ಪೋಷಕರೇ, ಮಕ್ಕಳು ಮಂಕಾಗಿ ಕುಳಿತಿದ್ದಾಗ ಈ ತಪ್ಪು ಮಾಡಲೇಬೇಡಿ!

ಆತ್ಮವಿಶ್ವಾಸ ಅನ್ನೋದು ನಮ್ಮ ಜೊತೆಗಿದ್ದಾಗ ನಾವು ಯಾವುದೇ ಕೆಲಸವನ್ನಾದರೂ ಸಾಧಿಸುವುದಕ್ಕೆ ಸಾಧ್ಯವಾಗುತ್ತಂತೆ. ಆದರೆ ಕೆಲವೊಂದು ಸಲ ನಾವು ನಮ್ಮ ಬಗ್ಗೆ ನಂಬಿಕೆಯನ್ನು ಕಳೆದುಕೊಳ್ಳುತ್ತೇವೆ. ಯಾವಾಗ ನಮ್ಮಲ್ಲಿ ನಕಾರಾತ್ಮಕ ಚಿಂತನೆಗಳು ಹೆಚ್ಚಾಗುತ್ತದೆಯೋ ಇಂತಹ ಸಂದರ್ಭದಲ್ಲಿ ಈ ರೀತಿ ಅನುಭವಗಳಾಗೋದು ಸಾಮಾನ್ಯ.

ಆದರೆ ಮಕ್ಕಳಲ್ಲೂ ಕೂಡ ಈ ರೀತಿ ಅಂಜಿಕೆ, ಅಳುಕು ಶುರುವಾಗುತ್ತದೆ. ತಮ್ಮ ಮೇಲಿನ ವಿಶ್ವಾಸವನ್ನೇ ಅವರು ಸಂಪೂರ್ಣವಾಗಿ ಕಳೆದುಕೊಂಡು ಬಿಡುತ್ತಾರೆ. ನಾನೊಬ್ಬ ಮೂರ್ಖ, ನಾನು ಚೆನ್ನಾಗಿ ಓದೋದಿಲ್ಲ, ನೋಡಕ್ಕೆ ಸುಂದರವಾಗಿಲ್ಲ, ದಪ್ಪಗಿದ್ದೀನಿ, ಯಾರು ನನ್ನನ್ನು ಇಷ್ಟ ಪಡೋದಿಲ್ಲ. ಈ ರೀತಿ ಸಾವಿರ ಆಲೋಚನೆಗಳು ಮಕ್ಕಳ ತಲೆಗೆ ಹೊಕ್ಕಿ ಅವರೊಳಗಡೆ ಒಂದು ರೀತಿಯ ಒತ್ತಡ ಸೃಷ್ಟಿಯಾಗುತ್ತದೆ. ಅಷ್ಟಕ್ಕು ಮಕ್ಕಳನ್ನು ಈ ರೀತಿಯ ಚಿಂತನೆಗಳಿಂದ ಹೊರ ತರಲು ಏನು ಮಾಡಬೇಕು ಅನ್ನೋದನ್ನು ತಿಳಿಯೋಣ.

Effective Techniques to Tackle Negative Self-Talk in Children in Kannada

1. ಪೋಷಕರೇ ಮಕ್ಕಳ ಜೊತೆಗೆ ಮುಕ್ತವಾಗಿ ಮಾತನಾಡಿ

ಹೆಚ್ಚಿನ ಸಂದರ್ಭದಲ್ಲಿ ಮಕ್ಕಳು ಮಂಕಾಗಿ ಕುಳಿತು ಬಿಡುತ್ತಾರೆ. ಅವರಲ್ಲಿ ತಲೆಯಲ್ಲಿ ಋಣಾತ್ಮಕ ಚಿಂತನೆಗಳು ಇದ್ದಾಗ ಮಾತ್ರ ಅವರು ಹೀಗಾಡೋದಕ್ಕೆ ಸಾಧ್ಯ. ಹೀಗಾಗಿ ಪೋಷಕರು ಮಕ್ಕಳಲ್ಲಿ ಮುಕ್ತವಾಗಿ ಮಾತನಾಡಬೇಕು. ಅವರೊಳಗಿನ ಆತ್ಮ ವಿಶ್ವಾಸ ಕಡಿಮೆಯಾಗೋದಕ್ಕೆ ಕಾರಣ ಏನು ಅನ್ನೋದನ್ನು ತಿಳಿದುಕೊಳ್ಳಿ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಅವರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ.

2. ಮಕ್ಕಳ ಭಾವನೆಗೆ ಬೆಲೆ ಕೊಡಿ

ಪೋಷಕರಾಗಿ ನಿಮಗೆ ಮಕ್ಕಳು ಹೇಳದಿದ್ದರೂ ಕೂಡ ಅವರ ಭಾವನೆಗಳು ಅರ್ಥ ಆಗಬೇಕು. ಒಂದು ವೇಳೆ ನಿಮ್ಮ ಮಗುವಿನ ತಲೆಯಲ್ಲಿ ನಕಾರಾತ್ಮಕ ಯೋಚನೆಗಳೇ ತುಂಬಿ ಹೋಗಿದ್ದರೆ ಅದನ್ನು ಸರಿಪಡಿಸೋದು ಪೋಷಕರ ಕರ್ತವ್ಯ. ಕೆಲವೊಂದು ಸಲ ಈ ವಿಚಾರಗಳನ್ನು ಯಾರ ಬಳಿಯೂ ಹೇಳೋದಿಕ್ಕಾಗದ ಪರಿಸ್ಥಿತಿಗೆ ಅವರು ತಲುಪಿ ಬಿಡುತ್ತಾರೆ. ಒಂದು ವೇಳೆ ಅವರು ನಿಮ್ಮ ಬಳಿ ಯಾವುದೇ ವಿಚಾರವನ್ನು ಹಂಚಿಕೊಳ್ಳದಿದ್ದರೆ ಅವರ ಆಪ್ತ ಸ್ನೇಹಿತರ ಬಳಿ ಮಾತನಾಡಿ ವಿಚಾರವನ್ನು ತಿಳಿದುಕೊಳ್ಳಿ.

3. ಮಕ್ಕಳ ಸಾಮರ್ಥ್ಯದ ಕಡೆಗೆ ಗಮನ ಕೊಡಿ

ಮಕ್ಕಳು ಬೇರೆ ಮಕ್ಕಳನ್ನು ನೋಡಿ ಅವರಲ್ಲಿರುವ ಕಲೆಯನ್ನು ಗಮನಿಸಿ ತನ್ನಲ್ಲಿ ಆ ಸಾಮರ್ಥ್ಯ ಇಲ್ಲ ಎಂದು ಕೊರಗುತ್ತಿರಬಹುದು. ಇಂತಹ ಸಂದರ್ಭದಲ್ಲಿ ಪೋಷಕರು ಮಾಡಬೇಕಾದ ಕೆಲಸ ಎಂದರೆ ನಿಮ್ಮ ಮಗುವಿನಲ್ಲಿರುವ ವಿಶೇಷ ಸಾಮರ್ಥ್ಯವನ್ನು ನೀವು ಗಮನಿಸಿ. ಇಲ್ಲವಾದರೆ ಅವರಿಗೆ ಆಸಕ್ತಿಯ ಕ್ಷೇತ್ರ ಯಾವುದು ಅಂತ ಕೇಳಿ ಆ ಕ್ಷೇತ್ರದಲ್ಲಿ ಅವರಿಗೆ ತರಬೇತಿ ನೀಡಿ ಅವರನ್ನು ಸಮರ್ಥರನ್ನಾಗಿ ಮಾಡಿ. ಖಂಡಿತ ಆಗ ಅವರ ಆತ್ಮ ವಿಶ್ವಾಸ ತನ್ನಿಂದ ತಾನೇ ಹೆಚ್ಚಾಗುತ್ತದೆ. ಈ ರೀತಿಯ ಎಲ್ಲಾ ಖಿನ್ನತೆಗಳಿಂದ ಅವರು ಹೊರ ಬರುತ್ತಾರೆ.

4. ನೀವು ಸೋತ ಅನುಭವಗಳನ್ನು ಅವರೊಂದಿಗೆ ಹಂಚಿಕೊಳ್ಳಿ

ಯಾರಿಗಾದರೂ ಬರೀ ಗೆಲುವು ಸಿಕ್ಕಿರೋದಿಲ್ಲ. ಸೋಲು ಹಾಗೂ ಗೆಲುವನ್ನು ಪ್ರತಿಯೊಬ್ಬರೂ ನೋಡಿರುತ್ತಾರೆ. ಚಿಕ್ಕ ಮಕ್ಕಳಿಗೆ ಹೆಚ್ಚಿನ ಅನುಭವ ಇಲ್ಲದ ಕಾರಣ ಸೋತಾಗ ಆ ಪರಿಸ್ಥಿತಿಯನ್ನು ಅವರಿಂದ ಸ್ವೀಕರಿಸೋದಕ್ಕೆ ಸಾಧ್ಯವಾಗೋದಿಲ್ಲ. ಇಂತಹ ಸಂದರ್ಭದಲ್ಲಿ ಅವರಿಗೆ ಬೈಯೋದನ್ನು ಬಿಟ್ಟು ಮತ್ತೆ ಗೆಲ್ಲೋದಕ್ಕೆ ಅವರೊಳಗೆ ಪ್ರೋತ್ಸಾಹ ತುಂಬಿರಿ. ನಿಮ್ಮ ಜೀವನ ಅನುಭವಗಳನ್ನು ಮಕ್ಕಳ ಜೊತೆಗೆ ಹಂಚಿಕೊಳ್ಳಿ. ಅವರು ಅದರಿಂದ ಪ್ರೇರಣೆಯನ್ನು ಪಡೆದುಕೊಳ್ಳಲಿ.

5. ಒಂದು ವಿಷಯವನ್ನು ಬೇರೆ ಬೇರೆ ಆಯಾಮಗಳಿಂದ ನೋಡೋದನ್ನು ಕಲಿಸಿಕೊಡಿ

ಪೋಷಕರಾಗಿ ಮಕ್ಕಳಿಗೆ ಸರಿ ಹಾಗೂ ತಪ್ಪು ಯಾವುದು ಅಂತ ಹೇಳಿ ಕೊಡೋದು ಮಾತ್ರ ನಿಮ್ಮ ಕೆಲಸ ಅಲ್ಲ. ಬದಲಾಗಿ ಒಂದು ವಿಷಯವನ್ನು ಬೇರೆ ಬೇರೆ ಆಯಾಮಗಳಿಂದ ನೋಡೋದನ್ನು ಅವರಿಗೆ ಹೇಳಿ ಕೊಡಬೇಕು. ಒಂದು ವೇಳೆ ನಿಮ್ಮ ಮಗು ಸಂಕಷ್ಟದಲ್ಲಿ ಸಿಲುಕಿದ್ದರೆ ಅದರಿಂದ ಹೊರ ಬರೋದಕ್ಕೆ ಸಾಧ್ಯವಾಗದೇ ಒದ್ದಾಡುತ್ತಿದ್ದರೆ ಆಗ ಮಗುವಿಗೆ ನೀವು ಪ್ರೋತ್ಸಾಹ ನೀಡಿ ಆ ಸಮಸ್ಯೆಯಿಂದ ಹೊರಬರೋದು ಹೇಗೆ ಅನ್ನೋದನ್ನು ತಿಳಿಸಿಕೊಡಿ. ಸಮಸ್ಯೆಗಳನ್ನು ಬಗೆ ಹರಿಸುವ ತಂತ್ರಗಳನ್ನು ಮಕ್ಕಳಿಗೆ ಹೇಳಿ ಕೊಡಿ. ನಿಧಾನವಾಗಿ ಅವರು ಎಲ್ಲಾ ಸಮಸ್ಯೆಗಳಿಂದ ಹೊರಬರುತ್ತಾರೆ.

ಮಕ್ಕಳ ಮನಸ್ಸು ತುಂಬಾನೇ ಸೂಕ್ಷ್ಮ. ಚಿಕ್ಕ ವಿಚಾರ ಕೂಡ ಅವರ ಮೇಲೆ ದೊಡ್ಡ ಪರಿಣಾಮವನ್ನೇ ಬೀರಬಹುದು. ಹೀಗಾಗಿ ಅವರ ಬೆಳವಣಿಗೆ ಹಂತದಲ್ಲಿ ಯಾವುದೇ ತಪ್ಪಾಗದಂತೆ ನೋಡಿಕೊಳ್ಳಿ.

English summary

Effective Techniques to Tackle Negative Self-Talk in Children in Kannada

These are the Effective Techniques to Tackle Negative Self-Talk in Children. Read more.
Story first published: Saturday, July 1, 2023, 19:30 [IST]
X
Desktop Bottom Promotion