ಸರಸ ವಿರಸ: ಸಮಾಗಮವೇ ಜೀವನ

ಯಥಾ ಕಾಷ್ಠಂ ಚ ಕಾಷ್ಠಂ ಚ ಸಮಯಾತಾಂ ಮಹೋದದೌ

ಸಮೆತ್ಯ ಚ ವ್ಯಪೇಯಾತಾಂ ತದವದ್ಭುತ ಸಮಾಗಮಃ||

ಒಟ್ಟಿಗೆ ಬಾಳುವುದು ಎಂದರೆ ಸಾಗರದಲ್ಲಿ ಬಿದ್ದ ಮರದ ತುಂಡುಗಳ ಹಾಗೆ. ಅವು ಕೂಡಿಕೊಂಡೆ ಮುಂದೆ ಸಾಗುತ್ತವೆ.

ಅಂತೆಯೆ ಭಾರ್ಯ-ಭತೃ ಸಂಬಂಧವೂ ಕೂಡಾ. ಎಷ್ಟೇ ವಿರಸಗಳಿದ್ದರೂ ನಿವಾರಣೆಯಾಗಿ ಕೊನೆಗೆ ಉತ್ತಮ ಬಾಂಧವ್ಯ ಉಳಿಯುತ್ತದೆ. ಹಾಗೆಂದ ಮಾತ್ರಕ್ಕೆ ಎಲ್ಲಾ ಗಂಡ ಹೆಂಡತಿಯರ ನಡುವಿನ ಸಂಬಂಧಗಳೂ ಚೆನ್ನಾಗಿಯೇ ಇರುತ್ತವೆ ಎಂದು ಹೇಳಲಾಗುವುದಿಲ್ಲ. ಸಂಬಂಧಗಳು ಸರಿಯಾಗಿರುವುದು ಅಥವಾ ಅರ್ಥವನ್ನೇ ಕಳೆದುಕೊಳ್ಳುವುದು ಇವೆರಡೂ ಸಂಸಾರ ನಿಭಾಯಿಸುತ್ತಿರುವವವರ ಕೈಯಲ್ಲಿಯೇ ಇದೆ. ಗಂಡ ಅಥವಾ ಹೆಂಡತಿ ಯಾವುದೇ ಕಾರಣಕ್ಕೆ ಸ್ವಲ್ಪ ಯೇಮಾರಿದರೂ ಸುಖ ಸಂಸಾರ ಎನ್ನುವುದು ಅವರ ನಡುವೆ ನಿಷಿದ್ಧ ಪದಗಳಾಗಿಬಿಡುತ್ತವೆ.

How to build a strong relationship?

ನಮ್ಮ ದೇಶದಲ್ಲಿ ಬೇರೆಲ್ಲ ದೇಶಗಳಿಗೆ ಹೋಲಿಸಿದರೆ ವಿಚ್ಚೇಧನದ ಪ್ರಕರಣಗಳು ತುಸು ಕಡಿಮಯೇ ಎನ್ನಬಹುದು. ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ ವರ್ಷಕ್ಕೆ, 1960 ರಲ್ಲಿ 2 ರಿಂದ 3 ವಿಚ್ಚೇಧನದ ಪ್ರಕರಣಗಳು ದಾಖಲಾಗಿದ್ದವು.ಇದು 1980ರ ಹೊತ್ತಿಗೆ 100 ರಿಂದ 200, 1990 ರಲ್ಲಿ 1000ಕ್ಕೂ ಅಧಿಕ ಹಾಗೂ ಇತ್ತೀಚಿನ ಸಮೀಕ್ಷೆಯ ಪ್ರಕಾರ 45000ಕ್ಕೂ ಹೆಚ್ಚು ವಿಚ್ಚೇಧನ ಪ್ರಕರಣಗಳು ಅಧಿಕೃತವಾಗಿ ದಾಖಲಾಗುತ್ತಿವೆ!

ಇಂತಹ ಬದಲಾವಣೆಗಳು ಪತಿ ಪತ್ನಿ ಸಂಬಂಧಗಳಲ್ಲಿ ಅಧಿಕವಾಗುತ್ತಿರುವುದಕ್ಕೆ ಅವರಿಲ್ಲಿ ಹೊಂದಾಣಿಕೆಯಿಲ್ಲದಿರುವುದೇ ಪ್ರಮುಖ ಕಾರಣ. ನಿಮ್ಮ ಮನೆಗಳಲ್ಲಿ ಸಾಮಾನ್ಯವಾಗಿ ನಡೆಯುವ ಘಟನೆಗಳನ್ನೇ ತೆಗೆದುಕೊಳ್ಳಿ. ಮನೆಯಲ್ಲಿನ ಯಾವುದೂ ಒಂದು ಕೆಲಸವನ್ನು ಮಾಡುವುದು ಹಾಗೆಯೇ ಉಳಿದಿದೆ ಎಂದುಕೊಳ್ಳಿ. ಆ ಕಾರ್ಯ ಆಗಬೇಕು ಎಂಬ ವಿಷಯ ನಿಮ್ಮಿಬ್ಬರ ಗಮನಕ್ಕೂ ಬಂದಿರುತ್ತದೆ. ಆದರೆ ನಿಮ್ಮ ನಿಮ್ಮಲ್ಲಿರುವ "ಈಗೋ" ನೀವಾಗಿಯೇ ಮುಂದುವರಿಯಲು ಬಿಡುವುದಿಲ್ಲ. ಆತ ಮಾಡಲಿ ಎಂದು ಆಕೆ, ಆಕೆ ಮಾಡಲಿ ಎಂದು ಆತ, ಕೊನೆಗೂ ಆ ಕೆಲಸ ಪೂರ್ಣಗೊಳ್ಳದೇ ನಿಮ್ಮ ನಡುವಿನ ಮನಸ್ತಾಪಕ್ಕೆ ಎಡೆಮಾಡಿಕೊಡುತ್ತದೆ,

ಆದರೆ ನಿಮ್ಮ ಸ್ವಪ್ರತಿಷ್ಠೆಯನ್ನು ಬಿಟ್ಟು ನೀವೇ ಮುಂದಾಗಿ ಆ ಕೆಲಸವನ್ನು ಮಾಡಿ ನೋಡಿ, ನಿಮ್ಮ ಬಗ್ಗೆ ನಿಮಗೇ ಹೆಮ್ಮೆ ಮೂಡುವುದರ ಜೊತೆಗೆ ಅವರ ತಪ್ಪು ಅವರಿಗೇ ಅರ್ಥವಾಗಿ ನಿಮ್ಮ ಮೇಲೆ ಇನ್ನಷ್ಟು ಗೌರವವನ್ನು ಬೆಳೆಸಿಕೊಳ್ಳುತ್ತಾರೆ!

ಜೊತೆಯಾಗಿ ಬಾಳುವ ದಂಪತಿಗಳ ನಡುವೆ ಸಂಬಂಧಗಳು ಗಟ್ಟಿಯಾಗಿ ತಳವೂರಬೇಕೆಂದರೆ ಅವರ ನಡುವೆ ಒಬ್ಬರನ್ನು ಒಬ್ಬರನ್ನು ಅರ್ಥಮಾಡಿಕೊಳ್ಳುವ ಮನಸ್ಸಿರಬೇಕು. ಅದಕ್ಕೂ ಮೊದಲು ನಮ್ಮ ಭಾವನೆಗಳನ್ನು ಅವರಿಗೆ ಸರಿಯಾಗಿ ಅರ್ಥಮಾಡಿಸುವ ಬಗ್ಗೆ ನಮಗೆ ತಿಳಿದಿರಬೇಕು.

ಸಂಬಂಧಗಳು ನಿಂತಿರುವುದೇ ನಂಬಿಕೆಯ ಮೇಲೆ. ಒಬ್ಬರ ಮೇಲೆ ಒಬ್ಬರು ಎಲ್ಲಾ ವಿಷಯಗಳಲ್ಲೂ ನಿಂಬಿಕೆಯನ್ನಿಟ್ಟಿರುತ್ತಾರೆ. ಅದನ್ನು ಯಾರೇ ಮೀರಿದರೂ ಸಂಬಂಧಗಳು ಹಾಳಾಗುವುದರಲ್ಲಿ ಸಂಶಯವೇ ಇಲ್ಲ. ಇಂತಹ ಸಮಸ್ಯೆಗಳಿಂದ ಹೊರಗುಳಿಯುವುದು ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ನಿಮ್ಮಿಂದಲೇ ಸಾಧ್ಯವಲ್ಲವೇ? ದಿನದ ಹೆಚ್ಚು ಸಮಯವನ್ನು ಮನೆಯಿಂದ ಹೊರಗೇ ಕಳೆಯುವ ಗಂಡಂದಿರಲ್ಲಿ ಹೆಂಗಸರು ನಂಬಿಕೆಯಿಟ್ಟಿರುತ್ತಾರೆ. ಅದನ್ನು ಉಳಿಸಿಕೊಳ್ಳುವುದು, ಹೆಂಡತಿಯನ್ನು ಕಾಪಾಡುತ್ತೇನೆ ಎಂದು ಪ್ರಮಾಣ ಮಾಡಿ ಮದುವೆಯಾದ ಎಲ್ಲಾ ಗಂಡಂದಿರ ಕರ್ತವ್ಯ. ಹಾಗೆಯೇ ತನ್ನ ಸಂಗಾತಿಯಾವುದೇ ತಪ್ಪನ್ನೂ ಮಾಡುವುದಿಲ್ಲ ಎಂದು ನಂಬಿದ್ದ ಗಂಡನನ್ನು ಅದೇ ನಂಬಿಕೆಯನ್ನು ಕೊನೆವರೆಗೂ ಉಳಿಸಿಕೊಳ್ಳುವುದು ಸತಿಯಾದವಳ ಜವಾಬ್ದಾರಿ.

ಪ್ರಾಮಾಣಿಕತೆಯೂ ಗಂಡ ಹೆಂಡತಿಯರ ಸಂಸಾರದ ದೋಣಿ ಸಾಗಲು ಮುಖ್ಯ. ಹಿಂದೆ ನಡೆದ ಘಟನೆಗಳು ಸಂಗಾತಿಯ ಗಮನಕ್ಕೆ ತರದೇ ಅದು ಬೇರೆ ಯಾರದ್ದೋ ಮೂಲಕ ಅವರಿಗೆ ತಿಳಿದರೆ ಜೀವನ ನರಕವೇ ಸರಿ. ಮುಚ್ಚುಮರೆ ಎನ್ನುವುದು ಗಂಡ ಹೆಂಡತಿಯರ ನಡುವೆ ಯಾವುದೇ ಕಾರಣಕ್ಕೂ ಉಳಿದುಕೊಳ್ಳಬಾರದು. ಇದರಿಂದ ಸಂಸಾರದಲ್ಲಿ ಕಲಹಗಳು ಉಂಟಾಗುವ ಎಲ್ಲಾ ಸಾಧ್ಯತೆಗಳೂ ಇರುತ್ತವೆ. ಆದ್ದರಿಂದ 'be honest' |

ರಶ್ಮಿ ಮತ್ತು ರವೀಶ್ ತುಂಬಾ ಚೆನ್ನಾಗಿಯೇ ಸಂಸಾರ ಮಾಡುತ್ತಿದ್ದರು. ಆದರೆ ಅದೇಕೊ ಇತ್ತೀಚಿನ ದಿನಗಳಲ್ಲಿ ಅವರ ಸಂಸಾರದಲ್ಲಿ ಏರುಪೇರುಗಳು ಪ್ರಾರಂಭವಾಗಿವೆ. ಬಿನ್ನಾಭಿಪ್ರಾಯಗಳು ಮೂಡಿವೆ. ಕಾರಣವಿಷ್ಟೆ. ಅವರ ನಡುವೆ ನಿರೀಕ್ಷೆಗಳೇ ಸುಳ್ಳಾಗಿರುವುದು! ಹಲವಾರು ಬಾರಿ ಒಬ್ಬರಿಂದ ಇನ್ನೊಬ್ಬರ ನಿರೀಕ್ಷೆಗಳು ಹುಸಿಯಾಗಿರುತ್ತವೆ. ಇವತ್ತು ತರುತ್ತೇನೆ ಎನ್ನುವ ವಸ್ತು ತಂದುಕೊಡದೇ ಇರುವುದು, ಜೊತೆಗೆ ಹೊರಗೆ ಹೋಗದೇ ಇರುವುದು ಇಂತಹ ಸಣ್ಣ ಪುಟ್ಟ ಆಸೆಗಳೂ ಈಡೇರದೆ ಇದ್ದಾಗ ಮನಸ್ತಾಪಗಳು ಮೂಡುವುದು ಸಹಜ. ನಿರೀಕ್ಷೆ ನೆರವೇರದೆ ನೊಂದುಕೊಳ್ಳುವುದು ಗಂಡನಿಗಿಂತ ಹೆಂಡತಿಯೇ ಜಾಸ್ತಿ. ಇಂತಹ ತೊಂದರೆಗಳು ಬರದಂತೆ ನಿರೀಕ್ಷೆಗಳನ್ನು ಗಂಡಂದಿರೇ ನೆರವೇರಿಸಿದರೆ ಸಂಸಾರ ಹಾಲು ಜೇನಿನಂತಾಗದೇ ಮತ್ತೇನು?

ದಿನದಿಂದ ದಿನಕ್ಕೆ ವಸ್ತುಗಳ ದರ ಏರುತ್ತಿದೆ. ಅದಕ್ಕೆ ತಕ್ಕಂತೆ ಸಂಸಾರ ತೂಗಿಸುವುದು ಕಷ್ಟವಾಗುತ್ತಿದೆ. ಮಕ್ಕಳ ಶಿಕ್ಷಣಕ್ಕೂ ಸಾಕಷ್ಟು ಹಣ ಬೇಕು ಹೀಗೆ ತಾತ್ಕಾಲಿಕ ಸಮಸ್ಯೆಗಳು ಸಂಸಾರದಲ್ಲಿ ಎದುರಾಗುತ್ತವೆ. ಆದರೆ ನಡೆದದ್ದಿಕ್ಕೆಲ್ಲ ಶನೀಶ್ವರನೇ ಕಾರಣ ಎನ್ನುವ ಹಾಗೇ ಗಂಡಂದಿರನ್ನು ದೂರುವುದನ್ನು ಬಿಟ್ಟು ಬಿಡಿ. ಗಂಡನಲ್ಲಿರುವ ಟೆನ್ಶನ್ (ತಲೆನೋವು)ನ್ನು ಕಡಿಮೆ ಮಾಡಿ ಸಂಸಾರ ತೂಗಿಸುವಲ್ಲಿ ನೆರವಾಗವುದು ಹೆಂಡತಿಯ ಜವಾಬ್ದಾರಿ. ಅಂತಹ ಆತ್ಮವಿಶ್ವಾಸ ನಿಮ್ಮಲ್ಲಿ ಬೆಳೆಸಿಕೊಳ್ಳಿ. ನಿಮ್ಮಲ್ಲೂ ದುಡಿಯುವ ಸಾಮರ್ಥವಿದ್ದರೆ ಸಂಸಾರದ ಭಾರವನ್ನು ನೀವೂ ಹೊರಬಹುದು. ಸಂಸಾರದಲ್ಲಿ ಆರ್ಥಿಕ ಸಮಸ್ಯೆಗಳು ಇಲ್ಲದಿದ್ದರೆ ಬೇರೆ ಯಾವುದೇ ಸಾಮಾನ್ಯ ಕಾರಣಗಳಿಗೆ ಸಂಬಂಧಗಳು ಕುಸಿಯುವುದಿಲ್ಲ.

ಗಂಡ ಹೆಂಡತಿಯರ ನಡುವೆ ಒಬ್ಬರನ್ನೊಬ್ಬರು ಪರಸ್ಪರ ಮನಸ್ಸನ್ನು ಅರ್ಥಮಾಡಿಕೊಂಡು ಜೀವನ ಯಾನ ಮುಂದುವರಿಸುವುದು ಎಷ್ಟು ಮುಖ್ಯವೂ ಅಷ್ಟೇ ಪ್ರಮುಖವಾದದ್ದು ದೈಹಿಕ ಸಂಬಂಧಗಳೂ ಕೂಡಾ! ಈ ವಿಷಯದಲ್ಲೂ ಒಬ್ಬರ ಭಾವನೆಯನ್ನು ಇನ್ನೊಬ್ಬರು ಗೌರವಿಸುವುದು ಅತ್ಯಗತ್ಯವಾಗಿದೆ. ಯಾವುದೇ ಲೋಪದೋಷಗಳಾಗದಂತೆ ಒಬ್ಬರು ಇನ್ನೊಬ್ಬರನ್ನು ಅನುಸರಿಸಬೇಕು. ಏಕೆಂದರೆ ದಾಂಪತ್ಯದಲ್ಲಿ ವಿರಸ ಕ್ಷಣಿಕವಾದರೆ ಸರಸ ದೀರ್ಘವಾಗಿರಬೇಕು. ಆಗ ಮಾತ್ರ ಮದುವೆಯ ಸಂಭ್ರಮ ಮದುವೆಯಾಗಿ ಎಷ್ಟೇ ವರ್ಷಗಳಾದರೂ ಮತ್ತೆ ಮತ್ತೆ ಮರುಕಳಿಸುತ್ತವೆ.

ನಮ್ಮ ನಡುವೆ ಇರುವ ಯಾವುದೇ ಸಂಬಂಧಗಳಿರಲಿ ಅವುಗಳನ್ನು ಸರಿಯಾಗಿ ನಿಭಾಯಿಸುವುದು ಸುಲಭದ ಮಾತಲ್ಲ. ಅದರಲ್ಲೂ ಜೀವನ ಪರ್ಯಂತ ಕೂಡಿ ಬಾಳಬೇಕಾದ ಗಂಡ ಹೆಂಡತಿಯ ಸಂಬಂಧ ನಿರಂತರ ಉಳಿಸಿಕೊಳ್ಳುವುದು ದೊಡ್ಡ ವಿಷಯವೇ ಸರಿ. ಯಾವುದೇ ಕಲಹಗಳೂ ಉಂಟಾಗದ ಹಾಗೆ ಶಾಶ್ವತ ಸಂಬಂಧವನ್ನು ಸಾಧಿಸುವುದು ದಾಂಪತ್ಯ ನಡೆಸುತ್ತಿರುವ ಪತಿ ಪತ್ನಿಯರ ಹೊಣೆಗಾರಿಕೆಯಾಗಿದೆ.

X
Desktop Bottom Promotion