Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಂದು ಉಡುಪಿಗೆ ಪ್ರಧಾನಿ ಮೋದಿ: ಕೃಷ್ಣನೂರಲ್ಲಿ ಹೇಗಿದೆ ಸಿದ್ಧತೆ? ಕಾರ್ಯಕ್ರಮ ಪಟ್ಟಿ ಇಲ್ಲಿದೆ
ಪ್ರಧಾನಿ ನರೇಂದ್ರ ಮೋದಿಯವರು (PM Modi) ಇಂದು (ನವೆಂಬರ್ 28) ಉಡುಪಿಗೆ (Udupi) ಭೇಟಿ ನೀಡಲಿದ್ದಾರೆ. ಹೀಗಾಗಿ ಉಡುಪಿ ಜಿಲ್ಲೆಯಾದ್ಯಂತ ಭರದ ಸಿದ್ಧತೆಗಳು ನಡೆದಿವೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರು ಅವರನ್ನು ಬರಮಾಡಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಪ್ರಧಾನಿಯವರು ಕೃಷ್ಣಮಠಕ್ಕೆ ಆಗಮಿಸುವ (PM Modi Visit To Udupi Sri Krishna Mutt) ನಿರೀಕ್ಷೆಯಿದೆ. ಈ ಭೇಟಿಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮೋದಿಯವರ ಸ್ವಾಗತಕ್ಕೆ ಕೃಷ್ಣ ನಗರಿಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ. ಬನ್ನಂಜೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕಲ್ಸಂಕದವರೆಗೆ ರೋಡ್ ಶೋ ಆಯೋಜಿಸಲಾಗಿದೆ. ಅದಕ್ಕಾಗಿ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ. ಪ್ರಧಾನಿಯವರ ಭೇಟಿಯ ದೃಷ್ಟಿಯಿಂದ ಜಿಲ್ಲಾಡಳಿತ ಹಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಈ ಕ್ರಮಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ, ಅಂಗಡಿ ಮುಂಗಟ್ಟುಗಳ ನಿಯಂತ್ರಣ, ಮತ್ತು ಡ್ರೋನ್ ಹಾರಾಟ ನಿಷೇಧ ಸೇರಿವೆ.

ಡ್ರೋನ್ ಹಾರಾಟಕ್ಕೆ ನಿಷೇಧ
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಪ್ರಧಾನಿ ಕಾರ್ಯಕ್ರಮ ನಡೆಯುವ ದಿನದಂದು ಸುತ್ತಮುತ್ತಲ ಪ್ರದೇಶಗಳಲ್ಲಿ ಪರವಾನಗಿ ಇಲ್ಲದೆ ಡ್ರೋನ್ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ರಸ್ತೆ ಕಾಮಗಾರಿಗಳ ಸ್ಥಗಿತ
ಡ್ರೋನ್ ನಿಷೇಧದ ಜೊತೆಗೆ, ನವೆಂಬರ್ 28ರಂದು ಉಡುಪಿ ನಗರದಲ್ಲಿ ಯಾವುದೇ ರಸ್ತೆ ಕಾಮಗಾರಿ ಅಥವಾ ಗುಂಡಿ ತೋಡುವ ಕಾರ್ಯವನ್ನು ನಡೆಸಬಾರದು ಎಂದು ಜಿಲ್ಲಾಡಳಿತ ಆದೇಶಿಸಿದೆ.
ಶಾಲಾ-ಕಾಲೇಜುಗಳಿಗೆ ರಜೆ
ಮಕ್ಕಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ನವೆಂಬರ್ 28 ರಂದು ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ (School Holidays) ಘೋಷಿಸಲಾಗಿದೆ. ಪ್ರಧಾನಿಯವರ ಭೇಟಿಯಿಂದ ಸಂಚಾರ ದಟ್ಟಣೆ ಹೆಚ್ಚಾಗುವ ನಿರೀಕ್ಷೆ ಇರುವುದರಿಂದ, ಮಕ್ಕಳಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಉಡುಪಿ ನಗರ, ಮಲ್ಪೆ ಮತ್ತು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಸ್ವರೂಪ್ ಟಿ.ಕೆ ಆದೇಶ ಹೊರಡಿಸಿದ್ದಾರೆ.
ಕೇಸರಿಮಯವಾದ ಉಡುಪಿ
ಪ್ರಧಾನಮಂತ್ರಿಯವರ ಆಗಮನದ ಹಿನ್ನೆಲೆಯಲ್ಲಿ ಕೃಷ್ಣ ನಗರ ಉಡುಪಿ ಸಂಪೂರ್ಣ ಕೇಸರಿಮಯವಾಗಿದೆ. ಎಲ್ಲೆಡೆ ಕೇಸರಿ ಧ್ವಜಗಳು ಮತ್ತು ಬಂಟಿಂಗ್‌ಗಳು ರಾರಾಜಿಸುತ್ತಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಸಹ ಅಳವಡಿಸಲಾಗಿದೆ.
ಒಂದು ಲಕ್ಷ ಮಂದಿಯಿಂದ ಗೀತಾ ಪಠಣ
ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಾಳೆ ಐತಿಹಾಸಿಕ 'ಲಕ್ಷ ಕಂಠ ಗೀತಾ ಪಾರಾಯಣ' (Laksha Kantha Gita Parayana) ನಡೆಯಲಿದೆ. ಒಂದು ಲಕ್ಷ ಭಕ್ತರು ಸಾಮೂಹಿಕವಾಗಿ ಭಗವದ್ಗೀತೆ ಪಠಣ ಮಾಡಲು ಸಿದ್ಧತೆಗಳನ್ನು ನಡೆಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿ ನಂತರ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಆಯೋಜಕರ ಪ್ರಕಾರ, ಗೀತಾ ಪಠಣವು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12:30 ಗಂಟೆಯವರೆಗೆ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆಯಿದೆ.
ಭಾರೀ ಪೊಲೀಸ್ ಬಿಗಿ ಭದ್ರತೆ
ದಕ್ಷಿಣ ಕನ್ನಡ, ಉತ್ತರ ಕನ್ನಡ, ದಾವಣಗೆರೆ, ಮೈಸೂರು, ಬೆಂಗಳೂರು, ಶಿವಮೊಗ್ಗ ಜಿಲ್ಲೆಗಳಿಂದ 3,000 ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಇದರಲ್ಲಿ 10 ಎಸ್‌ಪಿ, 27 ಡಿವೈಎಸ್‌ಪಿ, 49 ಇನ್ಸ್‌ಪೆಕ್ಟರ್ ಮತ್ತು 127 ಎಸ್‌ಐಗಳು ಸೇರಿದ್ದಾರೆ. ಹೆಚ್ಚುವರಿಯಾಗಿ 232 ಎಎಸ್‌ಐ, 1608 ಪಿಸಿ ಮತ್ತು 39 ಡಬ್ಲ್ಯೂಪಿಸಿ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಭದ್ರತಾ ತಂಡಗಳಲ್ಲಿ 48 ಬಾಂಬ್ ನಿಷ್ಕ್ರಿಯ ದಳದ (BDDS) ತಂಡಗಳು, ಆರು ಕೆಎಸ್‌ಆರ್‌ಪಿ (ಕರ್ನಾಟಕ ರಾಜ್ಯ ಮೀಸಲು ಪೊಲೀಸ್) ತುಕಡಿಗಳು ಮತ್ತು ಆರು ತ್ವರಿತ ಪ್ರತಿಕ್ರಿಯೆ ತಂಡಗಳು (QRT) ಸೇರಿವೆ. ರೋಡ್‌ಶೋ ಮಾರ್ಗದುದ್ದಕ್ಕೂ ಪೊಲೀಸರು ನಿರಂತರವಾಗಿ ತಪಾಸಣೆ ನಡೆಸುತ್ತಿದ್ದು, ನಗರದಾದ್ಯಂತ ಬಾಂಬ್ ಸ್ಕ್ವಾಡ್‌ಗಳಿಂದ ಪರಿಶೀಲನೆ ಕಾರ್ಯ ಮುಂದುವರಿದಿದೆ.
ಮೋದಿ ಕಾರ್ಯಕ್ರಮ ಪಟ್ಟಿ ಹೀಗಿದೆ
• ಬೆಳಗ್ಗೆ 8.15 - ದೆಹಲಿ ವಿಮಾನ ನಿಲ್ದಾಣದಿಂದ ವಾಯುಪಡೆ ವಿಮಾನದಲ್ಲಿ ಪಯಣ.
• ಬೆಳಗ್ಗೆ 11.05 - ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ.
• ಬೆಳಗ್ಗೆ 11.10 - ಹೆಲಿಕಾಪ್ಟರ್ ಮೂಲಕ ಪಯಣ.
• ಬೆಳಗ್ಗೆ 11.35 - ಆದಿ ಉಡುಪಿ ಹೆಲಿಪ್ಯಾಡ್‌ಗೆ ಆಗಮನ.
• ಬೆಳಗ್ಗೆ 11.45 - ಆದಿ ಉಡುಪಿ ಹೆಲಿಪ್ಯಾಡ್‌ನಿಂದ ರಸ್ತೆ ಪಯಣ.
• ಮಧ್ಯಾಹ್ನ 12 - ಶ್ರೀಕೃಷ್ಣ ಮಠ ಭೇಟಿ, ದೇವರ ದರ್ಶನ, ಲಕ್ಷ ಕಂಠ ಗೀತಾ ಪಾರಾಯಣ ಸಮಾರಂಭದಲ್ಲಿಭಾಗಿ.
• ಮಧ್ಯಾಹ್ನ 12ರಿಂದ 1.30 - ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಪುತ್ತಿಗೆ ಶ್ರೀ ಭೇಟಿ.
• ಮಧ್ಯಾಹ್ನ 1.35 - ಶ್ರೀಕೃಷ್ಣಮಠದಿಂದ ನಿರ್ಗಮನ.
• ಮಧ್ಯಾಹ್ನ 1.45 - ಹೆಲಿಕಾಪ್ಟರ್ ಮೂಲಕ ಮಂಗಳೂರು ವಿಮಾನ ನಿಲ್ದಾಣ.
• ಮಧ್ಯಾಹ್ನ 2.15 - ವಾಯುಪಡೆ ವಿಮಾನ ಮೂಲಕ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣಕ್ಕೆ ಪಯಣ.
• ಮಧ್ಯಾಹ್ನ 3.05 - ದಾಬೋಲಿಂ ವಿಮಾನ ನಿಲ್ದಾಣದಿಂದ ಗೋಕರ್ಣ ಪರ್ತಗಳಿ ಜೀವೋತ್ತಮ ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿ.



Click it and Unblock the Notifications