ರೇಷ್ಮೆಯಂತಹ ಕೂದಲು ನಿಮ್ಮದಾಗಬೇಕೇ? ಈ ಟಿಪ್ಸ್ ಅನುಸರಿಸಿ

By Manu

ಓರ್ವ ವ್ಯಕ್ತಿಯ ಸೌಂದರ್ಯವನ್ನು ಮತ್ತು ವ್ಯಕ್ತಿತ್ವವನ್ನು ಆತನ ಮುಖದ ಕಳೆ ಹೆಚ್ಚಿಸುತ್ತದೆ. ಇದರಲ್ಲಿ ಕೇಶಶೃಂಗಾರದ ಪಾತ್ರವೂ ಹಿರಿದು. ಪ್ರತಿಯೊಬ್ಬರಿಗೂ ತಮ್ಮ ತಲೆಗೂದಲು ರೇಶ್ಮೆಯಂತೆ ನುಣುಪಾಗಿ ಮತ್ತು ಹೊಳಪುಳ್ಳದ್ದಾಗಿರಬೇಕು ಎಂಬ ಬಯಕೆ. ಆದರೆ ಬಯಸಿದ ಮಾತ್ರಕ್ಕೆ ಕೇಶ ಸುಲಭವಾಗಿ ದಕ್ಕುವುದಿಲ್ಲವಲ್ಲ. ಇದಕ್ಕೆ ಆರೈಕೆ ಅಗತ್ಯ. ಈ ಆರೈಕೆಯ ನೆಪದಲ್ಲಿ ಖ್ಯಾತ ಸಂಸ್ಥೆಗಳು ಕೂದಲಿಗೆ ಹಲವು ಪ್ರಸಾಧನ ಮತ್ತು

ಶೃಂಗಾರಸಾಧನ ಮತ್ತು ವಿಧಾನಗಳನ್ನು ಹೊರತಂದಿವೆ. ಈ ಪ್ರಸಾಧನಗಳಲ್ಲಿರುವ ತೀಕ್ಷ್ಣ ರಾಸಾಯನಿಕಗಳು ಮೊದಲಿನ ಉಪಯೋಗಗಳಲ್ಲಿ ಪರಿಣಾಮಕಾರಿಯಾಗಿ ಕಂಡುಬಂದರೂ ಸತತ ಬಳಕೆಯ ಬಳಿಕ ಒಳ್ಳೆಯದು ಮಾಡುವುದಕ್ಕಿಂತ ಹಾಳು ಮಾಡುವುದೇ ಹೆಚ್ಚು ಎಂದು ಹೆಚ್ಚಿನವರ ಅನುಭವವಾಗಿದೆ. ಅಷ್ಟೇ ಅಲ್ಲ, ಕೂದಲನ್ನು ಬಿಸಿಯಾಗಿಸಿ ಬಳುಕಿಸಿ ಸೌಂದರ್ಯವನ್ನು ಹೆಚ್ಚಿಸುವ, ಗುಂಗುರು ಕೂದಲನ್ನು ನೆಟ್ಟಗಾಗಿಸುವ ವಿಧಾನಗಳೂ ಕ್ರಮೇಣ ಹಾನಿ ಎಸಗುತ್ತವೆ.

ಆದ್ದರಿಂದ ತಾತ್ಕಾಲಿಕ ಸೌಂದರ್ಯ ಹೆಚ್ಚಿಸುವ ಈ ವಿಧಾನಗಳಿಂದ ನಿಮ್ಮ ಕೂದಲ ಸಹಜ ಸೌಂದರ್ಯವನ್ನು ಇನ್ನೂ ಹೆಚ್ಚು ಕುಂದಿಸಬೇಡಿ. ಹಣವೂ ದುಂದುವೆಚ್ಚ. ಬದಲಿಗೆ ಮನೆಯಲ್ಲಿಯೇ ನಿಮ್ಮ ಅಡುಗೆ ಮನೆಯಲ್ಲಿರುವ ಅಥವಾ ಸುಲಭವಾಗಿ ಲಭ್ಯವಿರುವ ಸಾಮಾಗ್ರಿಗಳನ್ನು ಉಪಯೋಗಿಸಿ ಕಾಂತಿಯುಕ್ತ ಮತ್ತು ರೇಷ್ಮೆಯಂತಹ ಕೂದಲನ್ನು ಪಡೆಯಿರಿ. ಕಠಿಣ ಮತ್ತು ಗುಂಗುರು ಕೂದಲನ್ನೂ ಪಡಗಿಸಲು ಇವು ಸಮರ್ಥವಾಗಿವೆ. ಇಂತಹ ಹಲವು ಫಲಪ್ರದ ವಿಧಾನಗಳನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ಕೆಳಗಿನ ಸ್ಲೈಡ್ ಶೋ ಮೂಲಕ ಪ್ರಸ್ತುತಪಡಿಸಲು ಹರ್ಷಿಸುತ್ತದೆ, ಮುಂದೆ ಓದಿ..

ಜೇನು ಮತ್ತು ಬಾದಾಮಿ ಎಣ್ಣೆಯ ಲೇಪ

ಜೇನು ಮತ್ತು ಬಾದಾಮಿ ಎಣ್ಣೆಯ ಲೇಪ

ಒಂದು ವೇಳೆ ನಿಮ್ಮ ಕೂದಲು ಸಿಕ್ಕುಸಿಕ್ಕಾಗಿದ್ದರೆ ಇದನ್ನು ಬಿಡಿಸಲು ಈ ವಿಧಾನ ಹೆಚ್ಚು ಸೂಕ್ತವಾಗಿದೆ. ಬಾದಾಮಿ ಎಣ್ಣೆ ಕೂದಲನ್ನು ಉದುರುವುದನ್ನು ತಡೆಯಲು ಸಮರ್ಥವಾದ ಒಂದು ಅವಶ್ಯಕ ತೈಲವಾಗಿದ್ದು ಇದರಲ್ಲಿ ವಿಟಮಿನ್ ಎ ಮತ್ತು ಇ ಉತ್ತಮ ಪ್ರಮಾಣದಲ್ಲಿವೆ. ಅಲ್ಲದೇ ಇದೊಂದು ನೈಸರ್ಗಿಕ ತೇವಕಾರಕವೂ ಆಗಿದೆ. ಇದಕ್ಕಾಗಿ ಸಮಪ್ರಮಾಣದಲ್ಲಿ ಜೇನು ಮತ್ತು ಬಾದಾಮಿ ಎಣ್ಣೆಯನ್ನು ಬೆರೆಸಿ ತಲೆಕೂದಲ ಬುಡದಿಂದ ತುದಿಯವರೆಗೆ ಹಚ್ಚಿ ನಯವಾದ ಮಸಾಜ್ ಮಾಡಿ.

ಬಾಳೆಹಣ್ಣು, ಮೊಟ್ಟೆ ಮತ್ತು ಆಲಿವ್ ಎಣ್ಣೆಯ ಲೇಪ

ಬಾಳೆಹಣ್ಣು, ಮೊಟ್ಟೆ ಮತ್ತು ಆಲಿವ್ ಎಣ್ಣೆಯ ಲೇಪ

ಕಳೆಗುಂದಿದ ಮತ್ತು ಸುಲಭವಾಗಿ ತುಂಡಾಗುವ ಕೂದಲಿಗೆ ಈ ವಿಧಾನ ಸೂಕ್ತವಾಗಿದೆ. ಒಂದು ಬಾಳೆಹಣ್ಣು, ಒಂದು ಮೊಟ್ಟೆಯ ಬಿಳಿಭಾಗ (ಸಾಧ್ಯವಾಗದಿದ್ದರೆ ಮಾತ್ರ ಇಡಿಯ ಮೊಟ್ಟೆ) ಮತ್ತು ಎರಡು ದೊಡ್ಡಚಮಚ ಆಲಿವ್ ಎಣ್ಣೆ ಬೆರೆಸಿ ಮಿಶ್ರಣ ತಯಾರಿಸಿ. ಇದನ್ನು ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಟ್ಟು ಬಳಿಕ ಈಗತಾನೇ ತೊಳೆದು ನೆನೆದಿರುವ ಕೂದಲಿಗೆ ದಪ್ಪನಾಗಿ ಹಚ್ಚಿ ಒಂದೆರಡು ನಿಮಿಷದ ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ತಿಂಗಳಿಗೆ ಒಂದೇ ಬಾರಿ ಉಪಯೋಗಿಸಿ.

ತೆಂಗಿನ ಹಾಲು ಮತ್ತು ಜೇನಿನ ಲೇಪ

ತೆಂಗಿನ ಹಾಲು ಮತ್ತು ಜೇನಿನ ಲೇಪ

ಒಂದು ದೊಡ್ಡಚಮಚ ಜೇನು, ಅರ್ಧ ಕಪ್ ತೆಂಗಿನ ಹಾಲು ಸೇರಿಸಿ ಚೆನ್ನಾಗಿ ಗೊಟಾಯಿಸಿ. ಈ ಲೇಪದಿಂದ ಈಗತಾನೇ ನೆನೆಸಿ ಒರೆಸಿಕೊಂಡ ಕೂದಲಿಗೆ ಹಚ್ಚಿ ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ಸೌಮ್ಯ ಶಾಂಪೂ ಬಳಸಿ ತಲೆಸ್ನಾನ ಮಾಡಿ. ಈ ವಿಧಾನದಿಂದ ಸಿಕ್ಕುಗೊಂಡಿದ್ದ ಕೂದಲು ಸುಲಭವಾಗಿ ಬಿಡಿಸಲು ಸಾಧ್ಯವಾಗುತ್ತದೆ ಹಾಗೂ ಕೂದಲಿಗೆ ದೃಢತೆ ಮತ್ತು ಕಾಂತಿ ನೀಡುತ್ತದೆ.

ಮೊಟ್ಟೆ, ಲಿಂಬೆ ಮತ್ತು ಮೊಸರು

ಮೊಟ್ಟೆ, ಲಿಂಬೆ ಮತ್ತು ಮೊಸರು

ಗುಂಗುರು ಕೂದಲಿಗೆ ಈ ವಿಧಾನ ಅತ್ಯಂತ ಸೂಕ್ತವಾಗಿದೆ. ಲಿಂಬೆ ತಲೆಹೊಟ್ಟು ನಿವಾರಿಸುವ, ಮೊಟ್ಟೆ ಕೂದಲಿಗೆ ಕಾಂತಿ ನೀಡುವ ಮತ್ತು ಮೊಸರು ತೇವವನ್ನು ಹಿಡಿದಿಟ್ಟುಕೊಳ್ಳುವ ಗುಣಗಳು ಹೊಂದಿದ್ದು ಇವೆಲ್ಲವುಗಳ ಮಿಶ್ರಣ ಕೂದಲಿಗೆ ಅತ್ಯುತ್ತಮ ಪೋಷಣ ನೀಡುತ್ತದೆ. ಒಂದು ಮೊಟ್ಟೆಯ ಬಿಳಿಭಾಗ, ಅರ್ಧ ಲಿಂಬೆಯ ರಸ ಮತ್ತು ಎರಡು ದೊಡ್ಡಚಮಚ ಮೊಸರು ಸೇರಿಸಿ ಚೆನ್ನಾಗಿ ಗೊಟಾಯಿಸಿ ಈಗತಾನೇ ನೆನೆಸಿ ಒರೆಸಿಕೊಂಡ ಕೂದಲಿಗೆ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ಪ್ರತಿ ಹದಿನೈದು ದಿನಕ್ಕೊಮ್ಮೆ ಮಾತ್ರ ಅನುಸರಿಸಿ.

ಮಾಯೋನ್ನೈಸ್

ಮಾಯೋನ್ನೈಸ್

ಬ್ರೆಡ್ಡಿಗೆ ಹಚ್ಚಿ ತಿನ್ನುವ ಮಾಯೋನ್ನೈಸ್ ಘಾಸಿಗೊಂಡ ಕೂದಲ ಪೋಷಣೆಗೆ ಉತ್ತಮ ಆರೈಕೆ ನೀಡುತ್ತದೆ. ವಿಶೇಷವಾಗಿ ತುದಿ ಸೀಳಿದ, ನಡುನಡುವೆ ವಕ್ರವಕ್ರವಾದ ಕೂದಲಿಗೆ ಇದು ಉತ್ತಮವಾಗಿದೆ. ಈಗತಾನೇ ನೆನೆಸಿ ಒರೆಸಿಕೊಂಡ ಕೂದಲು ಪೂರ್ಣವಾಗಿ ನೆನೆಯುವಂತೆ ಮಾಯೋನ್ನೈಸ್ ಅನ್ನು ಕೂದಲಿಗೆ ಹಚ್ಚಿ. ವಿಶೇಷವಾಗಿ ತುದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಚ್ಚಿ. ಈಗ ಶವರ್ ಕ್ಯಾಪ್ ಒಂದನ್ನು ಧರಿಸಿ ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ಮತ್ತು ಸಾಮಾನ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಈ ವಿಧಾನವನ್ನೂ ತಿಂಗಳಿಗೆ ಎರಡು ಬಾರಿ ಅನುಸರಿಸಬಹುದು.

Story first published: Tuesday, April 5, 2016, 10:05 [IST]
X
Desktop Bottom Promotion