Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಪಕ್ಕದ ಮನೇಲಿ ಮಜ್ಜಿಗೆಹುಳಿ ಮಾಡಿದ ವಾಸನೆ ಬರುತ್ತಿದೆ ಕಣೇ

ಹೆಸರು ಕೇಳುತ್ತಿದ್ದಂತೆ ಲಾಲಾರಸ ಗ್ರಂಥಿಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಪ್ರಾರಂಭಿಸಿಬಿಡುತ್ತವೆ. ಮಜ್ಜಿಗೆ ಹುಳಿ ಅಥವ ಉತ್ತರ ಕರ್ನಾಟಕದಲ್ಲಿ ಹೇಳುವಂತೆ ಪಳದ್ಯಾ ಅಥವ ಪಳದೆಯ ಪ್ರಯೋಜನಗಳ ಪಟ್ಟಿ ಮಾಡುತ್ತ ಇದರೊಂದಿಗೆ ಸವಿಯಬಹುದಾದ ಕಾಂಬಿನೇಷನ್‌ಗಳ ಪಟ್ಟಿ ಮಾಡುತ್ತ ಕೂತರೆ ಕೂತವರು ಕೂತೇ ಇರಬೇಕು. ಅಷ್ಟರಲ್ಲೇ ಮಜ್ಜಿಗೆ ಹುಳಿಯನ್ನು ಮೆಲ್ಲಬೇಕೆಂಬ ಆಸೆಯುಂಟಾದರೆ ಪಟ್ಟಿಯನ್ನು ಅಲ್ಲೇ ಮರೆತುಬಿಡಬೇಕು!
ದಿನಾ ಸಾರು, ಕೂಟು, ಹುಳಿ ತಿಂದು ಬೇಜಾರಾಗಿದೆಯಾ? ಮಜ್ಜಿಗೆ ಹುಳಿ ಮಾಡಿ. ಮೊಸರು ಸಿಕ್ಕಾಪಟ್ಟೆಯುಳಿದು ಹುಳಿಹುಟ್ಟೆಯಾಗಿದೆಯಾ? ಪಳದ್ಯಾ ಮಾಡಿ. ನೆಗಡಿ, ಕೆಮ್ಮು ಬಂದು ಊಟ ಸೇರುತ್ತಿಲ್ಲವಾ? ಒಂದು ಸ್ವಲ್ಪ ಮೆಣಸು ಹಾಕಿ ಮಜ್ಜಿಗೆ ಹುಳಿ ಸಖತ್ತಾಗಿ ಜಡಿದುಬಿಟ್ಟು ಮುಸುಕುಹಾಕಿ ಮಲಗಿಬಿಟ್ಟರೆ ಮರುದಿನ ಜ್ವರ ಗಾಯಬ್!
ಉಟದ ಸುದ್ದಿ ಬಂದಾಗ ಜ್ವರ ಮಾತೇಕೆ ಅಂತೀರಾ? ಹಬ್ಬಕ್ಕೆ ನುಚ್ಚಿನುಂಡೆ ಮಾಡಿದ್ದೀರಾ? ನುಚ್ಚಿನುಂಡೆಯನ್ನು ಮಜ್ಜಿಗೆ ಹುಳಿಯಲ್ಲಿ ಅದ್ದಿ ತಿನ್ನಿರಿ. ಎಂಥಾ ರುಚಿ ಅಂತೀರಾ! ಆ ರುಚಿಯನ್ನು ಇಲ್ಲಿ ಹೊಗಳಲು ಪ್ರಾರಂಭಿಸಿದರೆ ಈ ಲೇಖನ ಓದುವುದು ಬಿಟ್ಟು ಅಡುಗೆ ಮನೆಗೆ ಓಡಿ ಹೆಂಡತಿಯನ್ನು ಮಜ್ಜಿಗೆ ಹುಳಿ ಮಾಡೆಂದು ಪೀಡಿಸಲು ಪ್ರಾರಂಭಿಸುತ್ತೀರಿ.
ಈ ಕಾಂಬಿನೇಷನ್‌ಗಳೇ ಬೇಡವೆಂದರೆ ನೀರಾಗಿ ಮಾಡಿದ ಬಿಸಿಬಿಸಿ ಮಜ್ಜಿಗೆ ಹುಳಿಯನ್ನು ಸುಮ್ಮನೆ ಸ್ವಲ್ಪ ಸ್ವಲ್ಪ ಗಂಟಲಿಗೆ ಇಳಿಸಿರಿ. ಮಲ್ಟಿಪರ್ಪೋಸ್ ಮಜ್ಜಿಗೆ ಹುಳಿಯ ಮಹಾತ್ಮೆ ಏನಂತ ಬಣ್ಣಿಸೋದು?
ಇಷ್ಟು ಓದುವ ಹೊತ್ತಿಗೆ ಈಗಲೇ ಮೃಷ್ಟಾನ್ನ ಉಂಡು ಬಂದಿದ್ದರೂ ನಿಮ್ಮ ಹೊಟ್ಟೆ ಚುರುಗುಟ್ಟಲು ಪ್ರಾರಂಭಿಸದಿದ್ದರೆ ಕೇಳಿ. ಇನ್ನೇಕೆ ತಡ. ನುಚ್ಚಿನುಂಡೆ ಕಾದಿದ್ದರೆ ಇನ್ನೂ ಸ್ವಲ್ಪ ಹೊತ್ತು ಕಾಯಲು ಹೇಳಿ ಮಜ್ಜಿಗೆ ಹುಳಿ ಮಾಡಲು ಪ್ರಾರಂಭಿಸಿ.
ಬೇಕಾಗುವ ಪದಾರ್ಥಗಳು
ಹುಳಿ ಬಂದ ಮೊಸರು
ಬೂದು ಕುಂಬಳಕಾಯಿ
ಕಡಲೇಬೇಳೆ ಅಥವ ಕಡಲೆ ಹಿಟ್ಟು
ಹಸಿ ಶುಂಠಿ
ಹಸಿ ಮೆಣಸಿನಕಾಯಿ ಅಥವ ಒಣಗಿದ ಕೆಂಪು ಮೆಣಸಿನಕಾಯಿ
ಮೆಣಸು ಕಾಳು
ಜೀರಿಗೆ
ಮಾಡುವ ವಿಧಾನ
ಮೊದಲಿಗೆ ಹುಳಿ ಬಂದ ಮೊಸರನ್ನು ಕಡಿದು ನೀರು ಮಜ್ಜಿಗೆ ಮಾಡಿಕೊಂಡು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿಟ್ಟುಕೊಳ್ಳಬೇಕು. ಗಟ್ಟಿ ಬೇಕಾದರೆ ಗಟ್ಟಿಯಾಗಿಯೂ ತಯಾರಿಸಿಕೊಳ್ಳಬಹುದು. ಅದಕ್ಕೆ ರುಬ್ಬಿಕೊಂಡ ಕಡಲೇಬೇಳೆಯನ್ನು ಸೇರಿಸಿಟ್ಟುಕೊಳ್ಳಬೇಕು.
ಬೂದುಕುಂಬಳವನ್ನು ಸಾಧಾರಣ ಗಾತ್ರಕ್ಕೆ ಹೆಚ್ಚಿಕೊಂಡು ಒಗ್ಗರಣೆಯೊಂದಿಗೆ ತಾಳಿಸಿಟ್ಟುಕೊಳ್ಳಬೇಕು. ಮಜ್ಜಿಗೆಯನ್ನು ಒಗ್ಗರಣೆಗೆ ಸೇರಿಸಬೇಕು. ನಂತರ ಮಿಕ್ಸಿಯಲ್ಲಿ ರುಬ್ಬಿಟ್ಟುಕೊಂಡ ಹಸಿ ಮೆಣಸಿನಕಾಯಿ, ಜೀರಿಗೆ, ಮೆಣಸು ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ರುಚಿಗೆ ಸ್ವಲ್ಪ ಇಂಗು ಸೇರಿಸಿದರೂ ಉತ್ತಮ. ಮಜ್ಜಿಗೆ ಹುಳಿ ತಯಾರ್.
ಪಳದ್ಯಾಕ್ಕೆ ಸಾಧಾರಣವಾಗಿ ಕುಂಬಳಕಾಯಿಯನ್ನು ಹಾಕುವುದಿಲ್ಲ. ಮಜ್ಜಿಗೆ ಹುಳಿ ಸ್ವಲ್ಪ ಗಟ್ಟಿಯಾಗಿರುತ್ತದೆ ಪಳದ್ಯಾ ನೀರಾಗಿರುತ್ತದೆ ಅಷ್ಟೇ ವ್ಯತ್ಯಾಸ.
ಈಗ ಮಜ್ಜಿಗೆ ಹುಳಿಯನ್ನು ನುಚ್ಚಿನುಂಡೆಯೊಂದಿಗೆ ತಿನ್ನುತ್ತೀರೋ, ಅನ್ನದಲ್ಲಿ ಕಲಿಸಿ ಸ್ವಾಹಾ ಮಾಡುತ್ತೀರೋ, ತಾಪತ್ರಯವೇ ಬೇಡವೆಂದು ಅದನ್ನಷ್ಟೇ ಕುಡಿಯುತ್ತೀರೋ ನಿಮಗೆ ಬಿಟ್ಟಿದ್ದು.



Click it and Unblock the Notifications