Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಾಲಿಗೆಯ ರುಚಿ ತಣಿಸುವ ಬೊಂಬಾಟ್ ಶ್ಯಾವಿಗೆ ಬಿರಿಯಾನಿ!
ಬಿರಿಯಾನಿ ಎಂದರೆ ಹೆಚ್ಚಿನವರು ಇದನ್ನು ಮಾಂಸಾಹಾರದ ಅಡುಗೆ ಎಂದೇ ತಿಳಿದಿದ್ದಾರೆ. ಆದರೆ ತರಕಾರಿಗಳನ್ನು ಬಳಸಿಯೂ ರುಚಿಗೆ ಏನೂ ಧಕ್ಕೆಯಾಗದಂತಹ ಬಿರಿಯಾನಿ ತಯಾರಿಸಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ ದುಬಾರಿ ಅಕ್ಕಿಯನ್ನು ಬಳಸದೇ ತರಕಾರಿಗಳ ಜೊತೆ ಶ್ಯಾವಿಗೆಯನ್ನು (ಸೇಮಿಗೆ) ಬಳಸಿ ರುಚಿಕರ ಬಿರಿಯಾನಿಯನ್ನು ಮಾಡಬಹುದು, ಅದೂ ಕಡಿಮೆ ಸಮಯದಲ್ಲಿ!
ಮನೆಗೆ ಅತಿಥಿಗಳು ಆಗಮಿಸಿದ್ದಾಗ ಮಧ್ಯಾಹ್ನದ ಅಡುಗೆಗೆ ಶೀಘ್ರದಲ್ಲಿಯೇ ತಯಾರಿಸಿ ಬಡಿಸಬಹುದಾದ ಅಡುಗೆಗಳಲ್ಲಿ ಶ್ಯಾವಿಗೆ ಬಿರಿಯಾನಿಯೂ ಒಂದಾಗಿದ್ದು ಅತಿಥಿಗಳ ಮೆಚ್ಚುಗೆ ಪಡೆಯುವುದು ಖಂಡಿತ. ಇದನ್ನು ತಯಾರಿಸುವ ಬಗೆಯನ್ನು ಇಲ್ಲಿ ನೀಡಲಾಗಿದೆ ಮುಂದೆ ಓದಿ... ಘಂ ಎನ್ನುತ್ತೆ ಹೈದರಾಬಾದ್ ದಮ್ ಬಿರಿಯಾನಿ
*ಪ್ರಮಾಣ: ಇಬ್ಬರಿಗೆ ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹತ್ತು ನಿಮಿಷಗಳು
*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಶ್ಯಾವಿಗೆ: ಒಂದು ಕಪ್ (ಹುರಿದದ್ದು, ಸುಮಾರು ಒಂದಿಂಚು ಉದ್ದ ಇರುವಷ್ಟು ತುಂಡಾಗಿಸಿದ್ದು) - ಹುರಿದ ಶ್ಯಾವಿಗೆ ಪ್ಯಾಕೆಟ್ ರೂಪದಲ್ಲಿಯೂ ಲಭ್ಯವಿದೆ.
*ನೀರು - ಒಂದು ಕಪ್
*ಈರುಳ್ಳಿ - ಒಂದು (ದೊಡ್ಡ ಗಾತ್ರ), ಚಿಕ್ಕದಾದರೆ ಎರಡು-ಚಿಕ್ಕದಾಗಿ ಹೆಚ್ಚಿದ್ದು
*ಶುಂಠಿ-ಬೆಳ್ಳುಳ್ಳಿ ಪೇಸ್ಟ್ -3/4 ಚಿಕ್ಕಚಮಚ
*ಹಸಿಮೆಣಸು -2, ಉದ್ದಕ್ಕೆ ಸೀಳಿದ್ದು
*ಪುದಿನಾ ಎಲೆಗಳು -10- 15
*ಕೊತ್ತಂಬರಿ ಸೊಪ್ಪು - ಒಂದು ಕಟ್ಟು (ದಂಟುರಹಿತವಾಗಿಸಿ ಚಿಕ್ಕದಾಗಿ ಹೆಚ್ಚಿದ್ದು)
*ವಿವಿಧ ತರಕಾರಿಗಳು-ಒಂದು ಕಪ್ (ಚಿಕ್ಕ ಚೌಕಾಕಾರದ ತುಂಡುಗಳನ್ನಾಗಿಸಿದ್ದು)
*ಒಣಮೆಣಸಿನ ಪುಡಿ - ಒಂದು ಚಿಕ್ಕ ಚಮಚ (ಕಾಶ್ಮೀರಿ ಚಿಲ್ಲಿ ಆದರೆ ಒಂದೂವರೆ ಚಮಚ)
*ಬಿರಿಯಾನಿ ಮಸಾಲಾ - ಒಂದು ಚಿಕ್ಕ ಚಮಚ
*ಅಡುಗೆ ಎಣ್ಣೆ - ಒಂದು ಚಿಕ್ಕ ಚಮಚ
*ದಾಲ್ಚಿನ್ನಿ (ಚೆಕ್ಕೆ) -ಒಂದಿಂಚಿನ ಚಿಕ್ಕ ತುಂಡು
*ಲವಂಗ - 2
*ಏಲಕ್ಕಿ -1
ದಾಲ್ಚಿನ್ನಿ ಎಲೆ -1
ಉಪ್ಪು-ರುಚಿಗನುಸಾರ ಬಾಸುಮತಿ ಅಕ್ಕಿ ತರಕಾರಿ ಬಿರಿಯಾನಿ
ಪೂರ್ವ ತಯಾರಿಕೆ:
*) ಒಂದು ವೇಳೆ ಹುರಿದ ಶ್ಯಾವಿಗೆ ಸಿಗದೇ ಇದ್ದಲ್ಲಿ ಶ್ಯಾವಿಗೆಯನ್ನು ಚಿಕ್ಕದಾಗಿ ತುಂಡಾಗಿಸಿ ಒಂದು ಪಾತ್ರೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಕೊಂಚ ಕಂದು ಬಣ್ಣ ಬರುವವರೆಗೆ ಚಿಕ್ಕ ಉರಿಯಲ್ಲಿ ಹುರಿಯಿರಿ. ಸತತವಾಗಿ ತಿರುವುತ್ತಲೇ ಇರಬೇಕು, ಇಲ್ಲದಿದ್ದರೆ ತಳಭಾಗದ ಶ್ಯಾವಿಗೆ ಹೆಚ್ಚು ಕರಕಲಾಗಿ ರುಚಿ ಕೆಡುತ್ತದೆ.
*) ತರಕಾರಿಗಳನ್ನು ಇನ್ನೊಂದು ಪಾತ್ರೆಯಲ್ಲಿ ಬೇಯಲಿಟ್ಟು ಉಪ್ಪು ಹಾಕಿ ಸುಮಾರು ಐದು ನಿಮಿಷ ಕುದಿಸಿ. ಪೂರ್ಣ ಬೇಯುವ ಮೊದಲೇ ನೀರನ್ನು ಬಸಿದುಬಿಡಿ. (ಒಂದು ವೇಳೆ ಸಿದ್ಧರೂಪದಲ್ಲಿರುವ ಪ್ಯಾಕೆಟ್ ಲಭ್ಯವಿದ್ದರೆ ಕುದಿನೀರಿನಲ್ಲಿ ಒಂದೆರಡು ನಿಮಿಷ ಇಟ್ಟರೆ ಸಾಕು) ಬಿರಿಯಾನಿಯ ಮುಖ್ಯ ಭಾಗದ
ತಯಾರಿಕೆ:
1) ದಪ್ಪತಳದ ಮತ್ತು ಅಗಲವಾದ ಪಾತ್ರೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಚಿಕ್ಕ ಉರಿಯಲ್ಲಿ ಬಿಸಿ ಮಾಡಿ. ಇದಕ್ಕೆ ಚೆಕ್ಕೆ, ಲವಂಗ, ದಾಲ್ಚಿನ್ನಿ ಎಲೆ, ಏಲಕ್ಕಿ ಎಲ್ಲವನ್ನೂ ಹಾಕಿ. ಕೊಂಚ ಬಿಸಿಯಾಗಿ ಏಲಕ್ಕಿ ಒಡೆದೊಡನೆ ಈರುಳ್ಳಿ ಸೇರಿಸಿ ಕೊಂಚ ಕಂದು ಬಣ್ಣ ಬರುವವರೆಗೆ ತಿರುವುತ್ತಿರಿ.
2) ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಈರುಳ್ಳಿಯಿಂದ ಎಣ್ಣೆ ಹೊರಬರುವವರೆಗೆ ತಿರುವಿರಿ.
3) ಬಳಿಕ ಕೊತ್ತಂಬರಿ ಮತ್ತು ಪುದಿನಾ ಎಲೆ, ಮೆಣಸಿನ ಪುಡಿ, ಬಿರಿಯಾನಿ ಮಸಾಲಾ ಪುಡಿಗಳನ್ನು ಹಾಕಿ ತಿರುವಿರಿ.
4) ಎಲ್ಲಾ ಮಸಾಲೆಗಳು ಚೆನ್ನಾಗಿ ಮಿಶ್ರಣವಾದ ಬಳಿಕ ಮುಕ್ಕಾಲು ಪಾಲು ಬೆಂದಿರುವ ತರಕಾರಿಗಳನ್ನು ಹಾಕಿ ತಿರುವಿರಿ.
5) ಈಗ ನೀರು ಹಾಕಿ ಎಲ್ಲಾ ಮಿಶ್ರಣವನ್ನು ಚೆನ್ನಾಗಿ ಕಲಕಿ ಕುದಿಯಲು ಬಿಡಿ.
6) ಸುಮಾರು ಮೂರರಿಂದ ಐದು ನಿಮಿಷ ಕುದಿದ ಬಳಿಕ (ತರಕಾರಿಗಳೆಲ್ಲವೂ ಪೂರ್ಣವಾಗಿ ಬೇಯುವವರೆಗೆ) ಉರಿಯನ್ನು ಕನಿಷ್ಟಕ್ಕಿಳಿಸಿ ಶ್ಯಾವಿಗೆ ಸುರಿಯಿರಿ.
7) ಪಾತ್ರೆಯನ್ನು ಎಡಗೈಯಲ್ಲಿ ಬಟ್ಟೆಯಲ್ಲಿ ಗಟ್ಟಿಯಾಗಿ ಹಿಡಿದು ಬಲಗೈಯಿಂದ ಶ್ಯಾವಿಗೆ ಚೆನ್ನಾಗಿ ಮಿಶ್ರಣವಾಗುವಂತೆ ತಿರುವಿ.
8) ಮುಚ್ಚಳ ಮುಚ್ಚಿ ಒಂದು ನಿಮಿಷದ ಬಳಿಕ ತೆರೆದು ಮತ್ತೆ ತಿರುವಿ. ಹೀಗೇ ಸುಮಾರು ಐದಾರು ಬಾರಿ ತಿರುವುತ್ತಿರಬೇಕು, ಇಲ್ಲದಿದ್ದರೆ ತಳ ಹತ್ತುತ್ತದೆ.
9) ಶ್ಯಾವಿಗೆ ಬೆಂದಿದೆ ಎಂದು ಅನ್ನಿಸಿದ ಬಳಿಕ ಉರಿಯನ್ನು ನಂದಿಸಿ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿ ಸುಮಾರು ಐದು ನಿಮಿಷ ಹಾಗೇ ಬಿಡಿ. ಬಳಿಕ ಬಿಸಿಬಿಸಿಯಾಗಿ ಅತಿಥಿಗಳಿಗೆ ಬಡಿಸಿ.
ಪೌಷ್ಠಿಕತೆ:
ಇದರಲ್ಲಿ ಯಾವುದೇ ಮಾಂಸಾಹಾರವಿಲ್ಲದಿದ್ದರೂ ವಿವಿಧ ತರಕಾರಿಗಳ ಪೋಷಕಾಂಶಗಳ ಕಾರಣ ಎಲ್ಲರಿಗೂ ಸೂಕ್ತವಾದ ಪೌಷ್ಟಿಕ ಆಹಾರವಾಗಿದೆ. ತೂಕ ಕಳೆದುಕೊಳ್ಳಲಿಚ್ಛಿಸುವವರೂ ಈ ಬಿರಿಯಾನಿಯನ್ನು ಸೇವಿಸಬಹುದು.
ಸಲಹೆ:
*) ಈ ಬಿರಿಯಾನಿಯೊಂದಿಗೆ ಹಸಿತರಕಾರಿ ಮತ್ತು ಮೊಸರಿನಿಂದ ಮಾಡಿದ ರಾಯ್ತಾ ವನ್ನು ಬಡಿಸಿದರೆ ಬಿರಿಯಾನಿಯ ರುಚಿ ಇನ್ನಷ್ಟು ಹೆಚ್ಚುತ್ತದೆ.
*) ಈ ಬಿರಿಯಾನಿಯಲ್ಲಿ ಆಲುಗಡ್ಡೆಯನ್ನು ಬಳಸದಿರುವುದು ಉತ್ತಮ, ಏಕೆಂದರೆ ಆಲುಗಡ್ಡೆ ಬೇಗನೇ ಕುದಿದು ನೀರಾಗಿ ಶ್ಯಾವಿಗೆಯಲ್ಲೆಲ್ಲಾ ಅಂಟಿಕೊಂಡು ಸ್ವಾದವನ್ನು ಕೆಡಿಸುತ್ತದೆ.
*) ಶ್ಯಾವಿಗೆಯನ್ನು ಆರಿಸುವಾಗ ಸೂಜಿಯಷ್ಟು ಸಪೂರವಿರುವ ಶ್ಯಾವಿಗೆಯನ್ನೇ ಆರಿಸಿ. ಪಾಸ್ತಾ ಶ್ಯಾವಿಗೆ ಈ ಬಿರಿಯಾನಿಗೆ ಹೇಳಿಸಿದುದಲ್ಲ.
*) ಕಟ್ಟಕಡೆಯಲ್ಲಿ ಮುಚ್ಚಳವನ್ನು ಮುಚ್ಚುವ ಸಮಯದಲ್ಲಿ ಟೊಮೇಟೊ ಒಂದನ್ನು ಅಡ್ಡಲಾಗಿ ಕತ್ತರಿಸಿದ ತೆಳುವಾದ ಬಿಲ್ಲೆಗಳನ್ನು ಮೇಲೆ ಇರಿಸಿದರೆ ಬಿರಿಯಾನಿಗೆ ಇನ್ನಷ್ಟು ಸ್ವಾದ ಮತ್ತು ಬಡಿಸುವಾಗ ಈ ಬಿಲ್ಲೆಗಳು ಬಿರಿಯಾನಿಯ ಮೇಲೆರುವಂತೆ ಬಡಿಸಿದರೆ ನೋಡಲೂ ಸುಂದರವಾಗಿರುತ್ತದೆ.
*) ಕೆಲವು ಗೋಡಂಬಿಗಳನ್ನು ಚಿಕ್ಕದಾಗಿ ತುಂಡು ಮಾಡಿ ಹುರಿಯುವ ವೇಳೆಯಲ್ಲಿ ಸೇರಿಸಿದರೆ ಬಿರಿಯಾನಿ ಇನ್ನಷ್ಟು ಸ್ವಾದ ಹೊಂದುತ್ತದೆ.



Click it and Unblock the Notifications
