ಗರ್ಭಿಣಿಯರಿಗೆ ಚಳಿಯಿಂದ ರಕ್ಷಣೆ ಪಡೆಯಲು ಅಮೂಲ್ಯ ಸಲಹೆ

By Super

ಗರ್ಭಿಣಿಯರ ಶರೀರ ಶಿಶುವಿನ ಬೆಳವಣಿಗೆಯೊಂದಿಗೇ ದಿನೇ ದಿನೇ ಬದಲಾವಣೆ ಹೊಂದುತ್ತಾ ಹೋಗುತ್ತದೆ. ಚಳಿಗಾಲದಲ್ಲಿ ತಣ್ಣನೆಯ ಹವೆಯ ಜೊತೆಗೆ ಇನ್ನೂ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಬದಲಾಗುತ್ತಿರುವ ಶರೀರದ ಜೊತೆಗೇ ಬದಲಾಗುತ್ತಿರುವ ಹವಾಮಾನದ ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯವಾಗಿದೆ.

ಗರ್ಭಿಣಿಯರಿಗೆ ಹೆಚ್ಚಿನ ಪೌಷ್ಟಿಕಾಂಶವುಳ್ಳ ಆಹಾರ, ನಿದ್ದೆ ಮತ್ತು ಸೂಕ್ತ ವ್ಯಾಯಾಮದ ಅವಶ್ಯಕತೆಯಿದೆ. ಚಳಿಗಾಲದಲ್ಲಿ ಹೊರಹೋಗುವ ಪ್ರಮೇಯ ಕಡಿಮೆಯಾಗುವ ಕಾರಣ ವ್ಯಾಯಾಮಕ್ಕೆ ತಡೆಯುಂಟಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ಗರ್ಭವತಿಯರು, ಅದರಲ್ಲೂ ಕೊನೆಯ ತಿಂಗಳುಗಳನ್ನು ಕಳೆಯುತ್ತಿರುವವರಿಗೆ ಚಳಿಗಾಲ ಒಂದು ಸತ್ವಪರೀಕ್ಷೆಯಾಗಿದೆ.

ಚಳಿಗಾಳದ ಗಾಳಿಯಲ್ಲಿ ತೇಲಿ ಬರುವ ಸಾವಿರಾರು ಬ್ಯಾಕ್ಟೀರಿಯಾ, ವೈರಸ್ಸುಗಳು ಶರೀರವನ್ನು ಸುಲಭವಾಗಿ ಆಕ್ರಮಿಸಿಕೊಂಡು ಶೀತ ನೆಗಡಿ ಜ್ವರಗಳಿಗೆ ಕಾರಣವಾಗುತ್ತವೆ. ಕೆಲವೊಮ್ಮೆ ತಲೆಸುತ್ತು, ತಲೆನೋವು ಸಹಾ ಬರಬಹುದು. ಚಳಿಯಲ್ಲಿ ವಿಪರೀತವಾಗಿ ಒಣಗುವ ಚರ್ಮ ತುರಿಕೆ ಹಾಗೂ ಉರಿಗೂ ಕಾರಣವಾಗಬಹುದು. ಗರ್ಭಾವಸ್ಥೆಯಲ್ಲಿರುವ ಗರ್ಭಿಣಿಯರಿಗೆ ಸೂಕ್ತ ಸಲಹೆಗಳು

ಇವೆಲ್ಲಾ ಪ್ರತ್ಯಕ್ಷ ಉಪಟಳಗಳಾದರೆ ಪರೋಕ್ಷವಾಗಿ ಬೇರೆ ತೊಂದರೆಗಳೂ ಎದುರಾಗಬಹುದು. ಸಾಧಾರಣವಾಗಿ ಆರನೆಯ ತಿಂಗಳ ಬಳಿಕ ಹೊಟ್ಟೆ ಸುಮಾರಾಗಿ ಮುಂದೆ ಬಂದಿರುವ ಕಾರಣ ಗರ್ಭವತಿಯರು ಕೊಂಚ ಹಿಂದಕ್ಕೆ ಬಾಗಿ ನಡೆಯಬೇಕಾಗುತ್ತದೆ. ಒಂದು ವೇಳೆ ಚಳಿಯಿಂದಾಗಿ ತೇವಗೊಂಡಿರುವ ನೆಲದ ಮೇಲೆ ಜಾರುವ ಸಂಭವ ಹೆಚ್ಚಾಗಿರುತ್ತದೆ.

ಇದು ತಾಯಿ ಹಾಗೂ ಮಗು ಇಬ್ಬರಿಗೂ ಘಾಸಿಯುಂಟುಮಾಡಬಹುದು. ಚಳಿಗಾಲದಲ್ಲಿ ಗರ್ಭವತಿಯರು ವಹಿಸಬೇಕಾದ ಎಚ್ಚರಗಳ ಕುರಿತು ಹಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಈ ಸಲಹೆಗಳನ್ನು ಪಾಲಿಸುವ ಮೂಲಕ ಚಳಿಗಾಲದಲ್ಲೂ ಗರ್ಭವತಿಯರು ಸುರಕ್ಷಿತರಾಗಿದ್ದು ಆರೋಗ್ಯ ಕಾಪಡಿಕೊಳ್ಳಬಹುದು. ನವಮಾಸ ಪೂರ್ತಿಯಾದ ಬಳಿಕ ಆರೋಗ್ಯವಂತ ಹಸುಕಂದನನ್ನು ಮಡಿಲಿನಲ್ಲಿ ಆಡಿಸಬಹುದು.

ಚಳಿಗಾಲದಲ್ಲಿ ಬೆಚ್ಚನೆಯ ಉಡುಗೆಗಳನ್ನೇ ತೊಡಿರಿ


ಚಳಿಗಾಲದಲ್ಲಿ ಶರೀರದಿಂದ ಶಾಖವು ಶೀಘ್ರವಾಗಿ ಕಳೆದುಕೊಳ್ಳುವ ಕಾರಣ ಈ ಶಾಖವನ್ನು ಉಳಿಸಿಕೊಳ್ಳಲು ಸದಾ ಬೆಚ್ಚನೆಯ ಉಣ್ಣೆಯ ಬಟ್ಟೆಗಳನ್ನು ತೊಡಿರಿ. ಒಂದಕ್ಕಿಂತ ಹೆಚ್ಚು ಉಡುಗೆಗಳನ್ನು ತೊಡುವುದರಿಂದ ಶಾಖ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ತಲೆಯ ಮೇಲೆಯೂ ಉಣ್ಣೆಯ ಟೊಪ್ಪಿ, ಕಿವಿ ಮುಚ್ಚಿಕೊಳ್ಳುವಂತೆ ಧರಿಸುವುದೂ ಉತ್ತಮ. ಕೈ ಮತ್ತು ಕಾಲಿನ ಬೆರಳುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಮನೆಯೊಳಗಿದ್ದಾಗಲೂ ಕಡಿಮೆಯಾದರೂ ಸರಿ, ಬೆಚ್ಚನೆಯ ಉಡುಗೆಗಳನ್ನೇ ತೊಡಿರಿ.

ತೇವಾಂಶ ಒದಗಿಸುವ ಸಾಧನವನ್ನು ಅಳವಡಿಸಿ (Humidifier)


ನಮ್ಮ ಚರ್ಮಕ್ಕೆ ಗಾಳಿಯಲ್ಲಿ ತೇವಾಂಶವಿರುವುದು ಅಗತ್ಯ. ತೇವಾಂಶವಿಲ್ಲದಿದ್ದರೆ ಚರ್ಮ ಒಣಗುತ್ತದೆ ಹಾಗೂ ನಿಧಾನವಾಗಿ ಬಿರುಕುಗಳು ಮೂಡತೊಡಗುತ್ತವೆ. ಅದರಲ್ಲೂ ಏಕಪದರವಿರುವ ಮೂಗಿನ ಒಳಭಾಗದಲ್ಲಿ ಬಿರುಕು ಮೂಡಿದ ಕೂಡಲೇ ರಕ್ತ ಜಿನುಗಲು ಪ್ರಾರಂಭವಾಗುತ್ತದೆ. ಇದು ಅಸ್ತಮಾ ಹಾಗೂ ಶ್ವಾಸಸಂಬಂಧಿ ತೊಂದರೆಗಳಿಗೆ ಆಹ್ವಾನ ನೀಡುತ್ತದೆ. ಈ ತೊಂದರೆಯಿಂದ ಮುಕ್ತಿ ಪಡೆಯಲು ಮನೆಯಲ್ಲಿ ತೇವಾಂಶ ಒದಗಿಸುವ ಸಾಧನವೊಂದನ್ನು ಅಳವಡಿಸಿ ಗಾಳಿಯಲ್ಲಿ ಆರ್ದ್ರತೆ ಸದಾ ಇರುವಂತೆ ನೋಡಿಕೊಳ್ಳಬಹುದು.

ಬಾಡಿ ಲೋಶನ್ (Body Lotion) ಹಚ್ಚಿಕೊಳ್ಳಿರಿ


ಗಾಳಿಯಲ್ಲಿ ತೇವಾಂಶ ಕಡಿಮೆಯಾದಾಗ ಚರ್ಮ ಬಿರಿಬಿಡಲು ತೊಡಗುತ್ತದೆ. ಮನೆಯಲ್ಲಿ ತೇವಾಂಶ ನೀಡುವ ಸಾಧನವಿದ್ದರೂ ಹೊರಗಡೆ ಹೋದಾಗ ಒಣಹವೆ ಚರ್ಮವನ್ನು ಬಿರಿಬಿಡುವಂತೆ ಮಾಡುತ್ತದೆ. ಇದರಿಂದ ಪಾರಾಗಲು ಉತ್ತಮ ಗುಣಮಟ್ಟದ ಬಾಡಿ ಲೋಶನ್ ದ್ರವವನ್ನು ಚರ್ಮಕ್ಕೆ ಹಚ್ಚಿಕೊಳ್ಳಿರಿ. ನಿಮ್ಮ ಮಗುವಿಗಾಗಿ ಆಯ್ದುಕೊಳ್ಳುವ ಲೋಶನ್ ನಿಮಗೂ ಅತ್ಯುತ್ತಮವಾಗಿದೆ. ಏಕೆಂದರೆ ಗರ್ಭಾವಸ್ಥೆಯಲ್ಲಿ ಗರ್ಭಿಣಿಯರ ಚರ್ಮ ಮಗುವಿನಂತೆ ಸುಕೋಮಲವಾಗಿರುತ್ತದೆ. ಗರ್ಭಿಣಿ ಪತ್ನಿಯ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಹೇಗೆ?

ಸಾಕಷ್ಟು ನೀರು ಕುಡಿಯಿರಿ


ಗರ್ಭಿಣಿಯರಿಗೆ ದಿನವಿಡೀ ಸಾಕಷ್ಟು ನೀರು ಕುಡಿಯುತ್ತಿರುವುದು ಅಗತ್ಯವಾಗಿದೆ. ಆದರೆ ಚಳಿಗಾಲದಲ್ಲಿ ವಿಶೇಷವಾಗಿ ಹೆಚ್ಚು ನೀರು ಕುಡಿಯುವುದು ಅಗತ್ಯ. ಏಕೆಂದರೆ ಚಳಿಗಾಲದಲ್ಲಿಯೂ ನಮ್ಮ ದೇಹ ಸಾಕಷ್ಟು ನೀರನ್ನು ಬೆವರಿನ ಮೂಲಕ ಕಳೆದುಕೊಳ್ಳುತ್ತದೆ. ಅಲ್ಲದೇ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಹೆಚ್ಚಿನ ನೀರು ಮತ್ತು ಆಹಾರದ ಅವಶ್ಯಕತೆಯಿದೆ. ಸಾಮಾನ್ಯವಾಗಿ ದಿನಕ್ಕೆ ಎಂಟು ಲೋಟ ನೀರು ಕುಡಿಯುತ್ತಿದ್ದಲ್ಲಿ ಚಳಿಗಾಲದಲ್ಲಿ ಹನ್ನೆರಡು ಲೋಟ ಕುಡಿಯಬೇಕು.
ಈ ಹೆಚ್ಚಿನ ನೀರು ದೇಹದ ಇತರ ಭಾಗಗಳ ಜೊತೆಗೆ ಗರ್ಭಾಶಯಕ್ಕೆ ಅವಶ್ಯವಿರುವ ಆಮ್ನಿಯಾಟಿಕ್ ದ್ರವ(amniotic fluid)ವನ್ನು ಹೆಚ್ಚಿಸಲು ಸಹಕರಿಸುತ್ತದೆ. ಈ ದ್ರವ ಗರ್ಭದ ಬೆಳವಣಿಗೆಗೆ ಹಾಗೂ ಪೂರ್ಣಾವಧಿ ಕಳೆದ ಬಳಿಕವೇ ಪ್ರಸವಿಸಲು ಅಗತ್ಯವಾಗಿದೆ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ತಲೆನೋವು, ಚರ್ಮದ ತುರಿಕೆ ಮೊದಲಾದ ತೊಂದರೆಗಳು ಹಾಗೂ ನಿಗದಿತ ಸಮಯಕ್ಕಿಂತಲೂ ಮೊದಲೇ ಪ್ರಸವವಾಗುವ ಅಪಾಯವಿದೆ.

X
Desktop Bottom Promotion