ಶಿಕ್ಷಕರ ದಿನದ ವಿಶೇಷ: ಇವರು ಎಲ್ಲರಂತಲ್ಲ..! ಸಮಾಜ ತಿದ್ದಿ ಮಾದರಿಯಾದ ಶಿಕ್ಷಕರು!

ಶಿಕ್ಷಕರು ಇಡೀ ಸಮಾಜದ ನಿರ್ಮಾತೃಗಳು ಅಂದರೂ ತಪ್ಪಾಗೋದಿಲ್ಲ. ಒಂದು ಮಗುವಿಗೆ ಮನೆ ಮೊದಲ ಪಾಠಶಾಲೆ ಆದರೂ ಶಿಕ್ಷಕರಿಂದಲೇ ಆ ಮಗು ಜೀವನ ಪಾಠ ಆರಂಭಿಸುತ್ತೆ. ಹಾಗೆ ಉತ್ತಮ ಶಿಕ್ಷಕರಿಂದ ಮಾತ್ರವೇ ಉತ್ತಮ ನಾಗರೀಕ ಸಮಾಜದ ನಿರೀಕ್ಷೆ ಮಾಡಬಹುದು ಎಂಬ ಮಾತಿದೆ. ಶಿಕ್ಷಕರ ಜವಾಬ್ದಾರಿ ಉಳಿದೆಲ್ಲಾ ಜವಾಬ್ದಾರಿಗಳಿಗಿಂತಲೂ ದೊಡ್ಡದು.

ಇನ್ನು ಸೆಪ್ಟೆಂಬರ್ 5ರಂದು ಆಚರಿಸುತ್ತಿರುವ ಶಿಕ್ಷಕರ ದಿನಾಚರಣೆ ಕುರಿತು ನಿಮಗೆಲ್ಲಾ ತಿಳಿದಿರಬಹುದು. ಭಾರತದ ಮೊದಲ ಉಪರಾಷ್ಟ್ರಪತಿ, ಎರಡನೇ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಸರ್ವಪಲ್ಲಿ ಅವರ ಸವಿ ನೆನಪಿಗಾಗಿ ಶಿಕ್ಷಕರ ದಿನವನ್ನಾಗಿ ಆಚರಿಸಿಕೊಂಡು ಬರಲಾಗಿದೆ. ಭಾರತದ ಭವಿಷ್ಯ ವಿದ್ಯಾರ್ಥಿಗಳ ಮೇಲೆ ನಿಂತಿರುತ್ತದೆ.

ಅಂಥ ವಿದ್ಯಾರ್ಥಿಗಳ ಭವಿಷ್ಯವನ್ನ ಶಿಕ್ಷಣ-ಒಳ್ಳೆಯ ನಡತೆಯ ನಿರ್ಧರಿಸುವುದು ಪ್ರಾಥಮಿಕ ಶಾಲೆಗಳು, ಮಕ್ಕಳಿಗೆ ಯಾವ ರೀತಿಯ ಜೀವನ ಪಾಠ, ನೈತಿಕ ಮೌಲ್ಯಗಳ ತುಂಬಿಸುತ್ತಾರೋ ಅದರಂತೆ ಮಕ್ಕಳ ಭವಿಷ್ಯ ರೂಪುಗೊಳ್ಳುತ್ತದೆ. ಜೀವನದಲ್ಲಿ ಎಂಥದ್ದೇ ಸವಾಲುಗಳು ಎದುರಾದರೂ ಅದನ್ನ ಎದುರಿಸುವ ಸಾಮರ್ಥ್ಯವನ್ನ ಶಿಕ್ಷಕರು ನಮ್ಮಲ್ಲಿ ಬೆಳೆಸಿರುತ್ತಾರೆ.

Teachers Day Special Celebrating The Extraordinary Educators Who Are Catalysts For Social Change
Photo Credit: AI

ಇಷ್ಟೆಲ್ಲಾ ಜವಾಬ್ದಾರಿ ಹೊಂದಿರುವ ಶಿಕ್ಷಕರ ಪಾತ್ರ ಸಮಾಜದಲ್ಲಿ ಬಹಳ ಮುಖ್ಯ ಎನಿಸಿಕೊಳ್ಳುತ್ತದೆ. ಹಾಗೆ ಶಿಕ್ಷಕರು ತಮ್ಮ ಇಡೀ ಜೀವನವನ್ನು ಮಕ್ಕಳಿಗಾಗಿ ಮುಡುಪಿಡುತ್ತಾರೆ. ಕೆಲ ಶಿಕ್ಷಕರು ನಿವೃತ್ತಿಯ ಬಳಿಕವೂ ಸಮಾಜವನ್ನು ತಿದ್ದುವಂತಹ ಹಾಗೆ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗುವಂತಹ ಹಲವು ಉದಾಹರಣೆಗಳನ್ನು ನಾವು ನೋಡಬಹುದು.

ಇಂತಹ ಶಿಕ್ಷಕರಿಗೆ ಮೊದಲು ನಾವು ಗೌರವ ಸೂಚಿಸಬೇಕಾಗುತ್ತದೆ. ಅವರ ಸೇವೆಯನ್ನು ನಾವು ಕೂಡ ನೆನೆಯಬೇಕಿದೆ. ಹಾಗಾದ್ರೆ ಈ ಶಿಕ್ಷಕರ ದಿನಾಚರಣೆಯ ಸಮಯದಲ್ಲಿ ನಾವಿಂದು ಇಂತಹ ಶಿಕ್ಷಕರ ನೆನೆಯಬೇಕಿದೆ. ಅದ್ರಲ್ಲೂ ಕೆಲ ಶಿಕ್ಷಕರು ಮಕ್ಕಳ ಕಲಿಕೆಗಾಗಿ ಶಾಲೆಗಾಗಿ ತಮ್ಮ ಹಣವನೆಲ್ಲಾ ವಿನಿಯೋಗಿಸುತ್ತಾರೆ. ಹಾಗೆ ಸಮಾಜವನ್ನು ತಿದ್ದಲು ತಮ್ಮ ಕೈಲಾದ ಸೇವೆ ಮಾಡುತ್ತಾರೆ. ಇಂತಹ ಶಿಕ್ಷಕರನ್ನು ಸರ್ಕಾರ ಕೂಡ ಕೆಲವೊಮ್ಮೆ ನಿರ್ಲಕ್ಷಿಸಿ ಬಿಡುತ್ತದೆ.

ನಾವಿಂದು ಈ ಶಿಕ್ಷಕರ ದಿನಾಚರಣೆಯ ಸಮಯದಲ್ಲಿ ವಿಶೇಷ ಶೀಕ್ಷಕರನ್ನು ಪರಿಚಯಿಸುವ ಕೆಲಸ ಮಾಡಲಿದ್ದೇವೆ. ಈ ಶಿಕ್ಷಕರು ತಮ್ಮ ಶಕ್ತಿ ಮೀರಿ ಸಮಾಜದಲ್ಲಿ ಬದಲಾವಣೆ ಬಯಸಿದವರು. ಸಮಾಜಕ್ಕ ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸಹಕಾರ ಮನೋಭಾವದಿಂದ ಅರ್ಪಿಸಿಕೊಂಡವರು.


26 ವರ್ಷ ಸಂಸ್ಕೃತ ಪಾಠ ಮಾಡಿದ ಮುಸ್ಲಿಂ ಶಿಕ್ಷಕ

ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ಸಂಸ್ಕೃತ ಇಂದಿಗೂ ಶಾಲೆಯಲ್ಲಿ ಕಲಿಯೋದು ನೋಡಬಹುದು. ಹಾಗೆ ಇಲ್ಲೊಬ್ಬ ಶಿಕ್ಷಕರು 26 ವರ್ಷ ಸಂಸ್ಕೃತ ಕಲಿಸಿದ್ದಾರೆ. ವಿಜಯಪುರದ ಇಂಡಿ ತಾಲೂಕಿನ ಬೋಲೆಗಾಂವ್ ಪ್ರದೇಶದಲ್ಲಿನ ಖಾಸಗಿ ಶಾಲೆಯಲ್ಲಿ ಅವರ ವೃತ್ತಿ ಜೀವನ ಆರಂಭಗೊಂಡಿತ್ತು. ಶಕೀಲ್ ಅಹ್ಮದ್ ಮೌಲಾಸಾಬ್ ಬರೋಬ್ಬರಿ 26 ವರ್ಷಗಳ ಕಾಲ ಸಂಸ್ಕೃತ ಪಾಠ ಮಾಡಿದ್ದಾರೆ.

ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಅವರು, ವೃಷಭ ಲಿಂಗಾಚಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅಂಗಡಿಯವರು ಬಥನಾಳ್ ಮಠದ ವೃಷಭ ಲಿಂಗಾಚಾರ್ಯ ಸ್ವಾಮೀಜಿಯವರ ಗಮನ ಸೆಳೆದರು. ನಂತರ ಜಮಖಂಡಿಯ ಲಕ್ಷ್ಮಿನರಸಿಂಹ ಸಂಸ್ಕೃತ ಪಾಠಶಾಲೆಯಲ್ಲಿ ಪ್ರಹ್ಲಾದ್ ಭಟ್ ಅವರ ಅಡಿಯಲ್ಲಿ ಪಿಯು ಸಾಹಿತ್ಯ ಕೋರ್ಸ್ ಅನ್ನು ಮುಂದುವರಿಸಲು ಸ್ವಾಮೀಜಿ ಅಂಗಡಿಯವರನ್ನು ಪ್ರೋತ್ಸಾಹಿಸಿದರು.

ಅವರ 26 ವರ್ಷಗಳಲ್ಲಿ ನಿರಂತರ ಸಂಸ್ಕೃತ ಶ್ಲೋಕಗಳ ನಿರರ್ಗಳವಾಗಿ ಹೇಳುವ ಅವರು, ಮಕ್ಕಳಲ್ಲಿ ಸಂಸ್ಕೃತ ಭಾಷೆಯ ಕುರಿತು ವಿಶಾಲ ಜ್ಞಾನಕ್ಕೆ ಅವರು ಕಾರಣ ಆದರು. ಅವರು ಸಂಸ್ಕೃತ ಶ್ಲೋಕಗಳನ್ನು ಕಂಠ ಪಾಠ ಮಾಡಿದಂತೆ ಹೇಳುತ್ತಾರೆ.


ವಿಜಯಪುರದಲ್ಲೇ ಇದೆ ಶಿಕ್ಷಕನಿಗೆ ಗುಡಿ

ವಿಜಯಪುರದಲ್ಲಿ ಸಂಸ್ಕೃತ ಪಾಠ ಮಾಡುವ ಮುಸ್ಲಿಂ ಶಿಕ್ಷಕ ಒಂದು ಕಡೆಯಾದರೆ ಮತ್ತೊಂದು ಕಡೆ ಶಿಕ್ಷಕನಿಗೆ ಗುಡಿ ಕಟ್ಟಿದ್ದಾರೆ. ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಇಂತಹದೊಂದು ಸುಂದರ ಗುಡಿ ಇದೆ. 1917ರಲ್ಲಿ ಅಥರ್ಗಾ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕರಾಗಿ ಸೇವೆ ಆರಂಭಿಸಿದ್ದ ರೇವಣ ಸಿದ್ದೇಶ್ವರ ಮಾಸ್ತರ್ ಎಂದೇ ಖ್ಯಾತಿ ಆಗಿದ್ದರು. ಅವರು ಬದುಕಿದ್ದ ಕೇವಲ 39 ವರ್ಷಗಳು ಮಾತ್ರ ಆದ್ರೆ ಬದುಕಿದ್ದ ವರೆಗೂ ಅವರು ತಮ್ಮ ಇಡೀ ಜೀವನವನ್ನ ಶಾಲೆಯಲ್ಲಿ ಕಳೆದರು. ಮಕ್ಕಳಿಗೆ ಸ್ವಾತಂತ್ರ್ಯ ಕುರಿತಾಗಿ ಜಾಗೃತಿ ಮೂಡಿಸಿದ್ದರು.

ಶಿಕ್ಷಣ ನೀಡುವುದು ಅಂದ್ರೆ ಮಕ್ಕಳಲ್ಲಿ ಅರಿವು ಮೂಡಿಸುವುದು ಮಾತ್ರ ತನ್ನ ಕೆಲಸ ಎಂದು ಅವರು ಸುಮ್ಮನಾಗಲಿಲ್ಲ. ಬದಲಿಗೆ ಹಿರಿಯರಿಗೆ ಮನೆ ಮನೆಗೂ ಹೋಗಿ ಶಿಕ್ಷಣದ ಮಹತ್ವ ಒತ್ತಿ ಹೇಳಿದ್ದರು. ಹಾಗೆ ಊರಿನಲ್ಲಿ ಅವರು ನಡೆದಾಡುವ ಶಿಕ್ಷಕ ಎಂಬ ಕೀರ್ತಿ ಪಡೆದಿದ್ದರು. ತಮ್ಮ ಊರಿನಲ್ಲೇ ಸ್ವಂತ ಹಣದಲ್ಲಿ ಗ್ರಂಥಾಲಯ ತೆರೆದರು. ಕರ್ತವ್ಯದಲ್ಲಿದ್ದಾಗಲೇ 1925ರಲ್ಲಿ ಅವರು ಮೃತಪಟ್ಟರು. ಹೀಗಾಗಿ ಅವರು ಲಿಂಗೈಕ್ಯರಾದ ಸ್ಥಳದಲ್ಲೇ ಅವರಿಗೆ ಗುಡಿ ಕಟ್ಟಲಾಯಿತು. ಅವರ ಸವಿನೆನಪು ಹಾಗೆ ಉಳಿಸಿಕೊಳ್ಳಲು ಊರಿನವರು ಇಂದಿಗೂ ಅವರಿಗೆ ಪೂಜೆ ಸಲ್ಲಿಸುತ್ತಾರೆ. ಅವರನ್ನು ನೆನೆಯುತ್ತಾರೆ.

ರೇವಣಸಿದ್ದೇಶ್ವರ ಮಾಸ್ತರ್ ಲಿಂಗೈಕೈರಾದ ದಿನ ಗ್ರಾಮದಲ್ಲಿ ಜಾತ್ರೆ ನಡೆಯುತ್ತೆ. ಪ್ರತೀ ಶ್ರಾವಣ ಮಾಸ ಒಂದು ತಿಂಗಳ ಕಾಲ ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಹಾಗೆ ಅವರ ಹೆಸರಿನಲ್ಲಿ ವಿವಿಧ ಸಾಮಾಜಿಕ ಕೆಲಸಗಳು ನಡೆಯುವುದು ನೋಡಬಹುದು.


ವಿದ್ಯಾರ್ಥಿನಿಗೆ ಮನೆ ಕಟ್ಟಿದ್ದರು ಮಾದರಿ ಶಿಕ್ಷಕ

ಶಿಕ್ಷಕರು ನಿವೃತ್ತಿ ಬಳಿಕ ತಮ್ಮ ಜೀವನ ಕಟ್ಟಿಕೊಳ್ಳುವುದು ಹೇಗೆ ಎಂಬ ಆಲೋಚನೆಯಲ್ಲಿರುತ್ತಾರೆ. ಆದ್ರೆ ಇಲ್ಲೊಬ್ಬರು ನಿವೃತ್ತಿಯ ಬಳಿಕ ತಮ್ಮ ಬಡ ವಿದ್ಯಾರ್ಥಿನಿಯೊಬ್ಬರಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಮನೆ ಕಟ್ಟಿಸಿಕೊಟ್ಟಿದ್ದಾರೆ. ಉಡುಪಿಯ ನಿಟ್ಟೂರು ಹೈಸ್ಕೂಲಿನ ಹೆಡ್ ಮಾಸ್ಟರ್ ಮುರಲಿ ಕಡೆಕಾರು ಎಂಬುವರು ಇಂತಹದೊಂದು ಕೆಲಸ ಮಾಡಿ ಮಾದರಿಯಾಗಿದ್ದರು. 2020ರಲ್ಲಿ ನಿವೃತ್ತರಾದ ಅವರು ತಮ್ಮ ಶಾಲೆಯಲ್ಲಿ ಕಲಿಯುತ್ತಿದ್ದ ಬಡ ವಿದ್ಯಾರ್ಥಿನಿಗೆ ಮನೆ ಕಟ್ಟಿಸಿಕೊಡುವ ಮೂಲಕ ಮಾದರಿಯಾದರು.


ಸ್ವಂತ ಹಣದಲ್ಲಿ ಸರ್ಕಾರಿ ಶಾಲೆ ದತ್ತು ಪಡೆದ ಶಿಕ್ಷಕಿ

ಬೆಳಗಾವಿಯ ಅಂಬೇವಾಡಿ ಗ್ರಾಮದ ಶಿಕ್ಷಕಿಯೊಬ್ಬರು ಇಡೀ ಶಾಲೆ ದತ್ತು ಪಡೆದಿರುವುದಲ್ಲದೆ ಎಲ್‌ಕೆಜಿ ಹಾಗೂ ಯುಕೆಜಿ ಕ್ಲಾಸ್ ಆರಂಭಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಹಾಗೆ ತಮ್ಮ ಸೇವೆಗೆ ರಾಜ್ಯ ಪ್ರಶಸ್ತಿ ಕೂಡ ಪಡೆದಿದ್ದಾರೆ. ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಮರಾಠಿ ಶಾಲೆಯ ಶಿಕ್ಷಕಿ ಆಸ್ಮಾ ಇಸ್ಮಾಯಿಲ್ ನದಾಫ್ ಮಾದರಿ ಶಿಕ್ಷಕಿಯಾಗಿಯೂ ತಮ್ಮ ಸೇವೆಗೆ ಕಳೆದ ವರ್ಷ ರಾಜ್ಯ ಪ್ರಶಸ್ತಿ ಪಡೆದರು.

ಆಸ್ಮಾ ಅವರು ಬೆಳಗಾವಿಯ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದರು. ಹಾಗೆ ತಮ್ಮ ಶಾಲೆಯಲ್ಲೇ ಸ್ವಂತ ಖರ್ಚಿನಲ್ಲಿ ಎಲ್‌ಕೆಜಿ ಯುಕೆಜಿ ಆರಂಭಿಸಿದರು. ಅವರ ಈ ಸೇವೆ ರಾಜ್ಯಕ್ಕೆ ಮಾದರಿಯಾಗಿದ್ದನ್ನು ಈ ಸಮಯದಲ್ಲಿ ನೆನೆಯುವುದು ಅವರಿಗೆ ಸಲ್ಲಿಸುವ ಗೌರವ ಆಗಿದೆ.

English summary

Teachers' Day Special: Celebrating The Extraordinary Educators Who Are Catalysts For Social Change

Some teachers spend all their money on school for the education of their children. In this way, they do their best to improve society. Even the government sometimes ignores such teachers.
X
Desktop Bottom Promotion