ಪುರುಷ ಹೀಗಿದ್ದರೆ ಮಹಿಳೆ ಅವನಿಗೆ ಕಿಂಚಿತ್ತು ಗೌರವ ನೀಡಲ್ಲ

ಒಂದು ಸಂಬಂಧ ಎನ್ನುವುದು ನಿಂತಿರುವುದೇ ನಂಬಿಕೆ ಹಾಗೂ ಗೌರವಗಳ ಮೇಲೆ. ಯಾರನ್ನ ನಾವು ಹೆಚ್ಚಾಗಿ ಗೌರವಿಸುತ್ತೇವೆಯೋ ಅಂಥವರು ನಮ್ಮ ಜೊತೆಗೆ ಉತ್ತಮ ಸಂಬಂಧ ಹೊಂದಿರುತ್ತಾರೆ. ಗೌರವ ಎನ್ನುವುದನ್ನು ದೊಡ್ಡವರಿಗೆ ಕೊಡಬೇಕು ಎನ್ನುವ ನಿಯಮವೇನಿಲ್ಲ. ಚಿಕ್ಕವರಾದರು ಸರಿ ನಾವು ಅವರನ್ನು ಬಹಳ ಗೌರವದಿಂದ ನಡೆಸಿಕೊಂಡಾಗ ಮಾತ್ರ ಅವರ ದೃಷ್ಟಿಯಲ್ಲಿಯೂ ನಾವು ಉನ್ನತ ಸ್ಥಾನದಲ್ಲಿ ಇರುತ್ತೇವೆ ಜೊತೆಗೆ ಯಾವುದೇ ರಿಲೇಶನ್ಶಿಪ್ ಕೂಡ ಶಾಶ್ವತವಾಗಿ ಉಳಿದುಕೊಳ್ಳಲು ಸಾಧ್ಯವಿದೆ.

Relationship Tips

ಗಂಡ ಹೆಂಡತಿ ಸಂಬಂಧದಲ್ಲಿ ಅಂತೂ ಗೌರವ ಎನ್ನುವುದು ಬಹಳ ಮುಖ್ಯ. ನೀನು ಹೆಚ್ಚು ನಾನು ಕಡಿಮೆ ಎನ್ನುವಂತಹ ಯಾವ ಭಾವನೆಯು ಇಲ್ಲದೆ ಗೌರವ ಪೂರ್ವಕವಾಗಿ ಒಬ್ಬರನ್ನೊಬ್ಬರು ನೋಡಿಕೊಂಡಾಗ ಮಾತ್ರ ಆ ಸಂಬಂಧ ಉತ್ತಮವಾಗಿ ಉಳಿಯುತ್ತದೆ. ನೀವು ನಿಮ್ಮವರನ್ನ ಪ್ರೀತಿಸುತ್ತಿರೋ ಇಲ್ಲವೋ ಗೊತ್ತಿಲ್ಲ ಆದರೆ ಅವರಿಗೆ ಗೌರವ ತೋರುವ ರೀತಿಯಲ್ಲಿ ಮಾತ್ರ ನಡೆದುಕೊಳ್ಳಬಾರದು. ಅದರಲ್ಲೂ ಪುರುಷರು ಗೌರವ ಉಳಿಸಿಕೊಳ್ಳುವುದು ಬಹಳ ಮುಖ್ಯ ಯಾಕೆಂದರೆ ಪುರುಷರು ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದಲೂ ಕೂಡ ಮಹಿಳೆ ಅವರನ್ನು ಅಗೌರವದಿಂದ ಕಾಣಬಹುದು ಅಥವಾ ಅವರ ಮೇಲಿನ ಗೌರವವನ್ನು ಕಳೆದುಕೊಳ್ಳಬಹುದು. ಹೀಗೆ ಒಬ್ಬ ಹೆಣ್ಣು ಒಬ್ಬ ಪುರುಷನ ಮೇಲೆ ಆಗಾಗ ಗೌರವ ಕಳೆದುಕೊಳ್ಳುವುದಕ್ಕೆ ಕೆಲವು ಕಾರಣಗಳು ಇಂತಿವೆ.

ನಿಯಂತ್ರಿಸುವ ಸ್ವಭಾವ!
ಪ್ರೀತಿಸಿ ಮದುವೆಯಾದ ಹುಡುಗ ಹುಡುಗಿ ಪ್ರೀತಿಸುವುದಕ್ಕೂ ಮೊದಲು ಒಬ್ಬರನ್ನೊಬ್ಬರು ಬಹಳ ಪ್ರೀತಿಯಿಂದ ಗೌರವದಿಂದ ಕಾಣುತ್ತಾರೆ ಆದರೆ ಅದೆಷ್ಟೋ ಸಂದರ್ಭದಲ್ಲಿ ಮದುವೆ ಆದ ನಂತರ ಆತ ತೋರುತ್ತಿದ್ದ ಕಾಳಜಿ ಪ್ರೀತಿ ಎಲ್ಲವೂ ನನ್ನನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನವಾಗಿತ್ತು ಎನ್ನುವ ವಿಚಾರ ಆಕೆಗೆ ತಿಳಿದರೆ ನಂತರ ನಿಮ್ಮನ್ನ ಎಂದೆಂದಿಗೂ ಆಕೆ ಗೌರವಿಸಲು ಸಾಧ್ಯವೇ ಇಲ್ಲ.

ಸುಳ್ಳು ಹೇಳುವುದು!
ಗಂಡಿರಲಿ ಹೆಣ್ಣಿರಲಿ ಸಂಬಂಧ ಚೆನ್ನಾಗಿರಬೇಕು ಅಂದ್ರೆ ಅಲ್ಲಿ ಸುಳ್ಳು ಎನ್ನುವುದಕ್ಕೆ ಜಾಗವೇ ಇರಬಾರದು ಆದರೆ ಅದೆಷ್ಟೋ ಜನ ಗಂಡಸರು ಹೆಂಡತಿಯ ಬಳಿ ಸುಳ್ಳು ಹೇಳುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಶ್ರೀರಾಮಚಂದ್ರ ಎಂದುಕೊಂಡಿರುವ ಪತ್ನಿಗೆ ಆತನ ಸುಳ್ಳು ಹೇಳುವ ಅಭ್ಯಾಸ ಇಷ್ಟವಾಗದೇ ಇದ್ದಾಗ ಆತನನ್ನು ಗೌರವಿಸುವುದನ್ನು ಬಿಡುತ್ತಾಳೆ. ಮೊದಲಿನ ಯಾವ ಪ್ರೀತಿ ಕಾಳಜಿ ಕೂಡ ಆತನ ಮೇಲೆ ಇರಲು ಸಾಧ್ಯವೇ ಇಲ್ಲ.

ಅನುಮಾನ ಪಡುವುದು!
ಪ್ರೀತಿಸುವಾಗ ಆತ ತನ್ನ ಮೇಲೆ ಕಾಳಜಿ ತೋರಿಸುತ್ತಿದ್ದಾನೆ ಎಂದು ಅನಿಸಿದರೆ ಮದುವೆಯಾದ ನಂತರ ಅದೇ ಕಾಳಜಿ ಅನುಮಾನವಾಗಿ ಪರಿವರ್ತನೆ ಆಗುವುದನ್ನು ಆಕೆಯು ಗಮನಿಸುತ್ತಾಳೆ ಒಂದು ವೇಳೆ ನೀವು ನಿಮ್ಮ ಹುಡುಗಿ ಅಥವಾ ನಿಮ್ಮ ಪತ್ನಿಯ ಮೇಲೆ ಅನುಮಾನ ಪಡಲು ಆರಂಭಿಸಿದ್ದು ಆಕೆಯ ಗಮನಕ್ಕೆ ಬಂದರೆ ನಿಮ್ಮ ಮೇಲೆ ಇರುವ ಸಂಪೂರ್ಣ ಗೌರವವನ್ನು ಕಳೆದುಕೊಳ್ಳುತ್ತೀರಿ ಹಾಗಾಗಿ ಅನಗತ್ಯವಾಗಿ ಯಾರನ್ನು ಅನುಮಾನಿಸುವುದು ಕೂಡ ದೊಡ್ಡ ಅಪರಾಧವೆ.

ಆಕೆಯ ಭಾವನೆಯನ್ನು ಗೌರವಿಸದೆ ಇರುವುದು!
ಮನೆಯಲ್ಲಿ ದುಡಿಯುವ ಗಂಡಸು ನಾನು ಎನ್ನುವ ಅಹಂಕಾರದಿಂದ ಹೆಂಡತಿ ಹೇಳಿದ ಮಾತನ್ನು ನಿರ್ಲಕ್ಷಿಸುವ ಗಂಡಸರು ಇದ್ದಾರೆ. ಹೆಣ್ಣು ಯಾವಾಗ ನೀವು ಆಕೆಯ ಭಾವನೆಗೆ ಬೆಲೆ ಕೊಡುತ್ತಿರೋ ಅವಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿರೋ ಆಗ ಆಕೆ ಸಂಪೂರ್ಣವಾಗಿ ನಿಮ್ಮೊಂದಿಗೆ ಬೆರೆಯುತ್ತಾಳೆ. ಒಂದು ವೇಳೆ ಆಕೆಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ನೀವು ಸೋತರೆ ಆಕೆಯ ಭಾವನೆಗಳಿಗೆ ನೀವು ಸರಿಯಾಗಿ ಸ್ಪಂದಿಸದೆ ಇದ್ದಲ್ಲಿ ಆಕೆ ನಿಮ್ಮ ಮೇಲಿನ ಸಂಪೂರ್ಣ ಗೌರವವನ್ನು ಕಳೆದುಕೊಳ್ಳುತ್ತಾಳೆ.

ಸಮಸ್ಯೆಗೆ ಪರಿಹಾರ ಸೂಚಿಸದೆ ಇರುವುದು!
ಒಬ್ಬ ಹೆಣ್ಣು ಮಗಳು ಸಮಾಜದಲ್ಲಿ ಒಂಟಿಯಾಗಿ ಎಲ್ಲವನ್ನ ಎದುರಿಸಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ ಎನ್ನುವ ಮಾತು ಬಹಳ ಹಳೆಯದ್ದೇ ಆಗಿದ್ದರೂ ಕೂಡ ಈಗಲೂ ಕೆಲವು ಮಹಿಳೆಯರಿಗೆ ಪುರುಷರ ನೆರಳು ಅಗತ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಪ್ರೀತಿಸಿದ ಹುಡುಗ ಅಥವಾ ಮದುವೆಯಾದ ಗಂಡ ತನಗೆ ಯಾವುದೇ ಸಮಸ್ಯೆ ಬಂದರೂ ಕೂಡ ಆತ ಜೊತೆಗಿದ್ದು ಅದಕ್ಕೆ ಪರಿಹಾರ ಸೂಚಿಸಬೇಕು ಎಂದು ಹುಡುಗಿ ಬಯಸುತ್ತಾಳೆ. ಆದರೆ ಯಾವಾಗ ಈ ಕೆಲಸ ಆತನಿಂದ ಸಾಧ್ಯವಿಲ್ಲ ಎನ್ನುವುದು ಅರಿವಾಗುತ್ತದೆಯೋ ಆಗ ಪುರುಷರ ಮೇಲಿರುವ ಗೌರವ ಸಂಪೂರ್ಣವಾಗಿ ಕಳೆದು ಹೋಗುತ್ತದೆ.

ಆಕೆಯ ಬೆಳವಣಿಗೆಯನ್ನು ಸಹಿಸದೇ ಇರುವುದು!
ಬಾಯಿ ಮಾತ್ನಲ್ಲಿ ನೀನು ಇನ್ನಷ್ಟು ಬೆಳೆಯಬೇಕು ಹೊರಗಡೆ ಹೋಗಿ ಕೆಲಸ ಮಾಡಬೇಕು ಎಂದೆಲ್ಲ ಹೇಳುವ ಕೆಲವು ಗಂಡಸರು ಒಳಗೊಳಗೆ ಹೆಂಡತಿಯ ಅಥವಾ ತನ್ನ ಹುಡುಗಿಯ ಬೆಳವಣಿಗೆಯನ್ನು ಸಹಿಸುವುದಿಲ್ಲ. ಆಕೆ ದಿನದಿಂದ ದಿನಕ್ಕೆ ಹೆಚ್ಚು ಸಂಪಾದನೆ ಮಾಡುತ್ತಾ ಸಮಾಜದಲ್ಲಿ ಗೌರವ ಸಂಪಾದಿಸುತ್ತಾ ಹೋದರೆ ಅದನ್ನು ಆತ ಸಹಿಸುವುದಿಲ್ಲ. ಇಂತಹ ಸಂಕುಚಿತ ಸ್ವಭಾವ ಆಕೆಯ ಗಮನಕ್ಕೆ ಬಂದಾಗ ಪುರುಷರ ಮೇಲಿನ ಗೌರವ ಅಗೌರವವಾಗಿ ಬದಲಾಗಬಹುದು.

ಆಕೆಯನ್ನು ಟೀಕಿಸುವುದು!
ಸಂಬಂಧದಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎಂಬುದಿಲ್ಲ ಕೆಲವು ವಿದ್ಯೆ ಪುರುಷರಿಗೆ ಗೊತ್ತಿದ್ದರೆ ಇನ್ನೂ ಕೆಲವು ಟ್ಯಾಲೆಂಟ್ ಹುಡುಗಿಯರಲ್ಲಿ ಇರುತ್ತೆ ಆದರೆ ಆಕೆಗೆ ಯಾವುದೋ ಒಂದು ವಿಚಾರ ಅರ್ಥವಾಗುವುದಿಲ್ಲ ಅಥವಾ ಆ ವಿಚಾರದಲ್ಲಿ ಆಕೆ ಹಿಂದೆ ಇದ್ದಾಳೆ ಎನ್ನುವ ಕಾರಣಕ್ಕೆ ಅವಳನ್ನು ಆಗಾಗ ಟೀಕೆ ಮಾಡಬಾರದು. ಫಾಸ್ಟ್ ಲೈಫ್ ಬಗ್ಗೆ ಮಾತನಾಡುತ್ತಾ ಆಕೆಯನ್ನು ಹಂಗಿಸಬಾರದು. ಈ ರೀತಿ ಮಾಡುತ್ತಾ ಹೋದರೆ ಪುರುಷರು ತಮ್ಮ ಮೇಲಿನ ಗೌರವವನ್ನು ಕಳೆದುಕೊಳ್ಳುತ್ತಾರೆ. ಈತನ ಬುದ್ಧಿಯೇ ಇಷ್ಟು ಎಂದು ಆಚೆ ನಿರ್ಧರಿಸಿದರೆ ಪುರುಷನ ಜೊತೆಗೆನ ಸಂಬಂಧವೂ ಕೂಡ ಹಾಳಾಗುತ್ತಿದೆ.

ವಾಸ್ತವವಾಗಿ ಯಾವುದೇ ಸಂಬಂಧ ಸರಿಯಾಗಿ ಉಳಿಯಬೇಕು ಸಂಬಂಧದಲ್ಲಿ ಖುಷಿ ಇರಬೇಕು ಎಂದರೆ ಗಂಡು ಹಾಗೂ ಹೆಣ್ಣು ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು ಗೌರವಿಸಿಕೊಂಡು ಜೀವನ ನಡೆಸುವುದು ಬಹಳ ಮುಖ್ಯ. ಗಂಡು ಅಥವಾ ಹೆಣ್ಣು ಯಾರ ಮನಸ್ಸಿನಲ್ಲಿ ಆದರೂ ಆಗೌರವದ ಭಾವನೆ ಉಂಟಾದರೆ ಆ ಸಂಬಂಧದಲ್ಲಿ ಬಿರುಕು ಮೂಡುತ್ತದೆ ಹಾಗಾಗಿ ಪರಸ್ಪರ ಗೌರವಿಸುವುದನ್ನು ಕಲಿತುಕೊಳ್ಳಿ.

English summary

What Will Make A Woman Instantly Lose Respect For A Man?

Relationship Tips: What will make woman instantly lose respect for a man, read on..
Story first published: Tuesday, November 28, 2023, 21:32 [IST]
X
Desktop Bottom Promotion