Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಹೆರಿಗೆಯಾದ ಬಳಿಕ ಬಾಡಿ ಮಸಾಜ್ ನಿಜಕ್ಕೂ ಅಗ್ಯತವಿದೆಯೇ?
ಒಂದು ಜೀವಿಯನ್ನು ಹುಟ್ಟುಹಾಕುವ ಕಾರ್ಯವನ್ನು ಮಹಿಳೆಯಿಂದ ಮಾತ್ರ ಮಾಡಲು ಸಾಧ್ಯ. ಇದು ನೈಸರ್ಗಿಕ ನಿಯಮ ಕೂಡ. ಆದರೆ ಈ ಪ್ರಕ್ರಿಯೆ ಮಾತ್ರ ದೀರ್ಘಕಾಲ ಹಿಡಿಯುತ್ತದೆ ಮತ್ತು ಅಷ್ಟೇ ಕ್ಲಿಷ್ಟಕರ ಕೂಡ ಆಗಿರುತ್ತದೆ. ಗರ್ಭಾವಸ್ಥೆಯ ಆರಂಭದಲ್ಲಿ ಮಾತ್ರ ಮಹಿಳೆಯರಿಗೆ ಆನಂದದಾಯಕ ಅನುಭವ ಉಂಟಾಗಬಹುದು. ಆದರೆ ಆನಂತರದಲ್ಲಿ ಕಾಡುವ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು, ಆರೋಗ್ಯದ ಅಸ್ವಸ್ಥತೆಗಳು ಮಹಿಳೆಯರಿಗೆ ರಾತ್ರಿಯ ಸಮಯದಲ್ಲಿ ನಿದ್ರೆ ಬರದಂತೆ ಮಾಡುತ್ತವೆ.
ಅದರಲ್ಲೂ ಹೆರಿಗೆಯ ಆಸುಪಾಸಿನಲ್ಲಿ ಕಂಡುಬರುವ ಹೊಟ್ಟೆ ನೋವು ವಿಪರೀತ ಮಾನಸಿಕ ಹಿಂಸೆಗೆ ಕಾರಣವಾಗುತ್ತದೆ. ಕೆಲವು ಮಹಿಳೆಯರು ಹೆರಿಗೆ ಸಂದರ್ಭವನ್ನು ನೆನಪಿಸಿಕೊಳ್ಳಲು ಸಹ ಹಿಂದೇಟು ಹಾಕುತ್ತಾರೆ. ಹೆರಿಗೆಯ ನಂತರದಲ್ಲಿ ಮಾಡಿಕೊಳ್ಳುವ ಮಸಾಜ್ ಪ್ರಕ್ರಿಯೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಮಹಿಳೆಯರಿಗೆ ಅನುಕೂಲಕರ. ಆದರೆ ಬಹುತೇಕ ಮಹಿಳೆಯರಿಗೆ ಈ ವಿಚಾರ ಗೊತ್ತಿಲ್ಲ. ಕೆಲವರು ಗೊತ್ತಿದ್ದರೂ ಸಹ ಅನುಸರಿಸಲು ಹೋಗುವುದಿಲ್ಲ. ಆದರೆ ಆರೋಗ್ಯ ತಜ್ಞರ ಪ್ರಕಾರ ಇದು ಲಾಭದಾಯಕ.

ಪ್ರಸವಾನಂತರದ ಮಸಾಜ್ ಎಂದರೇನು?
ಗರ್ಭಿಣಿ ಮಹಿಳೆಗೆ ಹೆರಿಗೆಯ ಸಂದರ್ಭ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಅಸ್ವಸ್ಥತೆಯನ್ನು ಉಂಟು ಮಾಡಿರುತ್ತದೆ. ಹೆರಿಗೆಯ ಸಂದರ್ಭದಲ್ಲಿ ಕಂಡು ಬರುವ ನೋವು ಮಾನಸಿಕವಾಗಿ ಕುಗ್ಗುವಂತೆ ಮತ್ತು ದೈಹಿಕವಾಗಿ ಸಾಕಷ್ಟು ಬಳಲುವಂತೆ ಮಾಡಿಬಿಟ್ಟಿರುತ್ತದೆ. ಹಾಗಾಗಿ ಇದು ಮಾತ್ರೆಗಳನ್ನು ಅಥವಾ ಔಷಧಿಗಳನ್ನು ತೆಗೆದುಕೊಂಡು ಪರಿಹಾರ ಮಾಡಿಕೊಳ್ಳುವ ಸಮಯ ಅಂತೂ ಖಂಡಿತ ಅಲ್ಲ. ಇದಕ್ಕೆ ಉತ್ತಮವಾದ ಅನುಭವಿ ಮಸಾಜ್ ತೆರಪಿಸ್ಟ್ ನಿಂದ ಸಂಪೂರ್ಣ ದೈಹಿಕ ಮಸಾಜ್ ಪಡೆದುಕೊಂಡರೆ ಮನಸ್ಸು ಮತ್ತು ದೇಹ ವಿಶ್ರಾಂತ ಸ್ಥಿತಿಗೆ ತಲುಪಿದ ಅನುಭವ ಉಂಟಾಗುತ್ತದೆ. ಮುಖ್ಯವಾಗಿ ಮನಸ್ಸು ಬಹಳಷ್ಟು ಪ್ರಶಾಂತವಾಗುತ್ತದೆ. ಇದನ್ನು ಪ್ರಸವಾನಂತರದ ಮಸಾಜ್ ಎಂದು ಕರೆಯುತ್ತಾರೆ.

ಪ್ರಸವಾನಂತರದ ಮಸಾಜ್ ಯಾವಾಗ ತೆಗೆದುಕೊಳ್ಳುವುದು ಉತ್ತಮ?
ಹೆರಿಗೆಯ ನಂತರದಲ್ಲಿ ಮಹಿಳೆ ಆರೋಗ್ಯದಲ್ಲಿ ಸುಧಾರಣೆ ಕಾಣಲು ಮತ್ತು ಮನಸ್ಸಿಗೆ ಮೊದಲಿನಂತೆ ಆರಾಮದಾಯಕ ಅನುಭವ ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅಂತಹ ಸಂದರ್ಭವನ್ನು ಪ್ರಸವಾನಂತರದ ಮಸಾಜ್ ಪಡೆದುಕೊಳ್ಳಲು ಬಳಸಿಕೊಳ್ಳಬಹುದು. ಸ್ತ್ರೀ ರೋಗ ತಜ್ಞರ ಪ್ರಕಾರ ಮಹಿಳೆ ತನ್ನ ಹೆರಿಗೆಯನ್ನು ಸಿಸೇರಿಯನ್ ಅಥವಾ ನಾರ್ಮಲ್ ಆಗಿ ಮಾಡಿಕೊಂಡಿದ್ದರೆ, ಹೆರಿಗೆಯ ನಂತರ ಸುಮಾರು ಆರರಿಂದ ಎಂಟು ವಾರಗಳ ಕಾಲಾವಕಾಶ ಬೇಕಾಗಬಹುದು. ಆದರೆ ಇದು ಸಂಪೂರ್ಣವಾಗಿ ಮಹಿಳೆಯ ದೈಹಿಕ ಸ್ಥಿತಿಯ ಮೇಲೆ ಅವಲಂಬಿತವಾಗಿರುವುದರಿಂದ ಆರೋಗ್ಯ ತಜ್ಞರನ್ನು ಕೇಳಿ ತಿಳಿದುಕೊಳ್ಳುವುದು ಒಳ್ಳೆಯದು.

ಹೆರಿಗೆಯ ನಂತರದಲ್ಲಿ ಮಸಾಜ್ ಅವಶ್ಯಕವೇ?
ಆರೋಗ್ಯ ತಜ್ಞರ ಪ್ರಕಾರ ಹೆರಿಗೆಯ ನಂತರದಲ್ಲಿ ಮಹಿಳೆ ಸಂಪೂರ್ಣ ದೈಹಿಕ ಮಸಾಜ್ ಪಡೆದುಕೊಳ್ಳುವುದರಿಂದ ಕೆಲವೊಂದು ಒಳ್ಳೆಯ ಆರೋಗ್ಯದ ಲಾಭಗಳು ಸಿಗುತ್ತವೆ.

ಮೈ ಕೈ ನೋವು ದೂರವಾಗುತ್ತದೆ
ಹೆರಿಗೆಯ ಸಂದರ್ಭದಲ್ಲಿ ಉಂಟಾದ ಕೆಳಭಾಗದ ಬೆನ್ನಿನ ನೋವು, ಸೊಂಟದ ನೋವು ದೂರ ಆಗಬೇಕಾದರೆ ಮಸಾಜ್ ಪ್ರಕ್ರಿಯೆ ಬಹಳ ಅನುಕೂಲಕರ. ದೇಹದ ಮಾಂಸ ಖಂಡಗಳು ವಿಶ್ರಾಂತಗೊಳ್ಳುತ್ತವೆ. ಮಸಾಜ್ ನಂತರದಲ್ಲಿ ಇದರಿಂದ ಸಾಕಷ್ಟು ಆರಾಮದಾಯಕ ಅನುಭವ ಉಂಟಾಗುತ್ತದೆ.

ಮಾಂಸ ಖಂಡಗಳ ಉರಿಯೂತ ದೂರವಾಗುತ್ತದೆ
ಸ್ತ್ರೀ ರೋಗ ತಜ್ಞರು ಹೇಳುವ ಪ್ರಕಾರ ಗರ್ಭಿಣಿ ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ದೇಹದಲ್ಲಿ ರಕ್ತ ಸಂಚಾರ ಶೇಕಡಾ 50% ಹೆಚ್ಚಾಗಿರುತ್ತದೆ. ಆದರೆ ಹೆರಿಗೆಯ ನಂತರ ದೇಹದಲ್ಲಿ ಕಂಡು ಬರುವ ಇತರ ದ್ರವಾಂಶಗಳ ಜೊತೆಗೆ ರಕ್ತ ಸಂಚಾರ ಕೂಡ ಸಮತೋಲನ ಆಗುತ್ತದೆ. ಹೆರಿಗೆ ನಂತರದಲ್ಲಿ ಮಸಾಜ್ ಮಾಡಿಸಿಕೊಳ್ಳುವುದರಿಂದ ದೇಹದಲ್ಲಿ ರಕ್ತ ಸಂಚಾರ ವೃದ್ಧಿಸುತ್ತದೆ ಜೊತೆಗೆ ವಿಷಕಾರಿ ತ್ಯಾಜ್ಯಗಳು ದೇಹದಿಂದ ದೂರವಾಗುತ್ತವೆ. ಆಂತರಿಕವಾಗಿ ದೈಹಿಕ ಅಂಗಾಂಗಗಳ ಸ್ವಚ್ಛತೆ ನಿರ್ಮಾಣವಾಗುತ್ತದೆ.

ರಾತ್ರಿಯ ಸಮಯದಲ್ಲಿ ಒಳ್ಳೆಯ ನಿದ್ರೆ ಬರುತ್ತದೆ
ಮಸಾಜ್ ಪ್ರಕ್ರಿಯೆಯಿಂದ ದೀರ್ಘಕಾಲದ ನಿದ್ರಾಹೀನತೆ ಸಮಸ್ಯೆ ಇಲ್ಲವಾಗುತ್ತದೆ ಎಂದು ಹೇಳುತ್ತಾರೆ. ರಾತ್ರಿಯ ಸಮಯದಲ್ಲಿ ದೇಹಕ್ಕೆ ಒಳ್ಳೆಯ ವಿಶ್ರಾಂತಿ ಮತ್ತು ನಿದ್ರೆ ಬರಲು ಇದು ಅನುಕೂಲಕರವಾಗಿರುತ್ತದೆ.

ಮುಚ್ಚಿಕೊಂಡ ಗ್ರಂಥಿಗಳು ತೆರೆಯಲ್ಪಡುತ್ತವೆ
ಮಹಿಳೆಯರ ಸ್ತನಗಳ ಭಾಗದಲ್ಲಿ ಉಂಟಾಗುವ ಸಣ್ಣಸಣ್ಣ ಗಂಟುಗಳು ತಮ್ಮ ಗಾತ್ರ ಕಳೆದುಕೊಂಡು ಮುಚ್ಚಿದ ಗ್ರಂಥಿಗಳು ತೆರೆದುಕೊಂಡು ದೇಹದಲ್ಲಿ ದ್ರವದ ಅಂಶಗಳ ಚಲನೆಗೆ ಅನುಕೂಲ ಮಾಡಿಕೊಡುತ್ತದೆ.

ಆರೋಗ್ಯ ಸುಧಾರಣೆ ವೇಗವಾಗಿ ನಡೆಯುತ್ತದೆ
ಮೊದಲೇ ಹೇಳಿದಂತೆ ಮಸಾಜ್ ಪ್ರಕ್ರಿಯೆಯಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಆರೋಗ್ಯದ ಅನುಕೂಲತೆಗಳು ಇರುವುದರಿಂದ ದೇಹದಲ್ಲಿ ಹಾರ್ಮೋನುಗಳ ಸಮತೋಲನ ಕೂಡ ಆಗುವುದರಿಂದ ಹೆರಿಗೆ ನಂತರದಲ್ಲಿ ಮಹಿಳೆಯ ಆರೋಗ್ಯ ಚೇತರಿಸಿಕೊಳ್ಳುವಲ್ಲಿ ಇದು ಪ್ರಮುಖ ಪಾತ್ರ ಬೀರುತ್ತದೆ. ಮಾನಸಿಕ ಖಿನ್ನತೆ ದೂರವಾಗಿ ಮನಸ್ಸಿನ ಸ್ಥಿತಿ ಆರೋಗ್ಯಕರವಾಗಿರಲು ಇದು ಅನುಕೂಲ ಮಾಡಿಕೊಡುತ್ತದೆ.
ಮಸಾಜ್ ಮಾಡುವ ಪ್ರಕ್ರಿಯೆಯಲ್ಲಿ ಅನುಕೂಲಕರವಾಗುವ ಕೆಲವೊಂದು ಭಂಗಿಗಳು ಮತ್ತು ತಂತ್ರಗಳು
ಹೆರಿಗೆಯ ನಂತರದಲ್ಲಿ ಮಹಿಳೆಯರು ದೈಹಿಕವಾಗಿ ತೆಗೆದುಕೊಳ್ಳುವ ಮಸಾಜ್ ಪ್ರಕ್ರಿಯೆಗೆ ಆಕೆ ಮಲಗಿಕೊಳ್ಳುವ ಕೆಲವೊಂದು ಭಂಗಿ ಹೆಚ್ಚು ಅನುಕೂಲಕರ ಎಂದು ಹೇಳಬಹುದು.
ಉದಾಹರಣೆಗೆ: ಸಿಸೇರಿಯನ್ ಹೆರಿಗೆ ಪ್ರಕ್ರಿಯೆಗೆ ಒಳಗಾದ ಮಹಿಳೆ ಒಂದು ಬದಿಯಲ್ಲಿ ಮಲಗಿಕೊಂಡು ಮಸಾಜ್ ಮಾಡಿಸಿಕೊಳ್ಳುವುದರಿಂದ ದೇಹಕ್ಕೆ ಹೆಚ್ಚು ಅನುಕೂಲವಾಗಲಿದೆ. ಆರಾಮವಾಗಿ ಚೇರ್ ಮೇಲೆ ಕುಳಿತುಕೊಳ್ಳುವ ಹಾಗೆ ಕುಳಿತುಕೊಂಡು ಮಸಾಜ್ ಮಾಡಿಸಿಕೊಳ್ಳುವುದರಿಂದ ಕೂಡ ಸಾಕಷ್ಟು ಪ್ರಯೋಜನಗಳಿವೆ.
ಇನ್ನೂ ಕೆಲವು ಮಹಿಳೆಯರು ಹೊಟ್ಟೆ ನೆಲದ ಕಡೆಗೆ ಮಾಡಿಕೊಂಡು ಮಲಗಿ ಮಸಾಜ್ ಮಾಡಿಸಿಕೊಳ್ಳಲು ಮುಂದಾಗುತ್ತಾರೆ. ಆದರೆ ಸ್ತನಗಳ ಸೋರಿಕೆ ಇರುವ ಮಹಿಳೆಯರಿಗೆ ಇದು ಸ್ವಲ್ಪ ಕಷ್ಟಕರ ಅನುಭವ ಎನಿಸಬಹುದು.

ಪ್ರಸವಾನಂತರದ ಮಸಾಜ್ ತಂತ್ರಗಳು
ಹೆರಿಗೆ ನಂತರ ಮಹಿಳೆಯರು ದೈಹಿಕವಾಗಿ ತಾವು ತೆಗೆದುಕೊಳ್ಳಲು ಬಯಸುವ ಮಸಾಜ್ ಪ್ರಕ್ರಿಯೆಗೆ ಕೇವಲ ಅನುಭವಿ ಮಸಾಜ್ ತೆರಪಿಸ್ಟ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಹೆರಿಗೆಯ ನಂತರದಲ್ಲಿ ಯಾವ ಮಹಿಳೆಯರಿಗೆ ಯಾವ ಮಸಾಜ್ ಪ್ರಕ್ರಿಯೆ ಸೂಕ್ತ ಎಂಬುದು ಇವರಿಗೆ ಚೆನ್ನಾಗಿ ತಿಳಿದಿರುತ್ತದೆ. ಅದರಂತೆ ಕೆಲವೊಂದು ತಂತ್ರಗಳನ್ನು ಅವರು ಅನುಸರಿಸುತ್ತಾರೆ. ಉದಾಹರಣೆಗೆ,

1 ಸ್ವೀಡಿಶ್ ಮಸಾಜ್
ಸಾಧಾರಣವಾಗಿ ಬಹುತೇಕ ಹೆರಿಗೆಯ ನಂತರದ ಮಹಿಳೆಯರಿಗೆ ಮಸಾಜ್ ತೆರಪಿಸ್ಟ್ ಈ ತಂತ್ರವನ್ನು ಅನುಸರಿಸುತ್ತಾರೆ. ದೀರ್ಘವಾದ ಮಸಾಜ್ ಜೊತೆಗೆ ಮಾಂಸಖಂಡಗಳನ್ನು ಆಡಿಸುವುದು ಮತ್ತು ಸಣ್ಣದಾಗಿ ಟ್ಯಾಪ್ ಮಾಡುವುದು ಈ ಮಸಾಜ್ ಪ್ರಕ್ರಿಯೆಯಲ್ಲಿ ಅಡಗಿರುತ್ತದೆ. ಇದು ಮನಸ್ಸಿಗೆ ಮತ್ತು ದೇಹಕ್ಕೆ ಸಾಕಷ್ಟು ವಿಶ್ರಾಂತ ಅನುಭವವನ್ನು ಉಂಟು ಮಾಡುತ್ತದೆ.

2 ಜಾಮು ಮಸಾಜ್
ಇಂಡೋನೇಷಿಯಾದ ಪ್ರಜೆಗಳು ಈ ಮಸಾಜ್ ತಂತ್ರವನ್ನು ಅನುಸರಿಸುವುದರಲ್ಲಿ ನಿಪುಣರು. ಮುಖ್ಯವಾಗಿ ಈ ಮಸಾಜ್ ತಂತ್ರದಲ್ಲಿ ಗಿಡಮೂಲಿಕೆಗಳ ಬೇರುಗಳು, ಚಕ್ಕೆಗಳು ಮತ್ತು ಹೂವುಗಳನ್ನು ನೈಸರ್ಗಿಕ ವಿಧಾನದ ಔಷಧಿಗಳ ರೂಪದಲ್ಲಿ ಬಳಕೆ ಮಾಡಲಾಗುತ್ತದೆ. ಹೆರಿಗೆಯ ನಂತರದಲ್ಲಿ ಜೋತುಬಿದ್ದ ಹೊಟ್ಟೆಯ ಭಾಗವನ್ನು ಭದ್ರವಾಗಿ ಮಸಾಜ್ ಮಾಡುವ ಮೂಲಕ ಅಲ್ಲಿನ ಮಾಂಸಖಂಡಗಳನ್ನು ಗಟ್ಟಿಯಾಗುವಂತೆ ಮಾಡಿ ಸೊಂಟದ ಭಾಗದ ಚರ್ಮ ಮತ್ತೆ ಮೊದಲಿನಂತೆ ಆಗುವಲ್ಲಿ ಈ ಮಸಾಜ್ ಪ್ರಕ್ರಿಯೆ ಬಹಳ ಅನುಕೂಲಕಾರಿ.

3 ಪಾದದ ಭಾಗದ ಮಸಾಜ್
ಇದನ್ನು ಆಕ್ಯುಪ್ರೆಶರ್ ಮಸಾಜ್ ಅಂತಲೂ ಕರೆಯಬಹುದು. ಕಾಲಿನ ಪಾದಗಳಲ್ಲಿ ಕಂಡುಬರುವ ಕೆಲವು ಆಕ್ಯುಪ್ರೆಶರ್ ಪಾಯಿಂಟ್ ಗಳನ್ನು ಗುರುತಿಸಿ ಅವುಗಳನ್ನು ಕೇಂದ್ರೀಕರಿಸಿ ಒತ್ತಿ ಮಾಡುವ ಮಸಾಜ್ ಪ್ರಕ್ರಿಯೆ ಇದಾಗಿರುತ್ತದೆ. ಇದರಿಂದ ಬಹಳ ಪರಿಣಾಮಕಾರಿಯಾಗಿ ಮಾನಸಿಕ ಖಿನ್ನತೆ, ದೇಹದ ಸುಸ್ತು ಮತ್ತು ಮಾನಸಿಕ ಒತ್ತಡ ದೂರವಾಗುತ್ತದೆ. ಇದು ಕೇವಲ ಪಾದದ ಭಾಗಕ್ಕೆ ಮಾತ್ರ ಸೀಮಿತ ಎಂದು ಹೇಳುವುದು ಸಾಧ್ಯವಿಲ್ಲ. ದೇಹದ ಎಲ್ಲಾ ಭಾಗಗಳಲ್ಲಿ ಕಂಡುಬರುವ ಆಕ್ಯುಪ್ರೆಶರ್ ಪಾಯಿಂಟ್ಗಳನ್ನು ಗುರುತಿಸಿ ಮಸಾಜ್ ಮಾಡಬಹುದು.

4 ಗಿಡಮೂಲಿಕೆ ನೀರಿನಿಂದ ಸ್ನಾನ
ಹೆರಿಗೆಯ ನಂತರದಲ್ಲಿ ಮಹಿಳೆಯರಿಗೆ ಮಸಾಜ್ ಪ್ರಕ್ರಿಯೆಯ ಜೊತೆಗೆ ವಿವಿಧ ಬಗೆಯ ಮಸಾಲೆ ಪದಾರ್ಥಗಳು ಮತ್ತು ಗಿಡಮೂಲಿಕೆಗಳನ್ನು ಬಳಕೆ ಮಾಡಿಕೊಂಡು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ದೈಹಿಕ ತಾಜಾತನ ಹೆಚ್ಚಾಗುತ್ತದೆ.
ಸಿಸೇರಿಯನ್ ಅಥವಾ ಸಿ - ಸೆಕ್ಷನ್ ಹೆರಿಗೆಗೆ ಒಳಗಾದವರು ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆ ಕ್ರಮಗಳು
ಇಂತಹ ಮಹಿಳೆಯರು ಮಸಾಜ್ ಪ್ರಕ್ರಿಯೆಗೆ ಒಳಗಾಗುವ ಮುಂಚೆ ಈ ಕೆಳಗಿನ ಕೆಲವೊಂದು ಅತ್ಯಂತ ಸೂಕ್ಷ್ಮವಾದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು. ಅವುಗಳೆಂದರೆ
1 ಚೆನ್ನಾಗಿ ಅನುಭವ ಪಡೆದಿರುವ ಮಸಾಜ್ ತೆರಪಿಸ್ಟ್ ಆಯ್ಕೆ ಮಾಡಿಕೊಳ್ಳುವುದು
2 ಸಿಸೇರಿಯನ್ ಗಾಯ ಸಂಪೂರ್ಣವಾಗಿ ಮಾಗಿದ ನಂತರವಷ್ಟೇ ಮಸಾಜ್ ಮಾಡಿಸಿಕೊಳ್ಳಲು ಮುಂದಾಗಿ. ಇಲ್ಲವೆಂದರೆ ಇದು ಸೋಂಕಿಗೆ ಕಾರಣವಾಗಬಹುದು.
3 ಯಾವುದೇ ಕಾರಣಕ್ಕೂ ಹೊಟ್ಟೆಯ ಭಾಗದಲ್ಲಿ ಮಸಾಜ್ ಮಾಡಿಸಿಕೊಳ್ಳಲು ಹೋಗಬೇಡಿ. ಸಂಪೂರ್ಣವಾಗಿ ಆರಾಮವಾದ ನಂತರ ಮಸಾಜ್ ಮಾಡಿಸಿಕೊಂಡರೆ ಉತ್ತಮ. ಈ ಸಮಯದಲ್ಲಿ ಕೇವಲ ತಲೆಯ ಭಾಗ, ಬೆನ್ನಿನ ಭಾಗ, ತೋಳುಗಳು ಮತ್ತು ಕಾಲುಗಳನ್ನು ಮಾತ್ರ ಮಸಾಜ್ ಮಾಡಿಸಿಕೊಳ್ಳಬೇಕು.
4 ಹೊಟ್ಟೆಯ ಭಾಗದಲ್ಲಿ ಯಾವುದೇ ಒತ್ತಡವನ್ನು ಹಾಕಬಾರದು
5 ಹಿಂಬದಿಯ ಮಸಾಜ್ ಪ್ರಕ್ರಿಯೆಯ ಸಂದರ್ಭದಲ್ಲಿ ಒಂದು ಬದಿಯಲ್ಲಿ ಮಲಗಿಕೊಳ್ಳಲು ಪ್ರಯತ್ನಿಸಿ
6 ಮಗುವಿನ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ನಿಪ್ಪಲ್ ಗಳ ಮಸಾಜ್ ಮಾಡಿಸಿಕೊಳ್ಳದೆ ಇರುವುದು ಒಳ್ಳೆಯದು.
7 ಕೆಲವು ಮಸಾಜ್ ತೆರಪಿಸ್ಟ್ ಗಳು ಕೆಲವೊಂದು ಗಿಡಮೂಲಿಕೆಗಳ ಮತ್ತು ಸುಗಂಧ ದ್ರವ್ಯಗಳ ಬಳಕೆ ಮಾಡಿಕೊಂಡು ಮಸಾಜ್ ಮಾಡಲು ಮುಂದಾಗುತ್ತಾರೆ. ಆದರೆ ಇದು ಎಲ್ಲ ಮಹಿಳೆಯರಿಗೂ ಅನುಕೂಲಕರ ಎಂದು ಹೇಳಲು ಸಾಧ್ಯವಿಲ್ಲ.

ಗರ್ಭಾಶಯದ ಮಸಾಜ್ ಅವಶ್ಯಕವೇ?
ಹೆರಿಗೆ ನಂತರದಲ್ಲಿ ಗರ್ಭಾಶಯದ ಮಸಾಜ್ ಪ್ರಕ್ರಿಯೆ ಒಳ್ಳೆಯದು ಎಂದು ಹೇಳುತ್ತಾರೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಇದರಿಂದ ಅನುಕೂಲತೆ ಉಂಟಾಗುವುದರಿಂದ ನಿಮ್ಮ ದೇಹಕ್ಕೆ ಅನುಕೂಲಕರವಾಗಿರುವ ಮಸಾಜ್ ತಂತ್ರವನ್ನು ನೀವು ಆಯ್ದುಕೊಳ್ಳಬಹುದು.



Click it and Unblock the Notifications











