ರಾಜ್ಯದಲ್ಲೇ ಇದೆ 2ನೇ ಶಬರಿಮಲೆ..! ಅಯ್ಯಪ್ಪನ ಎದುರೇ ಗರುಡ ದರ್ಶನ, ಪಲ್ಲಕ್ಕಿ ಉತ್ಸವ..!

ಶಬರಿ ಮಲೆ ಅಯ್ಯಪ್ಪಸ್ವಾಮಿ ದೇವಾಲಯ ಇಡೀ ದೇಶದಲ್ಲೇ ಜನಪ್ರಿಯ. ಅಲ್ಲಿಗೆ ವರ್ಷವೂ ಲಕ್ಷಾಂತರ ಮಂದಿ ಮಾಲೆ ಹಾಕಿ ಅತ್ಯಂತ ಕಠಿಣ ವ್ರತಗಳ ಪಾಲಿಸಿ ಅಯ್ಯಪ್ಪನ ದರ್ಶನಕ್ಕೆ ಬರುತ್ತಾರೆ. ಕಾಡು ಮೇಡು ಬೆಟ್ಟ ಹತ್ತಿ 18 ಮೆಟ್ಟಿಲುಗಳ ಏರಿ ಅಯ್ಯಪ್ಪನ ದರ್ಶನ ಪಡೆದು ಪುನೀತರಾಗುತ್ತಾರೆ. ಅದೇ ರೀತಿ ನೀವು ಭಾರತದ ಎರಡನೇ ಶಬರಿಮಲೆ ಬಗ್ಗೆ ಕೇಳಿದ್ದೀರಾ? ಬಹುಶಃ ಈ ರೀತಿ ಶಬರಿಮಲೆಗೆ ಪರ್ಯಾಯವಾಗಿ ಅಲ್ಲದಿದ್ದರೂ 2ನೇ ಶಬರಿಮಲೆಯೊಂದು ಭಕ್ತರನ್ನು ತನ್ನತ್ತ ಸೆಳೆಯುತ್ತಲೇ ಇದೆ.

ಇನ್ನೊಂದು ಅಚ್ಚರಿ ಎಂದರೆ ದಕ್ಷಿಣ ಭಾರತದ ಈ 2ನೇ ಶಬರಿಮಲೆ ಇರುವುದು ನಮ್ಮ ರಾಜ್ಯದಲ್ಲಿಯೇ. ಹೌದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಬೆಜ್ಜವಳ್ಳಿ ಎಂಬಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯವು ಶಬರಿಮಲೆಯಂತೆಯೇ ಪುಣ್ಯಕ್ಷೇತ್ರವಾಗಿ ವರ್ಷವೂ ಲಕ್ಷ ಲಕ್ಷ ಭಕ್ತರ ಆಗಮನ ಕ್ಷೇತ್ರವಾಗಿ ಹೆಸರುವಾಸಿಯಾಗಿದೆ.

Sabarimala

ಶಿವಮೊಗ್ಗದಿಂದ ತೀರ್ಥಹಳ್ಳಿ ಹೆದ್ದಾರಿಗೆ ಹೊಂದಿಕೊಂಡಿರುವ ಬೆಜ್ಜವಳ್ಳಿ ಚಿಕ್ಕ ಗ್ರಾಮವಾಗಿದೆ. ತೀರ್ಥಹಳ್ಳಿಯಿಂದ 20 ಕಿ.ಮೀಟರ್ ಹಾಗೂ ಶೀವಮೊಗ್ಗದಿಂದ ಸುಮಾರು 30 ಕಿ ಮೀ ಆಸುಪಾಸಿನಲ್ಲಿ ಈ ಪ್ರಸಿದ್ಧ ದೇವಾಲಯ ನೆಲೆಸಿದೆ. ಶ್ರೀಅಯ್ಯಪ್ಪನ ಸನ್ನಿಧಾನ, ತ್ರಿಕೂಟಾಚಲ ಲಕ್ಷಣ ಮತ್ತು ಸ್ವಾಮಿಯ ಸಾನಿಧ್ಯಗಳಿಂದ ಬಹು ಖ್ಯಾತಿಗಳಿಸಿದೆ. ಮಕರ ಸಂಕ್ರಾಂತಿಯ ಹಬ್ಬದಂದು ಇಲ್ಲಿನ ಶ್ರೀಅಯ್ಯಪ್ಪಸ್ವಾಮಿ ದರ್ಶನಕ್ಕೆ ರಾಜ್ಯದ ವಿವಿಧೆಡೆಯಿಂದ ಲಕ್ಷಾತರ ಭಕ್ತರು ಆಗಮಿಸುತ್ತಾರೆ. ದೂರದ ಶಬರಿಮಲೆಯಲ್ಲಿ ನಡೆಯುವಂತೆ ಪೂಜೆ, ಉತ್ಸವಗಳು ಇಲ್ಲಿ ವಿಧಿಬದ್ಧವಾಗಿ ನಡೆಯುತ್ತದೆ. ಆ ದಿನ ಹೋಮ ಹವನ, ಮಹಾ ಮಂಗಳಾರತಿ, ನೈವೇದ್ಯ ಸಮರ್ಪಣೆ ಇತ್ಯಾದಿಗಳನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಯಿಂದಲೂ ಅಯ್ಯಪ್ಪನ ಭಕ್ತರು ಇಲ್ಲಿಗೆ ಬರುತ್ತಾರೆ.

ಶಬರಿಮಲೆಯಂತೆಯೇ ನಡೆಯಲಿದೆ ವಿಧಿ ವಿಧಾನ

ಶಬರಿಮಲೆ ಸಂಕ್ರಾಂತಿ ಹಾಗೂ ಮಕರ ಜ್ಯೋತಿ ದರ್ಶನ ಪ್ರಸಿದ್ಧಿಯಾಗಿದೆ. ಈ ಮಕರ ಜ್ಯೋತಿ ನೋಡಲೆಂದು ಲಕ್ಷ ಲಕ್ಷ ಮಂದಿ ಪುಣ್ಯ ಸಮಯಕ್ಕೆ ಕಾದಿರುತ್ತಾರೆ. ಈ ಮಕರ ಜ್ಯೋತಿ ಒಂದನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಪೂಜಾ ವಿಧಿ ವಿಧಾನಗಳು ಶಬರಿಮಲೆಯಂತೆಯೇ ಬೆಜ್ಜವಳ್ಳಿಯ ದೇವಾಲಯಲ್ಲೂ ನೆರವೇರುತ್ತದೆ.

ಶಬರಿಮಲೆಯಂತೆ ಗರುಡ ದರ್ಶನ

ಬೆಜ್ಜವಳ್ಳಿ ಅಯ್ಯಪ್ಪನ ಉತ್ಸವ ಶಬರಿಮಲೆಯಲ್ಲಿ ನಡೆಯುವ ಪೂಜೆಯ ವಿಧಿ ವಿಧಾನಗಳನ್ನೇ ಅನುಸರಿಸುತ್ತದೆ. ಇದೇ ಕಾರಣಕ್ಕೆ ಪ್ರತಿ ವರ್ಷ ಸಾವಿರಾರು ಭಕ್ತರು ಬೆಜ್ಜವಳ್ಳಿಗೆ ಆಗಮಿಸುತ್ತಾರೆ. ಮಧ್ಯಾಹ್ನದ ಹೊತ್ತಿಗೆ ಪಲ್ಲಕ್ಕಿಯಲ್ಲಿ ಸ್ವರ್ಣಖಚಿತ ಅಯ್ಯಪ್ಪ ಸ್ವಾಮಿ ಉತ್ಸವ ಮೂರ್ತಿಯನ್ನು, ತಿರುವಾಭರಣ ಹೊತ್ತ ಪಲ್ಲಕ್ಕಿ, ಮಾಯಾ ಪಲ್ಲಕ್ಕಿ ಸಹಿತ ದೇವಸ್ಥಾನಕ್ಕೆ ಕೊಂಡೊಯ್ಯಲಾಗುತ್ತದೆ. ಇದಾದ ಬಳಿಕ ದೇವಾಲಯದ ಮುಂದಿರುವ ದೀಪದ ಕಂಬದ ಮೇಲ್ಭಾಗದಲ್ಲಿ ಗರುಡ ದರ್ಶನ ನೀಡುವುದು ಇಲ್ಲಿಯ ವಿಶೇಷವಾಗಿದೆ.

ನಿರಂತರ ಪೂಜೆ ದಿನಾಲು ಭಕ್ತರ ದಂಡು

ಈ ಅಯ್ಯಪ್ಪಸ್ವಾಮಿ ದೇವಾಲಯದ ಮತ್ತೊಂದು ವಿಶೇಷವೆಂದರೆ ಇಲ್ಲಿ ನಿತ್ಯವೂ ಪೂಜೆ ನಡೆಯುತ್ತದೆ. ನಿತ್ಯವೂ ಭಕ್ತರು ಅಯ್ಯಪ್ಪನ ದರ್ಶನ ಪಡೆಯಲು ಆಗಮಿಸುತ್ತಾರೆ. ಆದರೆ ಜನವರಿ ತಿಂಗಳಲ್ಲಿ ಈ ದೇವಾಲಯ ಭಕ್ತರಿಂದ ತುಂಬಿರುತ್ತದೆ. ಮಕರ ಸಂಕ್ರಮಣದಂದು ಸಾಮೂಹಿಕ ಗಣಹೋಮ, ಮಂಡಲ ಪೂಜೆ, ಪಲ್ಲಕ್ಕಿ ಉತ್ಸವ, ಪ್ರದಕ್ಷಿಣಾ ಸೇವೆ, ಅಖಂಡ ಭಜನೆ, ಪ್ರದಕ್ಷಿಣಾ ಬಲಿ,ಜಾತ್ರೋತ್ಸವ ನಡೆಸಲಾಗುತ್ತದೆ. ಜೊತೆಗೆ ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ಕಾರ್ತಿಕ ಮಾಸದಲ್ಲಿ ನಿತ್ಯ ದೀಪೋತ್ಸವ, ಶಿವರಾತ್ರಿಯಲ್ಲಿ ಜಾಗರಣೆ, ಯುಗಾದಿಯಂದು ಉತ್ಸವ ನಡೆಯುತ್ತದೆ.

ಮಹಿಳೆಯರಿಗೂ ಇದೆ ಅವಕಾಶ

ಶಬರಿಮಲೆ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂದು ಕೋರ್ಟ್ ತೀರ್ಪು ನೀಡಿದ್ದರೂ ಇದೊಂದು ವಿವಾದವಾಗಿಯೇ ಉಳಿದುಕೊಂಡಿದೆ. ಈಗಲೂ ಅಯ್ಯಪ್ಪನ ದೇವಾಲಯಕ್ಕೆ ಮಹಿಳೆಯರು ತೆರಳುತ್ತಿಲ್ಲ. ಆದರೆ ಬೆಜ್ಜವಳ್ಳಿಯಲ್ಲಿರುವ ಈ ದೇವಾಲಯಕ್ಕೆ ಯಾವ ಬೇದವೂ ಇಲ್ಲದೆ ಯಾರು ಬೇಕಾದರು ಪ್ರವೇಶಿಸಬಹುದು. ಹೀಗಾಗಿ ವರ್ಷದಿಂದ ವರ್ಷಕ್ಕೆ ಈ ದೇವಾಲಯದ ಖ್ಯಾತಿ ಹೆಚ್ಚುತ್ತಲೇ ಇದೆ.

ಶಬರಿಮಲೆ ತೆರಳದವರು ಇಲ್ಲಿಯೇ ಪೂಜೆ

ಕಾರಣಾಂತರಗಳಿಂದ ಅಥವಾ ಶಬರಿಮಲೆಗೆ ತೆರಳಲು ಸಾಧ್ಯವಾಗದೇ ಇರುವವರು ಬೆಜ್ಜವಳ್ಳಿ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಬರುತ್ತಾರೆ. ಹೆಚ್ಚು ವಯಸ್ಸಾದವರು, ಚಿಕ್ಕ ಮಕ್ಕಳು, ಇನ್ನಿತರೆ ಕಾರಣದಿಂದ ಶಬರಿಮಲೆಗೆ ತೆರಳಲು ಸಾಧ್ಯವಾಗದೇ ಇರುವವರು ಪ್ರತಿ ವರ್ಷವೂ ಇಲ್ಲಿಗೆ ಬಂದು ದರ್ಶನ ಪಡೆಯುತ್ತಾರೆ.

ಈ ಕ್ಷೇತ್ರ ಹುಟ್ಟಿದ್ದೇಗೆ?

ವರ್ಷವೂ ಶಬರಿಮಲೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರಿಗೆ ಒಮ್ಮೆ ಕನಸಿನಲ್ಲಿ ಅಯ್ಯಪ್ಪಸ್ವಾಮಿ ಬಂದು ಇಲ್ಲಿ ದೇವಾಲಯ ಕಟ್ಟಲು ಹೇಳಿದ್ದರಂತೆ. ಆದರೆ ಇದನ್ನು ನಿರ್ಲಕ್ಷ್ಯ ಮಾಡಿದ ಆತ ಎಂದಿನಂತೆ ಶಬರಿಮೆಲೆಗೆ ತೆರಳುತ್ತಿದ್ದರಂತೆ ಆದರೆ ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಅವರ ಕನಸಿನಲ್ಲಿ ಅಯ್ಯಪ್ಪಸ್ವಾಮಿ ಬಂದು ಇಲ್ಲಿ ಗುಡಿ ನಿರ್ಮಿಸುವಂತೆ ಹೇಳುತ್ತಿದ್ದನಂತೆ. ಬಳಿಕ ಆತ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗ್ಗಡೆ, ಉಡುಪಿಯ ಪೇಜಾವರ ಮಠದ ಶ್ರೀವಿಶ್ವೇಶ್ವರ ತೀರ್ಥ ಸ್ವಾಮೀಜಿ ಮುಂತಾದವರಿಗೆ ಅವರಿಗೆ ತಿಳಿಸಿ, ಗ್ರಾಮದಲ್ಲಿ ದೇವಾಲಯ ನಿರ್ಮಿಸಲು ಮುಂದಾದರಂತೆ. ಅದರಂತೆ ಯಾವ ಸ್ಥಳದಲ್ಲಿ ದೇವಾಲಯ ನಿರ್ಮಿಸಬೇಕು ಎಂಬ ಗೊಂದಲದಲ್ಲಿದ್ದಾಗ ಗರುಡವೊಂದು ಜಾಗದಲ್ಲಿ ಬಂದು ಹಾರಾಡಿ ಬಳಿಕ ಮಾಯವಾಯಿತಂತೆ. ಹೀಗಾಗಿ ಬೆಜ್ಜವಳ್ಳಿಯ ಅಯ್ಯಪ್ಪಸ್ವಾಮಿ ದೇವಾಲಯ ನಿರ್ಮಾಣವಾಯಿತಂತೆ.

English summary

Did You Know About Second Sabarimala Temple.?Built In Village Of Karnataka

Have you heard about India's second Sabarimala? Perhaps not as an alternative to Sabarimala, but a second Sabarimala continues to attract devotees.
Story first published: Saturday, January 13, 2024, 7:00 [IST]
X
Desktop Bottom Promotion