ಹಲಸಿನ ಕಾಯಿ ಬಿರಿಯಾನಿ... ಒಮ್ಮೆ ಮಾಡಿ, ರುಚಿ ನೋಡಿ

By: Divya
Subscribe to Boldsky

ಭಾರತೀಯರ ಊಟದ ಪದ್ಧತಿ ಹಾಗೂ ವಿಭಿನ್ನ ಭೋಜನ ಭಕ್ಷ್ಯಗಳು ಪ್ರಪಂಚದೆಲ್ಲೆಡೆ ಸಿಗಲು ಸಾಧ್ಯವಿಲ್ಲ. ಹೌದು, ನಾನೀಗ ಹೇಳುತ್ತಿರುವುದು ಹಲಸಿನ ಕಾಯಿ ಬಿರಿಯಾನಿ. ಅರೇ! ಕೋಳಿ, ಮೊಟ್ಟೆ, ಮಟನ್ ಬಿರಿಯಾನಿ ಕೇಳಿದ್ದೇವೆ... ಇದೇನು ಹಲಸಿನ ಕಾಯಿ ಬಿರಿಯಾನಿ? ಎಂದು ಆಶ್ಚರ್ಯ ಪಡುತ್ತಿದ್ದೀರಾ? ಹಾಗಾದರೆ ಆಶ್ಚರ್ಯ ಪಡಬೇಡಿ ಇದು ಸಸ್ಯಹಾರಿ ಬಿರಿಯಾನಿ.

ಹಪ್ಪಳ, ಚಿಪ್ಸ್ ತಯಾರಿಸಬಹುದಾದ ಈ ಹಲಸಿನಿಂದ ಅನೇಕ ಅಡುಗೆ ಪದಾರ್ಥಗಳನ್ನು ತಯಾರಿಸಬಹುದು. ಉತ್ತಮ ನಾರಿನಂಶ, ಪೋಷಕಾಂಶಗಳನ್ನು ಒಳಗೊಂಡಿರುವ ಹಲಸು ಆರೋಗ್ಯದ ಪಾಲನೆಗೆ ಸಹಕಾರಿಯಾಗಿದೆ. ವರ್ಷಕೊಮ್ಮೆ ಬೆಳೆಯುವ ಈ ಹಲಸು ಸಿಕ್ಕಾಗ ವಿವಿಧ ಭಕ್ಷ್ಯಗಳನ್ನು ತಯಾರಿಸಿ ಸೇವಿಸಿ. ಹಾಗಾದರೆ ಬನ್ನಿ ಈ ಹೊಸ ರುಚಿಯನ್ನು ತಯಾರಿಸುವ ವಿಧಾನವನ್ನು ಹೇಳುತ್ತೇನೆ.

ಇದನ್ನು 5 ರಿಂದ 6 ಮಂದಿಗೆ ಬಡಿಸಬಹುದು

ತಯಾರಿಗೆ ಬೇಕಾಗುವ ಸಮಯ: 45 ನಿಮಿಷ

ಬಿರಿಯಾನಿ ಮಾಡಲು ಬೇಕಾಗುವ ಸಮಯ: 45 ನಿಮಿಷ

Jackfruit Biryani

ಸಾಮಾಗ್ರಿಗಳು:

* ಹಲಸಿನ ಕಾಯಿ ಸೊಳೆಯ ಚೂರು -6 ಕಪ್

* ಬಾಸಮತಿ ಅಕ್ಕಿ -4 ಕಪ್

* ಲವಂಗ-4

* ದಾಲ್ಚಿನ್ನಿ- 1ಇಂಚು

* ಏಲಕ್ಕಿ-3

* ಪರಿಮಳದ ಎಲೆ/ಬೇ ಲೀಫ್-3

* ದೊಡ್ಡ ಈರುಳ್ಳಿ -2

* ಹೆಚ್ಚಿದ ಕೊತ್ತಂಬರಿ -2 ಕಪ್

* ಪುದೀನ ಎಲೆ- 2 ಚಮಚ(ಸಣ್ಣಗೆ ಹೆಚ್ಚಿದ)

* ಸ್ವಲ್ಪ ಕೇಸರಿ ಎಳೆ

* ಹಾಲು-1/2 ಕಪ್

* ಉಪ್ಪು- ರುಚಿಗೆ ತಕ್ಕಷ್ಟು

* ತುಪ್ಪ-1 ಚಮಚ

* ಎಣ್ಣೆ -4 ಚಮಚ

* ನೀರು 12 ಕಪ್

ಬಿರಿಯಾನಿ ಮಸಾಲಕ್ಕೆ

* ಲವಂಗ-5

* ದಾಲ್ಚಿನ್ನಿ- 1ಇಂಚು

* ಏಲಕ್ಕಿ-3

* ಷಾ ಜೀರಾ-1/2 ಚಮಚ

* ಕಪ್ಪು ಕಾಳು ಮೆಣಸು-10

ತಯಾರಿಸುವ ವಿಧಾನ

1. ಮೊದಲು ಬಿರಿಯಾನಿ ಮಸಾಲಕ್ಕೆ ತೆಗೆದುಕೊಂಡ ಸಾಮಾಗ್ರಿಯನ್ನು ಮಿಕ್ಸಿಯಲ್ಲಿ ಹಾಕಿ, ನುಣ್ಣಗೆ ರುಬ್ಬಿಕೊಳ್ಳಬೇಕು.

2. ಹಲಸಿನಕಾಯಿ ಸೊಳೆಯನ್ನು ಚೆನ್ನಾಗಿ ತೊಳೆದು, 6 ಕಪ್ ನೀರು ಮತ್ತು ಸ್ವಲ್ಪ ಅರಿಶಿನ ಹಾಕಿ ಬೇಯಿಸಿಕೊಳ್ಳಬೇಕು. ಕುಕ್ಕರ್‌ನಲ್ಲಿ

ಬೇಯಿಸಬಾರದು.

3. ಬೆಂದಮೇಲೆ, ನೀರನ್ನು ಸೋಸಿ ಒಂದೆಡೆ ಇಡಬೇಕು. ಅರ್ಧಗಂಟೆ ಆರಲು ಬಿಡಿ.

4. ಬಾಸಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು, 6 ಕಪ್ ನೀರು, ಏಲಕ್ಕಿ , ಲವಂಗ, ದಾಲ್ಚಿನ್ನಿ, ಪರಿಮಳದ ಎಲೆ ಮತ್ತು ಉಪ್ಪನ್ನು ಹಾಕಿ 15 ನಿಮಿಷ ಸಾಮಾನ್ಯ ಉರಿಯಲ್ಲಿ, ಅರ್ಧ ಬೇಯಿಸಬೇಕು.

5. ಇದಾದ ಬಳಿಕ, ಉಳಿದ ನೀರನ್ನು ಸೋಸಿ. ಒಂದು ಬಟ್ಟಲಲ್ಲಿ ಹಾಕಿ ಹರಡಿ, ಆರಲು ಬಿಡಿ.

6. ಹಾಲಿಗೆ ಕೇಸರಿ ಎಳೆಯನ್ನು ಬೆರೆಸಿ ಒಂದೆಡೆ ಇಡಿ.

7. ಒಂದು ಪಾತ್ರೆಯಲ್ಲಿ ಒಂದು ಚಮಚ ಎಣ್ಣೆಯನ್ನು ಹಾಕಿ. ಹೆಚ್ಚಿಕೊಂಡ ಈರುಳ್ಳಿಯನ್ನು ಹಾಕಿ ಹುರಿಯಿರಿ. ಅವು ಹೊಂಬಣ್ಣಕ್ಕೆ ತಿರುಗಿದ ಮೇಲೆ ಉರಿಯಿಂದ ಕೆಳಗಿಳಿಸಿ. ಒಂದೆಡೆ ಇಡಿ.

8. ದಪ್ಪ ತಳದ ಪಾತ್ರೆಯಲ್ಲಿ 3 ಚಮಚ ಎಣ್ಣೆಯನ್ನು ಹಾಕಿ, ನಂತರ ಬೇಯಿಸಿಕೊಂಡ ಹಲಸಿನ ಸೊಳೆಯ ಚೂರನ್ನು ಹಾಕಿ ಸ್ವಲ್ಪ ಹುರಿಯಿರಿ.

9. ನಂತರ ಬೇಯಿಸಿಕೊಂಡ ಅನ್ನವನ್ನು ಎರಡು ಪಾಲು ಮಾಡಿ ಒಂದು ಪಾಲನ್ನು ಹಾಕಿ. ನಂತರ ಇದರ ಮೇಲೆ ತುಪ್ಪವನ್ನು ಹಾಕಿ.

10 ಇದರ ಮೇಲೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು ಮತ್ತು ಪುದೀನವನ್ನು ಬೆರೆಸಿ.

11. ನಂತರ ಇದರ ಮೇಲೆ ಕೇಸರಿ ಬೆರೆಸಿದ ಹಾಲನ್ನು 1/2 ಚಮಚ ಹಾಕಿ.

12. ಇದರ ಮೇಲೆ ತಯಾರಿಸಿಕೊಂಡ ಬಿರಿಯಾನಿ ಮಸಾಲವನ್ನು ಹಾಕಬೇಕು.

13. ನಂತರ ಉಳಿದ ಅನ್ನವನ್ನು ಇದರ ಮೇಲೆ ಹಾಕಿರಿ.

14. ನಂತರ ಹುರಿದುಕೊಂಡ ಈರುಳ್ಳಿಯನ್ನು ಇದರ ಮೇಲೆ ಹರಡಿ. ಉಳಿದ ಬಿರಿಯಾನಿ ಮಸಾಲಗಳನ್ನು ಹಾಕಿ ಒಂದು ಮುಚ್ಚಲನ್ನು ಮುಚ್ಚಿ. ಸುತ್ತಲು ಹವೆ ಹೊರಗಡೆ ಹೋಗದಂತೆ ಗೋಧಿ ಹಿಟ್ಟಿನ ಮುದ್ದೆಯಿಂದ ಮುಚ್ಚಿರಿ.

15. ದೊಡ್ಡ ಉರಿಯಲ್ಲಿ 2 ನಿಮಿಷ ಬೇಯಿಸಿ. ನಂತರ ಸಣ್ಣ ಉರಿಯಲ್ಲಿ 15-20 ನಿಮಿಷ ಬೇಯಿಸಬೇಕು.

16. ಬೆಂದಮೇಲೆ ಉರಿಯನ್ನು ಆರಿಸಿ. ಆರಿಸಿದ ಬಳಿಕ 10 ನಿಮಿಷದ ವರೆಗೂ ಮುಚ್ಚಳವನ್ನು ತೆಗೆಯದಿರಿ.

17. ಬಳಿಕ ಮುಚ್ಚಳನ್ನು ತೆರೆದು ನಿಧಾನವಾಗಿ ತಿರುವಿ. ಮಿಶ್ರಗೊಳಿಸಿದ ನಂತರ ತಿನ್ನಲು ನೀಡಿ.

[ of 5 - Users]
Story first published: Sunday, July 23, 2017, 7:05 [IST]
Please Wait while comments are loading...
Subscribe Newsletter