ಹೊಸದಾಗಿ ಅಂಕುರಿಸಿದ ಪ್ರೀತಿಯನ್ನು ಗಟ್ಟಿಯಾಗಿಸುವ 5 ನಿಯಮಗಳು

By Super

ಹೊಸತಾಗಿ ಮೂಡಿದ ಪ್ರೇಮ ಅಮಲನ್ನೇರಿಸುತ್ತದೆ ಎಂಬುದು ಬಹುಮಟ್ಟಿಗೆ ನಿಜ. ತನ್ನ ಪ್ರಿಯತಮೆಗಾಗಿ ಏನನ್ನೂ ಮಾಡಬಲ್ಲೆ ಎಂಬ ಹುಮ್ಮಸ್ಸಿನಲ್ಲಿ ಪ್ರಿಯಕರನೂ, ತನ್ನ ನಲ್ಲನಿಗಾಗಿ ಜಗತ್ತನ್ನೇ ತ್ಯಜಿಸಲು ಸಿದ್ಧಳಿರುವ ನಲ್ಲೆಯೂ ಬೇರೆಯೇ ಜಗತ್ತಿನಲ್ಲಿರುತ್ತಾರೆ. ಆದರೆ ಒಮ್ಮೆ ಪ್ರೀತಿಯ ಅಮಲು ಕೊಂಚ ಇಳಿದು ಸುತ್ತ ನೋಡಿದಾಗ ಜಗತ್ತು ಬೇರೆಯಾಗಿರುವುದು ಕಾಣಿಸುತ್ತದೆ. ಒಂದರ್ಥದಲ್ಲಿ ಪ್ರೀತಿ ಚ್ಯೂಯಿಂಗ್ ಗಮ್ ಅಥವಾ ಈಗ ತಾನೇ ತೆರೆದ ಸೋಡಾ ಬಾಟಲಿಯಿದ್ದ ಹಾಗೆ.

ಮೊದಮೊದಲು ಸಿಹಿಯಾಗಿ, ನೊರೆಯುಕ್ಕುತ್ತಿದ್ದುದು ಕ್ರಮೇಣ ಸಪ್ಪೆಯಾಗಿ, ನೊರೆಯಿಲ್ಲದ ನೀರಿನಂತೆ ಭಾಸವಾಗುತ್ತದೆ. ಇದಕ್ಕೆ ಕಾರಣ ಪ್ರೀತಿಯಲ್ಲಿರುವ ಮನಸ್ಸು ಬೇರೆಯೇ ರೀತಿ ವರ್ತಿಸುವುದರಿಂದ ಸೂಕ್ತ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಸೋಲುತ್ತದೆ. ಈ ಪರಿಸ್ಥಿತಿಗೆ ಬಾರದಿರಲು ಅಥವಾ ಪ್ರಥಮ ಪ್ರೀತಿಯ ಅಮಲು ಬಹಳ ಕಾಲ ಉಳಿಯುವಂತೆ ಮಾಡಲು ಈ ಐದು ನಿಯಮಗಳು ಸಹಕರಿಸುತ್ತವೆ.

ತುಂಬಾ ಆಪ್ತತೆ ಅಗತ್ಯವಿಲ್ಲ

ಒಂದು ವೇಳೆ ನಿಮ್ಮ ಪ್ರಿಯತಮೆ ನಿಮ್ಮ ಪ್ರೀತಿಯನ್ನು ಸ್ವೀಕರಿಸಿ ನಿಮ್ಮ ಬಗ್ಗೆ ತನ್ನ ಒಲುಮೆ ಪ್ರಕಟಿಸಿದ ಬಳಿಕ ಅಗತ್ಯವಿದ್ದಷ್ಟು ಮಾತ್ರ ಸಾಮಿಪ್ಯ ನೀಡಿರಿ. ಕೆಲವರು ಈ ಒಲುಮೆಯನ್ನು ತನ್ನ ಸಂತೋಷದ ಪರಾಕಾಷ್ಠೆಯಲ್ಲಿ ನಿಲುಕಿಸಿ ಪ್ರತಿಕ್ಷಣವೂ ಆಕೆಯ ಅಕ್ಕಪಕ್ಕ ಇರಲು, ಆಕೆ ಬೆರಳಿನಲ್ಲಿ ತೋರಿಸಿದ ಕೆಲಸವನ್ನು ಜೀವಬಿಟ್ಟು ಮಾಡುವ ತವಕದಲ್ಲಿರುತ್ತಾರೆ. ನಿಜವಾಗಿ ಇದು ಪ್ರೀತಿಯ ಉನ್ಮಾದ. ಒಂದು ವೇಳೆ ಈ ಉನ್ಮಾದ ಪ್ರಕಟವಾದರೆ ಆಕೆಗೆ ನಿಮ್ಮ ತೀರಾ ಸಾಮೀಪ್ಯ ಮುಜುಗರ ಉಂಟುಮಾಡುವುದಷ್ಟೇ ಅಲ್ಲ, ನಿಮ್ಮ ಬಗ್ಗೆ ತಪ್ಪು ಕಲ್ಪನೆಯನ್ನೂ ಉಂಟುಮಾಡಬಹುದು. ಬದಲಿಗೆ ಆಕೆಗೆ ಅಗತ್ಯವಿದ್ದಾಗ ಆಕೆಗೆ ನಿಮ್ಮ ಸಂಪೂರ್ಣ ಸಹಕಾರ ನೀಡಿ ಆಕೆಯ ವ್ಯಕ್ತಿತ್ವವನ್ನು ಗೌರವಿಸಿದರೆ ಆಕೆ ನಿಮ್ಮಲ್ಲಿ ವಿಶ್ವಾಸ ಮತ್ತು ಸಾಮರ್ಥ್ಯವನ್ನು ಗುರುತಿಸುತ್ತಾಳೆ. ಪ್ರತಿ ಮಹಿಳೆಯೂ ತನ್ನ ಪತಿ ಸಮಾಜದಲ್ಲಿ ಗೌರವಾನ್ವಿತನಾಗಿ ಉತ್ತಮ ವ್ಯಕ್ತಿಯಾಗಿ ಗುರುತಿಸಲ್ಪಡಲು ಇಚ್ಛಿಸುತ್ತಾಳೆಯೇ ವಿನಃ ಕೇವಲ ತನ್ನ ಸೆರಗು ಹಿಡಿದು ತಿರುಗುವ ಪತ್ನೀವ್ರತನನ್ನಲ್ಲ! ಸಂಸಾರ ಸುಖಮಯವಾಗಲು 6 ಸರಳ ನಿಯಮಗಳು

ಭಾವನೆಗಳನ್ನು ಮನಸ್ಸಿನಲ್ಲಿ ಅದುಮಿಡಬೇಡಿ, ಹೇಳಿಬಿಡಿ

ನಿಮ್ಮ ಮನಸ್ಸಿನ ಭಾವನೆಗಳು ಪದಗಳ ಮೂಲಕ ನಿಮ್ಮ ಪ್ರಿಯತಮೆಯನ್ನು ತಟ್ಟಿದರೆ ಮಾತ್ರ ಆಕೆಯ ಹೃದಯವನ್ನು ಪೂರ್ಣವಾಗಿ ಗೆಲ್ಲಬಹುದು. ಆದರೆ ಈ ಪದಗಳು ಹೃದಯದಿಂದ ಬಂದಿದ್ದು ಆ ಪದಗಳ ತಾತ್ಪರ್ಯವನ್ನು ಮನಃಪೂರ್ವಕ ಪಾಲಿಸುವಂತಿರಬೇಕು. ಒಂದು ವೇಳೆ ದುಗುಡದಿಂದ ನಿಮ್ಮ ಮನಸ್ಸಿನ ಭಾವನೆಗಳನ್ನು ಸ್ಪಷ್ಟವಾಗಿ ತಿಳಿಸದೇ ಇದ್ದರೆ ಆಕೆಗೆ ಅದು ಅರ್ಥವಾಗುವುದಾದರೂ ಹೇಗೆ? ಹೆಚ್ಚಿನ ಸಂದರ್ಭಗಳಲ್ಲಿ ಈ ಸಮಯದಲ್ಲಿ ಮಾತುಗಳು ಹೊರಡುವುದಿಲ್ಲ, ಇದು ಪೂರ್ಣವಾಗಿ ಸ್ವಾಭಾವಿಕ. ಆದರೆ ಬೇರೆ ವಿಧಾನದಲ್ಲಿ ಇದನ್ನು ಸ್ಪಷ್ಟಪಡಿಸುವುದು ಅಗತ್ಯ. ಪತ್ರ, ಈಮೇಲ್, ಅನುರಾಗ, ಫೋನ್ ಮೂಲಕ ಅಥವಾ ಬೇರೆ ಯಾವುದೇ ವಿಧಾನದಿಂದ ನಿಮ್ಮ ಭಾವನೆಗಳನ್ನು ಪ್ರಕಟಿಸಿ. ಆದರೆ ಬೇರೆಯವರ ಮುಖಾಂತರ ಮಾತ್ರ ಸಂದೇಶ ಕಳುಹಿಸಬೇಡಿ. ಈ ವಿಧಾನ ನಿಮ್ಮನ್ನು ಹೇಡಿಯೆಂದು ಆಕೆ ಅರ್ಥೈಸಿಕೊಳ್ಳುವ ಅಪಾಯವಿದೆ.

ನಿಮ್ಮ ಎಲ್ಲಾ ವಿಷಯಗಳನ್ನು ಒಮ್ಮೆಲೇ ಹೇಳಿಬಿಡಬೇಡಿ, ತಾಳ್ಮೆ ಇರಲಿ

ಹೆಚ್ಚಿನ ಯುವಕರು ತಮ್ಮ ಪ್ರಿಯತಮೆ ಪ್ರೀತಿಯನ್ನು ಒಪ್ಪಿದ ಕ್ಷಣದಿಂದಲೇ ತಮ್ಮ ಭಾವನೆಗಳ ಜೊತೆಗೆ ತಮ್ಮ ಇತಿಹಾಸವನ್ನೂ ಹೇಳುವ ತವಕ ತೋರುತ್ತಾರೆ. ಆಕೆಗೆ ನಿಮ್ಮ ಬಗ್ಗೆ ವಿಷಯ ಪಡೆಯುವುದು ಇಷ್ಟವಾದರೂ ಎಲ್ಲಾ ವಿಷಯಗಳನ್ನು ಒಮ್ಮೆಲೇ ಆಕೆ ಸ್ವೀಕರಿಸಲು ಸಿದ್ಧಳಿರುವುದಿಲ್ಲ. ಒಂದು ವೇಳೆ ನೀವು ಬಲವಂತವಾಗಿ ನಿಮ್ಮ ಬಗ್ಗೆಯೇ ಹೇಳುತ್ತಾ ಹೋದರೆ ಆಕೆಗದು ನೀವು ಆಕೆಯ ಸಾಂಗತ್ಯವನ್ನು ಆದಷ್ಟು ಬೇಗ ಪಡೆಯುವ ಹವಣಿಕೆಯಾಗಿ ತೋರುತ್ತದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಕೇವಲ ನಿಮ್ಮ ಬಗ್ಗೆ ಚುಟುಕಾಗಿ ತಿಳಿಸಿ ಅಗತ್ಯವಿರುವಷ್ಟು ಮಾತ್ರ ಮಾಹಿತಿಗಳನ್ನು ನೀಡಿ. ಕಾಲ ಕಳೆದಂತೆ ಈ ವಿವರಗಳನ್ನೆಲ್ಲಾ ಸಂದರ್ಭಕ್ಕೆ ತಕ್ಕಂತೆ ತಿಳಿಸಿದರೆ ಒಳ್ಳೆಯದು. ಅಂತೆಯೇ ಆಕೆಗೂ ತನ್ನ ಬಗ್ಗೆ ನಿಮಗೆ ತಿಳಿಸುವ ಹಂಬಲವಿರುತ್ತದೆ. ಇಬ್ಬರೂ ತಾಳ್ಮೆಯಿಂದ ಪರಸ್ಪರ ಆಲಿಸಿರಿ ಹಾಗೂ ಒಳ್ಳೆಯ ಭಾವನೆಗಳನ್ನು ಹೆಚ್ಚಿಸುತ್ತಾ ಹೋಗಿ. ಇದು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತಾ ಬರುತ್ತದೆ. ಇನ್ನೊಂದು ಮಾತು, ಒಂದು ವೇಳೆ ನಿಮ್ಮ ಬಗ್ಗೆ ನೀವು ಏನು ಹೇಳದೇ ಹೋದರೂ ಹುಡುಗಿಯರು ಹೇಗೋ ನಿಮ್ಮ ಬಗ್ಗೆ ಹಲವು ಸಂಗತಿಗಳನ್ನು ಪಡೆದುಬಿಡುತ್ತಾರೆ, ಅದು ಹೇಗೆಂದು ಕೆದಕುವ ಬದಲು ವಿಸ್ಮಿತರಾಗಿ ಮಂದಸ್ಮಿತರಾಗಿ.

ಯಾವುದೇ ಕೆಲಸವನ್ನು ಬಲವಂತವಾಗಿ ಮಾಡಿಸಬೇಡಿ

ನಿಮ್ಮ ಪ್ರಿಯತಮೆಯಿಂದಾಗಬೇಕಾದ ಕೆಲಸವನ್ನು ಎಂದಿಗೂ ಬಲವಂತವಾಗಿ ಹೇರಬೇಡಿ. ಒಂದು ವೇಳೆ ಈ ಕೆಲಸ ಹೀಗೇ ಆಗಬೇಕು, ಇಷ್ಟೇ ಹೊತ್ತಿನಲ್ಲಾಗಬೇಕು ಎಂಬ ಕಟ್ಟಳೆಗಳೊಂದಿಗೆ ನೀವು ನೀಡಿದ ಸೂಚನೆಗಳು ನಿಮ್ಮ ವಿರುದ್ಧವಾಗಿ ಕೆಲಸ ಮಾಡತೊಡಗುತ್ತವೆ. ಆಕೆ ಈ ಮಾತುಗಳನ್ನು ನೀವು ಆಕೆಯ ಮೇಲೆ ಯಜಮಾನಿಕೆ ಸ್ಥಾಪಿಸಲು ಉಪಯೋಗಿಸುತ್ತಿರುವ ಬಾಣಗಳೆಂದು ಅರ್ಥೈಸಿಕೊಳ್ಳುತ್ತಾಳೆ. ಬದಲಿಗೆ ಆಗಬೇಕಾದ ಕೆಲಸದ ವಿವರಗಳನ್ನು ನೀಡಿ ಆಕೆಗೆ ಸೂಕ್ತವೆನಿಸಿದ ದಾರಿ ಮತ್ತು ರೀತಿಯಲ್ಲಿ ಪೂರ್ಣಗೊಳಿಸಲು ಆಕೆಗೆ ಸ್ವಾತಂತ್ರ್ಯ ನೀಡಿ ಇದಕ್ಕೆ ಅಗತ್ಯವಾದ ಎಲ್ಲಾ ಸಹಕಾರಗಳನ್ನು ನೀಡುವ ಭರವಸೆ ನೀಡಿ. ಇದು ನಿಮ್ಮ ಪ್ರಿಯತಮೆಗೆ ತುಂಬಾ ಹಿಡಿಸುವ ವಿಚಾರ ಹಾಗೂ ನಿಮ್ಮ ಬಗ್ಗೆ ಗೌರವ ಭಾವನೆ ಬೆಳೆಯಲು ಪೂರಕವಾಗಿದೆ. ಆಕೆ ಈ ಕೆಲಸವನ್ನು ತುಂಬಾ ಪ್ರೀತಿಯಿಂದ, ನಿಷ್ಠೆಯಿಂದ ಹಾಗೂ ನಿಮ್ಮ ಪ್ರೀತಿ ಪಡೆಯುವ ಒಂದು ಅವಕಾಶವೆಂಬಂತೆ ಅಚ್ಚುಕಟ್ಟಾಗಿ ಪೂರೈಸಿಕೊಡುತ್ತಾಳೆ. ಯುವತಿಯರು ಪರ್ಯಾಯ ಪ್ರಿಯಕರನನ್ನು ಬಯಸುತ್ತಾರೆಯೇ?

ಆಕೆಗೆ ಯಾವಾಗಲೂ ಅತ್ಯಂತ ಸುಲಭವಾಗಿ ಸಿಗುವಂತಿರಬೇಡಿ

ಪ್ರೀತಿ ಮೂಡಿದ ಬಳಿಕ ಪ್ರತಿಕ್ಷಣ ಆಕೆಯ ಅಕ್ಕಪಕ್ಕ ಅಡ್ಡಾಡುತ್ತಿರಬೇಡಿ. ಬದಲಿಗೆ ನಿಮ್ಮ ಕೆಲಸದಲ್ಲಿ ಮಗ್ನರಾಗಿ ನಿಮ್ಮ ಚಟುವಟಿಕೆಗಳ ಮೇಲೆ ಹೆಚ್ಚು ಗಮನ ಹರಿಸಿ. ಇದರಿಂದ ಆಕೆಯ ಮನಸ್ಸಿನಲ್ಲಿಯೂ ನೀವೆಲ್ಲಿದ್ದೀರಿ, ಏನು ಮಾಡುತ್ತಿದ್ದೀರೆಂಬ ಕುತೂಹಲ ಹುಟ್ಟುತ್ತದೆ, ಈ ಕುತೂಹಲ ನಿಮ್ಮ ಬಗ್ಗೆ ಒಂದು ನಿಗೂಢತೆಯನ್ನು ಸೃಷ್ಟಿಸಿ ನಿಮ್ಮ ಬಗ್ಗೆ ಹೆಚ್ಚು ಯೋಚಿಸುವಂತೆ ಮಾಡುತ್ತದೆ. ವಯೋಸಹಜ ಈ ಯೋಚನೆ ದಿನಗಳನ್ನು ಇನ್ನಷ್ಟು ಸುಂದರವಾಗಿ, ಕನಸಿನ ಲೋಕದಲ್ಲಿ ಓಲಾಡುವಂತೆ ಮಾಡುತ್ತದೆ. ಅಂತೆಯೇ ತುಂಬಾ ದೂರವೂ ಇರಬೇಡಿ. ಆಗಾಗ, ಅಗತ್ಯವಿದ್ದಷ್ಟು ಸಾಮೀಪ್ಯವನ್ನೂ ತೋರಿ. ನೆನಪಿರಲಿ, ಭರವಸೆ+ಅನುಮಾನ=ಅನುರಕ್ತತೆ.

X
Desktop Bottom Promotion