Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಮಹಿಳೆ ದೇಹದಲ್ಲಿ ಈ ಲಕ್ಷಣಗಳು ಕಂಡುಬಂದರೆ ಅದು ಅಂಡೋತ್ಪತಿಯ ದಿನ
ಗರ್ಭವತಿಯಾಗಬಯಸುವ ಮಹಿಳೆಗೆ ಅಂಡೋತ್ಪತ್ತಿಯ ದಿನ ತಿಳಿಯುವುದು ಅತಿ ಮುಖ್ಯ. ಆದರೆ ಯಾವ ದಿನ ಅಂಡೋತ್ಪತ್ತಿಯಾಗಿದೆ ಎಂದು ತಿಳಿಯುವುದು ಹೇಗೆ? ಸಾಮಾನ್ಯವಾಗಿ ಮಾಸಿಕ ದಿನದಿಂದ ಪ್ರಾರಂಭಿಸಿ ಮುಂದಿನ ಹದಿನಾಲ್ಕನೆಯ ದಿನ ಎಂದು ಹಿರಿಯ ದಾದಿಯರು ಮತ್ತು ತಾಯಂದಿರು ತಮ್ಮ ಅನುಭವದಿಂದ ಹೇಳುತ್ತಾರೆ. ಆದರೆ ವೈದ್ಯ ವಿಜ್ಞಾನ ಈಗ ಬಹಳ ಮುಂದುವರೆದಿದ್ದು ಅಂಡೋತ್ಪತ್ತಿಯ ದಿನದ ಬಗ್ಗೆ ಇನ್ನೂ ಹೆಚ್ಚಿನ ಮತ್ತು ನಿಖರವಾದ ಮಾಹಿತಿಯನ್ನು ನೀಡಬಲ್ಲುದು.

ಮಾಸಿಕ ಋತುಚಕ್ರದ ಫಲವತ್ತತೆಯ ದಿನಗಳಲ್ಲಿ ಗರ್ಭನಿರೋಧಕ ಕ್ರಮಗಳಿಲ್ಲದೇ ಮಿಲನ ನಡೆಸುವ ಆರೋಗ್ಯವಂತ ದಂಪತಿಗಳಲ್ಲಿ ಗರ್ಭಧಾರಣೆಯಾಗುವ ಸಾಧ್ಯತೆ 25 ರಿಂದ 30 ಶೇಕಡಾ ಮಾತ್ರವೇ ಇರುತ್ತದೆ. ಆದರೆ ಇದು ಹಲವಾರು ಸ್ಥಿತಿಗಳನ್ನು ಅವಲಂಬಿಸಿರುತ್ತದೆ.
ವೈದ್ಯ ವಿಜ್ಞಾನದ ಮಾಹಿತಿಗಳ ಪ್ರಕಾರ, ಗರ್ಭಧಾರಣೆಯಾಗಲು ಫಲವತ್ತತೆಯ ದಿನಗಳೆಲ್ಲವೂ ಪ್ರಶಸ್ತವೇ ಆಗಿದ್ದರೂ ಅಂಡೋತ್ಪತ್ತಿಯ ಸಮಯದಲ್ಲಿ (ovulation) ನಡೆಸುವ ಮಿಲನಕಾರ್ಯ ಅತಿ ಹೆಚ್ಚಿನ ಸಾಧ್ಯತೆಯನ್ನು ಹೊಂದಿರುತ್ತದೆ. ಫಲವತ್ತತೆಯ ದಿನಗಳಲ್ಲಿ ಇದು ಅತಿ ಪ್ರಮುಖವಾದ ದಿನವಾಗಿದ್ದು ಈ ಸಮಯದಲ್ಲಿ ಅಂಡಾಣು ಅಂಡಾಶಯದಿಂದ ಬಿಡುಗಡೆಗೊಂಡು ವೀರ್ಯಾಣುವಿನೊಂದಿಗೆ ಮಿಲನಗೊಳ್ಳಲು ಕಾಯುತ್ತದೆ.
ಈ ಅವಧಿ ಅಲ್ಪ ಸಮಯದವರೆಗೆ ಮಾತ್ರವೇ ಇರುತ್ತದೆ. ಅಂದರೆ ಸುಮಾರು ಹನ್ನೆರಡರಿಂದ ಇಪ್ಪತ್ತನಾಲ್ಕು ಘಂಟೆಗಳು ಮಾತ್ರ! ಈ ಅವಧಿಯಲ್ಲಿ ಹಿಂದಿನ ಕೆಲವು ದಿನಗಳಿಂದ ಕಾಯುತ್ತಿದ್ದ ವೀರ್ಯಾಣು ಅಥವಾ ಅಂದಿನ ದಿನದ ವೀರ್ಯಾಣು ಈ ಅಂಡಾಣುವಿನೊಂದಿಗೆ ಮಿಲನಗೊಳ್ಳಲು ಸಫಲವಾಗುತ್ತದೆ. ಈ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಿದಾಗ ಫಲವತ್ತತೆಯ ದಿನಗಳು ಅಂದರೆ ಅಂಡಾಣು ಫಲಿತಗೊಳ್ಳುವ ಸಾಧ್ಯತೆ ಇರುವ ದಿನಗಳು ಸರಿಸುಮಾರು ಆರು ದಿನಗಳು ಮಾತ್ರ!
ಹಾಗಾಗಿ, ಫಲವತ್ತತೆಯ ದಿನಕ್ಕೂ ಮೊದಲೇ ನಡೆಸುವ ಸಂಸರ್ಗದಿಂದ ಗರ್ಭಧಾರಣೆಯಾಗುವ ಸಾಧ್ಯತೆ ಹೆಚ್ಚು. ಅಂಡಾಣು ಅಂಡಾಶಯದಿಂದ ಬಿಡುಗಡೆಗೊಂಡು ಫೆಲೋಪಿಯನ್ ನಾಳ ತಲುಪುವವರೆಗೂ ಸಮಯಾವಕಾಶ ಇರುತ್ತದೆ. ಆ ಸಮಯದವರೆಗೆ ಫಲಿತಗೊಳ್ಳದೇ ಇದ್ದರೆ ಇನ್ನು ಮುಂದಿನ ತಿಂಗಳವರೆಗೆ ಕಾಯಬೇಕಾಗುತ್ತದೆ. ಗರ್ಭಧಾರಣೆಯ ಗರಿಷ್ಟ ಸಾಧ್ಯತೆ ಇರುವ ದಿನ ಅಂಡೋತ್ಪತ್ತಿಯ ದಿನವೇ ಆಗಿರುವ ಕಾರಣ ಈ ದಿನದ ಮಿಲನವನ್ನು ತಪ್ಪಿಸಿಕೊಳ್ಳುವಂತೆಯೇ ಇಲ್ಲ!
ಆದರೆ ಈ ದಿನದ ಪ್ರಾರಂಭ ಎಷ್ಟು ಹೊತ್ತಿಗೆ ಇರುತ್ತದೆ, ಯಾವಾಗ ಕೊನೆಗೊಳ್ಳುತ್ತದೆ ಎಂಬುದು ಗೊತ್ತಿದ್ದರೆ ಸರಿಯಾದ ಸಮಯದ ಸದುಪಯೋಗಪಡಿಸಿಕೊಳ್ಳಬಹುದು. ಆದರೆ ಆ ದಿನ ಎದುರಾಗುವ ಯಾವುದೇ ಅಡ್ಡಿಯಿಂದ ಈ ಅವಕಾಶ ತಪ್ಪಿ ಹೋಗುವ ಸಾಧ್ಯತೆ ಇರುವ ಕಾರಣ ಇದಕ್ಕೂ ಮುನ್ನಾ ದಿನವನ್ನು ದಂಪತಿಗಳು ಪರಿಪೂರ್ಣವಾಗಿ ಉಪಯೋಗಿಸಿಕೊಳ್ಳುವುದರಲ್ಲಿಯೇ ಜಾಣತನವಿದೆ. ಆದ್ದರಿಂದ ಅಂಡೋತ್ಪತ್ತಿಯ ದಿನ ಯಾವಾಗ ಬರುತ್ತದೆ ಎಂಬ ಅಥವಾ ಬಂದಿದ್ದರೆ ಇದರ ಸೂಚನೆಗಳೇನು ಎಂಬ ಮಾಹಿತಿಗಳನ್ನು ತಜ್ಞರು ವಿವರಿಸಿದ್ದು ಈ ಮಾಹಿತಿಯನ್ನು ವಿಸ್ರ್ತೃತವಾಗಿ ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಬನ್ನಿ, ನೋಡೋಣ:

ಅಂಡೋತ್ಪತ್ತಿ ಅಥವಾ ಓವ್ಯುಲೇಶನ್ ಎಂದರೇನು?
ಹೆಣ್ಣು ಮಗು ಹುಟ್ಟಿದಾಗಿನಿಂದಲೇ ಒಂದು ನಿಗದಿತ ಎಣಿಕೆಯ ಅಂಡಾಣುಗಳನ್ನು ತನ್ನ ಅಂಡಾಶಯದಲ್ಲಿ ಇರಿಸಿಕೊಂಡೇ ಹುಟ್ಟಿರುತ್ತದೆ. ಪ್ರಾಪ್ತ ವಯಸ್ಕಳಾದ ಬಳಿಕ ಈಕೆಯ ಅಂಡಾಶಯದಿಂದ ಪ್ರತಿ ತಿಂಗಳೂ ಒಂದು ಅಂಡಾಣು ಬೆಳೆದು ಬಿಡುಗಡೆಯಾಗುತ್ತದೆ. ಬಿಡುಗಡೆಯಾದ ಅಂಡಾಣು ವೀರ್ಯಾಣುವಿನೊಂದಿಗೆ ಮಿಲನಗೊಂಡರೆ ಮುಂದಿನ ಅಂಡಾಣುಗಳು ಬಿಡುಗಡೆಯಾಗುವುದಿಲ್ಲ ಮತ್ತು ಗರ್ಭಾವಸ್ಥೆ ಪ್ರಾರಂಭವಾಗುತ್ತದೆ. ಮಿಲನಗೊಳ್ಳದೇ ಇದ್ದರೆ ತಿಂಗಳಿಗೊಂದು ಬಾರಿ ಇದು ರಕ್ತಸ್ರಾವದ ಮೂಲಕ ವಿಸರ್ಜಿಸಲ್ಪಡುತ್ತದೆ. ಗರ್ಭಾವಸ್ಥೆ ಪ್ರಾರಂಭವಾದರೆ ಹೆರಿಗೆಯ ಬಳಿಕ ಮತ್ತೆ ಈ ಚಕ್ರ ಮುಂದುವರೆಯುತ್ತದೆ. ಎಲ್ಲಿಯವರೆಗೆ ಅಂದರೆ ಅಂಡಾಶಯದಲ್ಲಿರುವ ಎಲ್ಲಾ ಅಂಡಾಣುಗಳು ಬರಿದಾಗುವವರೆಗೆ. ನಂತರ ಈ ಕ್ರಿಯೆ ನಿಲ್ಲುತ್ತದೆ. ಇದಕ್ಕೆ ರಜೋನಿವೃತ್ತಿ ಎನ್ನುತ್ತಾರೆ. ಅಂಡಾಶಯದಿಂದ ಪೂರ್ಣವಾಗಿ ಬೆಳೆದ ಅಂಡಾಣು ಬಿಡುಗಡೆಗೊಳ್ಳುವ ದಿನವೇ ಅಂಡೋತ್ಪತ್ತಿಯ ದಿನ.

ಅಂಡೋತ್ಪತ್ತಿ ಯಾವಾಗ ಸಂಭವಿಸುತ್ತದೆ?
ರಕ್ತಸ್ರಾವದ ಮೂಲಕ ಅಂಡಾಣು ವಿಸರ್ಜನೆಯಾಗುವ ದಿನವನ್ನು ಮೊದಲ ದಿನ ಎಂದು ಪರಿಗಣಿಸಿದರೆ ಮುಂದಿನ ತಿಂಗಳು ಎದುರಾಗುವ ಇದೇ ದಿನದ ನಡುವಣ ಅವಧಿಯನ್ನು ಮಾಸಿಕ ಚಕ್ರ ಎಂದು ಕರೆಯುತ್ತಾರೆ.
ಪ್ರತಿ ಮಹಿಳೆಗೂ ಈ ದಿನಗಳಲ್ಲಿ ಕೊಂಚ ಭಿನ್ನತೆ ಇರಬಹುದು. ಮಾಸಿಕ ಚಕ್ರ ಪ್ರಾರಂಭವಾದ ದಿನದಿಂದ ಪ್ರಾರಂಭಗೊಂಡ ನಡುಭಾಗದಲ್ಲಿ, ಅಂದರೆ ಇಪ್ಪತ್ತೆಂಟು ದಿನಗಳ ಮಾಸಿಕ ಚಕ್ರ ಇರುವ ಮಹಿಳೆಯಲ್ಲಿ ಹದಿನಾಲ್ಕನೆಯ ದಿನದಂದು, ಮೂವತ್ತು ದಿನಗಳ ಮಾಸಿಕ ಚಕ್ರ ಇರುವ ಮಹಿಳೆಯಲ್ಲಿ ಹದಿನೈದನೆಯ ದಿನ ಅಂಡೋತ್ಪತ್ತಿ ಸಂಭವಿಸುತ್ತದೆ.
ಮಾಸಿಕ ಚಕ್ರ ಇಪ್ಪತ್ತಮೂರು ದಿನಗಳಿಂದ ಮೂವತ್ತೈದು ದಿನಗಳವರೆಗೂ ಇರಬಹುದು. ಕೆಲವರ ಆರೋಗ್ಯ ಸ್ಥಿತಿಯನ್ನು ಅನುಸರಿಸಿ ಅಂಡೋತ್ಪತ್ತಿ ಸರಿಯಾಗಿ ನಡುವಣ ದಿನದಲ್ಲಿ ಆಗದೇ ಒಂದೆರಡು ದಿನ ಹಿಂದು ಮುಂದಾಗಲೂ ಬಹುದು. ಹಾಗಾಗಿ ಅಂಡೋತ್ಪತ್ತಿಯ ದಿನವನ್ನು ಮಾಸಿಕ ದಿನದ ಪ್ರಾರಂಭದ ದಿನದಿಂದ ಲೆಕ್ಕಾಚಾರದಂತೆ ನಿಖರವಾಗಿ ಹೇಳಲು ಸಾಧ್ಯವಿಲ್ಲ.

ಅಂಡೋತ್ಪತ್ತಿಯ ಅವಧಿ ಎಷ್ಟು ಸಮಯದವರೆಗೆ ಇರುತ್ತದೆ?
ಅಂಡಾಣು ಬಿಡುಗಡೆಯಾದ ಬಳಿಕ ಹನ್ನೆರಡರಿಂದ ಇಪ್ಪತ್ತನಾಲ್ಕು ಘಂಟೆಯವರೆಗೆ ಇದು ಇರುತ್ತದೆ. ಅಂದರೆ ಈ ಅವಧಿಯಲ್ಲಿ ಮಾತ್ರವೇ ಅಂಡಾಣು ಮಿಲನಗೊಳ್ಳಲು ಸಾಧ್ಯ.

ಅಂಡೋತ್ಪತ್ತಿಯಾಗಿದೆ ಎಂದು ಸೂಚಿಸುವ ಸಂಜ್ಞೆಗಳು ಯಾವುವು?
ಅಂಡೋತ್ಪತ್ತಿಯಾದ ಸಮಯದಲ್ಲಿ ಮಹಿಳೆಯ ದೇಹ ಅತಿ ಸೂಕ್ಷ್ಮವಾದ ಸೂಚನೆಗಳನ್ನು ನೀಡುತ್ತದೆ. ಇದುಗಳಲ್ಲಿ ಪ್ರಮುಖವಾದ ಏಳು ಸೂಚನೆಗಳು ಎಂದರೆ:
- ವಿಶ್ರಾಂತ ಸ್ಥಿತಿಯಲ್ಲಿನ ದೇಹದ ಕನಿಷ್ಟ ತಾಪಮಾನ (Basal body temperature (BBT or BTP) ಕೊಂಚವೇ ಇಳಿದು ಮತ್ತೆ ಏರುತ್ತದೆ.
- ಗರ್ಭಕಂಠದ ಬಳಿ ಇರುವ ಸ್ನಿಗ್ಧ ದ್ರವ ಹೆಚ್ಚು ಪಾರದರ್ಶಕ ಮತ್ತು ಇನ್ನಷ್ಟು ತೆಳುವಾಗಿರುತ್ತದೆ ಹಾಗೂ ಬೆರಳುಗಳನ್ನು ತಿಕ್ಕಿಕೊಂಡಾಗ ಸುಲಭವಾಗಿ ಜಾರುತ್ತದೆ. ಹೆಚ್ಚೂ ಕಡಿಮೆ ಮೊಟ್ಟೆಯ ಬಿಳಿ ಭಾಗದಂತಿದ್ದು ಬೆರಳುಗಳನ್ನು ಬಿಡಿಸಿದಾಗ ನಡುವೆ ದಾರದಂತಹ ಲೋಳೆ ಉಳಿಯುತ್ತದೆ.
- ಗರ್ಭಕಂಠ ಇನ್ನಷ್ಟು ಮೃದುವಾಗಿದ್ದು ಹೆಚ್ಚು ಅಗಲವಾಗಿ ತೆರೆದಿರುತ್ತದೆ
- ಮಹಿಳೆಯ ಕಾಮವಾಂಛೆ ಹೆಚ್ಚುತ್ತದೆ.
- ಈ ದಿನ ಚುಕ್ಕೆಗಳಂತೆ ರಕ್ತಸ್ರಾವ ಎದುರಾಗಬಹುದು
- ಜನನಾಂಗದ ಹೊರಭಾಗ ಅಥವಾ ಒಳಭಾಗ ಊದಿಕೊಂಡಿರುವಂತೆ ತೋರಬಹುದು.

ಅಂಡೋತ್ಪತ್ತಿಯ ದಿನವನ್ನು ಊಹಿಸಿಕೊಳ್ಳುವುದು ಹೇಗೆ?
ತನ್ನ ಋತುಚಕ್ರ ಎಷ್ಟು ದಿನಗಳದ್ದು ಎಂದು ಮಹಿಳೆಗೆ ಖಚಿತವಾದ ಬಳಿಕ ಈ ದಿನಗಳನ್ನು ಸರಿಯಾಗಿ ಗುರುತು ಮಾಡಿಕೊಂಡರೆ ಅಂಡೋತ್ಪತ್ತಿಯ ದಿನಗಳನ್ನು ಊಹಿಸಿಕೊಳ್ಳುವುದು ಹೆಚ್ಚು ಕಷ್ಟವಾಗಲಾರದು. ಈ ಕೆಳಗಿನ ವಿಧಾನಗಳು ನೆರವಾಗಬಲ್ಲವು:
ಕ್ಯಾಲೆಂಡರ್ ಗುರುತು ಮಾಡಿಟ್ಟುಕೊಳ್ಳಿ
ನಿಮ್ಮ ಋತುಚಕ್ರದ ದಿನಗಳನ್ನು ವರ್ಷದ ಎಲ್ಲಾ ತಿಂಗಳುಗಳು ಒಂದೇ ಪುಟದಲ್ಲಿರುವ ಕ್ಯಾಲೆಂಡರ್ ಒಂದರಲ್ಲಿ ಗುರುತು ಹಾಕಿಕೊಳ್ಳಿ. ಪ್ರಾರಂಭದ ದಿನ, ಪೂರ್ಣ ನಿಂತ ದಿನಗಳನ್ನು ಬೇರೆ ಬೇರೆ ಬಣ್ಣದ ಪೆನ್ನುಗಳನ್ನು ಉಪಯೋಗಿಸಿ ನಿಮಗೆ ಅರ್ಥವಾಗುವಂತೆ ಗುರುತು ಮಾಡಿ.
ಪ್ರತಿ ತಿಂಗಳೂ ಇದನ್ನು ಅವಲೋಕಿಸಿದಾಗ ಮುಂದಿನ ಋತುಚಕ್ರದ ದಿನ ಯಾವಾಗ ಬರುತ್ತದೆ ಎಂಬುದನ್ನು ನೀವು ಹೆಚ್ಚು ನಿಖರವಾಗಿ ಹೇಳಬಹುದು. ಒಂದು ವೇಳೆ ಮಾಸಿಕ ದಿನಗಳು ಒಂದೇ ಪ್ರಕಾರದಲ್ಲಿದ್ದರೆ ಅಂಡೋತ್ಪತ್ತಿಯ ದಿನವೂ ಅದೇ ಪ್ರಕಾರ ಸಂಭವಿಸುತ್ತದೆ. ಒಂದು ವೇಳೆ ಅನಿಯಮಿತವಾಗಿದ್ದರೆ ನಿಮಗೆ ಈ ಸೂಚನೆಯ ಹೊರತಾಗಿ ಇತರ ಸೂಚನೆಗಳನ್ನೂ ಪರಿಗಣಿಸಬೇಕಾಗುತ್ತದೆ.

ನಿಮ್ಮ ದೇಹ ಏನು ಹೇಳುತ್ತಿದೆ ಎಂದು ಗಮನಿಸಿ
ಅಂಡೋತ್ಪತ್ತಿಯ ಸಮಯದಲ್ಲಿ ದೇಹ ಆತಿ ಸೂಕ್ಷ್ಮವಾದ ಕೆಲವು ಸೂಚನೆಗಳನ್ನು ನೀಡುತ್ತದೆ. ಕೇವಲ ಇಪ್ಪತ್ತು ಶೇಖಡಾ ಮಹಿಳೆಯರಲ್ಲಿ ಮಾತ್ರವೇ ಈ ಸೂಚನೆಗಳು ಸ್ಪಷ್ಟವಾಗಿರುತ್ತವೆ. ಉಳಿದವರಲ್ಲಿ ಇವು ಅತಿ ಕ್ಷೀಣವಾಗಿರುತ್ತವೆ.
ಈ ದಿನದಂದು ಅಸಹಜವಾದ ಕೆಳಹೊಟ್ಟೆಯ ನೋವು ಅಥವಾ ಕಂಪನದಂತಹ ಅನುಭವ ಆಗಬಹುದು. (ಸಾಮಾನ್ಯವಾಗಿ, ಹೊಟ್ಟೆಯ ನಡುಭಾಗದಲ್ಲಿ ಇಲ್ಲದೇ ಕೊಂಚ ಬದಿಯಲ್ಲಿರುತ್ತದೆ. ಏಕೆಂದರೆ ಮಹಿಳೆಯರ ಅಂಡಾಶಯಗಳು ಹೊಕ್ಕಳಿನಿಂದ ಕೊಂಚ ಕೆಳಗೆ ಎಡ ಮತ್ತು ಬಲ ಭಾಗಗಳಲ್ಲಿರುತ್ತದೆ. ಈ ತಿಂಗಳು ಯಾವ ಬದಿಯ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಯ್ತೋ ಆ ಭಾಗದಲ್ಲಿ ಈ ನೋವು ಕಾಣಿಸಿಕೊಳ್ಳುತ್ತದೆ.
ಈ ನೋವಿಗೆ ವೈದ್ಯವಿಜ್ಞಾನ mittelschmerz ಎಂದು ಹೆಸರಿಟ್ಟಿದೆ. ಜರ್ಮನ್ ಭಾಷೆಯಲ್ಲಿ ಇದಕ್ಕೆ 'ನಡುವಣ ನೋವು' ಎಂಬ ಅರ್ಥ ಬರುತ್ತದೆ. ಈ ನೋವು ಸೂಕ್ಷ್ಮವಾಗಿರುತ್ತದೆ ಹಾಗೂ ಇದನ್ನು ಮಹಿಳೆ ಅತಿ ಹೆಚ್ಚಿನ ಗಮನವಿಟ್ಟು ಇದರ ಅನುಭವ ಪಡೆದುಕೊಳ್ಳಬೇಕು.

ಅಂಡೋತ್ಪತ್ತಿ ತೋರುವ ಕಿಟ್ ಖರೀದಿಸಿ
ಕೆಲವರಿಗೆ ತಮ್ಮ ಆರೋಗ್ಯ ಮಾಹಿತಿಗಳನ್ನು ಸಂಗ್ರಹಿಸಿ ಇಡುವಷ್ಟು ವ್ಯವಧಾನವಾಗಲೀ ಸಮಯವಾಗಲೀ ಇರುವುದಿಲ್ಲ. ಇವರಿಗೆ ಅಂಡೋತ್ಪತ್ತಿ ಊಹಿಸುವ ಕಿಟ್ ಗಳು (ovulation predictor kits) ಮಾರುಕಟ್ಟೆಯಲ್ಲಿ ಲಭ್ಯವಿವೆ.
ದೇಹ ಅಂಡೋತ್ಪತ್ತಿಯ ಸಮಯದಲ್ಲಿ ಬಿಡುಗಡೆ ಮಾಡುವ ಕೆಲವು ರಸದೂತಗಳಲ್ಲಿ ಲ್ಯುಟಿನೈಜಿಂಗ್ ರಸಊತಗಳು (luteinizing hormones) ಹೆಚ್ಚಾಗಿ ಬಿಡುಗಡೆ ಮಾಡುತ್ತದೆ ಮತ್ತು ಈ ಕಿಟ್ ಗಳಲ್ಲಿ ಈ ರಸದೂತದ ಮಟ್ಟವನ್ನು ಅಳೆಯುವ ವ್ಯವಸ್ಥೆ ಇರುತ್ತದೆ.
ಈ ಕಿಟ್ ನಲ್ಲಿ ಇರುವ ಉಪಕರಣವನ್ನು ಮೂತ್ರದಲ್ಲಿ ಮುಳುಗಿಸಿದ ಬಳಿಕ ಬದಲಾಗುವ ಬಣ್ಣವನ್ನು ಕಿಟ್ ನೊಂದಿಗೇ ಕೊಟ್ಟಿರುವ ಹೋಲಿಕಾ ಪಟ್ಟಿಯ ಬಣ್ಣದೊಂದಿಗೆ ಹೋಲಿಸಿ ನೋಡಿಕೊಂಡು ನಿಮ್ಮ ಮುಂದಿನ ಅಂಡೋತ್ಪತ್ತಿಯ ದಿನ ಯಾವುದು ಎಂಬುದನ್ನು ಹೆಚ್ಚು ನಿಖರವಾಗಿ ಅರಿತುಕೊಳ್ಳಬಹುದು.
ಇನ್ನೊಂದು ಆಯ್ಕೆ ಎಂದರೆ ಮಹಿಳೆಯ ಲಾಲಾರಸದ ಪರೀಕ್ಷೆ. ಮಹಿಳೆಯ ದೇಹದಲ್ಲಿ ಬಿಡುಗಡೆಯಾದ ಈಸ್ಟ್ರೋಜೆನ್ ಲಾಲಾರಸದ ಮೇಲೂ ತನ್ನ ಪ್ರಭಾವ ಬೀರುತ್ತದೆ.
ಅಂಡೋತ್ಪತ್ತಿಯ ದಿನ ಹತ್ತಿರಾಗುತ್ತಿದ್ದಂತೆಯೇ ಲಾಲಾರಸದಲ್ಲಿ ಈಸ್ಟ್ರೋಜೆನ್ ಮಟ್ಟವೂ ಹೆಚ್ಚುತ್ತದೆ. ಅಂಡೋತ್ಪತ್ತಿಯ ದಿನ ಲಾಲಾರಸದ ಪರೀಕ್ಷೆ ಮಾಡಿದರೆ ಸೂಕ್ಷ್ಮದರ್ಶಕದಲ್ಲಿ ಜರೀಗಿಡ (fern) ಎಲೆಯಂತೆ ಕಾಣುತ್ತದೆ ಅಥವಾ ಕಿಟಕಿಯಲ್ಲಿ ಮಂಜುಗಡ್ಡೆ ಹೆಪ್ಪುಗಟ್ಟಿದಂತೆ ಕಾಣುತ್ತದೆ. ಆದರೆ ಈ ಉಪಕರಣವನ್ನು ಮತ್ತೆ ಮತ್ತೆ ಉಪಯೋಗಿಸಬಹುದು ಮತ್ತು ಕಿಟ್ ಗಳಿಗಿಂತಲೂ ಅಗ್ಗವಾಗಿದೆ.
ಅಲ್ಲದೇ ಮಹಿಳೆಯ ಬೆವರಿನಲ್ಲಿರುವ ಕ್ಲೋರೈಡ್, ಸೋಡಿಯಂ ಮತ್ತು ಪೊಟ್ಯಾಶಿಯಂ ಲವಣಗಳನ್ನು ಅಳೆಯುವ ಮೂಲಕವೂ ಅಂಡೋತ್ಪತ್ತಿಯ ದಿನದ ನಿಖರ ಸಮಯವನ್ನು ಅಳೆಯಬಹುದು. ಅಂಡೋತ್ಪತ್ತಿಯ ದಿನಕ್ಕೂ ಮುನ್ನಾದಿನ ಬೆವರಿನಲ್ಲಿ ಸೋಡಿಯಂ ಲವಣ ಅತಿ ಹೆಚ್ಚುತ್ತದೆ ಇದಕ್ಕೆ chloride ion surge ಎಂದು ಕರೆಯುತ್ತಾರೆ.
ಈ ಹೆಚ್ಚಳ ಈಸ್ಟ್ರೋಜೆನ್ ಮತ್ತು ಲ್ಯುಟಿನೈಜಿಂಗ್ ಹಾರ್ಮೋನ್ ಹೆಚ್ಚುವಿಕೆ ಸಂಭವಿಸುವ ಸುಮಾರು ನಾಲ್ಕು ದಿನ ಮುನ್ನವೇ ಕಾಣಬರುವುದರಿಂದ ದಂಪತಿಗಳಿಗೆ ನಾಲ್ಕು ದಿನಗಳಿಂದಲೇ ಸಿದ್ಧತೆ ನಡೆಸಲು ಸಾಧ್ಯವಾಗುತ್ತದೆ.

ನೆನಪಿರಲಿ
ಗರ್ಭಧಾರಣೆಯೇ ನಿಮ್ಮ ಮುಖ್ಯ ಗುರಿಯಾಗಿದ್ದರೆ ನಿಮಗೆ ಸಾಕಷ್ಟು ತಾಳ್ಮೆ ಮತ್ತು ವ್ಯವಧಾನ ಅಗತ್ಯವಾಗಿದೆ. ಆದರೆ ಅಂಡೋತ್ಪತ್ತಿಯ ದಿನ ಮತ್ತು ಹಿಂದಿನ ದಿನಗಳ ಮಿಲಿನದಿಂದ ಖಂಡಿತವಾಗಿಯೂ ನೀವು ಗರ್ಭವತಿಯಾಗಿಯೇ ಆಗುತ್ತೀರಿ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಗರ್ಭಧಾರಣೆಗೆ ಇನ್ನೂ ಹಲವಾರು ಅಂಶಗಳ ಅಗತ್ಯವಿದೆ. ಎಲ್ಲವೂ ಸರಿಯಾಗಿದ್ದರೆ ಮಾತ್ರವೇ ಗರ್ಭಧಾರಣೆ ಸಂಭವಿಸುತ್ತದೆ. ಆದರೆ ಈ ಸಾಧ್ಯತೆಯನ್ನು ಅಂಡೋತ್ಪತ್ತಿಯ ದಿನವನ್ನು ಹೆಚ್ಚು ನಿಖರವಾಗಿ ಅರಿತುಕೊಳ್ಳುವ ಮೂಲಕ ಹೆಚ್ಚಿಸಬಹುದು. ಒಂದೇ ತಿಂಗಳಲ್ಲಿ ನಿಮಗೆ ನಿಮ್ಮ ಅಂಡೋತ್ಪತ್ತಿಯ ದಿನ ಯಾವುದೆಂದು ತಿಳಿದುಕೊಳ್ಳಲು ಸಾಧ್ಯವಾಗದೇ ಹೋಗಬಹುದು. ಸತತವಾಗಿ ಮಾಹಿತಿಯನ್ನು ಮುಂದಿನ ಕೆಲವಾರು ತಿಂಗಳವರೆಗೆ ನೋಡಿಕೊಳ್ಳುತ್ತಿದ್ದರೆ ಇದು ಸುಲಭವಾಗುತ್ತದೆ. ಅಲ್ಲದೇ ನಿಮ್ಮ ಆರೋಗ್ಯದ ಮಾಹಿತಿಯನ್ನು ಕಾಲ ಕಾಲಕ್ಕೆ ವೈದ್ಯರಿಂದ ಪರಿಶೀಲಿಸಿಕೊಳ್ಳುತ್ತಿರುವ ಮತ್ತು ವೈದ್ಯರ ಸಲಹೆ ಹಾಗೂ ಔಷಧಿಗಳನ್ನು ಕ್ರಮವಾಗಿ ಸೇವಿಸುವ ಮೂಲಕ ನಿಮ್ಮ ಗರ್ಭವತಿಯಾಗುವ ಕನಸುಗಳು ಶೀಘ್ರವೇ ಪೂರೈಸುತ್ತದೆ. ನಿಮಗೆ ಶುಭವಾಗಲಿ.



Click it and Unblock the Notifications













