ಪೋಷಕರು ಮಕ್ಕಳನ್ನು ನೆಂಟರಿಷ್ಟರ ಮುಂದೆ ಬೈಯ್ಯಲೇಬೇಡಿ, ಏಕೆ ಗೊತ್ತಾ?

ಪೋಷಕರು ತಮ್ಮ ಮಕ್ಕಳನ್ನು ಬೆಳೆಸುವ ರೀತಿ ಆ ಮಗುವಿನ ಭವಿಷ್ಯದ ರೂಪಕವಾಗಿರುತ್ತೆ. ಇತ್ತೀಚಿಗೆ ಮಕ್ಕಳನ್ನು ಬೆಳೆಸುವ ಶೈಲಿಯೂ ಸಹ ಬದಲಾಗಿದೆ. ಮಕ್ಕಳು ಪೋಷಕರ ಜೊತೆ ಬೆರೆತು ಬೆಳೆಯುವುದಕ್ಕಿಂತ ಬದಲಾಗಿ ಕಿಂಡರ್ ಗಾರ್ಡನ್, ಬೇಬಿ ಸಿಟ್ಟಿಂಗ್‌ನಂತಹ ಯಾಂತ್ರಿಕತೆಯೊಳಗೆ ಬೆಳೆಯಲಾರಂಭಿಸಿವೆ. ಆದ್ರೆ ಮನೆಯೇ ಮಕ್ಕಳ ಪಾಠಶಾಲೆ ಎಂಬುದು ಇಂದಿಗೂ ನಡೆದುಕೊಂಡು ಬಂದಿದೆ.

ಮನೆಯಲ್ಲಿ ಪೋಷಕರೇ ಮೊದಲ ಶಿಕ್ಷಕರಾಗಿರುತ್ತಾರೆ. ಆದರೆ ಕೆಲವೊಮ್ಮೆ ಪೋಷಕರೇ ಮಕ್ಕಳ ಭವಿಷ್ಯ ರೂಪುಗೊಳಿಸುವಲ್ಲಿ ಎಡುವುತ್ತಾರೆ. ಮಕ್ಕಳಿಗೆ ಅದರಲ್ಲೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ವಿಚಾರದಲ್ಲಿ ಪೋಷಕರು ಹೆಚ್ಚು ಗಮನಹರಿಸಬೇಕು. ಈ ವಯಸ್ಸಿನಲ್ಲೇ ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಹೇರದಿರುವುದು ಉತ್ತಮ. ಮಕ್ಕಳನ್ನು ಓದಿನ ವಿಚಾರದಲ್ಲಿ ಬೇರೆಯವರೊಂದಿಗೆ ಹೋಲಿಕೆ ಮಾಡುವುದು, ಜೊತೆಗೆ ಸಂಬಂಧಿಕರ ಎದುರು ಮಕ್ಕಳಿಗೆ ಬೈಯ್ಯುವುದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

parenting tips

ಪೋಷಕರಿಗೆ ತಮ್ಮ ಮಕ್ಕಳು ಚೆನ್ನಾಗಿ ಓದಬೇಕು, ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂಬ ಕನಸಿದ್ದರೂ ಕೆಲವೊಮ್ಮೆ ಅವರ ಒಳ್ಳೆಯದಕ್ಕೆ ಎಂದು ಸಂಬಂಧಿಕರ ಮುಂದೆ ಗದರಿಸುವುದು, ಹೋಲಿಕೆ ಮಾಡುತ್ತಾರೆ. ಹೀಗೆ ಮಾಡುವುದರಿಂದ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

ಹಾಗಾದ್ರೆ ನೀವು ಮಕ್ಕಳಿಗೆ ಸಂಬಂಧಿಕರ ಮುಂದೆ ಈ ರೀತಿ ಮಾಡುತ್ತಿದ್ದರೆ, ನಿಮ್ಮ ಮಗ ಅಥವಾ ಮಗಳನ್ನು ಬೇರೆಯವರ ಮುಂದೆ ಏಕೆ ಅವಮಾನಿಸಬಾರದು ಎಂಬುದನ್ನು ತಿಳಿದುಕೊಳ್ಳಿ.

ಮಕ್ಕಳು ಅದನ್ನು ಅವಮಾನವಾಗಿ ತೆಗೆದುಕೊಳ್ಳಬಹುದು.
ನಿಮ್ಮ ಮಕ್ಕಳು ಸಂಬಂಧಿಕರ ಮುಂದೆ ಅಶಿಸ್ತು ತೋರಿದ್ದಾರೆ ಎಂದುಕೊಳ್ಳೋಣ. ಈ ವೇಳೆ ನೀವು ಅವರಿಗೆ ಹೊಡೆಯಬಹುದು. ಈ ವೇಳೆ ತಕ್ಷಣವೇ ಅವರು ಮೌನಕ್ಕೆ ಜಾರಬಹುದು. ಇದು ಸಂಬಂಧಿಕರ ಮುಂದೆ ಆಗಿರುವ ನಂಬಲು ಅಸಾಧ್ಯವಾದ ಘಟನೆಯಾಗಬಹುದು. ಇದರಿಂದ ಅವರಿಗೆ ಅವಮಾನವಾಗಬಹುದು. ಸಂಬಂಧಿಕರ ಎದುರು ತಲೆ ತಗ್ಗಿಸುವ ಕಹಿ ನೆನಪಾಗಿ ಉಳಿಯಬಹುದು. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಮಕ್ಕಳ ಭಾವನಾತ್ಮಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು
ಸಂಬಂಧಿಕರು ಅಥವಾ ಅಪರಿಚಿತರ ಮುಂದೆ ನೀವು ನಿಮ್ಮ ಮಕ್ಕಳನ್ನು ಗದರಿಸಿದಾಗ, ಮಕ್ಕಳು ನೊಂದುಕೊಳ್ಳಬಹುದು. ಸಂಬಂಧಿಕರ ಮುಂದೆ ಕಣ್ಣೀರು ಹಾಕಿದರೆ ಅವಮಾನವಾಗಬಹುದು ಎಂದು ತಲೆ ತಗ್ಗಿಸಿ ಒಬ್ಬಂಟಿಯಾಗಿರಲು ಯತ್ನಿಸಬಹುದು. ಮತ್ತೊಮ್ಮೆ ಆ ವ್ಯಕ್ತಿಯ ಮುಖ ನೋಡಿದಾಗಲೆಲ್ಲಾ ಮಕ್ಕಳಲ್ಲಿ ಅದೇ ಘಟನೆ ನೆನಪಾಗಿ ಅವಮಾನವಾದಂತೆ ಎನಿಸಬಹುದು. ಇದು ಮಕ್ಕಳು ಸಾಮಾಜಿಕವಾಗಿ ಬೆರೆಯುವಲ್ಲಿ ಹಿಂದೇಟು ಹಾಕುವಂತೆ ಪ್ರೇರೇಪಿಸಬಹುದು. ಈ ವಯಸ್ಸಿನ ಮಕ್ಕಳು ಮುಗ್ಧರು ಮತ್ತು ನೀವು ಬಯಸಿದ ರೀತಿಯಲ್ಲಿ ಅವರನ್ನು ಸುಲಭವಾಗಿ ರೂಪಿಸಬಹುದು. ಅವರನ್ನು ಬೈಯುವ ಬದಲು, ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳ ನಡುವಿನ ವ್ಯತ್ಯಾಸವನ್ನು ಸಭ್ಯ ರೀತಿಯಲ್ಲಿ ವಿವರಿಸುವುದು ಉತ್ತಮ.

ನೆಗೆಟಿವ್ ಭಾವನೆಗಳನ್ನು ಬೆಳೆಸಿಕೊಳ್ಳಬಹುದು
ಒಮ್ಮೆ ನೀವು ನಿಮ್ಮ ಮಕ್ಕಳನ್ನು ಸಂಬಂಧಿಕರ ಮುಂದೆ ಗದರಿಸಿದರೆ ಅಥವಾ ಹೊಡೆದರೆ ಅದು ನಿಮ್ಮ ಮಕ್ಕಳಲ್ಲಿ ಭಯ ಮತ್ತು ನೆಗೆಟಿವಿಟಿಯನ್ನು ಹುಟ್ಟುಹಾಕುವ ಅವಕಾಶ ಹೆಚ್ಚಾಗುತ್ತದೆ. ಮುಂದೆ ಅವರು ಭಯದ ವಾತಾವರಣದಲ್ಲೇ ಬೆಳೆಯಬಹುದು. ಕುಟುಂಬ, ಸಂಬಂಧಿಕರ ಎದುರು ಕೀಳರಿಮೆ ಮೂಡಬಹುದು. ತಮ್ಮನ್ನು ತಾವೇ ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು, ಉತ್ತಮರ ಬಗ್ಗೆ ಅಸೂಯೆ ಮಾಡಿಕೊಳ್ಳುವ ಭಾವನೆ ಹುಟ್ಟಿಕೊಳ್ಳಬಹುದು.

ಆಕ್ರಮಣಕಾರಿ ಸ್ವಭಾವ ಬೆಳೆಸಿಕೊಳ್ಳಬಹುದು
ನಿಮ್ಮ ಮಕ್ಕಳನ್ನು ಸಾರ್ವಜನಿಕವಾಗಿ ಅಥವಾ ಸಂಬಂಧಿಕರ ಮುಂದೆ ನಿಂದಿಸುವುದು ಮತ್ತು ಅವಮಾನಿಸುವುದು ನಿಮ್ಮ ಮಕ್ಕಳಲ್ಲಿ ಆಕ್ರಮಣಕಾರಿ ಸ್ವಭಾವ ಮೂಡುವಂತೆ ಮಾಡಬಹುದು. ಭವಿಷ್ಯದಲ್ಲಿ ಅವರೂ ಸಹ ಬೇರೆಯವರ ಮೇಲೆ ಕೈ ಮಾಡಲ, ನಿಂದಿಸಲು ಹಿಂದೇಟು ಹಾಕದಿರಬಹುದು. ಅಲ್ಲದೆ ಸಂಬಂಧಿಕರ ಜೊತೆ ಬೆರೆಯುವಾಗ ಅವರು ಬಹು ಬೇಗ ಕೋಪಗೊಳ್ಳುವ ಸಂಭವ ಎದುರಾಗಬಹುದು.

ಜೀವಕ್ಕೆ ಅಪಾಯ ತಂದುಕೊಳ್ಳಬಹುದು
ನಿಮ್ಮ ಮಕ್ಕಳನ್ನು ಪ್ರತಿ ಬಾರಿ ಅನ್ಯರ ಮುಂದೆ ಗದರುವುದು, ನಿಂದಿಸುವ ಕಾರ್ಯ ಮಾಡುತ್ತಿದ್ದರೆ ಇದು ಮಕ್ಕಳ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರಲಿದೆ. ಆದರೆ ಪೋಷಕರ ಉದ್ದೇಶ ಬೇರೆಯವರನ್ನಾದರೂ ನೋಡಿ ಕಲಿತುಕೊಳ್ಳಲಿ ಎಂದಾಗಿರುತ್ತದೆ. ಆದರೆ ಮಕ್ಕಳ ಮನಸ್ಸಿನ ಮೇಲೆ ಇದು ಬೇರೆಯದ್ದೇ ಪರಿಣಾಮ ಉಂಟುಮಾಡುತ್ತದೆ. ಮಕ್ಕಳ ಮೇಲೆ ಈ ರೀತಿ ನಿರಂತರ ದಾಳಿ ನಡೆದಾಗ ಅವರು ಅಪಾಯಕಾರಿ ನಿರ್ಧಾರ ಕೈಗೊಳ್ಳಬಹುದು. ಮನೆ ಬಿಟ್ಟು ಹೋಗುವುದು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹಂತಕ್ಕೂ ತಲುಪಬಹುದು.

ಮೋಹನ್ ವೈ ಕೆ

English summary

Why Parents Should Not Scold Child In Front Of Relatives In Kannada

Here are the reason why parents should not scold child in front of relatives read on..
Story first published: Sunday, December 3, 2023, 19:45 [IST]
X
Desktop Bottom Promotion