Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಪುಳಿಯೋಗರೆ, ಪುಳಿ ಒಹೋರೆ ಅಥವಾ ಪುಳಿಯೋದರೈ
ಪುಳಿಯೋಗರೆ ತಣ್ಣಗೆ ತಿನ್ನಿ, ಬೆಚ್ಚಗೆ ತಿನ್ನಿ. ಬೇಗ ಕೆಡೋಲ್ಲ, ಹೊಟ್ಟೆನೂ ತುಂಬುತ್ತೆ, ಎಣ್ಣೆ, ಉಪ್ಪು, ಖಾರ, ಹುಳಿ ಜೊತೆಗೆ ಇಂಗು, ಕೊಬ್ಬರಿ, ಕಡಲೆಕಾಯಿ ಕಲಸಿದ ಅನ್ನ ನಾಲಿಗೆಗೆ ಬಿದ್ದಾಕ್ಷಣ ನಾಲಗೆ ಪುಳಕಗೊಳ್ಳುತ್ತದೆ!
- ವಾಣಿ ರಾಮದಾಸ್, ಸಿಂಗಪುರ
ಅಯ್ಯಂಗಾರ್ ಅಂದ್ರೆ ಪುಳಿಯೋಗರೆ. ಅಯ್ಯಂಗಾರ್ ನಾಮ, ಜುಟ್ಟು, 9ಗಜ ಸೀರೆ, ಅಷ್ಟಗಲದ ಜರತಾರಿ ಪಂಚೆ, ಎಲ್ಲಾ ಬರೀ ಮದುವೆ, ಶ್ರಾದ್ಧ, ವಿಶೇಷ ದಿನಗಳಲ್ಲಿ, ಸಂಪ್ರದಾಯ ಎನಿಸಿಕೊಂಡು ಬಿಟ್ಟಿದೆ. ಆದರೆ ಪುಳಿಯೋಗರೆ, ಸಕ್ಕರೆಪೊಂಗಲ್ ಪ್ರಯೋಗ ಮಾತ್ರ ದಿನೇ ದಿನೇ ಹೆಚ್ಚಾಗುತ್ತಿದೆ.
ಈ ಪುಳಿಯೋಗರೆ ಬರೀ ಅಯ್ಯಂಗಾರ್ ಮನೆಗಳಲ್ಲಿ, ತಿರುಪತಿ ತಿಮ್ಮಪ್ಪ ಅಥವಾ ನರಸಿಂಹಪ್ಪ ದೇಗುಲಗಳಗಳ ಪ್ರಸಾದಕ್ಕೆ ಸೀಮಿತಗೊಂಡಿತ್ತು. ದೇಗುಲಕ್ಕೆ ಹೋಗೋದು (ಸ್ವಾಮಿಕಾರ್ಯ), ಪ್ರಸಾದ ತಿನ್ನೋದು (ಸ್ವಕಾರ್ಯ) ಆಗ್ತಾ ಇತ್ತು. ಈಗ ಪುಳಿಯೋಗರೆ ಸರ್ವವ್ಯಾಪಿ. ಎಲ್ಲಾ ದೇಗುಲಗಳಲ್ಲಿ, ಮನೆಗಳಲ್ಲಿ, ವಿವಿಧ ಬ್ರಾಂಡ್‍ಗಳಲ್ಲಿ ಸಿಗುವ ದಿಢೀರ್ ರೆಸಿಪಿ ಆಗಿ ಹೋಗಿದೆ. ಏನೇ ಬ್ರಾಂಡ್ ಬಂದ್ರೂ, ಯಾವುದೇ ಪುಡಿ ಹಾಕಿದ್ರೂ, ಯಾರೇ ಮಾಡಿದ್ರೂ ಅಥೆಂಟಿಕ್ ಪುಳಿಯೋಗರೆ ಗೊಜ್ಜು+ಅಯ್ಯಂಗಾರಿ ಕೈಯಿನ ರುಚಿ ಪುಳಿಯೋಗರೆಗೆ ಕೊಡುತ್ತೆ ಸ್ಪೆಷಾಲಿಟಿ. ಮಾಯಾ ಬಜಾರ್ ನೆನಪಿಗೆ ಬಂತೆ ..ವಿವಾಹ ಭೋಜನವಿದು...ಪುಳಿಯೋರೆ ಪಾಯಸಗಳು..ಇವೆಲ್ಲ ನನಗೆ ಸಾಕು... ಅಹಹ ಹಹ ಹಾ.
ಇದ್ಯಾಕಪ್ಪಾ ಇಷ್ಟೋಂದು ಪಾಪ್ಯುಲರ್ ಈ ಪುಳಿಯೋಗರೆ, ಪುಳಿ ಒಹೋರೆ ಅಥವಾ ಪುಳಿಯೋದರೈ ತಣ್ಣಗೆ ತಿನ್ನಿ, ಬೆಚ್ಚಗೆ ತಿನ್ನಿ. ಬೇಗ ಕೆಡೋಲ್ಲ, ಹೊಟ್ಟೆನೂ ತುಂಬುತ್ತೆ, ಎಣ್ಣೆ, ಉಪ್ಪು, ಖಾರ, ಹುಳಿ ಜೊತೆಗೆ ಇಂಗು, ಕೊಬ್ಬರಿ, ಕಡಲೆಕಾಯಿ ಕಲಸಿದ ಅನ್ನ ನಾಲಿಗೆಗೆ ಬಿದ್ದಾಕ್ಷಣ ನಾಲಗೆಯ ಎಲ್ಲಾ ಟೇಸ್ಟ್ ಬಡ್ ಟೆಸ್ಟ್ ಆಗುತ್ತೆ. ಪುಳಿಯೋಗರೆ ಮಾಡೋದು ನಿಮಗೆಲ್ಲರಿಗೂ ಗೊತ್ತಿದೆ. ಗೊತ್ತಿಲ್ಲದವರಿಗಾಗಿ ಇಲ್ಲಿ ಬರೆದಿದ್ದೇನೆ.
*ಮೊದಲಿಗೆ ಎರಡು ಹಿಡಿ ಹುಣಸೇ ಹಣ್ಣನ್ನು 2ಕಪ್ ಬಿಸಿ ನೀರಿನಲ್ಲಿ 1/2 ಗಂಟೆ ನೆನೆಸಿಡಿ.
*1ಟಿಸ್ಪೂನ್ ಜೀರಿಗೆ, 1ಟೀಸ್ಪೂನ್ ಕರಿ ಮೆಣಸು, 1ಟಿಸ್ಪೂನ್ ಮೆಂತ್ಯ, 1ಟೀಸ್ಪೂನ್ ಧನಿಯಾ ಇವೆಲ್ಲವನ್ನೂ ಕೆಂಪಗೆ 10ಮೆಣಸಿನಕಾಯಿ(ಖಾರ ನಿಮಗೆ ಬೇಕಾದಷ್ಟು) ಕೆಂಪಗೆ ಹುರಿದು ಪುಡಿ ಮಾಡಿ ಎರಡು ಭಾಗ ಮಾಡಿಟ್ಟುಕೊಳ್ಳಿ.
*ನೆನೆ ಹಾಕಿದ ಹುಣಿಸೇಹಣ್ಣನ್ನು ಚೆನ್ನಾಗಿ ಕಿವುಚಿ, ಶೋಧಿಸಿ ಇಟ್ಟುಕೊಳ್ಳಿ.
*ನಿಂಬೆ ಗಾತ್ರದ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು. 2ಚಮಚ ಹುರಿದ ಎಳ್ಳು ಪುಡಿ. 1/4 ಗಿಟುಕು ಕೊಬ್ಬರಿ ತುರಿ ರೆಡಿಯಾಗಿಟ್ಟುಕೊಳ್ಳಿ.
ಗೊಜ್ಜಿನ ತಯಾರಿ :
1. ಸಣ್ಣ ಉರಿ ಹಚ್ಚಿ-ಬಾಣಲೆಯಲ್ಲಿ 4ಚಮಚ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಎರಡು ಕೆಂಪು ಮೆಣಸಿನ ಕಾಯಿ, 1/4 ಚಮಚ ಪುಡಿ ಇಂಗು, 1/2 ಚಮಚ ಅರಿಶಿನ ಹಾಕಿ ಒಗ್ಗರಣೆ ಹಾಕಿ.
2. ಮೆಲ್ಲಗೆ ಕಿವುಚಿದ ಹುಣಿಸೇಹಣ್ಣಿನ ರಸ ಹಾಕಿ ಸೌಟಿನಿಂದ ಕಲಕಿ. ಈ ಮಿಶ್ರಣ ಕುದಿ ಬರುವಾಗ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನಪುಡಿ(ಒಂದು ಭಾಗ) ಬೆರೆಸಿ. ಮಿಶ್ರಣ ಸ್ವಲ್ಪ ಗಟ್ಟಿಯಾಗಿ, ಎಣ್ಣೆ ಮೇಲೆ ತೇಲಿ ಬರುವ ತನಕ ಗೊಜ್ಜು ಕುದಿಸಿ ಉರಿ ಆರಿಸಿ.
ಆರಿದ ಗೊಜ್ಜನ್ನು ಬಾಟಲ್‍ನಲ್ಲಿ ತುಂಬಿ ತಂಗಳನ್ನದ ಡಬ್ಬಿ(ಫ್ರಿಜ್)ನಲ್ಲಿಟ್ಟು ಬೇಕಾದಾಗ ಅನ್ನ ಮಾಡಿಕೊಂಡು ಗೊಜ್ಜು ಬೆರೆಸಿ ಪುಳಿಯೋಗರೆ ಸವಿಯಿರಿ ಅಥವಾ ಮಲ್ಟಿ ಪರ್ಪಸ್ ಗೊಜ್ಜಿದು ಅನ್ನ, ಚಪಾತಿ, ದೋಸೆ, ಉಪ್ಪಿಟ್ಟು, ಮೊಸರನ್ನದೊಂದಿಗೆ ಸವಿಯಲು(ನೆಕ್ಕಲು) ಬಲು ರುಚಿ.
ಪುಳಿಯೋಗರೆ :
ಅನ್ನ ಉದುರು ಉದುರಾಗಿ ಬೇಯಿಸಿ ಅಗಲ ತಟ್ಟೆಯಲಿ ಹಾಕಿ ಆರಲು ಬಿಡಿ. ಬಾಣಲೆಯಲ್ಲಿ 4ಚಮಚ ಎಳೆಣ್ಣೆ ಕಾಯಿಸಿ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಕರಿಬೇವು, ಕಡಲೆಕಾಯಿ, ಗೋಡಂಬಿ, ಇಂಗು, ಅರಿಶಿಣ ಒಗ್ಗರಣೆ ಹಾಕಿ ಆರಿದ ಅನ್ನದ ಮೇಲೆ ಹಾಕಿ. ನಂತರ ಅನ್ನದ ಮೇಲೆ ನಿಮ್ಮ ರುಚಿಗೆ ಬೇಕಾಗುವ ಅಂದಾಜಿನಂತೆ ಗೊಜ್ಜು, ನೀವು ಮೊದಲಿಗೆ ಮಾಡಿಟ್ಟುಕೊಂಡ ಕಾರದ ಪುಡಿ, ಸ್ವಲ್ಪ ತುರಿದ ಒಣಕೊಬ್ಬರಿ, ಎಳ್ಳಿನ ಪುಡಿ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಚೆನ್ನಾಗಿ ಕಲಸಿ. ಆರೇಳು ಗಂಟೆಗಳ ಕಾಲ ಮುಚ್ಚಿಡಿ. ಅಯ್ಯಂಗಾರ್ ಪುಳಿಯೋಗರೆ ರೆಡಿ.
ಬಾಯಲ್ಲಿ ನೀರೂರಿತೇ.. ಜಾಗ್ರತೆ-ಪುಳಿಯೋಗರೆಗೆ ಬೀಳುವ ಎಳ್ಳು, ಎಳ್ಳೆಣ್ಣೆ, ಕಡಲೆಕಾಯಿ, ಗೋಡಂಬಿ ಕಟ್ ಆದರೆ ರುಚಿ ಕೆಟ್. ನಿಮಗೆ ಮೈಯಲ್ಲಿ ಕೊಬ್ಬಿದ್ರೆ, ಪುಳಿಯೋಗರೆ ತಿಂದೀರಾ? ಜೋಕೆ.
ಪುಳಿಯೋಗರೆ ಜೊತೆಗೆ ತಣ್ಣನೆಯ ಗಟ್ಟಿ ಮೊಸರು ಅಥವಾ ಸೌತೇಕಾಯಿ-ಈರುಳ್ಳಿ ರಾಯಿತ ಜೊತೆ ಸವಿದರೆ ಆಹಾ... ಅಯ್ಯಂಗಾರ್ ವೀಟ್ಟ್ ಪುಳಿಯೋಗರೆ ಎಂದು ಉಲಿದಿರಾ?



Click it and Unblock the Notifications