಯಿಂದ ದೀಪ ಹಚ್ಚಿ, ದೇವರನ್ನು ಪ್ರಾರ್ಥಿಸಿ, ಎಳ್ಳು ಬೆಲ್ಲ ಸೇವಿಸಿ ಒಳ್ಳೊಳ್ಳೆ ಮಾತನಾಡುತ್ತಾ ಸರ್ವರಿಗೂ ಶುಭವಾಗಲಿ ಎನ್ನುವ ಆಶಯ ಹೊತ್ತು ಮಕರ ಸಂಕ್ರಾಂತಿಯ ಭರವಸೆಯ ಹಬ್ಬದಂದು ಕೊರೆಯುವ ಚಳಿಯನ್ನು ಲೆಕ್ಕಿಸದೆ, ಗಡಿ ಭಾಗವನ್ನು ಕಾದು,ತನ್ನ ಹಾಗೂ ಕುಟುಂಬಕ್ಕಿಂತ ಮಿಗಿಲಾಗಿ ಭಾರತೀಯರೆಲ್ಲರ ರಕ್ಷಣೆ ಮಾಡುವ ದೇಶದ ಸೈನಿಕರ ಆಯುಷ್ಯ, ಆರೋಗ್ಯ ವ್ರದ್ಧಿಸಲಿ ಎಂದು ಜಗತ್ತಿನ ಪ್ರತ್ಯಕ್ಷದ್ಯವ ಸೂರ್ಯ ದೇವನನ್ನು ಪ್ರಾರ್ಥಿಸಿ ದೇಶದ ಪ್ರಗತಿಯನ್ನು ಬಯಸೋಣ.
ಡಾ. ಮಾನಸ ಹೆಬ್ಬಾರ್,
ಬಿ.ಎ.ಎಮ್.ಎಸ್.,ಎಂ.ಡಿ(ಆಯು),
ಇಂಚರ ಆಯುರ್ ಕೇರ್, ಬೆಂಗಳೂರು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











