For Quick Alerts
ALLOW NOTIFICATIONS  
For Daily Alerts

ಅಮ್ಮ, ನೋಡವ ಬಂದಿದ್ದಾನೆ ಮತ್ತೆ ನನ್ನ ತಣಿಸಲು

By * ಅಂಜಲಿ ರಾಮಣ್ಣ
|
The death of my romance
ನಾಲ್ಕನೆ ಇಯತ್ತೆಯಲ್ಲಿದ್ದಾಗ ಅವನ ಕಾಮನೆಗೆ ಬಿದ್ದದ್ದು ನಲ್ವತ್ತಕ್ಕೂ ಹಾಗೇ ಇರಲಿ ಅನ್ನೋ ಬಯಕೆ! ನನ್ನ ಅವನ ಮೊದಲ ಭೇಟಿಯ ನೆಲವಿರೋ ಆ ಮಾಳ ಅದೇ ಕೆರೆಯ ಬಾಹು ಬಂಧನದಲ್ಲಿ ಬೆಚ್ಚಗೆ ಕಣ್ಣ್ಮುಚ್ಚಿ ಆನಂದಿಸುತ್ತಿದೆ ನನ್ನೆಲ್ಲಾ ನೆನಪುಗಳ ಮೆಲುಕಿನ ಪಲುಕನ್ನು! ಆಹ್, ಆ ಮಣ್ಣ ವಾಸನೆ ಅವನೇ ಎಬ್ಬಿಸಿದ್ದು ತುಂತುರಾಗಿ ಹುಯ್ದು. ಅವ ಬರೋ ಸೂಚನೆ ನನಗೆ ಕೊಡ್ತಾನೆ ಇರ್ಲಿಲ್ಲ. ಆದರೆ ಬಂದ ಅಂದರೆ ಅಬ್ಬಬ್ಬ ಎಂಥ ರಸಿಕ. ಅಮ್ಮನಿಗೆ ಹೆಣ್ಣು ಮಗಳ ಕಾಳಜಿ ಅದಕ್ಕೆ ಅವ ಬಂದ್ರೆ ಬಾಗಿಲು ಬಿಗಿ ಮಾಡ್ತಿದ್ದ್ಲು ಆದರೆ ನಾ ಕಿಟಿಕಿ ಹತ್ತಿ ಗಲ್ಲ ಉಬ್ಬಿಸಿ ಅವನನ್ನು ಕಣ್ಣ್ತುಂಬಿಸಿಕೊಳ್ಳಲು ಬೇಡ ಅಂತಿರ್ಲಿಲ್ಲ. ಕಿಲಾಡಿ ಅಮ್ಮ ಅವಳಿಗೆ ಆಗಲೇ ಅಜ್ಜಿ ಆಗೋದು ಬೇಕಿರ್ಲಿಲ್ಲ ಹಾಗಾಗಿ ಅವನ ನನ್ನ ನಡುವೆ ವಿರಹ ನೂರು ನೂರು ತರಹ ಒಡ್ಡ್ತಿದ್ದ್ಲು.

ನನ್ನ ಬಗ್ಗೆ ಅವನ ಭಾವ ಅಚಲ. ಅದಕ್ಕೆ ಪ್ರತೀ ಬಾರಿಯೂ ಒಂದೇ ಬಣ್ಣದಲ್ಲಿ ಬರ್ತಿದ್ದ. ಆ ನೋಟ, ಆ ಮೈ ಬಣ್ಣ, ಓಹ್, ಅವನದ್ದು ಒಂದೇ ನಿಸ್ಪೃಹತೆ. ಅವನ ಮೈನ ಮಿರ ಮಿರ ಹೊಳಪಿಗೆ ನನ್ನ ತುಟಿ ಹೇಗೆ ಅದುರುತ್ತಿತ್ತು ಅದು ನನಗೆ ಅವಗೆ ಮಾತ್ರ ಗೊತ್ತು. ಅವ ಹತ್ತ್ಹೆಜ್ಜೆ ದೂರ, ನಮ್ಮ ನಡುವೆ ಸಿಮೆಂಟ್ ಗೋಡೆಯ ಅಂತರ, ಅವನ ಚುರುಕು ಕಣ್ಣುಗಳ ಪರಿಮಳಕ್ಕೆ ನಾ ತಣ್ಣಗೆ ಬೆವರುತ್ತಿದ್ದೆ. ಮೈ ಬಿಸುಪು ನನಗರಿವಿಲ್ಲದಂತೇ ಹೆಚ್ಚುತ್ತಿತ್ತು. ಉಸಿರಿನ ಲಯ ತಪ್ಪುತ್ತಿತ್ತು. ಕಿವಿಯೊಳಗೆ ನನ್ನ ಹೃದಯದ ಬಡಿತವೇ ಚುಕ್ಕಿ ಮಚ್ಚೆಯಂತೆ ಕಾಡುತ್ತಿತ್ತು. ಹೀಗೇ, ಅವ ನನ್ನ ಮುಂದೆ ಇದ್ದಾಗ್ಲೆಲ್ಲಾ ನೆರೆಯದ ಮೈಯೊಳಗಿನ ನನ್ನ ಮನಸ್ಸು ಮಾತ್ರ ವಿಪರೀತ ಹೆಣ್ಣಾಗ್ತಿತ್ತು.

ಆ ದಿನ ಮತ್ತೆ ಬಂದ. ಮತ್ತೆ ಅಮ್ಮ ನನ್ನ ಕೂಡಿಟ್ಟಳು. "ಹೆತ್ತ ಹೆಣ್ಣು ಸೆರಗಿನ ಬೆಂಕಿ ಕಣೆ ಅಮ್ಮ, ನೋಡವ ಬಂದಿದ್ದಾನೆ ನನ್ನ ತಣಿಸಲು ಕಳುಹಿಸಿಕೊಡು ನನ್ನ" ಅಂತ ಚೀರಿದೆ. ಅಮ್ಮ ಒಂಥರ ಅಪರಂಜಿ ಚಿನ್ನದಂತೆ, ಯಾವುದಕ್ಕೂ ಪ್ರತಿಕ್ರಿಯಿಸುವುದಿಲ್ಲ. ಮಾಡಬೇಕಾದ್ದ ಮಾಡ್ತಾಳೆ ಅಷ್ಟೆ. ಆದರೆ ಅವನಿಗೂ ಬೇಕಿದ್ದೆನಲ್ಲ ನಾನು? ಅಮ್ಮ ಬಲು ನಾಜೂಕು ಆದ್ರೆ ಅವ ಗಂಡು ಜಾತಿಗೇ ಅಗ್ರಜ ಕೇಳ್ಬೇಕಾ ಸಿಟ್ಟಾದ... ಏನೋ ಹೇಳಲು - ಕೇಳಲು ಬಾಯ್ತೆರೆದ... ಆಹಾ, ನಾ ತಿಳಿಯದ್ದು ಆಗ ಅವನಲ್ಲಿ ಕಂಡೆ. ಮೊದಲ ಬಾರಿಗೆ ಅನಿಸ್ತು ಬಿಗಿದ ತುಟಿಗಳ ಹಿಂದೊಂದು ಭಾರೀ ಜೀವ ಇದೆ ಅಂತ. ಹೀಗೆ ನನ್ನ ಹಲ್ಲುಗಳಿಗೆ ಸ್ಪರ್ಶಜ್ಞಾನ ತಂದುಕೊಟ್ಟ ಮೊದಲಿಗ ಅವನು!

ಆಗೊಮ್ಮೆ ಈಗೊಮ್ಮೆ ಬಂದು ನನ್ನ ಹುಚ್ಚು ಕೆರಳುಸಿತ್ತಿದ್ದ ಅವನು ಈಗೀಗ ನಿತ್ಯವೂ ಬರಲಾರಂಭಿಸಿದ. ಒಮ್ಮೆಯೂ ನಾ ಸಿಗಲೆ ಇಲ್ಲ. ಪಾಪ, ಅವನೂ ತಾಳ್ಮೆಯ ಸೀಮಾವಲಂಬಿತ ತಾನೆ? ಸರಿ, ನನ್ನ ನಾಗಮ್ಮಜ್ಜಿಯ ಜೊತೆಗೆ ಸರಸ ಶುರು ಮಾಡ್ಬಿಡ್ತಿದ್ದ. ಅವಳು ನನ್ನ ತೊಟ್ಟಿಲು ತೂಗಿದ ಅಜ್ಜಿ, ಅದರೆ ಇವ ಅವಳ ಬಳಿ ಹೀಗೆಲ್ಲಾ ಸುಖಿಸಿದಾಗ ನನಗೆ ಅವಳಲ್ಲಿ ಸವತಿ ಮತ್ಸರ. ಎಷ್ಟೋ ಸರ್ತಿ ಅಮ್ಮನಿಗೆ ಕೇಳದಂತೆ, ಅವ ಅಜ್ಜಿ ಮೈಮೇಲೆ ಹೇಗ್ಹೇಗೋ ಆಡೋವಾಗ ಅವನಿಗ ಹೇಳ್ತಿದ್ದೆ "ಏನಿದೇ ಅವಳಲ್ಲಿ ಅಂತ ಹೀಗಾಡ್ತೀಯೋ? ನನ್ನೊಮ್ಮೆ ಆಘ್ರಾಣಿಸಿ ನೋಡೊ ಸಾಕು, ನೀ ಮತ್ತೆಲ್ಲಿಯೂ ಹೋಗಾಲಾರೆ...." ಅಂತ. ಭಾರೀ ಕಳ್ಳ, ನನ್ನ ಹೊಟ್ಟೆ ಉರಿಸೋಕ್ಕೆ ಅಂತಾನೆ ಒಮ್ಮೆ ಅಜ್ಜಿಯ ಸೆರಗು ಹೊಕ್ಕಿ ಕೂತಿದ್ದ. ಆದರೂ ಅವಳ್ಯಾಕೆ ಸದ್ದಾಗುತ್ತಿರಲ್ಲಿಲ್ಲ ಅನ್ನೋ ಪ್ರಶ್ನೆ ನನ್ನ ಈಗಲೂ ಕಾಡುತ್ತೆ!

ಎರಡು ದಿನಕ್ಕೊಮ್ಮೆಯಾದ್ರೂ ಅವನ್ನ ನೋಡದಿದ್ದ್ರೆ ನನಗೆ ಏನೋ ಆತಂಕ, ಈಗ ಬಂದ, ಇಲ್ಲಿ ಬಂದ, ಅಲ್ಲಿ ಬಂದ ಅಂತೆಲ್ಲಾ ಕಸಿವಿಸಿ ಶುರುವಾಗ್ಬಿಡೋದು. ಇನ್ನ್ಯಾವೊನ್ನೇ ನೋಡಿದ್ರೂ ಇವನೇ ಏನು ಅನ್ನೋ ಮಾಯೆ ಮುಸುಕಿಕೊಳ್ಳೋದು. ಅವನಿಗೂ ಹಾಗೆ ಇತ್ತೇನೋ. ಅದಕ್ಕೆ ಅಜ್ಜಿ ನೆಲಬಾವಿಲಿ ನೀರೆತ್ತೊಕೆ ಹೋದ್ರೆ ನೀರಿನ ಕೊಡದೊಳಗ್ನಿಂದ ಬಂದು ಅವಳ ಸೊಂಟ ಬಳಸಿ ಕೂತ್ಬಿಡ್ತಿದ್ದ.

ಒಂದೆರಡು ಸರ್ತಿ ಅದೇ ಕಿಟಕಿಯಿಂದ ನನ್ನಜ್ಜಿ ಪುರಲೆ ಒಟ್ಟು ಮಾಡಿ ಅವನ ಅಂತ್ಯ ಸಂಸ್ಕಾರನೂ ಮಾಡಿದ್ದ ನಾ ನೋಡೀನಿ. ಆದರೂ ಅದೇ ರಾತ್ರಿ ನನ್ನೇ ಪ್ರೀತಿ ಮಾಡ್ಬೆಕು ಅಂತ ಹಠ ಮಾಡಿ ಮತ್ತೆ ಬರ್ತಿದ್ದ ಮಾಯಾವಿ. ಒಮ್ಮೊಮ್ಮೆಯಂತೂ ಬೆಳ್ಳಂಬೆಳಿಗ್ಗೆ ಬಾಗಿಲು ತೆರೆದರೆ ಹೊಸಿಲ ಮೇಲೆ ನನ್ನ ನೆನಪಿನ ಪೊರೆ ಕಳಚಿಟ್ಟು ಹೋಗ್ಬಿಟ್ಟಿರ್ತಿದ್ದ . ಆದರೂ ಇನ್ನೂ ಒಮ್ಮೆಯೂ ನಾವಿಬ್ಬರೂ ಕೂಡದ್ದೇ ಇಲ್ಲ. ಶಾಪವೆಲ್ಲಾ ಅಮ್ಮನಿಗೆ.

ನಾ ಎಷ್ಟಾದ್ರೂ ಪಪ್ಪನ ಮಗಳು ತಾನೆ?! ನನ್ನ ಪೋಲಿತನದ ಮೂಲ ಜಾತಕವೇ ಅವರ ಬಳಿಯಿತ್ತಲ್ಲ, ಹಾಗಾಗಿ ಮೋಟು ಗೋಡೆಯ ಬಚ್ಚಲು ಮನೆಗೆ ದೀಪವಿಟ್ಟಿರಲಿಲ್ಲ ಅವರು. ಕೊನೆಗೂ ಅವನು ನನ್ನ ಮುದ್ದಿಸೋಕ್ಕೆ ದಾರಿ ಕಂಡ್ಕೊಂಡ. ಇಷ್ಟು ದಿನದ ನನ್ನ ಕಾತರಿಕೆಯನ್ನು ರಮಿಸಲು ಗುಟ್ಟಾಗಿ, ಉತ್ಕಟವಾಗಿ ಯಾರಿಗೂ ಸುಳಿವು ಕೊಡದೆ ಕಾದು ಕೂತ. ಆ ದಿನ ಬಚ್ಚಲು ಕೋಣೆಯೇ ನಮ್ಮ ಯಮುನಾ ದಂಡೆ, ಅವ ನನ್ನ ಶಾಮ ನಾ ಅವನ ರಾಧೆ! ಒಳ ಹೊಕ್ಕು, ಕಣ್ಣ್ಮುಚ್ಚಿ, ತುಟಿ ಕಚ್ಚಿ..... ಒಹ್, ಅವ ಬಲು ಸಂಯಮಿ, ಒಲಿಸಿಕೊಳ್ಳೋ ಕಲೆ ತಿಳಿದವ....ಹತ್ತಿರ ಬರುವುದು ಗೊತ್ತೇ ಆಗದಂತೆ ಬಂದು ನನ್ನ ಬಲ ಅಂಗಾಲನ್ನು, ಕಿರುಬೆರಳು ಅಲುಗದಂತೆ ತನ್ನ ಬಾಯಿಂದ ಒತ್ತಿ ಹಿಡಿದ....."ಆ........" ಅಷ್ಟೇ ನಾ ಅಂದದ್ದು. ಮರುಳ ಹೆಣ್ತನ ಜರುಗಿತು ಅಂತ ತಿಳಿಲಾರದೆ, ನನ್ನ ನೋಯಿಸುವ ಮನ ಬಾರದೆ, ಅರೆ ಘಳಿಗೆಯೂ ನಿಲ್ಲದೆ ಸರ ಸರ ಹೋಗಿಬಿಟ್ಟ. ಅದಕ್ಕೆ ಇವತ್ತಿಗೂ ಸಖ್ಯ ಬೆಳೆಸಿಯೂ ಪ್ರೀತಿ ಮಾಡದ ಅವನ ಮೇಲೆ ಮುನಿಸಿದೆ ನನಗೆ!

ನನ್ನ ಸದ್ದು ಮನೆಯ ಉಳಿದವರಲ್ಲೇನೋ ಸಂಚಲನ ಉಂಟು ಮಾಡ್ಬಿಡ್ತು. ಗುಸು ಗುಸು ಪಿಸು ಪಿಸು! ನನ್ನಲ್ಲಿ ಅವನ ಬಸಿರು ನಿಲ್ಲಲಿಲ್ಲ, ನಾ ಹೊರಲಿಲ್ಲ, ಹೆರಲಿಲ್ಲ ಆದರೂ ಇವರ ಬಾಣಂತನಕ್ಕೆ ಮೌನವಾದೆ. ಎರಡು, ಮೂರು, ನಾಲ್ಕು ದಿನ ಇವರೆಲ್ಲಾ ಸೇರಿ ಅವನ ಗುರುತು ನನ್ನ ತೊಗಲಿಗೂ ಬೇಡವಾಗಿಸಿಬಿಟ್ಟರು. ನಾ ಮರೆಯಲಾರದೆಯೂ ಮರೆವಾದೆ. ಮನದ ಮೂಲೆಯಲ್ಲಿ ಅವ ಸುತ್ತಿ ಸುತ್ತಿ ಬೆಚ್ಚಗೆ ಮಲಗಿಬಿಟ್ಟ. ಮತ್ತೆಂದೂ ನನ್ನ ಕಣ್ಣ್ಗಳಿಗೆ ಅವನ ನೋಟದ ನೆನಪೂ ಆಗದಷ್ಟು ಕಾಲ ಸರಿಯಿತು.

ನನ್ನ ಸವತಿ ಪಟ್ಟಕ್ಕೇರಿದ್ದ ಅಮ್ಮನ ಅಮ್ಮ ಮುದಿ ಧ್ವನಿಯಲ್ಲಿ ಹೇಳಿದಳು "ನಿನಗೆ ಅವತ್ತು ಹಾವು ಕಚ್ಚಿದ್ದು ಕಣೆ. ಹೇಳಿದರೆ ಗಾಬರಿಯಾಗ್ತೀಯ ಅಂತ ಹೇಳಲಿಲ್ಲ. ವಿಷವಿರ್ಲಿಲ್ಲ ಅದಕ್ಕೆ ನೋಡು ಬಂಗಾರ್ದ್ಹಾಗೆ ಬದುಕ್ಕೊಂಡೆ"..... ನಾನು .......ಅಯ್ಯೋ....ಅಯ್ಯಯ್ಯೋ........ಈ ಹಾಳಾದ ಅಜ್ಜಿ ಯಾಕ್ಹೀಗೆ ರಸಭಂಗ ಮಾಡ್ಬಿಟ್ಟ್ಲು! ಛೆ, ಅವ ಈಗಲೂ ಬಂದು ಕನಸಿನ ಕದ ತಟ್ಟಿ ಒಳಗೆ ಬರ್ಲೇನೆ ಅಂತ ಕೇಳ್ತಿದ್ದ ಅದಕ್ಕೆ ನಾ ಸಿಟ್ಟು ಮಾಡ್ಕೊಂಡು ನಾನೀಗ ಪರಸ್ತ್ರೀ ಕಣೋ ಅಂತ ಹೇಳ್ತಿದ್ದೆ. ಇದೆಲ್ಲಾ ಯಾಕೆ ಅಜ್ಜಿಗೆ ಗೊತ್ತಾಗ್ಲಿಲ್ಲ? ಅವನ ಕಣ್ಣು, ಅವನ ಹಲ್ಲು, ಅವನ ಬಿಗಿತ, ಅವನ ಸ್ಪರ್ಶ, ಅವನ ಮೈ ಹೊಳಪಿನ ಘಮಲು ಎಲ್ಲವೂ ನನ್ನೊಳಗೆ ನನ್ನನ್ನು ಕ್ಷಣ ಕ್ಷಣವೂ ಬದುಕಿಸುತ್ತಿತ್ತು.....ಇನ್ನ್ಮೇಲೆ ಈ ಸುಖ ನನಗೆಲ್ಲಿ?......ಅಜ್ಜಿ ಮಾತು ರಿಂಗುಣಿಸಿದಾಗಲೆಲ್ಲ ಅವನ ಜಾಗದಲ್ಲಿ ಯಾವುದೋ ಕೇರೆ ಹಾವು ಮೈಮೇಲೆ ಮುಲುಗುಟ್ಟಿದಂತಾಗಿ ಜೀವಕೋಶ ಮರಗಟ್ಟಿಹೋಗುತ್ತೆ.... ನಾ ನಾಗಮಂಡಲದಲ್ಲಿ ರಂಗೋಲಿಯಾಗಲು ಸೋಲುತ್ತೇನೆ. ಕನಸು ಬಿಟ್ಟೆದ್ದು, ಕಾಲು ಮುದುರಿಕೊಂಡು TVಯಲ್ಲಿ Animal planet ನೋಡ್ತಾ ಕೂರ್ತೀನಿ. how romantic ಅಂತ ನಿಟ್ಟುಸಿರು ಬಿಡ್ತೀನಿ!

English summary

The death of my romance | Article by Anjali Ramanna | ನೋಡವ ಬಂದಿದ್ದಾನೆ ಮತ್ತೆ ನನ್ನ ತಣಿಸಲು | ಅಂಜಲಿ ರಾಮಣ್ಣ

My fantasies about love remained in dreams only. People around me never allowed to come it true. You know, the life never goes on the line we wish. A write up Anjali Ramanna.
Story first published: Friday, February 10, 2012, 19:11 [IST]
X
Desktop Bottom Promotion