Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಉಂಡ್ಲಿಗೆ : ಮಲೆನಾಡ ಸಾಂಪ್ರದಾಯಿಕ ತಿಂಡಿ
ಮಲೆನಾಡಿನಲ್ಲಿ ಪುಟ್ಟ ಮಗು ಮೊದಲ ಬಾರಿಗೆ ಹೊಸಿಲು ದಾಟಿದಾಗ ಉಂಡ್ಲಿಗೆಯನ್ನು ಮಗುವಿನ ಬಾಯಲ್ಲಿಟ್ಟಾಗಲೇ ಅಜ್ಜಿಯ ಸಂಭ್ರಮ ಸಾರ್ಥಕ.
- ಸುಳಿಮನೆ ಸರೋಜಮ್ಮ ಪೆಜತ್ತಾಯ, ಬಾಳೆಹೊಳೆ
[email protected]
ನಮ್ಮ ಮಲೆನಾಡ ಮನೆಗಳಲ್ಲಿ ಬಲವಾದ ಮರದ ಬಾಗಿಲುಗಳು ಮತ್ತು ಆರೆಂಟು ಅಂಗುಲಕ್ಕೂ ಮೀರಿದ ಎತ್ತರದ ಹೊಸಿಲುಗಳು ಕಂಡುಬರುತ್ತವೆ. ಮನೆಯ ಪುಟ್ಟ ಮಗು ಡೊಗ್ಗಾಲಲ್ಲಿ ಹರಿದಾಡುತ್ತಾ ತನ್ನ ಕೋಣೆಯ ಹೊಸಲನ್ನು ದಾಟಿತೇ? ಮನೆಯ ಅಜ್ಜಿಗೆ ಎಲ್ಲಿಲ್ಲದ ಸಡಗರ!
ಮನೆಯ ಪುಟ್ಟ ಮಗು ಹೊಸಿಲು ದಾಟುವಷ್ಟು ಶಕ್ತವಾಗಿದೆ. ಅಂದರೆ, ಕೈಕಾಲುಗಳಲ್ಲಿ ಶಕ್ತಿ ಮೂಡಿಸಿಕೊಂಡು ಹೊಸಲು ದಾಟಿದೆ! ಅಷ್ಟರಲ್ಲೇ, ಅದಕ್ಕೆ ಹಾಲು ಹಲ್ಲು ಕಾಣಿಸಿಕೊಂಡು ಗಟ್ಟಿ ಪದಾರ್ಥ ಅಗಿಯಲು ಮಗು ತವಕ ಪಡುತ್ತಿದೆ! ಆಗ, ಆ ಮಗುವಿನ ಅಜ್ಜಿ ತನ್ನ ಪ್ರೀತಿಯ ಮೊಮ್ಮಗುವಿಗೆ ಉಂಡ್ಲಿಗೆ ತಯಾರಿಸುತ್ತಾಳೆ. ಅಷ್ಟೇ ಅಲ್ಲ, ಒಂದು ಹೊಸಾ ಹುಲ್ಲಿನ ಚಾಪೆಯ ಮೇಲೆ ಮಗುವನ್ನು ಕುಳ್ಳಿರಿಸಿ, ಅದರ ತಲೆಯ ಮೇಲೆ ಒಂದು ಕೊಳಗದಷ್ಟು ಉಂಡ್ಲಿಗೆ ಸುರಿದು ಸಂಭ್ರಮಿಸುತ್ತಾಳೆ.
ಪುಟ್ಟ ಮಗು ಅಜ್ಜಿ ತಯಾರಿಸಿದ ಉಂಡ್ಲಿಗೆ ಒಂದನ್ನು ಹೆಕ್ಕಿಕೊಂಡು ಬಾಯಿಗೆ ಹಾಕಿಕೊಳ್ಳುತ್ತೆ. ಪುಟ್ಟ ಮಗು ಉಂಡ್ಲಿಗೆ ಮೆದ್ದ ನಂತರವೇ, ಆಕೆ ಇತರೇ ಮನೆ ಮಂದಿಗೆ ತಿನ್ನಲು ಉಂಡ್ಲಿಗೆ ನೀಡುತ್ತಾಳೆ. ಘಮಘಮಿಸುವ ಉಂಡ್ಲಿಗೆ ತಿನ್ನುವ ‘ಖುಷಿ’ ತಿಂದು ಅನುಭವಿಸಿದವರಿಗೆ ಮಾತ್ರ ಗೊತ್ತು!
ಈ ಸಾಂಪ್ರದಾಯಿಕ ತಿಂಡಿ ನೀವೂ ತಯಾರಿಸಿ ನೋಡಿ. ವಿವರಗಳನ್ನು ನಾವು ನೀಡುತ್ತೇವೆ.
ಬೇಕಾಗುವ ಪದಾರ್ಥಗಳು :
ಎರಡು ಕಪ್ ಬೆಳ್ತಿಗೆ ಅಕ್ಕಿ
ಅರ್ಧ ಹೋಳು ತೆಂಗಿನಕಾಯಿ
ಒಂದು ಟೀ ಚಮಚ ಜೀರಿಗೆ
ಒಂದು ಟೀ ಚಮಚ ಕೊತ್ತೊಂಬ್ರಿ
ರುಚಿಗೆ ತಕ್ಕಷ್ಟು ಉಪ್ಪು
ಕರಿಯಲು ಎಣ್ಣೆ
ತಯಾರಿಸುವ ವಿಧಾನ : ಬೆಳ್ತಿಗೆ ಅಕ್ಕಿಯನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿರಿ. ನೀರು ಬಸಿದು ಅಕ್ಕಿ, ತೆಂಗಿನಕಾಯಿ ತುರಿ, ಜೀರಿಗೆ, ಕೊತ್ತಂಬರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಇವನ್ನು ಸ್ವಲ್ಪ ರುಬ್ಬಿರಿ(ತೀರ ನುಣ್ಣಗೆ ರುಬ್ಬಬಾರದು).
ಕರಿಯುವ ಎಣ್ಣೆ ಬಿಸಿಮಾಡಿಕೊಂಡು, ಈ ರುಬ್ಬಿದ ಹಿಟ್ಟನ್ನು ನೆಲಗಡಲೇ ಬೀಜದ ಗಾತ್ರಕ್ಕೆ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಂಡು, ಕೆಂಪಗಾಗುವ ತನಕ, ಅಂದರೆ ಕೋಡುಬಳೆಯ ಬಣ್ಣ ಬರುವಷ್ಟಕ್ಕೆ ಕರೆಯಿರಿ. ಬಿಸಿ ಆರಿದನಂತರ ಉಪಯೋಗಿಸಿ.
ಸೂಚನೆ : ಉಂಡ್ಲಿಗೆ ಲಘುವಾದ ಕುರುಕು ತಿಂಡಿ. ಇದನ್ನು ಎಲ್ಲಾ ಸಂದರ್ಭಗಳಿಗೂ ನಮ್ಮ ಮಲೆನಾಡಿನಲ್ಲಿ ತಯಾರಿಸುತ್ತಾರೆ. ಇತರೇ ಸಂದರ್ಭಗಳಲ್ಲಿ ಉಂಡ್ಲಿಗೆ ತಯಾರಿಸುವಾಗ ರುಚಿಗೆ ಸ್ವಲ್ಪ ಖಾರ ಬೇಕಾದಲ್ಲಿ ಎರಡು ಅಥವಾ ಮೂರು ಒಣ ಮೆಣಸಿನ ಕಾಯಿ ಸೇರಿಸಿಕೊಳ್ಳಬಹುದು.
ವಿಶಿಷ್ಟ ರುಚಿಯ ಉಂಡ್ಲಿಗೆ ತಯಾರಿಸಬೇಕಾದರೆ, ಅಕ್ಕಿ ರುಬ್ಬುವಾಗ ಸ್ವಲ್ಪ ಈರುಳ್ಳಿಯ ಹೋಳುಗಳನ್ನು ಸೇರಿಸ ಬಹುದು. ಮಲೆನಾಡಿನಲ್ಲಿ ಕೆಲವೊಮ್ಮೆ ಈರುಳ್ಳಿಯ ಬದಲು ಉಪ್ಪುನೀರಲ್ಲಿ ಸಂಗ್ರಹಿಸಿದ ಹಲಸಿನ ತೊಳೆಗಳನ್ನು ಸೇರಿಸುವ ವಾಡಿಕೆಯೂ ಇದೆ.



Click it and Unblock the Notifications
