ಗರ್ಭಾವಸ್ಥೆಯಲ್ಲಿರುವ ಮಹಿಳೆಯರಿಗೆ 7 ಆರೋಗ್ಯಕರ ಪಾನೀಯಗಳು

ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಕುಡಿಯ ಉತ್ತಮ ಆರೋಗ್ಯಕ್ಕಾಗಿ ಪ್ರತಿ ಗರ್ಭವತಿಗೂ ಅತ್ಯುತ್ತಮ ಆಹಾರ ಸೇವಿಸುವ ಅಗತ್ಯವಿದೆ. ಇಂದಿನ ದಿನಗಳಲ್ಲಿ ಕೈಗೆಟುಕುವಂತೆ ಲಭ್ಯವಿರುವ ಸಿದ್ಧ ಆಹಾರಗಳಿಗೆ ಗುಲಾಮರಾಗಿರುವ ನಾವು ಅವುಗಳ ದುಷ್ಪರಿಣಾಮಗಳನ್ನು ಅರಿಯದೇ ಉಳಿದ ನಮ್ಮ ಸಮಯ ಹಾಗೂ ಶ್ರಮವನ್ನು ಕೊಂಡಾಡುತ್ತೇವೆ.

ಆದರೆ ಗರ್ಭದಲ್ಲಿ ಬೆಳೆಯುತ್ತಿರುವ ಕಂದನ ಹಾಗೂ ತಾಯಿಯಾಗುತ್ತಿರುವವಳ ಆರೋಗ್ಯವನ್ನು ಪರಿಗಣಿಸಿದರೆ ಸಿದ್ಧ ಆಹಾರಗಳನ್ನು ವಿವೇಚನೆಯಿಲ್ಲದೇ ಸೇವಿಸುವುದು ಇಬ್ಬರ ಆರೋಗ್ಯಕ್ಕೂ ಮಾರಕವಾಗಬಲ್ಲದು. ಶಿಶುವಿನ ಬೆಳವಣಿಗೆಯ ಕಾಲದಲ್ಲಿ ಗರ್ಭವತಿಗೆ ಬೆಳಗಿನ ಕಾಲ ಹೆಚ್ಚು ಸುಸ್ತು ಆವರಿಸುವುದರಿಂದ ದೇಹಕ್ಕೆ ಹೆಚ್ಚಿನ ದ್ರವಾಹಾರ ಅಗತ್ಯವಾಗಿದೆ.

ಈ ಅವಶ್ಯಕತೆಯನ್ನು ಪೂರೈಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿದ್ಧ ಪೇಯಗಳನ್ನು ಸೇವಿಸುವ ಮುನ್ನ ಅವುಗಳ ಪರಿಣಾಮಗಳನ್ನು ತಿಳಿದುಕೊಂಡಿರುವುದು ಅಗತ್ಯ. ಸೋಡಾ, ಬುರುಗು ಸೇರಿಸಿದ ಪೇಯ (carbonated drinks), ಮದ್ಯ, ಸಿದ್ಧರೂಪದಲ್ಲಿ ಸಿಗುವ ಹಣ್ಣಿನ ರಸಗಳನ್ನು ಸೇವಿಸದಿರಲು ವೈದ್ಯರು ಸಲಹೆ ನೀಡುತ್ತಾರೆ.

ಗರ್ಭಕಾಲದಲ್ಲಿ ತಾಯಿಯಾಗುತ್ತಿರುವವಳ ದೇಹಕ್ಕೆ ಹೆಚ್ಚಿನ ನೀರು ಅಗತ್ಯ. ದಿನವಿಡೀ ಕೊಂಚ ಕೊಂಚವಾಗಿ ಶುದ್ಧ ನೀರನ್ನು ಸೇವಿಸುತ್ತಲೇ ಇರುವುದರಿಂದ ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು, ಮೂತ್ರಕೋಶದ ಸೋಂಕು ತಡೆಯಲು, ಮಲಬದ್ಧತೆಯಿಂದ ದೂರವಿರಲು, ಚರ್ಮದಡಿ ನೀರು ತುಂಬಿಕೊಳ್ಳುವುದನ್ನು (Edema) ತಡೆಯಲು, ಒಟ್ಟಾರೆ ಇಡಿಯ ದೇಹದ ಆರೋಗ್ಯಕ್ಕೆ ಶುದ್ಧ ನೀರು ಅಗತ್ಯವಾಗಿದೆ. ಆದರೆ ನೀರಿನ ಹೊರತಾಗಿ ಬೇರೆ ದ್ರವಹಾರ ಬೇಕೇ ಬೇಕಲ್ಲವೇ? ಏನನ್ನು ಆರಿಸಿಕೊಳ್ಳುವುದು ಎಂಬ ದ್ವಂದ್ವವನ್ನು ನಿವಾರಿಸುವ ನಿಟ್ಟಿನಲ್ಲಿ ಗರ್ಭಿಣಿಗೆ ಅಗತ್ಯವಾದ ಏಳು ಅತ್ಯುತ್ತಮ ಪೇಯಗಳನ್ನು ಈ ಕೆಳಗಿ ಪರಿಚಯಿಸಲಾಗಿದೆ.

ಗರ್ಭಾವಸ್ಥೆಯಲ್ಲಿರುವ ಗರ್ಭಿಣಿಯರಿಗೆ ಸೂಕ್ತ ಸಲಹೆಗಳು

ಗ್ರೀನ್ ಟೀ (ಹಸಿರು ಚಹಾ)

ಗ್ರೀನ್ ಟೀ (ಹಸಿರು ಚಹಾ)

ಚೀನಾದಲ್ಲಿ ಸಾವಿರಾರು ವರ್ಷಗಳ ಹಿಂದೆ ಸೇವನೆ ಪ್ರಾರಂಭವಾಗಿದ್ದರೂ ಭಾರತದಲ್ಲಿ ಜನಮನ್ನಣೆ ಪಡೆಯುತ್ತಿರುವುದು ತೀರಾ ಇತ್ತೀಚಿನ ವರ್ಷಗಳಲ್ಲಿ. ರುಚಿಯಲ್ಲಿ ಸಾಂಪ್ರಾದಾಯಿಕ ಕಪ್ಪು ಚಹಾವನ್ನು ಸರಿಗಟ್ಟದ ಹಸಿರು ಚಹಾ ಆರೋಗ್ಯದ ವಿಷಯದಲ್ಲಿ ತುಂಬಾ ಉಪಕಾರಿಯಾಗಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು, ವಿಟಮಿನ್ ಸಿ, ಇ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಆಲ್ಜೀಮರ್ ಕಾಯಿಲೆ, ಬುದ್ಧಿಮಾಂದ್ಯತೆಗಳನ್ನು ತಡೆಗಟ್ಟುವ ಗುಣಹೊಂದಿದೆ. ಅಲ್ಲದೇ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟರಾಲ್ (ಎಲ್. ಡಿ.ಎಲ್ ಅಥವಾ ಲೋ ಡಿನ್ಸಿಟಿ ಲಿಪಿಡ್ಸ್) ಗಳನ್ನು ಕಡಿಮೆಗೊಳಿಸುವ, ದೇಹದ ಕೊಬ್ಬನ್ನು ಕರಗಿಸುವ ಅಂಶಗಳನ್ನೂ ಹೊಂದಿವೆ. ಈ ಗುಣಗಳು ಗರ್ಭಿಣಿಗೂ ಅಗತ್ಯವಿರುವ ಕಾರಣ ದಿನದಲ್ಲಿ ಎರಡು ಅಥವಾ ಮೂರು ಕಪ್ ಹಸಿರು ಚಹಾ ಕುಡಿಯುವುದು ಆರೋಗ್ಯದಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತದೆ.

ಹಾಲು

ಹಾಲು

ಹಸುವಿನ ಹಾಲಿನಲ್ಲಿ ಹೆಚ್ಚಿನ ಮಟ್ಟದ ಕ್ಯಾಲ್ಸಿಯಂ ಲಭ್ಯವಿದ್ದು ಮಗುವಿನ ಮೂಳೆಗಳ ಬೆಳವಣಿಗೆಗೆ ಅಗತ್ಯವಾಗಿದೆ. ಅಲ್ಲದೇ ಮಾನಸಿಕವಾಗಿ ಶಾಂತವಾಗಿರಲು ಹಾಗೂ ಉದ್ವೇಗಗೊಳ್ಳದೇ ಇರಲು ರಕ್ತದಲ್ಲಿ ಸೆರೋಟೋನಿನ್ ಎಂಬ ಕಿಣ್ವ ಉತ್ಪತ್ತಿಯಾಗಲೂ ಹಾಲು ಸಹಕಾರಿಯಾಗಿದೆ. ಆದರೆ ಹಾಲುಪುಡಿಯಿಂದ ತಯಾರಿಸಿದ, ಲಾಂಗ್ ಲೈಫ್ ಮಿಲ್ಕ್ ಎಂದು ಮಾರುಕಟ್ಟೆಯಲ್ಲಿ ಸಿಗುವ (UHT Treated) ಹಾಲು, ವಿಭಿನ್ನ ಹಣ್ಣುಗಳ ರುಚಿ ಹಾಗೂ ಸ್ವಾದಗಳನ್ನು ಸೇರಿಸಿದ ಟೋನ್ಡ್ ಮಿಲ್ಕ್ ಮೊದಲಾದವುಗಳನ್ನು ಸೇವಿಸದಿರುವುದು ಒಳ್ಳೆಯದು. ಹಸುವಿನ ಹಾಲನ್ನು ಬಿಸಿ ಮಾಡಿ ಸಕ್ಕರೆ ಸೇವಿಸದೇ ಬೆಳಿಗೆ ಮತ್ತು ರಾತ್ರಿ ಮಲಗುವ ಮುನ್ನ ಸೇವಿಸುವುದು ಉತ್ತಮ ನಿದ್ರೆಗೂ ಆರೋಗ್ಯಕ್ಕೂ ಸಹಕಾರಿಯಾಗಿದೆ.

ಬೆಣ್ಣೆಹಣ್ಣು (Avocado)

ಬೆಣ್ಣೆಹಣ್ಣು (Avocado)

ಬಟರ್ ಫ್ರೂಟ್ ಎಂದು ನಾವು ಕರೆಯುವ ಬೆಣ್ಣೆಹಣ್ಣು ಅತ್ಯುತ್ತಮ ಪೋಷಕವಸ್ತುಗಳ ಆಗರವಾಗಿದೆ. ಇದರಲ್ಲಿರುವ ಓಲಿಕ್ ಆಸಿಡ್ ದೇಹಕ್ಕೆ ಅಗತ್ಯವಾದ ಕೊಬ್ಬನ್ನು (HDL-High density Lipid) ಹೊಂದಿದ್ದು ಕೆಟ್ಟ ಕೊಲೆಸ್ಟ್ರಾಲ್ ದೂರಮಾಡಿ ಹೃದಯಾಘಾತ ಮತ್ತು ಹೃದಯಸಂಬಂಧಿ ಕಾಯಿಲೆಗಳಿಂದ ದೂರವಿಡುತ್ತದೆ. ಕಡಿಮೆ ಸಕ್ಕರೆ, ಹೆಚ್ಚಿನ ಪ್ರೋಟೀನ್, ಪೊಟ್ಯಾಶಿಯಂ, ರಕ್ತ ಹೆಪ್ಪುಗಟ್ಟಲು ಅಗತ್ಯವಾದ ವಿಟಮಿನ್ ಕೆ, ವಿಟಮಿನ್ B6, ವಿಟಮಿನ್ B5, ವಿಟಮಿನ್ C, ಮತ್ತು ವಿಟಮಿನ್ E.2 ಹಾಗೂ ಉತ್ತಮ ಪ್ರಮಾಣದ ನಾರು ಹೊಂದಿದೆ. ಇವೆಲ್ಲವೂ ಗರ್ಭಿಣಿಯ ಆರೋಗ್ಯಕ್ಕೆ ಪೂರಕವಾಗಿದ್ದು ಬೆಣ್ಣೆಹಣ್ಣಿನ ತಿರುಳನ್ನು ಮೊಸರು ಅಥವಾ ಹಾಲಿನಲ್ಲಿ ಜೇನಿನೊಂದಿಗೆ ಸೇರಿಸಿ ದಿನಕ್ಕೆರೆಡು ಬಾರಿ ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು.

ಕಿತ್ತಳೆ ಹಣ್ಣಿನ ರಸ

ಕಿತ್ತಳೆ ಹಣ್ಣಿನ ರಸ

ತಾಜಾ ಕಿತ್ತಳೆ ಹಣ್ಣಿನ ರಸ ವಿಟಮಿನ್ ಸಿ ಆಗರವಾಗಿದೆ. ಗರ್ಭಕಾಲದಲ್ಲಿ ಹಲವು ಸೋಂಕುಗಳಿಗೆ ದೇಹ ಎದುರಾಗಬೇಕಾಗುತ್ತದೆ. ಆಗ ವಿಟಮಿನ್ ಸಿ. ಅಗತ್ಯವಾಗಿ ಬೇಕಾಗುತ್ತದೆ. ದೇಹದಿಂದ ವಿಷಕಾರಕ ವಸ್ತುಗಳನ್ನು ಹೊರಹಾಕಲೂ ವಿಟಮಿನ್ ಸಿ ಅಗತ್ಯವಿದೆ. ದಿನಕ್ಕೆ ಒಂದು ಅಥವಾ ಎರಡು ಲೋಟ ತಾಜಾ ಕಿತ್ತಳೆಗಳ ರಸವನ್ನು ಸಕ್ಕರೆ ರಹಿತವಾಗಿ ಸೇವಿಸುವುದರಿಂದ ಆರೋಗ್ಯ ಉತ್ತಮಗೊಳ್ಳುವುದು.

ಕ್ಯಾಮೋಮೈಲ್ ಚಹಾ

ಕ್ಯಾಮೋಮೈಲ್ ಚಹಾ

ಹಲವು ಕಷಾಯಗಳು ಗರ್ಭವತಿಗೆ ಉತ್ತಮ ಎಂದು ಆಯುರ್ವೇದ ತಿಳಿಸುತ್ತದೆ. ಕ್ಯಾಮೋಮೈಲ್ ಹೂವುಗಳ ದಳಗಳನ್ನು ಒಣಗಿಸಿ ತಯಾರಿಸಲಾದ ಕ್ಯಾಮೋಮೈಲ್ ಚಹಾದಲ್ಲಿ ಸುಖನಿದ್ದೆಗೆ ಪೂರಕವಾದ ಗುಣಗಳಿವೆ. ಉದ್ವೇಗವನ್ನು ಕಳೆಯಲು, ವಾಕರಿಕೆ, ಅಜೀರ್ಣ ಮೊದಲಾದವು ಕ್ಯಾಮೋಮೈಲ್ ಚಹಾ ಸೇವನೆಯಿಂದ ದೂರವಾಗುತ್ತದೆ. ಆದರೆ ಹೆಚ್ಚಿನ ಸೇವನೆ ಮಗುವಿನ ಬೆಳವಣಿಗೆಗೆ ಅಡ್ಡಿಯಾಗಬಹುದಾದುದರಿಂದ ರಾತ್ರಿ ಮಲಗುವ ಮುನ್ನ ಸುಮಾರು ಅರ್ಧ ಕಪ್ ಕುಡಿದರೆ ಸಾಕಾಗುತ್ತದೆ.

ಚೆರ್ರಿ ಹಣ್ಣಿನ ರಸ

ಚೆರ್ರಿ ಹಣ್ಣಿನ ರಸ

ಸಾಧಾರಣವಾಗಿ ಮಗುವಿನ ಬೆಳವಣಿಗೆಯ ಕಾಲದಲ್ಲಿ ಗರ್ಭಿಣಿ ರಾತ್ರಿ ನಿದ್ರೆ ಬರದೇ ಹೊರಳಾಡುತ್ತಿರುತ್ತಾಳೆ. ಹಲವು ಅನೈಚ್ಛಿಕ ಕಾರ್ಯಗಳು ರಾತ್ರಿಯ ವಿಶ್ರಾಂತಿಯ ವೇಳೆಯಲ್ಲಿ ನಡೆಯುವಾಗ ಹೆಚ್ಚಿನ ರಕ್ತ ಸಂಚಾರವನ್ನು ಬೇಡುವುದರಿಂದ ಮೆದುಳಿಗೆ ರಕ್ತಪರಿಚಲನೆ ಕಡಿಮೆಯಾಗಿ ನಿದ್ದೆಯಲ್ಲಿ ವ್ಯತ್ಯಯವುಂಟಾಗಬಹುದೆಂದು ಹಲವು ವೈದ್ಯರು ಅಭಿಪ್ರಾಯಪಡುತ್ತಾರೆ. ಅಲ್ಲದೇ ಪದೇ ಪದೇ ಮೂರ್ತವಿಸರ್ಜನೆಗೂ ಅವಸರವಾಗುವುದರಿಂದ ಸುಖನಿದ್ದೆಗೆ ಭಂಗ ಬರುತ್ತದೆ. ಈ ಸ್ಥಿತಿಯನ್ನು ಸುಧಾರಿಸಲು ಮೆಲಟೋನಿನ್ ಎಂಬ ಆಂಟಿ ಆಕ್ಸಿಡೆಂಟ್ ರಕ್ತದಲ್ಲಿ ಹೆಚ್ಚಿಸಬೇಕಾಗುತ್ತದೆ. ಚೆರ್ರಿ ಹಣ್ಣಿನಲ್ಲಿ ಮೆಲಟೋನಿನ್ ಹೇರಳವಾಗಿದ್ದು ಸುಖನಿದ್ದೆಗೆ ಪೂರಕವಾಗಿದೆ. ಸುಖನಿದ್ದೆಯ ಮೂಲಕ ದೇಹದ ಸಕಲ ಸ್ನಾಯುಗಳು ಸಡಿಲಗೊಂಡು ಸಂಪೂರ್ಣ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆ.

ಶುಂಠಿ ಬೆರೆಸಿದ ಚಹಾ

ಶುಂಠಿ ಬೆರೆಸಿದ ಚಹಾ

ಗರ್ಭ ನಿಂತ ಸುಮಾರು ನಾಲ್ಕು ವಾರಗಳ ಬಳಿಕ ಗರ್ಭಿಣಿ ಬೆಳಗೆದ್ದ ಬಳಿಕ ಹಲವು ಬಾರಿ ವಾಂತಿ ಮಾಡಿಕೊಳ್ಳುವಂತಾಗುತ್ತದೆ. morning sickness ಎಂದು ಕರೆಯಲ್ಪಡುವ ಈ ಸ್ಥಿತಿಗೆ ಕನ್ನಡದಲ್ಲಿ ಬಸಿರುಬೇನೆ ಅಥವಾ ಬಸಿರುಬೇನೆ ಎಂದು ಕರೆಯುತ್ತಾರೆ. ಈ ವಾಂತಿಯನ್ನು ನಿಲ್ಲಿಸಲು ಶುಂಠಿರಸವನ್ನು ಬೆರೆಸಿದ ಹಾಲಿಲ್ಲದ ಚಹಾ ಉತ್ತಮವಾಗಿದೆ. ಶುಂಠಿಯಲ್ಲಿ ಸುಮಾರು ಹನ್ನೆರಡು ವಿಧದ ಆಂಟಿ ಆಕ್ಸಿಡೆಂಟುಗಳು ಲಭ್ಯವಿದ್ದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಬಸಿರು ಬೇನೆ ಇಲ್ಲದ ಹೊತ್ತಿನಲ್ಲಿ ಶುಂಠಿಯ ಸೇವನ ಮಗುವಿನ ಬೆಳವಣಿಗೆಗೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಸೇವನೆ ಸಲ್ಲದು ಎಂದು ಕೆಲವು ವೈದ್ಯರು ಅಭಿಪ್ರಾಯಪಡುತ್ತಾರೆ.


X
Desktop Bottom Promotion