ರಿಸೆಪ್ಷನಿಷ್ಟ್‌ ಆಗಿದ್ದ ಯುವಕ ಆದರ್ಶ ಶಿಕ್ಷಕನಾಗಿ ರೂಪುಗೊಂಡ ಸ್ಪೂರ್ತಿದಾಯಕ ಕತೆ

ಶಿವರಂಜಿನಿ ಎಸ್

ಚಿಕ್ಕ ವಯಸ್ಸಿನಿಂದಲೇ ಕಷ್ಟಪಟ್ಟು ಬದುಕನ್ನು ರೂಪಿಸಿಕೊಂಡು ಇತರರಿಗೆ ಮಾದರಿಯಾಗಿರುವಂತಹ ಅನೇಕರನ್ನು ನೀವು ನೋಡಿರಬಹುದು. ಕೆಲವರ ಬದುಕಿನ ಕಥೆಗಳು ನಮಗೆ ಸ್ಫೂರ್ತಿ ನೀಡುತ್ತದೆ. ನೋವಲ್ಲಿದ್ದಾಗ ಸಾಂತ್ವಾನ ನೀಡುತ್ತದೆ. ಕುಸಿದು ಕುಳಿತಾಗ ಎದ್ದು ನಿಲ್ಲುವ ಶಕ್ತಿಯನ್ನು ನೀಡುತ್ತದೆ. ಇಂತಹ ಮಾದರಿ ವ್ಯಕ್ತಿಯೊಬ್ಬರ ಕಥೆಯನ್ನು ತೆರೆದಿಡುವ ಪ್ರಯತ್ನ ನನ್ನದು. ಇವರಂತೆ ಅನೇಕರ ಜೀವನಗಾಥೆ ಒಂದೇ ಆಗಿರಬಹುದು.ನಾವು ಹೇಳ ಹೊರಟಿರುವುದು ಶಿಕ್ಷಕರೊಬ್ಬರ ಕಥೆ, ಜೀವನದಲ್ಲಿ ಅನೇಕ ವೈಫಲ್ಯಗಳನ್ನು ಎದುರಿಸಿದರೂ ತನ್ನ ಕನಸಿನಂತೆ ಶಿಕ್ಷಕರಾಗಿ, ವಿದ್ಯಾರ್ಥಿಗಳ ಪ್ರಿಯ ಗುರುಗಳಾಗಿರುವವರ ಬಗ್ಗೆ.

Teachers Day Special

ಇವರ ಹೆಸರು ಬಿ ಕೆ ಹರಿಪ್ರಸಾದ್‌.ಬೆಳ್ತಂಗಡಿ ತಾಲೂಕಿನ, ಓಡಿಲ್ನಾಳ ಗ್ರಾಮದ, ಕಟ್ಟದಬೈಲಿನವರು. ಕೃಷಿಕ ಕುಟುಂಬದಲ್ಲಿ ಎಂಟನೇ ಪುತ್ರನಾಗಿ, ಮೂರು ಜನ ಅಣ್ಣಂದಿರು ಹಾಗೂ ನಾಲ್ಕು ಜನ ಅಕ್ಕಂದಿರ ತಮ್ಮನಾಗಿ 1980ರ ದಶಕದಲ್ಲಿ ಜನಿಸಿದವರು ಇವರು. ಕಿರಿಯ ಪುತ್ರನೆಂದು ಎಲ್ಲವನ್ನೂ ಅವರ ಕೈಗಿಡುವ ಪರಿಸ್ಥಿತಿ ಕುಟುಂಬದ್ದಾಗಿರಲಿಲ್ಲ. ಅಪ್ಪ ಕೃಷಿಕರು ಹಾಗೂ ಗಾರೆ ಕೆಲಸ ಮಾಡುತ್ತಿದ್ದವರು. ಅಮ್ಮ ಮನೆಯಲ್ಲೇ ಅವರಿವರ ತೋಟದಲ್ಲಿ ಕೆಲಸ ಮಾಡಿ ಹೊತ್ತಿಗೊಂದಷ್ಟು ಅನ್ನವಾದರೂ ಆದೀತು ಎಂದು ಕಷ್ಟಪಟ್ಟು ಕೆಲಸ ಮಾಡಿ ಮನೆ ಮಕ್ಕಳನ್ನು ನೋಡಿಕೊಳ್ಳುತ್ತಿದ್ದವರು.

ಕೃಷಿಕ ಕುಟುಂಬವಾದರೂ ಮಕ್ಕಳ ಶಿಕ್ಷಣಕ್ಕೆ ಎಂದೂ ಅಡ್ಡಿ ಮಾಡಿರಲಿಲ್ಲ ಬಡತನ. ಎಲ್ಲಾ ಮಕ್ಕಳಿಗೂ ಅಕ್ಷರ ಓದಿ, ಬರೆಯುಷ್ಟು ಶಾಲೆಗೆ ಕಳಿಸಿದ್ದರು ಇವರ ತಂದೆತಾಯಿ. ನಾಲ್ಕು ಜನ ಅಕ್ಕಂದಿರಿಗೆ ಹೆಚ್ಚು ವಿದ್ಯೆ ಹತ್ತಲಿಲ್ಲವಾದರೂ, ತಮ್ಮಂದಿರು ಕಲಿಯಬೇಕು, ಉತ್ತಮ ಉದ್ಯೋಗವನ್ನು ಪಡೆಯಬೇಕೆನ್ನುವುದು ಇವರ ಕನಸಾಗಿತ್ತು. ಹರಿಪ್ರಸಾದ್‌ ಅವರ ಶಿಕ್ಷಣಕ್ಕೆ ಕೈಗೆ ಕಾಸಿತ್ತು, ಶಿಕ್ಷಣವನ್ನು ಮುಂದುವರಿಸುವಂತೆ ಪ್ರೋತ್ಸಾಹ ನೀಡಿದ್ದೇ ಅಕ್ಕಂದಿರು ಹಾಗೂ ಅಣ್ಣಂದಿರು. ಅವರ ಅಣ್ಣಂದಿರಲ್ಲಿ ಒಬ್ಬರು ಶಿಕ್ಷಕರೂ ಕೂಡಾ. ಅವರು ಅಷ್ಟೇ ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡು ಕಷ್ಟಪಟ್ಟು ಶಿಕ್ಷಕರಾಗಿ ಕೆಲಸ ಪಡೆದವರು.

ಅಕ್ಕಂದಿರ ಪ್ರೋತ್ಸಾಹದಿಂದ ಪದವಿಗಾಗಿ ಕಾಲೇಜು ಸೇರಿದ್ದೇನೋ ಆಯ್ತು. ಆದರೆ ಮನೆಯಿಂದ ಹದಿನಾರು ಕಿಲೋಮಿಟರ್‌ ದೂರ ಕಾಲೇಜು. ಬಸ್ಸಿಗಾಗಿ, ಪುಸ್ತಕ ಮತ್ತು ಇತರ ಖರ್ಚಿಗಾಗಿ ಬೀಡಿ ಕಟ್ಟಿ, ಕಾಲೇಜು ಶಿಕ್ಷಣವನ್ನು ಪಡೆದಿದ್ದು, ಕಾಲೇಜು ಸೇರಿದ ಮೇಲೆ ಇದ್ದ ಎರಡೇ ಅಂಗಿಯನ್ನು ಒಂದು ದಿನ ಬಿಟ್ಟು ಒಂದು ದಿನ ಹಾಕಿ ಇತರರಿಂದ ನಗೆಪಾಟಲಿಗೀಡಾದ್ದದ್ದೂ, ಕೆಲವೊಮ್ಮೆ ಬೆಳಗ್ಗೆಯಿಂದ ಸಂಜೆಯವರೆಗೂ ಉಪವಾಸವಿದ್ದುಕೊಂಡೇ ಪಾಠ ಕೇಳಿದ್ದಿದೆ ಎಂದು ನೆನಪಿಸಿಕೊಳ್ಳುತ್ತಾರೆ.

ಡಿಗ್ರಿಯವರೆಗೂ ಕಲಿತಾದ ಮೇಲೆ ಉದ್ಯೋಗಕ್ಕಾಗಿ ಅಲೆದ ಪಾಡು ಅಷ್ಟಿಷ್ಟಲ್ಲ. ಉದ್ಯೋಗ ಸಿಗದೇ ಇದ್ದಾಗ ಅಣ್ಣಂದಿರೊಂದಿಗೆ ಗಾರೆ ಕೆಲಸಕ್ಕೂ ಹೋದವರು ಹರಿಪ್ರಸಾದ್‌. ಕಡಪ ಕಲ್ಲು ಹೊರಲಾಗದೆ ಪಡುವ ಕಷ್ಟ ನೋಡಿ ಅಣ್ಣನ ಕಣ್ಣಲ್ಲಿ ನೀರು ಬಂದ ಸಂಗತಿಯನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಗಾರೆ ಕೆಲಸ, ಚಿಕ್ಕಪ್ಪನೊಂದಿಗೆ ಬಾವಿಗೆ ರಿಂಗ್‌ ಹಾಕುವ ಕೆಲಸಕ್ಕೂ ಹೋದವರು. ಇದಾದ ನಂತರ ಗೇರು ಬೀಜ ಕೊಯ್ಯುವ ಕೆಲಸಕ್ಕೂ ಹೋದವರು ಇವರು.ಒಂದು ಬಾರಿ ಉದ್ಯೋಗ ಸಿಗದೇ ಇದ್ದಾಗ ಕಾಲೇಜೊಂದರ ಮುಂದೆ ಐಸ್‌ಕ್ರೀಂ ಕೂಡಾ ಮಾರಿದವರು ಇವರು.

ಮಂಗಳೂರು ನಗರದಲ್ಲಿ ಲಾಡ್ಜ್‌ನಲ್ಲಿ ರಿಸೆಪ್ಷನಿಷ್ಟ್‌ ಆಗಿ ಕೆಲಸ ಮಾಡಿವರು. ಇಲ್ಲಿ ಕೆಲಸ ಮಾಡುತ್ತಿದ್ದಾಗಲೇ ಪೊಲೀಸ್‌ ಸೇವೆಯಲ್ಲಿದ್ದ ಸ್ನೇಹಿತರೊಬ್ಬರು ಕೊಟ್ಟ ಇಂಗ್ಲೀಷ್‌ ಪುಸ್ತಕ ಓದಿ ಇಂಗ್ಲೀಷ್‌ ನಿರರ್ಗಳವಾಗಿ ಮಾತನಾಡಲು ಕಲಿತವರು ಹರಿಪ್ರಸಾದ್‌. ಹಿಂದೆ ಗೇರು ಬೀಜ ಫಾರ್ಮ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿನ ಮಾಲೀಕರ ಸ್ನೇಹಿತರೊಬ್ಬರು ಶೈಕ್ಷಣಿಕ ಹಿನ್ನಲೆ ಹಾಗೂ ಅವರಿಗಿರುವ ಗುರಿಯನ್ನು ತಿಳಿದು ಬಿಎಡ್‌ ಮಾಡಲು ಸಹಾಯ ಹಾಗೂ ಪ್ರೋತ್ಸಾಹ ನೀಡಿದರು. ಬಿಎಡ್‌ ಮಾಡಿದ ತಕ್ಷಣವೇ ಕೆಲಸ ಸಿಗಬೇಕಲ್ಲವೇ, ಎರಡ್ಮೂರು ಶಾಲೆಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿದು, ಕಡಿಮೆ ಸಂಬಳ ಬಂದರೂ ಗೌರವಾನ್ವಿತ ಸೇವೆಯಲ್ಲವೇ ಎಂದು ಬೇಸರಿಸಿಕೊಳ್ಳದೇ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಹಂಚಿದರು.

ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಮಕ್ಕಳು ತೋರಿದ ಪ್ರೀತಿ, ಜೇಸೀಸ್‌ ಶಾಲೆಯಲ್ಲಿ ಉತ್ತಮ ಶಿಕ್ಷಕರೆಂದು ಕರೆಸಿಕೊಂಡಿದ್ದು, ವಿದ್ಯಾರ್ಥಿಗಳ ಪೋಷಕರ ಗೌರವ ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ ಎನ್ನುತ್ತಾರೆ. "ಚೊಕ್ಕಾಡಿಯ ಸರಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಉದ್ಯೋಗ ಸಿಕ್ಕಾಗ, ಎರಡು ವರ್ಷಗಳ ಕಾಲ ಎರಡು ಸಾವಿರ ಸಂಬಳಕ್ಕೆ ಕೆಲಸ ಮಾಡಿದ್ದೂ ಇದೆ. ಆ ಸಮಯದಲ್ಲಿ ಅಲ್ಲಿ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಮಾಡಿಕೊಳ್ಳಲಾಗದೆ ಕತ್ತಲೆಯ ಒಂದು ರೂಮ್‌ನಲ್ಲಿ ದಿನದೂಡುತ್ತಿದ್ದೆ. ಅಲ್ಲಿ ಕರೆಂಟೂ ಇದ್ದಿರಲಿಲ್ಲ, ಚಿಮಿಣಿ ದೀಪದ ಬೆಳಕಿನಲ್ಲಿ ಕತ್ತಲು ಕಳೆದಿದ್ದೆ, ಅಡುಗೆ ಮಾಡಿಕೊಳ್ಳಲೂ ಸರಿಯಾದ ವ್ಯವಸ್ಥೆ ಇರದಿದ್ದಾಗ ಶಾಲೆಯಲ್ಲಿ ಬಿಸಿಯೂಟದಲ್ಲಿ ಉಳಿದ ಅನ್ನವನ್ನು ಮನೆಗೆ ತಂದು ರಾತ್ರಿ ಹಾಗೂ ಮರುದಿನ ಬೆಳಗ್ಗೆ ತಿಂದಿದ್ದೂ ಇದೆ" ಎನ್ನುತ್ತಾರೆ.

ಆ ಸಮಯದಲ್ಲಿ ಮನೆಯಿಂದ ಊಟ, ಹಣ್ಣುಗಳನ್ನು ತಂದು ತಿನ್ನಲು ನೀಡುತ್ತಿದ್ದ ಆಕಾಶ್‌ ಎನ್ನುವ ವಿದ್ಯಾರ್ಥಿಯನ್ನು ಎಂದಿಗೂ ಮರೆಯುವುದಿಲ್ಲ ಎನ್ನುತ್ತಾರೆ ಹರಿಪ್ರಸಾದ್‌. ಅಷ್ಟು ವರ್ಷಗಳ ಪರಿಶ್ರಮ, ಕಷ್ಟಕ್ಕೆ ಸಂದ ಪ್ರತಿಫಲವೋ ಎಂಬಂತೆ ಅದೇ ಶಾಲೆಯಲ್ಲಿ ಸರಕಾರಿ ಶಿಕ್ಷಕರಾಗಿ ನಿಯುಕ್ತಿಗೊಂಡವರು ಇವರು. ಇಲ್ಲಿ ಇವರು ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹುರಿದುಂಬಿಸುತ್ತಾರೆ. ಆಟೋಟ ಮಾತ್ರವಲ್ಲದೇ ಸಾಂಸ್ಕೃತಿಕ ಸ್ಫರ್ಧೆಗಳಲ್ಲಿ ಮಕ್ಕಳಿಗೆ ಭಾಗವಹಿಸಲು ತರಬೇತಿಯನ್ನೂ ನೀಡುತ್ತಾರೆ. ಒಟ್ಟಿನಲ್ಲಿ ಮಕ್ಕಳಿಗೆ ಓದಿನ ಜೊತೆಗೆ ಪಠತ್ಯೇರ ಚಟುವಟಿಕೆಯಲ್ಲೂ ಹುರಿದುಂಬಿಸುವ ಶಿಕ್ಷಕರಲ್ಲೊಬ್ಬರು ಬಿ.ಕೆ ಹರಿಪ್ರಸಾದ್‌ ಸರ್‌ ಕೂಡಾ ಒಬ್ಬರು. ಎಡರು ವರ್ಷಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಇವರು, ಮನೆಯಲ್ಲಿರುವುದಕ್ಕಿಂತ ಹೆಚ್ಚಾಗಿ ಶಾಲೆಯಲ್ಲೇ ಸಮಯ ಕಳೆಯುವುದು ಹೆಚ್ಚು ಎನ್ನುತ್ತಾ ಅವರ ಪತ್ನಿ ನಸುಕೋಪ ತೋರಿಸುತ್ತಾರೆ.

ಶಿಕ್ಷಕರಾಗಲು ಇವರಿಗೆ ಸ್ಪೂರ್ತಿಯೇನು ಎನ್ನುವುದನ್ನು ಅವರ ಮಾತಿನಲ್ಲೇ ಕೇಳುವುದಾದರೆ "ನನಗೆ ಶಾಲೆಯಲ್ಲಿ ಪ್ರೈಮರಿ ಶಾಲೆಯಲ್ಲಿ ಗುರುವಾಗಿದ್ದ ವೆಂಕಟೇಶ ಛಲವಾದಿ, ಹೈಸ್ಕೂಲ್‌ನಲ್ಲಿ ಗುರುವಾಗಿದ್ದ ರಾಜೇಂದ್ರ ಸರ್‌ ಶಿಕ್ಷಕನಾಗಲು ಸ್ಪೂರ್ತಿ, ಅಕ್ಕಂದಿರ ಕನಸು, ಶಿಕ್ಷಕರಾಗಿರುವ ಅಣ್ಣನ ಪ್ರೋತ್ಸಾಹದ ಮಾತುಗಳು, ಇನ್ನೋರ್ವ ಅಣ್ಣನ ಪ್ರೋತ್ಸಾಹ, ಪ್ರೀತಿಯ ವಿದ್ಯಾರ್ಥಿಗಳ ಹಾರೈಕೆಯೇ ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ" ಎನ್ನುತ್ತಾರೆ. " ಎಷ್ಟೇ ಕಷ್ಟಗಳು ಬಂದರೂ ಜಯಿಸಿ, ನೀವೇನಾಗಬೇಕೆಂದಿದ್ದೀರೋ ಆ ಗುರಿಯನ್ನು ಜಯಿಸಿ, ನಂತರದ ಜೀವನದಲ್ಲಿ ಸಂತೃಪ್ತಿ ಇರುತ್ತದೆ ಎನ್ನುವುದು ಹರಿಪ್ರಸಾದ್‌ ಸರ್‌ ಇವರ ಅನುಭವದ ಮಾತುಗಳು.

X
Desktop Bottom Promotion