Varamahalakshmi 2025: ವರಮಹಾಲಕ್ಷ್ಮಿ ವ್ರತಕ್ಕೆ ಯಾವ ನೈವೇದ್ಯ ಮಾಡಬೇಕು? ಪಟ್ಟಿ ಇಲ್ಲಿದೆ

Posted By:

ವರಮಹಾಲಕ್ಷ್ಮಿ ಹಬ್ಬವನ್ನು (Varamahalakshmi 2025) ಶುಕ್ರವಾರ ಸಂಭ್ರಮ, ಸಡಗರದಿಂದ ಆಚರಿಸಲು ಎಲ್ಲೆಡೆ ಸಿದ್ಧತೆ ನಡೆದಿದೆ. ವರಲಕ್ಷ್ಮಿ ವ್ರತದ ಪವಿತ್ರ ದಿನದಂದು ಭಕ್ತರು ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸುತ್ತಾರೆ. ಈ ಶುಭ ಸಂದರ್ಭದಲ್ಲಿ ದೇವಿಗೆ ವಿಶೇಷ ನೈವೇದ್ಯಗಳನ್ನು ಸಮರ್ಪಿಸುವುದು ಪ್ರಮುಖ ಸಂಪ್ರದಾಯ. ರುಚಿ, ಆರೋಗ್ಯ ಮತ್ತು ಪಾರಂಪರಿಕ ಮಹತ್ವವನ್ನು ಹೊಂದಿರುವ ಈ ಖಾದ್ಯಗಳು ಹಬ್ಬದ ಸಡಗರವನ್ನು ಇನ್ನಷ್ಟು ಹೆಚ್ಚಿಸುತ್ತವೆ. ವರಮಹಾಲಕ್ಷ್ಮಿ ವ್ರತದ (Varamahalakshmi Vratha) ಸಂದರ್ಭದಲ್ಲಿ ದೇವಿಗೆ ಯಾವ ನೈವೇದ್ಯಗಳನ್ನು ಅರ್ಪಿಸಬೇಕು ಎಂಬ ಪ್ರಶ್ನೆ ಅನೇಕ ಭಕ್ತರಲ್ಲಿ ಮೂಡುತ್ತದೆ. ಈ ಪವಿತ್ರ ದಿನದಂದು ಸಾಂಪ್ರದಾಯಿಕ ಮತ್ತು ಸುಲಭವಾಗಿ ತಯಾರಿಸಬಹುದಾದ ನೈವೇದ್ಯಗಳ ಪಟ್ಟಿ ಇಲ್ಲಿದೆ.

ಪೂಜೆಯ ಸಮಯದಲ್ಲಿ ಲಕ್ಷ್ಮಿಗೆ ಅರ್ಪಿಸುವ ಈ ನೈವೇದ್ಯಗಳು ಕೇವಲ ಭಕ್ಷ್ಯಗಳಾಗಿರದೆ, ತಲೆಮಾರುಗಳಿಂದ ನಡೆದುಬಂದಿರುವ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿವೆ. ಈ ವಿಶೇಷ ಭಕ್ಷ್ಯಗಳ ತಯಾರಿಕೆ ಮತ್ತು ಅರ್ಪಣೆಯು ವರಮಹಾಲಕ್ಷ್ಮಿ ವ್ರತದ ಅವಿಭಾಜ್ಯ ಅಂಗವಾಗಿದ್ದು, ಭಕ್ತರು ತಮ್ಮ ಭಕ್ತಿಯನ್ನು ಈ ಮೂಲಕ ವ್ಯಕ್ತಪಡಿಸುತ್ತಾರೆ. ಇದು ವ್ರತದ ಆಚರಣೆಗೆ ಪೂರಕವಾಗಿದೆ. ಲಕ್ಷ್ಮಿ ದೇವಿಯ ಆಶೀರ್ವಾದಕ್ಕಾಗಿ ಪ್ರಾರ್ಥಿಸುವ ಈ ದಿನ, ಭಕ್ತರು ದೇವಿಗೆ ಅರ್ಪಿಸುವ ನೈವೇದ್ಯಗಳಿಗೂ ವಿಶೇಷ ಮಹತ್ವವಿದೆ.

Varamahalakshmi Vratha Naivedya

ತೆಂಗಿನಕಾಯಿ ಲಡ್ಡು

ತೆಂಗಿನಕಾಯಿ ಲಡ್ಡು ಅಥವಾ ಕೊಬ್ಬರಿ ಲಡ್ಡು ಪ್ರಮುಖ ಸಿಹಿತಿಂಡಿ. ತೆಂಗಿನಕಾಯಿ ತುರಿ, ಬೆಲ್ಲ ಅಥವಾ ಸಕ್ಕರೆಯಿಂದ ತಯಾರಿಸುವ ಈ ಲಡ್ಡುಗಳು ತುಂಬಾ ರುಚಿಯಾಗಿರುತ್ತವೆ. ಬಾದಾಮಿ, ಒಣದ್ರಾಕ್ಷಿ ಮುಂತಾದ ಡ್ರೈ ಫ್ರೂಟ್ಸ್ (ಒಣಹಣ್ಣು) ಸೇರಿಸಿದರೆ ಇನ್ನಷ್ಟು ರುಚಿಯಾಗಿರುತ್ತವೆ. ವಿಶೇಷವಾಗಿ, ಹಬ್ಬಗಳ ಸಂದರ್ಭದಲ್ಲಿ ಈ ಲಡ್ಡುಗಳನ್ನು ತಪ್ಪದೇ ತಯಾರಿಸುತ್ತಾರೆ.

ಸಕ್ಕರೆ ಪೊಂಗಲ್

ಸಕ್ಕರೆ ಅಥವಾ ಚಕ್ಕರೆ ಪೊಂಗಲ್ ದಕ್ಷಿಣ ಭಾರತದಲ್ಲಿ ಹಬ್ಬಗಳ ಸಮಯದಲ್ಲಿ ತಯಾರಿಸುವ ಒಂದು ವಿಶೇಷ ಸಿಹಿ ಖಾದ್ಯ. ಅಕ್ಕಿ, ಹೆಸರುಬೇಳೆ, ಬೆಲ್ಲ ಅಥವಾ ಸಕ್ಕರೆ, ತುಪ್ಪ ಮತ್ತು ಏಲಕ್ಕಿ ಪುಡಿ ಬಳಸಿ ಈ ಸಿಹಿ ತಿಂಡಿಯನ್ನು ರುಚಿಕರವಾಗಿ ತಯಾರಿಸಲಾಗುತ್ತದೆ. ಇದನ್ನು 'ಚಕ್ಕರೆ ಪೊಂಗಲ್' ಎಂದು ಕರೆಯುತ್ತಾರೆ.

ಮೊಸರನ್ನ

ಮೊಸರನ್ನ ಎಲ್ಲಾ ಕಾಲಕ್ಕೂ ಸೂಕ್ತ. ಹೆಚ್ಚಿನವರು ಇದನ್ನು ನೈವೇದ್ಯಕ್ಕೆ ಬಳಸುತ್ತಾರೆ. ಮೊಸರನ್ನ ದೇಹವನ್ನು ತಂಪಾಗಿಡಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಉತ್ತಮವಾಗಿದೆ. ಇದನ್ನು ಉಪ್ಪು, ಇಂಗು, ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆಯೊಂದಿಗೆ ತಯಾರಿಸಲಾಗುತ್ತದೆ. ಉಪ್ಪಿನಕಾಯಿ, ಹಪ್ಪಳ ಅಥವಾ ತರಕಾರಿ ಸಲಾಡ್‌ನೊಂದಿಗೆ ತಿಂದರೆ ರುಚಿ ಅದ್ಭುತವಾಗಿರುತ್ತದೆ.

Varamahalakshmi Vratha

ಪುಳಿಯೋಗರೆ

ಪುಳಿಯೋಗರೆ ಪ್ರಸಿದ್ಧ ಖಾದ್ಯ. ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲಿ ಪ್ರಸಾದವಾಗಿ ಇದನ್ನು ನೀಡಲಾಗುತ್ತದೆ. ಹುಣಸೆ ಹಣ್ಣಿನ ರಸ, ಬೇಳೆಕಾಳುಗಳು, ಅರಿಶಿನ, ಕರಿಬೇವು ಮುಂತಾದವುಗಳನ್ನು ಬಳಸಿ ತಯಾರಿಸಲಾಗುತ್ತದೆ. ಹಬ್ಬಗಳು ಮತ್ತು ಶುಭ ಕಾರ್ಯಗಳಲ್ಲಿ ಇದು ಕಡ್ಡಾಯ ಪ್ರಸಾದವಾಗಿದೆ.

ಬೆಲ್ಲದ ಪರಮಾನ್ನ

ಲಕ್ಷ್ಮಿಗೆ ಅತಿ ಪ್ರಿಯವಾದ ನೈವೇದ್ಯ ಬೆಲ್ಲದ ಅನ್ನ ಅಥವಾ ಬೆಲ್ಲದ ಪರಮಾನ್ನ. ಅಕ್ಕಿ, ಹಾಲು ಮತ್ತು ಬೆಲ್ಲದಿಂದ ತಯಾರಿಸುವ ಈ ಸಾಂಪ್ರದಾಯಿಕ ಸಿಹಿ ತಿಂಡಿ ಎಲ್ಲಾ ಮನೆಗಳಲ್ಲಿ ಸಾಮಾನ್ಯವಾಗಿರುತ್ತದೆ. ಇದನ್ನು ಬೆಲ್ಲದ ಅನ್ನ ಎಂದೂ ಕರೆಯುತ್ತಾರೆ. ಈ ಪರಮಾನ್ನಕ್ಕೆ ಏಲಕ್ಕಿ ಪುಡಿ ಬೆರೆಸಿ, ಲಕ್ಷ್ಮಿ ದೇವಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ.

ಬೇಳೆ ವಡೆ

ಇದು ಬೇಳೆಗಳಿಂದ ತಯಾರಿಸುವ ಸಾಂಪ್ರದಾಯಿಕ ತಿಂಡಿ. ಬೇಳೆಗಳನ್ನು ನೆನೆಸಿ, ಮಸಾಲೆ ಪದಾರ್ಥಗಳು ಮತ್ತು ಕರಿಬೇವು ಹಾಕಿ ವಡೆಗಳನ್ನು ತಯಾರಿಸಲಾಗುತ್ತದೆ. ತೆಂಗಿನಕಾಯಿ ಚಟ್ನಿ ಅಥವಾ ಕೊತ್ತಂಬರಿ ಚಟ್ನಿಯೊಂದಿಗೆ ತಿಂದರೆ, ಇವು ತುಂಬಾನೇ ರುಚಿಯಾಗಿರುತ್ತವೆ.

Varamahalakshmi

ಸುನ್ನುಂಡೆ

ಹಬ್ಬಗಳು ಮತ್ತು ಶುಭ ಕಾರ್ಯಗಳಲ್ಲಿ ಸುನ್ನುಂಡೆ ತಯಾರಿಸುವುದು ಒಂದು ಸಂಪ್ರದಾಯ. ಉದ್ದಿನಬೇಳೆ, ಬೆಲ್ಲ ಮತ್ತು ತುಪ್ಪದಿಂದ ಮಾಡುವ ಸುನ್ನುಂಡೆಗಳು ಆರೋಗ್ಯಕರವಾಗಿವೆ. ಇವುಗಳಲ್ಲಿರುವ ಪ್ರೋಟೀನ್ ಮತ್ತು ಉತ್ತಮ ಕೊಬ್ಬುಗಳು ದೇಹಕ್ಕೆ ಶಕ್ತಿ ನೀಡುತ್ತವೆ.

ಸಿಹಿ ಕಡುಬು

ಇದನ್ನು ಸಿಹಿ ಕಡುಬು ಅಥವಾ ಪೂರ್ಣಂ ಕುಡುಮುಲು ಎಂದು ಕರೆಯಲಾಗುತ್ತದೆ. ಈ ಕಡುಬುಗಳನ್ನು ವಿಶೇಷವಾಗಿ ವಿನಾಯಕ ಮತ್ತು ಲಕ್ಷ್ಮಿ ದೇವಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಅಕ್ಕಿ ಹಿಟ್ಟಿನಿಂದ ತಯಾರಿಸಿ, ಒಳಗೆ ಬೆಲ್ಲ ಮತ್ತು ತೆಂಗಿನಕಾಯಿ ತುರಿ ತುಂಬಿ ಈ ಸಿಹಿ ಖಾದ್ಯವನ್ನು ಮಾಡಲಾಗುತ್ತದೆ.

ಒಟ್ಟಾರೆಯಾಗಿ, ಈ ಹೆಲ್ದಿ ಹಾಗೂ ಟೇಸ್ಟಿ ಸಾಂಪ್ರದಾಯಿಕ ಖಾದ್ಯಗಳನ್ನು ವರಮಹಾಲಕ್ಷ್ಮಿ ವ್ರತದ ದಿನದಂದು ತಯಾರಿಸಿ ಲಕ್ಷ್ಮಿ ದೇವಿಗೆ ಅರ್ಪಿಸಬಹುದು. ಈ ಮೂಲಕ ಭಕ್ತರು ತಮ್ಮ ಭಕ್ತಿಯನ್ನು ವ್ಯಕ್ತಪಡಿಸಬಹುದು.

[ of 5 - Users]
Story first published: Thursday, August 7, 2025, 11:00 [IST]
X
Desktop Bottom Promotion