Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಲ್ಲಂಗಡಿ ಸಿಪ್ಪೆಯ ಪಲ್ಯ
ಪಲ್ಯ ಮಾಡುವ ಒಳಗುಟ್ಟನ್ನು ಕಲ್ಲಂಗಡಿ ಹಣ್ಣೇ ಹೇಳಿಕೊಳ್ಳುತ್ತಿದೆ. ಕೇಳಿಸಿಕೊಳ್ಳಿ, ಅಡುಗೆಮನೆಗೆ ನುಗ್ಗಿ .
- ರೂಪ ಕೃಷ್ಣ
ದಟ್ಸ್‌ಕನ್ನಡ.ಕಾಂನಲ್ಲಿ ಕಲ್ಲಂಗಡಿ ಹಣ್ಣಿನ ಉಪಯೋಗದ ಬಗ್ಗೆ ಓದಿದಾಗಲೇ, ನನಗೆ ನನ್ನ ಅಜ್ಜಿಯಿಂದ ಬಂದ ಬಳುವಳಿಯ ಬಗ್ಗೆ ಬರೆಯಬೇಕೆನ್ನಿಸಿತ್ತು . ಅನ್ನಿಸಿಕೆ ಅಕ್ಷರರೂಪಕ್ಕೆ ಬಂದದ್ದು ಈಗ. ಕಲ್ಲಂಗಡಿ ಸೀಸನ್ ಮುಗಿಯುವ ಮುನ್ನ ಈ ಬರಹ ನಿಮಗೆ ಮುಟ್ಟಿಸಬೇಕೆನ್ನುವ ಉಮೇದಿನಿಂದ ಬರೆಯುತ್ತಿರುವೆ. ಓದಿ, ಮಾಡಿ, ಸವಿಯಿರಿ.
ಮಾಡೋದು ಹೇಗೆ ? ನಾನಂತೂ ಹೇಳೋದಿಲ್ಲ ; ಇದೋ ಮಜಬೂತು ಕಲ್ಲಂಗಡಿ ಹಣ್ಣು , ತನ್ನ ಸಿಪ್ಪೆಯಿಂದ ಪಲ್ಯ ಮಾಡೋದು ಹೇಗೆ ಎನ್ನುವ ಗುಟ್ಟನ್ನು ಹೇಳಿಕೊಳ್ಳುತ್ತಿದೆ ;
ನನ್ನ (ಕಲ್ಲಂಗಡಿ) ಸಿಪ್ಪೆಯ ಪಲ್ಯ
ಹಸನಾಗಿ ಬಲಿತ ನನ್ನನ್ನು ಅಂಗಡಿಯಿಂದಲೋ, ಸಂತೆಯಿಂದಲೋ ಚೌಕಾಶಿ ಮಾಡಿ ತಂದಿರ್ತೀರಿ. ನನ್ನ ಹೊಟ್ಟೆಗೊಂದು ಚಾಕು ಹಾಕಿ ಬಗೆದು, ಸುತ್ತಲೂ ಕುಳಿತು ಆಹಾ! ಎಷ್ಟು ಕೆಂಪಾಗಿದೆ.. ಎಂದು ಎಲ್ಲರೂ ಸವಿಯುತ್ತೀರಿ. ನಂತರ ನನ್ನ ಸಿಪ್ಪೆಯನ್ನು ತಿಪ್ಪೆಗೋ, ತೆಂಗಿನ ಮರದ ಬುಡಕ್ಕೋ ದಯವಿಟ್ಟು ಹಾಕದಿರಿ. ಬದಲಾಗಿ ನನ್ನನ್ನು ಕೊಂದ ನಂತರ ತುಂಡು ತುಂಡಾಗಿ ಮಾಡಿ ಕೆಂಪಾದ ನನ್ನ ಮಾಂಸವನ್ನು ಮೂಳೆಯಿಂದ(ಸಿಪ್ಪೆ) ಬೇರ್ಪಡಿಸಿ. ಮೂಳೆಯ ಕಾಲು ಇಂಚು ಭಾಗವನ್ನು ಅದರ ದಟ್ಟ ಹಸಿರು ಭಾಗದಿಂದ ಪ್ರತ್ಯೇಕಿಸಿ. ಈಗ ಕಾಲಿಂಚು ದಪ್ಪದ ತುಂಡುಗಳನ್ನು ಅತೀ ಚಿಕ್ಕ ತುಂಡುಗಳನ್ನಾಗಿ ಮಾಡಿ.
ನನ್ನ ಜೊತೆಗೆ ಇವರೆಲ್ಲಾ ಬೇಕು.
ಅಡುಗೆ ಎಣ್ಣೆ -4 ಚಮಚ
ಸಾಸಿವೆ -1 ಚಮಚ
ಉಡ್ಡಿನಬೇಳೆ -2 ಚಮಚ
ಕರಿ ಬೇವು -2 ಕದಿರು
ಉಪ್ಪು - ಬೇಕಾದಷ್ಟು
ಮೆಣಸಿನಪುಡಿ -1 ಚಮಚ ಅಥವಾ ಅಗತ್ಯಕ್ಕೆ ತಕ್ಕಷ್ಟು
ತೆಂಗಿನ ತುರಿ - ಅರ್ಧ ಕಪ್
ಬಾಣಲೆಯಲ್ಲಿ ನನ್ನ ಸ್ನೇಹಿತರಾದ ಎಣ್ಣೆಯನ್ನು ಹಾಕಿ, ಬಿಸಿಯಾದಾಗ ಸಾಸಿವೆ ಹಾಕಿ. ಅದು ಬೊಬ್ಬೆ ಹೊಡೆದಾಗ ಉದ್ದಿನ ಬೇಳೆಯನ್ನು ಸೇರಿಸಿ. ಅದು ನಾಚಿ ಕೆಂಪಾದಾಗ ಕರಿಬೇವನ್ನು ಜೊತೆಗೆ ಕಳಿಸಿ. ಚಿಕ್ಕ ಚಿಕ್ಕ ಮೂಳೆಗಳನ್ನು ಸೇರಿಸಿ ಕಾಲು ಗ್ಲಾಸು ನೀರು ಸುರಿದು ಮುಚ್ಚಳ ಮುಚ್ಚಿ. ಸ್ವಲ್ಪ ಮೆತ್ತಗಾದಾಗ ಉಪ್ಪು ಮತ್ತು ಮೆಣಸಿನಪುಡಿ ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿ. ಬೆಂದ ನಂತರ ತೆಂಗಿನ ತುರಿ ಉದುರಿಸಿ. ಅನ್ನ, ತುಪ್ಪದೊಂದಿಗೆ ನನ್ನ ಪಲ್ಯ ಕಲಸಿ ನಿಮ್ಮ ಉದರಕ್ಕಿಳಿಸಿ.
ಹಾಮ್! ನನ್ನ ಪಲ್ಯವನ್ನು ಗುಳುಮ್ ಮಾಡುವಾಗ ಇದನ್ನು ಮಾಡಲು ತಿಳಿಸಿದ ಆ ಮೇಲಿನ ಲೋಕದಲ್ಲಿರುವ ರೂಪಕೃಷ್ಣರ ಅಜ್ಜಿಗೊಂದು ನಮಸ್ಕಾರ ಹಾಕಲು ಮರೆಯದಿರಿ.
ಇತೀ ,
-ಕಲ್ಲಂಗಡಿ ಹಣ್ಣಿನ ಸಿಪ್ಪೆ ,
ಚಿಕಾಗೊ.



Click it and Unblock the Notifications
