Latest Updates
-
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ
Richest Temples: ಭಾರತದ 10 ಶ್ರೀಮಂತ ದೇವಾಲಯಗಳಿವು! ಇವುಗಳು ಸಂಪತ್ತು ಗೊತ್ತೇ? ಎಣಿಸಲು ಎಷ್ಟು ವರ್ಷಗಳು ಬೇಕು?
ಭಾರತದ ಟಾಪ್ 10 ಶ್ರೀಮಂತ ದೇವಾಲಯಗಳಿವು! ಈ ದೇವಾಲಯಗಳ ಸಂಪತ್ತನ್ನು ಎಣಿಸಲು ಎಷ್ಟು ವರ್ಷಗಳು ಬೇಕಾಗಬಹುದು ಒಮ್ಮೆ ಯೋಚಿಸಿ. ಹೌದು, ಭಾರತವು ದೇವಾಲಯಗಳ ತವರೂರು. ಪ್ರತಿಯೊಂದು ಊರಿನಲ್ಲಿಯೂ ಒಂದಿಲ್ಲೊಂದು ದೇವಸ್ಥಾನ ಇದ್ದೇ ಇರುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ, ದೇವಾಲಯಗಳು ಕೇವಲ ಪ್ರಾರ್ಥನಾ ಸ್ಥಳಗಳಾಗಿಲ್ಲ. ಬದಲಾಗಿ ಕಲೆ, ವಾಸ್ತುಶಿಲ್ಪ ಮತ್ತು ಸಾಮಾಜಿಕ ಜೀವನವನ್ನು ಬಿಂಬಿಸುವ ಐತಿಹಾಸಿಕ ಕುರುಹುಗಳಾಗಿವೆ. ಹಾಗಾದರೆ, ಭಾರತದ ಅತೀ ಶ್ರೀಮಂತ ದೇವಾಲಯಗಳು ಯಾವುವು? ಎಂಬುವುದು ನಿಮಗೆ ತಿಳಿದಿದೆಯೇ? ನಾವಿಂದು ಈ ಲೇಖನದಲ್ಲಿ ಅಪಾರ ಸಂಪತ್ತು, ಅದ್ಭುತ ವೈಭವ ಮತ್ತು ಕೋಟ್ಯಂತರ ಭಕ್ತರ ನಂಬಿಕೆಯಿಂದ ವಿಜೃಂಭಿಸುವ ಭಾರತದ 10 ಶ್ರೀಮಂತ ದೇವಾಲಯಗಳ (10 Richest Temples In india) ಬಗ್ಗೆ ತಿಳಿಸಲಿದ್ದೇವೆ.
ನಮ್ಮ ದೇಶದಲ್ಲಿ ದೇವಾಲಯಗಳಿಗೆ ಕೊರತೆಯಿಲ್ಲ. ಕನಿಷ್ಠ ಪ್ರತಿ ಹಳ್ಳಿಯಲ್ಲೂ ಒಂದು ದೇವಾಲಯವಿದೆ. ಈ ದೇವಾಲಯಗಳ ಸಂಪತ್ತು ಕೇವಲ ಹಣ ಮತ್ತು ಚಿನ್ನದ ರೂಪದಲ್ಲಿ ಇಲ್ಲ. ಸಾವಿರಾರು ಎಕರೆ ಭೂಮಿ, ಅಮೂಲ್ಯ ವಜ್ರ ವೈಢೂರ್ಯಗಳ ರೂಪದಲ್ಲಿಯೂ ಇದೆ. ಈ ದೇವಾಲಯಗಳು ಆಧ್ಯಾತ್ಮಿಕ ಕೇಂದ್ರಗಳಾಗಿರುವುದರ ಜೊತೆಗೆ, ಅಪಾರ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿದೆ. ಈ ಸಂಪತ್ತನ್ನು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ವೈದ್ಯಕೀಯ ಸೇವೆಗಳಿಗಾಗಿ ಬಳಸಲಾಗುತ್ತದೆ. ಈ ಮೂಲಕ ದೇಶದ ಸಾಮಾಜಿಕ ರಚನೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಭಾರತದ ಟಾಪ್ 10 ಶ್ರೀಮಂತ ದೇವಾಲಯಗಳಿವು
1. ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನ, ಆಂಧ್ರ ಪ್ರದೇಶ
ಇದು ಭೂಲೋಕ ವೈಕುಂಠ. ಕಲಿಯುಗದ ದೈವ ಎಂದೂ ಭಕ್ತರಿಂದ ಪೂಜಿಸಲ್ಪಡುವ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು (Tirumala Tirupati Venkateswara Temple) ಸಂಪತ್ತಿನಲ್ಲಿ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಶೇಷಾಚಲ ಬೆಟ್ಟಗಳ ನಡುವೆ ರಮಣೀಯ ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಈ ದೇವಾಲಯಕ್ಕೆ ಪ್ರತಿದಿನ 50,000ಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ. ಈ ದೇವಾಲಯದ ನಿವ್ವಳ ಮೌಲ್ಯ ಸುಮಾರು 3 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದು ದೇಶದ ಪ್ರಮುಖ ಐಟಿ ಸಂಸ್ಥೆ ವಿಪ್ರೋ, ಆಹಾರ ದಿಗ್ಗಜ ನೆಸ್ಲೆ ಮತ್ತು ಸರ್ಕಾರಿ ತೈಲ ಕಂಪನಿಗಳಾದ ಒಎನ್‌ಜಿಸಿ ಮತ್ತು ಐಒಸಿಗಳ ಮಾರುಕಟ್ಟೆ ಮೌಲ್ಯಕ್ಕಿಂತಲೂ ಹೆಚ್ಚು.
ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಹುಂಡಿಯೊಂದರಿಂದಲೇ ವಾರ್ಷಿಕವಾಗಿ 1,400 ಕೋಟಿ ರೂ.ಗಿಂತ ಹೆಚ್ಚು ಆದಾಯ ಬರುತ್ತದೆ. ಇದರ ಜೊತೆಗೆ, ಭಕ್ತರು ತಲೆಕೂದಲು ಅರ್ಪಿಸುವುದು, ಠೇವಣಿಗಳ ಮೇಲಿನ ಬಡ್ಡಿ, ಚಿನ್ನ, ಬೆಳ್ಳಿ, ವಜ್ರಗಳಂತಹ ಬೆಲೆಬಾಳುವ ಕಾಣಿಕೆಗಳ ಮೂಲಕ ನೂರಾರು ಕೋಟಿ ರೂ. ಸಂಗ್ರಹವಾಗುತ್ತದೆ. 10ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯವು 16.2 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ತನ್ನ ಸಂಪತ್ತನ್ನು ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಕಾರ್ಯಕ್ರಮಗಳಿಗೆ ಬಳಸುವ ಮೂಲಕ ಮಾದರಿಯಾಗಿದೆ. ಈ ದೇವಾಲಯಕ್ಕೆ ಇತರೆ ಧರ್ಮದವರೂ ಬರಬಹುದು. ಆದರೆ, ವೆಂಕಟೇಶ್ವರ ಸ್ವಾಮಿಯ ಮೇಲೆ ನಂಬಿಕೆ ಇದೆ ಎಂದು ಘೋಷಣೆ ಪತ್ರ ನೀಡಿದ ಬಳಿಕವೇ ದರ್ಶನ ಪಡೆಯಲು ಅವಕಾಶವಿದೆ.
2. ಅನಂತ ಪದ್ಮನಾಭಸ್ವಾಮಿ ದೇವಸ್ಥಾನ, ಕೇರಳ
ವಿಶ್ವದಲ್ಲೇ ಅತ್ಯಂತ ಶ್ರೀಮಂತ ದೇವಾಲಯ ಎಂದು ಗುರುತಿಸಿಕೊಂಡಿದೆ. ಅನಂತ ಪದ್ಮನಾಭಸ್ವಾಮಿ ದೇವಸ್ಥಾನವು (Padmanabhaswamy Temple) ಕೇರಳದ ರಾಜಧಾನಿ ತಿರುವನಂತಪುರದಲ್ಲಿದೆ. ಈ ದೇವಾಲಯದ ನೆಲಮಾಳಿಗೆಯಲ್ಲಿರುವ ಸಂಪತ್ತಿನ ಮೌಲ್ಯವು 1,20,000 ಕೋಟಿ ರೂ.ಗಳಿಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ. 2011ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತೆರೆಯಲಾದ ಕೆಲವು ನೆಲಮಾಳಿಗೆಗಳಲ್ಲಿ ಚಿನ್ನದ ವಿಗ್ರಹಗಳು, ವಜ್ರ ವೈಢೂರ್ಯಗಳು ಮತ್ತು ಪುರಾತನ ನಾಣ್ಯಗಳು ಪತ್ತೆಯಾಗಿದ್ದು, ಇಡೀ ಜಗತ್ತನ್ನೇ ಬೆಚ್ಚಿ ಬೀಳುವಂತೆ ಮಾಡಿವೆ. ಇನ್ನೂ ತೆರೆಯದ ವಾಲ್ಟ್-ಬಿ ಕೊಠಡಿಯ ಹಿಂದೆ ಅನೇಕ ರಹಸ್ಯಗಳು ಮತ್ತು ಪೌರಾಣಿಕ ಕಥೆಗಳಿವೆ. ಈ ಕೋಣೆಯನ್ನು ಎರಡು ದೊಡ್ಡ ನಾಗರಹಾವುಗಳು ರಕ್ಷಿಸುತ್ತವೆ ಮತ್ತು ಅದನ್ನು ತೆರೆಯುವುದು ಅಶುಭ ಎಂಬುದು ಸ್ಥಳೀಯರ ಮಾತು. ಅನಂತಶಯನನಾಗಿ ನೆಲೆಸಿರುವ ವಿಷ್ಣುಮೂರ್ತಿಯು, ಈ ದೇವಾಲಯದ ಒಳಗೆ ಹಿಂದೂಗಳಿಗೆ ಮಾತ್ರ ಪ್ರವೇಶವಿದೆ.
3. ಗುರುವಾಯೂರ್ ದೇವಸ್ವಂ, ಕೇರಳ
ಗುರುವಾಯೂರ್ ದೇವಸ್ಥಾನವು (Guruvayur Devaswom) ಕೇರಳದ ತ್ರಿಶೂರ್ ಜಿಲ್ಲೆಯಲ್ಲಿದೆ. ಇದು ಶ್ರೀಕೃಷ್ಣನನ್ನು ಗುರುವಾಯೂರಪ್ಪನಾಗಿ ಪೂಜಿಸುವ ಪವಿತ್ರ ಕ್ಷೇತ್ರ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಪ್ರತಿವರ್ಷ ಭೇಟಿ ನೀಡುತ್ತಾರೆ. ಆರ್‌ಟಿಐ (ಮಾಹಿತಿ ಹಕ್ಕು ಕಾಯ್ದೆ) ಪ್ರಕಾರ, ಈ ದೇವಾಲಯದ ಹೆಸರಿನ ಬ್ಯಾಂಕುಗಳಲ್ಲಿ 1,737 ಕೋಟಿ ರೂ.ಗಳಿಗಿಂತಲೂ ಹೆಚ್ಚು ಠೇವಣಿ ಮತ್ತು 271 ಎಕರೆಗೂ ಹೆಚ್ಚು ಭೂಮಿ ಇದೆ. ಇದರ ಜೊತೆಗೆ, ಭಕ್ತರು ಅರ್ಪಿಸಿದ ಚಿನ್ನ, ಬೆಳ್ಳಿ ಮತ್ತು ಬೆಲೆಬಾಳುವ ರತ್ನಗಳ ಸಂಗ್ರಹ ಅಪಾರ. ವಿಶೇಷವಾಗಿ ಈ ದೇವಾಲಯವು ಗಜಪೂಜೆಗೆ ಹೆಸರುವಾಸಿ. ಅಲಂಕೃತ ಆನೆಗಳ ಮೆರವಣಿಗೆಯನ್ನು ನೋಡಲು ಪ್ರಪಂಚದಾದ್ಯಂತದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
4. ವೈಷ್ಣೋದೇವಿ ದೇವಸ್ಥಾನ, ಜಮ್ಮು
ವೈಷ್ಣೋದೇವಿ ದೇವಸ್ಥಾನವು (Vaishno Devi Temple) ಜಮ್ಮು ನಗರದಿಂದ ಸ್ವಲ್ಪ ದೂರದಲ್ಲಿದೆ. ತ್ರಿಕೂಟ ಪರ್ವತಗಳ ಮೇಲೆ 5,200 ಅಡಿ ಎತ್ತರದಲ್ಲಿರುವ ವೈಷ್ಣೋದೇವಿ ದೇವಸ್ಥಾನವು ದುರ್ಗಾದೇವಿಗೆ ಸಮರ್ಪಿತ. ಇದು 108 ಶಕ್ತಿ ಪೀಠಗಳಲ್ಲಿ ಒಂದೆಂದು ಪ್ರಸಿದ್ಧವಾಗಿದೆ. ಇಲ್ಲಿ ದೇವಿಯನ್ನು ವೈಷ್ಣೋದೇವಿ ಎಂದು ಪೂಜಿಸಲಾಗುತ್ತದೆ. ಕಷ್ಟಕರವಾದ ಪ್ರಯಾಣವನ್ನು ಲೆಕ್ಕಿಸದೇ ಭಕ್ತರು ದೇವಿಯ ದರ್ಶನಕ್ಕಾಗಿ ಬರುತ್ತಾರೆ. ಸಂಪತ್ತಿನ ವಿಷಯದಲ್ಲಿ ಈ ದೇವಾಲಯಕ್ಕೆ 2000 ರಿಂದ 2020ರ ನಡುವಿನ ಅವಧಿಯಲ್ಲಿ ಸುಮಾರು 1,800 ಕಿಲೋ ಚಿನ್ನ, 4700 ಕಿಲೋ ಬೆಳ್ಳಿ ಮತ್ತು 2,000 ಕೋಟಿ ರೂ. ನಗದು ಹಣವನ್ನು ದೇಣಿಗೆಯಾಗಿ ನೀಡಲಾಗಿದೆ. ಈ ಪವಿತ್ರ ಗುಹೆಗಳ ಇತಿಹಾಸದ ಬಗ್ಗೆ ಸ್ಪಷ್ಟತೆ ಇಲ್ಲ. ಆದರೂ, ವೈಜ್ಞಾನಿಕ ಅಧ್ಯಯನಗಳು ಈ ಗುಹೆಗಳು ಹತ್ತು ಲಕ್ಷ ವರ್ಷಗಳಷ್ಟು ಹಳೆಯವು ಎಂದು ಹೇಳುತ್ತವೆ.
5. ಶಿರಡಿ ಸಾಯಿ ಬಾಬಾ ದೇವಸ್ಥಾನ, ಮಹಾರಾಷ್ಟ್ರ
'ಸಬ್ ಕಾ ಮಾಲಿಕ್ ಏಕ್' ಎಂದು ಸಾರಿದ ಶಿರಡಿ ಸಾಯಿ ಬಾಬಾ ದೇವಸ್ಥಾನವು (Shirdi Sai Baba Temple) ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಶಿರ್ಡಿಯಲ್ಲಿದೆ. ಪ್ರತಿದಿನ 25,000ಕ್ಕೂ ಹೆಚ್ಚು ಭಕ್ತರು ಬಾಬಾನ ದರ್ಶನಕ್ಕಾಗಿ ಬರುತ್ತಾರೆ. ಈ ದೇವಾಲಯದಲ್ಲಿ ಬಾಬಾ ಕುಳಿತಿರುವ ಸಿಂಹಾಸನವನ್ನು 94 ಕಿಲೋ ಚಿನ್ನದಿಂದ ಮಾಡಲಾಗಿದೆ. 2022ರಲ್ಲಿ ಭಕ್ತರು ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ಗೆ (SSST) 400 ಕೋಟಿ ರೂ.ಗಳಿಗಿಂತಲೂ ಹೆಚ್ಚು ದೇಣಿಗೆ ನೀಡಿದ್ದಾರೆ. ಈ ದೇವಾಲಯ ಟ್ರಸ್ಟ್ ಕೇವಲ ದೇಣಿಗೆಗಳನ್ನು ಸ್ವೀಕರಿಸುವುದಲ್ಲದೆ, ಸಮಾಜ ಸೇವೆಯಲ್ಲಿಯೂ ಮುಂದಿದೆ. ಎರಡು ಅತ್ಯಾಧುನಿಕ ಆಸ್ಪತ್ರೆಗಳನ್ನು ನಡೆಸುತ್ತಿದ್ದು, ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇದಲ್ಲದೆ ಪ್ರತಿದಿನ 50,000 ದಿಂದ ಒಂದು ಲಕ್ಷ ಭಕ್ತರಿಗೆ ಉಚಿತವಾಗಿ ಊಟ ನೀಡುವ ಪ್ರಸಾದಾಲಯ ನಡೆಸುತ್ತಿರುವುದು ಇಲ್ಲಿನ ವಿಶೇಷವಾಗಿದೆ.
6. ಶ್ರೀ ಜಗನ್ನಾಥ ದೇವಾಲಯ, ಪುರಿ
ಹಿಂದೂಗಳ ಪವಿತ್ರ 'ಚಾರ್ ಧಾಮ್' ಯಾತ್ರೆಯಲ್ಲಿ ಒಂದಾದ ಪುರಿ ಜಗನ್ನಾಥ ದೇವಾಲಯವು (Puri Jagannath Temple) ಒಡಿಶಾ ಕರಾವಳಿಯಲ್ಲಿದೆ. ಇಲ್ಲಿ ಶ್ರೀಕೃಷ್ಣನು ತನ್ನ ಸಹೋದರ ಬಲರಾಮ ಮತ್ತು ಸಹೋದರಿ ಸುಭದ್ರೆಯೊಂದಿಗೆ ಜಗನ್ನಾಥನ ರೂಪದಲ್ಲಿ ನೆಲೆಸಿದ್ದಾನೆ. 11ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯವು ಸುಮಾರು 30000 ಎಕರೆ ಭೂಮಿಯನ್ನು ಹೊಂದಿದೆ. ಇದರ ನಿವ್ವಳ ಮೌಲ್ಯ 150 ಕೋಟಿ ರೂ.ಗಳಿಗಿಂತಲೂ ಅಧಿಕ. ಪ್ರತಿವರ್ಷ ನಡೆಯುವ ರಥಯಾತ್ರೆಯು ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಈ ಯಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿ ಸ್ವಾಮಿಯ ರಥವನ್ನು ಎಳೆಯುತ್ತಾರೆ.
7. ಸಿದ್ಧಿ ವಿನಾಯಕ ದೇವಸ್ಥಾನ, ಮುಂಬೈ
ಸಿದ್ಧಿ ವಿನಾಯಕ ದೇವಸ್ಥಾನವು (Siddhivinayak Temple) ಮುಂಬೈನ ಪ್ರಭಾದೇವಿ ಪ್ರದೇಶದಲ್ಲಿದೆ. ಎರಡು ಶತಮಾನಗಳಷ್ಟು ಹಳೆಯದಾದ ಈ ದೇವಾಲಯವು ಮುಂಬೈ ನಿವಾಸಿಗಳಿಗೆ ಮಾತ್ರವಲ್ಲದೆ, ದೇಶಾದ್ಯಂತದ ಭಕ್ತರಿಗೆ ಆರಾಧ್ಯ ದೈವ. ಇಲ್ಲಿನ ಗಣಪತಿ ವಿಗ್ರಹದ ಸೊಂಡಿಲು ಬಲಬದಿಗೆ ಬಾಗಿರುವುದು ವಿಶೇಷ. ಇಂತಹ ವಿಗ್ರಹವು ಬೇಗನೆ ಒಲಿಯುತ್ತದೆ ಎನ್ನುವುದು ಭಕ್ತರ ನಂಬಿಕೆ. ಸ್ವಾಮಿಯ ವಿಗ್ರಹವನ್ನು ಅಲಂಕರಿಸಲು 4 ಕಿಲೋ ಚಿನ್ನವನ್ನು ಬಳಸಲಾಗುತ್ತದೆ. ದೇವಾಲಯದ ನಿವ್ವಳ ಮೌಲ್ಯ 125 ಕೋಟಿ ರೂ. ಆಗಿದೆ. ದಿನವೊಂದಕ್ಕೆ ಸುಮಾರು 30 ಲಕ್ಷ ರೂ. ಆದಾಯ ಬರುತ್ತದೆ.
8. ಸ್ವರ್ಣ ಮಂದಿರ, ಅಮೃತಸರ
ಸಿಖ್ಖರ ಪವಿತ್ರ ಕ್ಷೇತ್ರವಾದ ಸ್ವರ್ಣ ಮಂದಿರವು (Golden Temple) ಅಮೃತಸರ ನಗರದ ಹೆಗ್ಗುರು. ಐದನೇ ಸಿಖ್ ಗುರು, ಗುರು ಅರ್ಜನ್ ದೇವ್ ಅವರ ನೇತೃತ್ವದಲ್ಲಿ ನಿರ್ಮಿಸಲಾದ ಈ ದೇವಾಲಯವನ್ನು 'ಹರ್ಮಂದಿರ್ ಸಾಹಿಬ್' ಎಂತಲೂ ಕರೆಯುವರು. ದೇವಾಲಯದ ಮೇಲಿನ ಮಹಡಿಗಳನ್ನು 400 ಕಿಲೋ ಶುದ್ಧ ಚಿನ್ನದಿಂದ ಲೇಪಿತ ಮಾಡಿರುವುದರಿಂದ ಇದಕ್ಕೆ 'ಸ್ವರ್ಣ ಮಂದಿರ' ಎಂಬ ಹೆಸರು ಬಂದಿದೆ. ಪವಿತ್ರ ಸರೋವರದ ಮಧ್ಯದಲ್ಲಿ ಸೂರ್ಯನ ಬೆಳಕಿಗೆ ಹೊಳೆಯುವ ಈ ದೇವಾಲಯದ ನೋಟವು ವರ್ಣಿಸಲು ಅಸಾಧ್ಯವಾದುದು. ಇದರ ವಾರ್ಷಿಕ ಆದಾಯ ಸುಮಾರು 500 ಕೋಟಿ ರೂ. ಎಂದು ಹೇಳಲಾಗಿದೆ.
9. ಶ್ರೀ ಸೋಮನಾಥ ದೇವಾಲಯ, ಗುಜರಾತ್
ಸೋಮನಾಥ ದೇವಾಲಯವು (Somnath Temple) ಗುಜರಾತ್ ರಾಜ್ಯದಲ್ಲಿದೆ. ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದು ಎಂದು ಪರಿಗಣಿಸಲಾಗಿದೆ. ಈ ದೇವಾಲಯವು ಇತಿಹಾಸದಲ್ಲಿ ಅನೇಕ ಬಾರಿ ವಿದೇಶಿ ಆಕ್ರಮಣಗಳಿಗೆ ತುತ್ತಾಗಿ ನಾಶವಾಗಿದೆ. ಆದರೂ, ಪ್ರತಿ ಬಾರಿಯೂ ಅಷ್ಟೇ ವೈಭವದಿಂದ ಪುನಃ ನಿರ್ಮಿಸಲಾಗಿದೆ. ಇದು ಭಾರತೀಯರ ಅಚಲ ನಂಬಿಕೆ ಮತ್ತು ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಸಾಕ್ಷಿ. ದೇವಾಲಯದ ಟ್ರಸ್ಟ್ ಹೆಸರಿನಲ್ಲಿ 1,700 ಎಕರೆ ಭೂಮಿ ಇದೆ. ದೇವಾಲಯದ ಗರ್ಭಗುಡಿಯಲ್ಲಿ 130 ಕಿಲೋ ಚಿನ್ನ ಮತ್ತು ಶಿಖರದ ಮೇಲೆ 150 ಕಿಲೋ ಚಿನ್ನವನ್ನು ಬಳಸಲಾಗಿದೆ.
10. ಮೀನಾಕ್ಷಿ ದೇವಾಲಯ, ಮಧುರೈ
ಮೀನಾಕ್ಷಿ ದೇವಾಲಯವು (Madurai Meenakshi Temple) ತಮಿಳುನಾಡಿನ ಮಧುರೈ ನಗರದಲ್ಲಿ ವೈಗೈ ನದಿಯ ದಡದಲ್ಲಿದೆ. ಮೀನಾಕ್ಷಿ ಅಮ್ಮನವರ ದೇವಾಲಯವು ದ್ರಾವಿಡ ವಾಸ್ತುಶಿಲ್ಪಕ್ಕೆ ಅದ್ಭುತ ಉದಾಹರಣೆ. 14 ಎತ್ತರವಾದ, ವರ್ಣರಂಜಿತ ಗೋಪುರಗಳು ಮತ್ತು ಸಾವಿರಾರು ಕೆತ್ತನೆಗಳನ್ನು ಹೊಂದಿರುವ ಈ ದೇವಾಲಯವು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಇಲ್ಲಿನ ಮುಖ್ಯ ದೇವತೆ ಮೀನಾಕ್ಷಿ ದೇವಿ (ಪಾರ್ವತಿ) ಮತ್ತು ಆಕೆಯ ಪತಿ ಸುಂದರೇಶ್ವರ (ಶಿವ). ಈ ದೇವಾಲಯಕ್ಕೆ ಪ್ರತಿದಿನ 20,000ಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ. ಇದರ ವಾರ್ಷಿಕ ಆದಾಯ ಸುಮಾರು 6 ಕೋಟಿ ರೂ. ಆಗಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯುವ 10 ದಿನಗಳ ಮೀನಾಕ್ಷಿ ತಿರುಕಲ್ಯಾಣಂ ಉತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.
ಒಟ್ಟಾರೆ, ಭಾರತದ ಈ ಶ್ರೀಮಂತ ದೇವಾಲಯಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ. ಇವು ದೇಶದ ಸಾಂಸ್ಕೃತಿಕ ಮತ್ತು ಆರ್ಥಿಕ ಚಟುವಟಿಕೆಗಳ ಕೇಂದ್ರಗಳಾಗಿವೆ. ಇವು ಭಾರತದ ಭವ್ಯ ಇತಿಹಾಸ ಮತ್ತು ಪರಂಪರೆಯ ಪ್ರತೀಕ.



Click it and Unblock the Notifications





















