ದೇಶದ ಕೀರ್ತಿಯನ್ನು ಬಾನೆತ್ತರಕ್ಕೆ ಕೊಂಡೊಯ್ದ ನಮ್ಮ ವಿಜ್ಞಾನಿಗಳ ಯಶೋಗಾಥೆ

By Super

ಜಗತ್ತಿಗೆ ಸೊನ್ನೆಯನ್ನು ಪರಿಚಯಿಸಿದ ದೇಶವೆಂದರೆ ಭಾರತ. ಮೇಧಾವಿಗಳ ಪೈಕಿ ಭಾರತೀಯರ ಸಂಖ್ಯೆ ಕಡಿಮೆಯೇನಲ್ಲ. ವಿವಿಧ ಕ್ಷೇತ್ರಗಳಲ್ಲಿ ನೂತನ ಆವಿಷ್ಕಾರಗಳನ್ನು ಪರಿಚಯಿಸಿದ ಮಹಾನ್ ಮೇಧಾವಿಗಳು ತಮ್ಮ ಹೆಸರನ್ನು ಇತಿಹಾಸದಲ್ಲಿ ಚಿರಸ್ಥಾಯಿಯಾಗಿಸಿದ್ದಾರೆ.

ಸರ್ ಸಿ.ವಿ. ರಾಮನ್ ರಿಂದ ಸಲೀಂ ಆಲಿಯವರೆಗೆ, ಶ್ರೀನಿವಾಸ ರಾಮಾನುಜಂನತಹ ಅದ್ಭುತ ಗಣಿತ ಮೇಧಾವಿಗಳು ಭೌತಶಾಸ್ತ್ರ, ಗಣಿತ, ರಾಸಾಯನಶಾಸ್ತ್ರ, ಜೀವಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಹಲವು ವಿಷಯಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಅವುಗಳಲ್ಲಿ ಹಲವು ಹೆಚ್ಚಿನ ಸಂಶೋಧನೆಗೆ ಗ್ರಾಸವಾಗಿ ಇನ್ನಷ್ಟು ಫಲನೀಡಲು ಕಾರಣವಾಗಿದೆ. ಈ ಲೇಖನದಲ್ಲಿ ಇಂತಹ ಹದಿನೈದು ಪ್ರತಿಭಾವಂತ ವಿಜ್ಞಾನಿಗಳ ಬಗ್ಗೆ ಕಿರುಪರಿಚಯವನ್ನು ನೀಡಲಾಗಿದೆ.

ಪ್ರಫುಲ್ಲ ಚಂದ್ರ ರಾಯ್
ಖ್ಯಾತ ಶಿಕ್ಷಣ ತಜ್ಞ ಮತ್ತು ರಾಸಾಯನಶಾಸ್ತ್ರಜ್ಞರಾದ ಪ್ರಫುಲ್ಲ ಚಂದ್ರ ರಾಯ್ ರವರು ಭಾರತದ ಪ್ರಥಮ ಔಷಧಿ ಸಂಸ್ಥೆಯಾದ ಬೆಂಗಾಲ್ ಕೆಮಿಕಲ್ಸ್ ಮತ್ತು ಫಾರ್ಮಾಸ್ಯೂಟಿಕಲ್ಸ್ ಸಂಸ್ಥೆಯ ಸ್ಥಾಪಕರಾಗಿದ್ದಾರೆ.

Famous Indian Scientists and their Inventions

ಸಲೀಂ ಆಲಿ
ಹಕ್ಕಿ ತಾತ ಎಂದೇ ಪ್ರಖ್ಯಾತರಾದ ಸಲೀಂ ಆಲಿಯವರು ಓರ್ವ ಅದ್ಭುತ ಪಕ್ಷಿಶಾಸ್ತ್ರಜ್ಞರಾಗಿದ್ದು ಭಾರತದ ಖ್ಯಾತಿಯನ್ನು ಜಗತ್ತಿನೆಲ್ಲೆಡೆ ಪಸರಿಸಿದವರು. ಇಂದಿಗೂ ಉದಯೋನ್ಮುಖ ಪಕ್ಷಿಶಾಸ್ತ್ರಜ್ಞರಿಗೆ ಅವರ ಪುಸ್ತಕಗಳು ದಾರಿದೀಪವಾಗಿವೆ.

ಶ್ರೀನಿವಾಸ ರಾಮಾನುಜಂ
ಕೇವಲ ಮೂವತ್ತಮೂರು ವರ್ಷ ಜೀವಿಸಿದ್ದ ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜಂ ಗಣಿತ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಅಪಾರವಾಗಿದೆ. ಅವರ ಸಂಖ್ಯಾ ಸರಣಿ, ಅಂಕೆಗಳ ಅನಂತತೆ, ದಶಮಾಂಶ ಮತ್ತು ಭಿನ್ನರಾಶಿ ಮೊದಲಾದ ಗಣಿತದ ಸೂತ್ರಗಳು ಇಂದಿಗೂ ಹಲವು ಕ್ಲಿಷ್ಟ ವಿಷಯಗಳನ್ನು ಬಗೆಹರಿಸುವಲ್ಲಿ ನೆರವಾಗುತ್ತಿವೆ. ಮರಣಶಯ್ಯೆಯಲ್ಲಿದ್ದಾಗಲೂ ಅವರು ರೂಪಿಸಿದ ಗಣಿತದ ತರ್ಕ ಸುಮಾರು ತೊಂಭತ್ತು ವರ್ಷಗಳವರೆಗೂ ಒಂದು ರಹಸ್ಯವಾಗಿಯೇ ಉಳಿದಿತ್ತು. ಇತ್ತೀಚೆಗೆ, ಅಂದರೆ 2012ರಲ್ಲಿ ಈ ಸೂತ್ರ ಸರಿ ಎಂದು ಈ ಬಗ್ಗೆ ಸಂಶೋಧನೆ ನಡೆಸಿದ ಗಣಿತಜ್ಞರು ತಿಳಿಸಿದ್ದಾರೆ.

ಸರ್ ಸಿ.ವಿ. ರಾಮನ್
ತಮ್ಮ ರಾಮನ್ ಎಫೆಕ್ಟ್ ಮೂಲಕ ಜಗತ್ತಿಗೆ ವರ್ಣಗಳ ಬಗ್ಗೆ ಅರಿವು ಮೂಡಿಸಿದ ಸರ್ ಸಿ.ವಿ. ರಾಮನ್ ಇದಕ್ಕಾಗಿ 1930ರಲ್ಲಿ ನೋಬೆಲ್ ಪ್ರಶಸ್ತಿಯನ್ನೂ ಪಡೆದರು.

ಹೋಮಿ ಜಹಾಂಗೀರ್ ಬಾಬಾ
ಮುಂಬೈ ಬಳಿ ಇರುವ ಟ್ರಾಂಬೆಯ ಭಾರತೀಯ ಅಣುಶಕ್ತಿ ಕೇಂದ್ರದ ರೂವಾರಿ ಹೋಮಿ ಜಹಾಂಗೀರ್ ಬಾಬಾರವರು ಖ್ಯಾತ ಭೌತಶಾಸ್ತ್ರಜ್ಞರಾಗಿದ್ದು ಅಣುಶಕ್ತಿಯ ಸಮರ್ಪಕ ಬಳಕೆಯ ಕುರಿತು ಬಹಳಷ್ಟು ಸಂಶೋಧನೆ ನಡೆಸಿದ್ದರು. Tata Institute of Fundamental Research (TIFR) ಮತ್ತು Trombay Atomic Energy Establishment ಎಂಬ ಎರಡು ಅಣುಶಕ್ತಿ ಸಂಶೋಧನಾ ಕೇಂದ್ರದ ಸ್ಥಾಪಕರೂ ಆಗಿದ್ದಾರೆ. ಇವರ ಗೌರವಾರ್ಥವಾಗಿ ಟ್ರಾಂಬೆ ಅಣುಶಕ್ತಿ ಕೇಂದ್ರಕ್ಕೆ ಅವರದ್ದೇ ಹೆಸರಿಡಲಾಗಿದೆ.

ಜಗದೀಶ್ ಚಂದ್ರ ಬೋಸ್
ಖ್ಯಾತ ಜೀವಶಾಸ್ತ್ರಜ್ಞ ಮತ್ತು ಪ್ರಾಕ್ತನಶಾಸ್ತ್ರಜ್ಞರಾಗಿದ್ದರೂ ತಮ್ಮ ರೇಡಿಯೋ ಮತ್ತು ಮೈಕ್ರೋವೇವ್ ತರಂಗಗಳ ವಿಷಯದಲ್ಲಿ ನೀಡಿರುವ ಅಪಾರ ಕೊಡುಗೆಯ ಮೂಲಕ ಜಗತ್ತು ಅವರನ್ನು ಭೌತಶಾಸ್ತ್ರಜ್ಞರನ್ನಾಗಿ ಹೆಚ್ಚು ಗುರುತಿಸುತ್ತಿದೆ.

ಸತ್ಯೇಂದ್ರನಾಥ್ ಬೋಸ್
ಖ್ಯಾತ ಗಣಿತಜ್ಞ ಮತ್ತು ಭೌತಶಾಸ್ತ್ರಜ್ಞರಾಗಿದ್ದ ಸತ್ಯೇಂದ್ರನಾಥ್ ಬೋಸ್ ಐನ್ ಸ್ಟೈನ್ ರವರ ಸಿದ್ಧಾಂತವನ್ನು ಆಳವಾಗಿ ಅಧ್ಯಯನ ಮಾಡಿ ತಮ್ಮದೇ ಕೊಡುಗೆಯನ್ನು ನೀಡಿದರು. ವಿದ್ಯುದಾಯಸ್ಕಾಂತೀಯ ವಿಕಿರಣಗಳು ಗಾಳಿಯಲ್ಲಿ ಪಸರಿಸುವ ಬಗ್ಗೆ ಹಲವು ವಿಷಯಗಳನ್ನು ಅವರು ಜಗತ್ತಿಗೆ ಪರಿಚಯಿಸಿದರು.

ಎ.ಪಿ.ಜೆ. ಅಬ್ದುಲ್ ಕಲಾಮ್
ನಿಕಟಪೂರ್ವ ರಾಷ್ಟ್ರಾಧ್ಯಕ್ಷರಾದ ಎ.ಪಿ.ಜೆ ಅಬ್ದುಲ್ ಕಲಾಂ ರವರು ಭಾರತದ ಕ್ಷಿಪಣಿ ಮತ್ತು ಅಣುಶಕ್ತಿಯಾಧಾರಿತ ಶಸ್ತ್ರಗಳಿಂದ ಭಾರತದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದ ಖ್ಯಾತಿ ಪಡೆದಿದ್ದಾರೆ.

ಹರ ಗೋಬಿಂದ್ ಖುರಾನಾ
ಜೀವರಸಾಯನ ವಿಜ್ಞಾನಿಯಾದ ಹರ ಗೋಬಿಂದ್ ಖುರಾನಾರವರು ಡಿ.ಎನ್.ಎ.ಗಳಲ್ಲಿ ಪ್ರೋಟೀನುಗಳ ಸಂಶ್ಲೇಷಣೆಯಲ್ಲಿ ನ್ಯೂಕ್ಲಿಯೈಡ್ ಗಳ ಪಾತ್ರ ಎಂಬ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕಾಗಿ 1968ರ ನೋಬೆಲ್ ಬಹುಮಾನವನ್ನು ಪಡೆದಿದ್ದಾರೆ.

ಎಸ್.ಎಸ್. ಅಭ್ಯಂಕರ್
ಭಾರತದ ಇನೋರ್ವ ಮೇಧಾವಿ ಗಣಿತಜ್ಞರಾಗಿದ್ದ ಎಸ್.ಎಸ್. ಅಭ್ಯಂಕರ್ ರವರು ಬೀಜಗಣಿತದ ಜ್ಯಾಮಿತಿ (ಗೆರೆಯರಿಮೆ)ಯ ವಿಷಯದಲ್ಲಿ ನೀಡಿದ ವಿವರಗಳಿಗಾಗಿ ಪ್ರಖ್ಯಾತರಾಗಿದ್ದಾರೆ.

ಮೇಘನಾದ ಸಾಹಾ
ಖ್ಯಾತ ಖಗೋಳ ಶಾಸ್ತ್ರಜ್ಞರಾಗಿರುವ ಮೇಘನಾದ ಸಹಾರವರು ತಮ್ಮದೇ ಸೂತ್ರವನ್ನು ಕಂಡುಹಿಡಿದು ನಕ್ಷತ್ರಗಳಲ್ಲಿರುವ ಬೌತಿಕ ಮತ್ತು ರಾಸಾಯನಿಕ ವಸ್ತುಗಳ ವಿಶ್ಲೇಷಣೆಯನ್ನು ಪಡೆಯಲು ಕಾರಣರಾದರು. ಈ ಸೂತ್ರಕ್ಕೆ ಅರ್ಹವಾಗಿ ಸಾಹಾ ಸೂತ್ರ (Saha equation) ಎಂದೇ ಕರೆಯಲಾಗುತ್ತದೆ.

ಸುಬ್ರಹ್ಮಣ್ಯಂ ಚಂದ್ರಸೇಖರ್
ಇನ್ನೋರ್ವ ಖಗೋಳಶಾಸ್ತ್ರಜ್ಞರಾದ ಸುಬ್ರಹ್ಮಣ್ಯಂ ಚಂದ್ರಸೇಖರ್ ಅತಿದೊಡ್ಡ ಗಾತ್ರದ ನಕ್ಷತ್ರಗಳ ವಿಕಸನ ಹಂತಗಳನ್ನು ವಿವರಿಸುವ ಪ್ರಬಂಧಕ್ಕಾಗಿ 1983ರ ನೋಬೆಲ್ ಪ್ರಶಸ್ತಿಯನ್ನು ಪಡೆದಿದ್ದಾರೆ.

ರಾಜ್ ರೆಡ್ಡಿ
ಕೃತಕ ಬುದ್ಧಿಮತ್ತೆಯ ವ್ಯವಸ್ಥೆಯ ನಿಟ್ಟಿನಲ್ಲಿ ಮಹತ್ತರವಾದ ಮಾಹಿತಿಗಳನ್ನು ನೀಡಿದ ರಾಜ್ ರೆಡ್ಡಿಯವರು ಟ್ಯೂರಿಂಗ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯದಲ್ಲಿರುವ The Robotics Institute ನ ಸ್ಥಾಪಕರೂ ಆಗಿದ್ದಾರೆ.

ಬೀರ್ಬಲ್ ಸಾಹ್ನಿ
ಪಳೆಯುಳಿಕೆ ತಜ್ಞ (Paleobotanist) ರಾಗಿದ್ದ ಬೀರ್ಬಲ್ ಸಾಹ್ನಿಯವರು ಭಾರತದ ವಿವಿಧೆಡೆ ನೆಲದಾಳದಲ್ಲಿ ಹುದುಗಿದ್ದ ಪಳೆಯುಳಿಕೆಗಳನ್ನು ವಿಶ್ಲೇಷಿಸಿ ಭಾರತದ ಇತಿಹಾಸಕ್ಕೆ ಹೊರ ಮೆರುಗನ್ನು ನೀಡಿದ್ದಾರೆ.

ಪ್ರಶಾಂತ ಚಂದ್ರ ಮಹಾಲನೋಬಿಸ್
ಭೌತಶಾಸ್ತ್ರಜ್ಞ ಹಾಗೂ ಅಂಕಿ ಅಂಶ ತಜ್ಞ ಪ್ರಸಾಂತ ಚಂದ್ರ ಮಹಾಲನೋಬಿಸ್ ರವರು ಕೋಲ್ಕಾತಾದಲ್ಲಿ 1931ರಲ್ಲಿ ಪ್ರಾರಂಭವಾದ Indian Statistical Institute ವಿದ್ಯಾಸಂಸ್ಥೆಯ ಸ್ಥಾಪಕರಾಗಿದ್ದಾರೆ.

X
Desktop Bottom Promotion