For Quick Alerts
ALLOW NOTIFICATIONS  
For Daily Alerts

ಶೀಗೆ ಹುಣ್ಣಿಮೆಯಂದು ನದಿ ಸ್ನಾನ ಮಾಡ್ದೆ ಹೋದ್ರೆ...

By Prasad
|
Taking bath on Sheege hunnime to get rid of sins
ಈ ಜಗತ್ತಿನಲ್ಲಿ ಯಾರು ಸಾಚಾ ಇರ್ತಾರೆ? ಗಂಡನಿಗೆ ವಿಚ್ಛೇದನ ಕೊಟ್ಟು, ಗಂಡ ಬದುಕಿರುವಾಗಲೇ ಇನ್ನೊಬ್ಬನನ್ನು ಕಟ್ಟಿಕೊಂಡಿರುತ್ತಾಳೆ ಹೆಂಡತಿ. ಕೆಲವೊಂದು ಸನ್ನಿವೇಶದಲ್ಲಿ ಗಂಡನಿಗೆ ವಿಚ್ಛೇದನ ಕೊಡುವ ಮೊದಲೇ ಇನ್ನೊಬ್ಬನೊಡನೆ ಚಕ್ಕಂದ ಶುರುಹಚ್ಚಿಕೊಂಡಿರುತ್ತಾಳೆ. ಇದು ಹೆಂಗಸಿಗೆ ಮಾತ್ರವಲ್ಲ ಹೆಂಡತಿಗೆ ಕೈಕೊಟ್ಟು ಇನ್ನೊಬ್ಬಳ ಸೆರಗನ್ನು ಹಿಡಿದ ಗಂಡನಿಗೂ ಅನ್ವಯಿಸುತ್ತದೆ. ಇಂಥವರಿಗೆ ರಾಹು ಅಥವಾ ಶುಕ್ರ ಕಾಟ ತಪ್ಪಿದ್ದಲ್ಲ. ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅಂದುಕೋಬೇಡಿ, ಪರ್ಫೆಕ್ಟ್ ವೈಫ್ ಸಿಗೋದಾದ್ರೂ ಹ್ಯಾಗೆ ಅಂತಾನೂ ತಗಾದೆ ತೆಗೀಬೇಡಿ...

ಇಂಥವರು ಅ.11 ಮಂಗಳವಾರದಂದು ಸೂರ್ಯ ಬೆಳಗಾಗುವ ಮುಂಚೆಯೆ ಬಾವಿ, ನದಿ ಅಥವಾ ಸಮುದ್ರದಲ್ಲಿ ಮುಳುಗೇಳದಿದ್ದರೆ ಅವರಿಗೆ ಅಂಟಿಕೊಂಡಿರುವ ರಾಹು ಕಾಟ ಅವರ ಮಕ್ಕಳಿಗೂ ಅಂಟಿಕೊಳ್ಳುತ್ತದೆ. ಸರಿಯಾಗಿ ಕೇಳಿಸಿಕೊಳ್ಳಿ, ಮತ್ತೆ ಮತ್ತೆ ಹೇಳುತ್ತೇನೆ. ಅಂಥವರು, ಅಂದ್ರೆ ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಕೈಕೊಟ್ಟು ಪಾಪು ಅಲ್ಲರೀ ಪಾಪ ಕಟ್ಟಿಕೊಂಡವರು ನಾಳೆ ಮಾತ್ರವಲ್ಲ, ವರ್ಷದಲ್ಲಿ ಸಮುದ್ರದಲ್ಲಿ ಮೂರು ಬಾರಿ ಅಥವಾ ನದಿಯಲ್ಲಿ ಐದು ಬಾರಿ ಅಥವಾ ಬಾವಿಯಲ್ಲಿ ಏಳು ಬಾರಿ ಸ್ನಾನ ಮಾಡಲೇಬೇಕು. ಕೇಳಿಸಿಕೊಳ್ತಾ ಇದ್ದೀರಿ ತಾನೆ?

ಇಲ್ಲದಿದ್ದರೆ, ಬಡ್ಡಿಮಕ್ಕಳಿಗೆ ಅಂಟಿಕೊಂಡಿರುವ ರಾಹು ಮತ್ತು ಶುಕ್ರ ಕಾಟ ಅವರ ಮಕ್ಕಳಿಗೆ ರೋಗವಾಗಿ ಕಾಣಿಸಿಕೊಳ್ಳುತ್ತದೆ. ಕಪ್ಪು ಕಟ್ಟಿಗೆಯ ಮೇಲೆ ಗೆದ್ದಲು ಹತ್ತಿಕೊಂಡು ಪುದುಪುದು ಪುಡಿ ಉದುರಿಸಿದ ಹಾಗೆ ಮಕ್ಕಳ ಮೈಮೈಲೆ ಕಲೆಗಳು ಕಾಣಿಸಿಕೊಳ್ಳುತ್ತವೆ. ಅಪ್ಪ ಅಮ್ಮಂದಿರು ಮಾಡಿರುವ ತಪ್ಪಿಗೆ ಮಕ್ಕಳು ಅನುಭವಿಸಬೇಕಾಗುತ್ತದೆ. ಇದಕ್ಕೆ ಪರಿಹಾರವೆಂದರೆ, ಶೀಗೆ ಹುಣ್ಣಿಮೆಯ ದಿನ ಮೇಲೆ ತಿಳಿಸಿದಂತೆ ಬಾವಿ, ನದಿ ಅಥವಾ ಸಮುದ್ರ ಸ್ನಾನ ಮಾಡಬೇಕು.

ಇನ್ನು ವಿದೇಶಕ್ಕೆ ಹೋದವರೇನು ಸಾಚಾಗಳಾ? ಅಲ್ಲೇ ಇದ್ದು ಯಾವಳೊಂದಿಗೋ ಮಸ್ತ್ ಮಜಾ ಮಾಡಿ ಸಖತ್ ಊಟ ಮಾಡಿದ್ದರೂ, ಇಲ್ಲಿ ಬಂದು ಅಮ್ಮಾ ಹೊಟ್ಟೆ ಹಸಿವಾಗಿದೆ ಊಟಕ್ಕೆ ಹಾಕು ಎಂದು ಹೇಳ್ತಾರೆ ಕಚಡಾ ನನ್ಮಕ್ಳು. ಇಂಥವರಿಗೂ ಕಾಟ ತಪ್ಪಿದ್ದಲ್ಲ. ಈ ಪಾಪ ಪರಿಹಾರಕ್ಕೆ ಏನು ಮಾಡಬೇಕು? ಮೇಲೆ ಹೇಳಿದ ಹಾಗೆ ಮಾಡಿ. ನಾಳೆ ಬರುವ ಶೀಗೆ ಹುಣ್ಣಿಮೆ ಅಂತಿಂಥ ಹುಣ್ಣಿಮೆಯಲ್ಲ. ಹುಣ್ಣಿಮೆಯ ಹುಣ್ಣಿಮೆಯದು.

ಹೀಗೆಂದು ಬ್ರಹ್ಮಾಂಡದಲ್ಲಿ ಪಸರಿಸಿರುವ ಎಲ್ಲ ವೀಕ್ಷಕರಿಗೆ ಅಪ್ಪಣೆ ಕೊಡಿಸಿದವರು ನಿರರ್ಗಳ ಮಾತುಗಾರಿಕೆಯಿಂದ ಖ್ಯಾತರಾಗಿರುವ, ಕೈಯಲ್ಲಿ ಷಣ್ಮುಖನ ದಂಡವನ್ನು ಹಿಡಿದೇ ಇರುವ ಬೃಹತ್ ಬ್ರಹ್ಮಾಂಡ ಖ್ಯಾತಿಯ 'ಪರಿಪೂರ್ಣ' ಜ್ಯೋತಿಷಿ ನರೇಂದ್ರ ಬಾಬು ಶರ್ಮಾ. ಬೆಂಗಳೂರಿನಂಥ ಸಿಟಿಯಲ್ಲಿರುವವರು ಬಾವಿ, ನದಿ, ಸಮುದ್ರವನ್ನು ಎಲ್ಲಿ ಹುಡುಕಿಕೊಂಡು ಹೋಗುವುದು? ಇದನ್ನು ಪಾಲಿಸುವುದು ಅಥವಾ ಮೂಢನಂಬಿಕೆಯೆಂದು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಡುವುದು ಪ್ರಜ್ಞಾವಂತ ಓದುಗರಿಗೆ ಬಿಟ್ಟ ವಿಚಾರ.

English summary

Taking bath on Sheege hunnime | To get rid of sins | Astrologer Narendra Babu Sharma | ಶೀಗೆ ಹುಣ್ಣಿಮೆಯಂದು ನದಿ ಸ್ನಾನ

October 11, Tuesday is Sheege Hunnime. On this festival day, an astrologer says male or female who has betrayed the spouse should take bath in well, river or sea to get rid of sins. Otherwise the sins will pass on to the siblings and they will suffer from various diseases. Believing or not is readers discretion.
X
Desktop Bottom Promotion