Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸೇಬು ಕರಜಿಕಾಯಿ ಮತ್ತು ಗೊಜ್ಜು ರೆಸಿಪಿ
ಸೇಬು ಹಣ್ಣು ಹೋಗಲಿ, ಚೇಪೆ ಕಾಯಿ ಅಥವಾ ಮಾವಿನ ಕಾಯಿ ತೋಟದಿಂದ ಒಂದೇ ಒಂದು ಕದ್ದರೂ ಸಾಕು ಮಾಲಿ ರುಮಾಲಿನಿಂದ ಬೀಸುತ್ತಾನೆ. ಇನ್ನು ತೋಟಕ್ಕೇ ನುಗ್ಗಿ ಎಷ್ಟು ಬೇಕಾದರೂ ತಿನ್ನಲು ಅವಕಾಶ ನೀಡಿದರೆ? ಈ ಅವಕಾಶ ಕರ್ನಾಟಕದಲ್ಲಂತೂ ಸಿಗಲಿಕ್ಕಿಲ್ಲ, ಅಮೆರಿಕಾದಲ್ಲಿ ಸಿಗುತ್ತದೆ. ತೋಟಕ್ಕೇ ನುಗ್ಗಿ ಮನಸೋ ಇಚ್ಛೆ ಸೇಬು ಹಣ್ಣು ತಿಂದು ಜೋಳಿಗೆಯನ್ನೂ ತುಂಬಿಸಿಕೊಂಡು ಬರಲು ಅಲ್ಲಿ ಬಿಡಿಗಾಸೂ ಕೊಡಬೇಕಾಗಿಲ್ಲ. ಅಂಥ ಅವಕಾಶ ಬಾಚಿಕೊಂಡು ಅದರಿಂದಲೇ ವಿವಿಧಮಯ ತಿನಿಸುಗಳನ್ನು ಲೇಖಕಿ ದಟ್ಸ್ ಕನ್ನಡ ಓದುಗರಿಗಾಗಿ ನೀಡಿದ್ದಾರೆ.
* ವೈಶಾಲಿ ಹೆಗಡೆ, ಬೋಸ್ಟನ್, ಯುಎಸ್ಎ
ಇಲ್ಲಿ, ನಮ್ಮ ಊರಿನಲ್ಲಿ ಈಗ ಸೇಬು ಸೀಸನ್. ಹಣ್ಣಿನ ತೋಟಗಳಿಗೆ ಹೋಗಿ ನಾವೇ ಎಷ್ಟು ಬೇಕಾದರೂ ಕೊಯ್ದುಕೊಂಡು ಬರಬಹುದು. ತೋಟದಲ್ಲಿ ತಿಂದರೆ ದುಡ್ಡು ಕೂಡ ಕೊಡಬೇಕಿಲ್ಲ. ಯಾಕೆ ತೋಟದ ಕಾಯಿ ಕಿತ್ತಿದ್ದು ಎಂದು ಓಡಿಸಿಕೊಂಡು ಬರುವುದಿಲ್ಲ. ಚಿಕ್ಕ ಮಕ್ಕಳಿಗಂತೂ ಪುಟ್ಟ ಮರದಿಂದ ಹಣ್ಣು ಕೀಳುವುದೊಂದು ಮೋಜಿನ ಆಟ. ಹೀಗೆ, ನಾನು, ನನ್ನ ಮೂರು ವರ್ಷದ ಮಗಳು ನಮ್ಮ ಮನೆಯ ಹತ್ತಿರದ ಒಂದು ಹಣ್ಣಿನ ತೋಟಕ್ಕೆ ಹೋಗಿ ರಾಶಿ ರಾಶಿ ಹಣ್ಣು ಕೊಯ್ದು ಬುಟ್ಟಿ ತುಂಬಿಸಿ ತಂದೆವು.
ನಾವೆಲ್ಲ ರುಚಿಕರ ತಾಜಾ ಹಣ್ಣು ಎಂದು ತೋಟದಲ್ಲಿಯೇ ಸಾಕಷ್ಟು ತಿಂದು ತೇಗಿದ್ದರಿಂದ, ಡೈನಿಂಗ್ ಟೇಬಲ್ ಮೇಲೆ ಬುಟ್ಟಿಯಲ್ಲಿ ಕುಳಿತು ಪಿಳುಕಿಸುವ ಹಣ್ಣುಗಳನ್ನು ಕೇಳುವರು ಗತಿಯಿರಲಿಲ್ಲ. ನನ್ನ ಪುಟ್ಟ ಮಗನಿಗೆ ಒಂದಿಷ್ಟು ತುರಿದು ತುರಿದು ತಿನ್ನಿಸಿದ್ದಾಯಿತು. ಮಗಳಂತೂ ಗಿಣಿಮರಿಯಂತೆ ಪುಟ್ಟ ಪುಟ್ಟ ಸೇಬು ಹುಡುಕಿ ಎಲ್ಲಾ ಖಾಲಿ ಮಾಡಿದ್ದಾಯಿತು. ನಮ್ಮೆಜಮಾನರ, ನನ್ನ, ಊಟದ ಡಬ್ಬಿಗಳಿಗೆ ಒಂದಿಷ್ಟು ಟ್ರಾನ್ಸ್ ಫರ್ ಮಾಡಿದ್ದಾಯಿತು. ಏನೇ ಮಾಡಿದರೂ ಡೈನಿಂಗ್ ಟೇಬಲ್ ಮೇಲಿನ ಹಣ್ಣಿನ ಅಕ್ಷಯ ಪಾತ್ರೆ ಖಾಲಿಯಾಗುವ ಸೂಚನೆಯೇ ಇಲ್ಲ.
ಆಗ ನೋಡಿ ಶುರುವಾಯಿತು ನನ್ನ ಸೇಬು ಹೊಸರುಚಿ. ಆ ಪಾಕಶಾಲೆಯ ಪ್ರಯೋಗಗಳಲ್ಲಿ ಉತ್ತೀರ್ಣವಾಗಿ ಹೊರಬಂದ ಕೆಲವು ರೆಸಿಪಿಗಳನ್ನು ಇಲ್ಲೇ ನಿಮ್ಮ ಮುಂದೆ ಇಡುತ್ತಿದ್ದೇನೆ.
1) ಸೇಬು ಕರಜಿಕಾಯಿ
ಬೇಕಾಗುವ ಪದಾರ್ಥಗಳು :
ಮೈದಾ - 1 ಕಪ್ಪು
ಸಣ್ಣ ರವೆ - ¼ ಕಪ್ಪು
ಉಪ್ಪು - ಒಂದು ಚಿಟಿಕೆ
ಎಣ್ಣೆ - ಕರಿಯಲು
ಹೂರಣಕ್ಕೆ :
ಮೀಡಿಯಂ ಸೈಜ್ ಆಪಲ್ - 2 ಸಿಪ್ಪೆ ಸುಳಿದು ಚಿಕ್ಕದಾಗಿ ಕತ್ತರಿಸಿದ್ದು
ಯಾಲಕ್ಕಿ ಪುಡಿ, ಲವಂಗದ ಪುಡಿ
4 ದೊಡ್ಡ ಚಮಚ ಸಕ್ಕರೆ ಅಥವಾ, ಬೆಲ್ಲದ ಪುಡಿ
ಚಿಟಿಕೆ ಉಪ್ಪು
ವಿಧಾನ : ಹೂರಣದ ಸಾಮಗ್ರಿಗಳನ್ನು ಒಂದು ಪಾತ್ರೆಯಲ್ಲಿ ಚೆನ್ನಾಗಿ ಕಲಸಿಕೊಳ್ಳಿ. ಮೈದಾ, ರವೆ ಹಾಗೂ ಉಪ್ಪು ಸೇರಿಸಿ ಹಿಟ್ಟನ್ನು ಚಪಾತಿ ಹಿಟ್ಟಿನಂತೆ ಕಲಸಿಕೊಳ್ಳಿ. ಪೂರಿಯಂತೆ ಚಿಕ್ಕ ಉಂಡೆಗಳನ್ನು ಮಾಡಿ ಲಟ್ಟಿಸಿ. ಅಂದಾಜು 1-1.5 ಚಮಚ ಹೂರಣದ ಸೇಬು ಮಿಶ್ರಣವನ್ನು ತುಂಬಿ ಕರಜಿಕಯಿಯಂತೆ ಅಂಚನ್ನು ಮಡಿಚಿ. ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಬರುವಂತೆ ಕರಿಯಿರಿ. ಬೇಕಾದರೆ ಮೇಲಿಂದ ಸ್ವಲ್ಪ ಸಕ್ಕರೆ ಪುಡಿ ಉದುರಿಸಬಹುದು.
2) ಸೇಬು ಗೊಜ್ಜು
ಬೇಕಾಗುವ ಪದಾರ್ಥಗಳು :
ಸೇಬು ಹೋಳುಗಳು - 1 ಕಪ್ಪು
ಕಾಯಿ ತುರಿ - 1 ಕಪ್ಪು
ಎಳ್ಳು - ¼ ಕಪ್ಪು
ಉಪ್ಪು, ಹುಳಿ
ಹಸಿ /ಒಣ ಮೆಣಸಿನಕಾಯಿ - 5
ಎಣ್ಣೆ - ಒಗ್ಗರಣೆಗೆ
ವಿಧಾನ-1
ಒಗ್ಗರಣೆಗೆ ಸಾಸಿವೆ, ಜೀರಿಗೆ ಹಾಕಿ, ಚಿತಿಗುಟ್ಟಿದ ಮೇಲೆ, ಎಳ್ಳನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ಸೇಬು, ಮೆಣಸು, ಉಪ್ಪು, ಹುಳಿ ಹಾಕಿ ಸ್ವಲ್ಪ ನೀರು ಚುಮುಕಿಸ್ ಬೇಯಿಸಿರಿ. ಈ ಮಿಶ್ರಣಕ್ಕೆ ಕಾಯಿ ತುರಿ ಸೇರಿಸಿ ನುಣ್ಣಗೆ ರುಬ್ಬಿ. ಅನ್ನದ ಜೊತೆ ಬಡಿಸಿ.
ವಿಧಾನ -2
ಒಗ್ಗರಣೆಗೆ ಸಾಸಿವೆ, ಜೀರಿಗೆ ಹಾಕಿ, ಚಿತಿಗುಟ್ಟಿದ ಮೇಲೆ, ಎಳ್ಳನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ಮೆಣಸು, ಉಪ್ಪು, ಹುಳಿ, ಕಾಯಿ ಸೇರಿಸಿ ರುಬ್ಬಿಕೊಳ್ಳಿ. ಪಾತ್ರೆಗೆ ಈ ಮಿಶ್ರಣ, ನೀರು ಸೇರಿಸಿ, ಕುದಿಯಲು ಇಡಿ. ಸೇಬು ಹೋಳುಗಳನ್ನು ಸೇರಿಸಿ ಕುದಿಸಿ. ಬಿಸಿ ಅನ್ನದ ಜೊತೆ ರುಚಿಯಾಗಿ ತಿನ್ನಿ.



Click it and Unblock the Notifications
